ನೀರಾನೆ ಆರ್ಟಿಯೊಡ್ಯಾಕ್ಟಿಲ ಗಣದ ಹಿಪಪಾಟಮಿಡೀ ಕುಟುಂಬಕ್ಕೆ ಸೇರಿದ ಚತುಷ್ಪಾದಿ ಸ್ತನಿ (ಹಿಪಪಾಟಮಸ್). ಜಲವಾಸಕ್ಕೂ ನೆಲವಾಸಕ್ಕೂ ಹೊಂದಿಕೊಂಡು ಜೀವಿಸುವ ಉಭಯಚರಿ ಪ್ರಾಣಿಯಿದು. ನೀರುಕುದುರೆ ಪರ್ಯಾಯನಾಮ. ಇದರಲ್ಲಿ ಹಿಪಪಾಟಮಸ್ ಮತ್ತು ಕೀರಾಪ್ಸಿಸ್ ಎಂಬ ಎರಡು ಜಾತಿಗಳುಂಟು. ಒಂದೊಂದು ಜಾತಿಯಲ್ಲಿ ಒಂದೊಂದೇ ಪ್ರಭೇದ ಇದೆ.

ಹಿಪಪಾಟಮಸ್ ಆಂಫಿಬಿಯಸ್ (ಬಿಗ್ ಹಿಪೊ, ಎಂಬುದು ದೊಡ್ಡಗಾತ್ರದ ಪ್ರಾಣಿ. ಹಿಂದೊಮ್ಮೆ ಆಫ್ರಿಕದ ಎಲ್ಲ ನದಿಗಳಲ್ಲೂ ಆಳನೀರಿನ ಹಳ್ಳಗಳಲ್ಲೂ ವಿಫುಲ ಸಂಖ್ಯೆಯಲ್ಲಿ ಕಾಣದೊರೆಯುತ್ತಿತ್ತು. ಆದರೆ ಮಾನವನ ಹಾವಳಿಯಿಂದಾಗಿ ಇದರ ಸಂಖ್ಯೆ ತುಂಬ ಇಳಿದಿದ್ದು ಈಗ 17 ಡಿಗ್ರಿ ಉತ್ತರ ಅಕ್ಷಾಂಶ ರೇಖೆಯ ದಕ್ಷಿಣದ ಪ್ರದೇಶಗಳ ನದಿಗಳಿಗೆ ಮಾತ್ರ ಸೀಮಿತಗೊಂಡಿದೆ. ಜೊಂಡಿನಿಂದ ಕೂಡಿದ ನದಿಗಳಲ್ಲಿ ಹೆಚ್ಚಾಗಿ ಜೀವಿಸುವುವು. ಪೀಪಾಯಿ ಆಕಾರದ ಬೃಹತ್ ಶರೀರ, ಅಗಲ ಮುಸುಡು, ವಿಶಾಲ ಬಾಯಿ, ಮೋಟುಕಂಬದಂಥ ಕಾಲುಗಳು, ಉಬ್ಬಿದ ಕಣ್ಣುಗಳು, ಸುಮಾರು 10 ಸೆಂ.ಮೀ. ಉದ್ದದ ಕಿವಿಗಳು (ಕಿವಿಗಳೂ ತಲೆಯ ತೀರ ಹಿಂಬದಿಯಲ್ಲಿವೆ), ಮುಸುಡಿಯ ಮೇಲುಭಾಗದಲ್ಲಿ ಸ್ಥಿತವಾಗಿರುವ ಮೂಗಿನ ಹೊಳ್ಳೆಗಳೂ, ರೋಮರಹಿತವೆನ್ನುವ ಮಟ್ಟಿಗೆ ವಿರಳ ಸಂಖ್ಯೆಯಲ್ಲಿ ರೋಮಗಳುಳ್ಳ ಚರ್ಮ-ಇವು ನೀರಾನೆಯ ಲಕ್ಷಣಗಳು. ಮೂಗಿನ ಹೊಳ್ಳೆಗಳನ್ನು ಆಗಿಂದಾಗ್ಗೆ ಮುಚ್ಚಿಕೊಳ್ಳುವ ವಿಚಿತ್ರ ಲಕ್ಷಣವೂ ಇದಕ್ಕೆ ಉಂಟು. ಅಂತೆಯೇ ನೀರಾನೆಯ ಮೈಮೇಲೆ ಕೆಂಪು ಬಣ್ಣದ ಮಂದವಾದ ಎಣ್ಣೆಯಂಥ ದ್ರವವನ್ನು ಸ್ರವಿಸುವ ವಿಶೇಷ ಗ್ರಂಥಿಗಳುಂಟು. ಈ ವಸ್ತು ಜಿನುಗಿದಾಗ ಕೆಂಪಗೆ ರಕ್ತದಂತೆ ಕಾಣುವುದರಿಂದ ನೀರಾನೆಗೆ `ರಕ್ತಸ್ವೇದ ಎಂಬ ಹೆಸರು ಕೊಡಲಾಗಿದೆ. ನೀರಾನೆ ನೀರಿನಲ್ಲಿ ಮುಳುಗಿರುವಾಗಲೂ ಒಣ ಹವೆಗೆ ಒಡ್ಡಿದಾಗಲೂ ಚರ್ಮಕ್ಕೆ ರಕ್ಷಣೆಯನ್ನು ಈ ವಸ್ತು ಒದಗಿಸುವುದು. ಚರ್ಮದ ಅಡಿಯಲ್ಲಿ ಸುಮಾರು 5 ಸೆಂಮೀ. ದಪ್ಪದ ಕೊಬ್ಬಿನ ಪದರವುಂಟು. ದೇಹದ ಉದ್ದ (ತಲೆಯೂ ಸೇರಿಕೊಂಡು) 3.75-4.6 ಮೀ. ಭುಜದ ಬಳಿ ಎತ್ತರ ಸುಮಾರು 1.5 ಮೀ. ತೂಕ 3-4.5 ಮೆಟ್ರಿಕ್ ಟನ್‍ಗಳೂ. ಬಾಲದ ಉದ್ದ 60 ಸೆಂಮೀ. ಬಾಲದ ತುದಿಯಲ್ಲಿ ಹಲವಾರು ಬಿರುಗೂದಲುಗಳುಂಟು. ದೇಹದ ಬಣ್ಣದ ಬೂದುಮಿಶ್ರಿತ ತಾಮ್ರಕಂದು, ಉದರದ ಕಡೆಗೆ ಊದಾ ಬಣ್ಣದ ಛಾಯೆಯುಂಟು. ಕಾಲುಗಳಲ್ಲಿ ತಲಾ ನಾಲ್ಕು ಬೆರಳುಗಳುಂಟು. ನಡೆಯುವಾಗ ನಾಲ್ಕು ಬೆರಳುಗಳನ್ನೂ ಊರುತ್ತದೆ. ಬೆರಳುಗಳ ತುದಿಯಲ್ಲಿ ಉಗುರಿನಂಥ ಗೊರಸುಗಳಿವೆ. ಇದರ ಜಠರ ಮೂರು ಕೋಣೆಗಳಿಂದ ರಚಿತವಾಗಿವೆ. ಬಾಚಿಹಲ್ಲುಗಳು ಹಾಗೂ ಕೋರೆಹಲ್ಲುಗಳು ದಾಡೆಗಳಂತಿವೆ. ಮೇಲ್ದವಡೆಯ ಬಾಚಿ ಮತ್ತು ಕೋರೆಹಲ್ಲುಗಳಿಗಿಂತ ಕೆಳದವಡೆಯವು ಹೆಚ್ಚು ಉದ್ದ.

ನೀರಾನೆ ತುಂಬ ಚೆನ್ನಾಗಿ ಈಜಬಲ್ಲವು. ಆಗಿಂದಾಗ್ಗೆ ಮುಳುಗುವುದೂ ಉಂಟು. ಹೀಗೆ ಮುಳುಗಿದಾಗ ತನ್ನ ಮೂಗಿನ ಹೊಳ್ಳೆಗಳನ್ನು ಕಿವಿಗಳನ್ನೂ ಮುಚ್ಚಿಕೊಳ್ಳುತ್ತದೆ. ಸಾಮಾನ್ಯವಾಗಿ 3-5 ನಿಮಿಷಗಳ ಕಾಲ, ಕೆಲವೊಮ್ಮೆ ಅರ್ಧಗಂಟೆಯವರೆಗೂ ಮುಳುಗಿರಬಲ್ಲದು. ಮುಳುಗಿ ತಳದ ಮೇಲೆ ನಡೆಯುವ ಸಾಮಥ್ರ್ಯವೂ ಇದಕ್ಕೆ ಉಂಟು. ಅಂತೆಯೇ ಬರಿಯ ಕಣ್ಣು ಮತ್ತು ಮೂಗಿನ ಹೊಳ್ಳೆಗಳನ್ನು ಮಾತ್ರ್ರ ನೀರಿನ ಮೇಲ್ಮೈಗೆ ಒಡ್ಡಿ ನೀರಲ್ಲಿ ಓಡಾಡಲ್ಲುದು. ಹಿಪಪಾಟಾಮಸ್ ಸಾಮಾನ್ಯವಾಗಿ ಒಂಟೊಂಟಿಯಾಗಿರುತ್ತದೆ. ಕೆಲವೊಮ್ಮೆ ಗಂಡುಹೆಣ್ಣುಗಳೂ ಜೊತೆಜೊತೆಯಾಗಿಯೂ 6ರಿಂದ 30ರ ಸಂಖ್ಯೆಯಲ್ಲಿ ಗುಂಪುಗೂಡಿಕೊಂಡಿರುವುದುಂಟು. ನೀರಾನೆ ಸಾಧುಸ್ವಭಾವದ್ದು. ಗಾಬರಿಗೊಂಡಾಗ ನೀರಿಗೆ ಧಾವಿಸುವುದೇ ಇದರ ಸಾಮಾನ್ಯ ಪ್ರತಿಕ್ರಿಯೆ. ಆದರೆ ಕೆಲವು ಸಲ ಕೆರಳುವುದುಂಟು. ಗಂಡು ನೀರಾನೆಗಳೂ ಆಗಾಗ್ಗೆ ಕಾದಾಡುವುದುಂಟು. ನೀರಾನೆಗೆ ಒಳ್ಳೆಯ ಘ್ರಾಣಶಕ್ತಿಯುಂಟು. ದೃಷ್ಟಿ ಸಾಧಾರಣ. ಇದು ಸಸ್ಯಾಹಾರಿ. ಹಗಲೆಲ್ಲ ನೀರಿನಲ್ಲೇ ಕಾಲ ಕಳೆಯುತ್ತಿದ್ದು ರಾತ್ರಿ ಮೇವನ್ನು ಅರಸಿಕೊಂಡು ನೆಲದ ಮೇಲೆ ಓಡಾಡುತ್ತದೆ. ಹುಲ್ಲೇ ಪ್ರಧಾನ ಆಹಾರ. ಕೆಲವೊಮ್ಮೆ ಪೈರಿಗೂ ನುಗ್ಗುವುದುಂಟು. ಎಳೆಚಿಗುರು, ಎಲೆಗಳು, ಬಿದ್ದ ಹಣ್ಣುಗಳು ನೀರಾನೆಯ ಆಹಾರದ ಪ್ರಧಾನ ಅಂಶ.

ನೀರಾನೆ ವರ್ಷದ ಎಲ್ಲ ಕಾಲಗಳಲ್ಲಿಯೂ ಸಂತಾನೋತ್ಪತ್ತಿ ನಡೆಸಬಲ್ಲದು. ಹೆಣ್ಣು 7 ವರ್ಷ ವಯಸ್ಸಿನಲ್ಲಿ ಲೈಂಗಿಕ ಪ್ರಬುದ್ಧತೆಯನ್ನು ಪಡೆಯುತ್ತದೆ. ಗರ್ಭಾವದಿಯ ಕಾಲ 227-240 ದಿವಸಗಳು. ಒಂದು ಸಲಕ್ಕೆ ಒಂದೇ ಮರಿ ಹುಟ್ಟುವುದು. ಮರಿ ಹುಟ್ಟಿದಾಗ ಸುಮಾರು 30-45 ಕೆಜಿ. ತೂಗುತ್ತದೆ. ಇದು ನೀರಿನಲ್ಲಿ ಮುಳುಗಿಯೇ ಹಾಲು ಕುಡಿಯಬಲ್ಲದು. ನೀರಾನೆಯ ಆಯಸ್ಸು 40-50 ವರ್ಷಗಳೆನ್ನಲಾಗಿದೆ.

ನೀರಾನೆಯ ಇನ್ನೊಂದು ಪ್ರಭೇದವಾದ ಕೀರಾಪ್ಸಿಸ್ ಲೈಬೀರಿಯೆನ್ಸಿಸ್ ಎಂಬುದು ಲೈಬೀರಿಯ, ಸಿಯೆರ ಲಿಯೋನ್‍ಗಳ ನದಿಗಳಲ್ಲಿ, ಜೌಗು ಭೂಮಿಗಳಲ್ಲಿ ಕಾಣದೊರೆಯುವುದು. ಇದು ಕುಳ್ಳುಬಗೆಯದು; ದೇಹದ ಉದ್ದ 1.5-1.75 ಮೀ. ಎತ್ತರ 0.75-1.0 ಮೀ. ತೂಕ 160-240 ಕೆಜಿ. ಬಾಲ 15 ಸೆಂಮೀ. ಉದ್ದ ಇದೆ. ದೇಹದ ಬಣ್ಣ ಬೆನ್ನುಭಾಗದಲ್ಲಿ ಹಸುರುಮಿಶ್ರಿತ ಕಪ್ಪು, ಉದರ ಭಾಗದಲ್ಲಿ ಹಳದಿಮಿಶ್ರಿತ ಹಸಿರು ಇಲ್ಲವೆ ಬೂದಿ. ಇದರ ತಲೆ ಹೆಚ್ಚು ಗುಂಡಗಿದೆ. ದೊಡ್ಡ ನೀರಾನೆಯದರಷ್ಟು ಚಪ್ಪಟೆಯಾಗಲೀ ಅಗಲವಾಗಲೀ ಇಲ್ಲ. ಕಣ್ಣುಗಳು ಉಬ್ಬಿಕೊಂಡಿಲ್ಲ. ಇದು ಹೆಚ್ಚು ಗೋಪ್ಯ ಸ್ವಭಾವದ ಪ್ರಾಣಿ. ಇದರ ಗರ್ಭಾವಧಿಯ ಕಾಲ 201-210 ದಿವಸಗಳು. ಮಾಂಸಕ್ಕಾಗಿ ಇದನ್ನು ಬೇಟೆಯಾಡುವುದಿದೆ. (ಎ.)