ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೈಟಿಂಗೇಲ್, ಫ್ಲಾರೆನ್ಸ್‌

ನೈಟಿಂಗೇಲ್, ಫ್ಲಾರೆನ್ಸ್ 1820-1910. ರೋಗಿಗಳ ಶುಶ್ರೂಷೆಯಲ್ಲಿ ಮಹಿಳೆಯರನ್ನು ತೊಡಗಿಸಿ, ಇಂದಿನ ದಾದಿಸೇವೆಯ ಮೂಲಕರ್ತೃವಾಗಿ, ಜನಾರೋಗ್ಯ ಸುಧಾರಣೆಗಳಿಗೆ ಕಾರಣಳಾದ ಇಂಗ್ಲೆಂಡಿನ ದಾದಿ. ಸುಸಂಸ್ಕøತ ಸಿರಿವಂತರ ಮನೆತನದ ಹೆಣ್ಣು ಮಗಳಾಗಿ ಇಟಲಿಯ ಫ್ಲಾರೆನ್ಸಿನಲ್ಲಿ ಹುಟ್ಟಿದಳು. ಉನ್ನತ ಕುಲಕ್ಕೆ ತಕ್ಕಂತೆ ಮದುವೆಯಾಗಿ ಸಮಾಜದಲ್ಲಿ ಪ್ರತಿಷ್ಠಾವಂತಳಾಗುವಳೆಂದು ಇವಳ ತಾಯಿ ಕಾಣುತ್ತಿದ್ದ ಕನಸು ನನಸಾಗಲಿಲ್ಲ. ಹದಿನೇಳನೆಯ ವಯಸ್ಸಿನಲ್ಲೇ ಅಂತರಾತ್ಮ ಇವಳಲ್ಲಿ ಜನಸೇವೆಯೇ ದೇವರ ಸೇವೆ ಎಂಬ ಭಾವವನ್ನು ಪ್ರಚೋದಿಸಿ ಅತ್ತ ಕಡೆಗೆ ಆಕರ್ಷಿಸಿತು. ತಾನು ಯಾವ ರೀತಿ ಸೇವೆ ಸಲ್ಲಿಸಬೇಕೆಂಬುದನ್ನು ಚಿಂತಿಸುವುದರಲ್ಲೇ ಕೊಂಚಕಾಲ ಕಳೆದರೂ ಕೊನೆಗೆ ನರಳುವವರ ಸೇವೆಯನ್ನು ಈಕೆ ಆಯ್ದುಕೊಂಡಳು. ದಾದಿಯಾಗಿ ಸೇವೆ ಮಾಡಬೇಕೆಂಬ ಇವಳ ಅಚಲ ನಿರ್ಧಾರದಿಂದ ಮನೆಯಲ್ಲಿ ದೊಡ್ಡ ರಾದ್ಧಾಂತವಾಯಿತು. ಆಗಿನ ಕಾಲದಲ್ಲೂ ದಾದಿಯ ಕೆಲಸ ಕೀಳೆನಿಸಿತ್ತು; ಕೆಲವೇಳೆ ಕುಡುಕ ಸೂಳೆಯರು ದಾದಿಯರಾಗುತ್ತಿದ್ದರು. ಎಷ್ಟೇ ವಿರೋಧ ಬಂದರೂ ನೈಟಿಂಗೇಲ್ ತನ್ನ ನಿರ್ಧಾರವನ್ನು ಬದಲಿಸಲಿಲ್ಲ. ಇವಳು ಆರಾಧಿಸುತ್ತಿದ್ದ ಲಾರ್ಡ್ ಹೂಟನ್ ಮೇಲಿಂದ ಮೇಲೆ ಒತ್ತಾಯಪಡಿಸಿದರೂ ಮದುವೆಯಾಗಲು ನಿರಾಕರಿಸಿದಳು. ತನ್ನ ಕಸಬಿಗಾಗಿ ಉಳಿದೆಲ್ಲವನ್ನೂ ಬಿಡಲು ಸಿದ್ಧಳಾಗಿದ್ದಳು. ಸಂಕಟ, ನಿರಾಸೆಗಳಲ್ಲಿ ವರ್ಷಗಳೇ ಕಳೆದುವು. ಕೊನೆಗೆ ಜರ್ಮನಿಯ ಕೈಸರ್ಸ್‍ವರ್ತ್‍ನಲ್ಲಿ ದಾದಿ ಕೆಲಸದ ಮೊದಲ ಅನುಭವ ಪಡೆಯಲು (1851) ಅವಕಾಶವಾಯಿತು. ಲಂಡನ್ನಿನ ಹಾರ್ಲಿ ರಸ್ತೆಯಲ್ಲಿದ್ದ ಕಷ್ಟಕ್ಕೀಡಾದ ಮಹಿಳಾ ರೋಗಿಗಳ ಪೋಷಕ ಸಂಸ್ಥೆಯೆಂಬ ಆಸ್ಪತ್ರೆಯಲ್ಲಿ ಮೊತ್ತಮೊದಲನೆಯ ಹುದ್ದೆ ವಹಿಸಿಕೊಳ್ಳಲು ಮನೆ ಬಿಟ್ಟು ಹೊರಟಳು (1853). ಹಾರ್ಲಿ ರಸ್ತೆಯ ಈ ಚಿಕ್ಕ ಆಸ್ಪತ್ರೆಯಲ್ಲಿ ನೈಟಿಂಗೇಲ್ ಮಾಡಿದ ಪುನವ್ರ್ಯವಸ್ಥೆಯನ್ನು ಕಣ್ಣಾರೆ ಕಂಡ ಬ್ರಿಟಿಷ್ ಮಂತ್ರಿಮಂಡಲದ ಯುದ್ಧ ಶಾಖೆಯ ಕಾರ್ಯದರ್ಶಿ ಸಿಡ್ನಿ ಹರ್ಬರ್ಟ್ ಕ್ರಿಮಿಯಾಕ್ಕೆ ಒಂದು ನಿಯೋಗವನ್ನು ಕರೆದೊಯ್ಯುವಂತೆ ಅವಳಿಗೆ ಕರೆಕೊಟ್ಟ. ಮಾರ್ಚ್ 1854ರಲ್ಲಿ ಬ್ರಿಟನ್ ರಷ್ಯದೊಂದಿಗೆ ಯುದ್ಧ ಸಾರಿತ್ತು. ಅಕ್ಟೋಬರ್ ಹೊತ್ತಿಗೆ ಬ್ರಿಟಿಷ್ ಸೇನೆ ಆಸ್ಪತ್ರೆಗಳಲ್ಲಿಯ ಕರಾಳ ಸ್ಥಿತಿಯ ವಿಷಯಗಳನ್ನು ಲಂಡನ್ನಿನ ಟೈಮ್ಸ್ ವಿಶೇಷ ಬಾತ್ಮಿದಾರ ಹೊರಗೆಡಹಿದ್ದು ಎಲ್ಲರ ಬಾಯಲ್ಲೂ ಸುದ್ದಿಯಾಗಿತ್ತು. ಅದೇ ತಿಂಗಳಲ್ಲಿ ಫ್ಲಾರೆನ್ಸ್ ನೈಟಿಂಗೇಲ್ ಗಾಯಾಳುಗಳನ್ನೂ ಬೇನೆ ಬಿದ್ದವರನ್ನೂ ಉಪಚರಿಸಲು ಮೂವತ್ತೆಂಟು ಮಂದಿ ಹೆಂಗಸರ ಸಮೇತ ಕ್ರಿಮಿಯಾಕ್ಕೆ ಹಡಗಿನಲ್ಲಿ ಹೊರಟಳು. ಸುಮಾರು 45 ಸೆಂ ಮೀ ದೂರಗಳಲ್ಲಿಟ್ಟ ರೋಗಿಗಳ 605 ಕಿಮೀ ಉದ್ದದ ಆಸ್ಪತ್ರೆ ಅವರ ಆರೈಕೆಗೆ ಬಂದಿತು. ಒಂದೇ ತಿಂಗಳಲ್ಲಿ ಅವಳ ಪೋಷಣೆಯಲ್ಲಿ 500ಕ್ಕೂ ಮೀರಿ ರೋಗಿಗಳಿದ್ದರು. ಯಾವ ಸೌಲಭ್ಯಗಳೂ ಇಲ್ಲದೆ ಕೊಳಕಾಗಿದ್ದ ದೊಡ್ಡ ಹರಕು ಮುರುಕು ಕಟ್ಟಡಗಳೇ ಆಸ್ಪತ್ರೆಗಳಾಗಿದ್ದುವು. ಗಾಳಿ, ಬೆಳಕು ಅಲ್ಲಿ ಆಡುತ್ತಿರಲಿಲ್ಲ. ಎಲ್ಲೆಲ್ಲೂ ಗಲೀಜು, ಕೊಳಕು; ಇನ್ನೂ ಹೆಚ್ಚಿನದಾಗಿ ನೀರಿಗೆ ಪರದಾಟ. ಕ್ರಿಮಿಯಾದ ಈ ಜನ ದೊಡಿಗಳಲ್ಲಿ ವೈದ್ಯ ಸಾಧನಗಳು, ಮತ್ತು ಪರಿಕರಗಳ ಮಾತು ಹಾಗಿರಲಿ, ಸಾಮಾನ್ಯ ಶಿಷ್ಟತೆಗೆ ಬೇಕಾದ ಅನುಕೂಲತೆಗಳೂ ಇರಲಿಲ್ಲ. ಆಸ್ಪತ್ರೆಗೆ ಸೇರಿಸಲಾದ ಪ್ರತಿ ನೂರು ಜನರಲ್ಲಿ ನಲವತ್ತೆರಡು ಮಂದಿ ಸಾಯುತ್ತಿದ್ದರು. ಅಧಿಕಾರಿಗಳ ಹೊಟ್ಟೆ ಕಿಚ್ಚು, ಕುತಂತ್ರಗಳು ಹೆಜ್ಜೆ ಹೆಜ್ಜೆಗೂ ತೊಡಕಾಗುತ್ತಿದ್ದರೂ ಕೆಲವು ಬಾರಿ ಒಂದೇ ಸಮನೆ ಬಿಡುವಿಲ್ಲದೆ ದಿನಕ್ಕೆ 20 ಗಂಟೆಗಳ ಹೊತ್ತೂ ಓಡಾಡುತ್ತ, ಹಗಲಿರುಳೆನ್ನದೆ ದುಡಿದು ಅವ್ಯವಸ್ಥೆಯನ್ನು ಹತೋಟಿಗೆ ತರಲು ಮಾನವ ಸಾಮಥ್ರ್ಯಕ್ಕೆ ಮೀರಿದ ಯತ್ನಗಳನ್ನೇ ನೈಟಿಂಗೇಲ್ ಮಾಡಬೇಕಾಯಿತು. ರೋಗಿಗಳಿದ್ದ ದೊಡ್ಡ ಕೊಠಡಿಗಳನ್ನು ಪ್ರತಿರಾತ್ರಿಯೂ ತಾನೇ ದೀಪ ಹಿಡಿದು ಹೋಗಿ ನೋಡಿ ಬರುತ್ತಿದ್ದಳು. ಇವಳಿಗೆ ದೀಪಧಾರಿಣಿಯೆಂದು ಹೆಸರಾದುದೂ ಆಗಲೇ. ಆಸ್ಪತ್ರೆಯನ್ನು ಎಲ್ಲೆಲ್ಲೂ ಚೊಕ್ಕಟವಾಗಿ ಗುಡಿಸಿ, ತೊಳೆದು ಚೊಕ್ಕಪಡಿಸಿ ಶುಚಿಗೊಳಿಸಿದಳು. ಅಡುಗೆಮನೆ ಕೆಲಸವನ್ನು ವ್ಯವಸ್ಥೆಗೆ ತಂದಳು. ಇವೆಲ್ಲ ಕ್ರಮಗಳಿಂದ ಆರೇ ತಿಂಗಳಲ್ಲಿ ಸಾವಿನಂಕ ಶೇಕಡಾ ಎರಡಕ್ಕೆ ಇಳಿಯಿತು. ಕ್ರಿಮಿಯಾಕ್ಕೆ ಇನ್ನಷ್ಟು ದಾದಿಯರನ್ನು ಇಂಗ್ಲೆಂಡಿನಿಂದ ಕಳುಹಿಸಿಕೊಡಲಾಯಿತು. ಬೇರೆ ಆಸ್ಪತ್ರೆಗಳೂ ನೈಟಿಂಗೇಲಳ ತಂಡದ ಉಸ್ತುವಾರಿಗೆ ಒಳಪಟ್ಟವು. ಅಲ್ಲದೆ ಸಾಮಾನ್ಯ ಸೈನಿಕನ ಚಿಕಿತ್ಸೆ ಪೋಷಣೆಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದದ್ದರಿಂದ ಸೈನಿಕರು ಅವಳನ್ನು ಪೂಜಿಸುವ ಸ್ಥಿತಿಗೆ ಬಂದಿದ್ದರು. ಅವಳ ಈ ಮಹಾ ಸಾಧನೆಗಳ ಕತೆ ಇಂಗ್ಲೆಂಡಿಗೆ ಮುಟ್ಟಿದಾಗ ಜನ ಅವಳನ್ನು ರಾಷ್ಟ್ರೀಯ ವೀರರಮಣಿಯಾಗಿ ಆದರದಿಂದ ಕಂಡರು. ಇದರ ಮೆಚ್ಚುಗೆಯಾಗಿ ಅವರು 45,900 ಪೌಂಡು ನಿಧಿಯನ್ನು ಚಂದಾ ಕೂಡಿಸಿ ಅವಳಿಗೆ ಅರ್ಪಿಸಿದರು. ಆದರೆ ಕ್ರಿಮಿಯದಿಂದ ಹಿಂತಿರುಗಿದ ನೈಟೀಂಗೇಲ್ ನಿವೃತ್ತಳಾಗಬಯಸಿದಳು. ಸಾಮಾನ್ಯ ಸೈನಿಕನ ಕ್ಷೇಮಕ್ಕಾಗಿ ತನ್ನ ಬಾಳನ್ನೇ ಮುಡಿಪಾಗಿಟ್ಟಿದ್ದುದರಿಂದ ತನ್ನ ಜನಪ್ರಿಯತೆಯೇ ಸರ್ಕಾರಕ್ಕೆ ವಿರೋಧವಾಗುತ್ತದೆಂದು ಭಾವಿಸಿದ್ದಳು. ಪೂರ್ತಿ ನಿವೃತ್ತಳಾಗಿದ್ದವಳನ್ನು ಮುಂದೆ 1907ರಲ್ಲಿ ಪ್ರಸಿದ್ಧ ವ್ಯಕ್ತಿಗಳ ಗೌರವ ವರ್ಗಕ್ಕೆ ಚಕ್ರವರ್ತಿನಿ ಸೇರಿಸಿದಾಗ ಸೋಜಿಗವೆನಿಸಿತು; ಐವತ್ತು ವರ್ಷಗಳ ಹಿಂದೆಯೇ ಅವಳು ಸತ್ತಿರಬೇಕೆಂದು ಬಹಳ ಮಂದಿ ನಂಬಿದ್ದರು.

ವಾಸ್ತವವಾಗಿ ಐವತ್ತು ವರ್ಷಗಳ ಹಿಂದೆ ಸಿಡ್ನಿ ಹರ್ಬರ್ಟನ ನೆರವಿಂದ ಸೇನೆಯಲ್ಲಿ ಸುಧಾರಣೆಗಳನ್ನು ತರಲು ಈಕೆ ಒಂದು ಚಳವಳಿಯನ್ನೇ ಆರಂಭಿಸಿದ್ದಳು. ಚಕ್ರವರ್ತಿನಿ ವಿಕ್ಟೋರಿಯಳ ಪ್ರೋತ್ಸಾಹದಿಂದ 1857ರಲ್ಲಿ ಸೇನೆಯ ಆರೋಗ್ಯ ಸ್ಥಿತಿಯ ವಿಚಾರಣೆಗಾಗಿ ಒಂದು ಆಯೋಗವನ್ನು ನೇಮಿಸುವುದರಲ್ಲಿ ಸಫಲಳಾದಳು. ಚರಿತ್ರೆಯಲ್ಲೇ ಮೊತ್ತಮೊದಲ ಬಾರಿಗೆ ಶಾಂತಿಕಾಲದ ಸೈನಿಕನ ಆಹಾರ ವಸತಿ ಆರೋಗ್ಯ ವಿಚಾರಗಳನ್ನು ಶಾಸ್ತ್ರೀಯ ತನಿಖೆಗೆ ಒಳಪಡಿಸಲಾಯಿತು. ಬ್ರಿಟಿಷ್ ಸೇನೆಯ ಆರೋಗ್ಯ ಸಾಮಥ್ರ್ಯ ಆಸ್ಪತ್ರೆ ಆಡಳಿತಗಳ ಸಂಬಂಧದ ವಿಷಯಗಳ ಮೇಲಿನ ಟಿಪ್ಪಣಿಗಳು ಎಂಬ ದೊಡ್ಡ ಸಂಪುಟವನ್ನು ಪ್ರಕಟಿಸಿದಳು (1858). ಭಾರತದಲ್ಲಿ ಸೇನೆಯ ಆರೋಗ್ಯ ಸ್ಥಿತಿಗತಿಗಳನ್ನು ತನಿಖೆ ಮಾಡಲು ಒಂದು ಆಯೋಗ ನೇಮಕವಾಗಿ (1859) ಅದರ ವರದಿಯನ್ನು ನೈಟಿಂಗೇಲಳಿಗೆ ಒಪ್ಪಿಸಲಾಯಿತು (1863).

ಅವಳ ಚಟುವಟಿಕೆಗಳಲ್ಲಿ ಸೇನೆಗಾಗಿ ಕೆಲಸ ಮಾಡುವುದೂ ಒಂದು ಭಾಗವಾಗಿತ್ತು. ಸೈನಿಕ ಆಸ್ಪತ್ರೆಗಳಿಂದ ಸಾರ್ವಜನಿಕ ಆಸ್ಪತ್ರೆಗಳಿಗೂ ಸೈನಿಕರ ದಾದಿ ಸೇವೆಯಿಂದ ಜನರ ದಾದಿ ಸೇವೆಗೂ ಸೇನೆಯ ಆರೋಗ್ಯದಿಂದ ಜನಾರೋಗ್ಯಕ್ಕೂ ಅವಳನ್ನು ತಂದದ್ದು ಕೇವಲ ರೋಗಿಗಳ ಸೇವೆಯೇ. ಸೇವೆಯ ಮೆಚ್ಚುಗೆಯಾಗಿ ತನಗೆ ಅರ್ಪಿಸಿದ್ದ ಹಣದಿಂದ ಸೇಂಟ್ ತಾಮಸ್ ಆಸ್ಪತ್ರೆಯ ದಾದಿಯರಿಗಾಗಿ ನೈಟಿಂಗೇಲ್ ತರಬೇತಿ ಶಾಲೆಯನ್ನು ಜುಲೈ 1860ರಲ್ಲಿ ತೆರದಳು. ಇಂದಿನ ದಾದಿ ತರಬೇತಿ ಅಂದಿನಿಂದ ಮೊದಲಾಯಿತೆನ್ನಬಹುದು. ಶಾಲೆ ಸೇರುವ ಒಬ್ಬೊಬ್ಬ ಉಮೇದುವಾರಳನ್ನೂ ನೈಟೀಂಗೇಲ್ ತಾನೇ ಸಂದರ್ಶಿಸಿ ಕೊನೆಯ ತನಕ ಅವಳ ಮೇಲೆ ಗಮನವಿಟ್ಟು ವಿಚಾರಿಸಿಕೊಳ್ಳುತ್ತಿದ್ದಳು. ಬರಬರುತ್ತ ಈ ಕಾರ್ಯಭಾರ ಹೆಚ್ಚುತ್ತ ಬಂದಿತು. ಕ್ರಿಮಿಯದಲ್ಲಿಯ ವಿಪರೀತ ದುಡಿತದ ಪರಿಣಾಮವಾಗಿ ಮೊದಲೇ ಸೋತಿದ್ದ ಅವಳ ಆರೋಗ್ಯ ಕೆಟ್ಟಿತು. ಅಶಕ್ತಳಾದರೂ ಏನೇ ಆದರೂ ಸ್ವತಃ ಕೆಲಸ ನಿಲ್ಲಿಸದೆ ಬೇರೆಯವರಿಂದಲೂ ದಯೆದಾಕ್ಷಿಣ್ಯವಿಲ್ಲದೆ ಕೆಲಸ ತೆಗೆಯುತ್ತಿದ್ದಳು. ಯುದ್ಧ ಕಚೇರಿ ಅವಳ ಸಲಹೆ ಸೂಚನೆಗಳನ್ನೇ ನೆಚ್ಚಿಕೊಂಡಿತ್ತು. ಆರೋಗ್ಯ ವಿಚಾರದ ವ್ಯವಹಾರ ಕಾಗದಗಳೆಲ್ಲ ಅವಳಿಗೇ ಹೋಗುತ್ತಿದ್ದುವು. ಅವಳೇ ನಿಯಮಾವಳಿಗಳನ್ನು ರಚಿಸಿ ಅಧಿಕಾರಪತ್ರಗಳನ್ನು ಬರೆದು ದಂಡಿನ ಪಾಳೆಯಗಳ ಯೋಜನೆಗಳನ್ನು ಮಂಡಿಸುತ್ತಿದ್ದಳು. ಭಾರತಕ್ಕೆ ಅವಳೆಂದೂ ಕಾಲಿಡಲಿಲ್ಲ. ಅದರೆ ಭಾರತದ ಮೇಲಿನ ಮಾಹಿತಿಗಳಿಗೆ ಅವಳೇ ಅಂಗೀಕೃತ ಅಧಿಕಾರಿಣಿಯಾಗಿದ್ದಳು. ತಮ್ಮ ಭಾರತೀಯ ಶಿಕ್ಷಣಕ್ಕಾಗಿ ವೈಸ್‍ರಾಯ್ ಮೇಲೆ ವೈಸ್‍ರಾಯ್ ಅವಳಲ್ಲಿಗೆ ಬರುತ್ತಿದ್ದರು. ವರ್ಷಗಳು ಕಳೆದ ಹಾಗೆಲ್ಲ ಸಾವಿರಾರು ದಾದಿಯರು ಅವಳ ಕೈಕೆಳಗೆ ತರಬೇತಾದರು. ಅವಳ ಮಾರ್ಗದರ್ಶನದಲ್ಲಿ ಜಿಲ್ಲಾ ದಾದಿಸೇವೆ ಸ್ಥಾಪನೆಯಾಯಿತು (1862). ಸಾಮಾನ್ಯ ಹೆಂಗಸಾಗಿದ್ದಿದ್ದರೆ ಇದೊಂದೇ ಕೆಲಸ ಅವಳ ಇಡೀ ಬದುಕನ್ನು ವ್ಯಾಪಿಸುತ್ತಿತ್ತು. 1872ರಲ್ಲಿ ಅಧಿಕಾರ ಬಿಡುವ ತನಕ ಅವಳ ಕೆಲಸದ ಉರವಣೆ ಇಳಿಯಲಿಲ್ಲ. ಅನಂತರ ಅವಳಿಗೆ ಆಧ್ಯಾತ್ಮಯೋಗದಲ್ಲಿ ಅಸಕ್ತಿ ಹುಟ್ಟಿ ಪ್ಲೇಟೋನ ಸಂಭಾಷಣೆಗಳ ಅನುವಾದದಲ್ಲಿ ಬೆಂಜಮಿನ್ ಜೊವೆಟ್‍ಗೆ ನೆರವಾದಳು. ಕ್ರಿಸ್ತಯೋಗಧ್ಯಾನದಿಂದ ಆಯ್ದ ಭಾಗಗಳ ಒಂದು ಪುಸ್ತಕವನ್ನು ಬರೆದಳು. ಅದರಲ್ಲೂ ಎಳೆಯರೊಂದಿಗಿನ ಅವಳ ಆತ್ಮೀಯ ಸಂಬಂಧಗಳು ಬರಬರುತ್ತ ಹೆಚ್ಚು ಮುಖ್ಯವೆನಿಸಿದುವು. ಕ್ರಮೇಣ ಕಣ್ಣು ಕಾಣದಂತಾದರೂ ಕೊನೆಗಾಲದಲ್ಲಿ ನೆಮ್ಮದಿ ಪಡೆದಿದ್ದಳು. ಅವಳು ಮೃತಳಾದಾಗ ಅವಳ ರಾಷ್ಟ್ರೀಯ ಶವಸಂಸ್ಕಾರ, ಉತ್ತರಕ್ರಿಯಾದಿಗಳು ನ್ಯಾಯವಾಗಿ ವೆಸ್ಟ್‍ಮಿನ್‍ಸ್ಟರ್ ಅಬ್ಬೆಯಲ್ಲಿ ಏರ್ಪಡಬೇಕಾಗಿತ್ತು. ಆದರೆ ಅವಳ ಮರಣಪೂರ್ವ ಇಷ್ಟದಂತೆ ಇವನ್ನು ವಜಾ ಮಾಡಲಾಯಿತು. ಬದಲು ಹ್ಯಾಂಪ್‍ಷೈರಿನ ಹಳ್ಳಿಯ ಇಗರ್ಜಿಯ ಶ್ಮಶಾನದ ಅವಳ ವಂಶಸ್ಥರ ಗೋರಿಯಲ್ಲಿಗೆ ಶವಸಂಪುಟವನ್ನು ಬ್ರಿಟಿಷ್ ಸೇನೆಯ ಆರು ಮಂದಿ ಸಾರ್ಜೆಂಟರು ಹೊತ್ತರು.

ನೈಟೀಂಗೇಲ್ ಪ್ರತಿಜ್ಞೆ: ವೈದ್ಯರು ಪದವಿಧರರಾಗಿ ವೃತ್ತಿ ಕೈಗೊಳ್ಳುವ ಮುಂಚೆ ಮಾಡುವಂತೆಯೇ ದಾದಿಯರೂ ಮಾಡಬೇಕಾದ ಪ್ರತಿಜ್ಞೆ ಈ ಮುಂದಿನಂತಿದೆ;

ದೇವರ ಮುಂದೆ, ಇಲ್ಲಿ ನೆರೆದಿರುವವರ ಸಮಕ್ಷಮದಲ್ಲಿ ನಾನು ವಿಧಿವಿಹಿತವಾಗಿ ಹೀಗೆ ವಾಗ್ದಾನ ಮಾಡುತ್ತೇನೆ:

ನನ್ನ ಜೀವನವನ್ನು ನಿಷ್ಕಳಂಕವಾಗಿಟ್ಟುಕೊಂಡು ನನ್ನ ಕಸಬನ್ನು ಶ್ರದ್ಧಾಭಕ್ತಿಯಿಂದ ನಡೆಸುವೆನು.

ದೇಹಕ್ಕೆ ಹಾನಿ ಮತ್ತು ಕೇಡು ತರುವ ಎಲ್ಲದರಿಂದಲೂ ನಾನು ದೂರವಿರುವೆನು. ಯಾವ ಕೆಟ್ಟ ಮದ್ದನ್ನೂ ಸೇವಿಸುವುದಿಲ್ಲ. ಗೊತ್ತಿದ್ದು ಇನ್ನೊಬ್ಬರಿಗೆ ಕೊಡುವುದೂ ಇಲ್ಲ.

ನನ್ನ ಕಸಬಿನ ಗುಣಮಟ್ಟವನ್ನು ಉನ್ನತೀಕರಿಸಲು ನನ್ನ ಕೈಲಾದುದನ್ನೆಲ್ಲ ಮಾಡುವೆನು. ಕಸಬಿನಲ್ಲಿ ನನ್ನ ಗಮನಕ್ಕೆ ಬರುವ ಕುಟುಂಬ ವ್ಯವಹಾರಗಳನ್ನೂ ನನಗೆ ಹೇಳಿದ ಸ್ವಂತ ವಿಷಯಗಳನ್ನೂ ಗುಟ್ಟಾಗಿರಿಸುವೆನು.

ವೈದ್ಯನಿಗೆ ಅವನ ಕೆಲಸದಲ್ಲಿ ನೆರವಾಗಲು ಯತ್ನಿಸಿ, ನನ್ನ ಪೋಷಣೆಗೊಳಪಟ್ಟು ಬರುವವರ ಹಿತಕ್ಕಾಗಿ ಶ್ರದ್ಧೆ ವಹಿಸುವೆನು. (ಡಿ.ಎಸ್.ಎಸ್.)