ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೈರಕ್ಷರ ಸುಕುಕ್ಷಿ

ನೈರಕ್ಷರ ಸುಕುಕ್ಷಿ - ಸು. 1750ರಲ್ಲಿದ್ದ ಕನ್ನಡ ಕವಿ. ಮಾಧ್ವ ಸಂಪ್ರದಾಯದವ. ಭಗವದ್ಗೀತೆಯನ್ನು ಷಟ್ಟದೀಛಂದಸ್ಸಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾನೆ. ನಿಜನಾಮವನ್ನು ಎಲ್ಲಿಯೂ ನೇರವಾಗಿ ಹೇಳಿ ಕೊಂಡಿಲ್ಲ. ಪ್ರತಿ ಸಂಧಿಯ ಕೊನೆಯಲ್ಲಿಯೂ ಬರುವ-

ಈ ಮಹೀಮಂಡಲದಿ ದಿವಿಜೋ ದ್ದಾಮ ಯಾದವ ಕೃಷ್ಣಪಾರ್ಥರ ಪ್ರೇಮ ಸಂವಾದಾಖ್ಯಗೀತಾ ಶಾಸನಾರ್ಥವನು ಭೀಮ ತನ್ನರಮನೆಯ ಬಾಣಸಿ ನಾಮ ನೈರಕ್ಷರ ಸುಕುಕ್ಷಿಗೆ ನೇಮದಿಂದೊರೆದಿದ್ದ ಗುರು ಶ್ರೀವಾಸವಿಟ್ಠಲನಾ

ಎಂಬ ಪದ್ಯದಿಂದ ಇವನ ಹೆಸರು ನೈರಕ್ಷರ ಸುಕುಕ್ಷಿ ಇರಬಹುದು ಎಂದು ಊಹಿಸಲಾಗಿದೆ. ಇವನ ಹೆಸರು ಬೇರೆಯೇ ಇರಬಹುದು. ಇವನ ಊರು ತಂದೆತಾಯಿಗಳ ಬಗ್ಗೆ ಏನೂ ತಿಳಿದುಬರುವುದಿಲ್ಲ.

ಭಾಮಿನೀ ಷಟ್ಟದಿಯಲ್ಲಿರುವ ಇವನ ಕೃತಿಯಲ್ಲಿ 17 ಸಂಧಿಗಳು 629 ಪದ್ಯಗಳು ಇವೆ. 64 ಶ್ಲೋಕಗಳನ್ನುಳಿದು. ಸಂಸ್ಕøತ ಭಗವದ್ಗೀತೆಯ ಎಲ್ಲ ಶ್ಲೋಕಗಳನ್ನು ಅನುವಾದಿಸಲಾಗಿದೆ. ಪ್ರತಿ ಶ್ಲೋಕವನ್ನೂ ಬರೆದು ಅದರಡಿಯಲ್ಲಿ ಶ್ಲೋಕಕ್ಕೆ ಒಂದರಂತೆ. ಕೆಲವು ಕಡೆ ಎರಡು, ಮೂರು, ನಾಲ್ಕು-ಈ ರೀತಿಯಾಗಿ ಕನ್ನಡ ಷಟ್ಪದಿಗಳನ್ನು ಕೊಡಲಾಗಿದೆ. ಭೀಮ ಹನುಮನೆ ಮಧ್ವನಾಮದಲೀಮಹಿಯೊಳವತರಿಸಿ ಸುಜನಪ್ರೇಮಿ ಗೀತಾಭ್ಯಾಷ್ಯ ತಾತ್ಪರ್ಯವನು ವಿರಚಿಸಿದ ಎಂದು ಹೇಳಿರುವುದರಿಂದ ಮಧ್ವಭಾಷ್ಯವನ್ನು ಈತ ಅನುಸರಿಸಿರುವಂತೆ ತೋರುತ್ತದೆ. ಈತನ ಅನುವಾದ ನೇರವೂ ಸರಳವೂ ಆಗಿದೆ. (ಎಂ.ಪಿ.ಎಂ.)