ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೋಟು ನೀಡಿಕೆ

ನೋಟು ನೀಡಿಕೆ - ವಿಧಿಬದ್ಧ ಹಣವಾಗಿ ಒಂದು ದೇಶದಲ್ಲಿ ಚಲಾವಣೆಯಲ್ಲಿರುವ ಕಾಗದ ಹಣದ ನೀಡಿಕೆ. ಆ ದೇಶದ ಕೇಂದ್ರಿಯ ಬ್ಯಾಂಕಿಗೆ ಸಾಮಾನ್ಯವಾಗಿ ನೋಟು ನೀಡಿಕೆಯ ಏಕಾಧಿಕಾರ ದತ್ತವಾಗಿರುತ್ತದೆ. ಕೇಂದ್ರಿಯ ಬ್ಯಾಂಕು ನೀಡುವ ನೋಟುಗಳಿಗೆ ವಿಶೇಷ ಪ್ರತಿಷ್ಠೆ ಇರುವುದು ಮಾತ್ರವೇ ಅಲ್ಲದೆ ಇವುಗಳ ಮೂಲಕ ಅದು ದೇಶದಲ್ಲಿ ಚಲಾವಣೆಯಲ್ಲಿರುವ ಒಟ್ಟು ಹಣದ ಮೇಲೆ ನಿಯಂತ್ರಣ ಹೊಂದುವುದು ಸಾಧ್ಯವಾಗುತ್ತದೆ. ವಾಣಿಜ್ಯ ಬ್ಯಾಂಕುಗಳ ಉದರ ವಿಸ್ತರಣೆಯ ಮೇಲೆ ಹಿಡಿತ ಸ್ಥಾಪಿತಬಹುದಾಗಿದೆ. ನೋಟು ನೀಡಿಕೆಗೆ ಎರಡು ಪರಸ್ಪರ ವಿರುದ್ದ ಗುರಿಗಳಿರುತ್ತವೆ ನೋಟುಗಳ ಮೊತ್ತವನ್ನು ಸಂದರ್ಭೋಚಿತವಾಗಿ ಹಿಗ್ಗಿಸಲು ಅಥವಾ ಕುಗ್ಗಿಸಲು ಅವಕಾಶ ಇರಬೇಕು. ಅಲ್ಲದೆ ಅವುಗಳಲ್ಲಿ ಜನರ ನಂಬಿಕೆ ಸದಾ ಉಳಿದಿರಬೇಕು. ಪುಟಿತತೆ ಮತ್ತು ಭದ್ರತೆ ಇವೆರಡೂ ಇರುವ ರೀತಿಯಲ್ಲಿ ನೋಟು ನೀಡಿಕೆಯನ್ನು ನಿಯಂತ್ರಿಸುವುದು ಅಗತ್ಯವಾಗುತ್ತದೆ.

ನೀಡಿಕೆಯ ತತ್ತ್ವಗಳು : 1844ರ ಬ್ಯಾಂಕ್ ಚಾರ್ಟರ್ ಅಧಿನಿಯಮವನ್ನು ಜಾರಿಗೆ ತರುವ ಸಮಯದಲ್ಲಿ ಇಂಗ್ಲೇಡಿನಲ್ಲಿ ನೋಟು ನೀಡಿಕೆಯ ಸರಿಯಾದ ತತ್ತ್ವ ಯಾವುದೆಂಬುದರ ಬಗ್ಗೆ ತೀವ್ರ ವಿವಾದ ಇತ್ತು. ಆಗ ಪರಸ್ಪರ ವಿರುದ್ಧವಾದ ಎರಡು ತತ್ತ್ವಗಳನ್ನು ಎತ್ತಿಹಿಡಿಯುತ್ತಿದ್ದ ಎರಡು ಪಂಥಗಳಿದ್ದುವು. ಕರೆನ್ಸಿ ತತ್ತ್ವದ ಪ್ರತಿಪಾದಕರದು ಒಂದು ಪಂಥ. ನೀಡಲಾಗುವ ಪ್ರತಿ ನೋಟಿಗೂ ಹಿಂದೆ ಶೇ. 100ರಷ್ಟು ಲೋಹದ ಸಂಚಿತಿ ಇರಬೇಕೆಂಬುದು ಈ ಪಂಥದ ವಾದವಾಗಿತ್ತು. ಹೀಗೆ ವಿಧಿಸುವುದರಿಂದ ಕಾಗದದ ಕರೆನ್ಸಿಗೆ ಸಂಪೂರ್ಣ ರಕ್ಷಣೆ ಇರುವುದೆಂಬುದಾಗಿ ಹೇಳಲಾಗಿತ್ತು. ಲೋಹಹಣಕ್ಕೆ ನೋಟು ಒಂದು ಅನುಕೂಲಕರವಾದ ಪ್ರತಿನಿಧಾನವಷ್ಟೇ ಎಂಬುದು ಇದರ ಅಭಿಪ್ರಾಯ. ಈ ತತ್ತ್ವದ ಪ್ರಕಾರ ನೀಡಲಾದ ನೋಟುಗಳ ಪರಿಮಾಣ ದೇಶದಲ್ಲಿ ಸರಬರಾಜಾದ ಲೋಹದ ಪರಿಮಾಣಕ್ಕೆ ಅನುಗುಣವಾಗಿರುತ್ತಿತ್ತು. ಇದನ್ನು ಹಿಗ್ಗಿಸುವ ಪ್ರಶ್ನೆಯೇ ಇರಲಿಲ್ಲ. ರಾಷ್ಟ್ರದಲ್ಲಿ ನೀಡಲಾಗುವ ನೋಟಿನ ಮೌಲ್ಯದ ಶೇಕಡ ನೂರರಷ್ಟು ಅಮೂಲ್ಯ ಲೋಹದ ಬೆಂಬಲವನ್ನು ಕೇಂದ್ರೀಯ ಬ್ಯಾಂಕು ಹೊಂದಿರಬೇಕಾಗಿಲ್ಲವೆಂಬುದು ಬ್ಯಾಂಕಿಂಗ್ ತತ್ತ್ವದ ಪ್ರತಿಪಾದಕರ ವಾದ. ಒಂದು ನಿರ್ದಿಷ್ಟ ಶೇಕಡ ಅಂಶದಷ್ಟು ಮಾತ್ರ ಅಮೂಲ್ಯ ಲೋಹದ ಬೆಂಬಲವನ್ನಿಟ್ಟುಕೊಂಡ ನೋಟನ್ನು ಚಲಾವಣೆಗೆ ತರಬಹುದು ಎಂಬುದಾಗಿ ಇವರು ಹೇಳುತ್ತಿದ್ದರು. ನೋಟು ನೀಡಿಕೆಯ ಹೊಣೆಯನ್ನು ಬ್ಯಾಂಕುಗಳಿಗೇ ನೀಡಬೇಕು. ಎಷ್ಟು ಲೋಹಸಂಚಿತಿ ಇಡಬೇಕೆಂಬುದನ್ನು ಬ್ಯಾಂಕುಗಳೇ ನಿರ್ಧರಿಸಲಿ. ಕಾನೂನು ವ್ಯವಹಾರಗಳಿಗೆ ಬೇಕಾಗುವಷ್ಟು ಹಣವನ್ನು ನೋಟುಗಳ ರೂಪದಲ್ಲಿ ಚಲಾವಣೆಗೆ ತರುವುದು ಈ ತತ್ತ್ವವನ್ನು ಅನುಸರಿಸುವುದರಿಂದ ಸಾಧ್ಯವಾಗುತ್ತದೆ ಎಂದು ವಾದಿಸಲಾಗಿತ್ತು. ನೋಟುಗಳ ಪ್ರಚಾಲನೆಯಲ್ಲಿ ಪುಟಿತತೆಯನ್ನು ಸಾಧಿಸಬಹುದೆಂಬುದು ಈ ತತ್ತ್ವದಲ್ಲಿದ್ದ ಆಕರ್ಷಣೆ.

ಮೊದಲನೆಯದಾದ ಕರೆನ್ಸಿ ತತ್ತ್ವದಲ್ಲಿ ಭದ್ರತೆಯಿದ್ದರೆ, ಎರಡನೆಯದಾದ ಬ್ಯಾಂಕಿಂಗ್ ತತ್ತ್ವದಲ್ಲಿ ಪುಟಿತತೆ ಇರುತ್ತದೆ. ಇವೆರಡೂ ಉದ್ದೇಶಗಳನ್ನು ಪೂರೈಸುವ ರೀತಿಯಲ್ಲಿ ದೇಶಗಳು ತಮ್ಮವೇ ಆದ ನೋಟು ನೀಡಿಕೆ ಪದ್ದತಿಗಳನ್ನು ರೂಪಿಸಿಕೊಂಡಿವೆ. ಇವುಗಳಲ್ಲಿ ಮುಖ್ಯವಾದವು 1 ನಿಯತ ವಿಶ್ವಾಸಾವಲಂಬಿ ಪದ್ಧತಿ (ಫಿಕ್ಸೆಡ್ ಫಿಡ್ಯೂಷಿಯರಿ ಸಿಸ್ಟೆಮ್), 2 ಅನುಪಾತಿ ಮೀಸಲು ಪದ್ಧತಿ (ಪ್ರೊಪೋರ್ಷನಲ್ ರಿಸರ್ವ್ ಸಿಸ್ಟೆಮ್), 3 ಕನಿಷ್ಠ ಮೀಸಲು ಪದ್ಧತಿ (ಮಿನಿಯಮ್ ರಿಸರ್ವ್ ಸಿಸ್ಟೆಮ್). ನಿಯತ ವಿಶ್ವಾಸಾವಲಂಬಿ ಪದ್ಧತಿ : ಕೇಂದ್ರಿಯ ಬ್ಯಾಂಕು ಒಂದು ನಿಯತ ಪರಿಮಿತಿಯವರೆಗೆ ನೋಟುಗಳನ್ನು ಯಾವ ಲೋಹದ ಆಧಾರವೂ ಇಲ್ಲದೆ ನೀಡಬಹುದು. ಇವಕ್ಕೆ ಬೆಂಬಲವಾಗಿ ಕೇಂದ್ರೀಯ ಬ್ಯಾಂಕು ಸರ್ಕಾರಿ ಪ್ರತಿಭೂತಿಗಳನ್ನು ಇಟ್ಟಿದ್ದರೆ ಸಾಕು. ಈ ಪರಿಮಿತಿಗಿಂತ ಹೆಚ್ಚಿನ ನೋಟುಗಳ ನೀಡಿಕೆಗೆ ಲೋಹದ ಮೀಸಲು ಅಗತ್ಯವಾಗುತ್ತದೆ. ಈ ಪರಿಮಿತಿಗೆ ವಿಶ್ವಾಸಾವಲಂಬಿ ಪರಿಮಿತಿ ಎಂದು ಹೇಳಲಾಗಿದೆ.

ಈ ಪದ್ಧತಿಯ ಬಗ್ಗೆ ಆಗಿಂದಾಗ್ಗೆ ಟೀಕೆಗಳು ಬಂದಿವೆ. ಇದರಲ್ಲಿ ಪುಟಿತತೆ ಇಲ್ಲವೆನ್ನಲಾಗಿದೆ. ಆದರೆ ಹಣದ ಸ್ವಚ್ಫಂದ ವಿಸ್ತರಣೆಗೆ ಇದು ತಡೆ ಒಡ್ಡುತ್ತದೆ. 1844ರ ಬ್ಯಾಂಕ್ ಚಾರ್ಟರ್ ಅಧಿನಿಯಮದ ಪ್ರಕಾರ ಜಾರಿಗೆ ತರಲಾಗಿದ್ದ ಈ ಪದ್ಧತಿಗೆ 1928ರಲ್ಲಿ ತಿದ್ದುಪಡಿ ತರಲಾಗಿತ್ತು. ವಿಧಿಬದ್ಧ ಪರಿಮಿತಿಯನ್ನು ಮೀರಿ ನೋಟು ನೀಡಿಕೆಗೆ ಅವಕಾಶನೀಡಲು ಖಜಾನೆಗೆ ಅಧಿಕಾರ ನೀಡಲಾಯಿತು. ಅನಂತರ ಆಗಿಂದಾಗ್ಗೆ ವಿಶ್ವಾಸಾವಲಂಬಿ ಪರಿಮಿತಿಯನ್ನು ಹೆಚ್ಚಿಸಲಾಗಿದೆ. ವಿಶ್ವಾಸಾವಲಂಬಿ ಪರಿಮಿತಿಯನ್ನು ಹೆಚ್ಚಿಸುವುದು ದೌರ್ಬಲ್ಯದ ಕುರುಹೆಂದೂ ಇದರಿಂದ ನಂಬಿಕೆಗೆ ಊನ ಉಂಟಾಗುವುದೆಂದೂ ವಾದಿಸಲಾಗಿತ್ತು. ಆದರೂ ಪರಂಪರೆಯಿಂದ ಬಂದ ಈ ಪದ್ಧತಿಯನ್ನು ಕೆಲವು ದೇಶಗಳು ಅನುಸರಿಸಿದ್ದನ್ನು ಕಾಣಬಹುದು.

ಅನುಪಾತಿ ಮೀಸಲು ಪದ್ಧತಿ : ಒಂದನೆಯ ಮಹಾಯುದ್ಧದ ಅನಂತರ ಬಹಳ ವ್ಯಾಪಕವಾಗಿ ಜಾರಿಗೆ ಬಂದ ನೋಟನ್ನು ನೀಡಿಕೆ ಪದ್ಧತಿ ಇದು. ನೀಡಲಾಗುವ ನೋಟಿನ ಒಂದು ನಿಗದಿಯಾದ ಶೇಕಡದಷ್ಟು ಚಿನ್ನದ ಮೀಸಲು ಇರಬೇಕು. ಚಿನ್ನದ ಬೆಂಬಲವಿಲ್ಲದ ಭಾಗದ ಹಣವನ್ನು ವಿಶ್ವಾಸಾವಲಂಬಿಯೆಂದು ಕರೆಯಬಹುದು. ಆದರೆ ಈ ಭಾಗಕ್ಕೂ ಸರ್ಕಾರದ ಪ್ರತಿಭೂತಿಗಳ ಬೆಂಬಲ ಅಗತ್ಯ. ಒಂದನೆಯ ಮಹಾಯುದ್ದದ ಅನಂತರ ಅಮೆರಿಕದ ಸಂಯುಕ್ತ ಸಂಸ್ಥಾನಗಳು, ಇಟಲಿ, ಜರ್ಮನಿ ಇವು ಈ ರೀತಿಯ ನೋಟು ನೀಡಿಕೆ ಪದ್ಧತಿಯನ್ನನುಸರಿಸಿದವು. ಭಾರತದಲ್ಲೂ 1956ರವರೆಗೆ ಹೆಚ್ಚು ಕಡಿಮೆ ಈ ಪದ್ಧತಿಯನ್ನೇ ಅನುಸರಿಸಿ ನೋಟು ನೀಡಲಾಗುತ್ತಿತ್ತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ಅಧಿನಿಯಮದ ಪ್ರಕಾರ ರಿಸರ್ವ್‍ಬ್ಯಾಂಕಿನ ನೋಟು ನೀಡಿಕೆ ವಿಭಾಗದ ಆಸ್ತಿಯಲ್ಲಿ ಸೇಕಡ 40ರಷ್ಟು ಚಿನ್ನದ ಗಟ್ಟಿ, ಚಿನ್ನದ ನಾಣ್ಯ ಮತ್ತು ವಿದೇಶಿ ಪ್ರತಿಭೂತಿಗಳಿರಬೇಕೆಂದು ಗೊತ್ತುಮಾಡಲಾಗಿತ್ತು. ಎಲ್ಲ ಸಮಯದಲ್ಲೂ ರೂ. 40 ಕೋಟಿ ಮೌಲ್ಯದ ಚಿನ್ನದಗಟ್ಟಿ ಮತ್ತು ಚಿನ್ನದನಾಣ್ಯಗಳನ್ನು ನೋಟು ನೀಡಿಕೆ ವಿಭಾಗ ಹೊಂದಿರಲೇಬೇಕೆಂದೂ ವಿಧಿಸಲಾಗಿತ್ತು. ಆದರೆ 1956ರ ರಿಸರ್ವ್‍ಬ್ಯಾಂಕ್ ಆಫ್ ಇಂಡಿಯ ಅಧಿನಿಯಮದ ಪ್ರಕಾರ ಈ ಪದ್ಧತಿಯನ್ನು ಬಿಟ್ಟು ಕನಿಷ್ಠ ಮೀಸಲು ಪದ್ಧತಿಯÀನ್ನು ಅಂಗೀಕರಿಸಲಾಯಿತು.

ಅನುಪಾತಿ ಮೀಸಲು ಪದ್ಧತಿಯನ್ನು ಕೆಲವು ನ್ಯೂನತೆಗಳಿವೆ. ಒಟ್ಟು ನೋಟು ನೀಡಿಕೆಯ ಒಂದು ಶೇಕಡ ಅಂಶದಷ್ಟು ಚಿನ್ನವನ್ನು ಕೇಂದ್ರೀಯ ಬ್ಯಾಂಕು ಯಾವಾಗಲೂ ಹೊಂದಿರಲೇಬೇಕು. ಈ ಪ್ರಮಾಣದ ಚಿನ್ನ ಯಾವ ಉಪಯೋಗವೂ ಇಲ್ಲದೆ ಕೇಂದ್ರೀಯ ಬ್ಯಾಂಕಿನಲ್ಲಿ ಇರಬೇಕಾಗುತ್ತದೆ. ಇಷ್ಟೇ ಅಲ್ಲದೆ ಯಾವುದಾದರೂ ಕಾರಣದಿಂದ ಕೇಂದ್ರೀಯ ಬ್ಯಾಂಕಿನಲ್ಲಿರುವ ಚಿನ್ನದ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬೇಕಾದರೆ, ನೋಟಿನ ಪ್ರಮಾಣವನ್ನೂ ತಗ್ಗಿಸಬೇಕಾಗುತ್ತದೆ. ಇದರಿಂದ ವಹಿವಾಟುಗಳಿಗೆ ಅಗತ್ಯವಾದಷ್ಟು ಹಣ ಇಲ್ಲದೆ ಹೋಗಬಹುದು.

ಕನಿಷ್ಠ ಮೀಸಲು ಪದ್ಧತಿ : ಅನುಪಾತಿ ಮೀಸಲು ಪದ್ಧತಿಗಿಂತ ಇದು ಕೊಂಚ ಭಿನ್ನವಾದ್ದು. ಒಂದು ಕನಿಷ್ಠ ಮೀಸಲಿನ ಆಧಾರದ ಮೇಲೆ ಎಷ್ಟು ಹಣವನ್ನು ಬೇಕಾದರೂ ಜಾರಿಗೆ ತರಬಹುದು. ಕೇಂದ್ರೀಯ ಬ್ಯಾಂಕು ಹೊರಡಿಸುವ ನೋಟಿಗೆ ಆಧಾರವಾಗಿ ಕಾನೂನಿನ ಮೂಲಕ ಗೊತ್ತುಮಾಡಲಾಗುವ ಕನಿಷ್ಠ ಮೀಸಲನ್ನು ಅದು ಚಿನ್ನ ಮತ್ತು ವಿದೇಶಿ ಪ್ರತಿಭೂತಿಗಳ ರೂಪದಲ್ಲಿ ಹೊಂದಿರಬೇಕು. ಇವುಗಳ ಆಧಾರದ ಮೇಲೆ ಎಷ್ಟು ಪರಿಮಾಣದ ನೋಟುಗಳನ್ನಾದರೂ ಹೊರಡಿಸಬಹುದು.

1956ರಿಂದ ಭಾರತದಲ್ಲಿ ನೋಟು ನೀಡಿಕೆಗೆ ಈ ಪದ್ಧತಿಯನ್ನು ಅನುಸರಿಸಲಾಗುತ್ತಿದೆ. ಈಗ ಕಾನೂನಿನ ಪ್ರಕಾರ ರಿಸರ್ವ್ ಬ್ಯಾಂಕ್ ಚಿನ್ನ ಮತ್ತು ವಿದೇಶಿ ಪ್ರತಿಭೂತಿಗಳ ರೂಪದಲ್ಲಿ ರೂ. 200 ಕೋಟಿಯ ಕನಿಷ್ಠ ಮೀಸಲನ್ನು ಹೊಂದಿರಲೇಬೇಕು. ಇದರಲ್ಲಿ ರೂ. 115ಕೋಟಿ ಚಿನ್ನದ ರೂಪದಲ್ಲಿರಬೇಕು. ಉಳಿದ ರೂ. 85 ಕೋಟಿ ವಿದೇಶಿ ಪ್ರತಿಭೂತಿಗಳ ರೂಪದಲ್ಲಿರಬೇಕು.

ಉಳಿದ ಎಲ್ಲ ನೋಟು ನೀಡಿಕೆ ಪದ್ಧತಿಗಳಿಗಿಂತಲೂ ಅತ್ಯಂತ ಹೆಚ್ಚಿನ ಪುಟಿತತೆ ಹೊಂದಿರುವ ಪದ್ಧತಿಯೆಂದರೆ ಕನಿಷ್ಠ ಮೀಸಲು ಪದ್ದತಿ. ಏಕೆಂದರೆ ದೇಶದ ಬೇಡಿಕೆಗೆ ತಕ್ಕಂತೆ ಹಣದ ಸರಬರಾಜು ಮಾಡುವುದು ಈ ಪದ್ಧತಿಯಲ್ಲಿ ಸಾಧ್ಯವಿದೆ. ಅನಾವಶ್ಯಕವಾಗಿ ಚಿನ್ನದ ಮೀಸಲನ್ನು ಹೊಂದಿರಬೇಕಾಗಿಯೂ ಇಲ್ಲ. ಆದ್ದರಿಂದ ಹೆಚ್ಚು ನೋಟು ನೀಡಿಕೆ ಅಗತ್ಯವಾಗುವ ಯೋಜನೆಗಳನ್ನು ಕೈಗೊಂಡಿರುವ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಈ ಪದ್ಧತಿ ತುಂಬ ಅನುಕೂಲಕರ. ಆದರೆ ಇತರ ಪದ್ದತಿಗಿಂತ ಇದು ಅಪಾಯಕರವಾದ್ದೂ ಹೌದು. ಇದು ಸುಲಭವಾಗಿ ಹಣದುಬ್ಬರಕ್ಕೆ ಅವಕಾಶಮಾಡಿಕೊಡುತ್ತದೆ. ಆರ್ಥಿಕೇತರ ಉದ್ದೇಶಗಳಿಂದ ಹಣದ ಪರಿಮಾಣವನ್ನು ಹೆಚ್ಚು ಮಾಡಿಕೊಂಡಾಗ ದೇಶ ಹಣದುಬ್ಬರಕ್ಕೆ ಈಡಾಗುತ್ತದೆ. ಆದ್ದರಿಂದ ಕೇಂದ್ರೀಯ ಬ್ಯಾಂಕು ಈ ಪದ್ಧತಿಯನ್ನನುಸರಿಸುವಾಗ ತುಂಬ ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಹಣದ ಮೌಲ್ಯವನ್ನು ರಕ್ಷಿಸಲು ಕೇಂದ್ರೀಯ ಬ್ಯಾಂಕು ಸತತವಾಗಿ ಶ್ರಮಿಸುತ್ತಿರಬೇಕಾಗುತ್ತದೆ.

ಮೇಲೆ ಹೇಳಿದ ಮೂರು ಮುಖ್ಯ ಪದ್ಧತಿಗಳಲ್ಲಿ ಉಚಿತವೆನಿಸಿದ ಬದಲಾವಣೆಗಳೊಂದಿಗೆ ಅನೇಕ ರಾಷ್ಟ್ರಗಳಲ್ಲಿ ನೋಟು ನೀಡಿಕೆ ಆಗುತ್ತಿದೆ. (ಸಿ.ಕೆ.ಆರ್.)