ನ್ಯಾನ್ಸೀ - ಪೂರ್ವ ಫ್ರಾನ್ಸಿನ ಮರ್ಟ್-ಏ-ಮೋಸೆಲ್ ಡಿಪಾರ್ಟ್‍ಮೆಂಟಿನ (ಆಡಳಿತ ವಿಭಾಗ) ಮುಖ್ಯಸ್ಥಳ. ಸ್ಟ್ರಾಸ್‍ಬುರ್ಗ್‍ಗೆ ಪಶ್ಚಿಮದಲ್ಲಿ, ಮರ್ಟ್ ನದಿಯ ಪಶ್ಚಿಮ ದಂಡೆಯ ಮೇಲೆ, ಉ. ಅ. 48º4 ಮತ್ತು ಪೂ. ರೇ. 6º12 ಮೇಲೆ ಇದೆ. ಜನಸಂಖ್ಯೆ ಸುಮಾರು 1,20,900 (1971).

11ನೆಯ ಶತಮಾನದಲ್ಲಿ ಇದು ಸಣ್ಣ ಊರಾಗಿತ್ತು. 12ನೆಯ ಶತಮಾನದಲ್ಲಿ ಇಲ್ಲಿ ಕೋಟೆ ನಿರ್ಮಿತವಾಯಿತು. ಈ ಕೋಟೆ 18ನೆಯ ಶತಮಾನದ ವರೆಗೂ ಇತ್ತು. ಇಂದು ಈ ನಗರ ವಿವಿಧ ಕಾಲಗಳಲ್ಲಿ ನಿರ್ಮಿತವಾದ ಅನೇಕ ಭಾಗಗಳಿಂದ ಕೂಡಿದೆ. ಇದು ಲೋರೇನ್ ಡ್ಯೂಕರ ರಾಜಧಾನಿಯಾಗಿತ್ತು. 1502ರಲ್ಲಿ ಕಟ್ಟಿಸಿದ ಅರಮನೆ ಇಲ್ಲಿದೆ. ಈಗ ಅದು ಪ್ರಾದೇಶಿಕ ಕಲಾ ಮತ್ತು ಜಾನಪದ ವಸ್ತು ಸಂಗ್ರಹಾಲಯವಾಗಿದೆ. ಇಲ್ಲಿ 15ನೆಯ ಶತಮಾನದ ಗಾತಿಕ್ ಶೈಲಿಯ ಸೇಂಟ್ ಎಂಪೈರ್ ಚರ್ಚ್ ಇದೆ. ಡ್ಯೂಕ್ 3ನೆಯ ಚಾಲ್ರ್ಸ್ 1587ರಲ್ಲಿ ಹಳೆಯ ನಗರದ ದಕ್ಷಿಣ ಭಾಗದಲ್ಲಿ ಹೊಸ ಬಡಾವಣೆಯನ್ನು ನಿರ್ಮಿಸಿದ.

ಪೋಲೆಂಡಿನ ದೊರೆಯೂ ಫ್ರಾನ್ಸಿನ ದೊರೆ 15ನೆಯ ಲೂಯಿಯ ಮಾವನೂ ಆಗಿದ್ದ 1 ನೇಯ ಸ್ಟಾನಿಸ್ಲಾವ್ ಎರಡೂ ನಗರಗಳ ನಡುವಣ ಗೋಡೆಯನ್ನೊಡೆಯಿಸಿ ನಗರವನ್ನು ವಿಸ್ತರಿಸಿದ; ಸುಂದರವಾದ ಮತ್ತು ಸುಯೋಜಿತವಾದ ನಗರವನ್ನು ನಿರ್ಮಿಸಿದ. 1740ರಲ್ಲಿ ಕಟ್ಟಿದ ಚರ್ಚ್ ಒಂದರಲ್ಲಿ ಸ್ಟಾನಿಸ್ಲಾವ್ ಮತ್ತು ಅವನ ಪತ್ನಿಯ ಸಮಾಧಿಗಳಿವೆ. 1765ರಲ್ಲಿ ನಿರ್ಮಾಣವಾದ ಉದ್ಯಾನವೂ ಉಳಿಸಿಕೊಂಡು ಬಂದಿದೆ. ಇಲ್ಲಿ ಮೃಗಾಲಯ ಮತ್ತು ಗುಲಾಬಿ ತೋಟ ಇದೆ. ಈ ಹೊಸ ನಗರ ಪ್ರದೇಶದ ಸುತ್ತ ಬೆಟ್ಟಗುಡ್ಡಗಳಿಂದ ಕೂಡಿದ ಸುಂದರ ಭೂದೃಶ್ಯವಿದೆ. 1870-71ರ ಫ್ರಾನ್ಸ್-ಜರ್ಮನ್ ಯುದ್ಧದ ತರುವಾಯ ನ್ಯಾನ್ಸೀ ನಗರ ಅತ್ಯಾಧುನಿಕ ರೀತಿಯಲ್ಲಿ ಬೆಳೆಯಿತು. ಇದರ ಪಶ್ಚಿಮ ಅಂಚಿನಲ್ಲಿ ನ್ಯೂ ನ್ಯಾನ್ಸೀ ಎಂಬ ಹೊಸ ಬಡಾವಣೆಯೊಂದು ಹುಟ್ಟಿಕೊಂಡಿತು.

ನ್ಯಾನ್ಸೀಯ ಸಮೀಪದಲ್ಲಿ ಕಬ್ಬಿಣದ ಅದುರಿನ ಗಣಿಗಳಿವೆ. ಈ ನಗರದ ಪೂರ್ವಕ್ಕೆ ಕಲ್ಲುಪ್ಪು ಗಣಿ ಇದೆ. ಬಟ್ಟೆ, ಯಂತ್ರ, ಆಹಾರಸಂಸ್ಕರಣ, ವಿದ್ಯುತ್‍ಕೋಶ, ವೆಲ್ವೆಟ್, ಕಬ್ಬಿಣದ ಉಪಕರಣ, ಕಬ್ಬಿಣದ ಕೊಳವೆ, ಪಂಪ್, ಮಾನಕ, ಫಲಕ, ಗಾಜಿನ ವಸ್ತುಗಳು ಮೊದಲಾದವು ಇಲ್ಲಿ ತಯಾರಾಗುತ್ತವೆ. ಉಡುಪು, ನಾಟಾ, ಪುಸ್ತಕ, ಮಡಕೆ ಮುಂತಾದ ಕೈಗಾರಿಕೆಗಳೂ ಇವೆ. ಉಪ್ಪು ಮತ್ತು ಸೋಡಿಯಮ್ ಕಾರ್ಖಾನೆಗಳಿವೆ.

ನ್ಯಾನ್ಸೀ ವಿಶ್ವವಿದ್ಯಾಲಯ 1572ರಲ್ಲಿ ಸ್ಥಾಪಿತವಾಯಿತು. ಫ್ರೆಂಚ್ ಕ್ರಾಂತಿಯ ಕಾಲದಲ್ಲಿ ಇದರ ಚಟುವಟಿಕೆ ಸ್ಥಗಿತವಾಗಿತ್ತು. 19 ನೆಯ ಶತಮಾನದಲ್ಲಿ ಇದು ಪುನಶ್ಚೇತನಗೊಂಡಿತು. ಇಲ್ಲಿ ವ್ಯವಸಾಯ ಮತ್ತು ಗಣಿಗಾರಿಕೆಯ ಶಿಕ್ಷಣ ಸಂಸ್ಥೆಗಳೂ ಕಿವುಡರು ಮತ್ತು ಕುರುಡರ ಸಂಸ್ಥೆಗಳೂ ಇವೆ. (ಡಿ.ಎಸ್.ಜೆ.)