ನ್ಯಾಮತಿ - ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಒಂದು ಪಟ್ಟಣ. ಹೊನ್ನಾಳಿಗೆ 13 ಕಿಮಿ. ದೂರದಲ್ಲಿ ಉ.ಅ. 14(9' ಮತ್ತು ಪೂ.ರೇ 75(38' ಮೇಲೆ. ಸಮುದ್ರಮಟ್ಟದಿಂದ ಸು. 579 ಮಿ. ಎತ್ತರದಲ್ಲಿ. ಇದೆ. ಜನಸಂಖ್ಯೆ 6,531 (1971)

ನ್ಯಾಮತಿಯ ಬಳಿ ಹಳೆಯ ಶಿಲಾಯುಗದ ಆರಂಭ ಕಾಲದ ನೆಲೆಯನ್ನು ಗುರುತಿಸಲಾಗಿದೆ. ಶಿವಮೊಗ್ಗ ಜಿಲ್ಲೆ ಪ್ರದೇಶ ಸಿಂಧವಾಡಿಯ ಸಿಂಧವರ ವಶದಲ್ಲಿದ್ಧಾಗ ಸೇವುಣರ ದಂಡನಾಯಕ ಶ್ರೀಧರನಿಗೂ ಡಾಕರೆಸನಿಗೂ ನಡುವೆ ನ್ಯಾಮತಿಯ ಬಳಿ ಯುದ್ಧವಾಯಿತು (1247). 1867ರಿಂದ 1882ರ ವರೆಗೆ ಇದು ಹೊನ್ನಾಳಿ ತಾಲ್ಲೂಕಿನ ಆಡಳಿತ ಕೇಂದ್ರವಾಗಿತ್ತು. ಅನಂತರ ಹೊನ್ನಾಳಿಯೇ ಆ ತಾಲ್ಲೂಕಿನ ಕಸಬೆಯಾಯಿತು.

ಶಿವಮೊಗ್ಗ ಜಿಲ್ಲೆಯ ಪಶ್ಚಿಮಭಾಗದಲ್ಲಿರುವಂತೆ ನ್ಯಾಮತಿಯ ಕಡೆ ಕಾಡುಗಳಿಲ್ಲ ಮಲೆನಾಡಿಗೂ ಬಯಲುನಾಡಿಗೂ ನಡುವೆ ಇರುವ ನ್ಯಾಮತಿ ಒಂದು ವ್ಯಾಪಾರ ಸ್ಥಳ. ನ್ಯಾಮತಿ ಪೇಟೆ ದಿವಾನ್ ಪೂರ್ಣಯ್ಯನವರ ಕಾಲದಲ್ಲಿ ಸ್ಥಾಪಿತವಾಯಿತು. ಇಲ್ಲಿಂದ ಬಳ್ಳಾರಿ, ಧಾರವಾಡ ಮೊದಲಾದ ಸ್ಥಳಗಳಿಗೆ ಅಡಕೆ. ಬೆಲ್ಲ, ಧಾನ್ಯ ರಫ್ತಾಗುತ್ತವೆ. ನ್ಯಾಮತಿ-ಬೆಳಗುತ್ತಿ ನಡುವೆ ಫಲವತ್ತಾರ ಕಪ್ಪುಭೂಮಿಯಲ್ಲಿ ವಿಶೇಷವಾಗಿ ಹತ್ತಿ ಬೆಳೆಯುತ್ತದೆ. ಈ ಸುತ್ತಿನ ಇತರ ಬೆಳೆಗಳು ಬತ್ತ, ಜೋಳ, ಅಡಕೆ, ತೆಂಗು, ಹಲಸು, ನ್ಯಾಮತಿಯಿಂದ ಶಿವಮೊಗ್ಗ, ಹೊನ್ನಾಳಿ, ಶಿಕಾರಿಪುರ, ಸವಳುಗ, ಕೊಪ್ಪ ಮೊದಲಾದ ಸ್ಥಳಗಳಿಗೆ ಸಂಚರಮಾರ್ಗಗಳಿವೆ. ನ್ಯಾಮತಿಯಲ್ಲಿ ಪ್ರೌಢಶಾಲೆ, ಜೂನಿಯರ್ ಕಾಲೇಜು, ಆರೋಗ್ಯ ಕೇಂದ್ರ ಇವೆ. 1918ರಲ್ಲಿ ಪೌರಸಭೆ ಸ್ಥಾಪಿತವಾಯಿತು. ಪ್ರತಿ ಶುಕ್ರವಾರ ಇಲ್ಲಿ ಸಂತೆ ಕೂಡುತ್ತದೆ. (ವಿ.ಜಿ.ಕೆ.)