1852ರಲ್ಲಿ ಕೌನ್ಸಿಲ್ ಆಫ್ ಲೀಗಲ್ ಎಜುಕೇಷನ್ ಎಂಬ ಸಂಸ್ಥೆ ಆರಂಭವಾಯಿತು. ಅದು ನ್ಯಾಯಶಾಸ್ತ್ರಕ್ಕೆ ಸಂಬಂಧಪಟ್ಟ ವಿಷಯಗಳ ಮೇಲೆ ಉಪನ್ಯಾಸ ಪರೀಕ್ಷೆಗಳನ್ನು ಏರ್ಪಡಿಸುತ್ತದೆ. ಅದು ಏರ್ಪಡಿಸಿದ ಪರೀಕ್ಷೆಯಲ್ಲಿ ಉತ್ತೀರ್ಣನಾಗದೆ ನ್ಯಾಯವನ್ನು ಉದ್ಯೋಗವಾಗಿ ಮಾಡಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ನ್ಯಾಯವನ್ನು ಉದ್ಯೋಗವನ್ನಾಗಿ ತೆಗೆದುಕೊಂಡವರಲ್ಲಿ ಎರಡು ಭಾಗ: 1. ಮುಖ್ಯ ಕೋರ್ಟಿನಲ್ಲಿ ಕೆಲಸ ಮಾಡುವವರು. ಇವರನ್ನು ಬ್ಯಾರಿಸ್ಟರುಗಳೆಂದು ಕರೆಯುತ್ತಾರೆ. 2. ಸಾಲಿಸಿಟರುಗಳು. ನ್ಯಾಯಾಲಯದಲ್ಲಿ ಕೆಲಸ ಮಾಡುವ ಬ್ಯಾರಿಸ್ಟರರಲ್ಲೂ ಎರಡು ವಿಧ : ಕಿಂಗ್ಸ್ ಕೌನ್ಸಿಲ್ ಮತ್ತು ಜೂನಿಯರ್ ಬ್ಯಾರಿಸ್ಟರ್. ಕೋರ್ಟಿನಲ್ಲಿ ಆಗಬೇಕಾದ ಕೆಲಸವನ್ನು ಕಿಂಗ್ಸ್ ಕೌನ್ಸಿಲ್ ನಿರ್ವಹಿಸುತ್ತಾನೆ. ಉಚ್ಚನ್ಯಾಯಸ್ಥಾನಗಳಲ್ಲಿ ವಾದ ಮಾಡುವ ಹಕ್ಕು ಅವನಿಗೆ ಮಾತ್ರ ಇರುತ್ತದೆ. ಜೂನಿಯರ್ ಬ್ಯಾರಿಸ್ಟರ್ ಇಲ್ಲದೆ ಮೊಕದ್ದಮೆ ನಡೆಸಲು ಅಗತ್ಯವಾದ ಪೂರ್ವಭಾವಿ ಕೆಲಸ ನಿರ್ವಹಿಸುತ್ತಾರೆ. ಜೂನಿಯರ್ ಬ್ಯಾರಿಸ್ಟರುಗಳು ಕಿಂಗ್ಸ್ ಕೌನ್ಸಿಲ್ ಕೆಲಸ ಮಾಡುವ ಕ್ರಮವಿಲ್ಲ. ಸಾಲಿಸಿಟರುಗಳ ಕೆಲಸವನ್ನು ಪಾರ್ಲಿಮೆಂಟಿನ ಕಾಯಿದೆಗಳು ಕ್ರಮಪಡಿಸಿವೆ. ಅದನ್ನು ಪರಿಪಾಲಿಸುವಂತೆ ನೋಡಿಕೊಳ್ಳುವ ಹಕ್ಕು ಲಾ ಸೊಸೈಟಿಯದು (ನ್ಯಾಯಸಂಘ). ಕಕ್ಷಿಗಾರನಿಗೆ ಬೇಕಾದ ಅನುಭವವನ್ನು ಕೊಡುವುದು. ಕೆಳಗಿನ ಕೋರ್ಟಿನಲ್ಲಿ ಆತನ ಬಗ್ಗೆ ಮೊಕದ್ದಮೆ ನಡೆಸುವುದು. ಆತನ ಬಗ್ಗೆ ಅವನ ವಕೀಲನಿಗೆ (ಕೌನ್ಸಿಲ್) ವಿವರ ನೀಡುವುದು ಮುಂತಾದ ಕೆಲಸಗಳು ಸಾಲಿಸಿಟರನಿಗೆ ಸೇರಿದುದು. ಬ್ಯಾರಿಸ್ಟರನಿಗೆ ಅನುಭವವನ್ನು ಸಾಲಿಸಿಟರ್ ಕೊಡತಕ್ಕದ್ದು.
ನ್ಯಾಯದರ್ಶಿಗಳು ಸಂಪ್ರದಾಯನ್ಯಾಯವನ್ನು ಜಾರಿ ಮಾಡುವ ಕೋರ್ಟುಗಳಲ್ಲಿ ಹೆಚ್ಚಾಗಿ ಒಬ್ಬ ನ್ಯಾಯಾಧೀಶನೂ ಒಬ್ಬ ನ್ಯಾಯದರ್ಶಿಯೂ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳ ವಿಚಾರಣೆ ನಡೆಸುತ್ತ್ತಿದ್ದರು. ನ್ಯಾಯದರ್ಶಿಗಳು ಪುರಾವೆಗಳನ್ನು ವಿಮರ್ಶಿಸಿ ಸತ್ಯಸಂಗತಿಗಳನ್ನು ನಿರ್ಧರಿಸುತ್ತಿದ್ದರು. ಅದಕ್ಕೆ ಸಂಬಂಧಿಸಿದ ನ್ಯಾಯ ನಿರ್ಧರಿಸುವುದು ನ್ಯಾಯಾಧೀಶನ ಕೆಲಸ. ನ್ಯಾಯದರ್ಶಿಗಳು ಸರಿಯಾದ ತೀರ್ಮಾನ ಮಾಡಲು ಆತ ಸರಿಯಾದ ಸೂಚನೆ ಕೊಡದಿದ್ದುದರಿಂದ ಕೆಳಗಿನ ನ್ಯಾಯಾಲಯದ ಅನೇಕ ತೀರ್ಪುಗಳು ಮೇಲಿನ ನ್ಯಾಯಾಲಯದಲ್ಲಿ ರದ್ದಾಗಿವೆ. ನ್ಯಾಯನಿಷ್ಕರ್ಷೆಯ ಹಕ್ಕು ನ್ಯಾಯದರ್ಶಿಗಳದ್ದು. ಸಾಮ್ಯನ್ಯಾಯಾಲಯಗಳು ನ್ಯಾಯದರ್ಶಿಗಳಿಂದ ನ್ಯಾಯ ನಿರ್ಧರಿಸುತ್ತಿರಲಿಲ್ಲ. ಸಿವಿಲ್ ವ್ಯವಹಾರಗಳಲ್ಲಿ ನ್ಯಾಯದರ್ಶಿಗಳ ಉಪಯೋಗ ಕಮ್ಮಿಯಾಗುತ್ತ ನಡೆದಿದೆ.