ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯಾಷ್ವಿಲ್

ನ್ಯಾಷ್‍ವಿಲ್ ಅಮೆರಿಕ್ ಸಂಯುಕ್ತ ಸಂಸ್ಥಾನಗಳ ಟೆನೆಸೀ ರಾಜ್ಯದ ಒಂದು ನಗರ, ಅದರ ರಾಜಧಾನೀ ಹಾಗೂ ಡೇವಿಡ್ಸನ್ ಕೌಂಟಿಯ ಆಡಳಿತ ಕೇಂದ್ರ. ರಾಜ್ಯದ ಉತ್ತರದ ಮಧ್ಯಭಾಗದಲ್ಲಿ, ಕಂಬರ್ಲೆಂಡ್ ನದಿಯ ದಂಡೆಯ ಮೇಲೆ (ಉ.ಅ. 36º09, ಪ.ರೇ. 86º48) ಇದೆ. ಇದು ಡೇವಿಡ್ಸನ್, ಸಮ್ನರ್ ಮತ್ತು ವಿಲ್ಸನ್ ಕೌಂಟಿಗಳಲ್ಲಿ ವ್ಯಾಪಿಸಿರುವ ನಗರಪ್ರದೇಶದ ನಡುವೆ ಇದೆ. ಜನಸಂಖ್ಯೆ 8,44,444 (1970).

ನ್ಯಾಷವಿಲ್ 1779ರಲ್ಲಿ ಸ್ಥಾಪಿತವಾಯಿತು. ಅಮೆರಿಕನ್ ಕ್ರಾಂತಿಯುದ್ದದಲ್ಲಿ ಸತ್ತ ಜನರಲ್ ಫ್ರಾನ್ಸಿಸ್ ನ್ಯಾಷ್‍ನ ಜ್ಞಾಪಕಾರ್ಥವಾಗಿ ಇದಕ್ಕೆ ಫೋರ್ಟ್ ನ್ಯಾಷ್‍ಬರೋ ಎಂಬ ಹೆಸರು ಇಡಲಾಗಿತ್ತು. ನದಿಯ ಮೇಲಣ ದಿಣ್ಣೆಯ ಮೇಲೆ ಕೋಟೆಯ ಪ್ರತಿರೂಪವೊಂದು ಇದೆ. 1784ರಲ್ಲಿ ಇದಕ್ಕೆ ನ್ಯಾಷ್‍ವಿಲ್ ಎಂಬ ಹೆಸರು ನೀಡಲಾಯಿತು.

1826ರಲ್ಲಿ ಟೆನೇಸಿಯ ತಾತ್ಕಾಲಿಕ ರಾಜಧಾನಿಯಾಗಿ ಇದರ ಆಯ್ಕೆಯಾಗಿತ್ತು. 1834ರಲ್ಲಿ ಇದೇ ಶಾಶ್ವತ ರಾಜಧಾನಿಯಾಯಿತು. ಅಂದಿನಿಂದ ಅಮೆರಿಕದ ರಾಜಕೀಯ ನಕ್ಷೆಯಲ್ಲಿ ಈ ನಗರ ವಿಶೇಷ ಮಹತ್ತ್ವ ಪಡೆಯಿತು. ಅಮೆರಿಕದ ಅಂತರ್ಯುದ್ಧದ ಕಾಲದಲ್ಲಿ ಈ ನಗರ ಪ್ರತ್ಯಕ್ಷ ಪಾತ್ರ ವಹಿಸಿತ್ತು.

ನ್ಯಾಷ್‍ವಿಲ್ ಅಮೆರಿಕದ ಪ್ರಮುಖ ಧಾರ್ಮಿಕ ಕೇಂದ್ರ. ಸಂಯುಕ್ತ ಮೆಥಾಡಿಸ್ಟ್ ಪ್ರಕಟನಾಲಯವೇ ಮುಂತಾದ ಅನೇಕ ಧಾರ್ಮಿಕ ಪ್ರಕಟಣ ಸಂಸ್ಥೆಗಳು ಇಲ್ಲಿವೆ. ಇದು ಜನಪದ ಸಂಗೀತ ಕೇಂದ್ರ. ಸುತ್ತಲಿನ ನಗರಗಳೊಡನೆ ಇಲ್ಲಿಂದ ವಿಮಾನ, ರಸ್ತೆ, ರೈಲು ಮತ್ತು ಜಲಮಾರ್ಗಗಳಿವೆ. ಇದು ವ್ಯಾಪಾರ ಕೇಂದ್ರ. ಇಲ್ಲಿಗೆ ಟೆನೆಸೀ ಕಣಿವೆ ಪ್ರಾಧಿಕರಣ ಮತ್ತು ಕಂಬರ್‍ಲೆಂಡ್ ನದಿ ಕಟ್ಟೆಗಳಿಂದ ವಿಪುಲವಾದ ವಿದ್ಯುತ್ ಪೂರೈಕೆಯಾಗುತ್ತದೆ. ಅದ್ದರಿಂದ ಈ ನಗರದಲ್ಲಿ ಕೈಗಾರಿಕೆಗಳು ಬೆಳೆದಿವೆ. ಇಲ್ಲಿ 500ಕ್ಕೂ ಹೆಚ್ಚು ಕೈಗಾರಿಕೆಗಳಿವೆ. ರಾಸಾಯನಿಕ, ಪಾದರಕ್ಷೆ, ಕಾಗದದ ಚೀಲಗಳು, ನಿರ್ವಾತ ಸೀಸೆ, ರಬ್ಬರ್ ಸರಕು, ಪಾಕ ಸಲಕರಣೆ ಮುಂತಾದ ಅನೇಕ ಪದಾರ್ಥಗಳು ಇಲ್ಲಿ ತಯಾರಾಗುತ್ತವೆ. ಅನೇಕ ವಿಮಾ ಮತ್ತು ಹಣಕಾಸು ಸಂಸ್ಥೆಗಳ ಮುಖ್ಯ ಕಾರ್ಯಾಲಯಗಳು ಇಲ್ಲಿವೆ.

ನ್ಯಾಷ್‍ವಿಲ್ ಪ್ರಮುಖ ಶೈಕ್ಷಣೀಕ ಕೇಂದ್ರಗಳಲ್ಲಿ ಒಂದಾಗಿದೆ. ವಾಂಡರ್‍ಬಿಲ್ಟ್ ವಿಶ್ವವಿದ್ಯಾಲಯ (1873), ಕೃಷಿ ಮತ್ತು ಕೈಗಾರಿಕಾ ರಾಜ್ಯ ವಿಶ್ವವಿದ್ಯಾಲಯ (1912) ಮುಂತಾದ ಅನೇಕ ಶಿಕ್ಷಣ ಸಂಸ್ಥೆಗಳು ಇಲ್ಲಿವೆ. ಅಧ್ಯಕ್ಷ ಅಂಡ್ರ್ಯೂ ಜ್ಯಾಕ್ಸನ್ನನ ನಿವಾಸವಾಗಿದ್ದ ಹರ್ಮಿಟೇಜ್ ಎಂಬುದು ನಗರದ ಪೂರ್ವಕ್ಕೆ ಸುಮಾರು 19 ಕಿಮೀ. ದೂರದಲ್ಲಿದೆ. ಈ ನಗರ ಪ್ರದೇಶದಲ್ಲಿ ವಿಶಾಲವಾದ ಸುಂದರ ಉದ್ಯಾನಗಳಿವೆ. ಈ ನಗರದ ಸುತ್ತಲೆಲ್ಲ ನೀಲಿ-ಹಸಿರು ಹುಲ್ಲಿನ ಹಾಸಿಗೆ ಹಾಸಿದಂತೆ ಕಾಣುತ್ತದೆ. 132 ಎಕರೆಗಳಷ್ಟು ವಿಶಾಲವಾದ ಸೆಂಟಿನಿಯಲ್ ಉದ್ಯಾನ ಮತ್ತು ಹಳೆಯ ಹಿಕರಿ ಸರೋವರಗಳು ರಮ್ಯವಾಗಿವೆ. (ಬಿ.ಎ.ಎಸ್.)