ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪತಿಪತ್ನಿಯರಿಗೆ ಸಂಬಂಧಿಸಿದ ಕಾನೂನುಗಳು

ಪತಿಪತ್ನಿಯರಿಗೆ ಸಂಬಂಧಿಸಿದ ಕಾನೂನುಗಳು

ಘಿ1 ಹಿಂದೂ ಕಾನೂನಿನ ಪ್ರಕಾರ ವಿವಾಹ ಒಂದು ಸಂಸಾರದ ಒಪ್ಪಂದ. ಅಂದರೆ ಹಿಂದೂ ವಿವಾಹವು ಸಂಸಾರ ಮತ್ತು ಕರಾರುಗಳ ಮಿಶ್ರಣವಾಗಿದ್ದು ಒಂದು ರೀತಿಯಲ್ಲಿ ವಿಶಿಷ್ಟವಾಗಿದೆ.

ಘಿ2 ಹಾಗಾಗಿ ಪತಿ ಯಾ ಪತ್ನಿ ಈ ಆಧಾರದ ಮೇಲೆ ಹಿಂದೂ ಕಾನೂನಿನಡಿಯಲ್ಲಿ ವಿವಾಹ ವಿಚ್ಚೇದನ ಕೋರಿ ನ್ಯಾಯಾಲಕಕ್ಕೆ ಅರ್ಜಿ ಸಲ್ಲಿಸಬಹುದು.

ಘಿ3 ಹಳೆಯ ಸಂಪ್ರದಾಯದ ಹಿಂದೂ ಕಾನೂನಿನ ಪ್ರಕಾರ ಪತಿಯ ನಿಧನದ ನಂತರ ವಿಧವೆಗೆ ಅವನ ಪಿತ್ರಾರ್ಜಿತ ಹಾಗೂ ಸ್ವಯಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯಲು ನಿರ್ಬಂಧಿತ ಹಕ್ಕು ಮಾತ್ರ ಇತ್ತು. ಆದರೆ ಇಂದಿನ ಹಿಂದೂ ಕಾನೂನಿನಡಿ ಪತಿಯ ಮರಣದ ನಂತರ ಆಕೆಗೆ ಅವನ ಪಿತ್ರಾರ್ಜಿತ ಹಾಗೂ ಸ್ವಯಾರ್ಜಿತ ಆಸ್ತಿಗಳಲ್ಲಿ ಪಾಲು ಪಡೆಯುವ ಅನಿರ್ಬಂಧಿತ ಹಕ್ಕಿದ್ದು ಸದರಿ ಆಸ್ತಿಗೆ ಆಕೆಯು ಸಂಪೂರ್ಣ ಹಕ್ಕುದಾರಳಾಗುವಳು.

ವೈಯಕ್ತಿಕ ಹಾಗೂ ಆಸ್ತಿ ಹಕ್ಕುಗಳ ದೃಷ್ಟಿಯಿಂದ ಗಂಡಹೆಂಡಿರ ಸಂಬಂಧಗಳ ಮೇಲೆ ವಿವಾಹದಿಂದಾಗಿ ಆಗುವ ಪರಿಣಾಮಗಳನ್ನು ಪರಿಶೀಲಿಸುವುದು ಈ ಲೇಖನದ ಉದ್ದೇಶ. ವಿವಾಹ ಒಂದು ಐಚ್ಛಿಕ ಸಂಬಂಧ. ವಿವಾಹ ಒಂದು ಗಂಡು ಮತ್ತು ಒಂದು ಹೆಣ್ಣಿನ ನಡುವೆ ವಾಗ್ದಾನಗಳ ಐಚ್ಛಿಕ ವಿನಿಮಯವೆಂಬ ಆಧುನಿಕ ವಿಚಾರ ಈಗ ಬಹು ಮಟ್ಟಿಗೆ ಸಾರ್ವತ್ರಿಕವಾಗಿದೆ. ಗಂಡು ಹೆಣ್ಣುಗಳು ತಮ್ಮ ಸಮಾಜದ ವ್ಯವಸ್ಥೆಗೆ ತಕ್ಕ ರೀತಿಯಲ್ಲಿ ಸಹಜೀವನ ನಡೆಯಿಸುವುದಕ್ಕೆ ವಿವಾಹ ಅನುಮತಿಯನ್ನು ಒದಗಿಸಿ ಕೊಟ್ಟು ಸಾಮಾಜಿಕ ಸುವ್ಯವಸ್ಥೆ ಮತ್ತು ಭದ್ರತೆಗಳಿಗೆ ಕಾರಣವಾಗುತ್ತದೆ. ಹಿಂದೂ ಕಾನೂನಿನ ಪ್ರಕಾರ ವಿವಾಹ ಒಂದು ಸಂಸ್ಕಾರದ ಒಪ್ಪಂದ. ಅಂದರೆ ಹಿಂದೂ ವಿವಾಹವು ಸಂಸ್ಕಾರ ಮತ್ತು ಕರಾರುಗಳ ಮಿಶ್ರಣವಾಗಿದ್ದು ಒಂದು ರೀತಿಯಲ್ಲಿ ವಿಶಿಷ್ಟವಾಗಿದೆ. ಮನುಷ್ಯನ ಆತ್ಮೋನ್ನತಿಗಾಗಿ ಹಿಂದೂ ಧರ್ಮ ವಿಧಿಸುವ ಹತ್ತು ಸಂಸ್ಕಾರಗಳಲ್ಲಿ ಒಂದೂ ಸನ್ಯಾಸಿಯಾಗಲು ಬಯಸುವವರನ್ನು ಬಿಟ್ಟು ಉಳಿದವರಿಗೆ ಅವಶ್ಯವಾದ್ದೂ ಆಗಿದೆ.


ವೈವಾಹಿಕ ಸಂಬಂಧದಿಂದ ಪತಿಪತ್ನಿಯರಿಗೆ ಸ್ವಾಭಾವಿಕವಾಗಿ ಕೆಲವು ವೈಯಕ್ತಿಕ ಬಾಧ್ಯತೆಗಳು ಮತ್ತು ಕರ್ತವ್ಯಗಳು ಉಂಟಾಗುತ್ತವೆ. ಪತಿಪತ್ನಿಯಲ್ಲಿ ಒಬ್ಬರು ಇನ್ನೊಬ್ಬರ ದೇಹ, ವಾತ್ಸಲ್ಯ, ಸಹವಾಸ ಮತ್ತು ನೆರವುಗಳಿಗೆ ಬಾಧ್ಯರಾಗುವುದು ವಿವಾಹದ ವಿಧಿಸಮ್ಮತ ಪರಿಣಾಮಗಳಲ್ಲಿ ಒಂದು,. ಹೆತ್ತವರ ಮತ್ತು ಮಕ್ಕಳ ನಡುವಿನ ಸಂಬಂಧದಿಂದ ಉದ್ಭವಿಸುವ ಹಕ್ಕು ಹಾಗೂ ಕರ್ತವ್ಯಗಳಿಗಿಂತ ಪತಿಪತ್ನಿಯರ ಪರಸ್ಪರ ಹಕ್ಕು ಮತ್ತು ಕರ್ತವ್ಯಗಳು ಮೇಲಿನವು. ಪತ್ನಿ ತನ್ನ ಪತಿಯ ಪ್ರೇಮ, ಪೋಷಣೆ ಮತ್ತು ರಕ್ಷಣೆಗಳಿಗೆ ಬಾಧ್ಯಳು. ಅವನಿಗೆ ಸಹವಾಸ ಒದಗಿಸಿ ಮನೆತನದ ಮತ್ತು ಸಂಸಾರದ ಕೆಲಸಗಳನ್ನು ನಿರ್ವಹಿಸುವುದು ಪತ್ನಿಯ ಕರ್ತವ್ಯ. ಪತ್ನಿಯ ಪೋಷಣೆಯನ್ನು ಕುರಿತಂತೆ ಪತಿಯ ಕರ್ತವ್ಯ, ಗೃಹಕೃತ್ಯಗಳನ್ನು ಕುರಿತಂತೆ ಪತ್ನಿಯ ಕರ್ತವ್ಯ-ಇವನ್ನು ಪಾಲಿಸುವ ಅಥವಾ ಪಾಲಿಸದಿರುವ ಸಂಬಂಧವಾಗಿ ಹಾಕಲಾಗುವ ಕರಾರುಗಳು ಸಾರ್ವಜನಿಕ ನೀತಿಗೆ ವಿರುದ್ಧವಾಗಿರುವುದರಿಂದ ಸಾಮಾನ್ಯವಾಗಿ ಅನೂರ್ಜಿತವಾಗುತ್ತವೆ. ಪ್ರಾಚೀನ ರೋಮನ್ ನ್ಯಾಯದ ಪ್ರಕಾರ ಪತ್ನಿ ತನ್ನ ಪತಿಯ ಕೇವಲ ಚರಾಸ್ತಿಯಾಗಿದ್ದಳು. ಅವಳಿಗೆ ತನ್ನ ಮಗಳಿಗೆ ಇದ್ದವಕ್ಕಿಂತ ಯಾವ ಹೆಚ್ಚಿನ ಹಕ್ಕುಗಳೂ ಇರಲಿಲ್ಲ. ಅನಂತರದ ರೋಮನ್ ನ್ಯಾಯ ಪತ್ನಿಗೆ ಕೆಲವು ಸ್ಥಾನಮಾನಗಳನ್ನು ಒದಗಿಸಿತ್ತು. ಪತ್ನಿಯ ಸ್ವಂತ ಆಸ್ತಿ, ವೈಯಕ್ತಿಕ ಸ್ವಾತಂತ್ರ್ಯ ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ಹಲವು ಆಧುನಿಕ ನ್ಯಾಯ ವವ್ಯಸ್ಥೆಗಳಲ್ಲಿ ಕಾನೂನುಗಳಿವೆ.

ಪತಿ ತನ್ನ ಕರ್ತವ್ಯಗಳನ್ನು ಪಾಲಿಸುವುದಕ್ಕೆ ಅನರ್ಹನಾಗಿರದಿದ್ದಲ್ಲಿ ಅವನು ಕುಟುಂಬದ ಯಜಮಾನನೆನಿಸಿಕೊಳ್ಳುವನೆಂಬುದು ಆಂಗ್ಲೊ-ಅಮೆರಿಕನ್ ಸಂಪ್ರದಾಯ ಮತ್ತು ಆಧುನಿಕ ಕಾನೂನಿಗಳಿಂದ ವ್ಯಕ್ತವಾಗುವ ಸಂಗತಿ. ಆಧುನಿಕ ಕಾನೂನುಗಳ ಪ್ರಕಾರ ಅವನಿಗೆ ತನ್ನ ಪತ್ನಿಯ ದೇಹದ ಮೇಲೆ ಅನಿರ್ದಿಷ್ಟವಾದ ಅಧಿಕಾರವಿರುವುದಿಲ್ಲ. ಹೊಡೆ ಬಡಿ ಮಾಡುವುದು, ಅವಳ ಚಲನವಲನಗಳನ್ನು ನಿರ್ಬಂಧಿಸುವುದು, ಕೂಡಿಹಾಕುವುದು ಮೊದಲಾದವನ್ನು ಆತ ಮಾಡಲಾಗದು. ಸಾಮಾನ್ಯವಾಗಿ ಪತಿ ಕುಟುಂಬ ಪೋಷಣೆಗಾಗಿ ದುಡಿಯುವವನಾದ್ದರಿಂದ ವೈವಾಹಿಕ ವಾಸಸ್ಥಾನವನ್ನು ಆಯ್ಕೆ ಮಾಡುವ ಹಕ್ಕು ಅವನಿಗಿದೆ. ಆದರೆ ಆತ ಈ ಸಂಬಂಧದಲ್ಲಿ ವಿವೇಚನೆಯಿಂದ ವರ್ತಿಸಬೇಕು. ಪತ್ನಿಯ ಹಿತ, ಆರೋಗ್ಯ ಮತ್ತು ಭದ್ರತೆಗಳಿಗೆ ಅವಶ್ಯವಾಗಿ ಲಕ್ಷ್ಯವೀಯಬೇಕು. ತನ್ನ ಪತ್ನಿ ಮತ್ತು ಕುಟುಂಬವನ್ನು ಪೋಷಿಸುವುದು ಪತಿಯ ಹೊಣೆ. ಪತ್ನಿಗೆ ಸ್ವಂತ ಸ್ವತ್ತು ಇರುವುದೆಂಬ, ಇಲ್ಲವೇ ಅವಳು ಸ್ವಪೋಷಣೆಯನ್ನು ಮಾಡಿಕೊಳ್ಳಲು ಸಮರ್ಥಳೆಂಬ ಕಾರಣದಿಂದ ಈ ಹೊಣೆ ತಪ್ಪುವುದಿಲ್ಲ, ಮಾರ್ಪಡುವುದೂ ಇಲ್ಲ. ಪೋಷಣೆಯ ಹೊಣೆಯ ವ್ಯಾಪ್ತಿ ಆಯಾ ಸಂದರ್ಭಕ್ಕೆ ಅನುಗುಣವಾಗಿರುತ್ತದೆ. ಅಲ್ಲದೆ ಅದು ಸಾಮಾಜಿಕ ದರ್ಜೆ ಮತ್ತು ಗಳಿಸುವ ಸಾಮಥ್ರ್ಯ ಇವನ್ನೂ ಅವಲಂಬಿಸಿರುತ್ತದೆ. ಪತ್ನಿಗೆ ಮತ್ತು ಕುಟುಂಬಕ್ಕೆ ಯೋಗ್ಯ ಆಹಾರ, ವಸತಿ, ಬಟ್ಟೆ, ವೈದ್ಯ ಸೌಲಭ್ಯ ಮೊದಲಾದ ಅವಶ್ಯಕತೆಗಳನ್ನು ಒದಗಿಸುವ ಕರ್ತವ್ಯ ಪತಿಯದು. ಮನೆಗೆಲಸದಲ್ಲಿ ಸಹಾಯ, ಮಕ್ಕಳ ವಿದ್ಯಾಭ್ಯಾಸ ಮುಂತಾದ ಖರ್ಚನ್ನು ವಹಿಸುವುದು ಇವೂ ಈ ಕರ್ತವ್ಯಕ್ಕೆ ಒಳಪಡಬಹುದು. ಪತ್ನಿಗೆ ಪತಿ ಈ ಅವಶ್ಯಕತೆಗಳನ್ನು ಒದಗಿಸಲು ತಪ್ಪಿದಲ್ಲಿ ಇಲ್ಲವೇ ನಿರಾಕರಿಸಿದಲ್ಲಿ ಇಂಥ ಅವಶ್ಯಕತೆಗಳನ್ನು ಆಕೆಗೆ ಒದಗಿಸಿದವರಿಗೆ ಅವನು ಋಣಿಯಾಗುತ್ತಾನೆ. ಕೆಲವು ಕಾನೂನುಗಳು ಪತಿಯೊಂದಿಗೆ ಪತ್ನಿಯನ್ನೂ ಕುಟುಂಬದ ಪೋಷಣೆಯ ಖರ್ಚಿಗೆ ಹೊಣೆಗಾರಳನ್ನಾಗಿ ಮಾಡುತ್ತವೆ. ಅಂಥ ಸಂದರ್ಭಗಳಲ್ಲಿ ಕುಟುಂಬದ ಖರ್ಚಿನಮೌಲ್ಯ ಹೆಚ್ಚು ಕಡಿಮೆ ಪತಿ ಒದಗಿಸಬೇಕಾಗುವ ಆವಶ್ಯಕತೆಗಳ ಖರ್ಚಿನಷ್ಟೇ ಇರಬಹುದು. ಪತಿಪತ್ನಿಯಲ್ಲಿ ಒಬ್ಬರು ಇನ್ನೊಬ್ಬರಿಗೆ ತಮ್ಮ ಸಹವಾಸವನ್ನೊದಗಿಸುವುದಕ್ಕೆ ಬದ್ಧರಾಗಿರುತ್ತಾರೆ. ಅವರಲ್ಲಿ ಯಾರಾದರೊಬ್ಬರು ಇನ್ನೊಬ್ಬರ ಅನುಮತಿಯಿಲ್ಲದೆ ಅವರ ಇಚ್ಛೆಗೆ ವಿರುದ್ಧವಾಗಿ ನಿಷ್ಕಾರಣವಾಗಿ ಅವರನ್ನು ಶಾಶ್ವತವಾಗಿ ತ್ಯಜಿಸಬೇಕೆಂಬ ಹೇತುವಿನಿಂದ ಬೇರೆಯಿರತೊಡಗಿದಲ್ಲಿ, ತ್ಯಜಿಸಲ್ಪಟ್ಟವರು ದಾಂಪತ್ಯದ ಹಕ್ಕುಬಾಧ್ಯತೆಗಳ ಪುನಃಸ್ವಾಧೀನಕ್ಕಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ಇಂಥ ಅರ್ಜಿಯ ಮೇಲೆ ನ್ಯಾಯಾಲಯ ನೀಡುವ ಆಜ್ಞೆಯನ್ನು ಜಾರಿಯಲ್ಲಿ ತರುವುದಕ್ಕಾಗಿ ಬೇರೆ ಇರುವವರನ್ನು ವೈವಾಹಿಕ ವಾಸಸ್ಥಾನಕ್ಕೆ ಮರಳುವಂತೆ ಬಲಾತ್ಕಾರ ಮಾಡಲಾಗುವುದಿಲ್ಲ. ಆದರೆ ನ್ಯಾಯಾಲಯದ ಆಜ್ಞೆಯ ಉಲ್ಲಂಘನೆಯನ್ನು ವಿವಾಹ ವಿಚ್ಛೇದಕ್ಕೆ ಕಾರಣವಾಗುವ ಪರಿತ್ಯಜನವೆಂದು ಎಣಿಸಬಹುದು. ಹಾಗಾಗಿ ಪತಿಯಾ ಪತ್ನಿ ಈ ಆಧಾರದ ಮೇಲೆ ವಿವಾಹ ವಿಚ್ಛೇದನಕ್ಕೆ ಹಿಂದೂ ಕಾನೂನಿನಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ಮೂರನೆಯ ವ್ಯಕ್ತಿಯೊಬ್ಬನ ಪ್ರೇರೇಣೆಯಿಂದ ಪತ್ನಿ ಪತಿಯನ್ನು ತ್ಯಜಿಸಿದಲ್ಲಿ, ಪತ್ನಿಯನ್ನು ಅದಕ್ಕಾಗಿ ಪುಸಲಾಯಿಸಿದ್ದಕ್ಕಾಗಿ ಪತಿ ಆ ವ್ಯಕ್ತಿಯಿಂದ ನಷ್ಟ ಪರಿಹಾರ ಕೇಳಬಹುದು. ಇಂಥ ನಷ್ಟಪರಿಹಾರದ ಮೌಲ್ಯ, ಪತ್ನಿ ಗೃಹಿಣಿಯಂತೆ ಸಲ್ಲಿಸುವ ಸೇವೆಗಳ ಮೌಲ್ಯದಷ್ಟಿರಬಹುದು. ಮೂರನೆಯ ವ್ಯಕ್ತಿಯೊಬ್ಬನ ಉಪೇಕ್ಷೆಯಿಂದಾಗಿ ಪತ್ನಿಯ ಸಹವಾಸ ಸೇವೆಗಳು ಪತಿಗೆ ಇಲ್ಲವಾದಾಗ ಆತ ಮೂರನೆಯವನಿಂದ ಪರಿಹಾರ ಕೇಳಬಹುದು.

ವಿವಾಹಿತ ಮಹಿಳೆಯರ ಸ್ವತ್ತಿನ ವಿಶೇಷ ಕಾನೂನುಗಳು ಜಾರಿಯಲ್ಲಿ ಬರುವುದಕ್ಕೆ ಮುಂಚೆ, ವಿವಾಹಿತ ಮಹಿಳೆಯರಿಗೆ ಸ್ವತ್ತಿನ ವಿಶೇಷ ಕಾನೂನುಗಳು ಜಾರಿಯಲ್ಲಿ ಬರುವುದಕ್ಕೆ ಮುಂಚೆ, ವಿವಾಹಿತ ಮಹಿಳೆಯರಿಗೆ ಸ್ವತ್ತಿನ ಸಂಬಂಧದಲ್ಲಿ ಅನೇಕ ನ್ಯೂನತೆಗಳಿದ್ದುವು. ಸಂಪ್ರದಾಯ ನ್ಯಾಯಾನುಸಾರ ಆತ ಪತ್ನಿಯ ಎಲ್ಲ ಚರ ಆಸ್ತಿಗೂ ಬಾಧ್ಯನಾಗುತ್ತಿದ್ದ. ವಿವಾಹಿತ ಸಮಯದಲ್ಲಿ ಅವಳಿಗೆ ಬಂದ ಸ್ವತ್ತೆಲ್ಲ ಅವನದಾಗುತ್ತಿತ್ತು. ಗೇಣಿಯ ಜಮೀನು, ಸಾಲ, ಷೇರುಗಳು ಮೊದಲಾದವನ್ನು ಅವಳು ಇಟ್ಟುಕೊಳ್ಳಬಹುದಾಗಿದ್ದರೂ ಅವನ್ನು ಹಸ್ತಾಂತರ ಮಾಡುವ ಅಧಿಕಾರ ಅವಳಿಗಿರಲಿಲ್ಲ. ಹಸ್ತಾಂತರ ಮಾಡುವ ಇಲ್ಲವೇ ಮಾರುವ ಹಾಗೂ ಅದರಿಂದ ಬಂದ ಹಣವನ್ನು ಬಳಸುವ, ಸ್ವಂತಕ್ಕಾಗಿ ಸಾಲಗಳನ್ನು ವಸೂಲಿಮಾಡುವ, ಮತ್ತು ಬಾಡಿಗೆ ಪಡೆಯುವ ಹಕ್ಕು ಪತಿಗಷ್ಟೇ ಇತ್ತು. ನಿರುಪಾಧಿಕ ಜಮೀನು ಪತ್ನಿಯದೇ ಇರತ್ತಿದ್ದು ಅದನ್ನು ಅವಳಾಗಲಿ ಅವಳ ಪತಿಯಾಗಲಿ ಒಬ್ಬರೇ ಹಸ್ತಾಂತರ ಮಾಡುವಂತಿರಲಿಲ್ಲ. ಆಧುನಿಕ ಕಾನೂನಗಳ ಪ್ರಕಾರ ವಿವಾಹಿತ ಮಹಿಳೆ ಅವಿವಾಹಿತ ಮಹಿಳೆಯಂತೆಯೇ ಸ್ಥಿರ ಮತ್ತು ವೈಯಕ್ತಿಕ ಸ್ವತ್ತುಗಳನ್ನು ಹೊಂದಿರಬಹುದಾಗಿದೆ. ಹಳೆಯ ಸಂಪ್ರದಾಯದ ಹಿಂದೂ ಕಾನೂನಿನ ಪ್ರಕಾರ ವಿವಾಹಿತ ಸ್ತ್ರೀಗೆ ತನ್ನ ಪತಿ ನಿಧನವಾದ ನಂತರ ಆತನ ಪಿತ್ರಾರ್ಜಿತ ಹಾಗೂ ಸ್ವಯಾರ್ಜಿತ ಆಸ್ತಿಯಲ್ಲಿ ನಿರ್ಬಂಧಿತ ಹಕ್ಕು ಮಾತ್ರ ಇತ್ತು. ಆದರೆ ಈಗಿನ ಆಧುನಿಕ ಹಿಂದೂ ಕಾನೂನಿನಡಿ ಆಕೆಗೆ ತನ್ನ ಗಂಡನ ಮರಣಾ ನಂತರ, ಆತನ ಪಿತ್ರಾರ್ಜಿತ ಹಾಗೂ ಸ್ವಯಾರ್ಜಿತ ಎರಡೂ ಆಸ್ತಿಯಲ್ಲಿ, ಪಾಲು ಪಡೆಯುವ ಅನಿರ್ಬಂಧಿತ ಹಕ್ಕಿದ್ದು. ಆ ಆಸ್ತಿಗೆ ಆಕೆ ಸಂಪೂರ್ಣ ಹಕ್ಕುದಾರಳಾಗಿರುತ್ತಾಳೆ.

ವಿವಾಹಾನಂತರ ಪತಿಪತ್ನಿಯರಲ್ಲಿ ಯಾರೊಬ್ಬರೂ ತಮ್ಮ ಸ್ವಂತ ಶ್ರಮದಿಂದ ಗಳಿಸಿದ ಸ್ವತ್ತನ್ನು ಈಗ ಸಾಮಾನ್ಯವಾಗಿ ಸಹಸ್ವಾಮ್ಯಸ್ವತ್ತೆಂದು ಗಣಿಸಲಾಗುತ್ತದೆ. ಈ ಸ್ವತ್ತು ಪಾಲುದಾರಿಕೆ ಉದ್ಯಮದ ಸ್ವತ್ತಿನಂತಿರುತ್ತದೆ. ವಿವಾಹಕ್ಕಿಂತ ಮುಂಚೆ ಪಡೆದಿದ್ದ ಸ್ವತ್ತು ಸಹ ಸ್ವಾಮ್ಯ ಸ್ವತ್ತಾಗುವುದಿಲ್ಲ. ವಿವಾಹದ ಅನಂತರ ಪಡೆದ ಯಾವ ಸ್ವತ್ತು ಪ್ರತ್ಯೇಕ ಎಂಬುದನ್ನು ಸಹಸ್ವಾಮ್ಯ ಸ್ವತ್ತುಗಳ ಕಾನೂನುಗಳು ವಿಧಿಸುತ್ತವೆ. ಉಳಿದೆಲ್ಲವೂ ಸಹಸ್ವಾಮ್ಯ ಸ್ವತ್ತಾಗುತ್ತದೆ. ಪತಿಪತ್ನಿಯರ ಗಳಿಕೆ ಸಹಸ್ವಾಮ್ಯ ಸ್ವತ್ತೆಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಬಡ್ಡಿ, ಬಾಡಿಗೆ, ಲಾಭಾಂಶ ಮುಂತಾದ-ಸ್ವತ್ತಿನಿಂದ ಬಂದ-ಗಳಿಕೆಯನ್ನು ಮೂಲ ಸ್ವತ್ತಿನಂತೆಯೇ ಎಣಿಸಲಾಗುತ್ತದೆ. ಸ್ವತ್ತಿನ ವರ್ಗೀಕರಣದ ಸಂಬಂಧದಲ್ಲಿ ವ್ಯಾಜ್ಯಗಳುಂಟಾದಾಗ ಅದು ಸಹ ಸ್ವಾಮ್ಯ ಸ್ವತ್ತೆಂದು ನಿರ್ಧಾರವಾಗುವುದು ಹೆಚ್ಚು.

ಹಿಂದೆ ಸಹಸ್ವಾಮ್ಯಸ್ವತ್ತಿನ ವಹಿವಾಟಿನ ಅಧಿಕಾರ ಪೂರ್ತಿಯಾಗಿ ಪತಿಯ ಕೈಯಲ್ಲಿತ್ತು. ಈಗ ಈ ಅಧಿಕಾರವನ್ನು ಅನೇಕ ಕಾನೂನುಗಳು ಪಾರ್ಮಡಿಸಿ ಇಳಿಸಿವೆ. ಸ್ವತ್ತನ್ನು ದುಂದುಮಾಡುವ ಇಲ್ಲವೇ ಕುಟುಂಬಕ್ಕೆ ಪೋಷಣೆಯನ್ನು ನಿಲ್ಲಿಸುವ ಅವಕಾಶ ಪತಿಗೆ ಇರುವುದಿಲ್ಲ. ಪತಿ ಪತ್ನಿಗೆ ಕುಟುಂಬಪೋಷಣೆಗೆ ಕೊಡುವ ಹಣ ಅವನದು. ಮಿತವ್ಯಯದಿಂದ ಪತ್ನಿ ಈ ಹಣದಲ್ಲಿ ಉಳಿಸಿದದಾದರೆ ಅದನ್ನು ಆತ ತನ್ನದೆನ್ನಬಹುದು. ಪತ್ನಿ ಪತಿಯ ಹೆಸರಿನಲ್ಲಿ ತನ್ನ ಮತ್ತು ಮಕ್ಕಳ ಅನ್ನ ಬಟ್ಟೆಗಳಿಗಾಗಿ ಸಾಲ ಮಾಡಬಹುದು. ಪತಿ ತನ್ನ ಪತ್ನಿ ಮಾಡಿದ ಸಾಲಕ್ಕೆ ತಾನು ಹೊಣೆಯಲ್ಲವೆಂದು ವ್ಯಾಪಾರಸ್ಥüರಿಗೆ ತಿಳಿಸಿ ಇದನ್ನು ತಡೆಯಬಹುದು. ಪತಿಯ ಅನುಮತಿಯಿಲ್ಲದೆ ಪತ್ನಿ ಒಪ್ಪಿಕೊಂಡ ಕರಾರುಗಳಿಗೆ ಅವನು ಜವಾಬುದಾರನಲ್ಲ. ಆದರೆ ಕುಟುಂಬದ ಜೀವನಾವಶ್ಯಕ ವಸ್ತುಗಳಿಗಾಗಿ ಪತ್ನಿ ಮಾಡಿದ ಸಾಲವನ್ನು ಪತಿ ತೀರಿಸಬೇಕಾಗುತ್ತದೆ. ಪತ್ನಿಯ ವರಮಾನ ತೆರಿಗೆಗೆ ಪತಿ ಜವಾಬುದಾರನಾಗಬಹುದು. ಪತ್ನಿಯ ಮತ್ತು ಮಕ್ಕಳ ರಕ್ಷಣೆ ಮತ್ತು ಮಕ್ಕಳ ವಿದ್ಯಾಭ್ಯಾಸ ಮತ್ತು ಧಾರ್ಮಿಕ ಶಿಕ್ಷಣ ಇವು ಪತಿಯ ಹೊಣೆ. ಪತ್ನಿಯ ಮತ್ತು ಮಕ್ಕಳ ಹಿತಕ್ಕಾಗಿ ಪತಿ ತೆಗೆದ ವಿಮಾಪಾಲಿಸಿಯನ್ನು ಅವನ ಸಾಲಗಾರರು ಮುಟ್ಟಲಾರರು.

ವ್ಯಾಜ್ಯ ಯೋಗ್ಯವಾದ ಉಪೇಕ್ಷೆ, ಮಾನನಷ್ಟ ಮೊದಲಾದ ಅಪರಾಧಗಳಿಗೆ ಪತಿ ಪತ್ನಿಯರಲ್ಲಿ ಒಬ್ಬರು ಇನ್ನೊಬ್ಬರ ವಿರುದ್ಧ ಕ್ರಮ ತೆಗೆದುಕೊಳ್ಳಲಾರರು. ಹಲ್ಲೆ, ಗಾಯಗೊಳಿಸುವುದು ಮೊದಲಾದ ವೈಯಕ್ತಿಕ ಅಪರಾಧಗಳಿಗೆ ಮತ್ತು ವಿಭಕ್ತ ಸ್ವತ್ತಿನ ರಕ್ಷಣೆಗೆ ಒಬ್ಬರು ಇನ್ನೊಬ್ಬರ ಮೇಲೆ ಕಾನೂನಿನ ಕ್ರಮಗಳನ್ನು ತೆಗೆದುಕೊಳ್ಳಬಹುದು. ಅವರು ಬೇರೆಯಾಗಿ ಇದ್ದ ಹೊರತು ಪತಿಯ ಮೇಲೆ ಪತ್ನಿ ಕಳವಿನ ಅಪರಾಧ ಹೊರಿಸುವಂತಿಲ್ಲ.

ಸಂಪ್ರದಾಯ ನ್ಯಾಯದ ಪ್ರಕಾರ ಪತಿ ತನ್ನ ಪತ್ನಿಯ ನಡತೆಗೆ ಜವಾಬುದಾರನಾಗಿರುತ್ತಾನೆ. ಹಾಗೂ ಅವಳ ಸ್ವತ್ತಿನ ಮೇಲೆ ಅವನ ಅಧಿಕಾರವಿರುತ್ತದೆ. ಹೀಗಾಗಿ ಅವನ ಗೈರುಹಾಜರಿಯಲ್ಲಿ ಮತ್ತು ಅವನ ತಿಳಿವಳಿಕೆ ಹಾಗೂ ಅನುಮತಿಗಳಿಲ್ಲದೆ ಪತ್ನಿ ಮಾಡಿದ ವೈಯಕ್ತಿಕ ತಕ್ಸೀರುಗಳಿಗೆ ಅವನು ಬಾಧ್ಯನಾಗಬಹುದು. ಪತಿ ಪಾಲುಗೊಳ್ಳದ ಮತ್ತು ಪತ್ನಿ ಸ್ವಂತ ಬುದ್ಧಿಯಿಂದ ಮಾಡಿದ ವೈಯಕ್ತಿಕ ತಕ್ಸೀರುಗಳಿಗೆ ಪತಿಯನ್ನು ಜವಾಬುದಾರನೆಂದು ಆಧುನಿಕ ಕಾನೂನುಗಳು ಎಣಿಸುವುದಿಲ್ಲ. ಮೂರನೆಯವರು ಪತ್ನಿಯ ವಿರುದ್ಧ ಎಸಗಿದ ವೈಯಕ್ತಿಕ ತಕ್ಸೀರಿನ ಸಂಬಂಧದಲ್ಲಿ ಅವರ ಮೇಲೆ ತೆಗೆದುಕೊಳ್ಳಲಾಗುವ ಕಾನೂನಿನ ಕ್ರಮದಲ್ಲಿ ಪತಿಪತ್ನಿಯರಿಬ್ಬರೂ ಸೇರಬೇಕೆಂಬುದಾಗಿ ಸಂಪ್ರದಾಯ ನ್ಯಾಯ ಹೇಳುತ್ತದೆ.

ಪತಿಪತ್ನಿಯರಲ್ಲಿ ಒಬ್ಬರ ವಿರುದ್ಧ ಇನ್ನೊಬ್ಬರು ನ್ಯಾಯಾಲಯದಲ್ಲಿ ಸಾಕ್ಷ್ಯ ಹೇಳುವಂತೆ ಕಾನೂನಿನಲ್ಲಿ ನಿರ್ಬಂಧವಿಲ್ಲ. ಆದರೆ ದಾವೆಗಳಲ್ಲಿ ಮತ್ತು ತಕ್ಸೀರಿನ ಕ್ರಮಗಳಲ್ಲಿ ಒಬ್ಬರು ಇನ್ನೊಬ್ಬರ ವಿರುದ್ಧ ನ್ಯಾಯಸಮ್ಮತ ಸಾಕ್ಷಿಗಳಾಗುತ್ತಾರೆ. (ಜಿ.ಕೆ.ಯು.) (ಪರಿಷ್ಕರಣೆ: ಎಂ.ಎನ್.ಭೀಮೇಶ್)