ಪಿತೂರಿ- ಇಬ್ಬರು ಅಥವಾ ಹೆಚ್ಚು ಜನ ಸೇರಿ ಅಪರಾಧವೆಸಗಲು ಒಂದು ಒಪ್ಪಂದಕ್ಕೆ ಬಂದರೆ, ಆ ಅಪರಾಧ ಸಂಭವಿಸಲಿ ಅಥವಾ ಸಂಭವಿಸದಿರಲಿ ಅದು ಪಿತೂರಿಯಾಗುತ್ತದೆಂದು ಸ್ಟೀಫನ್ ಎಂಬುವರು ನಿರೂಪಿಸಿದ್ದಾರೆ. ಮಧ್ಯಯುಗದ ಇಂಗ್ಲಿಷ್ ನ್ಯಾಯದಲ್ಲಿ ನ್ಯಾಯ ವಿಪರ್ಯಾಸದ ಉದ್ದೇಶದಿಂದ ಹಲವರು ಒಟ್ಟುಗೂಡಿ ಉಂಟುಮಾಡಿದ ನಷ್ಟಕ್ಕಾಗಿ ಪರಿಹಾರ ಕೇಳುವುದೇ ಪಿತೂರಿಯ ಬಗ್ಗೆ ಕೈಗೊಳ್ಳಬಹುದಾದ ಕಾನೂನು ಕ್ರಮವಾಗಿತ್ತು. ಒಬ್ಬನಿಗೆ ಹಾನಿಯುಂಟುಮಾಡುವ ಉದ್ದೇಶದಿಂದ ಇಬ್ಬರು ಅಥವಾ ಹೆಚ್ಚು ಜನರು ಒಟ್ಟುಗೂಡಿ ಒಂದು ಕೃತ್ಯವೆಸಗಿದಲ್ಲಿ, ಅದರಿಂದ ಸಂಭವಿಸಿದ ನಷ್ಟಕ್ಕಾಗಿ ಆಧುನಿಕ ಅಪಕೃತ್ಯ ಕಾನೂನಿನ ಅಡಿಯಲ್ಲಿ (ಲಾ ಆಫ್ ಟಾಟ್ರ್ಸ್) ಕ್ರಮ ತೆಗೆದುಕೊಳ್ಳಬಹುದಾಗಿದೆ. ಆದರೆ, ಇಂಗ್ಲೆಂಡಿನ ಅಪರಾಧಿಕ ಕಾನೂನಿನಲ್ಲಿ ಪಿತೂರಿ ಎಂಬುದಕ್ಕೆ ದೀರ್ಘ ಹಿನ್ನೆಲೆಯುಂಟು. ನ್ಯಾಯ ವಿಪರ್ಯಾಸ ಬೆಲೆಗಳನ್ನು ಅಥವಾ ಮಜೂರಿಗಳನ್ನು ಏರಿಸುವುದು-ಮೊದಲಾದವಕ್ಕೆ ಸಂಬಂಧಿಸಿದಂತೆ ಪಿತೂರಿ ಎಂಬ ಅಪರಾಧ ಪರಿಕಲ್ಪನೆಯನ್ನು ಮೂಲತಃ ರೂಪಿಸಲಾಯಿತು. ಸಾರ್ವಜನಿಕ ಹಿತಕ್ಕೆ ವಿರೋಧವಾಗಿರುವ ಎಲ್ಲ ಪಿತೂರಿಗಳಿಗೂ ಇಂಗ್ಲೆಂಡಿನಲ್ಲಿ ಸ್ಟಾರ್ ಚೇಂಬರ್ ನ್ಯಾಯಾಲಯ ದಂಡನೆ ವಿಧಿಸುತ್ತಿತ್ತು.

ಭಾರತದಲ್ಲಿ ರಾಜದ್ರೋಹ ಮತ್ತು ಅರಾಜಕತೆಗೆ ಪ್ರಯತ್ನಿಸುವ ಕೂಟಗಳ ದಮನಕ್ಕಾಗಿ ಅಪರಾಧಿ ಪಿತೂರಿಯನ್ನು 1919ರಲ್ಲಿ ಭಾರತೀಯ ದಂಡ ಸಂಹಿತೆಗೆ ಸೇರಿಸಲಾಯಿತು. ವಿಧಿವಿರುದ್ಧವಾದದ್ದನ್ನು ಮಾಡಲು ; ಅಥವಾ ಇನ್ನೊಬ್ಬ ವ್ಯಕ್ತಿಗೆ ಅಕ್ರಮ ಹಾಗೂ ಹಾನಿಕರವಾದ್ದನ್ನು ಎಸಗಲು ; ಅಥವಾ ಒಂದು ಉದ್ದೇಶ ಸ್ವಯಮೇವ ವಿಧಿವಿರುದ್ಧವಾದ್ದಾಗಿರದಿದ್ದರೂ ವಿಧಿವಿರುದ್ಧ ವಿಧಾನದಿಂದ ಆ ಉದ್ದೇಶವನ್ನು ಪೂರೈಸಲು ಇಬ್ಬರು ಇಲ್ಲವೇ ಹೆಚ್ಚು ವ್ಯಕ್ತಿಗಳು ಒಂದಾಗಿದ್ದರೆ ಅದು ಪಿತೂರಿಯಾಗುತ್ತದೆಯೆಂದು ಭಾರತೀಯ ದಂಡಸಂಹಿತೆ ಹೇಳುತ್ತದೆ. ಪಿತೂರಿ ಮಾತ್ರವೇ ಕ್ರಮಾರ್ಹ (ಆಕ್ಷನ್‍ಬಲ್) ಅಕೃತ್ಯವಾಗುವುದಿಲ್ಲ. ಪಿತೂರಿಗೆ ಅನುಸಾರವಾಗಿ ಯಾವುದೇ ಕೃತ್ಯ-ಬಹಿರಂಗ ಕೃತ್ಯ-ಆಗಿರಬೇಕು ಮತ್ತು ಅದರ ಪರಿಣಾಮವಾಗಿ ಆಪಾದಕನಿಗೆ (ಪ್ಲೇನ್ಟಿಫ್) ವಾಸ್ತವವಾಗಿ ಹಾನಿಯಾಗಿರಬೇಕು. ಆಗ ಮಾತ್ರ ಅದು ಪಿತೂರಿಯೆನಿಸುತ್ತದೆ. ಒಂದು ವಿಧಿವಿರುದ್ಧ ಕೃತ್ಯ ಅಂಥ ಒಪ್ಪಂದದ ಅಂತಿಮ ಉದ್ದೇಶವಾಗಿಯೇ ಅಥವಾ ಆ ಉದ್ದೇಶಕ್ಕೆ ಅದು ಕೇವಲ ಪ್ರಾಸಂಗಿಕವಾಗಿದೆಯೇ ಎಂಬುದು ಮುಖ್ಯವಲ್ಲ. ಒಟ್ಟಿನಲ್ಲಿ ಒಬ್ಬನಿಂದಲೇ ಪಿತೂರಿಯ ಅಪರಾಧ ಘಟಿಸುವುದಿಲ್ಲ. ಅದಕ್ಕೆ ಇಬ್ಬರಿಗಿಂತ ಹೆಚ್ಚು ಜನರು ಇರಬೇಕು. ಅವರು ಅಪರಾಧವೆನಿಸಬಹುದಾದ ಕೃತ್ಯವೆಸಗಲು ಒಪ್ಪಂದ ಮಾಡಿಕೊಂಡಿರಬೇಕು. ವಿಧಿವಿರುದ್ಧ ಸಾಧನಗಳ ಮೂಲಕ ಒಂದು ಒಳ್ಳೆಯ ಕೃತ್ಯವನ್ನು ಮಾಡಲು ಅಥವಾ ಮಾಡಿಸಲು ಒಪ್ಪಂದ ಮಾಡಿಕೊಳ್ಳುವುದೂ ಕೂಡ ಅಪರಾಧಿಕ ಆಗುತ್ತದೆ. ಪಿತೂರಿಯ ಉದ್ದೇಶಕ್ಕೆ ಅನುಗುಣ ಕೃತ್ಯ ನಡೆಯದಿದ್ದರೆ, ಕೇವಲ ಹೊಂಚು ಹಾಕಿದ ಮಾತ್ರದಿಂದ ಪಿತೂರಿ ನಡೆದಿದೆ ಎಂದು ಹೇಳುವಂತಿಲ್ಲ.

ಕೆಲವು ವ್ಯಕ್ತಿಗಳು ವಿಧಿವಿಹಿತ ವಿಧಾನಗಳ ಮೂಲಕ ತಮ್ಮ ಸ್ವಂತ ಹಕ್ಕುಗಳನ್ನು ಚಲಾಯಿಸುವ ಉದ್ದೇಶದಿಂದ ಒಂದುಗೂಡಿದ್ದರೆ, ಇತರರ ಹಕ್ಕುಗಳನ್ನು ತನ್ಮೂಲಕ ಅತಿಲಂಘಿಸದಿದ್ದರೆ (ಇನ್‍ಫ್ರಿಂಜ್) ಅಂಥ ಒಂದುಗೂಡುವಿಕೆಯನ್ನು ಪಿತೂರಿಯೆಂದು ಹೇಳಲಾಗದು. ಉದಾಹರಣೆಗೆ, ವ್ಯಾಪಾರವನ್ನು ರಕ್ಷಿಸುವ ಮತ್ತು ವಿಸ್ತರಿಸುವ ಉದ್ದೇಶದಿಂದ ಕೈಗೊಳ್ಳಲಾದ ಕ್ರಮ ಪಿತೂರಿಯಲ್ಲ. ವಾಣಿಜ್ಯಕ ಸ್ಪರ್ಧೆಯ ಉದ್ದೇಶ ಇಲ್ಲದಿದ್ದು, ಬುದ್ಧಿಪೂರ್ವಕವಾಗಿ ಹಾಗೂ ಉದ್ದೇಶಪೂರ್ವಕವಾಗಿ ಇನ್ನೊಬ್ಬನ ವ್ಯಾಪಾರಕ್ಕೆ ಹಾನಿ ಉಂಟುಮಾಡುವುದಕ್ಕಾಗಿಯೇ ಕೆಲವರು ಒಂದುಗೂಡಿದ್ದರೆ ಅಂಥ ಒಂದುಗೂಡುವಿಕೆ ವಿಧಿವಿರುದ್ಧವೆನಿಸುತ್ತದೆ; ಮತ್ತು ಅದರಿಂದ ಆ ಇನ್ನೊಬ್ಬನಿಗೆ ಹಾನಿ ಆಗಿದ್ದರೆ ಅದು ಕ್ರಮಾರ್ಹವಾಗುತ್ತದೆ. (ಕೆ.ಎ.ಆರ್.)