ಪೂಜೆ - ಮಾನವ ತನಗೆ ಶ್ರೇಯಸ್ಸನ್ನುಂಟುಮಾಡುವವನ ಮನಸ್ಸನ್ನು ತುಷ್ಟಿಪಡಿಸುವುದಕ್ಕಾಗಿ ಮಾಡುವ ಕಾರ್ಯವಿಧಾನ. ಪೂಜ್ಯವಾದ ಒಂದು ವಸ್ತುವಿಗೆ ವಿದ್ಯುಕ್ತವಾಗಿ ನೀಡುವ ಗೌರವ. ಇದು ಎಲ್ಲ ಮತಧರ್ಮಗಳಲ್ಲಿಯೂ ಕಂಡುಬರುವ ಅಂಶ. ಒಂದೊಂದು ಮತದಲ್ಲಿ ಒಂದೊಂದು ರೀತಿಯ ಪೂಜಾವಿಧಿ ಇದೆ. ಪೂಜೆಯಲ್ಲಿ ಎರಡು ವಿಧ. ಮಾನವ, ದೈವ, ಗುರು ಆಚಾರ್ಯರು, ಮಹಾತ್ಮರು, ಅತಿಥಿಗಳು ಇವರ ಪೂಜೆ ಮಾನವ ಪೂಜೆ. ದೇವರ ವಿವಿಧ ರೂಪದಲ್ಲಿ ಮೂರ್ತಿಗಳನ್ನು ಉದ್ದೇಶಿಸಿ ಮಾಡುವ ಪೂಜೆ ದೈವಪೂಜೆ. ಆರಾಧನೆ, ಅರ್ಚನೆ (ನೋಡಿ) ಇವು ಪರ್ಯಾಯ ಪದಗಳು. ನಮಸ್ಯಾ, ಅಪಚಿತಿ, ಸಪರ್ಯಾ, ಅರ್ಚಾ, ಅರ್ಹಣಾ ಇವು ಪೂಜಾ ಶಬ್ದಕ್ಕೆ ಪರ್ಯಾಯ ಪದಗಳೆಂದು ಅಮರಕೋಶದಲ್ಲಿ ಹೇಳಿದೆ. ಶ್ರದ್ಧಾ ಭಕ್ತಿಗಳಿಂದ ಭಗವಂತನನ್ನು ಉಪಾಸಿಸುವುದೂ ಪೂಜೆಯೇ. ಭಗವಂತನ ದರ್ಶನ, ಸ್ತುತಿ, ಸ್ಮರಣೆ, ನಾಮ ಸಂಕೀರ್ತನೆ, ಗುಣವರ್ಣನ, ಕಥಾಶ್ರವಣ ಇವೆಲ್ಲ ಪೂಜೆಯ ಒಂದು ಅಂಗ. ದೇವರ ಪೂಜೆ ಒಂದು ಯಜ್ಞ. ಅವರವರ ಗುರುಗಳು ಹೇಳಿಕೊಟ್ಟ ಕ್ರಮದಲ್ಲಿ ಪೂಜೆಯನ್ನು ಮಾಡಬೇಕು. ಸಕಲ ಜಗತ್ಕಾರಣನೂ ಸರ್ವೇವರನೂ ಸರ್ವಕಲ್ಯಾಣ ಗುಣಕಾರಕನೂ ಸರ್ವಸಂಪತ್ಪ್ರದನೂ ಸಕಲ ಕಲ್ಯಾಣದಾಯಿಯೂ ದಿವ್ಯಮಂಗಳ ವಿಗ್ರಹ ಶಿಷ್ಟನೂ ಆದ ಭಗವಂತ ಆರಾಧನೆ, ಅರ್ಚನೆ, ಅಥವಾ ಪೂಜೆಗೆ ವಿಷಯಭೂತ. ಪತ್ರಪುಷ್ಪ, ಫಲ, ತೋಯ (ಜಲ) ಇವನ್ನು ಭಗವಂತನಿಗೆ ಭಕ್ತಿಯಿಂದ ಸಮರ್ಪಿಸಬೇಕೆಂದು ಭಗವದ್ಗೀತೆಯಲ್ಲಿ ಉಕ್ತವಾಗಿದೆ.

ನಿತ್ಯ ನೈಮಿತ್ತಿಕ ಮತ್ತು ಕಾಮ್ಯ ಎಂದು ಪೂಜೆಯಲ್ಲಿ ಮೂರು ವಿಧ. ದೈನಂದಿನ ಪೂಜೆ ನಿತ್ಯ. ಕಾರ್ಯಾರಂಭದಲ್ಲಿ ವಿಘ್ನ ಪರಿಹಾರ ರೂಪ ನಿಮಿತ್ತದಿಂದ ಮಾಡುವ ಗಣಪತಿ ಪೂಜೆ, ವಿದ್ಯಾರಂಭದಲ್ಲಿ ಹಯಗ್ರೀವ ಮತ್ತು ಸರಸ್ವತಿ ಪೂಜೆ, ಇದರಂತೆಯೇ ಇತರ ನಿಮಿತ್ತಗಳನ್ನುದ್ದೇಶಿಸಿ ಮಾಡುವ ಪೂಜೆ ನೈಮಿತ್ತಿಕ, ಅಭೀಷ್ಟವಾದ ಫಲವನ್ನು ಪಡೆಯಲು ಉದ್ದೇಶಿಸಿ ಮಾಡುವ ಪೂಜೆಗಳು ಕಾಮ್ಯ, ವ್ರತಗಳು ಕಾಮ್ಯ ಪೂಜಾವರ್ಗಕ್ಕೆ ಸೇರಿದೆ.

ಪುಷ್ಪದಿಂದ ಜಲದಲ್ಲಿ ಹವಿಸ್ಸಿನಿಂದ ಅಗ್ನಿಯಲ್ಲಿ ಧಾನ್ಯದಿಂದ ಹೃದಯದಲ್ಲಿ ಜಪದಿಂದ ಸೂರ್ಯಮಂಡಲದಲ್ಲಿ ಹರಿಯನ್ನು ನಿತ್ಯವೂ ಪೂಜಿಸಬಹುದು. ಆಯಾ ದೇವರುಗಳಿಗೆ ಸಂಬಂಧಿಸಿದ ಮಂತ್ರಗಳಿಂದ ಬ್ರಹ್ಮ ವಿಷ್ಣು ಮಹೇಶ್ವರಾದಿಗಳನ್ನು ಪೂಜಿಸಬೇಕು. ಅಂಗನ್ಯಾಸ ದಿಗ್ಭಂಧನಾ ನಂತರದಲ್ಲಿ ಪೂಜೆ ಮಾಡಲು ಪ್ರಾರಂಭಿಸಬೇಕು. ಸೂರ್ಯಾದಿ ನವಗ್ರಹಗಳಿಗೆ ಉಕ್ತವಾಗಿರುವ ಧಾನ್ಯಗಳಲ್ಲಿ ಆಯಾ ಗ್ರಹದ ಧಾನ್ಯದಲ್ಲಿ ಆಯಾ ಗ್ರಹವನ್ನು ಮಂತ್ರಪೂರ್ವಕ ಆವಾಹನೆ ಮಾಡಿ ನವಗ್ರಹಗಳನ್ನು ಪೂಜಿಸಬೇಕು. ವಿಘ್ನ ನಾಶಕ್ಕೆ ಗಣಪತಿ, ಪಾಪ ನಿವಾರಣೆಗೆ ಸೂರ್ಯ, ಶುದ್ಧಿಗೆ ಆಗ್ನಿ, ಮುಕ್ತಿಗೆ ವಿಷ್ಣು, ಜ್ಞಾನ ಪ್ರಾಪ್ತಿಗೆ ಶಿವ, ಬುದ್ಧಿವೃದ್ಧಿಗೆ ಪಾರ್ವತಿ ಇವರುಗಳನ್ನು ಪೂಜಿಸಬೇಕೆಂದು ಬ್ರಹ್ಮ ವೈವರ್ತ ಪುರಾಣದಲ್ಲಿ ಹೇಳಿದೆ. ಭಕ್ತರು ಭಗವಂತನನ್ನು ನಿಂತಿರುವಂತೆ, ಕುಳಿತಿರುವಂತೆ, ಮಲಗಿರುವಂತೆ ವಿವಿಧ ರೂಪದಲ್ಲಿ ಪೂಜಿಸುತ್ತಾರೆ. ಲಿಂಗ, ಪುಸ್ತಕ, ಸ್ಥಂಡಿಲ, ಪಾದುಕೆ, ಪ್ರತಿಮಾ, ಚಿತ್ರ, ಅಗ್ನಿ, ಖಡ್ಗ, ಜಲ, ಇವುಗಳಲ್ಲಿ ದೇವಿಯನ್ನು ಆವಾಹನೆ ಮಾಡಿ ಪೂಜಿಸಬಹುದು.

ಅಶುಚಿಯಾದವ ಪೂಜೆ ಮಾಡಬಾರದು. ತಂದೆ-ತಾಯಿ ಸತ್ತ ವರ್ಷದಲ್ಲಿ ಶಿವಪೂಜೆಯನ್ನು ಮಾಡಬಾರದು. ವಾರಣಾಸಿ, ದ್ವಾರಾವತಿ, ಗಂಗೆ, ಪ್ರಯಾಗ, ಪುಷ್ಕರ ಈ ಸ್ಥಳಗಳಲ್ಲಿ ಮಾಡುವ ಪೂಜೆ ಅತಿ ಶ್ರೇಷ್ಠವಾದುದು. ಪೂಜೆ ಮಾಡುವಾಗ ಉಪಯೋಗಿಸುವ ಆಸನದಿಂದಲೂ ವಿಶೇಷ ಫಲಗಳುಂಟಾಗುತ್ತವೆ. ಕಾಷ್ಠಾಸನವಾದರೆ ಪೂಜೆ ಮಾಡಿದುದು ವ್ಯರ್ಥವಾಗುತ್ತದೆ. ಪಾಷಾಣಾಸನದಿಂದ ರೋಗ ಸಂಭವ, ಭೂಮ್ಯಾಸನವಾದರೆ ಗತಿ ಇಲ್ಲದಿರುವಿಕೆ, ವಸ್ತ್ರಾಸನವಾದರೆ ದಾರಿದ್ರ್ಯ, ಕುಶಾಸನವಾದರೆ ಜ್ಞಾನವೃದ್ಧಿ, ಕಂಬಲಾಸನವಾದರೆ ಉತ್ತಮ ಸಿದ್ಧಿ, ಕೃಷ್ಣಾಜಿನಾಸನವಾದರೆ ಧನ ಮತ್ತು ಪುತ್ರಪ್ರಾಪ್ತಿ, ವ್ಯಾಘ್ರಾಸನವಾದರೆ ಮೋಕ್ಷ ಪ್ರಾಪ್ತಿ.

	ಮಾಸಭೇದದಿಂದಲೂ ಪೂಜೆಯಲ್ಲಿ ವೈವಿಧ್ಯವಿದೆ. ಕಾರ್ತಿಕ ಮಾಸದಲ್ಲಿ ಜಾತೀ ಪುಷ್ಪಾರ್ಚನೆ, ಅಖಂಡ ದೀಪ, ಯವಾನ್ನ ನಿವೇದನ; ಪುಷ್ಯಮಾಸದಲ್ಲಿ ನದೀಸ್ನಾನ ಪೂರ್ವಕ ಮಾಧವೀಪುಷ್ಪಾರ್ಚನೆ, ಪಾಯಸ ನಿವೇದನೆ; ಪಾಲ್ಗುಣ ಮಾಸದಲ್ಲಿ ವಕುಳ, ಚಂಪಕ ಪುಷ್ಪಾರ್ಚನೆ, ಗುಡಾನ್ನ ನಿವೇದನ; ಚೈತ್ರಮಾಸದಲ್ಲಿ ಕಮಲದಿಂದ ಪೂಜೆ, ದಧ್ಯನ್ಯ ನಿವೇದನ, ಹೀಗೆಯೇ ಉಳಿದ ತಿಂಗಳುಗಳಲ್ಲೂ ನಿರ್ದಿಷ್ಟವಾದ ಪುಷ್ಪಾರ್ಚನೆ ಮತ್ತು ನಿವೇದನದಿಂದ ವಿಶೇಷ ಫಲಗಳುಂಟಾಗುತ್ತವೆ.

ಎಲ್ಲ ದೇವರಿಗೂ ಎಲ್ಲ ವಿಧ ಪುಷ್ಪಗಳೂ ಕೂಡದು. ಅರಳಿದ ಪುಷ್ಪಗಳಿಂದಲೇ ಪೂಜೆ ಮಾಡಬೇಕು. ವಿಷ್ಣುವಿಗೆ ತುಲಸೀಪತ್ರ ಪೂಜೆ ವಿಶೇಷ. ಶಿವನಿಗೆ ಬಿಲ್ವಪತ್ರ ಪೂಜೆ ವಿಶೇಷ. ರಾತ್ರಿಯಲ್ಲಿ ತೆಗೆದಿಟ್ಟ ನೀರಿನಿಂದ ಪೂಜೆ ಮಾಡಬಾರದು.

ಗೃಹಪೂಜೆ, ಆಲಯ ಪೂಜೆ ಎಂದು ಪೂಜೆಯಲ್ಲಿ ಎರಡು ಬಗೆ. ವೈಯುಕ್ತಿಕವಾಗಿ ತಮ್ಮ ತಮ್ಮ ಮನೆಗಳಲ್ಲಿ ಕುಟುಂಬ ಶ್ರೇಯಸ್ಸಿಗಾಗಿ ಮಾಡುವ ಪೂಜೆ ಗೃಹ ಪೂಜೆ. ಸಾಮೂಹಿಕವಾಗಿ ಎಲ್ಲರೂ ಒಂದೆಡೆಯಲ್ಲಿ ಸೇರಿ ಭಗವಂತನ ಸೇವೆಯಲ್ಲಿ ಭಾಗಿಗಳಾಗಲು ಅನುಕೂಲಿಸುವಂತೆ ದೇವಾಲಯಗಳಲ್ಲಿ ಪ್ರತಿಷ್ಠೆ ಮಾಡಿಸಿರುವ ದೇವರವಿಗ್ರಹವನ್ನು ಪೂಜಿಸುವುದು ಆಲಯ ಪೂಜೆ. ದೇವಾಲಯ ಪೂಜೆಗೆ ನಿರ್ದಿಷ್ಟವಾದ ಒಂದು ವರ್ಗಕ್ಕೆ ಸೇರಿದವರೇ ಆಗಬೇಕು. ಇವರನ್ನು ಆಗಮಿಕರು ಎಂದು ಕರೆಯುತ್ತಾರೆ. ಇತರರು ಅವರಿಗೆ ಪೂಜೆಯಲ್ಲಿ ಸಹಕರಿಸಬಹುದು. ಆಗಮಿಕರನ್ನು ಬಿಟ್ಟು ಮತ್ತಾರೂ ಸ್ವತಃ ದೇವಾಲಯಗಳಲ್ಲಿ ಪೂಜೆ ಮಾಡಲು ಅರ್ಹರಲ್ಲ. ದೇವಾಲಯ ಪೂಜಾ ವಿಧಾನವನ್ನು ತಿಳಿಸುವ ಗ್ರಂಥಗಳಿಗೆ ಆಗಮ ಗ್ರಂಥಗಳೆಂದು ಹೆಸರು. ವೈಖಾನಸ, ಪಾಂಚರಾತ್ರ, ತಂತ್ರಸಾರ, ಶೈವ, ವೀರಶೈವ, ಜೈನ ಆಗಮ ಗ್ರಂಥಗಳು ಈಗ ಪ್ರಚಲಿತವಾಗಿವೆ. ವೈಖಾನಸ ಪಾಂಚರಾತ್ರ, ಆಗಮೋಕ್ತ ವಿಧಾನದಂತೆ ವಿಷ್ಣು ದೇವಾಲಯಗಳಲ್ಲೂ ಶೈವಾಗಮದಂತೆ ಶಿವ ದೇವಾಲಯಗಳಲ್ಲೂ ಜೈನಾಗಮನದಂತೆ ಜಿನಮಂದಿರಗಳಲ್ಲೂ ಪೂಜೆ ನಡೆಸಬೇಕು.

ಸ್ನಾನಾನಂತರ ಶುಚಿರ್ಭೂತನಾಗಿ ಪೂರ್ವಾಭಿಮುಖ ಅಥವಾ ಉತ್ತರಾಭಿಮುಖವಾಗಿ ಕುಳಿತುಕೊಂಡು ಪವಿತ್ರವನ್ನು ಧರಿಸಿ ಕಾಮ, ರಾಗ, ಭಯ, ಕ್ರೋಧ, ಮಾತ್ಸರ್ಯ, ತ್ವರೆಗಳಿಲ್ಲದವನಾಗಿ ಒಳ್ಳೆಯ ಮನಸ್ಸಿನಿಂದ ದೇವರನ್ನು ಪೂಜಿಸಬೇಕು. ಪೂಜೆಯ ಸ್ಥಾನದಲ್ಲಿ ದುರ್ಗಂಧವಾಗಲೀ, ಅನಿಷ್ಟ ಶಬ್ದ ಶ್ರವಣವಾಗಲೀ ಇರಬಾರದು. ಪೂಜೆ ಮಾಡುವವನ ದಕ್ಷಿಣ ಪಾಶ್ರ್ವದಲ್ಲಿ ನೈವೇದ್ಯ ದೂಪಾದಿ ಪೂಜಾ ಸಲಕರಣೆಗಳನ್ನು ವಾಮ ಪಾಶ್ರ್ವದಲ್ಲಿ ಜಲಪೂರ್ಣವಾದ ಅಘ್ರ್ಯಪಾದ್ಯಾಚಮನೀಯ ಪಾತ್ರಗಳನ್ನು ತನ್ನ ಮುಂದುಗಡೆ ಇರಿಸಿಕೊಳ್ಳಬೇಕು. ಅನಂತರ ಆಗಮದಲ್ಲಿ ತಿಳಿಸಿರುವಂತೆ ದಶದಿಗ್ಬಂಧನ, ಭೂತಶುದ್ಧಿ ಇತ್ಯಾದಿ ಮಂತ್ರಗಳನ್ನು ಉಚ್ಚರಿಸಿ, ಪೂಜಾರಂಭಕ್ಕೆ ಮೊದಲು ಪ್ರಾಣಾಯಾಮ ಮಾಡಿ, ಬಳಿಕ ದೇವರ ಪೂಜೆಯನ್ನು ಮಾಡುತ್ತೇನೆಂದು ಸಂಕಲ್ಪ ಮಾಡಿ ಪೂಜೆಯನ್ನು ಆರಂಭಿಸಬೇಕು.

ದೇವರ ಪೂಜೆಯಲ್ಲಿ ಉಪಚಾರ ಬಹು ಮುಖ್ಯವಾದುದು. ಶಕ್ತಿ ಪೂಜೆಯಲ್ಲಿ ಆಸನ ಪ್ರಧಾನದಿಂದ ಪ್ರಾರಂಭಿಸಿ ಕೊನೆಯಲ್ಲಿ ನಮಸ್ಕಾರ ಮಾಡುವವರೆಗೆ 64 ಉಪಚಾರಗಳನ್ನು ಸಮರ್ಪಿಸಬೇಕು. ಕೆಲವು ಪೂಜೆಗಳಲ್ಲಿ 32 ಉಪಚಾರಗಳೂ ಮತ್ತೆ ಕೆಲವಲ್ಲಿ 18, 16, 10, 5 ಹೀಗೆ ಉಪಚಾರ ಸಂಖ್ಯೆಯಲ್ಲಿ ವೈವಿಧ್ಯ ಉಂಟು. ಇದರಲ್ಲಿ 'ಆಸನಂ ಸ್ವಾಗತಂ ಪಾದ್ಯಮಘ್ರ್ಯಮಾಚಮನೀಯಕಂ I. ಮಧುಪರ್ಕಾಚಮನೀಸ್ನಾನಂ ವಸನಾಭರಣಾನಿಚ II ಗಂಧಪುಷ್ಪಧೂಪದೀಪ ನೈವೇದ್ಯಂ ವಂದನಂ ತಧಾ II ಎಂಬ ಹದಿನಾರು ಉಪಚಾರ ಸಮರ್ಪಣೆ ಸರ್ವಸಾಮಾನ್ಯವಾದುದು.

ಸಾಮಾನ್ಯವಾದ ಪೂಜಾವಿಧಾನದಲ್ಲಿ ಮೊದಲು ದೇವತಾ ನಾಮರೂಪದಿಂದ 'ಇಹಾಗಚ್ಛ ಎಂದು ಆಹ್ವಾನ ಮಾಡಿ ಭಗವಂತನಿಗೆ ಆಸನವನ್ನು ಸಮರ್ಪಿಸಿ ಸ್ವಾಗತವನ್ನು ಹೇಳಬೇಕು. ಬಳಿಕ ಅಘ್ರ್ಯಪಾದ್ಯ ಆಚಮನೀಯವನ್ನು ಸಮರ್ಪಿಸಬೇಕು. ಅನಂತರ ಸುಗಂಧಜಲ, ಹಾಲು, ಮೊಸರು, ಜೇನುತುಪ್ಪ, ತುಪ್ಪ, ಹರಿದ್ರಾಚೂರ್ಣಗಳಿಂದ ಸ್ನಾನ ಮಾಡಿಸಿ ಕೊನೆಯಲ್ಲಿ ಶುದ್ಧೋದಕದಿಂದ ಅಭಿಷೇಕ ಮಾಡಿ ನೀರನ್ನು ಒರೆಸಿ ವಸ್ತ್ರ ಆಭರಣ ಯಜ್ಞೋಪವೀತಗಳನ್ನು ಧರಿಸಿ ಗಂಧ ಪುಷ್ಪ ಧೂಪ ದೀಪ ನೈವೇದ್ಯ ತಾಂಬೂಲಗಳನ್ನು ಮೂಲ ಮಂತ್ರೋಚ್ಛಾರಣಪೂರ್ವಕ ಸಮರ್ಪಿಸಬೇಕು. ಸ್ನಾನಾನಂತರ, ವಸ್ತ್ರ ಸಮರ್ಪಣಾನಂತರ ನೈವೇದ್ಯ ಮಾಡಿದ ಮೇಲೆ ಅಚಮನವನ್ನು ಸಮರ್ಪಿಸಬೇಕು. ಅನಂತರ ಕರ್ಪೂರಾರತಿ ಬೆಳಗಬೇಕು. ದೇವಾಲಯಗಳಲ್ಲಿ ನಿವೇದನ ಮತ್ತು ಕರ್ಪೂರಾರತಿ ವೇಳೆಗಳಲ್ಲಿ ಘಂಟಾನಾದವನ್ನು ಅವಶ್ಯ ಮಾಡಬೇಕು. ಕೊನೆಯಲ್ಲಿ ಪ್ರದಕ್ಷಣೆ ನಮಸ್ಕಾರಗಳನ್ನು ಮಾಡಿ ದೇವರಿಗೆ ಸ್ನಾನ ಮಾಡಿಸುವಾಗ ಪುರುಷಸೂಕ್ತ ಪಾರಾಯಣ ಮಾಡುವುದು ಧೂಪದೀಪ ಸಮರ್ಪಣಾನಂತರ ಮಂತ್ರಪುಷ್ಪವನ್ನು ಸಮರ್ಪಿಸುವುದೂ ಬಳಿಕ ಅಷ್ಟೋತ್ತರ ಅಥವಾ ಸಹಸ್ರನಾಮಾವಳಿಗಳಿಂದ ಅರ್ಚನೆ ಮಾಡುವುದೂ ರೂಢಿಯಲ್ಲಿವೆ. ದೇವತಾ ಭೇದದಿಂದ ಪುಷ್ಪಾದಿ ಪೂಜೋಪಕರಣಗಳು ಬದಲಾಗುತ್ತವೆ. ವಿಶೇಷ ಪೂಜೆಗಳಲ್ಲಿ ಶಂಖದಲ್ಲಿ ಹಾಲನ್ನು ಬಿಟ್ಟುಕೊಂಡು ಮಂತ್ರೋಚ್ಚಾರಪೂರ್ವಕ ಆಘ್ರ್ಯವನ್ನು ಬಿಡಬೇಕು. ಪೂಜೆಯು ಮುಗಿದ ಬಳಿಕ ದೇವರ ಅಭಿಷೇಕದ ತೀರ್ಥವನ್ನು ಸ್ವೀಕರಿಸಿ ಅಪಚಾರ ಕ್ಷಮಾಪಣೆಯನ್ನು ಬಿಡಬೇಕು-ಇದು ವೈದಿಕ ಸಂಪ್ರದಾಯದ ಪೂಜಾ ವಿಧಾನ. (ಎಸ್.ಎನ್.ಕೆ.)

ಇನ್ನು ಜನಪದರ ಪೂಜಾಕ್ರಮವನ್ನು ನೋಡಿದಾಗ ಪೂಜೆ ಧಾರ್ಮಿಕತೆಯ ಕ್ರಿಯಾಂಗ ಎನಿಸುತ್ತದೆ. ಅದು ಗೌರವ ಭಯ ಮತ್ತು ಅಪೇಕ್ಷಾ ಮೂಲವಾದುದು. ಅತಿಮಾನುಷ ಶಕ್ತಿಯನ್ನು ಆಶ್ರಯಿಸಿರುವಂಥದು ಇತ್ಯಾತ್ಮಕ ಮತ್ತು ನೇತ್ಯಾತ್ಮಕ ರೂಪಗಳೆರಡರಲ್ಲಿಯೂ ಕಾಣಿಸಿಕೊಂಡಿರುವಂಥದು. ಭಾವನಾತ್ಮಕವಾದ ನಿಷಿದ್ಧತೆಗಳು ವಸ್ತು ರೂಪದ ಆರಾಧನಾ ಸಾಮಗ್ರಿಗಳು ಮತ್ತು ಆಚರಣಾ ರೀತಿಯ ಹಬ್ಬಹರಿದಿನಗಳೇ ಮೊದಲಾದವು ಪೂಜಾ ವಿಧಾನದಲ್ಲಿ ಸೇರಿವೆ. ಪೂಜೆ ಆದಿಮಾನವರಿಂದ ಹಿಡಿದು ಇಂದಿನ ವಿವಿಧ ಜನಪದಗಳವರೆಗೂ ವ್ಯಾಪಕವಾಗಿ ಹರಡಿನಿಂತಿದೆ. ನಿರ್ದಿಷ್ಟ ರೂಪದ ಧರ್ಮವೊಂದು ರೂಪುಗೊಳ್ಳುವುದಕ್ಕೆ ಮೊದಲು ಪೂಜೆ ಇತ್ತು. ಈಗಿನ ಉನ್ನತ ಧರ್ಮಗಳ ಆಚರಣೆಯಲ್ಲೂ ಬಹು ವಿಧವಾದ ಪೂಜೆಗಳು ರೂಢಿಯಲ್ಲಿವೆ. ಆದಿವಾಸಿ, ಅನಾಗರಿಕ ಮತ್ತು ಹಳ್ಳಿಗಾಡಿನ ಜನಪದರಲ್ಲಿಯ ಪೂಜೆಗಳು ಲೌಕಿಕಾಪೇಕ್ಷೆಯಿಂದ ಪ್ರೇರಿತವಾದವು ಮತ್ತು ಹೆಚ್ಚು ಸರಳವಾದವು. ಇವು ಕೆಲವೊಮ್ಮೆ ಕ್ರೂರವೂ ಆಗಿರುತ್ತವೆ. ಉನ್ನತ ಧರ್ಮದ ಪೂಜೆಗಳು ಹೆಚ್ಚು ವ್ಯವಸ್ಥಿತವಾದವು ಮತ್ತು ನಿರ್ದಿಷ್ಟ ನೀತಿನಿಯಮಗಳಿಗೆ ಒಳಪಟ್ಟವು. ಇವು ಅಲೌಕಿಕಾಪೇಕ್ಷೆಗೆ ಹೆಚ್ಚು ಒತ್ತು ಕೊಡುವಂಥವು.

ಇಲ್ಲಿ ಪೂಜೆಯ ಮೂಲ ಯಾವುದೂ ಎಂಬುದನ್ನು ಹುಡುಕುವುದು ಕಷ್ಟ. ಆದಿವಾಸಿ ಮತ್ತು ರೈತಾಪಿ ಜನಾಂಗದಲ್ಲಿ ಈಗ ಕಾಣುತ್ತಿರುವ ಪೂಜಾ ವಿಧಾನದ ಸ್ವರೂಪ ಹೆಚ್ಚು ಕಡಿಮೆ ಪುರಾತನ ಪೂಜಾಕ್ರಮವನ್ನು ಉಳಿಸಿಕೊಂಡು ಬಂದಿದೆ ಎನ್ನಬಹುದು. ಇವರಲ್ಲಿ ಕಾಣಬರುವ ಮಂತ್ರವಾದಿತ್ವ ಮತ್ತು ಅದರ ಕ್ರಿಯೆಗಳು ಪುರಾತನ ಪೂಜೆಯ ನಿರ್ದಿಷ್ಟ ರೂಪಕ್ಕೆ ನಿದರ್ಶನವಾಗಿವೆ. ಈ ಮಂತ್ರವಾದಿಗಳು ಮತ್ತು ಅವರ ಪೂಜಾ ವಿಧಾನವೇ ಇಂದಿನ ಪುರೋಹಿತಶಾಹೀ ಮತ್ತು ಅವರ ಆಚರಣೆಗಳಿಗೆ ಮೂಲವೆನ್ನಲು ಅಡ್ಡಿ ಇಲ್ಲ. ಈಗಲೂ ರೈತಾಪಿ ಜನಪದದ ಮಧ್ಯೆ ವಾಸ ಮಾಡುವ ಪುರೋಹಿತರು ಹೆಚ್ಚು ಪ್ರಮಾಣದಲ್ಲೇ ಮಂತ್ರವಾದಿಗಳೂ ಮರಿ ವೈದ್ಯರೂ ಆಗಿರುತ್ತಾರೆ. ಆದಿವಾಸಿ ಮತ್ತು ರೈತಾಪಿ ಪನಪದರಲ್ಲಿ ನಿರ್ದಿಷ್ಟ ರೂಪದ ಧರ್ಮವೊಂದು ಇದ್ದಂತೆ ಕಾಣುವುದಿಲ್ಲ. ದಿನನಿತ್ಯದ ಕಷ್ಟಕಾರ್ಪಣ್ಯಗಳಲ್ಲಿ ಅವರು ನಡೆಸುವ ಪೂಜೆಗಳು ಬಹಳ ಸರಳವಿದ್ದು, ಬೆಚ್ಚು ನೀರು ಹಾಕುವುದು, ಇದ್ದಲಿಕೆ ಬರೆಯುವಂಥ ಅವ್ಯವಸ್ಥಿತ ಕ್ರಿಯೆಗಳಲ್ಲಿ ಅವಸಾನಗೊಳ್ಳುತ್ತವೆ.

ಲೌಕಿಕಾರ್ಥ ಮೂಲವಾದ ಜನಪದರ ಈ ಪೂಜೆಗಳು ಅವರ ದೈನಂದಿನ ಹುಟ್ಟು, ಸಾವು, ಮದುವೆ, ಹೆರಿಗೆ, ಋತುಮತಿತ್ವ, ಆಹಾರಾನ್ವೇಷಣೆಗಳಂಥ ಸಂದರ್ಭಗಳೊಂದಿಗೆ ಹೆಣೆದುಕೊಂಡಿವೆ. ಇವು ಗುಡಿಸಲು, ಜೋಪಡಿ, ಮಂಟಪ, ಗುಡ್ಡದ ಸಂದು ಮತ್ತು ಮರಗಳ ಕೆಳಗೆ ವಾಸ್ತವ್ಯ ಹೂಡಿರುವ ದೈವ ಅಥವಾ ದೆವ್ವಗಳನ್ನು ಕುರಿತಾದುವು. ಈ ದೈವ ಅಥವಾ ದೆವ್ವಗಳನ್ನು ಒಲಿಸುವ ಪೂಜಾ ವಿಧಾನಗಳು ಹಲವು. ಪ್ರಾರ್ಥನೆ, ಉಪಾಸನೆ, ಪ್ರತಿಜ್ಞೆ, ತಪಸ್ಸು, ತೀರ್ಥಯಾತ್ರೆ, ತ್ಯಾಗ, ಬಲಿ, ಅನ್ನಸಂತರ್ಪಣೆ, ಉತ್ಸವ, ಹಬ್ಬ, ನೃತ್ಯ, ಪರಿಶುದ್ಧತೆ, ಲೌಕಿಕ ನಿರಾಸಕ್ತಿ, ಮೋಕ್ಷ ಸಾಧನೆ, ಅಂತರ್ಮುಖತೆ, ಸ್ಥಿತಪ್ರಜ್ಞತ್ವ, ಸರಳತೆಯ ಆಚರಣೆ, ಮಂತ್ರವಾದಿತ್ವ, ಪೂಜಾರತನ, ಭಕ್ತಿ, ಪಶ್ಚಾತ್ತಾಪ, ನಿಷಿದ್ಧತೆ, ಕುಲದೇವತಾರಾಧನೆ-ಇವೇ ಹಲವು.

ಆದಿವಾಸಿ ಮತ್ತು ರೈತಾಪಿ ಜನಪದರ ಪೂಜೆಗಳೂ ಶಕ್ತಿದೇವತೆಯನ್ನು ವಶಪಡಿಸಿಕೊಳ್ಳುವಲ್ಲಿ ನಿರತವಾದುವು. ಈ ಪೂಜೆಗಳು ಬಲಿ, ಉಪಾಸನೆಗಳಂಥ ಕ್ರೂರವಿಧಿಗಳಾಗಿರುತ್ತವೆ. ಮಂತ್ರವಾದಿತ್ವಕ್ಕೆ ಮೂಲ ನೆಲೆ ಎನ್ನಲಾದ ಸೈಬೀರಿಯಾದಲ್ಲಿಯ ಶ್ಯಾಮನ್ನಗಳು ಶಕ್ತಿಯನ್ನು ವಶಪಡಿಸಿಕೊಳ್ಳುವಲ್ಲಿ ಬಳಸುವ ಪೂಜಾ ವಿಧಾನಗಳು ಕ್ರೂರವೂ ಭಾವುಕವೂ ಆಗಿವೆ. ಈ ಪೂಜೆಗಳಲ್ಲಿ ಮಂತ್ರಪಠಣ, ವಾದ್ಯ, ನೃತ್ಯ, ಮತ್ತು ಕ್ರೂರ ನೃತ್ಯಗಳೆಲ್ಲ ಸೇರಿವೆ. ಶಕ್ತಿಯನ್ನು ಒಲಿಸಿಕೊಳ್ಳಲು ಅಮೆರಿಕನ್ ಇಂಡಿಯನ್ ಮತ್ತು ಇತರ ಆದಿವಾಸಿಗಳಲ್ಲಿ ಬೆರಳು ಕತ್ತರಿಸಿಕೊಳ್ಳುವುದರಿಂದ ಹಿಡಿದು, ಗಂಟಲು ಕೊಯ್ದುಕೊಳ್ಳುವುದು, ತೊಡೆ ಸೀಳಿಕೊಳ್ಳುವುದು, ಕಣ್ಣು ಕಿತ್ತುಕೊಡುವುದೂ ಇವೇ ಮೊದಲಾದ ಬಲಿ ಮೂಲದ ಪೂಜೆಗಳು ಕಂಡುಬರುತ್ತವೆ. ಇಂಥ ಅನೇಕ ಪೂಜಾ ವಿಧಾನಗಳನ್ನು ಅನಾಗರಿಕ ಮತ್ತು ರೈತಾಪಿ ಜನಪದರಲ್ಲಿ ಅನಾಗರಿಕ ಜನಾಂಗದ ಆಧ್ಯಯನ ನಡೆಸಿದ ಜಾನಪದ ವಿದ್ವಾಂಸರು ಗುರುತಿಸಿದ್ದಾರೆ. ಕರ್ನಾಟಕದ ಬುಡಕಟ್ಟು ಮತ್ತು ಹಿಂದುಳಿದ ಜನಾಂಗಗಳಲ್ಲಿಯ ಪೂಜಾ ವಿಧಾನಗಳು ಜನಪದ ಪೂಜೆಗಳ ಸರಳತೆಗೆ ಉದಾಹರಣೆಗಳಾಗಿವೆ. ಇವರು ತಮಗೆ ಕಷ್ಟ ಒದಗಿದಾಗ ಅಥವಾ ಮದುವೆಯಂಥ ಶುಭ ಸಂದರ್ಭಗಳಲ್ಲಿ ಮನೆಯ ಸೂರಿನಡಿ ಮಣ್ಣು ಅಥವಾ ಸಗಣಿಯಿಂದ ಕಟ್ಟೆ ಕಟ್ಟಿ ಅದರ ಮೇಲೆ ಮಣ್ಣಿನ ಹಣತೆಯನ್ನು ಇಟ್ಟು ಪೂಜಿಸಿ ಅದರ ಎದುರು ನಿಂತು ತಮ್ಮ ಕಷ್ಟಗಳನ್ನು ಹೇಳಿಕೊಂಡು ಅವನ್ನು ನಿವಾರಿಸುವಂತೆ ಕೇಳಿಕೊಳ್ಳುತ್ತಾರೆ. ಹೀಗೆ ಅವರು ಹೇಳುವ ಮಾತುಗಳು ಯಾವ ರೀತಿಯ ಮಾಂತ್ರಿಕ ನುಡಿಗಳೂ ಆಗಿರುವುದಿಲ್ಲ. ಇದಲ್ಲದೆ ಬೆಳಗ್ಗೆ ಎದ್ದು ಮುಖ ತೊಳೆದಾಗ ಬರಿದಾದ ಚೊಂಬನ್ನು ಎರಡೂ ಕೈಯ್ಯಲ್ಲೂ ಹಿಡಿದು ಸೂರ್ಯದೇವನ ಕಡೆಗೆ ಮುಖವೆತ್ತಿ ಸೂರ್ಯದೇವ, ಭೂಮಿ, ಅಗ್ನಿದೇವ ಮಳೆರಾಯನನ್ನು ನೆನೆಯುವ, ರಾತ್ರಿ ಮಲಗುವಾಗ ತನ್ನ ಇಷ್ಟದೇವತೆಯನ್ನು ನೆನೆಯುವ, ಕೆಲಸ ಆರಂಭಿಸುವಾಗ ಮರ ಮುಟ್ಟುಗಳಿಗೆ ನಮಸ್ಕಾರ ಮಾಡಿ ಎದೆಗೆ ಮತ್ತು ಹಣೆಗೆ ಒತ್ತಿಕೊಳ್ಳುವ ಸರಳ ಕ್ರಿಯೆಯಲ್ಲಿ ಜನಪದರ ಪೂಜೆ ಮುಗಿಯುವುದನ್ನು ಕಾಣಬಹುದು. ಹಬ್ಬಹರಿದಿನಗಳು ಜಾತ್ರೆ-ಪರಿಸರಗಳಂಥ ಆಚರಣೆಗಳ ದೀರ್ಘ ಪೂಜೆಗಳೂ ಆಗಬಹುದು. ಹೀಗಿದ್ದರೂ ಜನಪದರಲ್ಲಿಯ ಪೂಜೆ ಮತ್ತು ಅದರ ಆಚರಣೆ ನಂಬಿಕೆಗಳಿಂದ ಹೆಚ್ಚು ಪ್ರೇರಿತವಾದವೇ ಹೊರತು ಪುರಾಣದಿಂದ ಪ್ರೇರಿತವಾದುವಲ್ಲ.

ಜನಪದರ ಪೂಜೆಗಳ ಮೂಲ ಸ್ವರೂಪವನ್ನು ಗಮನಿಸಿದರೆ ಪೂಜೆಯನ್ನು ನಡೆಸುವ ಪ್ರತ್ಯೇಕ ವರ್ಗವೊಂದು ಇದ್ದಂತೆ ಕಾಣುವುದಿಲ್ಲ. ಮನೆಯ ಯಜಮಾನ ಅಥವಾ ಹೆಂಗಸರನ್ನುಳಿದು ಇತರರೆಲ್ಲರೂ ಸಂದರ್ಭಕ್ಕನುಗುಣವಾಗಿ ಪೂಜಾರಿಗಳಾಗಬಹುದು. ಆದಿವಾಸಿ ಜನಾಂಗದಲ್ಲಿ ಹೆಂಗಸರ ಮುಟ್ಟು ಬಹಳ ಕೆಟ್ಟದ್ದೆಂಬ ನಂಬಿಕೆ ಬೆಳೆದು ಬಂದಿರುವುದರಿಂದ ಹೆಂಗಸರು ಪೂಜಾರರಾಗುವುದು ತೀರಾ ವಿರಳ. ಸೈಬೇರಿಯನ್ ಆದಿವಾಸಿಗಳಲ್ಲಿ ಹೆಂಗಸರೂ ಮಂತ್ರವಾದಿಗಳಾಗಿ ಕೆಲಸ ನಿರ್ವಹಿಸುವುದನ್ನು ಕಾಣಬಹುದು. ಆದರೆ, ಹೆಂಗಸರು ದೇವರಿಗೆ ಸೇವಕಿಯರಾಗಿ ಅನೇಕ ಕಾರ್ಯಗಳಲ್ಲಿ ಭಾಗವಹಿಸುವುದು ಬಹಳ ಕಾಲದಿಂದಲೂ ನಡೆದು ಬಂದಿರುವ ಪದ್ಧತಿಯಾಗಿದೆ. (ಎಚ್.ಎಸ್.ಆರ್.ಜಿ.)

ಕ್ರೈಸ್ತರಲ್ಲಿ ಈ ಆರಾಧನಾ ಕ್ರಮ, ಪೂಜಾ ಪದ್ಧತಿ ವಿಶಿಷ್ಟವಾದದ್ದು. ಕ್ರೈಸ್ತ ದೇವಾಲಯಗಳಲ್ಲಿ ಪೂಜಿಸತಕ್ಕಂಥ ಮೂರ್ತಿಗಳಿಲ್ಲ. ಆದರೆ, ಕ್ರೈಸ್ತರು ಪ್ರತಿ ಭಾನುವಾರ ಚರ್ಚಿಗೆ ಬಂದು ಸಭೆಯಾಗಿ ಕೂಡಿಕೊಂಡು ದೇವರನ್ನು ಏಸುಕ್ರಿಸ್ತನ ಮೂಲಕ ಸಾಮೂಹಿಕವಾಗಿ ಪೂಜಿಸುತ್ತಾರೆ. ಈ ಪೂಜೆಯುಲ್ಲಿ ಕ್ರಿಸ್ತನಿಗೂ ಆತ ಈ ಲೋಕದಲ್ಲಿ ಮಾಡಿದ ರಕ್ಷಣಾಕಾರ್ಯಕ್ಕೂ ಪ್ರಮುಖಸ್ಥಾನವಿದೆ. ಆರಾಧನೆಗೆ ತೊಡಗಿದಾಗಿ ಇಡೀ ಸಭೆ ಒಂದೇ ದೇಹ ಒಂದೇ ಆತ್ಮ ಎಂಬಂತೆ ಕಾಣುತ್ತದೆ. ಮೊದಲು ಆರಾಧನೆಗೆ ತೊಡಗಿದ ಎಲ್ಲರೂ ದೇವರು ಕ್ರಿಸ್ತನಲ್ಲಿ ತೋರಿಸಿದ ಪ್ರೀತಿಗಾಗಿ ತಮ್ಮ ನಮನಗಳನ್ನು ಅರ್ಪಿಸಿ ಅನಂತರ ತಮ್ಮ ತಪ್ಪುಗಳನ್ನು ಒಪ್ಪಿಸುತ್ತಾರೆ. ಈ ಆರಾಧನೆಗಳಿಗಿಂತಲೂ ಪ್ರಾಮುಖ್ಯವಾದದ್ದು ಪ್ರಭುವಿನ ಭೋಜನ (ನೋಡಿ). ಈ ಎಲ್ಲ ಕ್ರಮಗಳಲ್ಲೂ ಎದ್ದು ಕಾಣುವ ಸಾಮಾನ್ಯ ಅಂಶವೆಂದರೆ ದೈವಸ್ತುತಿ, ಪಾಪದ ಆರಿಕೆ, ದೇವರ ಕ್ಷಮಾಪಣೆಯ ಪ್ರಕಟಣೆ, ವೇದಪಾರಾಯಣ, ಉಪನ್ಯಾಸ, ಕ್ರಿಸ್ತನಲ್ಲಿ ತಮ್ಮ ವಿಶ್ವಾಸವನ್ನು ಪಠಿಸುವುದು. ವಿವಿಧ ವರಗಳಿಗಾಗಿ ದೇವರನ್ನು ಬೇಡುವುದು. ಕಾಣಿಕೆಯನ್ನು ಅರ್ಪಿಸುವುದು ಗೀತಗಳನ್ನು ಹಾಡುವುದು ಮತ್ತು ಆಶೀರ್ವಚನ. ಕೆಲವರು ಗೀತೆಗಳನ್ನು ಹಾಡಿ ದೈವಸ್ತುತಿ ಮಾಡಿ ದೇವರ ಕೃಪೆಗೆ ಪಾತ್ರರಾಗುವ ಕ್ರಮವೂ ಉಂಟು. (ಡಿ.ಪಿ.ಎಸ್.;ಎಚ್.ಎಸ್.)