ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪುರುಷೋತ್ತಮದೇವ

ಪುರುಷೋತ್ತಮದೇವ - ಒರಿಸ್ಸದ ಒಬ್ಬ ರಾಜ. ವಂಶಪರಂಪರೆಗನುಸಾರವಾಗಿ ಜಗನ್ನಾಥಸ್ವಾಮಿ ಮಂದಿರದಲ್ಲಿ ಕಸ ಗುಡಿಸುವ ಕೆಲಸವನ್ನೂ ಮಾಡುತ್ತಿದ್ದ. ಕಂಚಿಯ ರಾಜ ಈತನಿಗೆ ತನ್ನ ಮಗಳನ್ನು ಕೊಡಲು ಒಪ್ಪದಿರಲು ಅವಮಾನದಿಂದ ಸಿಟ್ಟುಗೊಂಡ ಈತ ಅವನ ಮೇಲೆ ದಂಡೆತ್ತಿ ಹೋಗಿ ಅವನನ್ನು ಸೋಲಿಸಿ ಅವನ ಮಗಳನ್ನು ವಿವಾಹವಾದ.

2. ಪುರುಷೋತ್ತಮದೇವ ಬಂಗಾಳದ ಒಬ್ಬ ಮಹಾನ್ ಪ್ರಭಾವಶಾಲಿ ವೈಯಾಕರಣ. ಈತನ ಕಾಲ 12 ರಿಂದ 13ನೆಯ ಶತಮಾನದ ನಡುವಿನದೆಂದು ಅಂದಾಜು ಮಾಡಲಾಗಿದೆ. ದೇವ ಎಂಬುದು ಇವನ ಬಿರುದು. ಬೌದ್ಧ ಮತಾವಲಂಬಿ. ಬೌದ್ಧ ಮತ್ತು ವೈಧಿಕ ಪಂಥದವರ ನಡುವಣ ವೈಷಮ್ಯ ತೀರಾ ಹಿಂದಿನದು. ಈ ವಾತಾವರಣದ ಪ್ರಭಾವದಿಂದಾಗಿ ಈತ ಅಷ್ಟಾಧ್ಯಾಯಿಯ ವೈದಿಕ ಸೂತ್ರಗಳನ್ನು ಬಿಟ್ಟು ಉಳಿದ ಸೂತ್ರಗಳಿಗೆ ಭಾಷಾ ವೃತ್ತಿ ಎಂಬ ಹೆಸರಿನ ಭಾಷ್ಯವನ್ನು ಬರೆದ. ಇದಕ್ಕೆ ಪ್ರೇರಣೆ ಕೊಟ್ಟವನು ಇವನಿಗೆ ಆಶ್ರಯವಿತ್ತ ರಾಜ ಲಕ್ಷ್ಮಣಸೇನ.

ಈ ಭಾಷ್ಯಾ ವೃತ್ತಿಗೆ ವಿಶೇಷ ಮಹತ್ವವಿದೆ. ಆ ಕಾಲದಲ್ಲಿ ಉಪಲಬ್ಧವಿದ್ದ ಪ್ರಮಾಣಗ್ರಂಥಗಳ ಉಲ್ಲೇಖ ಇದರಲ್ಲಿದೆ. ಈಗ ಆ ಗ್ರಂಥಗಳು ಲುಪ್ತವಾಗಿವೆ. ಅನಂತರದ ವೈಯ್ಯಾಕರಣರು ಭಾಷ್ಯವೃತ್ತಿಯನ್ನು ಪ್ರಮಾಣಗ್ರಂಥವೆಂದು ಒಪ್ಪಿಕೊಂಡಿದ್ದಾರೆ. ಬಂಗಾಲದ ನಿವಾಸಿಯಾಗಿದ್ದ ಸೃಷ್ಟಿಧರ ಭಾಷ್ಯವೃತ್ತಿಯ ಮೇಲೆ ಟೀಕೆ ಬರೆದಿದ್ದಾನೆ. ಟೀಕಾಗ್ರಂಥದ ಹೆಸರು ಭಾಷ್ಯಾವೃತ್ತ್ಯರ್ಥವೃತ್ತಿ ಎಂದು. ಇದರಲ್ಲಿ 23 ಮಂದಿ ವೈಯಾಕರಣರನ್ನು ಉದ್ಧರಿಸಲಾಗಿದೆ. ಬಂಗಾಳ ಬಿಹಾರದ ವೈಯ್ಯಾಕರಣರು ದೇವನನ್ನು ಗೌರವಾದರಗಳಿಂದ ಉದ್ಧರಿಸಿದ್ದಾರೆ. ಅನೇಕ ಇತರ ವೈಯಾಕರಣರು ಕೋಶ ಟೀಕಾಕಾರರು ದೇವನ ಪ್ರಾಮಾಣಿಕತೆಯನ್ನು ಹೊಗಳಿದ್ದಾರೆ. ಖ್ಯಾತ ವೈಯಾಕರಣನಾಗಿದ್ದ ಶರಣದೇವ 1229ರಲ್ಲಿ ತನ್ನ ದುರ್ಘಟವೃತ್ತಿಯಲ್ಲಿ, ಪುರುಷೋತ್ತಮ ದೇವನ ಗ್ರಂಥಗಳನ್ನು ಪದೇಪದೇ ಉಲ್ಲೇಖಿಸಿದ್ದಾನೆ. ಅಮರ ಟೀಕಾ ಸರ್ವಸ್ವಕಾರ ಸರ್ವಾನಂದ (1215) ಕೂಡ ದೇವನ ಗ್ರಂಥಗಳನ್ನು ಪ್ರಮಾಣಗ್ರಂಥಗಳೆಂದು ಹೇಳಿದ್ದಾನೆ.

ದೇವನ ಹೆಸರಿನಲ್ಲಿ ಉಪಲಬ್ಧವಿರುವ ಕೃತಿಗಳು ಹೀಗಿವೆ : 1. ಭಾಷ್ಯಾವೃತ್ತಿ 2. ಮಹಾಭಾಷ್ಯ ಲಘುವೃತ್ತಿ 3. ತಾರಕಾ ಕಾರಿಕಾ 4. ಪರಿಭಾಷ್ಯಾವೃತ್ತಿ (ಲಲಿತಾವೃತ್ತಿ) 5. ದುರ್ಗತವೃತ್ತಿ 6. ಜ್ಞಾಪಕ ಸಮುಚ್ಛಯ 7. ಉಣಾದಿವೃತ್ತಿ 8. ತ್ರಿಕಾಂಡಶೇಷ 9. ಅಮರ ಕೋಶ ಪರಿಶಿಷ್ಟ 10. ಹಾರಬಲೀಕೋಶ 11. ವರ್ಣದೇಶನಾ 12. ಗಣವೃತ್ತಿ 13. ದ್ವಿರೂಪಕೋಶ 14. ಅಕ್ಷರ ಕೋಶ 15. ದಶವಾಲಾಕಾರಿಕಾ 16. ವಿಷ್ಣು ಭಕ್ತಿ ಕಲ್ಪಲತಾ. (ಎಂ.ಜೆ.)