ಪೆಡ್ಯಾಲಿಯೇಸೀ ದ್ವಿದಳ ಧಾನ್ಯ ಸಸ್ಯಗಳ ಗುಂಪಿನ ಒಂದು ಕುಟುಂಬ. ಕರಿಎಳ್ಳು, ಹುಲಿ ಉಗುರಿನ ಗಿಡ ಮುಂತಾದವು ಈ ಕುಟುಂಬಕ್ಕೆ ಸೇರಿವೆ. ಈ ಕುಟುಂಬಕ್ಕೆ ಸೇರಿದ ಸಸ್ಯಗಳು ಪ್ರಧಾನವಾಗಿ ಮೂಲಿಕೆಗಳು. ಇವುಗಳ ಎಲೆಗಳು ಸರಳ ರೀತಿಯವು; ಅಭಿಮುಖ ಇಲ್ಲವೆ ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿರುವವು. ವೃಂತಪರ್ಣಗಳಿಲ್ಲ. ಎಲೆಗಳ ಮೈಮೇಲೆ ಅಂಟನ್ನು ಸ್ರವಿಸುವ ಕೂದಲುಗಳುಂಟು. ಹೂಗಳು ಒಂಟಿಯಗಿಯೊ ಪುಷ್ಪಮಂಜರಿಗಳಲ್ಲೊ ಅರಳುತ್ತವೆ. ದಳಗಳು ಸಂಯುಕ್ತ ಬಗೆಯವು. ದಳಸಮೂಹ ಕೊಳವೆಯಂತಿದೆ. 5 ಪುಷ್ಪದಳಗಳಲ್ಲಿ 2 ಪರಸ್ಪರ ಅಂಟಿಕೊಂಡು ಮೇಲ್ದುಟಿಯಾಗಿಯೂ 3 ಒಂದಕ್ಕೊಂದು ಅಂಟಿಕೊಂಡು ಕೆಳದುಟಿಯಾಗಿಯೂ ಮಾರ್ಪಟ್ಟಾಗಿವೆ. ದಳಗಳ ಬಣ್ಣ ಬಿಳಿ ಇಲ್ಲವೇ ನೇರಿಳೆ. ಕೇಸರಗಳು 4, ಪುಷ್ಪದಳದ ಕೊಳವೆಯ ಒಳಗಡೆ ಅಂಟಿಕೊಂಡಿವೆ. ಇವುಗಳಲ್ಲಿ 2 ಚಿಕ್ಕವು ಮತ್ತು 2 ದೊಡ್ಡವು. ಅಂಡಾಶಯ 2 ಕಾರ್ಪೆಲ್‍ಗಳಿಂದ ರಚಿತವಾಗಿದೆ. ಅಂಡಕಗಳು ಅಸಂಖ್ಯ. ಕಾಯಿ ಗಟ್ಟಿ ಕವಚದಿಂದ ಕೂಡಿರುವ ಡ್ರೂಪ್ ಅಥವಾ ಒಡೆಯುವ ಸಂಪುಟ (ಕ್ಯಾಪ್ಸೂಲ್).
ಪೆಡ್ಯಾಲಿಸೀಯೇ ಕುಟುಂಬದಲ್ಲಿ 16 ಜಾತಿಗಳೂ 60 ಪ್ರಬೇಧಗಳೂ ಇವೆ. ಆಸ್ಟ್ರೇಲಿಯ, ದಕ್ಷಿಣ ಅಮೆರಿಕ ಮಡಗಾಸ್ಕರ್, ಮಲಯ, ಭಾರತ ಮುಂತಾದಲ್ಲೆಲ್ಲ ಬೆಳೆಯುತ್ತವೆ.
ಈ ಕುಟುಂಬದ ಅತಿ ಮುಖ್ಯ ಮತ್ತು ಉಪಯುಕ್ತ ಉದಾಹರಣೆ ಎಳ್ಳು (ಸೇಸಮಮ್ ಇಂಡಿಕಮ್). ಇದರ 2 ಪ್ರಬೇಧಗಳು ಭಾರತದಲ್ಲಿ ಬೆಳೆಯುತ್ತವಾದರೆ ಆಫ್ರಿಕಾದಲ್ಲಿ ಇತರ 16 ಪ್ರಬೇಧಗಳು ಕಾಣಸಿಗುತ್ತವೆ. (ನೋಡಿ- ಎಳ್ಳು)
ಪೆಡ್ಯಾಲಿಯೇಸೀ ಕುಟುಂಬದ ಇನ್ನೊಂದು ಸಸ್ಯ ಪೆಡ್ಯಾಲಿಯಮ್ ಮ್ಯೂರೆಕ್ಸ್ ವೈದ್ಯಕೀಯದಲ್ಲಿ ಇದು ಉಪಯುಕ್ತ. ಇದರಿಂದ ಒಸರುವ ಅಂಟಾದ ದ್ರವವನ್ನು ನೀರು ಅಥವಾ ಹಾಲಿನ ಜೊತೆ ಬೆರೆಸಿ ಗರ್ಭಾಶಯದ ಕಾಯಿಲೆಗೆ ಔಷಧಿಯಾಗಿ ಹಾಗೂ ಮೂತ್ರಸ್ರಾವಕವಾಗಿ ಬಳಸುವುದಿದೆ. ಆಫ್ರಿಕಾದಲ್ಲಿ ಇದರ ಸೊಪ್ಪನ್ನು ತರಕಾರಿಯಾಗಿ ಉಪಯೋಗಿಸುವುದುಂಟು. (ಎ.ಸಿ.ಎಸ್.)