ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪೆರಿಯಾರ್ ರಾಷ್ಟ್ರೀಯ ಉದ್ಯಾನವನ
ಪೆರಿಯಾರ್ ರಾಷ್ಟ್ರೀಯ ಉದ್ಯಾನವನ - ಕೇರಳ ಮತ್ತು ತಮಿಳುನಾಡುಗಳ ಗಡಿ ಪ್ರದೇಶದಲ್ಲಿ ಕೇರಳದ ಭಾಗದಲ್ಲಿರುವ ಪ್ರಸಿದ್ಧ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಣಾ ಪ್ರದೇಶ. ಪೆರಿಯಾರ್ ನದಿಗೆ 1895 ರಲ್ಲಿ ಕಟ್ಟಿದ ಅಣೆಕಟ್ಟಿನ ಫಲವಾಗಿ ಉಂಟಾದ ಪೆರಿಯಾರ್ ಸರೋವರದ ಸುತ್ತಮುತ್ತಲ ಸುಮಾರು 777 ಚ.ಕಿ.ಮೀ. ವಿಸ್ತೀರ್ಣದ ಪ್ರದೇಶವೇ ಈ ರಾಷ್ಟ್ರೀಯ ಉದ್ಯಾನವನ. ಈ ಪ್ರದೇಶ ವೃಕ್ಷಾಚ್ಛಾದಿತ ಬೆಟ್ಟಗುಡ್ಡಗಳನ್ನೂ ಕಣಿವೆಗಳನ್ನೂ ವಿಸ್ತಾರವಾದ ಹುಲ್ಲುಗಾವಲನ್ನೂ ಒಳಗೊಂಡಿದ್ದು ತುಂಬ ಸುಂದರವಾದ ವಿಹರ ಸ್ಥಳವಾಗಿದೆ.
ಸರೋವರದ ಬಾಹುಗಳು ಬೆಟ್ಟಗುಡ್ಡಗಳ ನಡುವೆ ಅಲ್ಲಲ್ಲಿ ಪಸರಿಸಿಕೊಂಡು ಚೆಲುವಾದ ಜಲಮಾರ್ಗಗಳನ್ನೂ ನೀರಚಾಚುಗಳನ್ನೂ ದ್ವೀಪಗಳನ್ನೂ ನಿರ್ಮಿಸಿರುವುದರಿಂದ ಸರೋವರ ಜಲ ವಿಹಾರಕ್ಕೆ ಸೊಗಸಾಗಿದೆ. ಇಲ್ಲಿಯ ಸುತ್ತಲ ಅರಣ್ಯದ ಪ್ರಮುಖ ವನ್ಯಪ್ರಾಣಿಗಳು ಹುಲಿ ಮತ್ತು ಆನೆ. ಇಲ್ಲಿ ಸುಮಾರು 932 ಆನೆಗಳಿವೆಯೆಂದು ಅಂದಾಜು (1983). ಇನ್ನಿತರ ವನ್ಯಪ್ರಾಣಿಗಳು ಕಾಡುಹಂದಿ, ಕಾಡುಕೋಣ ಮತ್ತು ಕಡವೆ. ಸಣ್ಣಗಾತ್ರದ ಪ್ರಾಣಿಗಳಲ್ಲಿ ಮುಖ್ಯವಾದವು ನೀರು ನಾಯಿ ಹಾಗೂ ಸಿಂಗಳೀಕ. ಇಲ್ಲಿಯ ಪಕ್ಷಿ ಸಂಕುಲವೂ ಸಂಪದ್ಭರಿತವಾಗಿದೆ. ಸುಮಾರು 200 ಕ್ಕೂ ಹೆಚ್ಚು ತೆರನ ಹಕ್ಕಿಗಳಿವೆಯೆನ್ನಲಾಗಿದೆ. ಮಿಂಚುಳ್ಳಿ, ನೀರು ಕಾಗೆ, (ಕಾರ್ಮೊರಾಂಟ್) ಕಾಡುಮೈನ, ಮಲಬಾರ್ ಹಾರ್ನ್‍ಬಿಲ್, ಪೈಡ್ ಹಾರ್ನ್‍ಬಿಲ್, ಮೀನು ತಿನ್ನುವ ಗೂಬೆ, ಹಾವಕ್ಕಿ (ಸ್ನೇಕ್‍ಬರ್ಡ್) ಮುಂತಾದುವು ಇಲ್ಲಿಯ ಮುಖ್ಯ ಪಕ್ಷಿಗಳು.
ಇಲ್ಲಿಯ ವನ್ಯಪ್ರಾಣಿಗಳನ್ನು ವೀಕ್ಷಿಸಲು ಅನುಕೂಲವಾಗುವಂತೆ ದೋಣಿ ಸೌಲಭ್ಯವಿದೆ. ಪ್ರವಾಸಿಗರಿಗೆ ವಸತಿ ಸೌಕರ್ಯವೂ ಉಂಟು. ತೆಕ್ಕಾಡಿಯಲ್ಲಿ ಅರಣ್ಯ ನಿವಾಸ್ ಹೋಟೆಲೂ ಹತ್ತಿರದ ಎಡಪಾಳಯಮಿನಲ್ಲಿ ಪ್ರವಾಸಿ ಮಂದಿರವೂ ತಣ್ಣಿಕುಡಿ ಮತ್ತು ಮುಲಕುಡಿಗಳಲ್ಲಿ ವಿಶ್ರಾಂತಿ ಗೃಹಗಳೂ ಇವೆ.