ಪೊನ್ನ : - ಸು. ೯೫೦. ಕನ್ನಡದ ಮೊಟ್ಟಮೊದಲ ಕವಿ ಚಕ್ರವರ್ತಿ. ರತ್ನತ್ರಯರಲ್ಲಿ ಎರಡನೆಯವನೆನಿಸಿಕೊಂಡ ಈತ ಕನ್ನಡ ಸಾಹಿತ್ಯೋತ್ಕರ್ಷಕ್ಕೆ ಕಾರಣರಾದ ಪ್ರಮುಖ ಕವಿಗಳಲ್ಲಿ ಒಬ್ಬ. ಹತ್ತನೆಯ ಶತಮಾನದ ಸಮೃದ್ಧ ಸಾಹಿತ್ಯ ಕೃಷಿಯಲ್ಲಿ ಪಾಲ್ಗೊಂಡ ಈತ ಜೈನ ಮತೀಯ. ಈತನಿಗೆ ಪೊನ್ನಿಗ, ಪೊನ್ನಮಯ್ಯ ಎಂಬ ಹೆಸರುಗಳೂ ಉಂಟು. ಸವಣ, "ಕುರುಳ್ಗಳ ಸವಣ "ಎಂದು ತನ್ನನ್ನು ಕರೆದುಕೊಂಡಿರುವುದರಿಂದ ಈತ ಜೈನವಿರಾಗಿಯಾಗಿರಬಹುದು. ಕವಿ ತನ್ನ ಕಾಲ, ದೇಶ ಮೊದಲಾದ ವೈಯಕ್ತಿಕ ವಿಚಾರಗಳನ್ನು ತನ್ನ ಕಾವ್ಯದಲ್ಲಿ ಪ್ರಸ್ತಾಪಿಸಿಲ್ಲ. ಬಾಹ್ಯಾಧಾರಗಳ ಮೇಲೆ ವಿಮರ್ಶಕರು ಕವಿಯ ಕಾಲವನ್ನು ಸು. 950 ಎಂದು ಪರಿಗಣಿಸಿದ್ದಾರೆ. ಇಂದ್ರನಂದಿಮುನಿ ತನ್ನ ವಿದ್ಯಾಗುರುವೆಂದೂ, ಜಿನಚಂದ್ರ ಮುನೀಂದ್ರ ಧಾರ್ಮಿಕ ಗುರುವೆಂದೂ ಶಾಂತಿಪುರಾಣದಲ್ಲಿ ಹೇಳಿಕೊಂಡಿದ್ದಾನೆ. ರಾಷ್ಟ್ರಕೂಟ ಮುಮ್ಮಡಿ ಕೃಷ್ಣನ ಆಶ್ರಯದಲ್ಲಿದ್ದು "ಉಭಯಕವಿ ಚಕ್ರವರ್ತಿ" ಎಂಬ ಬಿರುದನ್ನು ಪಡೆದಿದ್ದ. ಈತ ಕವಿ, ಗಮಕಿ, ವಾದಿ, ವಾಗ್ಮಿಯಾಗಿದ್ದನೆಂದೂ ಸರ್ವದೇವ ಕವೀಂದ್ರನೆಂಬ ಬಿರುದಿದ್ದುದಾಗಿಯೂ ತಿಳಿದುಬರುತ್ತದೆ. ಕವಿ ತನ್ನನ್ನು ಕುರುಳ್ಗಳ ಸವಣನೆಂದು ಸಂಭೋದಿಸಿಕೊಂಡಿರುವುದನ್ನು ಗಮನಿಸಿದರೆ ಕವಿಯ ನಿರ್ಲಿಪ್ತ ಮನೋಭಾವ ವ್ಯಕ್ತವಾಗುತ್ತದೆ. ಕೃಷ್ಣಚಕ್ರವರ್ತಿಯಿಂದ ಧನ, ಕನಕ, ಕೀರ್ತಿ, ಪ್ರತಿಷ್ಠೆಗಳನ್ನು ಗಳಿಸಿದ್ದರೂ ಲೌಕಿಕ ವ್ಯಾಮೋಹದಿಂದ ದೂರಾಗಿದ್ದ ಭವ್ಯ ವ್ಯಕ್ತಿತ್ವ ಈತನದಾಗಿರಬೇಕು. ರಾಷ್ಟ್ರಕೂಟ ಮುಮ್ಮಡಿ ಕೃಷ್ಣನ ಆಶ್ರಯದಲ್ಲಿ ಭುವನೈಕ ರಾಮಾಭ್ಯುದಯವನ್ನು ರಚಿಸಿದ ಈತ ಚಾಲುಕ್ಯ ಚಮೂಪತಿಗಳಾಗಿದ್ದ ಮಲ್ಲಪ್ಪಯ್ಯ ಪುನ್ನಮಯ್ಯರ ಆಶ್ರಯದಲ್ಲಿ ಶಾಂತಿಪುರಾಣವನ್ನು ಬರೆದಿದ್ದಾನೆ.
(ಎಸ್.ಕೆ.ಆರ್.ಎ.; ಎಂ.ಆರ್.ಯು.)
ಶಾಂತಿಪುರಾಣ; ಭುವನೈಕ ರಾಮಾಭ್ಯುದಯ; ಜಿನಾಕ್ಷರ ಮಾಲೆ; ಗತಪ್ರತ್ಯಾಗತ; ಅಲಂಕಾರ; ಆದಿಪುರಾಣಮು; ವಿರಾಟಮು - ಇವು ಈತನ ಹೆಸರಿನಲ್ಲಿರುವ ಕೃತಿಗಳು. ಇವುಗಳಲ್ಲಿ ಶಾಂತಿಪುರಾಣ ಮತ್ತು ಜಿನಾಕ್ಷರ ಮಾಲೆಗಳೂ ಉಪಲಬ್ಧವಿದ್ದು ಉಳಿದವು ಕಾಲಗರ್ಭದಲ್ಲಿ ಅಡಗಿಹೋಗಿವೆ. ಭುವನೈಕರಾಮಾಭ್ಯುದಯವನ್ನು ಕುರಿತು ಕವಿ ತನ್ನ ಶಾಂತಿಪುರಾಣದಲ್ಲಿ ಪ್ರಸ್ತಾಪಿಸಿದ್ದಾನೆ. 14 ಭುವನಂಗಳಿಗೆ ಸರಿಸಮಾನವಾದಂಥ 14 ಆಶ್ವಾಸಗಳುಳ್ಳ ಭುವನೈಕ ರಾಮಾಭ್ಯುದಯದ ಕಥಾವಸ್ತು ರಾಮಕಥೆಯೆಂದು ಶಾಂತಿಪುರಾಣದಲ್ಲಿ ಹೇಳಲಾಗಿದೆ. ಕಾವ್ಯಾವಲೋಕನ, ಶಬ್ದಮಣಿದರ್ಪಣ, ಸೂಕ್ತಿಸುಧಾರ್ಣವ, ಕಾವ್ಯಸಾರಗಳಲ್ಲಿ ದೊರಕುವ ಕೆಲವು ಲಕ್ಷಪದ್ಯಗಳನ್ನು ಭುವನೈಕ ರಾಮಾಭ್ಯುದಯದಿಂದ ಆಯ್ದುವೆಂದು ಗುರುತಿಸಲಾಗಿದೆ. ಅವುಗಳ ಆಧಾರದ ಮೇಲೆ ಭುವನೈಕ ರಾಮಾಭ್ಯುದಯ ವೈದಿಕ ಸಂಪ್ರದಾಯದ ರಾಮಾಯಣವೆಂದು ಖಚಿತವಾಗುತ್ತದೆ. ಸಮಕಾಲೀನ ಸಂಪ್ರದಾಯದಂತೆ ಈ ಲೌಕಿಕ ಕೃತಿಯಲ್ಲಿ ಕಥಾನಾಯಕ ರಾಮನೊಡನೆ, ತನ್ನ ಆಶ್ರಯದಾತ ಕೃಷ್ಣನನ್ನು ತಗುಳ್ಚಿ (ಒಂದುಗೂಡಿಸಿ) ಹೇಳಿದ್ದಾನೆ. ಭುವನೈಕರಾಮ ಎಂಬ ಕೃಷ್ಣನ ಬಿರುದೇ ಕಾವ್ಯದ ಶಿರೋನಾಮೆಯಾಗಿದೆ. ತೆಕ್ಕೋಲ ಎಂಬ ಸ್ಥಳದಲ್ಲಿ ನಡೆದ ಯುದ್ಧದಲ್ಲಿ ಮೂವಡಿ ಚೋಳ ರಾಜಾದಿತ್ಯನ ಮೇಲೆ ರಾಷ್ಟ್ರಕೂಟ ಮುಮ್ಮಡಿ ಕೃಷ್ಣ ಸಾಧಿಸಿದ ವಿಜಯದ ಸ್ಮಾರಕವಾಗಿಯೇ ಈ ಕೃತಿ ಜನ್ಮ ತಳೆಯಿತು. ಭುವನೈಕ-ರಾಮಾಭ್ಯುದಯದವೆಂದು ಹೇಳಲಾದ ಲಕ್ಷ್ಯಪದ್ಯಗಳಲ್ಲಿ ಕವಿಯ ಪ್ರತಿಭೆಯ ಸೆಳಕುಗಳನ್ನು ಗುರುತಿಸಬಹುದಾದರೂ ನಿರ್ಣಾಯಕವಾಗಿ ಏನನ್ನೂ ಹೇಳಲಾಗುವುದಿಲ್ಲ. ಈತನ ಕಾವ್ಯಸಾಮಥ್ರ್ಯವನ್ನು ಅಳೆಯುವ ಮೂಲಮಾಪನವಾದ ಕೃತಿ ಕಣ್ಮರೆಯಾಗಿರುವುದರಿಂದ ಕವಿಯ ಸ್ಥಾನ ನಿರ್ದೇಶನದಲ್ಲಿ ತೊಡಕುಂಟಾಗಿದೆ.
ಗತಪ್ರತ್ಯಾಗತವೆಂಬ ಸಂಸ್ಕøತ ಕೃತಿಯನ್ನು ರಚಿಸಿದುದಾಗಿಯೂ ಅದರಿಂದ ತನಗೆ ಉಭಯ ಕವಿ ಚಕ್ರವರ್ತಿ ಬಿರುದು ದೊರೆತುದಾಗಿಯೂ ಈತ ತನ್ನ ಶಾಂತಿಪುರಾಣದಲ್ಲಿ ಹೇಳಿಕೊಂಡಿದ್ದಾನೆ. ಸಂಸ್ಕøತ ಕಾವ್ಯ ರಚನೆಯಲ್ಲಿ ಕಾಳಿದಾಸನಿಗಿಂತ ನಾಲ್ಕು ಪಟ್ಟು ಹೆಚ್ಚು ಎಂದು ಹೇಳಿಕೊಂಡಿರುವುದನ್ನು ಗಮನಿಸಿದಾಗ ಈತನ ಪಾಂಡಿತ್ಯ ಉನ್ನತವಾದುದಿರಬೇಕೆನಿಸುತ್ತದೆ. ಈ ಕೃತಿಯ ವಿವರಗಳು ಎಲ್ಲೂ ದೊರೆತಿಲ್ಲ. ಗತಪ್ರತ್ಯಾಗತವೆಂಬ ಅಲಂಕಾರವನ್ನು ಕುರಿತು ಈ ಕೃತಿ ರಚಿತವಾಗಿದೆಯೋ ಇಲ್ಲವೇ ಯಾವುದೋ ಕಥಾವಸ್ತುವನ್ನು ಗತಪ್ರತ್ಯಾಗತ ಅಲಂಕಾರದಲ್ಲಿ ನಿರೂಪಿಸಿದ್ದಾನೆಯೋ ತಿಳಿಯದು. ಈತನದೆಂದು ಹೇಳುವ ಅಲಂಕಾರ ಕೃತಿಯೂ ಗತಪ್ರತ್ಯಾಗತವನ್ನೇ ಕುರಿತುದಾಗಿರಬಹುದು. ಎರಡೂ ಕೃತಿಗಳೂ ದೊರೆತಿಲ್ಲವಾದುದರಿಂದ ಏನನ್ನೂ ಹೇಳಲು ಸಾಧ್ಯವಿಲ್ಲ. ಆದಿಪುರಾಣಮು ಮತ್ತು ವಿರಾಟಮು ಎಂಬ ತೆಲುಗು ಕೃತಿಗಳನ್ನು ಸರ್ವದೇವನೆಂಬ ಕವಿ ರಚಿಸಿದನೆಂದು ತೆಲುಗು ಸಾಹಿತ್ಯ ಚರಿತ್ರಕಾರರು ಹೇಳುತ್ತಾರೆ; ಈ ಸರ್ವದೇವ ಮತ್ತು ಕನ್ನಡದ ಪೊನ್ನ ಅಭಿನ್ನೆಂದು ಅಭಿಪ್ರಾಯ-ಪಡುತ್ತಾರೆ. ಆದಿಪುರಾಣಮು ಮತ್ತು ವಿರಾಟಮು ಕೃತಿಗಳು ಕಣ್ಮರೆಯಾಗಿವೆ. ಲಕ್ಷಣಸಾರ ಎಂಬ ಛಂದೋಗ್ರಂಥ ಮತ್ತು ಪ್ರಬಂಧಮಣಿಭೂಷಣಮು ಎಂಬ ಸಂಕಲನ ಗ್ರಂಥಗಳಲ್ಲಿ ಸರ್ವದೇವನ ಕೃತಿಗಳಿಂದ ಆಯ್ದ ಕೆಲವು ಲಕ್ಷ್ಯಪದ್ಯಗಳು ದೊರೆಯುತ್ತವೆ. ಕನ್ನಡದ ಪೊನ್ನನೇ ತೆಲುಗಿನಲ್ಲಿ ಸರ್ವದೇವನೆಂಬ ಹೆಸರಿನಿಂದ ಕೃತಿರಚನೆ ಮಾಡಿರುವುದಾಗಿ ತೆಲುಗು ಸಾಹಿತ್ಯ ವಿದ್ವಾಂಸ ಎನ್. ವೆಂಕಟರಾವ್ ಅಭಿಪ್ರಾಯಪಡುತ್ತಾರೆ. ಕನ್ನಡದಲ್ಲಿಯಂತೆ ತೆಲುಗಿನಲ್ಲಿಯೂ ಆದಿಪುರಾಣಮು ಎಂಬ ಧಾರ್ಮಿಕ ಕಾವ್ಯವನ್ನೂ ವಿರಾಟಮು ಎಂಬ ಲೌಕಿಕ ಖಂಡಕಾವ್ಯವನ್ನೂ ಬರೆದು ಮಾರ್ಗದ್ವಯದಲ್ಲಿ ಮುನ್ನಡೆದಂತೆ ತೋರುತ್ತದೆ. ಮಲ್ಲಪಯ್ಯ ಪುನ್ನಮಯ್ಯರ ಆಶ್ರಯ ಪಡೆದು ಪುಂಗನೂರಿನಲ್ಲಿ ನೆಲಸಿದ ಈ ಕವಿ ತೆಲುಗು ಸಾಹಿತ್ಯವನ್ನು ಅಭ್ಯಸಿಸಿ ಕೃತಿರಚನೆ ಮಾಡಿರುವ ಸಾಧ್ಯತೆ ಉಂಟು. ಸಬಲ ಆಧಾರಗಳಿಲ್ಲದುದರಿಂದ ಪೊನ್ನನ ತೆಲುಗು ಸಾಹಿತ್ಯ ಸೇವೆ ಪ್ರಶ್ನೆಯಾಗಿಯೇ ಉಳಿದಿದೆ.
ಜಿನಾಕ್ಷರ ಮಾಲೆ ಪೊನ್ನನ ಉಪಲಬ್ಧ ಕೃತಿಗಳಲ್ಲೊಂದಾಗಿದೆ. 39 ಕಂದಪದ್ಯಗಳ ಈ ಪುಟ್ಟ ಕೃತಿಯಲ್ಲಿ ಕವಿಯ ಚಮತ್ಕಾರಕ್ಕೆ ಸ್ಥಾನ ದೊರೆತಿದೆಯೇ ವಿನಾ ಪ್ರತಿಭೆಗಲ್ಲ. ಸ್ತೋತ್ರರೂಪದ ಈ ಕೃತಿಯಲ್ಲಿ 25 ವರ್ಗೀಯ ವ್ಯಂಜನಗಳು ಹಾಗೂ 12 ಆವರ್ಗೀಯ ವ್ಯಂಜನಗಳನ್ನು ಅಂತಾದಿಕ್ರಮದಲ್ಲಿ ಹೊಂದಿಸಲಾಗಿದೆ. ಕುರುಳ್ಗಳ ಸವಣ ಎಂಬ ನಾಮಾಂಕಿತದಲ್ಲಿಯೇ ಹೆಣೆಯಲಾದ ಈ ಕೃತಿಗಳಲ್ಲಿ ಕವಿಯ ಹೆಸರು ಎಲ್ಲಿಯೂ ಇಲ್ಲ.
ಈ ಕವಿಯ ಮತ್ತೊಂದು ಉಪಲಬ್ಧ ಕೃತಿ ಶಾಂತಿಪುರಾಣ. ಹದಿನಾರನೆಯ ತೀರ್ಥಂಕರನೂ, ಐದನೆಯ ಚಕ್ರವರ್ತಿಯೂ ಆದ ಶಾಂತಿನಾಥನನ್ನು ಕುರಿತು ಕನ್ನಡದಲ್ಲಿ ರೂಪಿತವಾದ ಮೊದಲ ಕೃತಿ. ಈ ಕೃತಿಗೆ, ಆಕರ ಆಸಗ ಕವಿಯ ಸಂಸ್ಕøತ ಶಾಂತಿಪುರಾಣ. ಕನ್ನಡಗವಿತೆಯೊಳಗೆ ಅಸಗಂನ್ನೂರ್ಮಡಿ ರೇಖೆಗಗ್ಗಳಂ ಎಂದು ಆಸಗನನ್ನು ಕೀಳು ಮಾಡಿದರೂ ಆತನ ಶಾಂತಿಪುರಾಣವನ್ನೇ ಆಕರವಾಗಿಸಿಕೊಂಡ ಪೊನ್ನನ ರೀತಿ ವಿಚಿತ್ರ. 12 ಆಶ್ವಾಸಗಳುಳ್ಳ ಈ ಚಂಪೂ ಕೃತಿಯಲ್ಲಿ ಎಂಟು ಆಶ್ವಾಸಗಳು ಪೂರ್ವ ಭವ ಕಥನಕ್ಕೇ ಮೀಸಲಾಗಿದೆ. ಶ್ರೀಷೇಣ, ಭೋಗಭೂಮಿಜ, ಶ್ರೀದೇವ, ಅಮಿತತೇಜ, ಮಣಿಚೂಳ, ಅಪರಾಜಿತ, ಅಚ್ಯುತೇಂದ್ರ, ವಜ್ರಾಯುಧ, ಅಹಮಿಂದ್ರ, ಮೇಘರಥ, ಮಹೇಂದ್ರ-ಈ ಹನ್ನೊಂದು ಭವಗಳಲ್ಲಿ ತೊಳಲಿ ಬಂದ ಜೀವ ಶಾಂತಿನಾಥನಾಗಿ ಜಿನತ್ವವನ್ನು ಪಡೆಯುತ್ತದೆ. ಭವಾವಳಿ ಕಥನದಲ್ಲಿ ಕ್ರಮವಿಲ್ಲದೆ ಓದುಗನಿಗೆ ಭ್ರಮೆ ಹಿಡಿಸುತ್ತದೆ. ಕಥನಕ್ರಮದಲ್ಲಿ ಅಸಗನನ್ನೇ ಅನುಸರಿಸಿರುವ ಕವಿ ವರ್ಣನೆಗಳಲ್ಲಿ ಸ್ವಂತಿಕೆಯನ್ನು ಮೆರೆದಿದ್ದಾನೆ. ಪಾತ್ರಗಳಿಗೆ ಮಾನವೀಯತೆಯ ಮೆರುಗನ್ನಿತ್ತು ಸಜೀವವಾಗಿಸಿದ್ದಾನೆ. ಸನ್ನಿವೇಶಗಳಿಗೆ ನಾಟಕೀಯ ಹಿನ್ನೆಲೆಯನ್ನೊದಗಿಸಿದ್ದಾನೆ. ಜೈನಧರ್ಮ ಪ್ರಕ್ರಿಯೆಗಳ ಕ್ಲಿಷ್ಟತೆಯನ್ನು ಸರಳಗೊಳಿಸಿದ್ದಾನೆ. ದೇಸೀ ನುಡಿಗಟ್ಟುಗಳನ್ನು ಹೊಂದಿಸಿ ಕಳೆಕಟ್ಟಿದ್ದಾನೆ. ಜಿನ ಜನ್ಮಾಭಿಷೇಕದ ಭಾಗವನ್ನು ಪಂಪನಿಂದ ಸ್ವೀಕರಿಸಿದ್ದಾನೆ. ಜ್ಯೋತಿಃ ಪ್ರಭಾ ಸ್ವಯಂವರ ಸಂದರ್ಭವನ್ನು ಕಾಳಿದಾಸನ ರಘುವಂಶದಿಂದ ಭಾಷಾಂತರಿಸಿದ್ದಾನೆ. ಶಾಂತಿನಾಥನ ದಿಗ್ವಿಜಯ ವರ್ಣನೆಯಲ್ಲಿ ರಘುವಂಶದ ರಘು ಮಹಾರಾಜನ ದಿಗ್ವಿಜಯ ವರ್ಣನೆಯನ್ನು ಬಿಂಬಿಸಿದ್ದಾನೆ. ಸುಂದರ ವರ್ಣನೆಗಳಿಂದ ಕೂಡಿದ ಶಾಂತಿನಾಥ ಪುರಾಣ ಕೇವಲ ಧಾರ್ಮಿಕ ಪುರಾಣವಾಗಿರದೆ ಕಾವ್ಯವೂ ಆಗಿದೆ. ಧಾರ್ಮಿಕ ವಿಷಯಗಳ ನಿರೂಪಣೆಯಲ್ಲಿ ಸರಳತೆಯನ್ನಳವಡಿಸಿಕೊಂಡ ಶಾಂತಿಪುರಾಣ ಸಾಮಾನ್ಯನ ಕೈಗೆ ನಿಲುಕುವಂತಿದೆ.
ಈತನ ಕೃತಿ ಸಮಸ್ತವೂ ದೊರೆಯುವಂತಿದ್ದರೆ ಕವಿಯ ಸ್ಥಾನವನ್ನು ನಿರ್ಧರಿಸಬಹುದಿತ್ತು. ಈಗ ದೊರೆತಿರುವ ಕೃತಿ ಧಾರ್ಮಿಕ ಕಾವ್ಯವಾಗಿದ್ದು ಕವಿಯ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಿದೆ. ಪರಂಪರೆಯ ಪೌಳಿಯನ್ನು ದಾಟಲಾರದೆ ಕವಿ ಅಸಹಾಯಕನಾಗುತ್ತಾನೆ. ಲೌಕಿಕ ಕೃತಿರಚನೆಯಲ್ಲಿ ಕವಿ ಸರ್ವತಂತ್ರ ಸ್ವತಂತ್ರ. ಇಂಥ ಲೌಕಿಕ ಕೃತಿ ಭುವನೈಕರಾಮಾಭ್ಯುದಯ ಕಣ್ಮರೆಯಾಗಿರುವುದರಿಂದ ಈ ಕವಿ ಸಾಧಾರಣ ಕವಿಯಾಗಿ ಪರಿಗಣಿತನಾಗಿದ್ದಾನೆ. ಉಪಲಬ್ಧ ಶಾಂತಿಪುರಾಣ ಧಾರ್ಮಿಕ ಕೃತಿಯಾದುದರಿಂದ ಸಹೃದಯರ ವಿಮರ್ಶಕರ ಗಮನ ಅದರತ್ತ ಹರಿಯಲಿಲ್ಲ. (ಎಂ.ಆರ್.ಯು.)