ಪ್ಯಾರಿಸ್ ಸಮ್ಮೇಳನ - ಒಂದನೆಯ ಮಹಾಯುದ್ಧವನ್ನು (1914-18) ಕೊನೆಗೊಳಿಸುವ ಕೌಲುಗಳ ರಚನೆಗಾಗಿ 1919-20 ರಲ್ಲಿ ಪ್ಯಾರಿಸಿನಲ್ಲಿ ಸಮಾವೇಶಗೊಂಡಿದ್ದ ಸಮ್ಮೇಳನ. ಜರ್ಮನಿ ಮತ್ತು ಅದರೊಂದಿಗೆ ಕೂಡಿದ್ದ ರಾಷ್ಟ್ರಗಳ ವಿರುದ್ಧ ಹೋರಾಟ ನಡೆಸಿದ್ದು ಇಲ್ಲವೆ ಆ ಕೇಂದ್ರಶಕ್ತಿಗಳೊಂದಿಗೆ ರಾಯಭಾರ ಸಂಬಂಧವನ್ನು ಕಡಿದುಕೊಂಡಿದ್ದ ಮತ್ತು ಯಾವ ಪಕ್ಷಕ್ಕೂ ಸೇರದೆ ತಟಸ್ಥವಾಗಿದ್ದ ರಾಷ್ಟ್ರಗಳ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಸೇರಿದ್ದರು.
ಹಿನ್ನೆಲೆ: 1918 ರ ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಜರ್ಮನಿ ಹಾಗೂ ಅದರೊಂದಿಗೆ ಸೇರಿದ್ದ ಬಲ್ಗೇರಿಯ, ತುರ್ಕಿ, ಆಸ್ಟ್ರಿಯ-ಹಂಗೇರಿ ದೇಶಗಳು ಯುದ್ಧದಲ್ಲಿ ಸೋಲುವ ಸ್ಥಿತಿ ತಲುಪಿದ್ದವು. ತನ್ನ ಎಲ್ಲ ಮಿತ್ರ ರಾಷ್ಟ್ರಗಳೂ ಕುಸಿದುಬಿದ್ದಾಗ ತಾನೂ ಬೇಷರತ್ತಾಗಿ ಶರಣಾಗತವಾಗುವುದು ಜರ್ಮನಿಗೆ ಅನಿವಾರ್ಯವಾಗಿತ್ತು. ಕೇಂದ್ರಶಕ್ತಿಗಳ ವಿರುದ್ಧ ಯುದ್ಧನಿರತವಾಗಿದ್ಧ ಮಿತ್ರರಾಷ್ಟ್ರಗಳೊಂದಿಗೆ ಶಾಂತಿ ಮಾಡಿಕೊಳ್ಳಲು ಜರ್ಮನಿ ಹಾತೊರೆಯುತ್ತಿತ್ತು. ಅಮೆರಿಕ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷ ವುಡ್‍ರೋ ವಿಲ್ಸನರು ಶಾಂತಿಸ್ಥಾಪನೆಗೆ ಅಗತ್ಯವಾದ ಹದಿನಾಲ್ಕು ಅಂಶಗಳನ್ನು ಸೂಚಿಸಿದರು. ಜರ್ಮನಿ ಶಾಂತಿ ಭಿಕ್ಷೆಯನ್ನು ಯಾಚಿಸಿ 1918 ರ ಅಕ್ಟೋಬರ್ 4 ರಂದು ಸ್ವಿಸ್ ಸರ್ಕಾರದ ಮೂಲಕ ವಿಲ್ಸನರಿಗೆ ಪತ್ರ ಕಳಿಸಿತು. ಎಲ್ಲ ಹದಿನಾಲ್ಕು ಅಂಶಗಳನ್ನೂ ಜರ್ಮನಿ ಒಪ್ಪಿಕೊಳ್ಳಬೇಕು. ಮಿತ್ರ ಸೇನಾಧಿಕಾರಿಗಳ ನೇತೃತ್ವದಲ್ಲಿ ಮಿತ್ರರಾಷ್ಟ್ರಗಳ ಪ್ರದೇಶಗಳ ಆಕ್ರಮಣವನ್ನು ಜರ್ಮನಿ ತೆರವು ಮಾಡಬೇಕು, ನ್ಯಾಯ ಬಾಹಿರವಾದ ಹಾಗೂ ಅಮಾನುಷವಾದ ಎಲ್ಲ ಕ್ರಮಗಳನ್ನೂ ಜರ್ಮನಿ ಕೊನೆಗೊಳಿಸಿ ಜಲಾಂತರ್ಗಾಮಿ ಯುದ್ಧವನ್ನು ತೊರೆಯಬೇಕು. ಯುದ್ಧಕ್ಕೆ ಕಾರಣವಾದ ಬೇಜವಾಬ್ದಾರಿ ಸರ್ಕಾರವನ್ನು ಜರ್ಮನಿ ವಿಸರ್ಜಿಸಬೇಕು ಎಂಬ ಷರತ್ತುಗಳಿಗೆ ಜರ್ಮನಿ ಒಪ್ಪುವುದಾದರೆ ಮಾತ್ರ ಶಾಂತಿ ಸಂಧಾನಕ್ಕೆ ಒಡಂಬಡಬಹುದೆಂದು ವಿಲ್ಸನರು ಜರ್ಮನ್ ಪತ್ರಕ್ಕೆ ಉತ್ತರ ಕಳಿಸಿದರು. ಈ ಷರತ್ತುಗಳಿಗೆ ಸಮ್ಮತಿಸದೆ ಜರ್ಮನಿಯ ಜನರಲ್ ಎರಿಕ್ ಲೂಡೆಂಡಾರ್ಫ್ ರಾಜೀನಾಮೆ ನೀಡಿದ. ಅದರೆ ಅಲ್ಲಿಯ ಅ ಸೈನಿಕ ಸರ್ಕಾರ ಈ ಷರತ್ತುಗಳಿಗೆ ಒಪ್ಪಿ ಅಕ್ಟೋಬರ್ 20 ರಂದು ಪತ್ರ ಕಳಸಿತು. ಅದಾಗ್ಯೂ ಜರ್ಮನಿ ನ್ಯಾಯಬಾಹಿರವಾದ ಹಾಗೂ ಅಮಾನುಷವಾದ ಕೃತ್ಯಗಳನ್ನೆಸಗುತ್ತಿದೆಯೆಂಬ ಆಪಾದನೆಯನ್ನು ಅದು ನಿರಾಕರಿಸಿತು.
ವಿಲ್ಸನರು ಈ ವಿಷಯವನ್ನು ಮಿತ್ರ ರಾಷ್ಟ್ರಗಳಿಗೆ ಒಪ್ಪಿಸಿದರು. ಜರ್ಮನಿಯೊಂದಿಗೆ ಶಾಂತಿ ಕೌಲು ಮಾಡಿಕೊಳ್ಳಬಹುದೇ, ವಿಲ್ಸನರ ಹದಿನಾಲ್ಕು ಅಂಶಗಳು ಸಂಧಾನಕ್ಕೆ ಆಧಾರವಾಗಬಹುದೇ ಎಂಬುದು ಮಿತ್ರರಾಷ್ಟ್ರಗಳಲ್ಲಿ ಚರ್ಚೆಯಾಯಿತು. ಜರ್ಮನಿಯೊಂದಿಗೆ ಶಾಂತಿ ಮಾಡಿಕೊಳ್ಳುವುದು ಸಾಧುವೇ ಅಲ್ಲವೇ ಎಂಬ ಬಗ್ಗೆ ಸೇನಾ ಮುಖ್ಯರೊಂದಿಗೂ ಸಮಾಲೋಚನೆ ನಡೆಸಲಾಯಿತು. ಜರ್ಮನಿಯ ರಾಜಧಾನಿಯಾದ ಬರ್ಲಿನ್ನನ್ನು ಮಿತ್ರ ಸೇನೆಗಳು ಆಕ್ರಮಿಸಿಕೊಂಡು ಆ ದೇಶ ಸಂಪೂರ್ಣವಾಗಿ ಶರಣಾದಾಗಲೂ ಇವಕ್ಕಿಂತ ಭಿನ್ನವಾದ ಷರತ್ತುಗಳನ್ನು ಹಾಕುವುದು ಸಾಧ್ಯವಿಲ್ಲವಾದ್ದರಿಂದ ಈ ಷರತ್ತುಗಳಿಗೆ ಅನುಗುಣವಾಗಿ ಜರ್ಮನಿಯೊಂದಿಗೆ ಈಗಲೇ ಶಾಂತಿ ಮಾಡಿಕೊಳ್ಳುವುದರಲ್ಲಿ ತಪ್ಪಿಲ್ಲವೆಂದು ಸೇನಾ ಮುಖ್ಯರ ಅಭಿಪ್ರಾಯಪಟ್ಟರು. ಅನಾವಶ್ಯಕವಾಗಿ ಪ್ರಾಣಹಾನಿ ತಪ್ಪಿಸುವುದು ಇದರಿಂದ ಸಾಧ್ಯವಾಗುವುದೆಂಬುದು ಅವರ ಭಾವನೆಯಾಗಿತ್ತು. ಅಧ್ಯಕ್ಷ ವಿಲ್ಸನರು ಸೂಚಿಸಿದ್ದ ಹದಿನಾಲ್ಕು ಅಂಶಗಳು ಶಾಂತಿಗೆ ಆಧಾರವಾಗಬಹುದೇ ಎಂಬ ವಿಚಾರವಾಗಿ ಮಿತ್ರನಾಯಕರಲ್ಲಿ ಒಮ್ಮತವಿರಲಿಲ್ಲ. ಕೊನೆಗೆ ಕೆಲವು ಉಪಾಧಿಗಳೊಂದಿಗೆ ಇವನ್ನು ಒಪ್ಪಲಾಯಿತು. ಅಂತೆಯೇ ವಿಲ್ಸನರು ನವೆಂಬರ್ 5 ರಂದು ಮಿತ್ರರಾಷ್ಟ್ರಗಳ ಉತ್ತರವನ್ನು ಜರ್ಮನ್ ಸರ್ಕಾರಕ್ಕೆ ತಿಳಿಸಿದರು. ಜರ್ಮನಿಯೊಂದಿಗೆ ಯುದ್ಧವಿರಾಮ ಒಡಂಬಡಿಕೆಯನ್ನೂ ಶಾಂತಿ ಕೌಲನ್ನೂ ಮಾಡಿಕೊಳ್ಳಲು ಮಿತ್ರ ಹಾಗೂ ಸಹಯೋಗಿ ರಾಜ್ಯಗಳು ಒಪ್ಪಿವೆಯೆಂದು ಇದರಲ್ಲಿ ಸೂಚಿಸಲಾಗಿತ್ತು. ಅಧ್ಯಕ್ಷ ವಿಲ್ಸನರ ಜನವರಿ 8 ರ ಮತ್ತು ಅನಂತರ ಭಾಷಣಗಳಿಗೆ ಅನುಗುಣವಾಗಿ. ಆದರೆ ಸಾಗರಗಳ ಸ್ವಾತಂತ್ರ್ಯ ಹಾಗೂ ಆಕ್ರಮಿತ ಪ್ರದೇಶಗಳಿಗೆ ಸಂಬಂಧಿಸಿದಂತೆ ಕೆಲವು ಉಪಾಧಿಗಳೊಂದಿಗೆ ಈ ಒಪ್ಪಿಗೆ ನೀಡಲಾಯಿತು. ಯುದ್ಧ ವಿರಾಮ ಒಪ್ಪಂದಕ್ಕೆ ಪೂರ್ವದ ಈ ಒಡಂಬಡಿಕೆಯೇ ಶಾಂತಿಯ ಕೌಲಿಗೆ ತಳಹದಿಯಾಗತಕ್ಕದೆಂಬುದನ್ನು ಎರಡೂ ಪಕ್ಷಗಳು ಒಪ್ಪಿದವು.
ಮುಖ್ಯ ಮಿತ್ರ ಹಾಗೂ ಸಹಯೋಗಿ ರಾಜ್ಯಗಳಾದ ಫ್ರಾನ್ಸ್, ಬ್ರಿಟನ್, ಇಟಲಿ, ಜಪಾನ್, ಅಮೆರಿಕ ಸಂಯುಕ್ತ ಸಂಸ್ಥಾನ-ಇವು ಡಿಸೆಂಬರ್ ತಿಂಗಳಲ್ಲಿ ಪರಸ್ಪರ ಸಮಾಲೋಚನೆ ನಡೆಸಿದವು. ಪ್ರಥಮ ಸಕಲ ಸದಸ್ಯ ಸಭೆ ಸಮಾವೇಶಗೊಂಡದ್ದು 1919 ರ ಜನವರಿ 18 ರಂದು. ಜನವರಿ 12 ರಂದು ಸರ್ವೋಚ್ಚ ಯುದ್ಧ ಮಂಡಲಿಯ ಸಭೆ ಪ್ಯಾರಿಸಿನಲ್ಲಿ ಸೇರಿತ್ತು. ಬ್ರಿಟನ್, ಫ್ರಾನ್ಸ್, ಇಟಲಿ, ಅಮೆರಿಕಗಳ ಪ್ರತಿನಿಧಿಗಳಿಂದ ಕೂಡಿದ ಮಂಡಲಿಯಿದು. ಸಮ್ಮೇಳನದ ಸರ್ವೊಚ್ಚ ಮಂಡಲಿಗೆ ಜಪಾನನ್ನೂ ಸೇರಿಸಬಹುದೆಂಬುದು ಈ ಮಂಡಲಿಯ ಸಭೆಯ ಮುಖ್ಯ ತೀರ್ಮಾನ.
ಶಾಂತಿಯ ಷರತ್ತುಗಳನ್ನು ನಿರ್ಣಯಿಸುವ ಕಾರ್ಯದಲ್ಲಿ ಭಾಗವಹಿಸುವ ಬಯಕೆ ಹಲವು ರಾಷ್ಟ್ರಗಳಿಗಿತ್ತು. ಕೇಂದ್ರಶಕ್ತಿಗಳ ವಿರುದ್ಧ ಹೋರಾಡಿದ ಬೆಲ್ಚಿಯಮ್, ಸರ್ಬಿಯ, ರುಮೇನಿಯ, ಗ್ರೀಸ್ ಮತ್ತು ಇತರ ರಾಜ್ಯಗಳಿಗೆ ಮತ ಚಲಾಯಿಸುವ ಅಧಿಕಾರ ನೀಡಲಾಯಿತು. ಯುದ್ಧದಲ್ಲಿ ತಟಸ್ಥವಾಗಿದ್ದರೂ ಶಾಂತಿಯ ಕೌಲು ರೂಪಿತವಾಗುವಾಗ ತಮ್ಮ ಹಿತಗಳನ್ನು ರಕ್ಷಿಸಿಕೊಳ್ಳಬಯಸಿದ ರಾಜ್ಯಗಳೂ ಇದ್ದುವು. ಇವಕ್ಕೆಲ್ಲ ಪ್ರಮುಖ ಸ್ಥಾನ ನೀಡುವುದಂತೂ ಅಸಾಧ್ಯವಾಗಿತ್ತು. ಈ ರಾಜ್ಯಗಳ ಹಿಡಿತಗಳಿಗೆ ಸಂಬಂಧಿಸಿದ ಪ್ರಶ್ನೆ ಚರ್ಚೆಯಾಗುವಾಗ ಇವುಗಳ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿರಲು ಅವಕಾಶ ನೀಡಲಾಯಿತು. ಪಂಚ ಪ್ರಮುಖ ರಾಜ್ಯಗಳು ಈ ಪ್ರಶ್ನೆಯನ್ನು ಇತ್ಯರ್ಥ ಮಾಡಲು ಸಾಕಷ್ಟು ಸಮಯ ತೆಗೆದುಕೊಂಡವು. ವಿವಿಧ ರಾಜ್ಯಗಳ ಸೇನಾಬಲ, ಯುದ್ಧದಲ್ಲಿ ಅವುಗಳ ಪಾತ್ರ ಇವುಗಳಿಗೆ ಅನುಗುಣವಾಗಿ ಸ್ಥಾನಗಳನ್ನು ನಿಗದಿ ಮಾಡಲಾಯಿತು. ಸಕಲ ಸದಸ್ಯ ಸಭೆಯಲ್ಲಿ ಐದು ಪ್ರಧಾನ ರಾಜ್ಯಗಳಿಗೆ ತಲಾ ಐದು, ಬೆಲ್ಜಿಯಮ್, ಸರ್ಬಿಯ, ಬ್ರಜಿಲ್‍ಗಳಿಗೆ ತಲಾ ಮೂರು, ಕೆನಡ, ಆಸ್ಟ್ರೇಲಿಯ, ದಕ್ಷಿಣ ಅಫ್ರಿಕ, ಭಾರತ, ಚೀನ, ಚೆಕೊಸ್ಲೊವಾಕಿಯ, ಪೋಲೆಂಡ್, ಗ್ರೀಸ್, ಹೆಜಾಜ್, ಪೋರ್ಚುಗಲ್, ರುಮೇನಿಯ, ಸಯಾಮ್ (ಈಗಿನ ಥೈಲೆಂಡ್)ಗಳಿಗೆ ತಲಾ ಎರಡು: ನ್ಯೂಜಿಲೆಂಡ್, ಬೊಲಿವಿಯ, ಕ್ಯೂಬ, ಎಕ್ವಡಾರ್, ಗ್ವಾಟೆಮಾಲ, ಹೈಟಿ, ಹಾಂಡುರಾಸ್, ಲೈಬೀರಿಯ, ನಿಕರಾಗ್ವ, ಪನಾಮಾ, ಪೆರು, ಉರುಗ್ವೆ ರಾಜ್ಯಗಳಿಗೆ ತಲಾ ಒಂದು-ಹೀಗೆ ಸ್ಥಾನಗಳು ನಿಗದಿಯಾದವು.
ಸಕಲ ಸದಸ್ಯ ಸಭೆ: ಜನವರಿ 18 ರಂದು ಪ್ರಥಮ ಸಕಲ ಸದಸ್ಯರ ಸಭೆ ಸೇರಿದಾಗ ಅದು ನಡೆಸಿದ ಕಲಾಪವೆಂದರೆ, ಸರ್ವೋಚ್ಚ ಮಂಡಳಿಯ ನಿರ್ಧಾರಗಳಿಗೆಲ್ಲ ಒಪ್ಪಿಗೆ ನೀಡುವುದು. ಫ್ರಾನ್ಸಿನ ಪ್ರಧಾನಿಯಾಗಿದ್ದ ಕ್ಲೇಮಾನ್ಸೋ ಅವರನ್ನು ಸಭೆಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಸರ್ವೋಚ್ಚ ಮಂಡಲಿಯಿಂದ ಮುಂಚೆಯೇ ಆರಿಸಲ್ಪಟ್ಟವರೊಬ್ಬರು ಮಹಾ ಕಾರ್ಯದರ್ಶಿಯಾಗಿ ನೇಮಕಗೊಂಡರು. ಐದು ಪ್ರಧಾನ ರಾಷ್ಟ್ರಗಳ ಪ್ರತಿನಿಧಿಗಳನ್ನೊಳಗೊಂಡ ಕೌಲು ರಚನಾ ಸಮಿತಿಯೊಂದನ್ನು ರಚಿಸಲಾಯಿತು. ಐದು ಪ್ರಮುಖ ರಾಷ್ಟ್ರಗಳೇ ಹೀಗೆ ಎಲ್ಲ ಅಧಿಕಾರವನ್ನೂ ತಮ್ಮಲ್ಲೇ ಇಟ್ಟುಕೊಂಡದ್ದು ಸಣ್ಣ ರಾಷ್ಟ್ರಗಳಿಗೆ ಹಿಡಿಸಲಿಲ್ಲ. ಆದರೆ ಅವುಗಳ ಪ್ರತಿಭಟನೆಯನ್ನು ದೊಡ್ಡ ರಾಷ್ಟ್ರಗಳು ಲೆಕ್ಕಿಸಲಿಲ್ಲ.
ಶಾಂತಿ ಸಮ್ಮೇಳನದ ಪ್ರಮುಖ ಕಾರ್ಯವೆಂದರೆ ಶಾಂತಿಯ ಸ್ಥಾಪನೆ. ಇದರ ಜೊತೆಗೆ ಅದು ಅತ್ಯಂತ ಪರಿಣಾಮಕಾರಿಯಾದ ಇನ್ನೂ ಹಲವಾರು ಹೊಣೆಗಳನ್ನು ನಿರ್ವಹಿಸಬೇಕಾಗಿತ್ತು. ಜರ್ಮನ್ ಸೇನೆಯ ಆಕ್ರಮಣದ ತೆರವು, ಜರ್ಮನಿಯಲ್ಲಿ ಬಂಧಿತರಾಗಿದ್ದ ಮಿತ್ರರಾಜ್ಯಗಳವರ ವಿಮೋಚನೆ, ನಿಗದಿಯಾದ ಶಸ್ತ್ರಾಸ್ತ್ರಗಳು, ವಿಮಾನಗಳು, ಕೃಷಿಯಂತ್ರ, ರೈಲ್ವೆ ಸಲಕರಣೆ ಮುಂತಾದವನ್ನು ಜರ್ಮನಿ ಒಪ್ಪಿಸುವುದು_ಮುಂತಾದವುಗಳ ಉಸ್ತುವಾರಿಯ ಹೊಣೆ ಮಿತ್ರ ರಾಜ್ಯಗಳ ಯುದ್ಧವಿರಾಮ ಆಯೋಗದ ಕಾರ್ಯಭಾರವಾಗಿತ್ತು. ಈ ಆಯೋಗಕ್ಕೆ ಯುಕ್ತ ಆದೇಶ ನೀಡುವುದೂಶಾಂತಿ ಸಮ್ಮೇಳನದ ಹೊಣೆ ಅಲ್ಲದೆ ಪೋಲೆಂಡ್, ಜರ್ಮನಿ, ಹಂಗರಿ, ಚೆಕೊಸ್ಲೊವಾಕಿಯ ಮತ್ತು ರುಮೇನಿಯ ರಾಜ್ಯಗಳ ಮೇಲೆ ಅಧಿಕಾರ ಚಲಾಯಿಸುವ ಮತ್ತು ಸರ್ವೋಚ್ಚ ಆರ್ಥಿಕ ಮಂಡಳಿಯನ್ನು ನಿಯಂತ್ರಿಸುವ ಜವಾಬ್ದಾರಿಯೂ ಶಾಂತಿ ಸಮ್ಮೇಳನದ್ದೇ ಆಗಿತ್ತು. ಸರ್ವೋಚ್ಚ ಆರ್ಥಿಕ ಮಂಡಳಿಯ ರಚನೆಯಾದ್ದು ಅಮೆರಿಕದ ಅಧ್ಯಕ್ಷ ವಿಲ್ಸನರ ಸಲಹೆಯ ಮೇರೆಗೆ, ಶಾಂತಿ ಸಂಧಾನಗಳು ಪೂರೈಸುವ ತನಕ ಕೈಗೊಳ್ಳಬೇಕಾದ ಆರ್ಥಿಕ ಕ್ರಮಗಳ ಬಗ್ಗೆ ಸಮ್ಮೇಳನಕ್ಕೆ ಸಲಹೆ ನೀಡುವುದೇ ಆರ್ಥಿಕ ಮಂಡಲಿಯ ಕೆಲಸ. ಯುದ್ಧದಿಂದ ನಾಶಗೊಂಡಿದ್ದ ಪ್ರದೇಶಗಳ ಪುನರ್ರಚನೆಗೆ ಅಗತ್ಯವಾದ ಸಾಮಗ್ರಿಯ ಪೂರೈಕೆ, ಕ್ಷಾಮಪೀಡಿತ ಪ್ರದೇಶಗಳಿಗೆ ಪರಿಹಾರ ನೀಡಿಕೆ, ಮಿತ್ರರಾಷ್ಟ್ರಗಳು ಆಕ್ರಮಿಸಿಕೊಂಡಿದ್ದ ಜರ್ಮನ್ ಪ್ರದೇಶಗಳ ಆರ್ಥಿಕ ನಿರ್ವಹಣೆ ಮುಂತಾದ ಮುಖ್ಯ ಕಾರ್ಯಭಾರಗಳನ್ನು ಆರ್ಥಿಕ ಮಂಡಲಿ ಕೈಗೊಂಡಿತು. ಈ ನಡುವೆ ಜರ್ಮನಿ ಪೋಲೆಂಡ್ ಚೆಕೊಸ್ಲೊವಾಕಿಯಗಳಲ್ಲಿ ಗಲಭೆಗಳಾಗುತ್ತಿದ್ದವು. ಹಂಗರಿ ರುಮೇನಿಯ ನಡುವೆಯೂ, ಚೆಕೊಸ್ಲೊವಾಕಿಯ ಮತ್ತು ಪೋಲೆಂಡ್ ನಡುವೆಯೂ ಸಣ್ಣ ಪುಟ್ಟ ವಾಜ್ಯಗಳಿದ್ದುವು. ಇವುಗಳ ಬಗ್ಗೆಯೂ ಶಾಂತಿ ಸಮ್ಮೇಳನ ಯುಕ್ತ ನಿರ್ಣಯ ಮಾಡಬೇಕಾಯಿತು.
ಸಮ್ಮೇಳನದಲ್ಲಿ ಪರಿಶೀಲನೆಗೆ ಒಳಗಾದ ಅಂಶಗಳು ಇವು:
1. ಯುದ್ಧದ ಹೊಣೆ ಮತ್ತು ಯುದ್ಧಕಾಲದಲ್ಲಿ ನಡೆದ ಅಕ್ರಮಗಳು ಮತ್ತು ಅತ್ಯಾಚಾರಗಳು. 2. ನಷ್ಟ ಪರಿಹಾರ, ಅಂತರ ರಾಷ್ಟ್ರೀಯ ಕಾರ್ಮಿಕ ಕಾನೂನು, 3. ಬಂದರುಗಳು, ಜಲಮಾರ್ಗಗಳು, ರೈಲುಮಾರ್ಗಗಳು. ಅಂತರರಾಷ್ಟ್ರೀಯ ನಿಯಂತ್ರಣ, 4. ಹಣಕಾಸಿನ ಪ್ರಶ್ನೆಗಳು, 5. ಆರ್ಥಿಕ ಪ್ರಶ್ನೆಗಳು, 6. ವಾಯುಯಾನ. 7. ನೌಕಾ ಮತ್ತು ಸೇನಾ ವ್ಯವಹಾರಗಳು. 8. ಪ್ರದೇಶಗಳನ್ನು ಕುರಿತ ಸಮಸ್ಯೆಗಳು. ಉದಾ. ಚೆಕೊಸ್ಲೊವಾಕಿಯ, ಪೋಲೆಂಡ್, ರುಮೇನಿಯ, ಯುಗೊಸ್ಲಾವಿಯ, ಗ್ರೀಸ್, ಅಲ್ಬೇನಿಯ, ಬೆಲ್ಜಿಯಮ್, ಡೆನ್‍ಮಾರ್ಕ್, ಸಾರ್‍ಪ್ರದೇಶ, ಅಲ್ಸೇಸ್_ಲೊರೇನ್ ಪ್ರದೇಶ.
ಸಕಲ ಸದಸ್ಯರ ಸಭೆಯ ಎರಡನೆಯ ಅಧಿವೇಶನದ ಪ್ರಮುಖ ಕಲಾಪವೆಂದರೆ ರಾಷ್ಟ್ರಗಳ ಕೂಟದ (ಲೀಗ್ ಆಫ್ ನೇಷನ್ಸ್ಸ್) ಸ್ಥಾಪನೆಯನ್ನು ಕುರಿತದ್ದು. ಸರ್ವೋಚ್ಚ ಮಂಡಲಿಯ ಶಿಫಾರಸಿನಂತೆ ಇದಕ್ಕಾಗಿ ಒಂದು ಆಯೋಗದ ನೇಮಕವಾಯಿತು. ರಾಷ್ಟ್ರಗಳ ಕೂಟದ ಒಡಂಬಡಿಕೆಯನ್ನು ಸಮ್ಮೇಳನ ಚರ್ಚಿಸಿ ನಿರ್ಣಯಿಸಿದ್ದು ಸಮ್ಮೇಳನದ ಒಂದು ಪ್ರಮುಖ ಸಾಧನೆ.
ಆದರೆ ಫ್ರಾನ್ಸ್, ಬ್ರಿಟನ್, ಇಟಲಿ, ಅಮೆರಿಕ ಈ ನಾಲ್ಕು ದೇಶಗಳೇ ಅನೇಕ ಪ್ರಶ್ನೆಗಳನ್ನು ಇತ್ಯರ್ಥ ಮಾಡಿ ಮಹಾಸಭೆಯ ಮುಂದೆ ಇಟ್ಟು ಜರ್ಮನಿಯನ್ನು ಸಂಪೂರ್ಣವಾಗಿ ನಿರ್ವೀರ್ಯಗೊಳಿಸಬೇಕೆಂಬುದು ಫ್ರಾನ್ಸಿನ ಇಚ್ಛೆಯಾಗಿತ್ತು. ರೈನ್ ಲ್ಯಾಂಡನ್ನೂ ಕೊಲೇನ್, ಕೊಬ್ಲಿನ್‍ಜ್ ಮತ್ತು ಮೇನ್ಸ್‍ನ ಹತೋಟಿಯನ್ನು ಮಿತ್ರರಾಷ್ಟ್ರಗಳ ವಶದಲ್ಲೇ ಮುಂದುವರಿಸಬೇಕೆಂಬುದಾಗಿ ಫ್ರಾನ್ಸ್ ವಾದಿಸಿತು. ಜರ್ಮನರು ತಮ್ಮ ಗಣಿಗಳನ್ನು ನಾಶಗೊಳಿಸಿದ್ದರಿಂದ ಇದಕ್ಕೆ ಪರಿಹಾರವಾಗಿ ಸಾರ್ ಪ್ರದೇಶ ಸಂಪೂರ್ಣವಾಗಿ ತಮ್ಮದಾಗಬೇಕೆಂದೂ ಫ್ರೆಂಚರು ವಾದಿಸಿದರು. ಡ್ಯಾನ್ ಜಿóಗ್ ಮತ್ತು ಅದರ ಮಾರ್ಗಗಳು ತನಗೆ ಸೇರಬೇಕೆಂಬ ಪೋಲೆಂಡಿನ ಬೇಡಿಕೆಯನ್ನೂ ಫ್ರಾನ್ಸ್ ಸಮರ್ಥಿಸಿತು.
ರೈನ್ ನದಿಯ ಎಡದಂಡೆಯೂ ಬಲದಂಡೆಯ ಒಂದು ವಿಶಾಲ ಭಾಗವೂ ನಿಸ್ಸೇನೀ ಕೃತವಾಗಬೇಕೆಂಬುದಾಗಿ ಒಪ್ಪಿಗೆಯಾಯಿತು. ಜರ್ಮನಿ ಆಸ್ಟ್ರಿಯಾಗಳು ಒಂದಾಗದಂತೆ ನಿಷೇಧ ವಿಧಿಸಲಾಯಿತು. ಸಾರ್ ಕಲ್ಲಿದ್ದಲು ಗಣಿ ಫ್ರಾನ್ಸಿಗೆ ಸೇರಬೇಕೆಂಬುದಕ್ಕೂ ಸಮ್ಮತಿ ದೊರಕಿತು. ಆದರೆ ಅಲ್ಲಿ ಆರೂವರೆ ಲಕ್ಷ ಜರ್ಮನರು ಇದ್ದದ್ದರಿಂದ ಹದಿನೈದು ವರ್ಷಗಳ ಕಾಲ ಆ ಪ್ರದೇಶ ರಾಷ್ಟ್ರಗಳ ಕೂಟದ ಹತೋಟಿಗೆ ಒಳಪಡಬೇಕೆಂದು ನಿರ್ಣಯಿಸಲಾಯಿತು. ಅನಂತರ ಆ ಪ್ರದೇಶದ ಜನರ ಅಭಿಪ್ರಾಯದಂತೆ ಅದರ ಭವಿಷ್ಯವನ್ನು ನಿರ್ಧರಿಸಬೇಕೆಂದೂ ತೀರ್ಮಾನಿಸಲಾಯಿತು.
ಯುದ್ಧ ಪರಿಹಾರದ ಸಮಸ್ಯೆಯನ್ನು ನಾಲ್ವರ ಮಂಡಲಿ ಸಮರ್ಪಕವಾಗಿ ತೀರ್ಮಾನಿಸಲಾಗಲಿಲ್ಲ. ಜರ್ಮನಿ ಸಂಪೂರ್ಣವಾಗಿ ನಿಶ್ಯಕ್ತವಾಗಿದ್ದದ್ದರಿಂದ ಭಾರಿ ಪರಿಹಾರ ನೀಡಬೇಕೆಂದು ಅದನ್ನು ಒತ್ತಾಯಿಸುವುದು ಸರಿಯಲ್ಲವೆಂಬುದು ಇಂಗ್ಲೆಂಡ್ ಮತ್ತು ಅಮೆರಿಕದ ಅಭಿಪ್ರಾಯವಾಗಿತ್ತು. ಆದರೆ, ಫ್ರಾನ್ಸಿನ ಅಭಿಪ್ರಾಯವನ್ನೇ ಒಪ್ಪಬೇಕಾಯಿತು. ಜರ್ಮನಿಯ ಸಾಮಥ್ರ್ಯಕ್ಕೆ ಅನುಗುಣವಾದ ಪರಿಹಾರವನ್ನು ಅದರಿಂದ ಪಡೆಯಲೇಬೇಕೆಂದು ತೀರ್ಮಾನಿಸಲಾಯಿತು.
ಡ್ಯಾನ್‍ಜಿಗ್ ರಾಷ್ಟ್ರಗಳ ಕೂಟದ ರಕ್ಷಣೆಯಲ್ಲಿ ಸ್ವತಂತ್ರ ನಗರವಾಗಿರತಕ್ಕದ್ದೆಂದೂ ಆದರೆ, ಪೋಲೆಂಡಿನಿಂದ ಬಾಲ್ಟಿಕ್ ಸಮುದ್ರಕ್ಕೆ ಪ್ರವೇಶ ದೊರಕಬೇಕೆಂದೂ ತೀರ್ಮಾನಿಸಲಾಯಿತು.
ಹೀಗೆ ಪ್ರಮುಖ ಮಿತ್ರ ರಾಷ್ಟ್ರಗಳು ತಂತಮ್ಮಲ್ಲೇ ಬಹುತೇಕ ಪ್ರಶ್ನೆಗಳ ಇತ್ಯರ್ಥ ಮಾಡಿಕೊಂಡ ಮೇಲೆ ಏಪ್ರಿಲ್ 25 ರಂದು ವರ್ಸೇಲ್ಸ್‍ನಲ್ಲಿ ಹಾಜರಾಗಲು ಜರ್ಮನಿಯ ಪ್ರತಿನಿಧಿಗಳಿಗೆ ಆಹ್ವಾನ ನೀಡಲಾಯಿತು. ಈ ನಡುವೆ ಇಟಲಿ, ಬೆಲ್ಜಿಯಮ್, ಯುಗೋಸ್ಲಾವಿಯ ಮತ್ತು ಜಪಾನ್ ದೇಶಗಳು ಕೆಲವು ತಕರಾರುಗಳನ್ನು ಹಾಕಿದವು. ಅದನ್ನೂ ಪರಿಹರಿಸಲಾಯಿತು.
ವರ್ಸೇಲ್ಸ್ ಕೌಲು: ಜರ್ಮನಿಯೊಂದಿಗೆ ಕೌಲಿನ ಕರಡನ್ನು ಜರ್ಮನಿಯ ಮುಖ್ಯ ಪ್ರತಿನಿಧಿಯಾದ ಕೌಂಟ್ ಅರ್ಲಿಜ್ ಫಾನ್ ಬ್ರೊಕ್‍ಡೋರ್ಫ್ - ರಾಂಟ್‍ಸೌಗೆ 1919 ರ ಮೇ 7 ರಂದು ಟೈಯನಾನ್‍ನಲ್ಲಿ ಒಪ್ಪಿಸಲಾಯಿತು. ಜರ್ಮನ್ ಪ್ರತಿನಿಧಿ ಈ ಕೌಲಿನ ಷರತ್ತಗಳನ್ನು ಪ್ರಬಲವಾಗಿ ವಿರೋಧಿಸಿದರು. ಕಳೆದ ಆರು ತಿಂಗಳುಗಳಲ್ಲಿ ಜರ್ಮನಿಯ ದಿಗ್ಬಂಧನದಿಂದಾಗಿ ಹಲವು ಸಹಸ್ರ ಮಂದಿ ಮಡಿದಿದ್ದಾರೆ. ಅಪರಾಧ ಮತ್ತು ಶಿಕ್ಷೆಯ ಮಾತಾಡುವ ನೀವು ಇದನ್ನು ಕುರಿತು ಯೋಚಿಸಬೇಕು ಎಂದರು. ಯುದ್ಧ ನಿಲುಗಡೆ ಒಪ್ಪಂದದಲ್ಲಿ ಸಮ್ಮತಿಸಲಾದ ಹೊಣೆಗಳನ್ನು ನಿರ್ವಹಿಸಲು ತಾವು ಒಪ್ಪುವುದಾಗಿಯೂ ಬೆಲ್ಜಿಯಮ್ ಮತ್ತು ಫ್ರಾನ್ಸಿನಲ್ಲಿ ನಾಶವಾದ ಪ್ರದೇಶಗಳ ಪುನರ್ ವ್ಯವಸ್ಥೆಗಾಗಿ ತಾವು ಹೊಣೆ ಎಂದೂ ಹೇಳಿದರು. ಆದರೆ, ದ್ವೇಷದ ಆಧಾರದ ಮೇಲೆ ರಚಿತವಾದ ಕೌಲು ಇದು ಎಂಬುದು ಅವರ ಭಾವನೆಯಾಗಿತ್ತು. ಯುದ್ಧ ಪರಿಹಾರ ಬಲು ಭಾರವೆಂದೂ ಪೂರ್ವಭಾವಿ ಒಪ್ಪಂದಕ್ಕೆ ಇದು ವಿರುದ್ಧವಾಗಿದೆ ಎಂದೂ ಜರ್ಮನರು ವಾದಿಸಿದರು. ಆದರೆ, ಮಿತ್ರರಾಷ್ಟ್ರಗಳು ಈ ವಾದವನ್ನೆಲ್ಲ ತಳ್ಳಿ ಹಾಕಿದರು. ಜೂನ್ 28 ರಂದು ವರ್ಸೇಲ್ಸ್‍ನಲ್ಲಿ ಕೌಲಿನ ಸಹಿಯಾಯಿತು.
ಸಮ್ಮೇಳನದ ಇನ್ನೊಂದು ಪ್ರಮುಖ ತೀರ್ಮಾನವೆಂದರೆ ಜರ್ಮನಿಗೆ ಸೇರಿದ ವಸಾಹತುಗಳನ್ನು ಕುರಿತದ್ದು. ಜರ್ಮನ್ ಸಾಮ್ರಾಜ್ಯವೆಲ್ಲ ಕಳೆದು ಹೋಯಿತು. ಅದರ ಹಲವು ಪ್ರದೇಶಗಳ ಆಡಳಿತವನ್ನು ಇತರ ಪ್ರಮುಖ ಯೂರೋಪಿಯನ್ ದೇಶಗಳು ವಹಿಸಿಕೊಂಡವು. ರಾಷ್ಟ್ರಗಳ ಕೂಟದ ಪರವಾಗಿ ಇವು ಆಡಳಿತ ನಡೆಸುವ ವ್ಯವಸ್ಥೆ ರೂಪಿತವಾದ್ದು ಈ ಸಮ್ಮೇಳನದಲ್ಲೇ. (ಎಚ್.ಎಸ್.ಕೆ.)