ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರಕೃತಿ ಪೂಜೆ

ಪ್ರಕೃತಿ ಪೂಜೆ - ಪ್ರಾಕೃತಿಕ ಪ್ರಕ್ರಿಯೆಗಳನ್ನು, ಸಂಗತಿಗಳನ್ನು ಮೆಚ್ಚಿಗೆ ಭಯ ಪ್ರೀತಿ ಆಥವಾ ಹೆದರಿಕೆಯಿಂದ ಗೌರವಿಸುವುದು ಮತ್ತು ಪ್ರಾಕೃತಿಕ ಮಿತಿಗೊಳಪಡುವ ನಿಲುವು, ವ್ರತ, ಪದ್ಧತಿ, ಕ್ರಿಯಾವಿಧಾನಗಳನ್ನು ರೂಪಿಸಿಕೊಳ್ಳುವುದು. ಪ್ರಕೃತಿ ತಾನೇ ತಾನಾಗಿರುವ ಒಂದು ಪದಾರ್ಥವಾಗಿದ್ದು ಜೀವನದ ಮೇಲೆ ಪ್ರಭಾವ ಬೀರುತ್ತದೆ-ಎಂಬ ಕಲ್ಪನೆಯೇ ಪ್ರಕೃತಿ ಪೂಜೆಯ ಹಿಂದಿರುವ ತತ್ತ್ವ. ಪ್ರಕೃತಿ ಪೂಜಕರು ಪ್ರಕೃತಿಯನ್ನು ಪವಿತ್ರವಾದ ಪೂರ್ಣತೆ ಎಂದು ದ್ಯಾವಾಪೃಥ್ವಿಗಳನ್ನು ಪವಿತ್ರ ಪ್ರದೇಶಗಳೆಂದು ಭೌತಿಕ ಬಲಗಳನ್ನು, ಖಗೋಳ ಪ್ರಕ್ರಿಯೆಗಳನ್ನು ಪೂಜಾರ್ಹ ಸಂಗತಿಗಳೆಂದು ಭಾವಿಸುತ್ತಾರೆ. ನೀರು, ಬೆಂಕಿ, ಗಾಳಿ, ಮರ, ಪ್ರಾಣಿ, ಕಲ್ಲು ಪ್ರತಿಮೆ, ಕನ್ನಡಿ ಮೊದಲಾದವುಗಳೂ ಇವರಿಗೆ ಪೂಜಾರ್ಹವಾದವು.

ಪವಿತ್ರ ಪ್ರದೇಶಗಳು: ಮುಸ್ಲಿಮರಿಗೆ ಮೆಕ್ಕಾ, ಹಿಂದೂಗಳಿಗೆ ಕಾಶಿ, ಗ್ರೀಕರಿಗೆ ಇಡಾಪರ್ವತ, ಕ್ರಿಶ್ಚಿಯನ್ನರಿಗೆ ಬೆತ್ಲೆಹೆಮ್ ಪ್ರದೇಶಗಳು ಗೌರವಾರ್ಹವಾದವು.

ಪವಿತ್ರ ತೀರ್ಥಗಳು: ಇಂಗ್ಲಿಷರಿಗೆ ತೇಮ್ಸ್, ಈಜಿಪ್ಷನ್ನರಿಗೆ ನೈಲ್, ಭಾರತೀಯರಿಗೆ ಗಂಗಾ ನದಿಗಳು ಆದರಣೀಯವಾದವು.

ಪವಿತ್ರ ಪ್ರಾಣಿಗಳು: ತೆಸಲಿಯನ್ನರು ಇರುವೆ ಮತ್ತು ಕೊಕ್ಕರೆಗಳನ್ನು ಭಾರತೀಯರು ಹಸುವನ್ನು ಆತೀನಿಯನ್ನರು ಗೂಬೆಯನ್ನು ತೀಬ್ಸಿನವರು ವೀಸೆಲ್ ಎಂಬ ಪ್ರಾಣಿಯನ್ನು ಪವಿತ್ರ ಪ್ರಾಣಿಗಳೆಂದು ಭಾವಿಸುತ್ತಾರೆ.

ಪವಿತ್ರ ಮರಗಳು: ಲಾರೆಲ್, ಡೇಲಿಯನ್, ಸ್ಟ್ರಾಬೆರಿ ಮರಗಳನ್ನು, ಗ್ರೀಕರು; ಕ್ರಿಸ್‍ಮಸ್ ಮರವನ್ನು ಕ್ರಿಶ್ಚಿಯನ್ನರು; ಆಶ್ವತ್ಥವನ್ನು ಭಾರತೀಯರು; ಸರಾಕಿ ಮರವನ್ನು ಜಪಾನೀಯರು ಗೌರವಿಸುತ್ತಾರೆ. ಪವಿತ್ರ ಬಲಗಳು: ನೀರು, ಗಾಳಿ ಭಾರತೀಯರಿಗೆ; ಬೆಂಕಿ ಪಾರಸಿಗಳಿಗೆ; ಸುತ್ತು ಭಾರತೀಯರಿಗೆ ಸೂರ್ಯಶಕ್ತಿ ಜಪಾನೀಯರಿಗೆ ಪವಿತ್ರ ಬಲಗಳು.

ಪವಿತ್ರ ಪ್ರಕ್ರಿಯೆಗಳು: ಗ್ರಹಣಗಳು, ಸಂಕ್ರಮಣಗಳು, ಹುಣ್ಣಿಮೆ, ಅಮಾವಾಸ್ಯೆಗಳು ಭಾರತೀಯರಿಗೆ; ಋತುಗಳು ವಿಶ್ವದ ಎಲ್ಲ ಜನರಿಗೆ; ಚಂದ್ರನ ಚಲನವಲನಗಳು ಮುಸ್ಲಿಮರಿಗೆ ಪವಿತ್ರ ಪ್ರಕ್ರಿಯೆಗಳು. ಈ ಸಂದರ್ಭದಲ್ಲಿ ಇವರು ವ್ರತಗಳನ್ನು, ಹಬ್ಬಗಳನ್ನು ಆಚರಿಸುವರು.

ಪವಿತ್ರ ಕಲ್ಲುಗಳು: ಫರೈ ಪ್ರದೇಶದ ಜನ ಅಕೈಯದಲ್ಲಿರುವ ಚಚ್ಚೌಕಾರವಾಗಿರುವ, ವಿಶಿಷ್ಟವಾಗಿರುವ ಮೂವತ್ತು ಕಲ್ಲುಗಳನ್ನು ಪೂಜಿಸುತ್ತಾರೆ. ಚಾಕೋಬ ದಿಂಬಿನಂತೆ ಉಪಯೋಗಿಸುವ ಪವಿತ್ರ ಕಂಬವೊಂದನ್ನು ಪವಿತ್ರ ಕಂಬವೆಂದು ಗ್ರೀಕರು ಗೌರವಿಸುತ್ತಾರೆ. ಆರ್ಕೇಡಿಯನ್ನರು ಜ್ಯೂಸ್ ದೇವತೆಯ ಹೆಸರಿನಲ್ಲಿ ಬಲಿಪೀಠವನ್ನು ಪೂಜಿಸುತ್ತಾರೆ.

ಪವಿತ್ರ ಪ್ರತಿಮೆಗಳು: ಮೇರಿಯ ಪ್ರತಿಮೆಯನ್ನು ಕ್ರಿಶ್ಚನ್ನರು; ಕೃಷ್ಣನ ಪ್ರತಿಮೆಯನ್ನು ಭಾರತೀಯರು; ಜ್ಯೂಸ್ ದೇವತೆಯ ಪ್ರತಿಮೆಯನ್ನು ಗ್ರೀಕರು ಆರಾಧಿಸುತ್ತಾರೆ.

ಪವಿತ್ರ ಕನ್ನಡಿ: ದೇವತೆಗಳು ಸ್ವರ್ಗದ ನದಿಯಿಂದ ಆರಿಸಿ ತಂದ ಕಲ್ಲು ಮತ್ತು ಲೋಹ ಪರ್ವತದಿಂದ ತಂದ ಕಬ್ಬಿಣಗಳಿಂದ ಮಾಡಿದ ಕನ್ನಡಿಯ ಪ್ರತೀಕವಾಗಿ ಟೋಕಿಯೊ ಅರಮನೆಯಲ್ಲಿ ಭದ್ರವಾದ ಕಟ್ಟುಗಳಿಂದ ಪೆಟ್ಟಿಗೆಯಲ್ಲಿ ಯಾರಿಗೂ ಕಾಣದಂತೆ ಇರುವ ಸೂರ್ಯಕನ್ನಡಿಯನ್ನು ಜಪಾನೀಯರು ಗೌರವಾಧರಗಳಿಂದ ಕಾಣುತ್ತಾರೆ. ಯಾಂತ್ರಿಕ ಬದುಕಿನಲ್ಲಿ ಉತ್ಸಾಹವನ್ನು ತುಂಬಲು ಪ್ರಯತ್ನಿಸುವ ಪ್ರಕೃತಿ ಪೂಜೆ ಈಗಲೂ ಪ್ರಾಮುಖ್ಯ ಪಡೆದಿರುವುದು ಕಂಡು ಬಂದಿದೆ. (ಪಿ.ಎಚ್.ಇ.)