ಪ್ರಕ್ಲೇದನ - ಸ್ಪಟಿಕ ರೂಪದ ಘನ ವಸ್ತುವನ್ನು ವಾಯುವಿಗೆ ಒಡ್ಡಿದಾಗ, ವಾಯುವಿನಲ್ಲಿ ಇರುವ ನೀರಿನ ಆವಿಯನ್ನು ಹೀರಿಕೊಂಡು, ಅಂತಿಮವಾಗಿ ಘನ ಪರ್ಯಾಪ್ತ ದ್ರಾವಣವಾಗಿ ಕರಗಿ ಹೋಗುವ ಪ್ರವೃತ್ತಿ (ಡೆಲಿಕ್ವೆಸೆನ್ಸ್). ಉದಾಹರಣೆಗೆ ಕ್ಯಾಲ್ಸಿಯಮ್ ಕ್ಲೋರೈಡ್, ಫೆರಿಕ್ಲೋರೈಡ್, ಕ್ಯಾಲ್ಸಿಯಮ್ ನೈಟ್ರೇಟ್, ಮೆಗ್ನೀಸಿಯಮ್ ಕ್ಲೋರೈಡ್, ಸೋಡಿಯಮ್ ಹೈಡ್ರಾಕ್ಸೈಡ್, ಪರ್ಯಾಪ್ತ ದ್ರಾವಣದ ಆವಿ ಒತ್ತಡ ವಾಯುವಿನಲ್ಲಿಯ ನೀರಾವಿ ಒತ್ತಡಕ್ಕಿಂತಲೂ ಕಡಿಮೆಯಾಗಿದ್ದರೆ. ದ್ರಾವಣ ನೀರನ್ನು ಹೀರಿಕೊಳ್ಳುತ್ತ ಹೋಗುವುದು. ದ್ರಾವಣದ ಆವಿ ಒತ್ತಡ ವಾಯುವಿನ ನೀರಾವಿ ಒತ್ತಡಕ್ಕೆ ಸಮವಾದಾಗ ಈ ಕ್ರಿಯೆ ನಿಲ್ಲುತ್ತದೆ. ಕೆಲವು ವಸ್ತುಗಳಿಗೆ ಈ ಗುಣವಿರುವುದರಿಂದ ಅವನ್ನು ವಾಯು ಸಂಚಾರಕ್ಕೆ ಎಡೆಯಿಲ್ಲದ ಪಾತ್ರೆಗಳಲ್ಲಿ ಇಡಬೇಕಾಗುತ್ತವೆ. ಉಪ್ಪಿನಲ್ಲಿ ಸಾಮಾನ್ಯವಾಗಿ ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಮ್ ಕ್ಲೋರೈಡುಗಳ ಕಲ್ಮಷವಿರುವುದರಿಂದ ಅದನ್ನು ಸುಲಭವಾಗಿ ಸುರಿಯಲು ಆಗುವುದಿಲ್ಲ. ಜಲಾಂಶವನ್ನು ತೆಗೆಯಲು ಸಹ ಈ ಗುಣದ ಉಪಯೋಗವಿದೆ. ಕೊಠಡಿಯ ಒಂದು ಭಾಗದಲ್ಲಿ ಕ್ಯಾಲ್ಸಿಯಮ್ ಕ್ಲೋರೈಡನ್ನು ಇಟ್ಟರೆ ಅದು ಕೊಠಡಿಯಲ್ಲಿರುವ ಜಲಾಂಶವನ್ನು ಹೀರಿಕೊಳ್ಳುತ್ತದೆ.

ಪ್ರಸ್ಫುಟನ: ಸಜಲ (ಹೈಡ್ರೇಜನ್) ಹರಳುಗಳನ್ನು ವಾಯುವಿಗೆ ಒಡ್ಡಿದಾಗ ಅವು ತಮ್ಮಲ್ಲಿರುವ ನೀರಿನ ಅಂಶವನ್ನು ಕಳೆದುಕೊಂಡು ಪುಡಿಪುಡಿಯಾಗುವ ಪ್ರವೃತ್ತಿ (ಎಫೋರೆಸೆನ್ಸ್). ಇದಕ್ಕೆ ಕಾರಣ ಈ ಸಜಲ ವಸ್ತುಗಳ ಭಿನ್ನಾಂಶ ಒತ್ತಡ ವಾಯುವಿನ ನೀರಾವಿ ಒತ್ತಡಕ್ಕಿಂತಲೂ ಹೆಚ್ಚಾಗಿರುವದೋ ಉದಾಹರಣೆಗೆ: ಸೋಡಿಯಮ್ ಕಾರ್ಬೋನೇಟ್ Na2CO3. 20H2o . ಸೋಡಿಯಮ್ ಸಲ್ಫೇಟ್ Na2SO4.10H2o ಇಂಥ ಹರಳುಗಳಲ್ಲಿ ಇರುವ ನೀರಿನ ಅಂಶವನ್ನು ಆಯಾ ಹರಳುಗಳ ರಸಾಯನಿಕ ಸೂತ್ರ ಪಕ್ಕದಲ್ಲಿ ಸೂಚಿಸುವುದು ರೂಢಿ. (ಎನ್.ಎಸ್.ಕೆ.)