ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರಜ್ಞಾಪಾರಮಿತಾ

ಪ್ರಜ್ಞಾಪಾರಮಿತಾ - ಮಹಾಯಾನ ಸೂತ್ರಗಳಲ್ಲಿ ಪ್ರಾಚೀನವೆನಿಸಿದಂಥವು. ದಕ್ಷಿಣ ಭಾರತದಲ್ಲಿ ಅವತರಿಸಿ ಅನಂತರ ಪೂರ್ವ ದಿಗ್ಭಾಗಕ್ಕೂ ಉತ್ತರ ದೇಶಕ್ಕೂ ಹರಡಿದುವು. ಕ್ರಿ.ಶ. 178ರ ಸುಮಾರಿಗೇ ಒಂದು ಪ್ರಜ್ಞಾಪಾರಮಿತಾ ಸೂತ್ರವನ್ನು ಚೀನೀ ಭಾಷೆಗೆ ಪರಿವರ್ತಿಸಿದ್ದರು. ಭಾರತದಲ್ಲೆ ಹತ್ತಾರು ಇಂಥ ಸೂತ್ರಗಳಿದ್ದುವು. ಚೀನ ಮತ್ತು ಟಿಬೆಟ್‍ಗಳಲ್ಲಿ ಈ ಸೂತ್ರಗಳ ಸಂಖ್ಯೆ ಇನ್ನೂ ಹೆಚ್ಚಿತು. ಅಷ್ಟಸಾಹಸ್ರಿಕಾ, ಶತಸಾಹಸ್ರಿಕಾ, ಪಂಚವಿಂಶತಿಸಾಹಸ್ರಿಕಾ, ಸಪ್ತಶತಿಕಾ ಮುಂತಾದ ಪ್ರಜ್ಞಾಪಾರಮಿತಾಗ್ರಂಥಗಳಲ್ಲಿ ಪ್ರಜ್ಞಾಪಾರಮಿತೆ ಸಮಸ್ತ ಜಗತ್ತಿಗೂ ಮಾತೆಯೆಂಬ ಕಲ್ಪನೆಯಿದೆ. ಮಹಾಯಾನದ ಪ್ರಮುಖ ದಾರ್ಶನಿಕರಾದ ನಾಗಾರ್ಜುನ, ವಸುಬಂಧು, ಅಸಂಘ ಮುಂತಾದವರು ಪ್ರಜ್ಞಾಪಾರಮಿತಾ ಸೂತ್ರಗಳ ಮೇಲೆ ವ್ಯಾಖ್ಯೆಗಳನ್ನು ಬರೆದಿದ್ದಾರೆ. ಬೋಧಿಸತ್ತ್ವರು ಪೂರೈಸುವ ಪಾರಮಿತಗಳಲ್ಲಿ ಶ್ರೇಷ್ಠವಾದುದೇ ಪ್ರಜ್ಞಾಪಾರಮಿತೆ. ಇದನ್ನು ದೇವತೆಯೆಂದು ಚಿತ್ರಿಸಿದ್ದಾರೆ. ಪ್ರಜ್ಞೆ ದಡಮುಟ್ಟಿತೆಂದೂ (ಪಾರಂ ಇತಾ) ಪ್ರಜ್ಞಾಪಾರಮಿತಾ ಎಂಬ ಪದದ ಅರ್ಥವೆಂದು ಹೇಳುತ್ತಾರೆ.

ಲೋಕೋತ್ತರವಾದ ನೆಲೆಯಲ್ಲಿ ಶೂನ್ಯತೆಯ ಸಮುದ್ರದಾಚೆ ದಡದಲ್ಲಿ ಶಾಶ್ವತವಾದ ಪ್ರಜ್ಞೆ ಪ್ರತಿಷ್ಠಿತವಾಗಿದೆಯೆಂದೂ, ಬುದ್ಧರ ಬುದ್ಧತ್ವದ ಸಾರವೇ ಈ ಪ್ರಜ್ಞೆಯೆಂದೂ, ನಿರ್ವಾಣದ ಲಾಭದಿಂದ ಇದು ಗಮ್ಯವಾಗುವುದೆಂದು ಮಹಾಯಾನದವರ ಕಲ್ಪನೆ. ಈ ದೃಷ್ಟಿಯಿಂದ ಇಂಥ ಪಾರಮಿತಪ್ರಜ್ಞೆಯ ಮೂರ್ತಿಯೇ ಪ್ರಜ್ಞಾಪಾರಮಿತೆ. ತಾಂತ್ರಿಕ ಪಂಥದಲ್ಲಿ ಲೋಕೇಶ್ವರನಾದ ಆದಿಬುದ್ಧನ ಶಕ್ತಿಯೇ ಪ್ರಜ್ಞಾಪಾರಮಿತೆ; ವಿಷ್ಣುವಿಗೆ ಲಕ್ಷ್ಮಿಯಿದ್ದಂತೆ. ಬೌದ್ಧರ ಮಾರ್ಗಕ್ಕೆ ಈಕೆಯೇ ಅಧಿಷ್ಠಾತೃ ದೇವತೆ, ಫಲದಾಯಿನಿ. (ಎಸ್.ಕೆ.ಆರ್.).