ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರಜ್ಞಾ ಪ್ರವಾಹ ತಂತ್ರ

ಪ್ರಜ್ಞಾ ಪ್ರವಾಹ ತಂತ್ರ - ಕಾದಂಬರಿಯಲ್ಲಿ ಪಾತ್ರದ ಮಾರ್ಮಿಕ ಪರಿಚಯವನ್ನು ಒದಗಿಸಿಕೊಡುವುದಕ್ಕೆ ಆಧುನಿಕ ಲೇಖಕರು ಬಳಸಿಕೊಳ್ಳುವ ಉಪಾಯಗಳಲ್ಲಿ ಒಂದು (ಸ್ಟ್ರೀಮ್ ಆಫ್ ಕಾನ್ಷಸ್‍ನೆಸ್). ಪಾತ್ರದ ಅಂತರ್ಯದಲ್ಲಿ ಎಡೆಬಿಡದೆ ಹರಿದು ಹೋಗುವ ಆಲೋಚನೆ ನೆನಪು ಭಾವ ಮುಂತಾದವುಗಳ ಪ್ರವಾಹಕ್ಕೆ ರೂಪವನ್ನೀಯುವುದು ಇದರ ಉದ್ದೇಶ ಹಾಗೂ ಸಾಧನೆ. ಆ ಪ್ರವಾಹ ವೇಗವಾದದ್ದು. ವಿವಿಧ ಅಂಶಗಳಿಂದ ಸಂಕೀರ್ಣವಾದದ್ದು. ಆದರೆ ಕ್ರಮಬದ್ಧವಾದದ್ದಲ್ಲ. ಹೊರಗಣ ತೋರ್ಕೆಗೆ ಯದ್ವಾತದ್ವವಾಗಿ ಕಾಣುವಂಥಾದ್ದು. ಈ ರಚನಾ ಪದ್ಧತಿಯನ್ನು ವಿಶೇಷ ಶ್ರದ್ಧೆಯಿಂದ ಉಪಯೋಗಿಸಿ ಅದರ ಪೋಷಕನೆಂಬ ವಿಖ್ಯಾತಿಯನ್ನು ಪಡೆದಾತ ಇಂಗ್ಲೆಂಡಿನ "ಜೇಮ್ಸ್ ಜಾಯ್ಸ್". ಅವನ ಯೂಲಿಸಿಸ್ ಕಾದಂಬರಿ 1922ರಲ್ಲಿ ಪ್ರಕಟಗೊಂಡು ಪಾಠಕ ಪ್ರಪಂಚವನ್ನು ಬೆರಗುಗೊಳಿಸಿತು, ತಲ್ಲಣಗೊಳಿಸಿತು. ಆದರೆ ಪ್ರಜ್ಞಾಪ್ರವಾಹ ಎಂಬ ಹೊಸ ಮಾರ್ಗದ ಜನಕ ಫ್ರೆಂಚರ ಎಡುಆರ್ಡ್ ದುಜಾರ್ಡಿನ್. ಎಲ್ಲರೂ ಒಪ್ಪಿಕೊಂಡಿರುವಂತೆ 1887ರಲ್ಲಿ ಅವನು ಬರೆದ ಲೆ ಲಾರಿಯರ್ ಸೋನ್ ಕೂಪೆ ಕಾದಂಬರಿಯಲ್ಲಿ ಉಪಯೋಗಿಸಲಾದ ನವೀನವಿಧಾನಕ್ಕೆ ಅವನೇ ಕೊಟ್ಟ ಹೆಸರು ಆಂತರಿಕಸ್ವಗತ ಭಾಷಣ (ಇಂಟೀರಿಯರ್ ಮಾನೊಲಾಗ್). ಪಾತ್ರದ ಜಾಗೃತ್ತಿನ ಆಳದ ಗಡಿಯಲ್ಲಿ ಸುಪ್ತಚೇತನದ ಅಂಚಿನ ಹತ್ತಿರ ನಾನಾ ಅಸ್ಪಷ್ಟ ಯೋಚನೆಗಳೂ ಸೂಕ್ಷ್ಮ ಸುಳಿದಾಟ ತುಯ್ತಗಳೂ ಇವೆ ಅಲ್ಲವೆ ? ಅವನ್ನು ಆಯಾ ಪಾತ್ರದ ಯಾವ ಸಂಭಾಷಣೆಯೂ ಸುಸ್ಪಷ್ಟವಾಗಿ ವ್ಯಕ್ತಗೊಳಿಸುವುದಿಲ್ಲ. ವ್ಯಕ್ತಗೊಳಿಸಲಾರದು. ಅವನ್ನು ಯಾರೂ ಕಿವಿಯಿಂದ ಕೇಳುವುದಿಲ್ಲ, ಕೇಳಲಾರರು. ಆದ್ದರಿಂದ ಅವುಗಳ ಗ್ರಹಿಕೆ ಓದುಗರಿಗೆ ಉಂಟಾಗಬೇಕಾದರೆ ಆಂತರಿಕ ಸ್ವಗತಭಾಷಣವೊಂದೇ ಉಪಾಯ.

ಪ್ರಜ್ಞಾ ಪ್ರವಾಹ ಎಂಬ ಪದಗುಚ್ಛ ಮನಶ್ಶಾಸ್ತ್ರದಿಂದ ಎರವಾಗಿ ಸಾಹಿತ್ಯಕ್ಕೆ ಬಂತು. ವಿಲಿಯಂ ಜೇಮ್ಸ್‍ನ ವಿವರಣೆಯಂತೆ, ಮನುಷ್ಯನ ಅನುಭವಪ್ರಜ್ಞೆಗೆ ನಿಶ್ಚಲತೆಯಿಲ್ಲ, ಸಮಾಪ್ತಿಯಿಲ್ಲ. ಏರುಪೇರಿನಿಂದ ಕೂಡಿದ ಪಥದಲ್ಲಿ ಅನಿರ್ಬಂಧವಾಗಿ ಅನಂತವಾಗಿ ಹರಿಯುವ ಒಂದು ಹೊಳೆ ಅದು. ಈ ಅಭಿಪ್ರಾಯ ಯುರೋಪಿನ ಲೇಖಕರಿಗೆ, ಅದರಲ್ಲೂ ಇತ್ತೀಚಿನ ಕಾದಂಬರಿಕಾರರಿಗೆ ಬಹು ಮೆಚ್ಚಿಕೆಯಾಯಿತು.

ಕೆಲವು ವಿಮರ್ಶಕರು ಸಾಹಿತ್ಯದಲ್ಲಿ ಇದೇನೂ ಹೊಸದಲ್ಲವೆಂದು ನುಡಿದಿದ್ದಾರೆ. 16-17ನೆಯ ಶತಮಾನದ ರೂಪಕಗಳಲ್ಲಿ ಕಾಣಬರುವ ಆತ್ಮಗತಭಾಷಣ (ಸಾಲಿಲೊಕ್ವಿ) ಇದೇ ಬಗೆಯಲ್ಲವೆ? 18ನೆಯ ಶತಮಾನದ ಕುಶಲಪತ್ರಗಳಲ್ಲೂ ಕೆಲವು ಪ್ರಬಂಧಗಳಲ್ಲೂ ಕಥೆಗಳಲ್ಲೂ ಪಾತ್ರಗಳು ಒಮ್ಮೊಮ್ಮೆ ತಮ್ಮೊಳಗಣ ಗೂಢಾನುಭವಗಳನ್ನು ವಚನಿಸುವ ಪ್ರಯತ್ನವನ್ನು ನಾವು ನೋಡುತ್ತೇವೆ. ಇರಬಹುದು. ಆದರೆ ಅದು ವಿಶಿಷ್ಟವೂ ಪರಿಣಾಮಕಾರಿಯೂ ಆದ ಕಲಾಹಂಚಿಕೆಯಾದದ್ದು ಇತ್ತೀಚೆಗೆ ಮಾತ್ರ. ಹಾಗಾಗುವುದಕ್ಕೆ ಪ್ರಬಲ ಕಾರಣವಿತ್ತು. 19ನೆಯ ಶತಮಾನದ ಉತ್ತರಾರ್ಧದಲ್ಲಿ ಜೀವವಿಜ್ಞಾನ ಹೆಚ್ಚಾಗಿ ಬೆಳದು. ಪ್ರಕೃತಿ ಮಾಡಿ ಆಡಿಸುವ ಕೀಲುಬೊಂಬೆಗಿಂತ ಮಾನವ ಅಧಿಕನಲ್ಲ ಎಂಬ ತತ್ತ್ವ ಪ್ರಚಾರಗೊಂಡಿತು. ಅದನ್ನು ತಳಹದಿಯಾಗಿ ಇಟ್ಟುಕೊಂಡು ಜೆóೂಲಾ ಮೊದಲಾದವರು ಅನೇಕ ಕಥೆ ಕಾದಂಬರಿಗಳನ್ನು ನಿರ್ಮಿಸಿದರು. ನಿರಾಶೆಯನ್ನು ಹುಟ್ಟಿಸುವ ಆ ತತ್ತ್ವಕ್ಕೆ ವಿರುದ್ಧವಾಗಿ ಮನುಷ್ಯ ತನ್ನ ಜೀವನಕ್ಕೆ ಬಹುಮಟ್ಟಿಗೆ ತಾನೇ ವಿಧಾಯಕನೆಂಬುದನ್ನು ಸಮರ್ಥಿಸಲು ಪ್ರಜ್ಞಾ ಪ್ರವಾಹದ ಅನುಯಾಯಿಗಳು ಹೋರಾಟ ನಡೆಸಿದರು. ಹೇಗೆ ಹೇಗೊ ಕಂಡು ಬಂದರೂ ಆಂತರ್ಯ ಪ್ರವಾಹಕ್ಕೆ ಏನೋ ಸಂವಿಧಾನವಿದೆ, ಯಾವುದೋ ಅರ್ಥವಿದೆ, ತೀಕ್ಷ್ಣ ಪರಿಶೋಧದಿಂದ ಅವನ್ನು ಗುರುತಿಸಿದರೆ ಲೋಕಕ್ಕೆ ಒಳ್ಳೆಯದು-ಎಂಬ ನಂಬಿಕೆ ಈಚೆಗೆ ಬಲಗೊಳ್ಳುತ್ತಿದೆ. (ಎಸ್.ವಿ.ಆರ್.)

ಕಾದಂಬರಿಕಾರನ ಪ್ರವೇಶವಿಲ್ಲದೆ ಪಾತ್ರದ ಅಂತರಾಳವನ್ನು ತೆರೆದಿಡುವ ಪ್ರಯತ್ನ ಪ್ರಜ್ಞಾ ಪ್ರವಾಹ ತಂತ್ರ. ಇದು ಆಂತರಿಕ ಸ್ವಗತ ಭಾಷಣ (ಇಂಟಿರಿಯರ್ ಮಾನಲೋಗ್) ನಂತೆಯೇ ಕಂಡರೂ ಎರಡಕ್ಕೂ ವ್ಯತ್ಯಾಸವಿದೆ. ಪ್ರಜ್ಞಾ ಪ್ರವಾಹ ಪಾತ್ರದ ಪ್ರಜ್ಞೆ ಮತ್ತು ಮನಃಸ್ಥಿತಿಯನ್ನು ಸೂಚಿಸುತ್ತದೆ. ಆಂತರಿಕ ಸ್ವಗತ ಭಾಷಣವು ಪಾತ್ರದ ಹರಿವನ್ನು ಅದರ ಸಹಜ ರೀತಿಯಲ್ಲಿ ಕಾದಂಬರಿಕಾರನ ನಿಯಂತ್ರಣವಿಲ್ಲದೆ ತರ್ಕಕ್ಕೆ ಒಳಪಡಿಸದೆ ಭಾಷೆಯಲ್ಲಿ ದಾಖಲು ಮಾಡುತ್ತದೆ.

ಕಾದಂಬರಿಕಾರನ ಪ್ರವೇಶವಿಲ್ಲದೆ ಎಂದು ಹೇಳಿದೆ. ಆದರೆ ಈ ಲಕ್ಷಣದ ಮಿತಿಯನ್ನು ಗಮನಿಸಬೇಕು. ಕಾದಂಬರಿಯಲ್ಲಿ ಎಲ್ಲವನ್ನು ಕಾದಂಬರಿಕಾರನ ವಿಭಾವನ (ಇಮೇಜಿನೇಷನ್) ರೂಪಿಸುವುದರಿಂದ ಪಾತ್ರದ ಪ್ರಜ್ಞಾ ಪ್ರವಾಹವೂ ಈ ನಿಯಂತ್ರಣ ಅಥವಾ ಮೂಲದ ಪ್ರಭಾವದಿಂದ ಸಂಪೂರ್ಣವಾಗಿ ಮುಕ್ತವಾಗಲಾರದು. ಇದನ್ನು ಹೀಗೆ ಸ್ಪಷ್ಟ ಪಡಿಸಬಹುದು. ಜೇಮ್ಸ್ ಜಾಯ್ಸ್ ವರ್ಜಿನಿಯ ವುಲ್ಫ್ ಮತ್ತು ಡರತಿ ಎಡರ್ಡ್‍ಸನ್ ಪ್ರಜ್ಞಾ ಪ್ರವಾಹ ತಂತ್ರವನ್ನು ಪರಿಣಾಮಕಾರಿಯಾಗಿ ಬಳಸಿದ್ದಾರೆ. ಜಾಯ್ಸ್ ಮತ್ತು ವರ್ಜಿನಿಯ ವುಲ್ಫ್ ಇಬ್ಬರೂ ಒಂದು ಸನ್ನಿವೇಷದಲ್ಲಿ ಒಂದು ಪಾತ್ರದ ಪ್ರಜ್ಞಾ ಪ್ರವಾಹವನ್ನು ನಿರೂಪಿಸುತ್ತಿದ್ದಾರೆ ಎಂದು ಭಾವಿಸೋಣ. ಇಬ್ಬರ ನಿರೂಪಣೆಗಳಲ್ಲಿ ವ್ಯತ್ಯಾಸವಿರುವುದೇ ಇಲ್ಲವೇ? ಮೂಡಿಬರುವ ಪ್ರಜ್ಞಾ ಪ್ರವಾಹವು ನಿರೂಪಣೆಗಾರನಿಂದ ಸಂಪೂರ್ಣವಾಗಿ ಸ್ವತಂತ್ರವಾಗಿರುವುದಾದರೆ ಎರಡು ನಿರೂಪಣೆಗಳಲ್ಲಿ ವ್ಯತ್ಯಾಸವಿರಬಾರದು. ಆದರೆ ವ್ಯತ್ಯಾಸವಿದ್ದೇ ಇರುತ್ತದೆ. ಇದಕ್ಕೆ ಕಾರಣ ನಿರೂಪಣೆಕಾರರ ಸಂವೇದನೆಗಳು. ಮಾನವ ಸ್ವಭಾವದ ಗ್ರಹಿಕೆಗಳು ಇವುಗಳಲ್ಲಿ ವ್ಯತ್ಯಾಸಗಳಿರುವುದು.

ಕನ್ನಡ ಕಾದಂಬರಿಯಲ್ಲಿ ತ.ರಾ. ಸುಬ್ಬರಾವ್ ಬಿಡುಗಡೆಯ ಬೇಡಿ ಕಾದಂಬರಿಯಲ್ಲಿ ಪ್ರಜ್ಞಾಪ್ರವಾಹ ತಂತ್ರವನ್ನು ಬಳಸಲು ಪ್ರಯತ್ನಿಸಿದರು. ಶ್ರೀರಂಗರು ಅನಾದಿ-ಅನಂತ ಕಾದಂಬರಿಯಲ್ಲಿ, ಪೂರ್ಣಚಂದ್ರ ತೇಜಸ್ವಿಯವರು ಹುಲಿಯೂರಿನ ಸರಹದ್ದಿನಲ್ಲಿ ಈ ತಂತ್ರವನ್ನು ಪರಿಣಾಮಕಾರಿಯಾಗಿ ಬಳಸಿದ್ದಾರೆ. ಶಾಂತಿನಾಥ ದೇಸಾಯಿ ಮೊದಲಾದ ನವ್ಯ ಕಥೆಗಾರರು ಕಾದಂಬರಿ ಕಾರರು ಈ ತಂತ್ರವನ್ನು ದೊಡ್ಡಪ್ರಮಾಣದಲ್ಲಿ ಬಳಸಿಕೊಂಡಿದ್ದಾರೆ.

ಪರಿಷ್ಕರಣೆ ಪ್ರೊ. ಎಲ್. ಎಸ್. ಶೇಷಗಿರಿರಾವ್