ಪ್ರತಿಭೆ : - ಭಾರತೀಯ ಕಾವ್ಯಮೀಮಾಂಸೆಯ ಪ್ರಕಾರ ಪ್ರತಿಭೆ ಕಾವ್ಯಕ್ಕೆ ಕಾರಣ; ವ್ಯುತ್ಪತ್ತಿ. ಸತತಾಭ್ಯಾಸ ಮುಂತಾದವು ಕಾರಣಗಳು. ಕಾವ್ಯಕ್ಕೆ ಮಾತ್ರವಲ್ಲ, ಎಲ್ಲ ಶಕ್ತಿ ಎಂದೂ ಕರೆದಿರುವುಂಟು. (ಪಾಶ್ಚಾತ್ಯರ ಜೀನಿಯಸ್ ಅಥವಾ ಇಮ್ಯಾಜಿನೇಷನ್‍ಗೆ ಪ್ರತಿಭೆ ಸಂವಾದಿ ಎನ್ನಬಹುದು). ವಾಮನ -'ಕವಿತ್ವಬೀಜಂ ಪ್ರತಿಭಾನಂ' ಎಂದಿದ್ದಾನೆ .

ಹೊಳಹು ಎಂಬುದು ಪ್ರತಿಭಾ ಶಬ್ದದ ಅಕ್ಷರಾರ್ಥ. ಆದ್ದರಿಂದ ಪ್ರತಿಭೆಯೆಂದರೆ ಹೊಳೆದದ್ದು, ತಿಳಿದದ್ದಲ್ಲ. ಎಂದರೆ, ತರ್ಕಶಕ್ತಿಗೆ ಮೀರಿದ್ದು ಪ್ರತಿಭೆ. ಪ್ರಜ್ಞಾ ನವನವೋನ್ಮೇಷಶಾಲಿನೀ (ಹೊಸ ಹೊಸ ಭಾವಗಳನ್ನು ಕಾಣುವ ಪ್ರಜ್ಞೆ) ಎಂದು ಪ್ರತಿಭೆಯನ್ನು ಭಟ್ಟತೌತ ಲಕ್ಷಣೀಕರಿಸಿದ್ದಾನೆ. ನವನವೋನ್ಮೇಷಶಾಲಿನೀ ಎಂಬುದಕ್ಕೆ ನವನವೋಲ್ಲೇಖಶಾಲಿನೀ ಎಂಬ ಪಾಠಾಂತರವುಂಟು. ಉನ್ಮೇಷ ಎಂದರೆ ಹೊಳಹು; ಉಲ್ಲೇಖ ಎಂದರೆ ವರ್ಣನೆ. ಪ್ರತಿಭೆ ಎರಡೂ ಹೌದು. ಅದು ಕಾಣುವ ಶಕ್ತಿಯೆಂತೊ ಅಂತೆ ಕಟ್ಟುವ ಶಕ್ತಿ, ದೃಷ್ಟಿಯೆಂತೊ ಅಂತೆ ಸೃಷ್ಟಿ. ಯಾವುದು ಶಬ್ದ ಸಮೂಹವನ್ನು ಅರ್ಥಪುಂಜವನ್ನೂ ಅಲಂಕಾರತಂತ್ರವನ್ನೂ ಇದೇ ಬಗೆಯ ಇತರ ಉಕ್ತಿಮಾರ್ಗವನ್ನೂ ಹೃದಯದಲ್ಲಿ ಹೊಳೆಯಿಸುತ್ತದೋ ಅದೇ ಪ್ರತಿಭೆ ಎಂಬ ರಾಜಶೇಖರನ ಮಾತುಗಳು ಗಮನಾರ್ಹವಾಗಿವೆ. ಹೀಗಾಗಿ ಪ್ರತಿಭೆ ಕಾವ್ಯದ ತಿರುಳಿಗೆ ಮಾತ್ರವಲ್ಲದೆ ತಂತ್ರಕ್ಕೂ ಸಂಬಂಧಿಸಿದ್ದು, ಇಡೀ ಕಾವ್ಯ ಅದರ ವ್ಯಾಪ್ತಿಯಲ್ಲೇ ಬರುತ್ತದೆ. ಅಪೂರ್ವ ವಸ್ತು ನಿರ್ಮಾಣಕ್ಷಮಾ (ಅಪೂರ್ವ ವಸ್ತುಗಳನ್ನು ನಿರ್ಮಾಣಮಾಡುವ ಸಾಮಥ್ರ್ಯವುಳ್ಳದ್ದು) ಎಂಬುದು ಪ್ರತಿಭೆಯ ಬಗ್ಗೆ ಆನಂದವರ್ಧನನ ಉಕ್ತಿ. ನವನವೋನ್ಮೇಷ ಮುಂತಾದ ಪ್ರತಿಭಾಸಂಬಂಧವಾದ ಈ ಮಾತುಗಳನ್ನು ಲಕ್ಷಿಸಿದರೆ, ಸ್ವೋಪಜ್ಞತೆ ಪ್ರತಿಭೆಯಸಾರ ಲಕ್ಷಣ ಎಂಬುದು ಸ್ಪಷ್ಟವಾಗುತ್ತದೆ.

ಋಷಿಯಲ್ಲದ ಕವಿಯಿಲ್ಲ. ದರ್ಶನದಿಂದ ತಾನೆ ಋಷಿ ! ಎಂದಿದ್ದಾನೆ ಭಟ್ಟತೌತ. ಈ ದರ್ಶನ ಪ್ರತಿಭೆಯ ಕೆಲಸ ದರ್ಶನದ ಜೊತೆಗೆ ವರ್ಣನವೂ ಬೇಕು. ಅದೂ ಪ್ರತಿಭಾ ವ್ಯಾಪಾರವೇ. ಪ್ರತಿಭೆಯೆಂಬುದೊಂದು ಒಳಗಣ್ಣು. ಕವಿಯ ಈ ಒಳಗಣ್ಣು ತೆರೆದಾಗ ವಿಶ್ವದ ಹೃದಯವೇ ಅವನಿಗೆ ತೆರೆಯುತ್ತದೆ. ಸಾಮಾನ್ಯರು ಒಂದು ವಸ್ತುವಿನ ಬಾಹ್ಯ ಸತ್ಯವನ್ನಷ್ಟೇ ಗ್ರಹಿಸಿದರೆ, ಕವಿ ಅದರ ಅಂತಸ್ಸತ್ಯವನ್ನು ಗ್ರಹಿಸುತ್ತಾನೆ. ಇತರರಿಗೆ ಖಂಡಸತ್ಯ ಮಾತ್ರ ಗೋಚರಿಸಿದರೆ ಕವಿಗೆ ಪೂರ್ಣ ಸತ್ಯ ಗೋಚರಿಸುತ್ತದೆ. ನಾವು ಒಳಹೊಕ್ಕು ವಸ್ತುಗಳ ಜೀವಾಳವನ್ನು ದರ್ಶಿಸುತ್ತೇವೆ ಎನ್ನುತ್ತಾನೆ ವಡ್ರ್ಸ್‍ವರ್ತ್. ಇತರರು ಇಳಿಯಲಾರದ ಆಳಗಳಿಗೆ ಕವಿ ಇಳಿಯುತ್ತಾನೆ. ಏರಲಾರದ ಎತ್ತರಗಳಿಗೆ ಏರುತ್ತಾನೆ. ಇತರರಿಗೆ ವಿಭಿನ್ನವಾಗಿ ತೋರುವ ವಸ್ತುಗಳಲ್ಲಿ ಸಾದೃಶ್ಯವನ್ನು ಗುರುತಿಸುತ್ತಾನೆ. ಇದೆಲ್ಲ ಪ್ರತಿಭಾಬಲದಿಂದ ಸಾಧ್ಯ.

ಅಪಾರವಾದ ಕಾವ್ಯ ಜಗತ್ತಿನಲ್ಲಿ ಕವಿಯೇ ಸೃಷ್ಟಿಕರ್ತ. ತನಗೆ ಹೇಗೆ ರುಚಿಸುವುದೋ ಹಾಗೆ ವಿಶ್ವವನ್ನು ಪರಿವರ್ತಿಸುತ್ತಾನೆ ಎಂಬುದು ಆನಂದವರ್ಧನನ ಹೇಳಿಕೆ. ಈ ಪರಿವರ್ತನಶಕ್ತಿಯೇ ಪ್ರತಿಭೆ. ಅದೇ ಪದಸಮೂಹ, ಅದೇ ಅರ್ಥಸಂಪತ್ತು. ಆದರೂ ಕಟ್ಟುವ ಕೌಶಲದಿಂದ ಕಾವ್ಯ ಹೊಸದಾಗುತ್ತದೆ ಎಂಬ ಮಾತನ್ನೂ ನೆನೆಯಬಹುದು. ಜಡವಾದ ತಾಮ್ರದ ತಂತಿ ವಿದ್ಯುತ್ಪ್ರವಾಹದಿಂದ ಸಜೀವವಾಗುವಂತೆ, ಚಿರಪರಿಚಿತವಾದ ಶಬ್ದಾರ್ಥಗಳು ಪ್ರತಿಭಾಸಂಚಾರದಿಂದ ಲೋಕೋತ್ತರವಾಗಿ ಪರಿಣಮಿಸುತ್ತವೆ. ಪ್ರತಿಭೆ ಒಂದು ರೀತಿಯಲ್ಲಿ ವಿದ್ಯುತ್ತು; ಬರಿಯ ವಿದ್ವತ್ತಲ್ಲ.

ಪ್ರತಿಭೆಗೆ ನಿಯಮಕವಾದ ತತ್ತ್ವ ರಸಾವೇಶ ಎಂದು ಅಭಿನವಗುಪ್ತ ಸೂಚಿಸಿದ್ದಾನೆ. ಆದರೆ ಎಲ್ಲಕ್ಕೂ ಮುಖ್ಯವಾದದ್ದು ಔಚಿತ್ಯ. ಅದು ಪ್ರತಿಭೆಯನ್ನು ನಿಯಂತ್ರಿಸಿ ಸರಿದಾರಿಯಲ್ಲಿ ನಡೆಸಬೇಕು. ಪ್ರತಿಭಾಶಾಲಿಗಳಾದ ದೊಡ್ಡ ದೊಡ್ಡ ಕವಿಗಳೂ ಆಗಾಗ ಔಚಿತ್ಯ ಪ್ರಜ್ಞೆಯನ್ನು ಕಳೆದುಕೊಂಡಿರುವುದುಂಟು. ಪ್ರತಿಭೆ ಭಾವಸಂಬಂಧಿಯಾದರೆ ಔಚಿತ್ಯ ಬುದ್ಧಿಸಂಬಂಧಿ. ಬುದ್ಧಿ-ಭಾವಗಳ ವಿದ್ಯುದಾಲಿಂಗವೇ ಪ್ರತಿಭೆ ಎಂಬ ಕುವೆಂಪು ಅವರ ನುಡಿ ಅರ್ಥವತ್ತಾಗಿದೆ.

ಪ್ರತಿಭೆಯಲ್ಲಿ ಕಾರಯಿತ್ರಿ ಮತ್ತು ಭಾವಯಿತ್ರಿ ಎಂದು ಎರಡು ಪ್ರಕಾರಗಳನ್ನು ರಾಜಶೇಖರ ಅಲಂಕಾರಿಕ ಕಲ್ಪಿಸಿದ್ದಾರೆ. ಕಾವ್ಯನಿರ್ಮಾಣಕ್ಕೆ ಅವಶ್ಯವಾದ ಕವಿಯ ಪ್ರತಿಭೆಯನ್ನು ಕಾರಯಿತ್ರೀ ಎಂದೂ ಕಾವ್ಯಾಸ್ವಾದನಕ್ಕೆ ಅವಶ್ಯವಾದ ಸಹೃದಯನ ಪ್ರತಿಭೆಯನ್ನು ಭಾವಯಿತ್ರೀ ಎಂದು ಕರೆಯಲಾಗಿದೆ. ಹೀಗೆ ಸಹೃದಯನಿಗೂ ಪ್ರತಿಭೆ ಅಗತ್ಯವೆಂದು ಹೇಳಿರುವುದು ಭಾರತೀಯ ಕಾವ್ಯ ಮೀಮಾಂಸೆಯ ವೈಶಿಷ್ಟ್ಯ. ಕಾರಯಿತ್ರೀ ಪ್ರತಿಭೆಯನ್ನು ಸಹಜ, ಔಪಾಧಿಕ ಎಂದು ವಿಂಗಡಿಸಿರುವುದುಂಟು. ಹುಟ್ಟಿನಿಂದ ಬಂದ ಪ್ರತಿಭೆ ಸಹಜ; ಮಂತ್ರ ದೇವತಾನುಗ್ರಹ ಮುಂತಾದವುಗಳಿಂದ ಲಭಿಸುವ ಪ್ರತಿಭೆ ಔಪಾಧಿಕ.

ಭಾರತೀಯರ ದೃಷ್ಟಿಯಲ್ಲಿ ಪ್ರತಿಯೊಂದು ನಿಗೂಢ ಅಲೌಕಿಕ ಶಕ್ತಿ ಜನ್ಮಾಂತರಾಗತ ಸಂಸ್ಕಾರ ವಿಶೇಷ. ಆದರೆ ಪಾಶ್ಚಾತ್ಯರು ಅದರಲ್ಲಿ ಅಲೌಕಿಕವಾದುದೇನೂ ಇಲ್ಲವೆಂದು ಭಾವಿಸುತ್ತಾರೆ. ಪ್ರತಿಭೆಯಲ್ಲಿ ಅಂತಹ ವಿಲಕ್ಷಣ ರಹಸ್ಯತಮವಾದದ್ದೇನೂ ಇಲ್ಲ, ಮಾನವಮತೀಯ ಇತರ ವ್ಯಾಪಾರಗಳಿಗೆ ಇಲ್ಲದ ಅದ್ಭುತವೇನೊ ಅದಕ್ಕಿಲ್ಲ. ಎಂಬ ಐ. ಎ. ರಿಚಡ್ರ್ಸ್‍ನ ಹೇಳಿಕೆಯನ್ನು ಗಮನಿಸಬಹುದು. ಪಾಶ್ಚಾತ್ಯರು ಪ್ರತಿಭಾ ಸ್ವರೂಪವನ್ನು ಮನೋವೈಜ್ಞಾನಿಕವಾಗಿ ವಿವರಿಸಲು ಯತ್ನಿಸಿದ್ದಾರೆ. ಪ್ರತಿಯೊಬ್ಬನಿಗೂ ಹೊಸ ಹೊಸ ಅರ್ಥಗಳನ್ನು ಕಾಣುವ, ನಿರ್ಮಾಣವಾಡುವ ಶಕ್ತಿಯುಂಟು; ಆದರೆ ಪ್ರತಿಭೆಯ ಬಾಗಿಲನ್ನು ತೆರೆಯುವ ಬೀಗದಕೈ ಮಾತ್ರ ಅವನಿಗೆ ವಶವಾಗಿರಬೇಕು. ಪ್ರತಿಭಾಶಾಲಿಯೆಂದು ಕರೆಯಿಸಿಕೊಳ್ಳುವ ಕವಿಗೂ ಸಾಮಾನ್ಯ ಮನುಷ್ಯನಿಗೂ ಇಲ್ಲಿ ವ್ಯತ್ಯಾಸವಿದೆ. ಸಾಮಾನ್ಯ ವ್ಯಕ್ತಿ ತನ್ನ ಅನುಭವಗಳನ್ನೂ ವಿಚಾರ ಪರಂಪರೆಗಳನ್ನೂ ತೊಡಕಿಲ್ಲದಂತೆ ಸಮನ್ವಯಗೊಳಿಸಿ ಒಂದು ವ್ಯವಸ್ಥೆಗೆ ತರಲಾರನು. ಕವಿಯ ಅನುಭವ ಆಲೋಚನೆ ಮೊದಲಾದವೆಲ್ಲ ಬಹುಮಟ್ಟಿಗೆ ಅವನ ಸುಪ್ತಪ್ರಜ್ಞೆಯಲ್ಲಿಯೇ ಸುಸಂಘಟಿತವಾಗಿ, ಕಾವ್ಯರೂಪದಲ್ಲಿ ನಿರರ್ಗಳವಾಗಿ ಹೊಮ್ಮುತ್ತವೆ ಎಂದು ಜಾನ್ ಡೌನಿ ಎಂಬ ವಿಮರ್ಶಕ ಹೇಳುತ್ತಾನೆ. ಹೀಗೆ ಅನುಭವಾಲೋಚನೆಗಳನ್ನು ವ್ಯವಸ್ಥೆಗೊಳಿಸತಕ್ಕದ್ದು ಪ್ರತಿಭಾವ್ಯಾಪಾರ; ಅದಕ್ಕೆ ಸ್ಮರಣಶಕ್ತಿ ಸಾಧನ. ಪ್ರತಿಭೆಯೆಂಬುದು ಸ್ಮರಣಾನುಭವಗಳನ್ನು ಸಂಯೋಜಿಸುವ ಕ್ರಿಯೆ ಎನ್ನುತ್ತಾನೆ ಸ್ಟೀಫನ್ ಸ್ಪೆಂಡರ್. ಅನ್ಯ ಮನೋಧರ್ಮಗಳನ್ನು ಸಹಾನುಭೂತಿಯಿಂದ ಒಳಹೊಕ್ಕು ನೋಡುವ ಮತ್ತು ವಿಶೇಷತಃ ಅಂತರನುಭವಗಳನ್ನು ಅಭಿವ್ಯಕ್ತಪಡಿಸುವ ಸಾಮಥ್ರ್ಯ ಎಂದು ಐ. ಎ. ರಿಚಡ್ರ್ಸ್ ಪ್ರತಿಭೆಯನ್ನು ವಿವರಿಸುತ್ತಾನೆ. ನೈತಿಕ ಒಳ್ಪಿನ ಮಹಾಸಾಧನವೆಂದರೆ ಪ್ರತಿಭೆ ಎಂಬುದು ಷೆಲ್ಲಿ. ಪ್ರತಿಭೆಯನ್ನು ಕೋಲ್‍ರಿಜ್- ಪ್ರಾಥಮಿಕ ಮತ್ತು ದ್ವಿತೀಯ ಎಂದು ವರ್ಗೀಕರಿಸಿರುವುದು ಗಮನಾರ್ಹ. ಲೋಕವನ್ನು ನಾವು ಯಥಾವತ್ತಾಗಿ ಗ್ರಹಿಸುವ ಶಕ್ತಿ. ಪ್ರಾಥಮಿಕ ಪ್ರತಿಭೆ; ಆ ಲೋಕವನ್ನು ಪರಿವರ್ತಿಸಿ ಕಾಣುವ ಶಕ್ತಿ ದ್ವಿತೀಯ ಪ್ರತಿಭೆ ಅಥವಾ ಕವಿಪ್ರತಿಭೆ. ಪ್ರತಿಭೆಯ ಲಘುವಿಲಾಸವನ್ನು ಕಲ್ಪನೆ (fancy) ಎನ್ನಲಾಗಿದೆ.

ಒಟ್ಟಿನಲ್ಲಿ ಪ್ರತಿಯೊಂದು ಅಸಾಧಾರಣ ಶಕ್ತಿ; ಎಲ್ಲರಲ್ಲೂ ಇರುವಂಥದಲ್ಲ. ಕಲಾಪ್ರಪಂಚವೆಲ್ಲ ಪ್ರಾತಿಭ ಪ್ರಪಂಚ; ಪ್ರತಿಭಾತಾರತಮ್ಯದಿಂದ ಕಲಾವಿದರ ಪದವಿ ಬೇರೆ ಬೇರೆಯಾಗುತ್ತದೆ. (ಸಿ.ಪಿ.ಕೆ.)

ಭಾರತೀಯ ಕಾವ್ಯ ಮೀಮಾಂಸೆ ಮತ್ತು ಪಾಶ್ಚಾತ್ಯ ಕಾವ್ಯ ಮೀಮಾಂಸೆಗಳ ಸಮಾನ ಪದಗಳ ನಿಷ್ಕರ್ಷೆ ಬಹು ಕಷ್ಟದ ಕಾರ್ಯ ಪ್ರೊ. ತೀ.ನಂ ಶ್ರೀಕಂಠಯ್ಯನವರು, `ಭಾರತೀಯ ಕಾವ್ಯ ಮೀಮಾಂಸೆ' ಎನ್ನುವ ಉದ್ಗ್ರಂಥದಲ್ಲಿಯೂ. ಡಾ. ಜಿ.ಎಸ್. ಶಿವರುದ್ರಪ್ಪನವರು (`ಕಾವ್ಯಾರ್ಥ ಚಿಂತನ ಸಂಗ್ರಹದಲ್ಲಿ) `ಪ್ರತಿಭೆ ಎನ್ನುವ ವಿದ್ವತ್ಪೂರ್ಣ ಲೇಖನದಲ್ಲಿಯೂ ಈ ಕೆಲಸವನ್ನು ಬಹು ಸಮರ್ಥವಾಗಿ ಮಾಡಿದ್ದಾರೆ. ತೀ.ನಂ. ಶ್ರೀ ಅವರ ನಿರ್ಣಯವನ್ನು ಶಿವರುದ್ರಪ್ಪನವರು ಒಪ್ಪುತ್ತಾರೆ. "ನಮ್ಮ ಕಾವ್ಯ ಚರ್ಚೆಯಲ್ಲಿ `ಶಕ್ತಿ ಎಂಬುದನ್ನು ವಿಶಾಲತರವಾದ `ಜೀನಿಯಸ್ ಎಂಬ ಅರ್ಥದಲ್ಲಿಯೂ `ಪ್ರತಿಭೆ ಎಂಬುದನ್ನು ವಿಶಿಷ್ಠವಾದ `ಇಮ್ಯಾಜಿನೇಷನ್ ಎಂಬ ಅರ್ಥದಲ್ಲಿಯೂ ನಿಯತವಾಗಿ ಉಪಯೋಗಿಸುವುದು ಉತ್ತಮ `ಪ್ರತಿಭಾ ಎಂಬ ಇನ್ನೊಂದು ಸಮಾನ ಪದವುಂಟು. ಅದಕ್ಕೆ `ಇನ್‍ಟ್ಯು ಇಷನ್ ಎಂಬ ಅರ್ಥವನ್ನು ಕೊಡಬಹುದು…… `ಕಲ್ಪನೆ ಎಂಬುದನ್ನು `ಫ್ಯಾನ್ಸಿ, ಕನ್‍ಸೆಪ್‍ಕ್ಷನ್ ಎಂಬುದಕ್ಕೆ ಅಂಗೀಕರಿಸೋಣ" (ತೀ.ನಂ.ಶ್ರೀ).

ಪಾಶ್ಚಾತ್ಯ ಸಾಹಿತ್ಯ ಮೀಮಾಂಸೆಯಲ್ಲಿ `ಜಿನೀಯಸ್ ಬೇರೆ `ಇಮಾಜಿನೇಷನ್ ಚೌಕಿ ಜೀನಿಯಸ್ ಜನ್ಮದತ್ತವಾದ ಅಸಾಧಾರಣ ಶಕ್ತಿ, ಸಾಮಥ್ರ್ಯ, ಇದರಲ್ಲಿ ಪೈನೀ ಕೃಪೆಯುಂಟು ಎಂಬ ಭಾವನೆಯೂ ಇದೆ. ಸ್ವೋಪಜ್ಞತೆ ಇದರ ವಿಶಿಷ್ಟ ಲಕ್ಷಣ. (`ಜೀನಿಯಸ್ ವರ್ಗಕ್ಕೆ ಸೇರಿದ ಒಂದು ಪದ `ಟ್ಯಾಲೆಂಟ್. ಟ್ಯಾಲೆಂಟ್ ಕೌಶಲ ಎನ್ನಬಹುದಾದರೂ ಇದನ್ನು ಪ್ರಯತ್ನ ವರ್ಷದಿಂದಲೇ ಪಡೆಯಲು ಸಾಧ್ಯವಿಲ್ಲ ಎನ್ನುವ ಧ್ವನಿಯುಂಟು) ಶಿವರುದ್ರಪ್ಪನವರು ಇ.ಎಫ್. ಕ್ಯಾರೆಟ್‍ನ `ವಾಟ್ ಈಸ್ ಬ್ಯೂಟಿ?' ಈ ಬರಹದಿಂದ ಒಂದು ವಾಕ್ಯವನ್ನು ಉದ್ಗರಿಸುತ್ತಾರೆ. ಕುಶಲನಾದವನು ತನ್ನ ಕಾಲದ ಆಶೋತ್ತರಗಳಿಗೆ ರಚ್ಚ ಕೊಡುತ್ತಾ ತನ್ನ ಇಲದವರೊಂದಿಗೆ ಕೃತ್ಯ ಹಿಡಿದು ನಡೆದ ಶಕ್ತನಾದವನು (ಜೀನಿಯಸ್; ತನ್ನ ಕಾಲದವರು ಕಾಣಲಾರದುದರ ಕಡೆಗೆ ಕೈ ತೋರಿಸುತ್ತಾನೆ" ಅವರು ಒಂದು ಮನಶ್ಶಾಸ್ತ್ರೀಯ ವಿವರಣೆಯನ್ನು ಉದ್ಧರಿಸುತ್ತಾರೆ. " `ಶಕ್ತಿ ಎಂದರೆ ಚಿತ್ತ ಭೂಮಿಯ ಅಚ್ಚನದ ತಲಾತಲದಲ್ಲಿ ಹುದುಗಿದ ಅನುಭವಗಳನ್ನು ಸ್ಫೂರ್ತಿಯಿಂದ ಮೂರ್ತಿಭವಿಸುವ ಸಾಮಥ್ರ್ಯ" (ಲೂಯಿಸ್ ಕೆ. ಆನ್ಸ್‍ಪೇಜರ್), ಎಂದರೆ, ಜೀನಿಯಸ್ ಹುಟ್ಟುತ್ತಲೇ ಪಡೆದುಕೊಂಡ, ವಿವರಣಾತೀತ, ಅಸಾಧಾರಣ ಶಕ್ತಿ. ಇದರ ವಿಶಿಷ್ಟ ಲಕ್ಷಣ ಸ್ವೋಪಜ್ಞತೆ. `ಜೀನಿಯಸ್ ಸಾಹಿತ್ಯ ಕ್ಷೇತ್ರಕ್ಕೆ ಅಥವಾ ಕಲೆಗೆ ಸೀಮಿತವಾದುದಲ್ಲಿ. ಈ ಅಸಾಧಾರಣ ಶಕ್ತಿ ಯಾವ ಕ್ಷೇತ್ರವನ್ನಾದರೂ ಆರಿಸಿಕೊಳ್ಳಬಹುದು. `ಜೀನಿಯಸ್ ಒಂದು ಜನಾಂಗದ ಅಂತಃಸತ್ವದ ಅಭಿವ್ಯಕ್ತಿಯ ಕಾರ್ಯವನ್ನು ನಿರ್ವಹಿಸುತ್ತದೆ ಎಂದು ಹೇಳಬಹುದು.

`ಇಮ್ಯಾಜಿನೇಷನ್ `ಜೀನಿಯಸ್‍ಕ್ಕಿಂತ ಭಿನ್ನ. `ಇಮ್ಯಾಜಿನೇಷನ್ ಪರಿಕಲ್ಪನೆಗೆ ಇಂಗ್ಲಿಷ್ ಸಾಹಿತ್ಯ ಮೀಮಾಂಸೆಯಲ್ಲಿ ಪ್ರಾಧಾನ್ಯ ಬಂದವೂ ರೋಮ್ಯಾಂಟಿಕ್ ಕವಿಗಳಿಂದ `ಫ್ರಾನ್ಸಿ, `ಇಮ್ಯಾಜಿನೇಷನ್ ಎರಡು ಪರಿಕಲ್ಪನೆಗಳಿಗೂ ದೀರ್ಘ ವಿವರಣೆ ಕೊಟ್ಟವನು . ಕೋಲ್‍ರಿಜ್ (ಅವನ `ಬಯಗ್ರಾಫಿಯ ಲಿಟರೇರಿಯ ಗ್ರಂಥದಲ್ಲಿ) ವರ್ಡ್‍ವರ್ತ್ ಷೆಲಿ, ಕೀಟ್ಟಿದೂ ಈ ಪರಿಕಲ್ಪನೆಯನ್ನು ಕುರಿತು ಬರೆದಿದ್ದಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ, ಪಾಶ್ಚಾತ್ಯ ಸಾಹಿತ್ಯ, ಮೀಮಾಂಸೆಯ ಪ್ರಕಾರ `ಇಮ್ಯಾಜಿನೇಷನ್ (ಪ್ರತಿಭೆ) ಸೃಜನಾತ್ಮಕವಾದುದು, ಬದುಕಿನ ಅನುಭವವನ್ನು ಅರ್ಥವತ್ತಾಗಿ, ಅದರಲ್ಲಿ ಒಂದು ವಿನ್ಯಾಸ ಒಂದು ದರ್ಶನ (ವಿಷನ್) ಮಾಡುವಂತೆ ಪುನರ್ ಸೃಷ್ಠಿ ಮಾಡುವ ಶಕ್ತಿ. ಫ್ರಾನ್ಸಿಗೆ `ಇಮ್ಯಾಜಿನೇಷನ್‍ನ ಗಾಢತೆಯಾಗಲಿ ಸೃಜನಶಕ್ತಿಯಾಗಲಿ ಇಲ್ಲ. (ಪರಿಷ್ಕರಣೆ: ಎಲ್.ಎಸ್.ಶೇಷಗಿರಿರಾವ್)