ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫ್ಲಾಮಿನಿಯೊ, ಮಾರ್ಕೊ ಆಂತೋನಿಯೊ

ಫ್ಲಾಮಿನಿಯೊ, ಮಾರ್ಕೊ ಆಂತೋನಿಯೊ 1498-1550. ಹದಿನಾರನೆ ಶತಮಾನದ ಇಟಲಿಯ ಕವಿ ಮತ್ತು ಮಾನುಷ್ಯದಾರ್ಶನಿಕ. ಇವನ ಲೂಸಸ್ ಪ್ಯಾಸ್ಟರಾಲೆಸ್ ಎಂಬ ಗ್ರಾಮಜೀವನವನ್ನು ಚಿತ್ರಿಸುವ ಭಾವಗೀತೆಗಳು (ಪ್ಯಾಸ್ಟೂರಲ್ ಲಿರಿಕ್ಸ್) ಜನರ ಮೆಚ್ಚುಗೆಗೆ ಪಾತ್ರವಾದುವು. ಉದಾತ್ತ ಶೈಲಿಯಲ್ಲಿ ಲ್ಯಾಟಿನ್ ಭಾಷೆಗೆ ಮೂವತ್ತು ಸ್ತೋತ್ರಗೀತಗಳನ್ನು (ಸಾಮ್ಸ್) ಈತ ತರ್ಜುಮೆ ಮಾಡಿದ್ದಾನೆ. ಇಟ್ಯಾಲಿಯನ್ ಭಾಷೆಯಲ್ಲಿ ಈತ ಬರೆದ ಪತ್ರಗಳಿಂದ ಇಟಲಿಯ ಧರ್ಮಸುಧಾರಣಾ ಚಳವಳಿಯ ರೂಪರೇಖೆಗಳನ್ನು ತಿಳಿಯಬಹುದು. (ಎಚ್.ಕೆ.ಆರ್.)