ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫ್ಲೂಜರ್, ಎಡ್ವರ್ಡ್ ಫ್ರೆಡರಿಕ್ ವಿಲಿಯಮ್

ಫ್ಲೂಜರ್, ಎಡ್ವರ್ಡ್ ಫ್ರೆಡರಿಕ್ ವಿಲಿಯಮ್ 1829-1910. ಜರ್ಮನಿಯ ಪ್ರಸಿದ್ಧ ದೇಹಕ್ರಿಯಾವಿಜ್ಞಾನಿ. ಜನನ 7.6.1829. ಮರಣ 16.3.1910. ಇಪ್ಪತ್ತನೆಯ ವಯಸ್ಸಿನ ತನಕ ಹಾನೌ ಪಟ್ಟಣದ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ವಿದ್ಯಾಭ್ಯಾಸ ಮಾಡುತ್ತಿದ್ದು ರಾಜ್ಯಶಾಸ್ತ್ರ ನ್ಯಾಯಶಾಸ್ತ್ರಗಳಲ್ಲಿ ಪದವಿಗಳಿಸಬೇಕೆಂದಿದ್ದ. ಕೊನೆಯ ಎರಡು ವರ್ಷಗಳಲ್ಲಿ ಸ್ಥಳೀಯ ರಾಜಕೀಯಕ್ಕೆ ತಲೆಹಾಕಿ ಸರ್ಕಾರದಿಂದ ಬಂಧಿತನಾಗಿ ಬಿಡುಗಡೆಮಾಡಲ್ಪಟ್ಟ. ಅನಂತರ ರಾಜಕೀಯದಿಂದ ದೂರಸರಿದು ಮಾರ್‍ಬರ್ಗಿನಲ್ಲೂ ಮುಂದೆ ಜೊಹಾನ್ಸ್ ಮುಲ್ಲರನ ಕೈಕೆಳಗೆ ಬರ್ಲಿನ್ ನಗರದಲ್ಲೂ ವೈದ್ಯವ್ಯಾಸಂಗ ಕೈಗೊಂಡ. ಆಗಲೇ ಮುಲ್ಲರನಷ್ಟೆ ಪ್ರಸಿದ್ಧನಾದ ಡುಬಾಯ್ ರೇಮಂಡನ ಕೈಕೆಳಗೂ ಶಿಷ್ಯವೃತ್ತಿ ಮಾಡಿದ. ಮುಲ್ಲರನ ನೇತೃತ್ವದಲ್ಲಿ ಈತ ಕರುಳಿನ ಸಂಯಮನರಗಳನ್ನು (ಇನ್ಹಿಬಿಟರಿ ನವ್ರ್ಸ್) ಕುರಿತು ನಡೆಸಿದ ವ್ಯಾಸಂಗಕ್ಕಾಗಿ ಇವನಿಗೆ 1855ರಲ್ಲಿ ಬರ್ಲಿನ್ ವಿಶ್ವವಿದ್ಯಾಲಯದ ಎಂ.ಡಿ. ಪದವಿ ದೊರೆಯಿತು. ಇದಕ್ಕೆ ಮೊದಲೇ ಇವನು ಕಪ್ಪೆಯ ಮಿದುಳುಬಳ್ಳಿಯ ನೈಜಕ್ರಿಯೆಯ (ಇನ್‍ಟ್ರಿನ್ಸಿಕ್ ಫಂಕ್ಷನ್) ಬಗ್ಗೆ ಮಾಡಿದ್ದ ಸಂಶೋಧನೆಗಳಿಗಾಗಿ ಇವನಿಗೆ ಗೈಸೆನ್ ವಿಶ್ವವಿದ್ಯಾಲಯದ ಎಂ.ಡಿ. ಪದವಿ ಲಭಿಸಿತ್ತು. ವಾಸ್ತವವಾಗಿ ಈತ ಮುಲ್ಲರನ ಕೈಕೆಳಗೆ ಮಾಡಿದ್ದಕ್ಕಿಂತ ಹೆಚ್ಚುಕಾಲ ರೇಮಂಡನ ಕೈಕೆಳಗೆ ವ್ಯಾಸಂಗ ಮಾಡಿದರೂ ತನ್ನ ಗುರು ಮಾತ್ರ ಮುಲ್ಲರ್ ಒಬ್ಬನೇ ಎಂದು ಹೇಳಿಕೊಳ್ಳುತ್ತಿದ್ದ. ಮುಲ್ಲರನ ಮರಣಾನಂತರ ಕೆಲವು ತಿಂಗಳುಗಳಾದ ಬಳಿಕ 1858ರ ಕೊನೆಯಲ್ಲಿ ಇವನು ಡುಬಾಯ್ ರೇಮಂಡನ ಕೈಕೆಳಗೆ ಅಧ್ಯಾಪಕನಾಗಿ ನೇಮಕಗೊಂಡು ಗುರುವಿನ ವಿಶೇಷ ವ್ಯಾಸಂಗ ಕ್ಷೇತ್ರವಾದ ವೈದ್ಯುತ ದೇಹಕಾರ್ಯ ವಿಜ್ಞಾನದಲ್ಲಿ (ಎಲೆಕ್ಟ್ರೊಫಿಸಿಯಾಲಜಿ) ಆಸಕ್ತನಾಗಿ ಅಧ್ಯಯನ ಕೈಗೊಂಡ. ಈತನ ಸಂಶೋಧನ ಫಲಗಳು ಫ್ಲೂಜರನ ಸಿದ್ಧಾಂತ ಎಂಬ ಹೆಸರಿನಿಂದ ಪ್ರಸಿದ್ಧವಾಗಿವೆ. ಆರೋಗ್ಯವಾಗಿರುವ ನರವನ್ನು ವಿದ್ಯುದ್ಧ್ರವಗಳ ಮೂಲಕ ಪ್ರಚೋದಿಸಿದರೆ ಋಣವಿದ್ಯುದ್ಧ್ರವವನ್ನು ಸಂಪರ್ಕಿಸಿರುವ ಸ್ಥಳದಿಂದಲೇ ಪ್ರತಿಕ್ರಿಯೆ ಪ್ರಾರಂಭವಾಗಿ ಮುಂದಕ್ಕೆ ಹರಡುತ್ತದೆ. ಆ ಭಾಗದಲ್ಲಿ ಆಕ್ಷಣದಲ್ಲಿ ಪ್ರತಿಕ್ರಿಯಾಸಾಮಥ್ರ್ಯ ಹೆಚ್ಚಾಗಿರುವುದೇ ಇದರ ಕಾರಣ. ಇದಕ್ಕೆ ವ್ಯತಿರಿಕ್ತವಾಗಿ ಧನವಿದ್ಯುದ್ಧ್ರುವ ಸ್ಥಳದಲ್ಲಿ ಪ್ರತಿಕ್ರಿಯಾ ಸಾಮಥ್ರ್ಯ ಬಲುಮಟ್ಟಿಗೆ ತಗ್ಗಿರುತ್ತದೆ. ಎಂಬ ಈ ಸಿದ್ಧಾಂತವನ್ನು ಅವಲಂಬಿಸಿ ನರಗಳ ರೋಗನಿದಾನ ಹಾಗೂ ಚಿಕಿತ್ಸೆಗಳಿಗೆ ವಿದ್ಯುತ್ ಬಳಕೆಯನ್ನು ರೂಪಿಸಲಾಗಿದೆ. ಬಾನ್ ವಿಶ್ವವಿದ್ಯಾಲಯದಲ್ಲಿ ಅಂಗರಚನಾ ವಿಜ್ಞಾನ ಹಾಗೂ ದೇಹಕಾರ್ಯ ವಿಜ್ಞಾನಗಳಿಗೆ ಪ್ರಾಧ್ಯಾಪಕನಾಗಿದ್ದ ಪ್ರಸಿದ್ಧ ವಿಜ್ಞಾನಿ ಹೆಲ್ಮ್‍ಹೋಲ್ಟ್ಸ್ 1859ರಲ್ಲಿ ವಿಶ್ರಾಂತನಾದಾಗ ಫ್ಲೂಜರನನ್ನು ಬಹು ಪ್ರತಿಭಾವಂತ ತರುಣ ವಿಜ್ಞಾನಿ ಎಂದು ಹೊಗಳಿ ಆತನೇ ತನ್ನ ಉತ್ತರಾಧಿಕಾರಿ ಆಗುವುದಕ್ಕೆ ತಕ್ಕವನೆಂದು ಶಿಫಾರಸು ಮಾಡಿದ. ಅದರಂತೆ ಅವನನ್ನೇ ಬಾನ್‍ನಲ್ಲಿ ಪ್ರಾಧ್ಯಾಪಕನಾಗಿ ನೇಮಿಸಲಾಯಿತು. ಆದರೆ ಫ್ಲೂಜರ್ ದೇಹಕ್ರಿಯಾವಿಜ್ಞಾನಕ್ಕೆ ಮಾತ್ರ ಪ್ರಾಧ್ಯಾಪಕನಾಗಿರುವುದಾಗಿ ಒಪ್ಪಿಕೊಂಡು ವಿಶ್ವವಿದ್ಯಾಲಯದ ಬೇರೆ ಭಾಗದಲ್ಲಿ ತನ್ನ ಪ್ರಯೋಗ ಪ್ರವಚನಗಳನ್ನು ಪ್ರಾರಂಭಿಸಿದ. ಮೊದಮೊದಲು ಅನುಕೂಲತೆಯ ವಿರಳತೆಯಿಂದಾಗಿ ಇವನು ಅಂಗಾಂಶವಿಜ್ಞಾನದ (ಹಿಸ್ಟಾಲಜಿ) ವ್ಯಾಸಂಗ ಕೈಗೊಂಡ. 1861-63ರ ಅವಧಿಯಲ್ಲಿ ಈ ವ್ಯಾಸಂಗಗಳಿಂದ ಭ್ರೂಣದ ಅಂಡಾಶಯಗಳಲ್ಲಿ ಅಂಡಾಣುಗಳ ನಿರ್ಮಾಣದ ವಿವರ ತಿಳಿದುಬಂತು. ಅಂಡಾಣುಗಳು ಪ್ರಾರಂಭದಿಂದಲೇ ಪ್ರತ್ಯೇಕವಾಗಿ ಸೃಷ್ಟಿ ಆಗುತ್ತವೆ ಎನ್ನುವ ಭಾವನೆ ಆ ಕಾಲದಲ್ಲಿತ್ತು. ಭ್ರೂಣದ ಅಂಡಾಶಯದ ಮೇಲ್ಮೈ ಕೋಶಪದರದಿಂದ ಉದ್ಭವಿಸಿ ಅಂಡಾಶಯದ ಒಳಭಾಗಕ್ಕೆ ಚಾಚಿ ಬೆಳೆದುಕೊಳ್ಳುವ ವರ್ತುಲಕಾಂಡ ರೂಪದ ಕೋಶಸಮೂಹ ಅನಂತರ ಉಗಮಸ್ಥಳದಿಂದ ಬೇರ್ಪಡುವುದೆಂದೂ ಈ ಕೋಶಸಮೂಹದ ಯಾವುದೋ ಕೋಶ ಆಮೇಲೆ ಅಂಡಾಣು ಮಾತೃಕೋಶವಾಗಿ ವಿಕಸನವಾಗುವುದೆಂದೂ ಇವನು ವಿಶದಪಡಿಸಿದ. ಎಂದೇ ವರ್ತುಲ ಕಾಂಡರೂಪದ ಕೋಶಸಮೂಹಕ್ಕೆ ಫ್ಲೂಜರನ ಕಾಂಡವೆಂಬ ಹೆಸರು. 1866ರಲ್ಲಿ ಫ್ಲೂಜರ್ ಶ್ವಾಸಕ್ರಿಯೆ ಹಾಗೂ ರಕ್ತದಲ್ಲಿ ಆಕ್ಸಿಜನ್ ಮತ್ತು ಇಂಗಾಲದ ಡೈ ಆಕ್ಸೈಡುಗಳ ಪ್ರಮಾಣದ ವಿಚಾರವಾಗಿ ಅಧ್ಯಯನ ನಡೆಸಿದ, ಇಂಗಾಲದ ಡೈಆಕ್ಸೈಡಿನ ಆಧಿಕ್ಯ ಮತ್ತು ಆಕ್ಸಿಜನ್ನಿನ ಕೊರತೆ ಇವುಗಳಿಂದ ಶ್ವಾಸಕ್ರಮ ಉದ್ವೇಗಗೊಳ್ಳುವುದೆಂದು ತೋರಿಸಿದ. ಚಳಿಯಾದಾಗ ದೇಹ ಕ್ರಿಯೆಯ ಚಟುವಟಿಕೆ ಹೆಚ್ಚಿ ಶಾಖೋತ್ಪತ್ತಿ ಆಗುವುದೆಂದೂ ಐಚ್ಛಿಕಸ್ನಾಯುಗಳಲ್ಲಿ ಚಟುವಟಿಕೆ ಕಾಣಬರುವುದೆಂದೂ ವಿಶದಪಡಿಸಿದ. ಇದಕ್ಕಾಗಿ ಇವನು ದಕ್ಷಿಣ ಅಮೆರಿಕದ ಬಾಣವಿಷವಾದ ಕ್ಯುರೇರ್ ಎಂಬ ವಸ್ತುವನ್ನು ಬಳಸಿದ ಪ್ರಯೋಗ ಇಂದಿಗೂ ಸಮಂಜಸವಾಗಿದೆ.

ಫ್ಲೂಜರ್ ಅರಿಸ್ಟಾಟಲನ ಪರಮಭಕ್ತ, ದೈವಸೃಷ್ಟಿ ಅರ್ಥವತ್ತಾದುದೆಂಬುದರಲ್ಲಿ ಎಷ್ಟು ನಂಬಿಕೆಯೋ ನಿಸರ್ಗದ ಯಾಂತ್ರಿಕತೆಯಲ್ಲೂ ಅಷ್ಟೆ ನಂಬಿಕೆ. ಹೀಗಾಗಿ ಫ್ಲೂಜರ್ ವೈಚಾರಿಕ ಹಾಗೂ ಪ್ರಾಯೋಗಿಕ ಮಾರ್ಗಗಳು ಎರಡನ್ನೂ ತನ್ನ ಅಧ್ಯಯನಗಳಿಗೆ ಬಳಸಿಕೊಳ್ಳುತ್ತಿದ್ದ. ಪ್ರಾಣಿಗಳ ಮೇಲೆ ಅಧಿಕಸಂಖ್ಯೆಯಲ್ಲಿ ಪ್ರಯೋಗ ಮಾಡುವುದೆಂದರೆ ಇವನಿಗೆ ಬಹಳ ಇಷ್ಟ. ತನ್ನ ಜೀವನದ ಕೊನೆಯ ವರ್ಷ ಒಂದರಲ್ಲೆ ಇವನು 156 ಪ್ರಾಣಿಗಳನ್ನು ಪ್ರಯೋಗಗಳಿಗೆ ಬಳಸಿಕೊಂಡನೆಂದು ತಿಳಿದಿದೆ. ವ್ಯಾಸಂಗಗಳಲ್ಲಿ ಉನ್ನತತಮ ಕಾರ್ಯತತ್ಪರತೆ, ನಿಷ್ಕøಷ್ಟತೆ ಹಾಗೂ ನಿರ್ಣಾಯಕತೆಗಳನ್ನು ಇವನು ನಿರೀಕ್ಷಿಸುತ್ತಿದ್ದ. ಆದ್ದರಿಂದ ಅಸ್ಪಷ್ಟ ವ್ಯಾಸಂಗಗಳ ವಿಷಯದಲ್ಲಿ ಅತಿ ಕಠಿಣವಾಗಿ ಟೀಕೆಮಾಡುತ್ತಿದ್ದುದುಂಟು. ಇವನ ಟೀಕೆಗಳಿಗೆ ಎಲ್ಲರೂ ಹೆದರುತ್ತಿದ್ದರು. ಮನೆ, ಪ್ರಯೋಗಾಲಯ ಇವನ್ನು ಬಿಟ್ಟು ಬೇರೆ ಕಡೆಗಳಲ್ಲಿ ಇವನು ಸಂಕೋಚದಿಂದ ಮುದುಡಿ ಮಿತಭಾಷಿಯಾಗಿ ಇರುತ್ತಿದ್ದ. ವಾದಕೂಟ, ಸಭೆ ಇವುಗಳಲ್ಲಿ ಭಾಗವಹಿಸುತ್ತಿದ್ದುದು ಬಲು ಅಪರೂಪ. ಆದರೂ 1868ರಿಂದ ಆರ್ಕಿವ್ ಆಫ್ ಫಿಸಿಯಾಲಜಿ ಎಂಬ ನಿಯತಕಾಲಿಕದ ಸಂಪಾದಕನಾಗಿದ್ದುದರಿಂದ ಆ ಮೂಲಕ ಇವನು ಸಹವಿಜ್ಞಾನಿಗಳ ಮೇಲೆ ಬಲವಾದ ಪ್ರಭಾವ ಬೀರಿದ. (ಎಸ್.ಆರ್.ಆರ್.)