ಬಂಡಾಯ ಸಾಹಿತ್ಯ - ಆಧುನಿಕ ಕನ್ನಡ ಸಾಹಿತ್ಯದ ಈಚಿನ ಹಂತ. ನವೋದಯ, ಪ್ರಗತಿಶೀಲ, ನವ್ಯಗಳ ಅನಂತರದ ಸಾಹಿತ್ಯ ಚಳವಳಿ. ಇದನ್ನು ನವೋತ್ತರ ಸಾಹಿತ್ಯವೆಂದೂ ಕರೆಯಲಾಗಿದೆ. ಎಪ್ಪತ್ತರ ದಶಕದ ಉತ್ತರಾರ್ಧದಲ್ಲಿ ಕನ್ನಡ ಸಾರಸ್ವತ ಪ್ರಪಂಚದಲ್ಲಿ ಕೇಳಿಬರುತ್ತಿರುವ, ಎಲ್ಲ ಪ್ರಗತಿಪರ ಹಾಗೂ ದಲಿತ ಬರಹಗಾರರಿಂದ ಸೃಷ್ಟಿಯಾಗುತ್ತಿರುವ ಸಾಹಿತ್ಯ. ಈ ದಶಕದಲ್ಲಿ ಅನೇಕ ಸಾಮಾಜಿಕ, ರಾಜಕೀಯ ಘಟನೆಗಳು ಜನಸಾಮಾನ್ಯರ ಬದುಕಿನಲ್ಲಿ ಬದಲಾವಣೆಗಳನ್ನು ತಂದವು. ಬದುಕಿನಲ್ಲಿ ಉಂಟಾದ ಕೋಲಾಹಲದಿಂದಾಗಿ ಸಾಹಿತ್ಯದಲ್ಲೂ ಬದಲಾವಣೆ ಅನಿವಾರ್ಯವೆನಿಸಿ ಬಂಡಾಯದ ದನಿ ಮೊಳಗಿತು ಶತಶತಮಾನದಿಂದ ಸಾಮಾಜಿಕವಾಗಿ ಆರ್ಥಿಕವಾಗಿ ಶೋಷಣೆಗೆ ಅಪಮಾನಕ್ಕೆ ಕ್ರೌರ್ಯಕ್ಕೆ ಬಲಿಯಾದ ಪ್ರಜ್ಞಾವಂತ ಲೇಖಕ ಬರೆದ ಪ್ರತಿಭಟನಾ ಸಾಹಿತ್ಯವೇ ನಿಜವಾದ ದಲಿತ ಸಾಹಿತ್ಯವೆನಿಸಿತು. ದಲಿತ ಸಾಹಿತ್ಯವನ್ನು ಒಳಗೊಂಡುದೇ ಬಂಡಾಯ ಸಾಹಿತ್ಯ. ಸಾಹಿತ್ಯ ಸೃಷ್ಟಿ ಖುಷಿಗಾಗಿ ಅಲ್ಲ; ಸಾಂಸ್ಕøತಿಕ ಬದಲಾವಣೆಗಳಿಗಾಗಿ ಸಂಸ್ಕøತಿಯಲ್ಲಿ ಪ್ರತಿಷ್ಠಾಪಿತ ಮೌಲ್ಯಗಳು ಜಡವಾದಾಗ, ಪ್ರತಿಗಾಮಿಯಾದಾಗ ಅವುಗಳ ವಿರುದ್ಧ ಹೋರಾಡುವುದು ಬಂಡಾಯ. ಅದು ಸಾಹಿತ್ಯದಲ್ಲಿ ಅಭಿವ್ಯಕ್ತಗೊಂಡಾಗ ಬಂಡಾಯ ಸಾಹಿತ್ಯ. ಈ ದಿಸೆಯಲ್ಲಿ ಸಂಘಟನೆಗೊಂಡ ಬಂಡಾಯ ಸಾಹಿತಿಗಳ ಸಮ್ಮೇಳನ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವಿರೋಧಿಸುತ್ತ, 1979 ಮಾರ್ಚ್ 10-11ರಂದು ಬೆಂಗಳೂರಿನಲ್ಲಿ ಸಮಾವೇಶಗೊಡು ಈ ಚಳವಳಿಗೆ ಒಂದು ಸ್ಪಷ್ಟರೂಪ ಕೊಡಲು ಯತ್ನ ನಡೆಸಿತು. ಪ್ರಜಾಪ್ರಭುತ್ವದ ರಕ್ಷಣೆಗೆ ಹಾಗೂ ವಿಸ್ತರಣೆಗೆ; ಶೋಷಣೆಯನ್ನು ಸಮರ್ಥಿಸುವ ಯಜಮಾನ ಸಂಸ್ಕøತಿಯ ವಿರುದ್ಧ ಹೋರಾಟಕ್ಕೆ; ಶೋಷಿತ ಜನತೆಯ ಪರವಾದ ಹೋರಾಟದ ಸಾಹಿತ್ಯ ಸೃಷ್ಟಿಗಾಗಿ ಖಡ್ಗವಾಗಲಿ ಕಾವ್ಯ ಎಂಬ ಘೋಷಣೆಗಳನ್ನು ಮೊಳಗಿಸಿತು. ಎಲ್ಲಿ ರಮ್ಯ-ನವ್ಯ ಪಂಥಗಳು ಸೋತಿವೆಯೋ ಅಲ್ಲಿ ಬಂಡಾಯ ಸಾಹಿತ್ಯ ತನ್ನ ಹೊಣೆಗಾರಿಕೆಯನ್ನು ಗುರುತಿಸಲು ಹೊರಟಿದೆ. ಬಂಡಾಯ ಸಾಹಿತ್ಯವೆಂದರೆ ಕೇವಲ ಸೌಂದರ್ಯೋಪಾಸನೆಯಲ್ಲ ಅಥವಾ ಬೌದ್ಧಿಕ ತುಡಿತವೂ ಅಲ್ಲ, ಅದೊಂದು ಸಾಮಾಜಿಕ ಹೊಣೆಗಾರಿಕೆ. ಇಂದು ಸಮಾಜವನ್ನು ಕಿತ್ತು ತಿನ್ನುತ್ತಿರುವ ಅಧೋಗತಿಗೆ ತಳ್ಳಿರುವ ಯಜಮಾನ ಸಂಸ್ಕøತಿಯ ಮುಖ್ಯ ಅಂಶಗಳಾದ ಜಾತಿ ವರ್ಗಗಳ ವಿರುದ್ಧ; ಶೋಷಣೆಯ ವಿರುದ್ಧ ಶ್ರಮ ಜೀವಿಗಳನ್ನು ಬಂಡಾಯಕ್ಕೆ ಅನುಗೊಳಿಸುವುದೇ ಬಂಡಾಯ ಸಾಹಿತ್ಯದ ಗುರಿಯಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನಂಥ ಸಂಸ್ಥೆ ಸಾಂಪ್ರದಾಯಕ ಜಡತ್ವವನ್ನು ತೋರಿಸಿದಾಗ ಅದನ್ನು ವಿರೋಧಿಸುವ ಸಂಘಟನಾತ್ಮಕ ಹೋರಾಟ ಬಂಡಾಯದ್ದು. ಶೋಷಿತ ಜನತೆಯ ಪರವಾದ ನಿಲವನ್ನು ಸಾಂಸ್ಕøತಿಕ ಕ್ಷೇತ್ರದಲ್ಲಿ ಭದ್ರವಾಗಿ ನೆಲೆಗೊಳಿಸುವುದು; ಮತ್ತು ಸಾಹಿತಿ ತನ್ನ ಸಾಮಾಜಿಕ ರಾಜಕೀಯ ಪ್ರಜ್ಞೆಯಿಂದ ಅಸ್ಪøಶ್ಯತೆ, ಜಾತಿಪದ್ಧತಿ, ಲಿಂಗಭೇದ, ವರ್ಗಭೇದ ನೀತಿಯನ್ನು ವಿರೋಧಿಸುವುದು ಎಂದು ತಿಳಿಸಿ ಬಂಡಾಯ ಸಾಹಿತ್ಯಕ್ಕೆ ತನ್ನದೇ ಆದ ಒಂದು ತಾತ್ವಿಕ ನೆಲೆಯಿದೆಯೆಂದು ಹೇಳಲಾಯಿತು. ಈ ಸಾಹಿತ್ಯ ಪರಂಪರೆಯನ್ನು ಒಟ್ಟಾಗಿ ವಿರೋಧಿಸುವುದಿಲ್ಲವಾದರೂ ಸಂಪ್ರದಾಯದ ಸ್ಥಗಿತತೆಯನ್ನೂ ಮಾನವ ವಿರೋಧಿ ನೀತಿಯನ್ನೂ ವಿರೋಧಿಸುತ್ತದೆ. ಪರಂಪರೆಯ ಜೊತೆಗೆ ಸಂಬಂಧ ಮತ್ತು ಮುಂದುವರಿಕೆ ಬಂಡಾಯದ ನಿಲುವಾಗಿದೆ. ಪ್ರಾಚೀನ ಸಾಹಿತ್ಯದಲ್ಲೂ ಬಂಡಾಯದ ದನಿಯನ್ನು ಗುರುತಿಸಲಾಗಿದೆ, ವಚನ, ದಾಸ, ನವೋದಯ ಸಾಹಿತ್ಯಗಳೂ ಅವುಗಳ ಮಿತಿಯಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಬಂಡಾಯದ ಆಶಯವನ್ನು ವ್ಯಕ್ತಪಡಿಸಿರುವುದನ್ನು ಈ ಸಾಹಿತ್ಯ ಗಮನಿಸುತ್ತದೆ. ವಚನ ಸಾಹಿತ್ಯ ಯಜಮಾನ ಸಾಹಿತ್ಯದ ವಿರುದ್ಧ ಬಂಡೆದ್ದ ಸಾಹಿತ್ಯ ಚಳವಳಿಯಾಗಿದೆ. ಹೊಸಬದುಕಿನ ತುಡಿತಕ್ಕೆ ಹಾತೊರೆದ ವಚನಕಾರರು ಇದ್ದ ವ್ಯವಸ್ಥೆಯನ್ನು ಸೀಳಿ ಅದರ ಒಡಲಲ್ಲೇ ಹೊಸವ್ಯವಸ್ಥೆಯನ್ನು ನಿರ್ಮಿಸಿದ್ದು ಸಾಮಾನ್ಯದ ಸಾಧನೆಯಲ್ಲ. ಏಕದೇವೋಪಾಸನೆಯ ತಳಹದಿಯ ಮೇಲೆ ಎಲ್ಲರೂ ಸಂಘಟಿತರಾಗಿ ಜಾತಿ ಪದ್ಧತಿ, ಅಸಮಾನತೆ ಮತ್ತು ಮೂಢನಂಬಿಕೆಗಳನ್ನು ವಿರೋಧಿಸಿ ದುಡಿಯುವ ವರ್ಗಕ್ಕೊಂದು ಹೊಸಜಾಗೃತಿಯನ್ನು ತಂದುಕೊಟ್ಟರು. ಅಂದಿನ ಸಂದರ್ಭದ ಈ ಸಾಧನೆ ವಚನಕಾರರ ಬಂಡಾಯದ ಫಲವೇ ಆಗಿದೆ ಎನ್ನುತ್ತಾರೆ ಈ ಸಾಹಿತಿಗಳು.
ದಾಸಸಾಹಿತ್ಯ ಪ್ರಗತಿ ಮನೋಭಾವದಿಂದ ರಚಿತವಾದುದು. ಸಾಮಾಜಿಕ ವಿಡಂಬನೆ, ಮಡಿವಂತಿಕೆಯ ವಿರೋಧಗಳನ್ನು ಪ್ರಕಟಿಸಿ ಸಾಮಾನ್ಯರ ಬದುಕನ್ನು ಹಸನು ಮಾಡಿದೆ. ಸರ್ವಜ್ಞ ತನ್ನ ತ್ರಿಪದಿಗಳಲ್ಲಿ ಬದುಕಿನ ಜಡತ್ವಕ್ಕೆ ಚಾಟಿ ಎಸೆದು, ಮೂಢನಂಬಿಕೆ, ಜಾತಿಪದ್ಧತಿಗಳನ್ನು ವೈಯಕ್ತಿಕ ನೆಲೆಯಲ್ಲೇ ವಿರೋಧಿಸಿ ಪ್ರಗತಿಪರ ಎನಿಸಿದ್ದಾನೆ. ಇತ್ತೀಚಿನ ನವೋದಯ, ನವ್ಯ ಸಾಹಿತ್ಯ ಚಳವಳಿಗಳೂ ತಮ್ಮ ಮಿತಿಯಲ್ಲೇ ಶೋಷಣೆ, ಜಡಸಂಪ್ರದಾಯಗಳ ವಿರೋಧಿ ನಿಲುವನ್ನು ಪ್ರಕಟಿಸಿವೆ. ನವೋದಯದ ಜೊತೆಯಲ್ಲೇ ಬಂದ ಪ್ರಗತಿಶೀಲ ಚಳವಳಿ ಜನತೆ ಸಾಮಾಜಿಕ ಹೊಣೆಗಾರಿಕೆಯ ಕಡೆ ಮುಖ ಮಾಡುವಂತೆ ಮಾಡಿದೆ. ಇಷ್ಟು ದೀರ್ಘ ಪರಂಪರೆಯನ್ನು ಪಡೆದ ಈ ಸಾಹಿತ್ಯ ಹೊಸ ಸಾಂಸ್ಕøತಿಕ ಪರಂಪರೆಯ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದೆ ಎನ್ನಲಾಗಿದೆ.
ಬಂಡಾಯ ಸಾಹಿತ್ಯ ಎಡಪಂಥೀಯ ವಿಚಾರಧಾರೆಗೆ, ಕಲಿತ ಕಾಳಜಿಗಳಿಗೆ ಬದ್ಧವಾದ ಸಾಹಿತ್ಯವೂ ಆಗಿದೆ. ಸಾಮಾಜಿಕ ಜವಾಬ್ದಾರಿ ಲೇಖಕನಿಗೆ ಇರಬೇಕು; ಕಾಲಕ್ಕೆ ಅವನು ಬದ್ಧನಾಗಿರಬೇಕು. ಇದರಿಂದಾಗಿ ಲೇಖಕ ಆಯಾಕಾಲದ ಧೋರಣೆಗೆ ಪ್ರತಿಕ್ರಿಯಿಸುತ್ತಾನೆ. ಅಭಿವ್ಯಕ್ತಿಯಲ್ಲಿ ಯಾವ ಮಾರ್ಗವನ್ನೇ ಅನುಸರಿಸಲಿ ಕ್ರೂರವ್ಯವಸ್ಥೆಯ ವಿರೋಧಿ ನೆಲೆಯೊಂದು ಈ ಸಾಹಿತ್ಯದ ಹಿನ್ನೆಲೆಯಲ್ಲಿರುತ್ತದೆ. `ಬಂಡಾಯ ಸಾಹಿತಿಗಳು ಯಥಾಸ್ಥಿತಿವಾದದ ವಿರೋಧಿಗಳು ಸಮಾಜ ಬದಲಾವಣೆಯ ಧೋರಣೆಗೆ ಬದ್ಧರು, ಇಲ್ಲ ಜನಪರ ಹೋರಾಟಗಳೊಂದಿಗೆ ಕ್ರಿಯಾತ್ಮಕ ಸಂಬಂಧ ಬೆಳೆಸಲು ಮತ್ತು ಪ್ರಧಾನವಾಗಿ ಸಾಂಸ್ಕøತಿಕ ಕ್ಷೇತ್ರದಲ್ಲಿ ಎಡಪಂಥೀಯ ವಿಚಾರಧಾರೆಯನ್ನು ನೆಲೆಗೊಳಿಸಲು ಬದ್ಧರು.
ಇಷ್ಟಾಗಿಯೂ ಈ ಸಾಹಿತ್ಯ ಯಾವೊಬ್ಬ ನಿರ್ದಿಷ್ಟ ವ್ಯಕ್ತಿಯ ಸಿದ್ಧಾಂತಗಳನ್ನು ನೆಚ್ಚಿ ನಿಂತಿಲ್ಲವೆಂದು ಹೇಳಲಾಗಿದೆ. ಕಾರ್ಲ್ ಮಾಕ್ರ್ಸ್, ಲೋಹಿಯ, ರಾಮಸ್ವಾಮಿ ನಾಯ್ಕರ್, ಅಂಬೇಡಕರ್, ಜಯಪ್ರಕಾಶ ನಾರಾಯಣ್-ಇವರೆಲ್ಲ ಈ ಸಾಹಿತ್ಯದ ವ್ಯಕ್ತಿ ಶಕ್ತಿಗಳು ಆಗಿದ್ದಾರೆ ಎನ್ನಲಾಗಿದೆ.
ಬಂಡಾಯ ಸಾಹಿತಿ ಸಾಮಾಜಿಕ ಸಂಬಂಧಗಳ ಹಿಂದಿರುವ ಮೋಸಗಳನ್ನು ಅಮಾನವೀಯತೆಯನ್ನು ಗುರುತಿಸಿ ಸಮಾಜವ್ಯವಸ್ಥೆಯ ವಿರುದ್ಧ ಸ್ಫೋಟಿಸುತ್ತಾನೆ. ಈ ಸ್ಫೋಟನೆಯ ಆಳದಲ್ಲಿ ಹೊಸ ಸಮಾಜರಚನೆಯ ಕಳಕಳಿ, ಅಸ್ತಿತ್ವದಲ್ಲಿ ಇರುವ ಸಮಾಜವನ್ನು ಕುರಿತು ಉಗ್ರವಾದ ಅಸಹನೆ, ಒಂದರೊಡನೊಂದು ಬೆಸೆದುಕೊಂಡಿರುತ್ತವೆ. ಅಸಮಾನತೆ ಅನ್ಯಾಯ ಶೋಷಣೆಗಳನ್ನೇ ಮೂಲಧನ ಮಾಡಿಕೊಂಡು ಯುಗಯುಗಗಳಿಂದ ಬಡವರನ್ನು ಮತ್ತು ಜಾತಿಯ ದೃಷ್ಟಿಯಿಂದ ಹೀನರಾದವರನ್ನು ತುಳಿಯುತ್ತ ಬಂದ ಯಜಮಾನ ಸಂಸ್ಕøತಿಯ ವಿರುದ್ಧ ಬಂಡೇಳುವ ಕೆಚ್ಚು ಮತ್ತು ಅಂಥ ಪ್ರತಿಭಟನೆಯ ಹಿಂದಿರುವ ಪ್ರಾಮಾಣಿಕತೆಯೇ ಬಂಡಾಯ ಸಾಹಿತ್ಯದ ಮೂಲ ನೆಲೆ ಎಂದು ಗುರುತಿಸಲಾಗಿದೆ. ಈ ಮೇಲಿನ ಅಂಶಗಳು ಬಂಡಾಯ ಸಾಹಿತ್ಯದ ನೆಲೆ ಬೆಲೆಯನ್ನು ಸ್ಥೂಲವಾಗಿ ತಿಳಿಸುತ್ತವೆ.
ಇನ್ನು ಈ ಸಾಹಿತ್ಯದಲ್ಲಿ ಕೃಷಿ ನಡೆಸುತ್ತಿರುವ ಪ್ರಮುಖರಲ್ಲಿ ಬರಗೂರು ರಾಮ ಚಂದ್ರಪ್ಪನವರು ಒಬ್ಬರು. ನವ್ಯದ ಕಡೆಗಾಲದಲ್ಲಿ ಬರವಣಿಗೆ ಆರಂಭಿಸಿ ನವ್ಯದ ಪ್ರಭಾವಕ್ಕೆ ಒಳಗಾಗದ ಸ್ವಂತಿಕೆಯನ್ನು ಮೆರೆದರು. ನವ್ಯವೆಂದೇ ಹೇಳಬಹುದಾದ ಮರಕುಟಿಗ ಎನ್ನುವ ಅವರ ಕವನ ಸಂಕಲನದಲ್ಲಿ ಸಾಮಾಜಿಕ ನಿಷ್ಠೆ ಕುರಿತಂತೆ ಕವಿತೆಗಳಿವೆ. ಉದಾ. ಜೈ ಒoಟಿeಥಿ ಭಾರತ. ತಮ್ಮ ಅಭಿವ್ಯಕ್ತಿಯ ಮಾಧ್ಯಮವಾಗಿ ಸಣ್ಣ ಕಥಾಕ್ಷೇತ್ರವನ್ನು ಆರಿಸಿಕೊಂಡ ಇವರು ಸುಂಟರಗಾಳಿ; ಕಪ್ಪು ನೆಲದ ಕೆಂಪು ಕಾಲು ಕಥಾಸಂಕಲನಗಳನ್ನೂ, ಸೂತ್ರ ಹುತ್ತ; ಒಂದು ಊರಿನ ಕಥೆ; ಸೀಳು ನೆಲ ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಬಡತನ, ಶೋಷಣೆ, ಮೂಢನಂಬಿಕೆ ಇವನ್ನು ಕೇಂದ್ರವಾಗಿಟ್ಟುಕೊಂಡು ಸುಂಟರಗಾಳಿಯ ಕತೆಗಳು ರಚಿತವಾಗಿವೆ. ಸಾಮಾಜಿಕ ಮತ್ತು ಸಾಂಸ್ಕøತಿಕ ವೈರುಧ್ಯಗಳು ಇವುಗಳ ಜೊತೆ ಮಾನವ ಸಂಬಂಧಗಳು ಇವುಗಳಿಂದ ಮೂಡಿ ಬರುವ ಬಂಡಾಯದ ವಿವಿಧ ಮಜಲುಗಳನ್ನು ಕಪ್ಪು ನೆಲದ ಕೆಂಪು ಕಾಲು ಕಥಾಸಂಕಲನದಲ್ಲಿ ಕಾಣಬಹುದು.
ಬರಗೂರರ ಕಾದಂಬರಿಗಳು ಸ್ವಾತಂತ್ರೋತ್ತರ ಹಳ್ಳಿಗಳನ್ನೂ ನಗರಗಳನ್ನೂ ಅರ್ಥವಿಸುವ ಪ್ರಯತ್ನಗಳಾಗಿವೆ. ತಮ್ಮ ಕಾದಂಬರಿಗಳಲ್ಲಿ ಸಮಾಜದ ಕೊಳಕುಗಳನ್ನು ತೋರಿಸಿ. ಶೋಷಣೆ ದಬ್ಬಾಳಿಕೆಗಳ ಮುಖಾಮುಖಿ ಸಂಘರ್ಷವನ್ನು ಕಲಾತ್ಮಕವಾಗಿ ಮುಂದಿಡುತ್ತಾರೆ. ಒಂದು ಊರಿನ ಕತೆ ಅವರೇ ಹೇಳುವಂತೆ ಜೀವನಾನುಭವ ಮತ್ತು ವಾಸ್ತವದ ಗ್ರಹಿಕೆಗಳ ಆಧಾರದ ಮೇಲೆ ನಿಂತಿದೆ. ತ್ರಿಕೋನಾಕಾರದ ಜಾತಿವ್ಯವಸ್ಥೆ ಪಂಚಾಯ್ತಿಯ ಅಧಿಕಾರಗ್ರಹಣಕ್ಕಾಗಿ ಒಳಗೊಳಗೇ ತಿಕ್ಕಾಡುವುದು. ಶ್ರೀಮಂತವರ್ಗ ಪಂಚಾಯ್ತಿಯಲ್ಲಿ ಸ್ಥಾನ ಗಿಟ್ಟಿಸಲು ಹೆಣಗಾಡುವುದು. ಅದಕ್ಕಾಗಿ ಮುಗ್ಧ ಹಾಗೂ ದರಿದ್ರ ದಲಿತರನ್ನೇ ಬಲಿಕೊಡಲು ಮುಂದಾಗುವುದು-ಸ್ವತಂತ್ರ ಭಾರತದ ಹಳ್ಳಿಗಳ ದೊಡ್ಡದುರಂತ. ಈ ದುರಂತದ, ಹೊಲಸು ರಾಜಕೀಯದ ನೈಜ ಚಿತ್ರಣ ಈ ಕಾದಂಬರಿಯಲ್ಲಿ ದಟ್ಟವಾಗಿ ಮೂಡಿಬಂದಿದೆ. ವ್ಯವಸ್ಥೆಯ ಒಳತಿಕ್ಕಾಟಗಳು ಇವರ ಕಾದಂಬರಿಗಳಲ್ಲಿ ತಮ್ಮಷ್ಟಕ್ಕೆ ತಾವೇ ವ್ಯಕ್ತವಾಗುವ ಬಗೆ ಕನ್ನಡದಲ್ಲಿ ಹೊಸದು ಎಂದು ಹೇಳಬಹುದು.
ಬಂಡಾಯ ಸಾಹಿತಿಗಳಲ್ಲಿ ಮುಖ್ಯರಾದ ಇನ್ನೊಬ್ಬ ಲೇಖಕರೆಂದರೆ ದೇವನೂರು ಮಹಾದೇವ ಅವರು. ದ್ಯಾವನೂರು ಎಂಬ ಕಥಾಸಂಕಲನ ಮತ್ತು ಒಡಲಾಳ ಎಂಬ ಕಿರು ಕಾದಂಬರಿಯನ್ನು ಪ್ರಕಟಿಸಿರುವ ಇವರು ಅಸಮಾನತೆ. ಶೋಷಣೆ, ಅಮಾನವೀಯತೆಗಳ ಬಗ್ಗೆ ವಿಷಾದದಿಂದ ನೋವಿನಿಂದ ತಮ್ಮ ಪ್ರತಿಭಟನೆಯ ಧ್ವನಿ ಎತ್ತಿದ್ದಾರೆ. ಇವರು ತಾತ್ತ್ವಿಕವಾಗಿ ಶೋಷಣೆಯ ವಿರೋಧಿ ಎಂಬುದು ನಿಜವಾದರೂ ಇವರ ಕತೆಗಳಲ್ಲಿ ಸಂಘರ್ಷಕ್ಕಿಂತ ಶೋಷಣೆಗೀಡಾದವರು ಅಸಹಾಯಕ ಸ್ಥಿತಿಗತಿಗಳನ್ನು ಹೇಳುವ ಕಾಳಜಿ ಹೆಚ್ಚು. ಅಮಾಸ; ಮಾರಿಕೊಂಡವರು: ಮೂಡಲಸೀಮೇಲೆ ಕೊಲೆಗಿಲೆ ಮುಂತಾದ ಕತೆಗಳು ಕಲೆಗಾರಿಕೆ, ವಸ್ತುವಿನ ದೃಷ್ಟಿಯಿಂದ ಉತ್ತಮ ಕತೆಗಳಾಗಿವೆ. ಒಡಲಾಳ ಅದರ ವಿವರಣೆಯ ಸಮಗ್ರರೂಪ ಹಾಗೂ ತಂತ್ರದಿಂದಾಗಿ ಹೆಚ್ಚು ಗಮನಾರ್ಹ ಕೃತಿಯಾಗಿದೆ. ಕ್ರೌರ್ಯ ಹಾಗೂ ಅಧಿಕಾರಿಶಾಹಿಯಿಂದ ಒಂದು ಕುಟುಂಬದ ಮೇಲಾಗುವ ಪರಿಣಾಮವನ್ನು ಅತ್ಯಂತ ಪರಿಣಾಮಕಾರಿಯಾಗಿ ಈ ಕೃತಿ ಚಿತ್ರಿಸುತ್ತದೆ.
ಮೇಲಿನ ಲೇಖಕರಷ್ಟೇ ಪ್ರಮುಖರಾದ ಮತ್ತೊಬ್ಬ ಬರಹಗಾರರೆಂದರೆ ಕವಿ ಸಿದ್ಧಲಿಂಗಯ್ಯನವರು, ಹೊಲೆಮಾದಿಗರ ಹಾಡು; ಸಾವಿರಾರು ನದಿಗಳು, ಪಂಚಮ, ನೆಲಸಮ ಮುಂತಾದ ಕೃತಿಗಳನ್ನು ಪ್ರಕಟಿಸಿರುವ ಈ ಕವಿ ಆವೇಶದಿಂದ ಕಾವ್ಯಕ್ರಿಯೆಯಲ್ಲಿ ತೊಡಗುತ್ತಾರೆ. ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಎಂಬ ಸಂಘಟನಾತ್ಮಕ ಧೋರಣೆಯುಳ್ಳ ಈ ಕವಿಯ ಕಾವ್ಯದ ಛಂದೋವೈವಿಧ್ಯ ಅಪೂರ್ವವಾದುದು. ಅಲ್ಲೇ ಕುಂತವರೆ ಖಂಡ ಕಾವ್ಯ ವಿಶೇಷವಾಗಿ ಉಲ್ಲೇಖಾರ್ಹವಾದುದು. ನವ್ಯ ಸಾಹಿತ್ಯದಲ್ಲಿ ಯಶಸ್ಸು ಪಡೆದು ಪರಂಪರೆಯ ಜೊತೆ ಜೊತೆಯಲ್ಲೇ ಚಿಂತನ ಶೀಲತೆಯನ್ನು ದಕ್ಕಿಸಿಕೊಂಡ ಕವಿ ಚಂದ್ರಶೇಖರ ಪಾಟೀಲರು. ತುರ್ತುಪರಿ ಸ್ಥಿತಿಯನ್ನು ವಿರೋಧಿಸಿ ಜೈಲನ್ನೂ ಕಂಡು ಇವರು ವರ್ತಮಾನಕ್ಕೆ ತೆರೆದ ಹೃದಯದವರಾಗಿ ಹೊಸ ಸಾಹಿತ್ಯಚಳವಳಿಯಲ್ಲಿ ತಮ್ಮನ್ನು ಗುರುತಿಸಿಕೊಂಡು ಗಾಂಧೀಸ್ಮರಣೆ; ಓ ಎನ್ನ ದೇಶಬಾಂಧವರೆ ಮುಂತಾದ ಕವನ ಸಂಕಲಗಳನ್ನು ಪ್ರಕಟಿಸಿದರು. ಅಲ್ಲದೆ ಇವರೇ ಸಂಪಾದಿಸಿದ ಗಾಂಧಿ ಮತ್ತು ಜೂನ್ 24 ಮಾರ್ಚ್ 22 ಎಂಬ ಕವನ ಸಂಕಲನಗಳು ರಾಜಕೀಯ ಜಾಗೃತಿಯ ಪ್ರತೀಕಗಳಾಗಿವೆ. ಸಮಾಜದ ಕೆಡಕುಗಳತ್ತ ಕಣ್ಣು ಹಾಯಿಸಿ, ಅವನ್ನು ಗೇಲಿಗೆಬ್ಬಿಸಿ ವಿಡಂಬನೆಗಳ ಮೂಲಕ ಚುಚ್ಚುವುದನ್ನು ಇವರ ಕೃತಿಗಳಲ್ಲಿ ಕಾಣಬಹುದು.
ಬೆಸಗರಹಳ್ಳಿ ರಾಮಣ್ಣ ಮತ್ತು ಕಾಳೇಗೌಡ ನಾಗವಾರ ಇವರು ಬಂಡಾಯ ಸಾಹಿತ್ಯದ ಸತ್ತ್ವಶಾಲೀ ಲೇಖಕರು. ಇತ್ತೀಚೆಗೆ ಪ್ರಕಟವಾದ ರಾಮಣ್ಣವನರ ಒಂದು ಹುಡುಗನಿಗೆ ಬಿದ್ದ ಕನಸು ಶೋಷಣೆಯ ವಿವಿಧ ಮುಖಗಳನ್ನು ಚಿತ್ರಿಸುತ್ತದೆ. ಜನಪದ ಭಾಷೆಯನ್ನು ದುಡಿಸಿಕೊಳ್ಳುವುದರಲ್ಲಿ ಇವರ ಕತೆಗಳು ಯಶಸ್ವಿಯಾಗಿವೆ. ಗಾಂಧಿ, ಪ್ರಜಾಪ್ರಭುತ್ವ, ಗರ್ಜನೆ, ಕತೆಗಳು ತಮ್ಮ ಪ್ರತಿಭಟನೆಯ ಧೋರಣೆಯನ್ನು ವ್ಯಕ್ತಮಾಡಿವೆ.
ಬೆಟ್ಟಸಾಲು ಮಳೆ; ಕರಾವಳಿಯಲ್ಲಿ ಗಂಗಾಲಗ್ನ ಎಂಬೆರಡು ಸೃಜನಶೀಲ ಕೃತಿಗಳನ್ನು ಪ್ರಕಟಿಸಿರುವ ಕಾಳೇಗೌಡ ನಾಗವಾರರು ಗ್ರಾಮೀಣ ಪರಿಸರದಿಂದ ಬಂದವರಾದ್ದರಿಂದ ಅಸಮಾನತೆಯ ವಿರುದ್ಧ ದನಿ ಎತ್ತಿದವರಾಗಿದ್ದಾರೆ. ಬೆಟ್ಟಸಾಲು ಮಳೆ ಗ್ರಾಮೀಣ ಹಾಗೂ ನಗರ ಪರಿಸರಗಳೆರಡರ ಪ್ರಭಾವದಿಂದ ರಚಿತವಾಗಿರುವ ಕೃತಿ. ಇದರಲ್ಲಿ ಬಂಡಾಯದ ಆಶಯಗಳನ್ನು ಹೊಂದಿರುವ ಕತೆಗಳಿರುವುದರಿಂದ ಈ ಕೃತಿಗೆ ಬೆಲೆ ಬಂದಿದೆ. ಕರಾವಳಿಯಲ್ಲಿ ಗಂಗಾಲಗ್ನ ಕವನ ಸಂಕಲನದಲ್ಲಿ ನವ್ಯ ಗೂಹಾ ಬಂಡಾಯದ ಕವಿತೆಗಳಿವೆ.
ಚನ್ನಣ್ಣ ವಾಲೀಕಾರ ಬಂಡಾಯ ಚಳವಳಿಯಲ್ಲಿ ಬರೆಯುತ್ತಿರುವ ಒಬ್ಬ ಶಕ್ತ ಲೇಖಕ. ನವೋದಯ, ನವ್ಯದ ತರುವಾಯ ಉತ್ತರ ಕರ್ನಾಟಕದ ಭಾಷೆಯನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಕವಿ ಹಾಗೂ ನಾಟಕಕಾರ. ಇವರ ಇತ್ತೀಚಿನ ಕೃತಿಗಳಾದ ಟೊಂಕದ ಕೆಳಗಿನ ಜನ; ಪ್ಯಾಂಥರ್ ಪದ್ಯಗಳು ಸಾಮಾಜಿಕ ಅಸಮಾನತೆಯ ವಿರುದ್ಧ ಸಿಡಿದೆದ್ದ ಕೃತಿಗಳು. ಹೊರೆಯಾಲ ದೊರೆಸ್ವಾಮಿಯವರ ಕೂಳೆ, ಎಸ್.ಎಸ್. ಹಿರೇಮಠ ಅವರ ಮನುಷ್ಯನೆಲ್ಲಿ, ಇಂದೂಧರ ಹೊನ್ನಾಪುರ ಅವರ ಬಂಡಾಯ; ರಮಜಾನ ದರ್ಗಾ ಅವರ ಕಾವ್ಯ ಬಂತು ಬೀದಿಗೆ; ಅಲ್ಲಮಪ್ರಭು ಬೆಟ್ಟದೂರು ಅವರ ಇದು ನನ್ನ ಭಾರತ; ಗವಿಸಿದ್ದ ಬಳ್ಳಾರಿಯವರ ಕತ್ತಲದೇಶದ ಪದ್ಯಗಳು; ಗಂಗಾಧರಮೂರ್ತಿಯವರ ಹೂ ಅರಳುವಂಥ ಮಣ್ಣು; ರಂಗಾರೆಡ್ಡಿ ಕೋಡಿರಾಂಪುರ ಅವರ ಒಂದು ಸೊಸೈಟಿಯ ಕತೆ; ಗಂಗಾಧರ ಮೊದಲಿಯಾರ್ ಅವರ ಸೂರ್ಯ ಹುಟ್ಟಿದ ದೇಶ ಮುಂತಾದ ಕೃತಿಗಳಲ್ಲಿ ಶೋಷಣೆಯ ವಿವಿಧ ಮುಖಗಳು ಕಂಡುಬರುತ್ತವೆ. ಸಾಹಿತ್ಯದ ಪ್ರತಿಕೆಗಳಲ್ಲಿ ಅನೇಕ ಕವಿತೆಗಳನ್ನು ಪ್ರಕಟಿಸುತ್ತಿರುವ ಬಂಡಾಯ ಕವಿಗಳಿದ್ದಾರೆ. ಅವರ ಪೈಕಿ ಮುಖ್ಯರಾದವರು ಎಚ್, ಗೋವಿಂದಯ್ಯ, ಬಾಬಾಜಾನ ಅತ್ತರ, ಮಹಾಬಲೇಶ್ವರ ಕಾಟ್ರಹಳ್ಳಿ ಇಕ್ಬಾಲ್ ಹುಸೇನ್, ಹುಲ್ಲಕೆರೆ ಮಹಾದೇವ, ಸತೀಶ ಕುಲಕರ್ಣಿ, ಶಿವರಾಮು ಕಾಡನಕುಪ್ಪೆ, ಎಂ, ಶಿವನಂಜಯ್ಯ, ಅಶೋಕ ಶೆಟ್ಟರ, ಜಗದೀಶ ಮಂಗಳೂರುಮಠ, ವಿಜಯ ಪಾಟೀಲ, ಮಹೇಂದ್ರ ಪ್ರಸಾದ್, ಬಿ.ರಾಜಣ್ಣ, ಹೊ.ಮ. ಪಂಡಿತಾರಾಧ್ಯ, ರಮೇಶ ಧಾನವಾಡಕರೆ, ಚಂದ್ರಶೇಖರ ಆಲೂರು, ಆರ್ಕೆ ಮಣಿಪಾಲ, ಶ್ಯಾಮಸುಂದರ ಬಿದರಕುಂದಿ ಈ ಕವಿಗಳು ತೀಕ್ಷ್ಣವಾದ ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆಯಿಂದ ಕವಿತೆಗಳನ್ನು ರಚಿಸುತ್ತಿದ್ದಾರೆ. (ಕೆ.ಆರ್.ಎ.ಎನ್.)