ಬಿಯರ್ ಸಾಮಾನ್ಯ ಮದ್ಯಗಳಲ್ಲೆಲ್ಲ ಕಡಿಮೆ ಪ್ರಮಾಣದಲ್ಲಿ ಮದ್ಯಸಾರ (ಈಥೈಲ್ ಆಲ್ಕೋಹಾಲ್) ಇರುವ ಪೇಯ. ಮೊಳೆಯಿಸಿದ ಬಾರ್ಲಿಯನ್ನು ಹಾದುಗೇಳಿಸಿ ಇದನ್ನು ತಯಾರಿಸುತ್ತಾರೆ. ಹದಗೊಂಡು ರುಚಿ ಬರಲು ಹಾಪ್ಸ್ ಎಂಬ ಕಹಿ ಸಸ್ಯ ಪದಾರ್ಥವನ್ನು ಸೇರಿಸಲಾಗುತ್ತದೆ. ಬಿಯರ್ ಹುದುಗೇಳಿಸಿದ ಮಾಲ್ಟ್ ಪಾನೀಯವಾದರೂ ಇದಕ್ಕೆ ಅಮೆರಿಕದಲ್ಲಿ ಲ್ಯಾಗರ್ ಬೀರ್ ಎಂದೂ ಗ್ರ್ರೇಟ್ ಬ್ರಿಟನ್ನಿನಲ್ಲಿ ಏಲ್ (ಜವೆಮದ್ಯ) ಎಂದೂ ಹೆಸರುಂಟು. ಇವುಗಳ ತಯಾರಿಕೆ ಮತ್ತು ರುಚಿಗಳಲ್ಲಿ ವ್ಯತ್ಯಾಸವಿದೆ. ಲ್ಯಾಗರ್ ಬಿಯರ್ ತಯಾರಿಕೆಯಲ್ಲಿ ತಳದಲ್ಲಿ ಹುದುಗೇಳಿಸುವ ಮತ್ತು ಏಲ್‍ನಲ್ಲಿ ಮೇಲೆ ಹುದುಗೇಳಿಸುವ ತಂತ್ರ ಬಳಸುತ್ತಾರೆ. ಲ್ಯಾಗರ್ ಸಾರಾಯಿ ತಯಾರಿಕೆ ಮುಗಿದ ಮೇಲೆ ಹುದುಗೇಳಿಸಲು ಬಳಸಿದ ಯೀಸ್ಟ್ ತಳಸೇರುತ್ತದೆ. ಅನಂತರ ಅದನ್ನು ಪಿಪಾಯಿಯಲ್ಲಿ ಒಂದೆರಡು ತಿಂಗಳು ಶೀತವಾತಾವರಣದಲ್ಲಿ ಸಂಗ್ರಹಿಸಿಟ್ಟಾಗ ಬಿಯರ್ ಹದಗೊಂಡು ಸ್ವಚ್ಛವಾಗಿ ರಸವತ್ತಾಗುತ್ತದೆ. ಏಲ್ ಮದ್ಯದಲ್ಲಿ ಯೀಸ್ಟ್ ಹುದುಗಿ ಮೇಲಕ್ಕೇರಿ ದಪ್ಪ ನೊರೆ ಉಂಟುಮಾಡುತ್ತದೆ. ಅನಂತರ ಅದನ್ನು ಲ್ಯಾಗರ್‍ಗೆ ಬಳಸಿದ ಉಷ್ಣತೆಗಿಂತ ಸ್ವಲ್ಪ ಹೆಚ್ಚು ಉಷ್ಣತೆಯ ಪರಿಸರದಲ್ಲಿ ಹದಗೊಳ್ಳಲು ಸಂಗ್ರಹಿಸಿಡುತ್ತಾರೆ.

ಬಿಯರಿನಲ್ಲಿ ಮದ್ಯಸಾರದ ಪ್ರಮಾಣ ಅದರ ತೂಕದ ಶೇಕಡಾ 3 ರಿಂದ 5 ರಷ್ಟು ಇದೆ. ಅದರ ಶೇಕಡಾ 90 ಭಾಗ ನೀರು. ನೂರು ಗ್ರ್ರಾಮ್ ಮದ್ಯಸಾರ ಅಂದರೆ ಸುಮಾರು 400 ಗ್ರಾಮ್ ಬಿಯರ್ 170 ಕೆಲೊರಿ ಶಕ್ತಿ 4.4 ಗ್ರಾಮ್ ಶರ್ಕರಪಿಷ್ಟ ಮತ್ತು 0.6 ಗ್ರಾಮ್ ಪ್ರೋಟಿನ್ ನೀಡುತ್ತದೆ. ಅದರಲ್ಲಿ 4 ಮಿ ಗ್ರಾಮ್ ಕ್ಯಾಲ್ಸಿಯಮ್ 26 ಗ್ರಾಮ್ ರಂಜಕ ಮತ್ತು ತೀರ ಅಲ್ಪ ಪ್ರಮಾಣದಲ್ಲಿ ರೈಬೊಫ್ಲೇವಿನ್ ಮತ್ತು ನಿಯಾಸಿನ್ ಜೀವಸತ್ವಗಳಿವೆ. (ಪಿ.ಎಸ್.ಎಸ್.)