ಬುಡುಬುಡಿಕೆ ಹಾವು - ಕ್ರೋಟಾಲಿಡೀ ಕುಟುಂಬಕ್ಕೆ ಸೇರಿದ ವಿಷಪೂರಿತ ಹಾವು (ರ್ಯಾಟಲ್ ಸ್ನೇಕ್). ತನ್ನ ಬಾಲದಲ್ಲಿ ಇರುವ ಬುಡುಬಡಿಕೆಯಿಂದಾಗಿ (ರ್ಯಾಟಲ್) ಇದಕ್ಕೆ ಈ ಹೆಸರು. ಬುಡುಬುಡಿಕೆಗೆ ಗಂಟೆ ಅಥವಾ ಸಿಳ್ಳು ಎಂಬ ಹೆಸರೂ ಉಂಟು. ಹಾವು ಕೆರಳಿದಾಗ ಬುಡುಬುಡಿಕೆಯನ್ನು ಅಲ್ಲಾಡಿಸಿ ಶಬ್ದ ಮಾಡಿ ಕಚ್ಚುವ ಮುನ್ಸೂಚನೆ ನೀಡುತ್ತದೆ. ಉತ್ತರ ಅಮೆರಿಕದ ಎಲ್ಲ ಭಾಗಗಳಲ್ಲಿ ಅಂದರೆ ಮೆಕ್ಸಿಕೊದಿಂದ ಕೆನಡವರೆಗಿನ ಎಲ್ಲ ಪ್ರದೇಶಗಳಲ್ಲಿ ಕಾಣದೊರೆಯುತ್ತದೆ. ಇದರಲ್ಲಿ 29 ಪ್ರಭೇದಗಳೂ 60 ಉಪಪ್ರಭೇದಗಳೂ ಉಂಟು.
ಬುಡುಬುಡಿಕೆ ಹಾವುಗಳಲ್ಲಿ ಕ್ರೋಟಾಲಸ್ ಮತ್ತು ಸಿಸ್ಟ್ರಾರಸ್ ಎರಡು ಮುಖ್ಯ ಗುಂಪುಗಳಿವೆ. ಸಿಸ್ಟ್ರಾರಸ್ ಗುಂಪಿನವನ್ನು ತುರುಚು ಬುಡುಬುಡಿಕೆ ಹಾವು ಎಂದು ಕರೆಯುವುದಿದೆ. ಇವುಗಳ ಬಾಲ ನೀಳ, ಬುಡುಬುಡಿಕೆ ಚಿಕ್ಕಗಾತ್ರದ್ದು. ಸಾಮಾನ್ಯವಾಗಿ ಈ ಗುಂಪಿನ ಹಾವುಗಳು 65 ಸೆಂಮೀಗಿಂತ ಹೆಚ್ಚು ಉದ್ದ ಇರುವುದಿಲ್ಲ. ಕ್ರೋಟಾಲಸ್ ಗುಂಪಿಗೆ ಸೇರಿದ ಬುಡುಬುಡಿಕೆ ಹಾವುಗಳು 1-1.5 ಮೀ ಉದ್ದ ಇರುವುವು. ಕೆಲವು ಪ್ರಭೇದಗಳು 2.5 ಮೀಟರ್‍ವರೆಗೆ ಬೆಳೆಯುವುದುಂಟು. ಅಮೆರಿಕದ ಪಶ್ಚಿಮ ರಾಜ್ಯಗಳಲ್ಲಿ ಕಾಣಬರುವ ದಿಮ್ಮಿ ಅಥವಾ ಪಟ್ಟಿ ಬುಡುಬುಡಿಕೆ ಹಾವಿನ ಬೆನ್ನಮೇಲೆ ಕಪ್ಪು ಪಟ್ಟಿಗಳಿರುತ್ತವೆ. ಹುಲ್ಲುಗಾವಲಿನ ಬುಡುಬುಡಿಕೆ ಹಾವುಗಳಲ್ಲಿ ಇಂಥ ಕಪ್ಪು ಗುರುತುಗಳು ಅಡ್ಡಾದಿಡ್ಡಿಯಾಗಿರುವುವು. ಇನ್ನುಳಿದ ಪ್ರಭೇದಗಳಲ್ಲಿ ವಜ್ರಾಕೃತಿಯ ಗುರುತುಗಳುಂಟು. ಬುಡುಬುಡಿಕೆ ಹಾವುಗಳು ಕುಳಿ ಮಂಡಲಗಳಂತೆ (ಪಿಟ್‍ವೈಪರ್ಸ್) ಚಳಿಯನ್ನು ತಾಳಿಕೊಳ್ಳಬಲ್ಲವು. ಮೆಕ್ಸಿಕೊದ ಮಸಕು ಬುಡುಬುಡಿಕೆ ಹಾವು 4450ಮೀ ಎತ್ತರದ ಪರ್ವತ ಪ್ರದೇಶಗಳಲ್ಲಿ ಸಹ ವಾಸಿಸಬಲ್ಲದು.
ಬಾಲದ ಕೊನೆಯಲ್ಲಿರುವ ಕೆಲವು ಶಲ್ಕಗಳ ಮಾರ್ಪಾಟಿಂದ ಬುಡುಬುಡಿಕೆ ರೂಪುಗೊಳ್ಳುತ್ತದೆ. ಶಲ್ಕಗಳು ಸಡಿಲವಾಗಿ ಒಂದಕ್ಕೊಂದು ಪರಸ್ಪರ ತೊಡರಿಕೊಂಡು ಶಂಕುವಿನ ರೂಪು ತಳೆಯುವುವು. ಇತರ ಬಗೆಯ ಹಾವುಗಳಲ್ಲಿ ಈ ಶಲ್ಕಗಳು ಸಾಮಾನ್ಯವಾಗಿ ಟೊಳ್ಳು ಶಂಕುವಿನಾಕಾರವಾಗಿದ್ದು ಹಾವು ಪೊರೆ ಕಳಚುವಾಗ ಪೊರೆಯೊಂದಿಗೆ ಇವೂ ಬಿದ್ದು ಹೋಗುತ್ತದೆ. ಬುಡುಬುಡಿಕೆ ಹಾವುಗಳಲ್ಲಿ ಮಾತ್ರ ಈ ಭಾಗದ ಶಲ್ಕಗಳು ಉಳಿದ ಹಾವುಗಳವಕ್ಕಿಂತ ದೊಡ್ಡವೂ ದಪ್ಪವಾದವೂ ಆಗಿವೆಯಲ್ಲದೆ ಮಧ್ಯೆ ಒಂದು ಅಥವಾ ಎರಡು ಸಂಕುಚಿತ ಭಾಗಗಳನ್ನು ಒಳಗೊಂಡಿರುವುವು ಕೂಡ. ಮೊದಲನೆಯ ಬಾರಿಗೆ ಪೊರೆ ಕಳಚುವಾಗ ಮಾತ್ರ ಈ ಭಾಗದ ಶಲ್ಕಗಳು ಪೊರೆಯೊಂದಿಗೆ ಬೀಳುತ್ತವೆ. ತದನಂತರದಲ್ಲಿ ಹೊಸ ಪೊರೆಯೊಂದಿಗೆ ಸಡಿಲವಾಗಿ ಅಂಟಿಕೊಂಡು ಪೊರೆ ಕಳಚುವಾಗ ಬೀಳದೆ ಹಾಗೆಯೇ ಉಳಿದುಬಿಡುವುವು. ಹೀಗೆ ಪ್ರತಿಬಾರಿ ಹಾವು ಪೊರೆಕಳಚಿದಾಗಲೂ ಬುಡುಬುಡಿಕೆ ಹೊಸದೊಂದು ಶಲ್ಕ ಸೇರಿಕೊಳ್ಳುತ್ತದೆ. ಆದರೆ ಬುಡುಬುಡಿಕೆಯ ಉದ್ದದಲ್ಲಿ ಗಣನೀಯ ವ್ಯತ್ಯಾಸ ಕಾಣದೆ ಇರಬಹುದು. ಇದಕ್ಕೆ ಕಾರಣ ಬುಡುಬುಡಿಕೆಯ ಹಿಂಭಾಗದ ಶಲ್ಕಗಳ ಸವಕಳಿ.
ಬುಡುಬುಡಿಕೆಯಲ್ಲಿ ಸಾಮಾನ್ಯವಾಗಿ 14 ರಿಂದ 29 ಶಲ್ಕಗಳು ಇರುತ್ತವೆ. ಬುಡುಬುಡಿಕೆ ಉದ್ದವಿದ್ದಷ್ಟೂ ಅವುಗಳಿಂದ ಹೊರಡುವ ಶಬ್ಧದ ತೀವ್ರತೆ ಕಡಿಮೆ. ಎಂಟು ಶಲ್ಕಗಳಿದ್ದರೆ ಅತಿ ಹೆಚ್ಚು ಶಬ್ದ ಬರುತ್ತದೆ. ಶಲ್ಕದ ಸಂಖ್ಯೆ ಮಾತ್ರವಲ್ಲದೆ ಹಾವಿನ ಉದ್ದ ಹಾಗೂ ಪ್ರಭೇದವನ್ನೂ ಅವಲಂಬಿಸಿ ಶಬ್ದದ ತೀವ್ರತೆ ಹೆಚ್ಚು ಕಡಿಮೆಯಾಗುತ್ತದೆ. ಕೆಲವು ಹಾವುಗಳು ಬುಡುಬುಡಿಕೆಯ ನಾದ ಕೆಲವು ಮೀಟರುಗಳವರೆಗೆ ಕೇಳಿಸುವುದುಂಟು.
ಬುಡುಬುಡಿಕೆ ಹಾವುಗಳು ಬಲು ಆಕ್ರಮಣಕಾರಿ ಹಾವುಗಳೆಂದು ಪ್ರಸಿದ್ಧವಾಗಿವೆ. ಅಲ್ಲದೆ ಇವುಗಳ ವಿಷ ತುಂಬ ತೀಕ್ಷ್ಣ ಬಗೆಯದು. ಆದರೆ ಕೆಲವು ಪ್ರಭೇದಗಳನ್ನು ತೀವ್ರವಾಗಿ ಉದ್ರೇಕಿಸಿದರೆ ಮಾತ್ರ ಆಕ್ರಮಣ ಮಾಡುತ್ತದೆ. ಕೆಂಪು ವಜ್ರ ಗುರುತಿನ ಬುಡುಬುಡಿಕೆ ಹಾವನ್ನು ಕೈಯಲ್ಲಿ ಹಿಡಿದರೂ ಅದು ಕಚ್ಚುವುದಾಗಲೀ ಬುಡುಬುಡಿಕೆಯನ್ನು ಅಲ್ಲಾಡಿಸುವುದಾಗಲೀ ಇಲ್ಲ. ತದ್ವಿರುದ್ಧವಾಗಿ ಉತ್ತರ ಅಮೆರಿಕದ ಪೂರ್ವ ಹಾಗೂ ಪಶ್ಚಿಮ ರಾಜ್ಯಗಳಲ್ಲಿ ವಾಸಿಸುವ ಕಪ್ಪು ವಜ್ರ ಗುರುತಿನ ಹಾವುಗಳು ಬುಡುಬುಡಿಕೆಯನ್ನು ವೇಗವಾಗಿ ಅಲ್ಲಾಡಿಸುವುದರೊಂದಿಗೆ ಪುನಃ ಪುನಃ ಆಕ್ರಮಣವನ್ನೂ ಮಾಡುತ್ತವೆ. ವಿಷದ ಮೊತ್ತ ಹಾವಿನ ವಯಸ್ಸು ಪ್ರಭೇದಗಳನ್ನು ಅವಲಂಬಿಸಿರುತ್ತದೆ. ಒಮ್ಮೆ ಕಚ್ಚಿದ ಹಾವು ಮತ್ತೆ ಕಚ್ಚಿದರೆ ಅದರಲ್ಲಿಯ ವಿಷದ ಮೊತ್ತ ಕಡಿಮೆಯಿರುತ್ತದೆ. ಒಮ್ಮೆ ವಿಷವನ್ನು ಹೊರಚೆಲ್ಲಿದ ಮೇಲೆ ಅಷ್ಟೇ ಮೊತ್ತದ ವಿಷ ಸಂಗ್ರಹವಾಗಲು ಒಂದರಿಂದ ಎರಡು ತಿಂಗಳ ಕಾಲ ಬೇಕು. ಹುಲ್ಲುಗಾವಲು ಬುಡು ಬುಡಿಕೆ ಹಾವುಗಳು ಉಳಿದವುಗಳಿಗಿಂತ ಮೂರು ಪಾಲು ಹೆಚ್ಚು ವಿಷಪೂರಿತವೆಂದು ಹೆಸರಾಗಿವೆ.
ಚಿಕ್ಕಗಾತ್ರದ ದಂಶಕಗಳು, ಮೊಲಗಳು ಮುಂತಾದ ಬಿಸಿರಕ್ತದ ಪ್ರಾಣಿಗಳೇ ಇವುಗಳ ಆಹಾರ, ಪಿಗ್ಮಿ ಬುಡುಬುಡಿಕೆ ಹಾವಾದರೋ ಕಪ್ಪೆ, ಹಲ್ಲಿ, ಸಲಮಾಂಡರ್ ಇತ್ಯಾದಿ ಅನಿಯತತಾಪಿ ಪ್ರಾಣಿಗಳನ್ನೂ ತಿನ್ನುತ್ತದೆ. ಸ್ತನಿಗಳು ಸೇವಿಸುವುದರ ಹತ್ತರ ಒಂದು ಭಾಗದಷ್ಟು ನೀರನ್ನು ಮಾತ್ರ ಇವು ಸೇವಿಸುವುವು. ಇವುಗಳ ಚರ್ಮಕ್ಕೆ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯ ಇರುವುದರಿಂದ ಅತಿಕಡಿಮೆ ನೀರನ್ನು ಸೇವಿಸಿದರೂ ಇವಕ್ಕೆ ತೊಂದರೆಯಾಗುವುದಿಲ್ಲ.
ಬುಡುಬುಡಿಕೆ ಹಾವುಗಳಿಗೆ ಇತರ ಹಾವುಗಳಂತೆಯೇ ಶ್ರವಣ ಸಾಮಥ್ರ್ಯವಿಲ್ಲ. ಆದರೆ ಇವುಗಳ ದೃಷ್ಟಿ ಅತಿ ಸೂಕ್ಷ್ಮವಾಗಿರುವುದರಿಂದ ವೈರಿಗಳ ಇರವನ್ನು ಸುಲಭವಾಗಿ ಅರಿತುಕೊಳ್ಳಬಲ್ಲವು.
ಬುಡುಬುಡಿಕೆ ಹಾವುಗಳು ತಮ್ಮ ದೇಹದಲ್ಲೇ ಮೊಟ್ಟೆ ಇಟ್ಟು, ಕಾವುಕೊಟ್ಟು ಮರಿಗಳನ್ನು ಪ್ರಸವಿಸುತ್ತವೆ. ಪ್ರಭೇದ ಹಾಗೂ ಹವೆ ಅವಲಂಬಿಸಿ ಗರ್ಭಾವಧಿ ವ್ಯತ್ಯಾಸವಾಗುತ್ತದೆ. ಕೆಲವು ಪ್ರಭೇದಗಳು ಎರಡು ವರ್ಷಗಳಿಗೊಮ್ಮೆ ಗರ್ಭ ಧರಿಸುವುವಾದರೆ ಇನ್ನು ಕೆಲವು ವರ್ಷಕ್ಕೊಮ್ಮೆ ಗರ್ಭಧರಿಸುವುವು. ಸಂತಾನಾಭಿವೃದ್ಧಿಯ ಶ್ರಾಯ ವಸಂತ. ತಾಯಿಯ ಗಾತ್ರ ಹಾಗೂ ಪ್ರಭೇದವನ್ನು ಅವಲಂಬಿಸಿ ಒಂದು ಸೂಲಿಗೆ ಹತ್ತರಿಂದ ಅರುವತ್ತು ಮರಿಗಳು ಹುಟ್ಟಬಹುದು. ಸರಾಸರಿ ಸಂಖ್ಯೆ ಹತ್ತರಿಂದ ಇಪ್ಪತ್ತು.
ಇವು ವಿಷಪೂರಿತ ಹಾವುಗಳಾಗಿದ್ದರೂ ಗಿಡುಗ, ಹದ್ದು ಹಾಗೂ ಹಾವುಗಳನ್ನೇ ತಿನ್ನುವ ಹಾವುಗಳಿಗೆ ಇವು ಆಹಾರವಾಗುತ್ತವೆ.
(ಎಸ್.ಎನ್.ಎಚ್.) (ಪರಿಷ್ಕರಣೆ: ಡಿ.ಆರ್.ಪ್ರಹ್ಲಾದ್)