ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬುದ್ಧಯ್ಯ ಪುರಾಣಿಕ

ಬುದ್ಧಯ್ಯ ಪುರಾಣಿಕ 1858-1959. ಲೇಖಕರು ಮತ್ತು ಸಮಾಜ ಸೇವಕರು. ಇವರ ಪೂರ್ಣ ಹೆಸರು ಶಿವಮೂರ್ತಿ ಬುದ್ಧಯ್ಯ ಸ್ವಾಮಿ ಮಗಿ ಪ್ರಭುದೇವರು ಪುರಾಣಿಕ. ಬಿಜಾಪುರ ಜಿಲ್ಲೆಯ ತೇರದಾಳದಲ್ಲಿ 1858 ಜೂನ್ 13ರಂದು ಜನಿಸಿದರು. ತಂದೆ ಮಗಿಪ್ರಭುದೇವರೂ, ತಾಯಿ ಲಿಂಗಮ್ಮ. ಇವರ ಮಾತೃಭಾಷೆ ಕನ್ನಡವಾಗಿದ್ದರೂ ಆಗ್ಗೆ ತೇರದಾಳ ಸಾಂಗಲಿ ಸಂಸ್ಥಾನದಲ್ಲಿದ್ದುದರಿಂದ ಮರಾಠಿಯಲ್ಲಿಯೇ ವ್ಯಾಸಂಗ ನಡೆಯಿತು. ತೇರದಾಳ, ಮುಧೋಳ, ಜಮಖಂಡಿ, ಸೊಲ್ಲಾಪುರ ಹಾಗೂ ಪುಣೆಯಲ್ಲಿ ವ್ಯಾಸಂಗಮಾಡಿದ ಇವರು ಸ್ವಲ್ಪಕಾಲ ಉಪಾಧ್ಯಾಯರಾಗಿದ್ದರು. ಅನಂತರ ಹುನಗುಂದ, ಸೊನ್ನ, ಗಲಗಲಿ, ಕೊಲ್ಲಾಪುರ ಮೊದಲಾದ ದೇಸಾಯರಲ್ಲಿ ಕಾರಬಾರಿಗಳಾಗಿದ್ದರು.

ಬುದ್ಧಯ್ಯ ಪುರಾಣಿಕರ ಸಮಾಜ ಸೇವೆ ಗಣ್ಯವಾದುದು. ಬಿಜಾಪುರ ಜಿಲ್ಲೆಯ ರಾಯಲ್ ಲೀಗಿನ ಸದಸ್ಯರಾಗಿ, ರೆಡ್‍ಕ್ರಾಸ್ ಫಂಡನ್ನು ಸಂಗ್ರಹಿಸಿದರು. ಕೊಲ್ಲಾಪುರದ ವೀರಶೈವ ಬೋರ್ಡಿಂಗ್ (1907) ಮತ್ತು ಬಾಗಲಕೋಟೆಯ ವಾರದ ಬೋರ್ಡಿಂಗ್ (1911) ಇವುಗಳ ಸ್ಥಾಪನೆಯಲ್ಲೂ ಶ್ರಮಿಸಿದರು. 1927ರಲ್ಲಿ ಇವರು ಧಾರವಾಡಕ್ಕೆ ಬಂದು ನೆಲಸಿ ಅಲ್ಲಿಯ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ, ಕರ್ನಾಟಕ ವಿದ್ಯಾವರ್ಧಕ ಸಂಘ-ಈ ಮುಂತಾದ ಸಂಸ್ಥೆಗಳ ಅಭಿವೃದ್ಧಿಗಾಗಿ ದುಡಿದರು. ವಿದ್ಯಾಭಿವೃದ್ಧಿ ಸಂಸ್ಥೆ ಹಾಗೂ ಕಿತ್ತೂರು ಚೆನ್ನಮ್ಮ ರಾಣಿ ಇತಿಹಾಸ ಸಂಶೋಧನ ಮಂಡಲದ ಆಜೀವ ಸದಸ್ಯರಾಗಿ ಸೇವೆ ಸಲ್ಲಿಸಿದರು.

ಕನ್ನಡ, ಮರಾಠಿ, ಸಂಸ್ಕøತ, ಇಂಗ್ಲಿಷ್ ಭಾಷೆಗಳಲ್ಲಿ ಪಾಂಡಿತ್ಯಗಳಿಸಿದ್ದ ಇವರು ಕನ್ನಡ ಹಾಗೂ ಮರಾಠಿ ಭಾಷೆಗಳಲ್ಲಿ ಕೃತಿರಚನೆ ಮಾಡಿದ್ದಾರೆ. ಲಿಂಗ ನಿರೀಕ್ಷಣೆ, ಪಾದೋದಕ, ಸ್ತ್ರೀ ಶಿಕ್ಷಣ-ಮುಂತಾದ ಇವರ ಲೇಖನಗಳು ವೀರಶೈವ ಸಂಜೀವಿನಿ ಎಂಬ ಮರಾಠಿ ಪುಸ್ತಕ 1913ರಲ್ಲಿ ಪ್ರಕಟವಾಯಿತು. ಅಲ್ಲಮಪ್ರಭುವನ್ನು ಕುರಿತ ಇವರ ಗ್ರಂಥ 1936ರಲ್ಲಿ ಪ್ರಕಟವಾಯಿತು. ಅನಂತರ ಹರೀಶ್ವರಕೃತ ಪ್ರಭುದೇವರ ಪುರಾಣವನ್ನು ಸಂಪಾದಿಸಿ ಶಬ್ದಕೋಶ, ಟೀಕೆ ಟಿಪ್ಪಣಿಗಳೊಂದಿಗೆ ಪ್ರಕಟಿಸಿದರು. ಇವರ ಕೆಲವು ಪ್ರೌಢ ಲೇಖನಗಳು ಪುರಾಣಿಕರ ವಿಚಾರವಾಹಿನಿ ಎಂಬ ಸಂಕಲನ ರೂಪದಲ್ಲಿ ಪ್ರಕಟವಾಗಿವೆ (1953).

ಬುದ್ಧಯ್ಯ ಪುರಾಣಿಕರು 1959 ಮೇ 4 ರಂದು ತೀರಿಕೊಂಡರು.