ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೂದುಗುಂಬಳ

ಬೂದುಗುಂಬಳ - ಕುಕುರ್ಬಿಟೀಸೀ ಕುಟುಂಬಕ್ಕೆ ಸೇರಿದ ಬಳ್ಳಿ (ವ್ಯಾಕ್ಸ್ ಗೋರ್ಡ್, ಆಶ್ ಗೋರ್ಡ್). ನೆಲದ ಮೇಲೆ ಹರಡಿ ಇಲ್ಲವೇ ಆಸರೆಗಳಿಗೆ ಹಬ್ಬಿ ಬೆಳೆಯುತ್ತದೆ. ಹಬ್ಬಲು ಇದರ ಕುಡಿ ತಂತುಗಳು ಸಹಾಯಕವಾಗಿವೆ. ಬೆನಿನ್‍ಕಾಸ ಹಿಸ್ಪಿಡ ಅಥವಾ ಬೆನಿನ್ ಕಾಸ ಸೆರಿಫೆರ ಇದರ ಶಾಸ್ತ್ರೀಯ ಹೆಸರು. ಇದು ಮಲೇಷ್ಯ ಪ್ರದೇಶದ ಮೂಲವಾಸಿ. ಉಷ್ಣವಲಯದ ಬಹುತೇಕ ಎಲ್ಲ ದೇಶಗಳಲ್ಲೂ ಇದನ್ನು ಕಾಣಬಹುದು. ಭಾರತ, ಬರ್ಮ, ಶ್ರೀಲಂಕಾಗಳಲ್ಲಿ ಹಣ್ಣಿಗಾಗಿ ಇದನ್ನು ಬೆಳೆಸಲಾಗುತ್ತಿದೆ. ಹೊಲಗಳಲ್ಲಿ ಮಾತ್ರವಲ್ಲದೆ ಮನೆಗಳ ಮಾಡುಗಳ ಮೇಲೆ ಹಬ್ಬಿಸಿ ಬೆಳೆಸುವುದೂ ಉಂಟು. ಸಾಮಾನ್ಯವಾಗಿ ಇದನ್ನು ನೀರಾವರಿಯಲ್ಲಿ ಬೆಳೆಸುವರು.

ಬೂದುಗುಂಬಳ ತರಕಾರಿಗಳ ಪೈಕಿ ಒಂದು, ಹುಳಿ, ಮಜ್ಜಿಗೆ ಹುಳಿ, ಪಲ್ಯ ಮುಂತಾದವಲ್ಲದೆ ಮಾಗಿದ ಫಲದಿಂದ ಸಿಹಿತಿಂಡಿಯನ್ನು ತಯಾರಿಸುವುದಿದೆ. ಇದಕ್ಕೆ ಔಷಧೀಯ ಗುಣಗಳೂ ಉಂಟು. ಕಾಯಿಯ ರಸವನ್ನು ಶರೀರದ ಒಳ ಅಂಗಗಳಲ್ಲಿ ಉಂಟಾಗುವ ರಕ್ತಸ್ರಾವ ನಿಲ್ಲಿಸಲು ಕೊಡುತ್ತಾರೆ. ಇದರ ರಸ ಸಕ್ಕರೆ ಕಾಯಿಲೆಗೂ ಮದ್ದು ಎನ್ನಲಾಗಿದೆ. ಇದರಿಂದ ತಯಾರಿಸುವ ಖಂಡ ಕೂಷ್ಮಾಂಡ ಲೇಹ್ಯ ದಮ್ಮು, ಉಬ್ಬಸಗಳಿಗೂ ಫುಪ್ಪುಸಗಳಲ್ಲಿ ಆಗುವ ವ್ರಣಗಳಿಗೂ ಒಳ್ಳೆಂiÀi ಔಷಧಿ. ಅಲ್ಲದೆ ಕೂಷ್ಮಾಂಡಘೃತ ಎಂಬ ರಸಾಯನವನ್ನು ಉನ್ಮಾದ, ಮೂರ್ಛೆ ರೋಗ ಮುಂತಾದ ನರರೋಗಗಳಿಗೆ ಕೊಡುವುದಿದೆ. (ಡಿ.ಆರ್.ಜಿ.ಓ.)