ಬೆಂಗಳೂರು ಭಾರತದ ಕರ್ನಾಟಕ ರಾಜ್ಯದ ಒಂದು ಜಿಲ್ಲೆ, ಬೃಹತ್ ನಗರ ಮತ್ತು ರಾಜ್ಯದ ರಾಜಧಾನಿ. ಜಿಲ್ಲೆಯ ಮತ್ತು ಇದೇ ಹೆಸರಿನ ತಾಲ್ಲೂಕುಗಳ (ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ) ಆಡಳಿತ ಕೇಂದ್ರ.

ಜಿಲ್ಲೆ: ಕರ್ನಾಟಕ ರಾಜ್ಯದ ಆಗ್ನೇಯಕ್ಕಿರುವ ಈ ಜಿಲ್ಲೆಯನ್ನು ಆಗ್ನೇಯದಲ್ಲಿ ತಮಿಳುನಾಡು ರಾಜ್ಯವೂ ದಕ್ಷಿಣದಲ್ಲಿ ಮೈಸೂರು, ನೈಋತ್ಯದಲ್ಲಿ ಮಂಡ್ಯ, ಪಶ್ಚಿಮ ಮತ್ತು ವಾಯವ್ಯದಲ್ಲಿ ತುಮಕೂರು, ಉತ್ತರ, ಈಶಾನ್ಯ ಮತ್ತು ಪೂರ್ವದಲ್ಲಿ ಕೋಲಾರ ಜಿಲ್ಲೆಗಳು ಸುತ್ತುವರಿದಿವೆ. ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಆನೇಕಲ್ಲು, ಚನ್ನಪಟ್ಟಣ, ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ಕನಕಪುರ, ಮಾಗಡಿ, ನೆಲಮಂಗಲ, ರಾಮನಗರ-ಇವು ಜಿಲ್ಲೆಯ 11 ತಾಲ್ಲೂಕುಗಳು ಒಟ್ಟು 52 ಹೋಬಳಿಗಳೂ 2,728 ಗ್ರಾಮಗಳೂ 22 ಪಟ್ಟಣಗಳೂ ಇವೆ. ಜಿಲ್ಲೆ ಉತ್ತರ ಅಕ್ಷಾಂಶ 120 14 ರಿಂದ 130 31, ಪೂರ್ವ ರೇಖಾಂಶ 770 71 ರಿಂದ 780 4 ವರೆಗೆ ಹರಡಿದೆ. ವಿಸ್ತೀರ್ಣ 8,003 ಚಕಮೀ ಜನಸಂಖ್ಯೆ 49,47,610 (1981).

ಪ್ರಾಕೃತಿಕವಾಗಿ ಈ ಜಿಲ್ಲೆ ಏರಿಳಿತಗಳಿಂದ ಕೂಡಿದ ಪ್ರಸ್ಥಭೂಮಿ. ಇದರ ಅನೇಕ ಕಡೆಗಳಲ್ಲಿ ಬೆಟ್ಟ ಶ್ರೇಣಿಗಳೂ ಚದರಿದ ಬೆಟ್ಟಗುಡ್ಡಗಳು ಇದ್ದು ಅವುಗಳ ನಡುವೆ ಸುಮಾರು ಮಟ್ಟಸ ಪ್ರದೇಶಗಳೂ ಇವೆ. ದಕ್ಷಿಣದಲ್ಲಿ ಕನಕಪುರ ತಾಲ್ಲೂಕಿನ ಬಹು ಭಾಗ ಬೆಟ್ಟಶ್ರೇಣಿಯಿಂದ ಮುಂದುವರಿದ ಪೂರ್ವಘಟ್ಟದ ಭಾಗ. ಇವುಗಳಲ್ಲಿ ಬಾಣಂತಿಮಾರಿ ಬೆಟ್ಟ, ನರಸಿಂಹದೇವರ ಬೆಟ್ಟ ಮುದುವಾಡಿ ಬೆಟ್ಟ, ಬಿಳಿಕಲ್ ಬೆಟ್ಟ ಮತ್ತು ಕೊಪ್ಪ ಬೆಟ್ಟ ಮುಖ್ಯವಾದುವು. ಕನಕಪುರದ ಸಮೀಪದಿಂದ ಚನ್ನಪಟ್ಟಣ, ರಾಮನಗರ, ಮಾಗಡಿ ತಾಲ್ಲೂಕುಗಳ ಮೂಲಕ ನೆಲಮಂಗಲದೆಡೆಗೆ ಇನ್ನೊಂದು ಮುಖ್ಯ ಬೆಟ್ಟಸಾಲು ಹಬ್ಬಿದೆ. ಇದರಲ್ಲಿ ಸಿದ್ದದೇವರ ಬೆಟ್ಟ. ಸಾವನದುರ್ಗ, ಶಿವಗಂಗಾ ಮತ್ತು ನಿಜಗಲ್ಲು ಬೆಟ್ಟಗಳು ಪ್ರಧಾನವಾದವು. ಪುನಃ ಆನೇಕಲ್ಲಿನಿಂದ ಬೆಂಗಳೂರಿನ ಮುಖಾಂತರ ನಂದಿದುರ್ಗದೆಡೆಗೆ ಎತ್ತರದ ಏಣುಪ್ರದೇಶ ಹಬ್ಬಿದೆ. ಬೆಂಗಳೂರಿನ ಉತ್ತರದಲ್ಲಿರುವ ದೊಡ್ಡಬೆಟ್ಟಹಳ್ಳಿ ದಕ್ಷಿಣದಲ್ಲಿ ಕೊತ್ತನೂರು, ಬೆಂಗಳೂರು ಹೈಗ್ರೌಂಡ್ ಪ್ರದೇಶ ಮತ್ತು ವಯ್ಯಾಲಿಕಾವಲ್, ಸೋಮಪುರ ಇತರ ಎತ್ತರದ ಭಾಗಗಳು. ಈ ಪಂಕ್ತಿಗಳು ಜಿಲ್ಲೆಯನ್ನು ಮೂರು ಭಾಗಗಳಾಗಿ ವಿಂಗಡಿಸುತ್ತದೆ. ನಂದಿದುರ್ಗ-ಬೆಂಗಳೂರು-ಅನೇಕಲ್ಲು ಪಂಕ್ತಿಯ ಪೂರ್ವದಲ್ಲಿ ದಕ್ಷಿಣ ಪಿನಾಕಿನ ಜಲಾನಯನ ಪ್ರದೇಶ ಇದೆ. ಈ ಪಂಕ್ತಿಗೂ ಕನಕಪುರ-ಮಾಗಡಿ ನೆಲಮಂಗಲದ ಪಂಕ್ತಿಗೂ ನಡುವೆ ಇರುವ ಪ್ರದೇಶ ಅರ್ಕಾವತಿ ಕಣಿವೆ. ಇದರ ಪಶ್ಚಿಮ ಭಾಗ ಶಿಂಷಾ ಕಣಿವೆ. ಅರ್ಕಾವತಿ ಈ ಜಿಲ್ಲೆಯ ಮುಖ್ಯನದಿ. ಉತ್ತರದಲ್ಲಿ ನಂದಿದುರ್ಗ ಪ್ರದೇಶದಲ್ಲಿ ಉಗಮಿಸಿ ದೊಡ್ಡಬಳ್ಳಾಪುರ, ನೆಲಮಂಗಲ, ಮಾಗಡಿ, ರಾಮನಗರ, ಕನಕಪುರ ತಾಲ್ಲೂಕುಗಳಲ್ಲಿ ಹರಿದು ಜಿಲ್ಲೆಯ ದಕ್ಷಿಣ ಅಂಚಿನಲ್ಲಿ ಕಾವೇರಿ ನದಿಯನ್ನು ಸೇರುತ್ತದೆ. ಬೆಂಗಳೂರಿನ ಬಸವನಗುಡಿ ಬಳಿ ಉದ್ಭವಿಸಿ ಆನೇಕಲ್ಲಿನ ಕಡೆಯಿಂದ ಬರುವ ಸುವರ್ಣಮುಖಿ ಹೊಳೆಯನ್ನು ಕೂಡಿಕೊಂಡು ಹರಿಯುವ ವೃಷಭಾವತಿ ಇದರ ಮುಖ್ಯ ಉಪನದಿ. ಜಿಲ್ಲೆಯ ಪೂರ್ವ ಭಾಗದಲ್ಲಿ ಹರಿಯುವ ದಕ್ಷಿಣ ಪಿನಾಕಿನಿ ನಂದಿದುರ್ಗದೆಡೆಯಿಂದ ಬಂದು ದೇವನ ಹಳ್ಳಿ, ಹೊಸಕೋಟೆ ತಾಲ್ಲೂಕುಗಳ ಮೂಲಕ ದಕ್ಷಿಣಾಭಿಮುಖವಾಗಿ ಹರಿದು ತಮಿಳುನಾಡಿನೆಡೆಗೆ ಸಾಗುತ್ತದೆ. ಶಿಂಷಾನದಿ ಜಿಲ್ಲೆಯ ನೈರುತ್ಯದಂಚಿನಲ್ಲಿ ಸುಮಾರು 7 ಕಿ.ಮೀ ದೂರ, ಕಾವೇರಿ ನದಿ ದಕ್ಷಿಣದಂಚಿನಲ್ಲಿ ಸುಮಾರು 20 ಕಿಮೀ ದೂರ ಗಡಿಯಾಗಿ ಹರಿಯುತ್ತದೆ. ಕಣ್ವ ಶಿಂಷಾದ ಉಪನದಿ. ಇದು ಮಾಗಡಿ ತಾಲ್ಲೂಕಿನಲ್ಲಿ ಹುಟ್ಟಿ ದಕ್ಷಿಣಾಭಿಮುಖವಾಗಿ ಹರಿದು ಚನ್ನಪಟ್ಟಣ ತಾಲ್ಲೂಕಿನ ದಕ್ಷಿಣ ಅಂಚಿನಲ್ಲಿ ಶಿಂಷಾ ನದಿಯೊಂದಿಗೆ ಕೂಡಿಕೊಳ್ಳುವುದು. ಕುಮುದ್ವತಿ ಉತ್ತರಪಿನಾಕಿನಿಯ ಕೂಡುನದಿ. ಮಾಕಳಿದುರ್ಗದ ಪಶ್ಚಿಮದಲ್ಲಿ ಉದ್ಭವಿಸಿ ದೊಡ್ಡ ಬಳ್ಳಾಪುರ ತಾಲ್ಲೂಕಿನ ಮುಖಾಂತರ ಉತ್ತರಕ್ಕೆ ಹರಿಯುತ್ತದೆ.

ಜಿಲ್ಲೆ ಪೂರ್ಣವಾಗಿ ಗ್ರಾನೈಟ್ ನೈಸ್ ಪ್ರದೇಶ. ಆದರೆ ಶಿಲೆಯ ರಚನೆಯಲ್ಲಿ ಇರುವ ಕಾಗೆ ಬಂಗಾರದ ಪ್ರಮಾಣ ಮತ್ತು ಕೂಡಿರುವ ರೂಪ ಇವುಗಳಲ್ಲಿ ವ್ಯತ್ಯಾಸಗಳಿದ್ದು, ಬೇರೆ ಬೇರೆ ಪ್ರದೇಶದಲ್ಲಿ ತಿಳಿ ಬೂದುಬಣ್ಣದಿಂದ ಸುಮಾರು ಕಪ್ಪಿನವರೆಗೆ ವ್ಯತ್ಯಾಸ್ತವಾಗುವ ವಿವಿಧ ರಂಗಿನ ಶಿಲಾಸಮೂಹಗಳನ್ನು ಕಾಣಬಹುದು. ಮೇಲೆ ಹೇಳಿದ ಬೆಟ್ಟಸಾಲುಗಳಲ್ಲಿ ಕನಕಪುರ-ರಾಮನಗರ-ನೆಲಮಂಗಲದ ಶ್ರೇಣಿಯ ಬೆಟ್ಟಗಳಲ್ಲಿ ಎತ್ತರದ ಕೋಡುಗಲ್ಲುಗಳಿಂದ ವಿವಿಧಾಕೃತಿಯ ರಚನೆಗಳನ್ನು ಕಾಣಬಹುದಾದರೆ, ಇತರೆಡೆಯಲ್ಲಿ ಸಹಜ ಏರುತಗ್ಗಿನ ಬೆಟ್ಟ ರಚನೆ ಕಂಡುಬರುತ್ತದೆ. ಈ ಪಂಕ್ತಿಗಳ ನಡುವಿನ ಮಟ್ಟಸಪ್ರದೇಶಗಳಲ್ಲಿ ಕೆಂಪು ಮಣ್ಣು ವಿಶೇಷ. ಎಲ್ಲೋ ಕೆಲವೆಡೆ ನದೀ ದಡಗಳಲ್ಲಿ ಮಾತ್ರ ಕಪ್ಪು ಮಣ್ಣು ಇದೆ. ಹೊಸಕೋಟೆ ಭಾಗದಲ್ಲಿ ಸ್ವಲ್ಪಮಟ್ಟಿಗೆ ಜಂಬುಮಣ್ಣು ಇದೆ.

ಬೆಂಗಳೂರು ಲಾಲ್‍ಬಾಗಿನ ಸಾರಕ್ಕಿ, ದೊಡ್ಡಬಳ್ಳಾಪುರ, ಕನಕಪುರ ತಾಲ್ಲೂಕಿನ ಮರಳವಾಡಿ ಮೊದಲಾದ ಕಡೆಗಳಲ್ಲಿ ಯೋಗ್ಯವಾದ ಚಪ್ಪಡಿ ಶಿಲೆ ದೊರೆಯುತ್ತದೆ. ಆವಿನಹಳ್ಳಿ ಮತ್ತು ಬಿಡದಿ ಪ್ರದೇಶಗಳಲ್ಲಿ ಕಲ್ನಾರು, ಚಿಕ್ಕ ಬಾಣಾವರ ಮತ್ತು ಗೊಲ್ಲಹಳ್ಳಿ, ನೆಲಮಂಗಲ ಈ ಸ್ಥಳಗಳಲ್ಲಿ ಉತ್ತಮ ಇಟ್ಟಿಗೆ ಮತ್ತು ಹೆಂಚುಗಳ ತಯಾರಿಕೆಗೆ ಯೋಗ್ಯವಾದ ಜೇಡಿಮಣ್ಣು ದೊರಕುತ್ತದೆ.

ಬೆಂಗಳೂರು ಜಿಲ್ಲೆಯ ಹವೆ ಹಿತಕರ. ಮಾರ್ಚಿಯಿಂದ ಮೇ ತನಕ ಬೇಸಿಗೆ. ನವಂಬರಿನಿಂದ ಜನವರಿ ತನಕ ಚಳಿಗಾಲ. ಗರಿಷ್ಠ ಉಷ್ಣತೆ ಮೇ ತಿಂಗಳಲ್ಲಿ 33.20ಅ ವರೆಗೂ ಮುಟ್ಟುತ್ತದೆ. ಕನಿಷ್ಠ ಉಷ್ಣತೆ ಡಿಸೆಂಬರ್ ತಿಂಗಳಲ್ಲಿ 11.70ಅ ವರೆಗೂ ಇಳಿಯುತ್ತದೆ. ಬೇಸಿಗೆ ಮತ್ತು ಚಳಿಗಾಲಗಳ ನಡುತಿಂಗಳುಗಳಲ್ಲಿ ಹವೆ ಹೆಚ್ಚು ವ್ಯತ್ಯಸ್ತವಾಗದೆ ಆಹ್ಲಾದಕರವಾಗಿರುತ್ತದೆ. ಬೇಸಿಗೆಯಲ್ಲಿ ಬಿಸಿಲು ತೀಕ್ಷ್ಣವಾದರೂ ರಾತ್ರಿಯ ಹವೆ ತಂಪಾಗಿರುತ್ತದೆ. ಜಿಲ್ಲೆಯ ಸರಾಸರಿ ವಾರ್ಷಿಕ ಮಳೆ 793 ಮಿಮೀ.

ಜಿಲ್ಲೆಯ ಅರಣ್ಯ ಪ್ರದೇಶದ ಒಟ್ಟು ವಿಸ್ತೀರ್ಣ 1,092.98 ಚಮೀ (1972-73). ಪ್ರಾಚೀನ ಕಾಲದಲ್ಲಿ ನೆಲಮಂಗಲ ಪ್ರದೇಶದಲ್ಲಿ ಅರ್ಕಾವತಿ ನದಿ ದಂಡೆಯ ಮೇಲೆ ಚಂದನಾರಣ್ಯ (ಗಂಧದ ಮರಗಳ ಕಾಡು), ದೇವನ ಹಳ್ಳಿಯ ಸುತ್ತ ಕುಂದಾರಣ್ಯ (ಮಲ್ಲಿಗೆ ಕಾಡು) ಇತ್ತಂತೆ. ಈಗ ಹೆಚ್ಚಿನ ಅರಣ್ಯ ಪ್ರದೇಶ ಮಾಗಡಿ, ರಾಮನಗರ ಮತ್ತು ಕನಕಪುರ ತಾಲ್ಲೂಕುಗಳಲ್ಲಿ ಇದೆ. ಈ ಕಾಡುಗಳಲ್ಲಿ ತೇಗ, ಹೊನ್ನೆ, ಬೀಟೆ, ಹೊಂಗೆ, ಕರಚಿ, ದಿಂಡಿಗ, ಜಾಲರಿ (ಅರಗು) ಮರಗಳು ಕಂಡುಬರುತ್ತವೆ. ಜಿಲ್ಲೆಯ ಅನೇಕ ಭಾಗಗಳಲ್ಲಿ, ಅದರಲ್ಲೂ ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನ ಭಾಗಗಳಲ್ಲಿ ಕುರುಚಲು ಕಾಡುಗಳಿವೆ. ಇಲ್ಲಿ ಮುತ್ತುಗ, ಕಕ್ಕೆ, ತಂಗಡಿ ಇತ್ಯಾದಿ ಮರಗಳೂ ಈಚಲು ಮರಗಳೂ ಬೆಳೆಯುತ್ತವೆ. ಹಲಸು, ನೇರಿಳೆ, ಸೀತಾಫಲ, ಆಲ, ಅರಳಿ, ಬೇವು, ಬೇಲದ ಮರಗಳು ಸಹ ಇವೆ. ಗಂಧದ ಮರಗಳು ಜಿಲ್ಲೆಯ ಅನೇಕ ಭಾಗಗಳಲ್ಲಿ ಬೆಳೆಯುತ್ತವೆ; ಕನಕಪುರ, ಚನ್ನಪಟ್ಟಣ, ಮಾಗಡಿ ಮತ್ತು ಬೆಂಗಳೂರು ತಾಲ್ಲೂಕುಗಳಲ್ಲಿ ವಿಶೇಷ. ಸೌದೆಗೆ ಬೇಕಾದ ಹಾಗೂ ಇದ್ದಲು ತಯಾರಿಕೆಗೆ ಅನುಕೂಲವಾದ ಮರಗಳು ಕನಕಪುರದ ದಕ್ಷಿಣ ಭಾಗದಲ್ಲಿ ಹೆಚ್ಚು. ಜಿಲ್ಲೆಯ ಕಾಡುಗಳಲ್ಲಿ ಜಿಂಕೆ, ಕಪಿ, ಕರಡಿ, ನರಿ, ಕಾಡುಬೆಕ್ಕು, ಮೊಲ, ವಿವಿಧ ಬಗೆಯ ಹಾವುಗಳು, ಕಾಡು ಪಾರಿವಾಳ, ಕಾಡುಕೋಳಿ, ಗಿಣಿ, ಮೈನ, ಜೀವಂಜೀವ, ನವಿಲು, ಕೊಕ್ಕರೆ ಮುಂತಾದವನ್ನು ಕಾಣಬಹುದು.

ಬೆಂಗಳೂರು ಜಿಲ್ಲೆಯ ಉತ್ತರ ಭಾಗ ವ್ಯವಸಾಯಕ್ಕೆ ಉಪಯುಕ್ತವಾದ ಕೆಂಪು ಮಣ್ಣಿನಿಂದಲೂ ದಕ್ಷಿಣ ಭಾಗ ಮರಳು ಮಿಶ್ರಿತ ಕೆಂಪು ಮಣ್ಣಿನ ಭೂಮಿಯಿಂದಲೂ ಕೂಡಿವೆ. 1970-71ರ ಅಂಕೆ ಅಂಶಗಳ ಪ್ರಕಾರ ಈ ಜಿಲ್ಲೆಯ ಒಟ್ಟು 7,59,000 ಹೆಕ್ಟೇರ್ ಪ್ರದೇಶದಲ್ಲಿ 1,03,000 ಹೆಕ್ಟೇರ್ ಸಾಗುವಳಿಗೆ ದೊರೆಯದ ಭೂಮಿಯೂ 44,000 ಹೆಕ್ಟೇರ್ ಬೀಳುಬಿಟ್ಟ ಜಮೀನೂ ಇದ್ದು 1,38,000 ಹೆಕ್ಟೇರ್ ಸಾಗಗುವಳಿಯಾಗದ ಜಮೀನು ಇತ್ತು. 1975-76ರಲ್ಲಿ ಈ ಜಿಲ್ಲೆಯಲ್ಲಿ 3,89,259 ಹೆಕ್ಟೇರ್ ಭೂಮಿ ಸಾಗುವಳಿಯಾಗಿದ್ದು 55,906 ಹೆಕ್ಟೇರ್ ಭೂಮಿಯಲ್ಲಿ ನೀರಾವರಿ ವ್ಯವಸಾಯ ಇತ್ತು. ಕೆರೆಗಳು ಮುಖ್ಯ ನೀರಾವರಿ ಸಾಧನಗಳು. ಈಚೆಗೆ ಬಾವಿ ಮತ್ತು ವಿದ್ಯುತ್ ಪಂಪ್‍ಗಳಿಂದ ನೀರನ ಸೌಲಭ್ಯ ಒದಗಿಸಿಕೊಳ್ಳುವುದು ಹೆಚ್ಚುತ್ತಿದೆ. ಮಂಚನಬೆಲೆ ಮತ್ತು ಬೈರಮಂಗಲ ಯೋಜನೆಗಳಿಂದ ಜಿಲ್ಲೆಯ ನೀರಾವರಿ ಸೌಲಭ್ಯ ಹೆಚ್ಚಲಿದೆ. ರಾಗಿ, ಮುಸುಕಿನ ಜೋಳ ಮತ್ತು ಕಡಲೆಕಾಯಿ ಜಿಲ್ಲೆಯ ಮುಖ್ಯ ಬೆಳೆಗಳು. ದ್ವಿದಳ ಧಾನ್ಯಗಳು, ಬತ್ತ ಮತ್ತು ಜೋಳವನ್ನು ಸ್ವಲ್ಪ ಮಟ್ಟಿಗೆ ಬೆಳೆಸಲಾಗುತ್ತದೆ. ಬೆಂಗಳೂರಿನ ಸುತ್ತಮುತ್ತ ತರಕಾರಿ ಮತ್ತು ಹಣ್ಣಗಳ ಬೇಸಾಯ ಇದೆ. ಬೆಂಗಳೂರು, ಹೊಸಕೋಟೆ, ದೇವನಹಳ್ಳಿ ಪ್ರದೇಶದಲ್ಲಿ ದ್ರಾಕ್ಷಿ ಬೆಳೆ ವಿಶೇಷವಾಗಿದೆ.

ಈ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ದೊಡ್ಡ ಮತ್ತು ಸಣ್ಣ ಕೈಗಾರಿಕೆಗಳು ಹೆಚ್ಚು ಪ್ರಮಾಣದಲ್ಲಿ ಸ್ಥಾಪಿತವಾಗಿವೆ. ಹೆಚ್ಚಿನ ಕೈಗಾರಿಕೆಗಳು ಬೆಂಗಳೂರು ನಗರ ಮತ್ತು ಪರಿಸರದಲ್ಲಿವೆ. ಮೈಸೂರು ಇಂಡಸ್ಟ್ರಿಯಲ್ ಡೈರೆಕ್ಟರಿ (1970) ಒದಗಿಸುವ ಅಂಕೆÀ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 3,959 ಕೈಗಾರಿಕಾ ಘಟಕಗಳೂ 1,10,528 ಕಾರ್ಮಿಕರೂ ಇದ್ದರು. ವಿಮಾನ, ಗಡಿಯಾರ, ಟೆಲಿಫೋನ್. ರೇಡಿಯೋ, ಯಂತ್ರೋಪಕರಣಗಳು, ಸಿಮೆಂಟ್, ವಿದ್ಯುತ್ ಉಪಕರಣಗಳು, ಪಿಂಗಾಣಿ ಸಾಮಾನುಗಳು, ರೇಷ್ಮೆಬಟ್ಟೆ, ಹತ್ತಿಬಟ್ಟೆ-ಇವುಗಳ ತಯಾರಿಕೆಗೆ ಸಂಬಂಧಿಸಿದಂತೆ ಭಾರಿ ಉದ್ಯಮಗಳು ಇಲ್ಲಿವೆ. ಯಂತ್ರೋಪಕರಣಗಳು, ಪ್ಲಾಸ್ಟಿಕ್ ವಸ್ತುಗಳು, ರಾಸಾಯನಿಕ ವಸ್ತುಗಳು, ಅಗರಬತ್ತಿ, ಕೈಮಗ್ಗದ ಬಟ್ಟೆಗಳು ಮುಂತಾದವನ್ನು ತಯಾರಿಸುವ ಅನೇಕ ಸಣ್ಣ ಪ್ರಮಾಣದ ಉದ್ಯಮಗಳನ್ನೂ ಗೃಹಕೈಗಾರಿಕೆಗೆ ಸಂಬಂಧಿಸಿದಂತೆ ಚನ್ನಪಟ್ಟಣದ ಬಣ್ಣದ ಸಾಮಾನುಗಳು ಮತ್ತು ನೆಲಮಂಗಲದ ಕಂಚು, ಹಿತ್ತಾಳೆ ಸಾಮಾನುಗಳ ಉದ್ಯಮಗಳನ್ನೂ ವಿಶೇಷವಾಗಿ ಹೆಸರಿಸಬಹುದು. ಯಲಹಂಕ, ರಾಮನಗರ ಮೊದಲಾದ ಕಡೆಗಳಲ್ಲಿ ಹೆಂಚಿನ ಕಾರ್ಖಾನೆಗಳಿವೆ. ಕಟ್ಟಡದ ಕಲ್ಲನ್ನು ಎಬ್ಬಿ, ನಯ ಮಾಡಿ, ರಫ್ತು ಮಾಡುವ ಉದ್ಯಮ ಬೆಂಗಳೂರು, ದೊಡ್ಡಬಳ್ಳಾಪುರ ಮೊದಲಾದೆಡೆ ವಿಶೇಷವಾಗಿದೆ.

ಬೆಂಗಳೂರು ಜಿಲ್ಲೆ ರೇಷ್ಮೆ ಉದ್ಯಮಕ್ಕೂ ಪ್ರಸಿದ್ಧ. ಆನೇಕಲ್ಲು, ದೇವನ ಹಳ್ಳಿ, ಚನ್ನಪಟ್ಟಣ, ಕನಕಪುರ, ರಾಮನಗರ, ದೊಡ್ಡಬಳ್ಳಾಪುರ ತಾಲ್ಲೂಕುಗಳಲ್ಲಿ ರೇಷ್ಮೆ ಉತ್ಪನ್ನ ಅಧಿಕ. ಬೆಂಗಳೂರು, ಚನ್ನಪಟ್ಟಣ-ಈ ಸ್ಥಳಗಳಲ್ಲಿ ರೇಷ್ಮೆ ಕಾರ್ಖಾನೆಗಳಿವೆ. ದೊಡ್ಡಬಳ್ಳಾಪುರದ ಮಗ್ಗದ ಸೀರೆಗಳು ಹೆಸರುವಾಸಿಯಾದವು.

ಬೆಂಗಳೂರು ಜಿಲ್ಲೆಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಉತ್ತಮವಾಗಿದೆ. ವಿವಿಧ ಮೂಲಗಳಿಂದ ದೊರಕಿರುವ ಅಂಕೆಅಂಶಗಳ ಪ್ರಕಾರ ಈ ಜಿಲ್ಲೆಯಲ್ಲಿರುವ ವಾಣಿಜ್ಯ ಬ್ಯಾಂಕುಗಳ ಸಂಖ್ಯೆ 222 (1972), ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕುಗಳು 11 (1973), ಕೇಂದ್ರ ಸಹಕಾರ ಬ್ಯಾಂಕುಗಳು 18 (1973), ಕೈಗಾರಿಕಾ ಸಹಕಾರ ಬ್ಯಾಂಕುಗಳು 2 (1971), ಕೃಷಿ ಮತ್ತು ಕೃಷೀತರ ಸಾಲ ಸಹಕಾರ ಸಂಘಗಳು 2235 (1972). ಇವಲ್ಲದೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ 1973ನೆಯ ಮಾರ್ಚ್ ಅಂತ್ಯಕ್ಕೆ ಜಿಲ್ಲೆಯ 598 ಕೈಗಾರಿಕಾ ಘಟಕಗಳಿಗೆ ಧನಸಹಾಯ ಮಾಡಿತ್ತು. ಈ ಜಿಲ್ಲೆ ಮತ್ತು ನಗರಗಳು ವಿಸ್ತರಿಸಿದ್ದು ಅದಕ್ಕೆ ತಕ್ಕಂತೆ ಮೇಲಿನ ಸಂಘ, ಸಂಸ್ಥೆಗಳೂ ಬ್ಯಾಂಕುಗಳೂ ತಮ್ಮ ಸೇವೆಯನ್ನು ಹೊಸ ಶಾಖೆಗಳನ್ನು ತೆರೆಯುವ ಮೂಲಕ ವಿಸ್ತರಿಸಿವೆ.

ಬೆಂಗಳೂರು ಜಿಲ್ಲೆ ಅತ್ಯುತ್ತಮ ಸಾರಿಗೆ ಸಂಪರ್ಕದ ಸೌಲಭ್ಯ ಪಡೆದಿದೆ. ಬೆಂಗಳೂರಿನಿಂದ ದೇಶದ ನಾನಾ ಕಡೆಗಳಿಗೆ ವಿಮಾನ ಸಂಪರ್ಕವಿದೆ. ಮದರಾಸು, ಸೇಲಂ, ಗುಂತಕಲ್ಲು, ಅರಸೀಕೆರೆ, ಮೈಸೂರು, ಬಂಗಾರಪೇಟೆ-ಈ ಸ್ಥಳಗಳಿಗೆ ಹೋಗುವ ರೈಲುಮಾರ್ಗಗಳು ಜಿಲ್ಲೆಯ ಅನೇಕ ಸ್ಥಳಗಳಿಗೂ ಸಂಪರ್ಕವನ್ನು ಒದಗಿಸುತ್ತವೆ. ಜಿಲ್ಲೆಯಲ್ಲಿರುವ ರೈಲು ಮಾರ್ಗದ ಒಟ್ಟು ಉದ್ದ 348 ಕಿ.ಮೀ. ಬೆಂಗಳೂರಿನಿಂದ ಹೊಸಕೋಟೆ ಮೂಲಕ ಮದರಾಸಿಗೆ ಹೋಗುವ ಮಾರ್ಗ, ನೆಲಮಂಗಲದ ಮೂಲಕ ಪುಣೆ ಮತ್ತು ಮಂಗಳೂರಿಗೆ ಹೋಗುವ ಮಾರ್ಗಗಳು, ದೊಡ್ಡಬಳ್ಳಾಪುರದ ಮೂಲಕ ಅನಂತಪುರಕ್ಕೆ ಹೋಗುವ ಮಾರ್ಗ, ರಾಮನಗರ ಮತ್ತು ಚನ್ನಪಟ್ಟಣಗಳ ಮೂಲಕ ಮೈಸೂರಿಗೆ ಹೋಗುವ ಮಾರ್ಗಗಳು-ಇವು ಜಿಲ್ಲೆಯ ಮುಖ್ಯ ರಸ್ತೆಗಳು. ಅಲ್ಲದೆ ಬೆಂಗಳೂರಿನಿಂದ ಹೊಸೂರು, ಆನೇಕಲ್ಲು, ಕನಕಪುರ-ಮಳವಳ್ಳಿ-ಕೊಳ್ಳೆಗಾಲ, ಮಾಗಡಿ, ಸರ್ಜಾಪುರ, ಚಿಕ್ಕಜಾಲ-ದೇವನಹಳ್ಳಿ ಈ ಸ್ಥಳಗಳಿಗೆ ಹೋಗುವ ಮಾರ್ಗಗಳೂ ಇವೆ. ಗ್ರಾಮಾಂತರ ರಸ್ತೆ ಜಾಲವೂ ಉತ್ತಮವಾಗಿದೆ. 1975-76ರಲ್ಲಿ ಜಿಲ್ಲೆಯಲ್ಲಿದ್ದ ರಸ್ತೆಗಳ ಒಟ್ಟು ಉದ್ದ 5,686 ಕಿ.ಮೀ. ಜಿಲ್ಲೆಯ ಎಲ್ಲ ಪಟ್ಟಣಗಳಿಗೆ ಹಾಗೂ ಮುಖ್ಯ ಗ್ರಾಮಗಳಿಗೆ ವಾಹನ ಸಂಪರ್ಕವಿದೆ.

ಜಿಲ್ಲೆಯಲ್ಲಿ ವೈದ್ಯಕೀಯ ಸೌಲಭ್ಯ ಉತ್ತಮವಾಗಿದೆ. 1976ರಲ್ಲಿ 47 ಆಸ್ಪತ್ರೆಗಳು, 135 ಔಷಧಾಲಯಗಳು. 28 ಪ್ರೈಮರಿ ಹೆಲ್ತ್ ಸೆಂಟರ್‍ಗಳು, 55 ಕುಟುಂಬ ಯೋಜನ ಕೇಂದ್ರಗಳು ಇದ್ದುವು. ಇವಲ್ಲದೆ ಕಾರ್ಮಿಕರ ಆಸ್ಪತ್ರೆಗಳೂ ಕಾರ್ಖಾನೆಗಳ ಆಸ್ಪತ್ರೆಗಳೂ ಖಾಸಗಿ ನರ್ಸಿಂಗ್ ಹೋಮ್ ಮತ್ತು ಔಷಧಾಲಯಗಳೂ ಇವೆ. ಒಟ್ಟಾರೆಯಾಗಿ ಎಲ್ಲ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗಾಗಿ 7,700 ಶಯ್ಯೆಗಳಿದ್ದುವು. ಈಗ ಇವುಗಳ ಸಂಖ್ಯೆ ನಗರ ಬೆಳೆವಣಿಗೆಯೊಂದಿಗೆ ತಾಳೆÉಯಾಗುವಂತೆ ಹೆಚ್ಚಿದೆ.

ವಿದ್ಯಾಭ್ಯಾಸಕ್ಕೆ ಈ ಜಿಲ್ಲೆಯಲ್ಲ್ಲಿರುವಷ್ಟು ಸೌಕರ್ಯ ಇತರ ಜಿಲ್ಲೆಗಳಲ್ಲಿ ಇಲ್ಲವೆನ್ನಬಹುದು. 1971ರಲ್ಲಿ ಈ ಜಿಲ್ಲೆಯಲ್ಲಿ ಒಟ್ಟು 14,37,834 ಮಂದಿ ಅಕ್ಷರಸ್ಥರಿದ್ದರು. 1975-76ರ ಅಂಕೆಅಂಶಗಳಂತೆ 536 ನರ್ಸರಿ ಶಾಲೆಗಳು, 2,418 ಕಿರಿಯ ಪ್ರಾಥಮಿಕ ಶಾಲೆಗಳು, 1,078 ಉನ್ನತ ಪ್ರಾಥಮಿಕ ಶಾಲೆಗಳು, 310 ಪ್ರೌಢ ಶಾಲೆಗಳು, 65 ಶಿಕ್ಷಕರ ತರಬೇತಿ ಮತ್ತು ವೃತ್ತಿ ಶಿಕ್ಷಣ ಶಾಲೆಗಳು, 8 ಪಾಲಿಟೆಕ್ನಿಕ್ ಮತ್ತು ಎಂಜಿನಿಯರಿಂಗ್ ಶಾಲೆಗಳು, ಅಲ್ಲದೆ ವೈದ್ಯಕೀಯ, ನ್ಯಾಯ, ವಾಣಿಜ್ಯ, ತಾಂತ್ರಿಕ ಮೊದಲಾದ ಕಾಲೇಜುಗಳೂ ಸೇರಿದಂತೆ ಒಟ್ಟು 94 ಕಾಲೇಜುಗಳು ಇದ್ದುವು. 1964, ನವಂಬರ್ 24 ರಂದು ಬೆಂಗಳೂರು ವಿಶ್ವವಿದ್ಯಾಲಯ ತನ್ನ ಕಾರ್ಯಾರಂಭ ಮಾಡಿದೆ. ಶಾಲಾ, ಕಾಲೇಜುಗಳು ಹೆಚ್ಚಿವೆ. ಕೃಷಿ ವಿಶ್ವವಿದ್ಯಾಲಯವೂ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದೆ.

ಜಿಲ್ಲೆಯಲ್ಲಿ 1976ರಲ್ಲಿ 47,450 ಟೆಲಿಫೋನ್‍ಗಳು, 558 ಅಂಚೆ ಕಚೇರಿಗಳು, 139 ತಂತಿ ಕಚೇರಿಗಳು ಇದ್ದವು.

ಬೆಂಗಳೂರು ಜಿಲ್ಲೆ ಕನ್ನಡ ಸಾಹಿತ್ಯ ಮತ್ತು ಸಂಸ್ಕøತಿಗೆ ಅಪಾರ ಕೊಡುಗೆ ನೀಡಿದೆ. ಕೈವಲ್ಯ ಕಲ್ಪವಲ್ಲರಿ ಎಂಬ ಆಧ್ಯಾತ್ಮಿಕ ಹಾಡುಗಳನ್ನು ಬರೆದಿರುವ ಸರ್ಪಭೂಷಣ ಮಠದ ಅಧಿಪತಿ ತತ್ತ್ವಜ್ಞಾನಿ ಸಪ್ಪಣ್ಣಯೋಗಿ, ಭಾರತ, ರುಕ್ಮಾಂಗದ ಚರಿತ್ರೆ ಮೊದಲಾದ ಅನೇಕ ಗ್ರಂಥಗಳನ್ನು ರಚಿಸಿರುವ, ಕನ್ನಡ ಕವೀಂದ್ರಾಭರಣ ಬಿರುದಾಂಕಿತ ಲಕ್ಷ್ಮಕವಿ, ಆನಂದರಾಮಾಯಣ ಅಥವಾ ರಾಮಾಭ್ಯುದಯ ಕಥಾಕುಸುಮಮಂಜರಿ ಎಂಬ ಷಟ್ಪ್ಟದಿಕಾವ್ಯವನ್ನು ಬರೆದಿರುವ ಕವಿತಾವಿಚಕ್ಷಣ ತಿಮ್ಮಾಮಾತ್ಯ, ಹನುಮದ್ವಿಲಾಸ ಯಕ್ಷಗಾನ ಗ್ರಂಥ ರಚಿಸಿರುವ ಗಂಗಕವಿ, ವಚನಗಳನ್ನು ಬರೆದಿರುವ ಮುದ್ದುವೀರಸ್ವಾಮಿ, ರಾಜೇಶ್ವರಶತಕ, ವೇಣುಗೋಪಾಲಶತಕ, ಅಂಬಾಸ್ತೋತ್ರ, ನಿರಾಶಗುರುಸ್ತೋತ್ರ, ಶಿವಶರಣ ವಿಲಾಸ ಮುಂತಾದ ಗ್ರಂಥಗಳ ಕರ್ತೃ ಮಹಾಂತದೇಶಿಕ, ಜಯದೇವನ ಗೀತಗೋವಿಂದಕ್ಕೆ ಶೃಂಗಾರಪ್ರಕಾಶಿಕೆ ಎಂಬ ಕನ್ನಡ ಟೀಕೆ ಬರೆದಿರುವ ಅಪ್ರಮೇಯಶಾಸ್ತ್ರಿ, ಪದ್ಮಾವತೀಪರಿಣಯ, ಚಿತ್ರಾವಳಿ, ಸದ್ಬೋಧಪ್ರದೀಪಿಕೆ, ಸಕ್ವಾಕ್ಯ ಕುಸುಮಾವಳಿ, ವೀರಶೈವ ಹಾಸ್ಯಕಥಾವಳಿ, ನರಸಿಂಹಾಚಾರ್ಯಸ್ತವನಂ, ವೀರಸಂಗಸ್ತವನಂ ಮುಂತಾದ ಗ್ರಂಥಗಳನ್ನು ಬರೆದಿರುವ ಜೀರಿಗೆ ಬಸವ ಲಿಂಗಾರ್ಯ, ಪ್ರಭುಚರಿತ್ರೆ ಯಕ್ಷಗಾನ ಬರೆದಿರುವ ನಂದಪ್ಪ ಮೊದಲಾದವರು ಈ ಜಿಲ್ಲೆಯವರು. ಈಚೆಗೆ ಬೆಂಗಳೂರು ಕರ್ನಾಟಕದ ಸಾಹಿತ್ಯ ಚಟುವಟಿಕೆಯ ಮುಖ್ಯ ಕೇಂದ್ರವಾಗಿ ಬೆಳೆಯುತ್ತಿದೆ.

ಈ ಜಿಲ್ಲೆಯ ಅನೇಕ ಸ್ಥಳಗಳಲ್ಲಿ ವಾರ್ಷಿಕ ಜಾತ್ರೆ (ಪರಿಷೆ)ಗಳೂ ಗ್ರಾಮಾಂತರ ಮುಖ್ಯ ಪ್ರದೇಶಗಳಲ್ಲಿ ಸಂತೆಗಳೂ ಸೇರುತ್ತವೆ. ಬೆಂಗಳೂರಿನ ಕರಗ, ದೇವನಹಳ್ಳಿಯ ವೇಣುಗೋಪಾಲಸ್ವಾಮಿ ರಥೋತ್ಸವ, ಬನ್ನೇರುಘಟ್ಟದ ಸಂಪಂಗಿ ರಾಮಸ್ವಾಮಿ ಜಾತ್ರೆ, ಅನೇಕಲ್ಲಿನ ತಿಮ್ಮರಾಯ ಸ್ವಾಮಿ ಜಾತ್ರೆ. ಹೊಸಕೋಟೆಯ ಅವಿಮುಕ್ತೇಶ್ವರ ರಥೋತ್ಸವ ಮತ್ತು ಕರಗ, ಶಿವಗಂಗೆಯ ಶಂಕರ ಜಯಂತಿ ಮತ್ತು ಹೊನ್ನಾದೇವಿ ಜಾತ್ರೆ, ರಾಮನಗರದ ರಾಮದೇವರ ರಥೋತ್ಸವ, ತಿರುಮಲೆ ಗ್ರಾಮದ ರಂಗನಾಥಸ್ವಾಮಿ ಜಾತ್ರೆ, ಮಾಗಡಿಯ ಸೊಮೇಶ್ವರ ರಥೋತ್ಸವ, ಘಾಟಿ ಸುಬ್ರಹ್ಮಣ್ಯದ ಜಾತ್ರೆ, ದೊಡ್ಡಬಳ್ಳಾಪುರದ ವೆಂಕಟರಮಣಸ್ವಾಮಿ ಜಾತ್ರೆ, ಮಳೂರು ಅಪ್ರಮೇಯ ಸ್ವಾಮಿ ಜಾತ್ರೆ, ಕೆಂಗಲ್ ಹನುಮಂತರಾಯನ ಜಾತ್ರೆಗಳು ಪ್ರಸಿದ್ಧವಾದವು. ಜಿಲ್ಲೆಯ 37 ಗ್ರಾಮಗಳಲ್ಲಿ ವಾರಕ್ಕೊಮ್ಮೆ ಸಂತೆ ನಡೆಯುತ್ತದೆ.

ಬೆಂಗಳೂರು ಜಿಲ್ಲೆ ಪ್ರಾಗೈತಿಹಾಸ ಕಾಲದಿಂದಲೂ ಜನವಸತಿಯುಳ್ಳ ಪ್ರದೇಶವಾಗಿತ್ತು. ಇಲ್ಲಿಯ ಜಾಲಹಳ್ಳಿ, ಸೂಡಸಂದ್ರ, ಸಿದ್ಧಾಪುರ ಗ್ರಾಮಗಳ ಬಳಿ ಹಾಗೂ ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಾಲಯದ ಸಮೀಪದಲ್ಲಿ ಸೂಕ್ಷ್ಮ ಶಿಲಾಯುಗದ ಆಯುಧಗಳು ಬೆಳಕಿಗೆ ಬಂದಿವೆ. ಜಡಿಗೇನಹಳ್ಳಿ, ಬೆಳ್ಳಂದೂರು, ಕೋರಮಂಗಲ, ಸಾವನ ದುರ್ಗ, ಚಿಕ್ಕಜಾಲ ಮೊದಲಾದೆಡೆಗಳಲ್ಲಿ ಕಬ್ಬಿಣÀಯುಗದ ಬೃಹತ್ ಶಿಲಾಸಮಾಧಿಗಳು ಇವೆ. ಮಂಕುಂದ, ಆನೆಕಲ್ಲು, ತರಬನಹಳ್ಳಿ, ಮೊದಲಾದೆಡೆಗಳಲ್ಲಿ ಆದಿಚಾರಿತ್ರಿಕ ಕಾಲದ ನೆಲೆಗಳು ಕಂಡುಬಂದಿದೆ. ಬೆಂಗಳೂರಿನ ಬಳಿಯ ಯಶವಂತಪುರ ಮತ್ತು ಎಚ್.ಎ.ಎಲ್. ಪ್ರದೇಶಗಳಲ್ಲಿ ರೋಮ್ ಚಕ್ರವರ್ತಿಗಳಾದ ಆಗಸ್ಟಸ್ ಟೈಬೀರಿಯಸ್ ಇವರ ನಾಣ್ಯಗಳು ದೊರಕಿರುವುದು ಆ ಕಾಲದ ಹೊತ್ತಿಗೆ ಈ ಪ್ರದೇಶ ವಿಶೇಷ ವ್ಯಾಪಾರ ಸಂಪರ್ಕ ಹೊಂದಿತ್ತು ಎಂಬುದನ್ನು ಸೂಚಿಸುತ್ತದೆ. ಹೊಸಕೋಟೆ ತಾಲ್ಲೂಕಿನ ನಂದಗುಡಿ ಮತ್ತು ಚನ್ನಪಟ್ಟಣ ತಾಲ್ಲೂಕಿನ ಮಂಕುಂದ-ಈ ಸ್ಥಳಗಳ ಬಗ್ಗೆ ದೊರಕುವ ಐತಿಹ್ಯಗಳ ಪ್ರಕಾರ ಈ ಪ್ರದೇಶ ನಂದರು ಮತ್ತು ಮೌರ್ಯರ ಆಳ್ವಿಕೆಗೆ ಒಳಪಟ್ಟಿದ್ದಿರಬಹುದೆಂಬುದಕ್ಕೆ ಸೂಚನೆಗಳು ದೊರಕುತ್ತವೆ. ಆದರೆ ಜಿಲ್ಲೆಯ ಇತಿಹಾಸ ಸ್ವಷ್ಟವಾಗಿ ಪ್ರಾರಂಭವಾಗುವುದು ತಲಕಾಡಿನ ಗಂಗರ ಕಾಲದಿಂದ. ಅವರ ಆಳ್ವಿಕೆಗೆ ಸಂಬಂಧಿಸಿದಂತೆ ಅವಿನೀತನ (ಸುಮಾರು 469-520) ಕಾಲದ ಒಂದು ಶಾಸನ ಈ ಪ್ರÀದೇಶದ ಅತ್ಯಂತ ಪ್ರಾಚೀನ ದಾಖಲೆ. ಅನಂತರದ ಕಾಲದ ಅನೇಕ ಶಾಸನಗಳ ಪ್ರಕಾರ ಈ ಜಿಲ್ಲೆ ಗಂಗವಾಡಿ 96,000 ಭಾಗವಾಗಿದ್ದುದಲ್ಲದೆ, ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು, ಚಿಕ್ಕಗಂಗವಾಡಿ ಪ್ರಾಂತ್ಯದ ಕೇಂದ್ರವಾಗಿತ್ತು. 7.8ನೆಯ ಶತಮಾನಗಳಲ್ಲಿ ಅದೇ ತಾಲ್ಲೂಕಿನ ಮಂಕುಂದ ಭೂವಿಕ್ರಮ ಮತ್ತು ಒಂದನೆಯ ಶಿವಮಾರ-ಇವರ ಉಪರಾಜಧಾನಿಯಾಗಿತ್ತು. 8ನೆಯ ಶತಮಾನದಲ್ಲಿ ಶ್ರೀಪುರುಷ ನೆಲಮಂಗಲ ತಾಲ್ಲೂಕಿನ ಮಣ್ಣಿಯನ್ನು ಕೆಲಕಾಲ ತನ್ನ ರಾಜಧಾನಿಯಾಗಿ ಮಾಡಿಕೊಂಡಿದ್ದ. ಆದರೆ ಆ ಶತಮಾನದ ಅಂತ್ಯದಲ್ಲಿ ಈ ಜಿಲ್ಲೆಯ ಅನೇಕ ಭಾಗಗಳು ರಾಷ್ಟ್ರಕೂಟರ ವಶವಾಗಿ ಆಗ ಇಲ್ಲಿಯ ಪ್ರಾಂತ್ಯಾಧಿಕಾರಿಯಾದ ಕಂಬ ಸಹ ಮಣ್ಣಿಯಲ್ಲಿ ನೆಲಸಿದ್ದಂತೆ ತೋರುತ್ತದೆ. 9-10ನೆಯ ಶತಮಾನಗಳಲ್ಲಿ ಜಿಲ್ಲೆಯ ಹೊಸಕೋಟೆ, ದೇವನಹಳ್ಳಿ ತಾಲ್ಲೂಕಿನ ಭಾಗಗಳು ನೊಳಂಬ ಪಲ್ಲವರ ವಶದಲ್ಲಿತ್ತಾದರೂ ಅನಂತರ ಗಂಗ ರಾಜ್ಯಕ್ಕೆ ಸೇರಿದುವು. ಸುಮಾರು 1004ರ ಹೊತ್ತಿಗೆ ರಾಜರಾಜ ಚೋಳನ ಗಂಗಾಕ್ರಮಣದೊಡನೆ ಗಂಗವಾಡಿಯ ಇತರ ಭಾಗಗಳಂತೆ ಜಿಲ್ಲೆ ಸಹ ಚೋಳರ ವಶವಾಯಿತು. ಆಗ ಜಿಲ್ಲೆಯ ದಕ್ಷಿಣ ಭಾಗಕ್ಕೆ ನಿಕರಿಲಿ ಚೋಳಮಂಡಲವೆಂಬ ಹೆಸರಿತ್ತು. 12ನೆಯ ಶತಮಾನದ ಆದಿಭಾಗದಲ್ಲಿ ಜಿಲ್ಲೆಯ ಪಶ್ಚಿಮ ಭಾಗ ಹೊಯ್ಸಳರ ಅಧೀನಕ್ಕೆ ಬಂದರೂ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ ಚೋಳರ ಆಳ್ವಿಕೆ ಸುಮಾರು 1200ದ ವರೆಗಾದರೂ ಮುಂದುವರಿದಂತೆ ತೋರುತ್ತದೆ. 13ನೆಯ ಶತಮಾನದ ಮಧ್ಯಭಾಗದ ಹೊತ್ತಿಗೆ ಈ ಭಾಗಗಳೂ ಹೊಯ್ಸಳ ರಾಮನಾಥನ ವಶಕ್ಕೆ ಬಂದಿದ್ದು, ದೇವನಹಳ್ಳಿ ತಾಲ್ಲೂಕಿನ ಕುಂದಾಣ ಅವನ ರಾಜಧಾನಿಯಾಗಿತ್ತು. ಹೊಯ್ಸಳ ನರಸಿಂಹ ಮತ್ತು ರಾಮನಾಥರ ನಡುವೆ ಕೆಲವು ಘರ್ಷಣೆಗಳೂ ಸಂಭವಿಸಿದುವು. 13ನೆಯ ಶತಮಾನದ ಅಂತ್ಯದ ಹೊತ್ತಿಗೆ ಜಿಲ್ಲೆ 3ನೆಯ ಬಲ್ಲಾಳನ ಅಧಿಪತ್ಯಕ್ಕೆ ಒಳಪಟ್ಟು ಅನಂತರ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯೊಡನೆ ಅದರಲ್ಲಿ ವಿಲೀನವಾಯಿತು. 15ನೆಯ ಶತಮಾನದ ಆರಂಭದ ಹೊತ್ತಿಗೆ ವಿಜಯನಗರದ ಸಾಮಂತರಾಗಿ ಆವತಿಯ ಪಾಳೆಯಗಾರರು ಮತ್ತು ಅವರ ಅನೇಕ ಶಾಖೆಗಳ ಪ್ರಭುತ್ವ ಜಿಲ್ಲೆಯ ನಾನಾ ಭಾಗಗಳಲ್ಲಿ ಆಳ್ವಿಕೆ ನಡೆಸುತ್ತಿತ್ತು. ಆವತಿ, ದೇವನಹಳ್ಳಿ, ಯುಲಹಂಕ, ದೊಡ್ಡಬಳ್ಳಾಪುರ, ಬೆಂಗಳೂರು, ಮಾಗಡಿ, ಸರ್ಜಾಪುರ ಮೊದಲಾದವು ಅಂಥ ಪಾಳೆಯ ಪಟ್ಟುಗಳಲ್ಲಿ ಕೆಲವು. ತಾಳೀಕೋಟೆ ಯುದ್ಧದ ಅನಂತರವೂ ಇವು ಮುಂದುವರಿದುವು. ಆದರೆ ಚನ್ನಪಟ್ಟಣ ಮತ್ತು ಸುತ್ತಲ ಪ್ರದೇಶ ಮಾತ್ರ ಪೆನುಗೊಂಡೆಯಲ್ಲಿ ನೆಲೆಗೊಂಡಿದ್ದ. ವಿಜಯನಗರ ಪ್ರಭುವಿನ ಸಂಬಂಧಿಯೊಬ್ಬನಾದ ಜಗದೇವರಾಯನ ವಶಕ್ಕೆ ಬಂದು ಅವನ ವಂಶದವರು ಸುಮಾರು 1630ರ ತನಕವೂ ಆಳಿದರು. ಅನಂತರ ಮೈಸೂರಿನ ಚಾಮರಾಜ ಅದನ್ನು ವಶಪಡಿಸಿಕೊಂಡ. 1638ರಲ್ಲಿ ಬಿಜಾಪುರದ ಸರದಾರ ರಣದುಲ್ಲಾಖಾನ್ ಬೆಂಗಳೂರೂ ಸೇರಿದಂತೆ ಜಿಲ್ಲೆಯ ಉತ್ತರ ಭಾಗವನ್ನೆಲ್ಲಾ ವಶಪಡಿಸಿಕೊಂಡ. ಮಾಗಡಿ ಭಾಗದಲ್ಲಿ ಕೆಂಪೇಗೌಡನ ವಂಶಸ್ಥರ ಆಳ್ವಿಕೆಯೂ ಚನ್ನಪಟ್ಟಣ, ಕನಕಪುರ ಭಾಗಗಳಲ್ಲಿ ಮೈಸೂರು ಒಡೆಯರ ಆಳ್ವಿಕೆಯೂ ಮುಂದುವರಿದುವು. ಬಿಜಾಪುರದ ಆಳ್ವಿಕೆಗೆ ಸೇರಿದ ಜಿಲ್ಲೆಯ ಭಾಗಗಳು ಶಿವಾಜಿಯ ತಂದೆ ಶಹಾಜಿಗೆ ಜಹಗೀರಾಗಿ ದೊರೆತು ಈ ಪ್ರದೇಶದಲ್ಲಿ ಮರಾಠಾ ಸರದಾರರು ಬಂದು ನೆಲಸಲಾರಂಭಿಸಿದರು. 1654ರಲ್ಲಿ ಮೈಸೂರು ಕಂಠೀರವ ನರಸರಾಜ ಮಾಗಡಿಯನ್ನು ವಶಪಡಿಸಿಕೊಂಡನಲ್ಲದೆ ಬೆಂಗಳೂರನ್ನು ಶಹಾಜಿಯ ವಂಶದ ವೆಂಕಾಜಿಯಿಂದ ಖರೀದಿ ಮಾಡಿ ಈ ಜಿಲ್ಲೆಯ ಬಹು ಪ್ರದೇಶದ ಮೇಲೆ ತನ್ನ ಅಧಿಕಾರವನ್ನು ವಿಸ್ತರಿಸಿದ. ಈ ಮಧ್ಯದಲ್ಲಿ 17ನೆಯ ಶತಮಾನದ ಕೊನೆಯ ಹೊತ್ತಿಗೆ ಹೊಸಕೋಟೆ, ದೊಡ್ಡಬಳ್ಳಾಪುರ ಪ್ರದೇಶಗಳು ಮುಗಲರ ವಶವಾಗಿದ್ದುವು. 1749ರ ಹೊತ್ತಿಗೆ ದೇವನಹಳ್ಳಿ ಪಾಳಯಪಟ್ಟು ಮೈಸೂರು ರಾಜ್ಯಕ್ಕೆ ಸೇರಿತಲ್ಲದೆ 1761ರಲ್ಲಿ ಹೊಸಕೋಟೆ ಮತ್ತು ದೊಡ್ಡಬಳ್ಳಾಪುರಗಳನ್ನು ಮೈಸೂರು ರಾಜ್ಯಕ್ಕೆ ಪಡೆದುಕೊಳ್ಳಲಾಯಿತು. ಮುಂದೆ ಈ ಜಿಲ್ಲೆಯ ಪ್ರದೇಶ ಹೈದರ್ ಮತ್ತು ಟಿಪ್ಪುಸುಲ್ತಾನರ ವಶದಲ್ಲಿತ್ತು. 1791ರಲ್ಲಿ ಬ್ರಿಟಿಷರು ಜಿಲ್ಲೆಯ ಬಹುಭಾಗ ಆಕ್ರಮಿಸಿದರು. 1791ರ ಅನಂತರ ಇದು ಪುನಃ ಮೈಸೂರು ಅರಸರ ವಶಕ್ಕೆ ಬಂದು ಅಂದಿನಿಂದ ಮೈಸೂರು ರಾಜ್ಯದ ಭಾಗವಾಗಿ ಮುಂದುವರಿಯಿತು.

ಇತಿಹಾಸ ಕಾಲಕ್ಕೆ ಸಂಬಂಧಿಸಿದ ಅನೇಕ ವಾಸ್ತುಶಿಲ್ಪ ಕೃತಿಗಳು ಜಿಲ್ಲೆಯಲ್ಲಿ ಉಳಿದುಬಂದಿವೆ. ಗಂಗರ ಕಾಲದ ಕೆಲವು ದೇವಾಲಯಗಳು ನೆಲಮಂಗಲ ತಾಲ್ಲೂಕಿನ ಮಣ್ಣಿ ಮತ್ತು ದಕ್ಷಿಣ ಬೆಂಗಳೂರು ತಾಲ್ಲೂಕಿನ ಬೇಗೂರು, ದೇವನ ಹಳ್ಳಿ ತಾಲ್ಲೂಕಿನ ಗಂಗಾವರ ಮೊದಲಾದ ಸ್ಥಳಗಳಲ್ಲಿವೆ. ಬೆಂಗಳೂರಿನ ಅಲಸೂರು ಸೋಮೇಶ್ವರ ದೇವಾಲಯ, ಹೊಸಕೋಟೆ ತಾಲ್ಲೂಕಿನ ಕೊಂಡರಹಳ್ಳಿಯ ಧರ್ಮೇಶ್ವರ, ಚನ್ನಪಟ್ಟಣ ತಾಲ್ಲೂಕಿನ ಮಳೂರಿನ ಅಪ್ರಮೇಯ ಮತ್ತು ಕೃಷ್ಣ ದೇವಾಲಯಗಳು ಮೂಲತಃ ಚೋಳರ ಕಾಲದವು. ಆದರೆ ಇವುಗಳಲ್ಲಿ ಕೆಲವು ದೇವಾಲಯಗಳು ವಿಜಯನಗರ ಕಾಲದಲ್ಲಿ ಬಡಾವಣೆಗೊಂಡಿವೆ. ಮಾಗಡಿ ತಾಲ್ಲೂಕಿನಲ್ಲಿರುವ ಹುಲಿಕಲ್ಲಿನ ಮಲ್ಲೇಶ್ವರ ದೇವಾಲಯ, ಸಂಕಿಘಟ್ಟದ ವರ್ಧಮಾನ ಬಸದಿ ಇವು ಈ ಜಿಲ್ಲೆಯಲ್ಲಿರುವ ಹೊಯ್ಸಳ ಕಾಲದ ಮುಖ್ಯ ಕೃತಿಗಳು. ಸಾವನದುರ್ಗ, ಹುತ್ರಿದುರ್ಗ, ನಿಜಗಲ್ಲು, ರಾಮನಗರ, ದೇವನಹಳ್ಳಿ ಮೊದಲಾದೆಡೆಗಳಲ್ಲಿ ಪಾಳೆಯಗಾರರು ಹಾಗೂ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಕಾಲದ ಕೋಟೆಗಳು ಉಳಿದುಬಂದಿವೆ.

ಈ ಜಿಲ್ಲೆಯ ಬನ್ನೇರುಘಟ್ಟ, ಶಿವಗಂಗೆ, ಘಾಟಿ ಸುಬ್ರಹ್ಮಣ್ಯ ಇವು ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ಕೇಂದ್ರಗಳು.

ತಾಲ್ಲೂಕು: ಬೆಂಗಳೂರು ಉತ್ತರ ಮತ್ತು ಬೆಂಗಳೂರು ದಕ್ಷಿಣ ಎಂಬುದಾಗಿ ಎರಡು ತಾಲ್ಲೂಕುಗಳಿವೆ.

ಬೆಂಗಳೂರು ಉತ್ತರ ತಾಲ್ಲೂಕು: ಈ ತಾಲ್ಲೂಕನ್ನು ವಾಯವ್ಯ ಮತ್ತು ಉತ್ತರದಲ್ಲಿ ದೊಡ್ಡಬಳ್ಳಾಪುರ, ಈಶಾನ್ಯದಲ್ಲಿ ದೇವನಹಳ್ಳಿ, ಪೂರ್ವದ ಸ್ವಲ್ಪ ಭಾಗದಲ್ಲಿ ಹೊಸಕೋಟೆ, ಪೂರ್ವ ಆಗ್ನೇಯ ಮತ್ತು ದಕ್ಷಿಣದಲ್ಲಿ ಬೆಂಗಳೂರು ದಕ್ಷಿಣ. ನೈರುತ್ಯದಲ್ಲಿ ಮಾಗಡಿ ಮತ್ತು ಪಶ್ಚಿಮದಲ್ಲಿ ನೆಲಮಂಗಲ ಈ ತಾಲ್ಲೂಕುಗಳು ಸುತ್ತುವರಿದಿವೆ. ಈ ತಾಲ್ಲೂಕು ಬೆಂಗಳೂರು ನಗರ ಸಭಾ ಪ್ರದೇಶದ ಬಹುಭಾಗ ಹಾಗೂ ಬೆಂಗಳೂರು ನಗರ ಸಮೂಹಕ್ಕೆ ಸೇರಿರುವ ಬಿಇಎಲ್, ದೇವರಜೀವನಹಳ್ಳಿ, ಎಚ್.ಎಂ.ಟಿ., ಜಾಲಹಳ್ಳಿ, ಕಾಡುಗೊಂಡನಹಳ್ಳಿ ಈ ಉಪನಗರಗಳನ್ನೂ ಯಲಹಂಕ ಪಟ್ಟಣವನ್ನೂ 173 ಗ್ರಾಮಗಳನ್ನೂ ಒಳಗೊಂಡಿವೆ. ಒಟ್ಟು ವಿಸ್ತೀರ್ಣ 487 ಚಕಿಮೀ. ಇದರಲ್ಲಿ 340.1 ಚಕಿಮೀ ಗ್ರಾಮೀಣ ಪ್ರದೇಶ. ಉಳಿದದ್ದು ನಗರ ಮತ್ತು ಕಾರ್ಖಾನೆಗಳ ಪ್ರದೇಶ. ಜನಸಂಖ್ಯೆ 28,04,020 (1981). 

ತಾಲ್ಲೂಕಿನ ಬಹುಭಾಗ ವಿಶಾಲಬಯಲುಗಳಿಂದ ಕೂಡಿದ್ದು ಅಲ್ಲಲ್ಲಿ ಕಣಶಿಲೆಯ ಗುಡ್ಡಗಳಿವೆ. ಯಲಹಂಕದಿಂದ ಉತ್ತರದಲ್ಲಿರುವ ದೊಡ್ಡಬೆಟ್ಟಹಳ್ಳಿ. ಬೆಂಗಳೂರಿನ ವೈಯಾಳಿಕಾವಲ್ ದಿಣ್ಣೆ ತಾಲ್ಲೂಕಿನ ಎತ್ತರದ ಭಾಗಗಳು. ದೊಡ್ಡಬಳ್ಳಾಪುರ ತಾಲ್ಲೂಕಿನಿಂದ ಬರುವ ಅರ್ಕಾವತಿ ಈ ತಾಲ್ಲೂಕಿನ ವಾಯವ್ಯದಲ್ಲಿ ಪ್ರವೇಶಿಸಿ, ಹೆಸರಘಟ್ಟ ಜಲಾಶಯಕ್ಕೆ ನೀರುಣಿಸಿ ಮುಂದೆ ಹರಿದು ನೆಲಮಂಗಲ ತಾಲ್ಲೂಕಿನೆಡೆಗೆ ಸಾಗುತ್ತದೆ. ಬೆಂಗಳೂರಿನ ಗವಿಪುರದ ಬಳಿ ಹುಟ್ಟುವ ವೃಷಭಾವತಿ ತೊರೆ ದಕ್ಷಿಣದತ್ತ ಪ್ರವಹಿಸುತ್ತದೆ. ತಾಲ್ಲೂಕಿನ ಬಹುಭಾಗ ಕೆಂಪು ಮಣ್ಣಿನಿಂದ ಕೂಡಿದ್ದು ರಾಗಿ, ತರಕಾರಿ ಮತ್ತು ಹಣ್ಣುಗಳ ಬೆಳೆಗಳಿಗೆ ಉಪಯುಕ್ತವಾಗಿದೆ. ಇವುಗಳ ವ್ಯವಸಾಯ ಗ್ರಾಮಂತರ ಪ್ರದೇಶಗಳಲ್ಲಿ ವಿಶೇಷವಾಗಿದೆ. ನಗರ ಪ್ರದೇಶದಲ್ಲಿ ಕೈಗಾರಿಕೆಗಳು ಹೆಚ್ಚು. ಬೆಂಗಳೂರಿನಿಂದ ಹೊರಡುವ ಮುಖ್ಯ ರೈಲು ಮತ್ತು ರಸ್ತೆ ಮಾರ್ಗಗಳು ಈ ತಾಲ್ಲೂಕಿನ ಸ್ವಲ್ಪ ಭಾಗವನ್ನು ಕ್ರಮಿಸಿ ಸಾಗುತ್ತವೆ.

ಬೆಂಗಳೂರು ಮಹಾನಗರ ಪ್ರದೇಶವನ್ನು ಬಿಟ್ಟರೆ ತಾಲ್ಲೂಕಿನ ಮುಖ್ಯಸ್ಥಳಗಳಲ್ಲಿ ಯಲಹಂಕ ಪ್ರಮುಖ ಪಟ್ಟಣ. ಐತಿಹಾಸಿಕ ಸ್ಥಳವಾದ ಈ ಊರು ಈಗ ಕೈಗಾರಿಕಾ ನಗರವಾಗಿ ಬೆಳೆಯುತ್ತಿದೆ. ಬೆಂಗಳೂರಿನ ವಾಯವ್ಯದಲ್ಲಿ ನೆಲಮಂಗಲದ ಈಶಾನ್ಯಕ್ಕೆ 10 ಕಿಮೀ ದೂರದಲ್ಲಿರುವ ಹೆಸರಘಟ್ಟ ಅಲ್ಲಿನ ಜಲಾಶಯ ಮತ್ತು ಸುಂದರ ಸನ್ನಿವೇಶದಿಂದ ವಿಹಾರ ಕೇಂದ್ರವಾಗಿದೆ. ಅಲ್ಲಿಯ ದೇವಾಲಯದಲ್ಲಿ ದೂರ್ವಾಸಮುನಿ ಆರಾಧಸುತ್ತಿದ್ದನೆನ್ನಲಾದ ಲಕ್ಷ್ಮೀನರಸಿಂಹ ವಿಗ್ರಹವಿದೆ. ಆ ದೇವಾಲಯದ ಮುಂಭಾಗ ವಿಜಯನಗರದ ಅಚ್ಯುತರಾಯ ಕಟ್ಟಿಸಿದ್ದು. ನೆಲಮಂಗಲಕ್ಕೆ ಈಶಾನ್ಯದಲ್ಲಿ, 13 ಕಿಮೀ ದೂರದಲ್ಲಿ, ಬೆಂಗಳೂರಿಗೆ ವಾಯವ್ಯ ದಿಕ್ಕಿನಲ್ಲಿರುವ ಐಗಂಡಪುರ ಸಹ ಐತಿಹಾಸಿಕ ಸ್ಥಳ. ಬೆಂಗಳೂರಿಗೆ ವಾಯವ್ಯದಲ್ಲಿ ನೆಲಮಂಗಲದಿಂದ 14ಕಿಮೀ ದೂರದಲ್ಲಿರುವ ಕೊಡಿಗೆ ತಿರುಮಲಾಪುರದ ಆಶುರ್‍ಖಾನದಲ್ಲಿ ಟಿಪ್ಪುವಿನ ಅರಮನೆಯಲ್ಲಿ ಇದ್ದವೆನ್ನಲಾದ ಲೋಹದ ಮೂರು ಪಂಜಾಗಳಿವೆ. ಶ್ರೀರಂಗಪಟ್ಟಣದ ಪತನಾನಂತರ ಅವನ್ನು ಇಲ್ಲಿಗೆ ತರಲಾಯಿತಂತೆ.

ಬೆಂಗಳೂರು ದಕ್ಷಿಣ ತಾಲ್ಲೂಕು: ಇದು ಉತ್ತರದಲ್ಲಿ ಬೆಂಗಳೂರು ಉತ್ತರ ತಾಲ್ಲೂಕು ಈಶಾನ್ಯ ಮತ್ತು ಆಗ್ನೇಯದಲ್ಲಿ ಹೊಸಕೋಟೆ ದಕ್ಷಿಣದಲ್ಲಿ ಕನಕಪುರ, ನೈಋತ್ಯದಲ್ಲಿ ರಾಮನಗರ ಮತ್ತು ಪಶ್ಚಿಮದಲ್ಲಿ ಮಾಗಡಿ ಈ ತಾಲ್ಲೂಕುಗಳಿಂದ ಸುತ್ತುವರಿದಿದ್ದು, ಬೆಂಗಳೂರು ನಗರದ ದಕ್ಷಿಣದ ಅಂಚಿನ ಭಾಗ, ಎಚ್.ಎ.ಎಲ್. ಮತ್ತು ಐಟಿಐ ಉಪನಗರಗಳನ್ನೂ 218 ಗ್ರಾಮಗಳನ್ನೂ ಒಳಗೊಂಡಿದೆ. ತಾಲ್ಲೂಕಿನ ಒಟ್ಟು ವಿಸ್ತೀರ್ಣ 539.4 ಚಕಿಮೀ. ಇದರಲ್ಲಿ 509 ಚಕಿಮೀ ಗ್ರಾಮೀಣ ಪ್ರದೇಶ. ಉಳಿದದ್ದು ಕಾರ್ಖಾನೆ ಮತ್ತು ನಗರ ಪ್ರದೇಶ. ಜನಸಂಖ್ಯೆ 3,75,290 (1981).

ಈ ತಾಲ್ಲೂಕಿನ ನೈಋತ್ಯ ಭಾಗದಲ್ಲಿ ಕಣಶಿಲೆಯ ಬೆಟ್ಟಗುಡ್ಡಗಳು ಇವೆ. ಉಳಿದ ಭಾಗ ಬಯಲು. ವೃಷಭಾವತಿ ಬೆಂಗಳೂರು ನಗರದ ಗವಿಪುರದೆಡೆಯಿಂದ ಬಂದು ಕೆಂಗೇರಿ ಮುಖಾಂತರ ದಕ್ಷಿಣಕ್ಕೆ ಹರಯುತ್ತದೆ. ತಾಲ್ಲೂಕಿನ ಬಹುಭಾಗದಲ್ಲಿ ಕೆಂಪುಮಣ್ಣಿನ ಭೂಮಿ ಇದೆ. ಸರಾಸರಿ ವಾರ್ಷಿಕ ಮಳೆ 923.7 ಮಿಮೀ. ಗ್ರಾಮಾಂತರ ಪ್ರದೇಶದಲ್ಲಿ ಕೆಲವು ಕೆರೆಗಳಿಂದ ಸ್ವಲ್ಪಮಟ್ಟಿಗೆ ನೀರಾವರಿ ಸೌಲಭ್ಯ ಇದೆ. ರಾಗಿ, ತರಕಾರಿ, ಹಣ್ಣು, ಹೂವುಗಳನ್ನು ವಿಶೇಷವಾಗಿ ಬೆಳೆಯುತ್ತಾರೆ.

ನಗರ ಭಾಗಗಳು ಮತ್ತು ಪರಿಸರದಲ್ಲಿ ಕೈಗಾರಿಕೆಗಳಿವೆ. ಬೆಂಗಳೂರಿನಿಂದ ಮೈಸೂರು, ಮದರಾಸು, ಸೇಲಮ್ಮುಗಳಿಗೆ ಹೋಗುವ ರೈಲು ಮಾರ್ಗಗಳು ಮತ್ತು ಮದರಾಸು, ಸರ್ಜಾಪುರ, ಹೊಸೂರು, ಕನಕಪುರ ಮತ್ತು ಮೈಸೂರಿಗೆ ಹೋಗುವ ರಸ್ತೆಗಳು ಈ ತಾಲ್ಲೂಕಿನ ಮೂಲಕ ಸಾಗುತ್ತವೆÉ.

ಈ ತಾಲ್ಲೂಕಿನ ಗ್ರಾಮಾಂತರ ಪ್ರದೇಶದ ಮುಖ್ಯ ಸ್ಥಳಗಳಲ್ಲಿ ಬೆಂಗಳೂರಿನ ಆಗ್ನೇಯಕ್ಕೆ 13 ಕಿಮೀ ದೂರ ದಲ್ಲಿರುವ ಬೇಗೂರು ಇತಿಹಾಸ ಪ್ರಸಿದ್ಧ ಸ್ಥಳ. ಬೆಂಗಳೂರು ನಗರದ ದಕ್ಷಿಣದ ಅಂಚಿನಲ್ಲಿರುವ ವಸಂತಪುರದಲ್ಲಿ ವಸಂತ ವಲ್ಲಭರಾಯಸ್ವಾಮಿ ದೇವಾಲಯವಿದೆ. ಇದು ಮಾಂಡವ್ಯ ಮುನಿಯಿಂದ ಆರಾಧಿತವಾದುದೆಂದು ಸ್ಥಳ ಪುರಾಣ ತಿಳಿಸುತ್ತದೆ. ಇಲ್ಲಿ ಎಂಟು ತೀರ್ಥಗಳಿವೆ. ಈ ದೇವಾಲಯದಲ್ಲಿ ವಿವಾಹ ಮಾಡುವುದು ಹೆಚ್ಚು ಶುಭವೆಂದು ಪರಿಗಣಿಸಲಾಗಿದೆ. ಬೆಂಗಳೂರಿನ ಆಗ್ನೇಯದಲ್ಲಿರುವ ಅಗರ ಗ್ರಾಮದಲ್ಲಿ 8ನೆಯ ಶತಮಾನದಲ್ಲೂ ಇದ್ದವೆಂದು ಹೇಳುವ ಕೆಲವು ದೊಡ್ಡ ಕೆರೆಗಳಿವೆ. ಈ ಗ್ರಾಮ ಆನಂದರಾಮಾಯಣವನ್ನು ರಚಿಸಿದ ತಿಮ್ಮಕವಿಯ (18ನೆಯ ಶತಮಾನ) ಜನ್ಮಸ್ಥಳ. ಬೆಂಗಳೂರು ನಗರದ ನೈಋತ್ಯಕ್ಕೆ 16 ಕಿಮೀ ದೂರದಲ್ಲಿ, ಮೈಸೂರು ಮಾರ್ಗದಲ್ಲಿರುವ ಕೆಂಗೇರಿ (ಜನಸಂಖ್ಯೆ 9,659 (1981) ವ್ಯಾಪಾರ ಸ್ಥಳ; 1873ರ ತನಕ ಇದು ತಾಲ್ಲೂಕಿನ ಆಡಳಿತ ಕೇಂದ್ರವಾಗಿತ್ತು. ಈ ಗ್ರಾಮ ಬ್ರಿಟಿಷ್ ಸೈನ್ಯಕ್ಕೆ ತಂಗುದಾಣವಾಗಬಾರದೆಂಬ ಉದ್ದೇಶದಿಂದ ಇದನ್ನು ಟಿಪ್ಪುಸುಲ್ತಾನ್ ಒಮ್ಮೆ ಹಾಳುಗೆಡವಿದ್ದ. ಇಲ್ಲಿ ವಯಸ್ಕರ ಶಿಕ್ಷಣ ಸಮಿತಿಯ ಒಂದು ವಿದ್ಯಾಪೀಠ, ಹತ್ತಿರದಲ್ಲಿ ಒಂದು ಚಲನಚಿತ್ರ ಸ್ಟುಡಿಯೋ ಮತ್ತು ಕೆಂಗೇರಿಯ ಪೂರ್ವಕ್ಕೆ ಸುಮಾರು ಒಂದೂವರೆ ಕಿಮೀ ದೂರದಲ್ಲಿ ಒಂದು ಆಯುರ್ವೇದ ಸಂಶೋಧನ ಕೇಂದ್ರ ಇವೆ. ಎಚ್.ಎ.ಎಲ್. ನಿಂದ 8 ಕಿಮೀ ದೂರದಲ್ಲಿರುವ ಬೆಳ್ಳಂದೂರಿನಲ್ಲಿ ಬೃಹತ್ ಶಿಲಾ ಸಮಾಧಿಗಳು ಇವೆ.

ನಗರ: ಬೆಂಗಳೂರು ಕರ್ನಾಟಕ ರಾಜ್ಯದ ರಾಜಧಾನಿ. ಈ ಹೆಸರಿನ ಜಿಲ್ಲಾ ಹಾಗೂ ತಾಲ್ಲೂಕುಗಳ ಅಡಳಿತ ಕೇಂದ್ರ ಮತ್ತು ರಾಜ್ಯದ ಅತಿ ದೊಡ್ಡ ನಗರ. ಬೆಂಗಳೂರು ಜಿಲ್ಲೆಯ ಮಧ್ಯವರ್ತಿ ತಾಣದಲ್ಲಿ, ದಕ್ಷಿಣಪಿನಾಕಿನಿ ಮತ್ತು ಅರ್ಕಾವತಿ ನದೀ ಕಣಿವೆಗಳನ್ನು ಬೇರ್ಪಡಿಸುವ ಏಣುಭೂಮಿಯ ಮೇಲೆ (ಸಮುದ್ರಮಟ್ಟದಿಂದ ಸುಮಾರು 930 ಮೀ) ಮೈಸೂರಿನ ಈಶಾನ್ಯಕ್ಕೆ 138 ಕಿಮೀ ದೂರದಲ್ಲೂ ಕೆಜಿಎಫ್‍ನ ಪಶ್ಚಿಮಕ್ಕೆ 96 ಕಿಮೀ ದೂರದಲ್ಲೂ ತುಮಕೂರಿನ ಆಗ್ನೇಯಕ್ಕೆ 70 ಕಿಮೀ ದೂರದಲ್ಲೂ ಇದೆ.

ಇಂದಿನ ಬೆಂಗಳೂರು ಬೃಹನ್ನಗರ. ನಗರಸಭಾ ಕಕ್ಷೆಯಲ್ಲಿರುವ ಪ್ರದೇಶವನ್ನಲ್ಲದೆ ಇದಕ್ಕೆ ಹೊಂದಿ ಕೊಂಡಂತಿರುವ ನಗರಾಭಿವೃದ್ಧಿ ವಿಶ್ವಸ್ಥ ವಿಶ್ವಸ್ಥ ಮಂಡಲಿ ಕಕ್ಷೆಯಲ್ಲಿರುವ ಪ್ರದೇಶಗಳು ಹಾಗೂ ದೇವರಜೀವನಹಳ್ಳಿ, ಬಿಇಎಲ್, ಎಚ್.ಎ.ಎಲ್, ಎಚ್.ಎಂ.ಟಿ, ಐಟಿಐ, ಜಾಲಹಳ್ಳಿ ಮತ್ತು ಕಾಡಗೊಂಡನಹಳ್ಳಿ ಈ ಉಪನಗರಗಳನ್ನು ಒಳಗೊಂಡಿದೆ. ಒಟ್ಟಾರೆಯಾಗಿ ನಗರದ ವಿಸ್ತೀರ್ಣ 174.71 ಚಕಿಮೀ (1971). ಜನಸಂಖ್ಯೆ 25,62,089 (1981). ಭಾರತದ ಬೃಹನ್ನಗರಗಳಲ್ಲಿ ಇದು ಆರನೆಯ ಸ್ಥಾನ ಪಡೆದಿದೆ.

ರಾಜ್ಯದ ರಾಜಧಾನಿಯಾಗಿರುವ ಕಾರಣ ಈ ನಗರದಲ್ಲಿ ರಾಜಭವನ, ಶಾಸನಸಭಾ ಭವನ ಮತ್ತು ಕಚೇರಿ, ಸಚಿವಾಲಯ, ರಾಜ್ಯಸರ್ಕಾರದ ಬಹುತೇಕ ಎಲ್ಲ ಇಲಾಖೆಗಳ ಮುಖ್ಯಾಧಿಕಾರಿಗಳ ಕಚೇರಿಗಳು, ಉಚ್ಚ ನ್ಯಾಯಲಯ, ರಾಜ್ಯ ಲೋಕಸೇವಾ ಆಯೋಗದ ಕಚೇರಿ, ರಾಜ್ಯ ಸರ್ಕಾರದಿಂದ ಸ್ಥಾಪಿತವಾಗಿರುವ ಕರ್ನಾಟಕ ವಿದ್ಯುಚ್ಛಕ್ತಿ, ವ್ಯವಸಾಯೋದ್ಯಮ, ಚಲನಚಿತ್ರ ಉದ್ಯಮ, ಸಣ್ಣ ಉದ್ಯಮ, ರಸ್ತೆ ಸಾರಿಗೆ, ಹಣಕಾಸು, ಪ್ರವಾಸೋದ್ಯಮ ಮೊದಲಾದ ಮಂಡಲಿಗಳ ಮುಖ್ಯ ಕಚೇರಿಗಳು ಇವೆ. ಅಲ್ಲದೆ ರಕ್ಷನಾಪಡೆಯ ಸಬ್ ಏರಿಯಾ ಘಟಕದ ಕೇಂದ್ರ, ವಿಮಾನದಳದ ಉಪಕೇಂದ್ರ, ಅಕೌಂಟೆಂಟ್ ಜನರಲ್‍ರವರ ಕಚೇರಿ, ರಿಸರ್ವ್ ಬ್ಯಾಂಕಿನ ಶಾಖೆ ಹಾಗೂ ಕೇಂದ್ರ ಸರ್ಕಾರದ ಪುರಾತತ್ವ, ಪರಮಾಣುಶಕ್ತಿ ಮತ್ತು ಜನ ಗಣತಿ, ತನಿಖೆ, ಗುಪ್ತಚಾರ, ನಾಗರಿಕ ವಿಮಾನ ಹವಾ ಮತ್ತು ಎನ್‍ಸಿಸಿ ನಿರ್ದೇಶನ, ಆದಾಯ ತೆರಿಗೆ, ವಾರ್ತಾ ಮತ್ತು ಪ್ರಸಾರ, ದಕ್ಷಿಣ ರೈಲ್ವೆ, ಭೂಗರ್ಭ”ಜ್ಞಾನ, ಸರ್ವೆ ಆಫ್ ಇಂಡಿಯಾ, ಅಂಚೆ ಮತ್ತು ತಂತಿ ಈ ಮೊದಲಾದವುಗಳ ಪ್ರಾದೇಶಿಕ ಕಚೇರಿಗಳೂ ರಾಷ್ಟ್ರೀಯ ಉಳಿತಾಯ ಯೋಜನಾ ಸಂಸ್ಥೆ. ಕಾಫಿ ಬೋರ್ಡಿನ ಮುಖ್ಯ ಆಡಳಿತ ಕಚೇರಿ, ಲೈಫ್ ಇನ್ಷೂರೆನ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ, ರೇಷ್ಮೆ ಮಂಡಲಿ, ವ್ಯವಸಾಯ ಪುನರ್ಧನ ಹೂಡಿಕೆ ಸಂಸ್ಥೆ, ವ್ಯವಸಾಯೋದ್ಯಮ ಅಭಿವೃದ್ಧಿ ಮಂಡಲಿ ಮೊದಲಾದವುಗಳ ಶಾಖಾ ಕಚೇರಿಗಳೂ ಸಹ ಇಲ್ಲಿವೆ.

ಬೆಂಗಳೂರು ನಗರ ಕರ್ನಾಟಕದ ಪ್ರಮುಖ ಔದ್ಯಮಿಕ ಮತ್ತು ವಾಣಿಜ್ಯ ಕೇಂದ್ರ. ನಗರದಲ್ಲಿ ಸಾವಿರಾರು ವಿವಿಧ ಕೈಗಾರಿಕಾ ಘಟಕಗಳಿದ್ದು ಲಕ್ಷಾಂತರ ಮಂದಿಗೆ ಉದ್ಯೋಗ ಒದಗಿಸಿವೆ. ಬೃಹತ್ ಪ್ರಮಾಣದ ಉದ್ಯಮಗಳಲ್ಲಿ ಕೇಂದ್ರ ಸರ್ಕಾರದ ವತಿಯಿಂದ ನಡೆಯುತ್ತಿರುವ ಹಿಂದೂಸ್ತಾನ್ ಮೆಷಿನ್ ಟೂಲ್ಸ್ (ಎಚ್.ಎಂ.ಟಿ.), ಹಿಂದೂಸ್ತಾನ್ ಏರ್‍ಕ್ರಾಫ್ಟ್ ಲಿಮಿಟೆಡ್ (ಎಚ್.ಎ.ಎಲ್.), ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ (ಐಟಿಐ), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಪ್ರಮುಖವಾದುವು. ಅಲ್ಲದೆ ರೇಡಿಯೋ ಅಂಡ್ ಎಲೆಕ್ಟ್ರಿಕಲ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ (ಈಗ ಭಾರತ್ ಹೆವಿ ಎಲೆಕ್ಟ್ರಿಕಲ್ ಸಂಸ್ಥೆಯ ಭಾಗ) ಮತ್ತು ಭಾರತ್ ಅರ್ತ್‍ಮೂವರ್ಸ್ ಲಿಮಿಟೆಡ್‍ನ ಒಂದು ಘಟಕ ಸಹ ಇಲ್ಲಿ ಸ್ಥಾಪಿತವಾಗಿವೆ. ಗೌರ್ನಮೆಂಟ್ ಎಲೆಕ್ಟ್ರಿಕ್ ಫ್ಯಾಕ್ಟರಿ ಮತ್ತು ನ್ಯೂ ಗೌರ್ನಮೆಂಟ್ ಎಲೆಕ್ಟ್ರಿಕ್ ಫ್ಯಾಕ್ಟರಿ, ಮೈಸೂರ್ ಪೋರ್ಸೆಲಿನ್ ಲಿಮಿಟೆಡ್, ಗೌರ್ನಮೆಂಟ್ ಸೋಪ್ ಫ್ಯಾಕ್ಟರಿ ಇವು ರಾಜ್ಯ ಸರ್ಕಾರದ ವತಿಯಿಂದ ಸ್ಥಾಪಿತವಾಗಿರುವ ಬೃಹತ್ ಕಾರ್ಖಾನೆಗಳು, ಇಲ್ಲಿಯ ಸರ್ಕಾರಿ ಡೈರಿ ಸಹ ಬೃಹತ್ ಉದ್ಯಮ. ಸರ್ಕಾರಿ ಮುದ್ರಣಾಲಯ ರಾಜ್ಯದ ಅತಿ ದೊಡ್ಡ ಮುದ್ರಣಾಲಯ. ಖಾಸಗಿ ಒಡೆತನದಲ್ಲಿರುವ ಬೃಹತ್ ಉದ್ಯಮಗಳಲ್ಲಿ ಬೆಂಗಳೂರು ಉಲ್ಲನ್ ಕಾಟನ್ ಮತ್ತು ಸಿಲ್ಕ್ ಕಂಪನಿ, ರಾಜಾ ಮತ್ತು ಮಿನರ್ವ-ಈ ಬಟ್ಟೆ ತಯಾರಿಕಾ ಕಾರ್ಖಾನೆಗಳು. ಕಿರ್ಲೋಸ್ಕರ್ ಎಲೆಕ್ಟ್ರಿಕ್ ಫ್ಯಾಕ್ಟರಿ, ಮೋಟಾರ್ ಇಂಡಸ್ಟ್ರೀಸ್ ಕಂಪನಿ (ಮೈಕೊ), ಹೆಗ್ಗಡೆ ಅಂಡ್ ಗೋಲೆ ಗಡಿಯಾರ ಕಾರ್ಖಾನೆ ಮುಂತಾದವನ್ನು ಹೆಸರಿಸಬಹುದು. ಅಲ್ಲದೆ ಅಗರಬತ್ತಿ, ವಿವಿಧ ರೀತಿಯ ಯುಂತ್ರಗಳು ಮತ್ತು ಯಂತ್ರೋಪಕರಣಗಳು, ರಾಸಾಯನಿಕ ವಸ್ತುಗಳು, ಗಾಜು ಮತ್ತು ಗಾಜಿನ ಸಾಮಾನುಗಳು, ಇಟ್ಟಿಗೆ ಮತ್ತು ಪೋರ್ಸೆಲಿನ್ ವಸ್ತುಗಳು, ಪಾತ್ರೆಗಳು, ಕುಕ್ಕರ್ ಮುಂತಾದ ಗೃಹೋಪಯೋಗಿ ಸಲಕರಣೆಗಳು, ಹೋಲಿದ ಬಟ್ಟೆಗಳು, ಸುಗಂಧ ದ್ರವ್ಯಗಳು, ಉಕ್ಕು, ಔಷಧಗಳು, ಸಿದ್ಧ ಆಹಾರ ಪದಾರ್ಥಗಳು, ಬೀರ್-ವಿಸ್ಕಿ ಮೊದಲಾದ ಪಾನೀಯಗಳು, ಅಲ್ಯುಮಿನಿಯಮ್ ಮತ್ತು ಸ್ಟೇನ್‍ಲೆಸ್ ಸ್ಟೀಲ್ ವಸ್ತುಗಳು, ಪ್ಲೈವುಡ್ ಮೊದಲಾದವನ್ನು

ತಯಾರಿಸುವ ಮತ್ತು ಹಿಟ್ಟು ರವೆ ಮುಂತಾದವನ್ನು ಉತ್ಪಾದಿಸುವ, ಮುದ್ರಣ ಪ್ರಕಾಶನ ಮುಂತಾದವುಗಳಲ್ಲಿ ನಿರತವಾಗಿರುವ ಹಲವಾರು ಉದ್ಯಮಗಳು ಈ ನಗರದಲ್ಲಿವೆ. ಬೆಂಗಳೂರು ರೇಷ್ಮೆ ಬಟ್ಟೆಗಳ ಉತ್ಪಾದನೆಯಲ್ಲೂ ಪ್ರಮುಖ ಸ್ಥಾನ ಪಡೆದಿದೆ. ಇಲ್ಲಿ ಕೋಳಿಸಾಕಣೆ ಒಂದು ದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ.

ಬೆಂಗಳೂರಿನ ಬೃಹತ್ ಕಾರ್ಖಾನೆಗಳಲ್ಲಿ ತಯಾರಾಗುವ ಲೇತ್ ಮೊದಲಾದ ಯಂತ್ರಗಳು, ವಿಮಾನಗಳು ಮತ್ತು ವಿಮಾನ ಸಲಕರಣೆಗಳು, ರೈಲ್ವೆಗಾಡಿಗಳು, ಟೆಲಿಫೋನ್ ಉಪಕರಣಗಳು, ಎಲೆಕ್ಟ್ರಾನಿಕ್ ಉಪಕರಣಗಳು, ಗಡಿಯಾರಗಳು ಮುಂತಾದವು ಹಾಗೂ ಅಗರಬತ್ತಿ ಮೊದಲಾದವಕ್ಕೆ ಅಂತಾರಾಷ್ಟ್ರೀಯ ಬೇಡಿಕೆ ಇದ್ದು ತಮ್ಮದೇ ಆದ ಮಾರಾಟ ವಿಭಾಗಗಳನ್ನು ಹೊಂದಿವೆ. ಬೆಂಗಳೂರಿನ ಕೈಗಾರಿಕೋತ್ಪನ್ನಗಳು, ಮಾದಕ ಪಾನೀಯಗಳು ಮೊದಲಾದವು ಭಾರತಾದ್ಯಂತ ವ್ಯಾಪಾರವಾಗುತ್ತವೆ. ಬೆಂಗಳೂರಿನ ವಾಣಿಜ್ಯ ರಂಗದಲ್ಲಿ ಮುಖ್ಯ ಪಾತ್ರ ವಹಿಸಿರುವ ಅನೇಕ ವ್ಯಾಪಾರಸಂಸ್ಥೆಗಳು ಇಲ್ಲಿರುವುವಲ್ಲದೆ, ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ವ್ಯಾಪ್ತಿಯುಳ್ಳ ಅನೇಕ ವ್ಯಾಪಾರ ಸಂಸ್ಥೆಗಳು ತಮ್ಮ ಸ್ಥಳೀಯ ಅಥವಾ ಪ್ರಾದೇಶಿಕ ವಿಭಾಗಗಳನ್ನೂ ವ್ಯಾಪಾರದ ಕೋಠಿಗಳನ್ನೂ ಇಲ್ಲಿ ಸ್ಥಾಪಿಸಿವೆ.

ವ್ಯಾಪಾರ ಮತ್ತು ಉದ್ಯಮಗಳಿಗೆ ಪೋಷಕನಾಗಿ ಇಲ್ಲಿ ಕರ್ನಾಟಕ ಫೈನಾನ್ಸಿಯಲ್ ಕಾರ್ಪೋರೇಷನ್, ಇಂಡಸ್ಟ್ರೀಯಲ್ ಫೈನಾನ್ಸಿಯಲ್ ಕಾರ್ಪೋರೇಷನ್, ಸ್ಮಾಲ್ ಇಂಡಸ್ಟ್ರೀಸ್ ಕಾರ್ಪೋರೇಷನ್, ಅಪೆಕ್ಸ್ ಬ್ಯಾಂಕ್ ಮೊದಲಾದ ಹಣಕಾಸು ಸಂಸ್ಥೆಗಳೂ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬ್ಯಾಂಕುಗಳ ಶಾಖೆಗಳೂ ಇವೆ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕೆನರಾ ಬ್ಯಾಂಕ್, ವಿಜಯ ಬ್ಯಾಂಕ್ ಮತ್ತು ವೈಶ್ಯಾ ಬ್ಯಾಂಕ್-ಇವುಗಳ ಪ್ರಧಾನ ಕಚೇರಿಗಳು ಇರುವುದೂ ಬೆಂಗಳೂರಿನಲ್ಲೇ; ಅಲ್ಲದೆ ಸ್ಟಾಕ್ ಎಕ್ಸ್‍ಚೇಂಜ್, ಕರ್ನಾಟಕ ಛೇಂಬರ್ಸ್ ಆಫ್ ಕಾಮರ್ಸ್ ಮೊದಲಾದವೂ ಇಲ್ಲಿ ಸ್ಥಾಪಿತವಾಗಿವೆ. ಜಿಲ್ಲೆಯ ಮತ್ತು ನಗರ ವ್ಯಾಪ್ತಿಯ ವ್ಯಾಪಾರ ವ್ಯವಹಾರಗಳಿಗಾಗಿ ಅನೇಕ ಸಗಟು ವ್ಯಾಪಾರದ ಮಳಿಗೆಗಳು, ರೆಗ್ಯುಲೇಟೆಡ್ ಮಾರ್ಕೆಟ್ ಮೊದಲಾದವೂ ಇವೆ.

ಬೆಂಗಳೂರಿನ ಆರ್ಥಿಕ ಚಟುವಟಿಕೆಗಳಿಗೆ ಇದರ ಸನ್ನಿವೇಶವೂ ಮುಖ್ಯ ಕಾರಣ. ಎರಡೂ ಕರಾವಳಿಗಳಿಂದ ಸುಮಾರು ಸಮದೂರದಲ್ಲಿರುವ ಈ ನಗರ ಉತ್ತಮ ಸಂಪರ್ಕಜಾಲ ಹೊಂದಿದೆ. ಬೆಂಗಳೂರಿನಲ್ಲಿ ನಾಗರಿಕ ವಿಮಾನ ನಿಲ್ದಾಣವಿದ್ದು ಇಲ್ಲಿಂದ ಮುಂಬಯಿ, ದೆಹಲಿ, ಮದರಾಸು, ಹೈದರಾಬಾದ್, ಮಂಗಳೂರು, ಕೊಚ್ಚಿ ಮೊದಲಾದೆಡೆಗೆ ವಿಮಾನ ಸಂಪರ್ಕ ಇದೆ. ಬೆಂಗಳೂರಿನಿಂದ ಮದರಾಸು, ಗುಂತಕಲ್ಲು, ಅರಸೀಕೆರೆ, ಮೈಸೂರು, ಸೇಲಮ್ ಮತ್ತು ಬಂಗಾರಪೇಟೆಗಳಿಗೆ ರೈಲು ಮಾರ್ಗಗಳು ಇವೆ. ಅಲ್ಲದೆ ಇಲ್ಲಿಂದ ಮದರಾಸು, ಮುಂಬಯಿ, ಹೈದರಾಬಾದು, ನೀಲಗಿರಿ, ಸೇಲಮ್ಮುಗಳ ಕಡೆಗೆ ಹೋಗುವ ಹಾಗೂ ರಾಜ್ಯದ ಬಹುತೇಕ ಎಲ್ಲ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಮಾರ್ಗಗಳು ಇರುವುದಲ್ಲದೆ, ರಾಜ್ಯದ ಮುಖ್ಯಸ್ಥಳಗಳು ಹಾಗೂ ಮದರಾಸು, ತಿರುಪತಿ, ತಿರುಚಿನಾಪಳ್ಳಿ, ಮಧುರೆ, ಕೊಯಮತ್ತೂರು, ಕಲ್ಲಿಕೋಟೆ, ಪಣಜಿ, ಮುಂಬಯಿ, ಹೈದರಾಬಾದು ಮೊದಲಾದೆಡೆಗಳಿಗೆ ನೇರ ಬಸ್ ಸಂಪರ್ಕ ಕೂಡ ಇದೆ.

ನಗರದಲ್ಲಿ ಆಕಾಶವಾಣಿ ಕೇಂದ್ರ, ಪ್ರಧಾನ ಅಂಚೆಕಛೇರಿ, ಹಲವು ಶಾಖಾ ಕಚೇರಿಗಳು, ನಾಲ್ಕು ಟೆಲಿಫೋನ್ ಎಕ್ಸ್‍ಚೇಂಜ್‍ಗಳೂ ಇವೆ. ನಗರದಿಂದ ದೆಹಲಿ, ಮುಂಬಯಿ, ಹೈದರಾಬಾದು, ಕೊಯಮತ್ತೂರು ಮೊದಲಾದೆಡೆಗಳಿಗೆ ನೇರ ಟೆಲಿಫೋನ್ ಡಯಲಿಂಗ್ ಸೌಲಭ್ಯ ಇದೆ.

ಬೆಂಗಳೂರು ನಗರದ ಅಭಿವೃದ್ಧಿ ಮತ್ತು ನಾಗರಿಕ ಸೌಲಭ್ಯಗಳ ಪೂರೈಕೆಗಾಗಿ, ನಗರಸಭೆಯಲ್ಲದೆ ನಗರಾಭಿವೃದ್ಧಿ ವಿಶ್ವಸ್ಥಮಂಡಲಿ, ಬೆಂಗಳೂರು ಜಲಮಂಡಲಿ ಮೊದಲಾದವುಗಳು ಇವೆ. ವಿಶಾಲವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ಹೆಸರುಘಟ್ಟ ಮತ್ತು ತಿಪ್ಪಗೊಂಡನಹಳ್ಳಿ ಕೆರೆಗಳಿಂದ ಹಾಗೂ ಕಾವೇರಿ ನದಿಯಿಂದ ನೀರು ಸರಬರಾಜು ಮಾಡುವ ವ್ಯವಸ್ಥೆ ಇದೆ.

ವಿಕ್ಟೋರಿಯಾ ಮತ್ತು ಬೌರಿಂಗ್ ನಗರದ ದೊಡ್ಡ ಆಸ್ಪತ್ರೆಗಳು. ಇವು ಅಲ್ಲದೆ ನಗರದಲ್ಲಿ ಅನೇಕ ಆಸ್ಪತ್ರೆಗಳಿವೆ. ಆರೋಗ್ಯ ಕೇಂದ್ರಗಳು, ಔಷಧಾಲಯಗಳು, ಹೆರಿಗೆ ಮತ್ತು ಶಿಶುಕಲ್ಯಾಣಕೇಂದ್ರಗಳು, ಕುಟುಂಬ ಯೋಜನಾ ಕೇಂದ್ರಗಳು, ಮಕ್ಕಳ ಆಸ್ಪತ್ರೆಗಳು, ಕ್ಷಯರೋಗ ಆಸ್ಪತ್ರೆಗಳು, ಮಿದುಳು ರೋಗಗಳ ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆ, ಕುಷ್ಠರೋಗ ಆಸ್ಪತ್ರೆ ಇವುಗಳ ಜೊತೆಗೆ ಅನೇಕ ಖಾಸಗಿ ಔಷಧಾಲಯಗಳೂ ಶುಶ್ರೂಷಾ ಗೃಹಗಳೂ ಇವೆ.

ಬೆಂಗಳೂರು ನಗರದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯಗಳಲ್ಲದೆ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್, ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ವತಿಯಿಂದ ನಡೆಯುತ್ತಿರುವ ಆಡುಗೋಡಿ ಕ್ಷೀರೋದ್ಯಮ ಸಂಶೋಧನ ಕೇಂದ್ರ ಮುಂತಾದವುಗಳಿವೆ. ಈ ಸಂಸ್ಥೆಗಳಲ್ಲಿ ವಿಜ್ಞಾನದ ಹಲವು ವಿಭಾಗಗಳ ಉನ್ನತ ಶಿಕ್ಷಣದ ವ್ಯವಸ್ಥೆ ಇದೆ. ಬೆಂಗಳೂರಿನಲ್ಲಿ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಶಾಸ್ತ್ರ ಕಾಲೇಜುಗಳೂ ಗೃಹ ವಿಜ್ಞಾನ, ನ್ಯಾಯಶಾಸ್ತ್ರ, ಶಿಕ್ಷಣ ತರಬೇತಿ, ಸಂಸ್ಕøತ, ದೈಹಿಕ ಶಿಕ್ಷಣ, ಆಯುರ್ವೇದ, ಹೋಮಿಯೋಪತಿ, ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಮುಂತಾದ ಕಾಲೇಜುಗಳೂ ಇವೆ. ಸೆಂಟ್ರಲ್ ಕಾಲೇಜು ಈ ನಗರದ ಅತ್ಯಂತ ಹಳೆಯ ಕಾಲೇಜು (ಸ್ಥಾಪನೆ, 1858). ಪಾಲಿಟೆಕ್ನಿಕ್ಕುಗಳು, ಕೈಗಾರಿಕಾ ತರಬೇತಿ ಸಂಸ್ಥೆ ಕಸಬು ತರಬೇತಿ ಸಂಸ್ಥೆಗಳು, ಕಚೇರಿ ವಿಧಾನ ತರಬೇತಿ ಸಂಸ್ಥೆ, ಸಹಕಾರ ತರಬೇತಿ ಕೇಂದ್ರ, ಬೆರಳಚ್ಚು ಮತ್ತು ಶೀಘ್ರಲಿಪಿ ಸಂಸ್ಥೆಗಳೂ ಪ್ರೌಢ ಮಾಧ್ಯಮಿಕ ಮತ್ತು ಪ್ರಾಥಮಿಕ ಶಾಲೆಗಳೂ ಕೇಂದ್ರಿಯ ವಿದ್ಯಾಲಯಗಳೂ ಇಲ್ಲಿವೆ. ಬೆಂಗಳೂರು ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್, ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೊ ಸೈನ್ಸಸ್ ಇವು ಉನ್ನತ ಸಂಶೋಧನೆಯ ಸಂಸ್ಥೆಗಳೂ ಆಗಿವೆ. ಪ್ರಸಿದ್ಧ ವಿಜ್ಞಾನಿ ಸಿ. ವಿ. ರಾಮನ್‍ರಿಂದ ಸ್ಥಾಪಿತವಾದ ರಾಮನ್ ರಿಸರ್ಚ್ ಇನ್‍ಸ್ಟಿಟ್ಯೂಟ್ ಭೌತ ವಿಜ್ಞಾನದಲ್ಲಿ ಉಚ್ಚಮಟ್ಟದ ಸಂಶೋಧನಾ ಕಾರ್ಯದಲ್ಲಿ ನಿರತವಾಗಿದೆ. ಬೃಹತ್ ಸಂಶೋಧನಾ ಸಂಸ್ಥೆಗಳಲ್ಲಿ ನ್ಯಾಷನಲ್ ಏರೊನಾಟಿಕಲ್ ಲ್ಯಾಬೊರೇಟರಿ, ಎಲೆಕ್ಟ್ರಿಕಲ್ ಅಂಡ್ ರೇಡಾರ್ ಡೆವಲಪ್‍ಮೆಂಟ್ ಎಸ್ಟಾಬ್ಲಿಷ್‍ಮೆಂಟ್, ಏರೊನಾಟಿಕಲ್ ಡೆವಲಪ್‍ಮೆಂಟ್ ಎಸ್ಟಾಬ್ಲಿಷ್‍ಮೆಂಟ್, ಫಾರೆಸ್ಟ್ ರಿಸರ್ಚ್ ಲ್ಯಾಬೊರೇಟರಿ, ಇಂಡಿಯನ್ ವೆಟರಿನರಿ ರಿಸರ್ಚ್ ಇನ್‍ಸ್ಟಿಟ್ಯೂಟ್, ಇನ್‍ಸ್ಟಿಟ್ಯೂಟ್ ಆಫ್ ಹಾರ್ಟಿಕಲ್‍ಚರಲ್ ರಿಸರ್ಚ್, ನ್ಯಾಷನಲ್ ಟ್ಯೂಬರ್ ಕ್ಯುಲಾಸಿಸ್ ಇನ್‍ಸ್ಟಿಟ್ಯೂಟ್, ವೈರಸ್ ರಿಸರ್ಚ್ ಇನ್‍ಸ್ಟಿಟ್ಯೂಟಿನ ಪ್ರಾದೇಶಿಕ ಕೇಂದ್ರ, ಟೆಲಿಕಮ್ಯುನಿಕೇಷನ್ ಸರ್ವಿಸ್ ಇನ್‍ಸ್ಟಿಟ್ಯೂಟ್, ಸೆಂಟ್ರಲ್ ಮೆಡಿಸನಲ್ ಪ್ಲಾಂಟ್ಸ್ ಆರ್ಗನೈಸೇಷನ್, ಸೆಂಟ್ರಲ್ ಮೆಷಿನ್ ಟೂಲ್ಸ್ ಇನ್‍ಸ್ಟಿಟ್ಯೂಟ್, ಕಾಮನ್‍ವೆಲ್ತ್ ಇನ್‍ಸ್ಟಿಟ್ಯೂಟ್ ಆಫ್ ಬಯಾಲಾಜಿಕಲ್ ಕಂಟ್ರೋಲ್‍ನ ಶಾಖೆ, ಇನ್‍ಸ್ಟಿಟ್ಯೂಟ್ ಆಫ್ ಸೋಷಿಯಲ್ ಅಂಡ್ ಎಕನಾಮಿಕ್ ಚೇಂಜ್ ಇವು ಪ್ರಮುಖವಾದುವು. ಇಂಡಿಯನ್ ನ್ಯಾಷನಲ್ ಸೈಂಟಿಫಿಕ್ ಡಾಕ್ಯುಮೆಂಟೇಷನ್ ಸೆಂಟರ್, ನ್ಯಾಷನಲ್ ಪ್ರೊಡಕ್ಟಿವಿಟಿ ಕೌನ್ಸಿಲ್, ಸ್ಮಾಲ್ ಇಂಡಸ್ಟ್ರೀಸ್ ಸರ್ವಿಸ್ ಇನ್ ಸ್ಟಿಟ್ಯೂಟ್ ಮುಂತಾದವೂ ಔದ್ಯಮಿಕ ಮತ್ತು ವೈಜ್ಞಾನಿಕ ಸಂಶೋಧನೆಗೆ ಪೂರಕ ಸಂಸ್ಥೆಗಳಾಗಿವೆ. ಅಲ್ಲದೆ ಅನೇಕ ಔದ್ಯಮಿಕ ಸಂಸ್ಥೆಗಳು ಮತ್ತು ಕೆಲವು ಸರ್ಕಾರಿ ಇಲಾಖೆಗಳು ಸ್ವಂತವಾದ ಸಂಶೋಧನಾ ವಿಭಾಗಗಳನ್ನು ಬೆಳಸಿಕೊಂಡಿವೆ. ರಾಜ್ಯಸರ್ಕಾರದ ಕೇಂದ್ರ ಗ್ರ್ರಂಥಾಲಯವಲ್ಲದೆ ಇತರ ಗ್ರ್ರಂಥಾಲಯಗಳೂ ಅನೇಕ ವಾಚನಾಲಯಗಳೂ ಇಲ್ಲಿವೆ.

ಕ್ರಮವಾಗಿ ಕೇಂದ್ರ ಮತ್ತು ರಾಜ್ಯಸರ್ಕಾರಗಳಿಂದ ಸ್ಥಾಪಿತವಾಗಿರುವ ವಿಶ್ವೇಶ್ವರಯ್ಯ ಔದ್ಯಮಿಕ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ ಮತ್ತು ಸರ್ಕಾರಿ ವಸ್ತುಸಂಗ್ರಹಾಲಯ, ರಾಜ್ಯ ಸರ್ಕಾರದ ವತಿಯಿಂದ ಸ್ಥಾಪಿತವಾಗಿರುವ ಸಾಹಿತ್ಯ, ಲಲಿತಕಲೆ, ನಾಟಕ ಮತ್ತು ಸಂಗೀತ ಅಕಾಡೆಮಿಗಳು ಬೆಂಗಳೂರಿನಲ್ಲಿವೆ. ಇವಲ್ಲದೆ ನಗರದ ಬೌದ್ಧಿಕ ಮತ್ತು ಸಾಂಸ್ಕøತಿಕ ಚಟುವಟಿಕೆಗಳಲ್ಲಿ ನಿರತವಾಗಿರುವವುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಮಿಥಿಕ್ ಸೊಸೈಟಿ, ಭಾರತೀಯ ವಿದ್ಯಾಭವನ ಪ್ರಾದೇಶಿಕ ಕೇಂದ್ರ, ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವಲ್ರ್ಡ್ ಕಲ್ಚರ್, ಗೋಖಲೆ ಸಾರ್ವಜನಿಕ ಸಂಸ್ಥೆ, ಅಲೈಯನ್ಸ್, ಪ್ರಾನ್ಸಿಸ್, ಮ್ಯಾಕ್ಸ್ ಮುಲ್ಲರ್‍ಭವನ, ಬೈಬಲ್ ಸೊಸೈಟಿ ಆಫ್ ಇಂಡಿಯ, ಮಹಾಬೋಧಿ ಸೊಸೈಟಿ, ಥಿಯಾಸಫಿಕಲ್ ಸೊಸೈಟಿ ಮೊದಲಾದವನ್ನು ಹೆಸರಿಸಬಹುದು.

ಬೆಂಗಳೂರು ನಗರ ಪತ್ರಿಕೋದ್ಯಮ ರಂಗದಲ್ಲೂ ಹೆಚ್ಚಿನ ಬೆಳೆವಣಿಗೆ ಸಾಧಿಸಿದೆ. 1972ರ ಅಂಕೆ ಅಂಶಗಳ ಪ್ರಕಾರ ಇಲ್ಲಿಂದ ಪ್ರಕಟವಾಗುತ್ತಿರುವ ದಿನ. ವಾರ, ಮಾಸ, ತ್ರೈಮಾಸಿಕ, ಅರ್ಧವಾರ್ಷಿಕ ಕನ್ನಡ ಪತ್ರಿಕೆಗಳ ಸಂಖ್ಯೆ 92. ಕನ್ನಡವೇ ಅಲ್ಲದೆ ಇಂಗ್ಲಿಷ್, ತಮಿಳು, ತೆಲುಗು, ಮಲೆಯಾಳಂ, ಹಿಂದಿ, ಮರಾಠಿ, ಉರ್ದು ಮುಂತಾದ ಭಾಷೆಗಳಲ್ಲಿ ಪ್ರಕಟವಾಗುವ ಪತ್ರಿಕೆಗಳ ಒಟ್ಟು ಸಂಖ್ಯೆ 113. ಇತ್ತೀಚೆಗೆ ಕೆಲವು ಹೊಸ ಪತ್ರಿಕೆಗಳು ಪ್ರಕಟಣೆ ಆರಂಭಿಸಿವೆ.

ನಗರದಲ್ಲಿ ಮೂರು ಚಲನಚಿತ್ರ ಸ್ಟೂಡಿಯೋಗಳೂ ಅನೇಕ ಚಲನಚಿತ್ರ ಮಂದಿರಗಳೂ ಇವೆ. ಇಲ್ಲಿರುವ ಆದರ್ಶ ಫಿಲಮ್ ಇನ್‍ಸ್ಟಿಟ್ಯೂಟ್ ಚಲನಚಿತ್ರಕ್ಕೆ ಸಂಬಂಧಿಸಿದ ಅನೇಕ ಕ್ಷೇತ್ರಗಳಲ್ಲಿ ತರಬೇತು ನೀಡುವ ಸಂಸ್ಥೆಯಾಗಿದೆ. ರವೀಂದ್ರ ಕಲಾಕ್ಷೇತ್ರ ಮತ್ತು ಇತರ ಸಭಾಭವನಗಳಲ್ಲಿ ವೃತ್ತಿ ಹಾಗೂ ಹವ್ಯಾಸಿಕಲಾವಿದರ ಸಂಗೀತ ಕಚೇರಿಗಳೂ ನಾಟಕ, ನೃತ್ಯ ಪ್ರದರ್ಶನಗಳೂ ಆಗಾಗ್ಗೆ ನಡೆಯುತ್ತವೆ. ಸರ್ಕಾರಿ ವಸ್ತು ಸಂಗ್ರಹಾಲಯಕ್ಕೆ ಸೇರಿದಂತಿರುವ ವೆಂಕಟಪ್ಪ ಆರ್ಟ್ ಗ್ಯಾಲರಿ ಮತ್ತು ಇತರ ಕೆಲವು ಖಾಸಗಿ ಭವನಗಳಲ್ಲಿ ಚಿತ್ರಕಲಾ ಪ್ರದರ್ಶನಗಳಿಗೆ ಅವಕಾಶವಿದೆ. ಕಂಠೀರವ ಸ್ಟೇಡಿಯಮ್ ಇಲ್ಲಿಯ ಬೃಹತ್ ಕ್ರೀಡಾಗಾರ. ಇದಲ್ಲದೆ ಇತರ 3 ಕ್ರೀಡಾಗಾರಗಳು, ಒಂದು ಗಾಲ್ಫ್ ಕ್ಲಬ್ ಹಾಗೂ ರೇಸ್ ಕೋರ್ಸ್ ಇವೆ.

ಬೆಂಗಳೂರು ಅತಿ ಪ್ರಾಚೀನ ನಾಗರಿಕತೆಯ ನೆಲೆ. ಇಲ್ಲಿಯ ಗವಿಗಂಗಾಧರೇಶ್ವರ ಗುಡಿಯ ಪರಿಸರ. ಜಾಲಹಳ್ಳಿ ಪ್ರದೇಶ ಮತ್ತು ಆನೇಕಲ್ಲು ರಸ್ತೆಯಲ್ಲಿ ಸು. 12ಕಿಮೀ ದೂರದಲ್ಲಿರುವ ಸೂಡಸಂದ್ರ, ಸಿದ್ದಾಪುರಗಳ ಬಳಿ ಸೂಕ್ಷ್ಮ ಶಿಲಾಯುಧಗಳು ದೊರಕಿವೆ. ಕಬ್ಬಿಣ ಯುಗಕ್ಕೆ ಸೇರಿದ ಸಮಾಧಿಗಳ ಅವಶೇಷಗಳು ನಗರದ ಸುತ್ತಮುತ್ತಲ ಕೆಲವು ಸ್ಥಳಗಳಲ್ಲಿ ಕಂಡುಬಂದಿವೆ. ಇತಿಹಾಸ ಪ್ರಾರಂಭ ಕಾಲಕ್ಕೆ ಸಂಬಂಧಿಸಿದಂತೆ ಮೆಡಿಟರೇನಿಯನ್ ಪ್ರದೇಶದಲ್ಲಿ ಬಳಕೆಯಲ್ಲಿದ್ದ ಕೆಲವು ರೀತಿಯ ಮಣ್ಣಿನ ಮಡಕೆಗಳು ಮತ್ತು ಆಗಿನ ರೋಮ್ ದೊರೆಗಳಾದ ಆಗಸ್ಟಸ್, ಟೈಬೀರಿಯಸ್, ಕ್ಲಾಡಿಯಸ್ ಮೊದಲಾದವರ ನಾಣ್ಯಗಳು ಯಶವಂತಪುರದಲ್ಲಿ ಮತ್ತು ಹಿಂದೂಸ್ಥಾನ್ ವಿಮಾನ ಕಾರ್ಖಾನೆಯ ಪ್ರದೇಶದಲ್ಲಿ ದೊರಕಿವೆ. ಇವು ಬೆಂಗಳೂರು ನಗರ ಪ್ರದೇಶದಲ್ಲಿ ಸೂಕ್ಷ್ಮ ಶಿಲಾಯುಗದಿಂದ, ಅಂದರೆ ಕ್ರಿ. ಪೂ.ಸು.4,000 ವರ್ಷಗಳಿಂದ, ಜನವಸತಿಯಿದ್ದ ಬಗ್ಗೆ ಹಾಗೂ ಈ ಪ್ರದೇಶ ದಕ್ಷಿಣ ಭಾರತದ ಇತರ ಪ್ರದೇಶಗಳಂತೆ ಹೊರನಾಡುಗಳೊಡನೆ ಹೊಂದಿದ್ದ ಸಂಪರ್ಕಗಳ ಬಗ್ಗೆ ಸ್ಪಷ್ಟ ಮಾಹಿತಿಗಳಾಗಿವೆ.

ಹೊಯ್ಸಳ ಚಕ್ರವರ್ತಿ ಇಮ್ಮಡಿ ವೀರಬಲ್ಲಾಳ (12ನೆಯ ಶತಮಾನ) ಬೇಟೆಗೆ ಹೋಗಿದ್ದಾಗ ಒಂದು ಒಂಟಿ ಗುಡಿಸಲನ್ನು ತಲಪಿದ, ಅಲ್ಲಿ ವಾಸವಾಗಿದ್ದ ಒಬ್ಬಳು ಮುದುಕಿ ಕೆಲವು ಬೆಂದ ಕಾಳುಗಳನ್ನೂ ನೀರನ್ನು ಚಕ್ರವರ್ತಿಗೆ ಕೊಟ್ಟು ಅವನ ಬಳಲಿಕೆ ಪರಹರಿಸಿದಳು; ಈ ಆತಿಥ್ಯದಿಂದ ಪ್ರೀತನಾದ ಚಕ್ರವರ್ತಿ ಅವಳ ಗೌರವಾರ್ಥವಾಗಿ ಆ ಸ್ಥಳದಲ್ಲಿ ಊರೊಂದನ್ನು ಸ್ಥಾಪಿಸಿ ಅದಕ್ಕೆ ಬೆಂದಕಾಳೂರೆಂದು ಹೆಸರಿಟ್ಟ; ಅದೇ ಬೆಂಗಾಳೂರು, ಬೆಂಗಳೂರು ಆಗಿದೆ ಎಂಬುದು ಸ್ಥಳೀಯ ಐತಿಹ್ಯ. ಆದರೆ ಬೆಂಗಳೂರಿನ ಬಳಿಯ ಬೇಗೂರಿನಲ್ಲಿ ದೊರಕಿರುವ 9ನೆಯ ಶತಮಾನದ ಶಾಸನದಲ್ಲಿ ಬೆಂಗಳೂರು ಎಂಬ ಹೆಸರೇ ಕಂಡು ಬಂದಿದೆ.

1537ರಲ್ಲಿ ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿ ಯಲಹಂಕನಾಡಿನ ಪಾಳೆಯಗಾರನಾಗಿದ್ದ ಮೊದಲನೆಯ ಕೆಂಪೇಗೌಡ ಬೇಟೆಗೆ ಹೋಗಿದ್ದಾಗ ಒಂದು ಮೊಲ ಬೇಟೆನಾಯಿಯ ಮೇಲೆ ತಿರುಗಿ ಬಿದ್ದುದನ್ನು ಕಂಡು, ಆ ಸ್ಥಳ ಗಂಡು ಭೂಮಿಯೆಂದು ಭಾವಿಸಿ, ಚಕ್ರವರ್ತಿಯ ಅನುಮತಿ ಪಡೆದು ಆ ಸ್ಥಳದಲ್ಲಿ ಒಂದು ಗ್ರಾಮವನ್ನು ಸ್ಥಾಪಿಸಿ ಅದೆ ಸುತ್ತ ಮಣ್ಣಿನ ಕೋಟೆಯನ್ನು ಕಟ್ಟಿಸಿದನೆಂದು ಇನ್ನೊಂದು ಐತಿಹ್ಯ. ಮುಂದೆ ಕೆಂಪೇಗೌಡ ತನ್ನ ರಾಜಧಾನಿಯನ್ನು ಯಲಹಂಕದಿಂದ ಇಲ್ಲಿಗೆ ವರ್ಗಾಯಿಸಿದ. ಕೆಂಪೇಗೌಡನ ಕೋಟೆ ವಿಶಾಲವಾಗಿತ್ತು. ಅದರ ಎಂಟು ಮಹಾದ್ವಾರಗಳಲ್ಲಿ ಉತ್ತರದ ಯಲಹಂಕ ದ್ವಾರ, ಪೂರ್ವದ ಅಲಸೂರು ಬಾಗಿಲು, ದಕ್ಷಿಣದ ಆನೆಕಲ್ಲು ಬಾಗಿಲು ಮತ್ತು ಪಶ್ಚಿಮದ ಕೆಂಗೇರಿ ಬಾಗಿಲುಗಳ ಸ್ಥಳಗಳನ್ನು ಈಗಲೂ ಗುರುತಿಸಬಹುದು. ಆದರೆ ಕಳೆದ ಶತಮಾನದಲ್ಲಿ ಈ ನಗರ ಅಪರಿಮಿತವಾಗಿ ಬೆಳೆದ ಕಾರಣ ಕೋಟೆಯ ಅಳಿದುಳಿದ ಭಾಗಗಳನ್ನು ಪೂರ್ಣವಾಗಿ ನಾಶಮಾಡಲಾಯಿತು. ಕೆಂಪೇಗೌಡ ಈ ನಗರ ಬೆಳೆಯಬಹುದಾದ ಪರಿಮಿತಿಯನ್ನು ಸೂಚಿಸಲು ನಾಲ್ಕು ದಿಕ್ಕುಗಳಲ್ಲೂ ಗೋಪುರಗಳನ್ನು ಕಟ್ಟಿಸಿದ. ಅವು ಉತ್ತರದಲ್ಲಿ ವೈಯಾಳಿಕಾವಲ್ ದಿಬ್ಬದ ಮೇಲೆ, ಪೂರ್ವದಲ್ಲಿ ಅಲಸೂರು ಬಳಿ, ದಕ್ಷಿಣದಲ್ಲಿ ಲಾಲ್‍ಬಾಗ್ ಬಳಿ, ಪಶ್ಚಿಮದಲ್ಲಿ ಗವಿಪುರದ (ಕೆಂಪೇಗೌಡ ನಗರ) ಬಳಿ ಇವೆ. ಆದರೆ ಈಗ ಬೆಂಗಳೂರು ಈ ಎಲ್ಲೆಗಳನ್ನು ಮೀರಿ ಬೆಳೆದು ಬೃಹನ್ನಗರವಾಗಿದೆ

	ಬೆಂಗಳೂರು ಸುತ್ತ ಕೋಟೆ ಕಟ್ಟಿಸಿ ಅದನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡ ಅನಂತರ ಸುತ್ತಲ ಪ್ರದೇಶಗಳಿಂದ ನೇಯ್ಗೆಯವರು ಮುಂತಾದವರನ್ನು ಬೆಂಗಳೂರಿನಲ್ಲಿ ನೆಲೆಗೊಳಿಸಿ, ಅನೇಕ ಪೇಟೆಗಳನ್ನು ಕಟ್ಟಿ ನಗರದ ಆರ್ಥಿಕಾಭಿವೃದ್ಧಿ ಸಾಧಿಸಿದ ಕೆಂಪೇಗೌಡ ಸುತ್ತಲ ಹಲವು ಪ್ರದೇಶಗಳನ್ನೂ ಗೆದ್ದುಕೊಂಡು ರಾಜ್ಯ ವಿಸ್ತಾರ ಮಾಡಿದ. ಈ ಉನ್ನತಿಯನ್ನು ಸಹಿಸದ ಚನ್ನಪಟ್ಟಣದ ಪಾಳೆಯಗಾರ ಜಗದೇವರಾಯ ವಿಜಯನಗರದ ಅಳಿಯ ರಾಮರಾಯನೊಂದಿಗೆ ಸಂಚುಗೈದು ಕೆಂಪೇಗೌಡನನ್ನು ಆನೆಗೊಂದಿಯಲ್ಲಿ ಸೆರೆಹಿಡಿಸಿ, ಬೆಂಗಳೂರನ್ನು ತನ್ನ ವಶಪಡಿಸಿಕೊಂಡ. ಐದು ವರ್ಷಗಳ ಕಾಲ ಸೆರೆಯಲ್ಲಿದ್ದು ಅನಂತರ ಬಿಡುಗಡೆ ಹೊಂದಿ ಬೆಂಗಳೂರಿನಲ್ಲಿ ಮತ್ತೆ ಕೆಂಪೇಗೌಡ ಅಧಿಕಾರಾರೂಢನಾದ. ಈ ಘಟನೆಯ ಸ್ಮಾರಕವಾಗಿ ಗವಿಪುರದಲ್ಲಿರುವ ಗಂಗಾಧರೇಶ್ವರ ಗುಡಿಯನ್ನು ನಿರ್ಮಿಸಿದ. ಬಸವನ ಗುಡಿಯ ಬಸವ ದೇವಾಲಯ, ಕೆಂಪಾಂಬುಧಿ ಧರ್ಮಾಂಬುಧಿ ಕೆರೆಗಳು ಮತ್ತು ಅಲಸೂರಿನ ಸೋಮೇಶ್ವರನ ಗುಡಿಯ ಪ್ರಾಕಾರ ಸಹ ಇವನ ನಿರ್ಮಾಣಗಳು. ಮುಂದಿನ ಪ್ರಸಿದ್ಧ ದೊರೆ ಇಮ್ಮಡಿ ಕೆಂಪೇಗೌಡ ಬೆಂಗಳೂರಿನ ಸಂಪತ್ತು ವೈಭವಗಳನ್ನು ಹೆಚ್ಚಿಸಿದನೆಂದು ತಿಳಿದುಬರುತ್ತದೆ. ಅಲಸೂರಿನ ಸೋವೇಶ್ವರ ಗುಡಿಯ ಜೀರ್ಣೋದ್ಧಾರ ಮಾಡಿಸಿದುದಲ್ಲದೆ, ರಂಗನಾಥ ದೇವಾಲಯ, ಸಂಪಂಗಿ ಕೆರೆ, ಕೆಂಪಾಪುರದ ಅಗ್ರಹಾರದ ಕೆರೆ ಮತ್ತು ಕಾರಂಜಿ ಕೆರೆಗಳನ್ನು ಕಟ್ಟಿಸಿದ. ಆದರೆ 1638ರಲ್ಲಿ ಬಿಜಾಪುರ ದಂಡನಾಯಕ ರಣದುಲ್ಲಾಖಾನ್ ಕೆಂಪೇಗೌಡನನ್ನು ಸೋಲಿಸಿ ಬೆಂಗಳೂರನ್ನು ಆಕ್ರಮಿಸಿದ. 1648ರಲ್ಲಿ ಬಿಜಾಪುರದ ಸುಲ್ತಾನ ಬೆಂಗಳೂರು ಮತ್ತು ಅದರ ನೆರೆಯ ಪ್ರದೇಶಗಳನ್ನು ಶಹಾಜಿಗೆ ಜಹಗೀರಾಗಿ ಕೊಟ್ಟ. ಕೆಲವು ಕಾಲಾಂತರ ಬೆಂಗಳೂರು ಪ್ರಾಂತಕ್ಕೆ ಶಹಾಜಿಯನ್ನು ಸುಬಾದಾರನನ್ನಾಗಿಯೂ ನೇಮಿಸಲಾಯಿತು. 1664ರಲ್ಲಿ ಬೆಂಗಳೂರು ಶಹಾಜಿಯ ಮಗ ವೆಂಕಾಜಿಯ ಪಾಲಿಗೆ ಬಂತು. 1675ರಲ್ಲಿ ತಂಜವೂರು ರಾಜ್ಯ ವೆಂಕಾಜಿಗೆ ಸಿಕ್ಕಿದುದರಿಂದ ಅಲ್ಲಿ ವಾಸ ಮಾಡಲಾರಂಭಿಸಿದ. ವೆಂಕಾಜಿ ಬೆಂಗಳೂರನ್ನು ಮೈಸೂರು ರಾಜ್ಯದ ಅರಸ ಚಿಕ್ಕದೇವರಾಜರಿಗೆ ಮಾರುವ ಯೋಜನೆಯಲ್ಲಿದ್ದ. ಆದರೆ ಮಾತುಕತೆಗಳು ಸಮಾಧಾನಕರವಾಗಿ ಮುಕ್ತಾಯಗೊಳ್ಳಲಿಲ್ಲ. ಪಿತ್ರಾರ್ಜಿತವಾದ ಬೆಂಗಳೂರು ತಮ್ಮ ಮನೆತನದ ಕೈಬಿಡುವುದು ಶಿವಾಜಿಗೆ ಇಷ್ಟವಿರಲಿಲ್ಲ. 1680ರಲ್ಲಿ ಶಿವಾಜಿ ಮರಣಹೊಂಡಿದಾಗ ಅವನ ಮಗ ಸಂಭಾಜಿ ಮರಾಠಾ ಸಿಂಹಾಸನಕ್ಕೆ ಬಂದ. ತಂದೆಯ ಆಸೆಯನ್ನು ಈಡೇರಿಸುವ ಸಲುವಾಗಿ ಸಂಭಾಜಿಯ ಸೈನ್ಯ ಬೆಂಗಳೂರಿನ ಮೇಲೆ ಬಂತು. ಆ ಪ್ರಯತ್ನವನ್ನು ವಿಫಲಗೊಳಿಸುವ ಸಲುವಾಗಿ ದಕ್ಷಿಣದಲ್ಲಿ ಬೀಡುಬಿಟ್ಟಿದ್ದ ಮುಗಲ್ ಚಕ್ರವರ್ತಿ ತನ್ನ ಸೈನ್ಯವನ್ನು ದಳಪತಿ ಖಾಸಿಮ್ ಖಾನನ ನೇತೃತ್ವದಲ್ಲಿ 1687ರಲ್ಲಿ ಕಳಿಸಿದಾಗ ಬೆಂಗಳೂರು ಮುಗಲರ ವಶವಾಯಿತು. ಮೈಸೂರಿನ ಚಿಕ್ಕದೇವರಾಜ 1690ರಲ್ಲಿ ಶಿರಾದಲ್ಲಿ ಮುಗಲ ಸುಬಾದಾರನಾಗಿದ್ದ ಖಾಸಿಂಖಾನನಿಂದ ಬೆಂಗಳೂರನ್ನು ಮೂರು ಲಕ್ಷ ರೂಪಾಯಿಗಳಿಗೆ ಕೊಂಡು ಬೆಂಗಳೂರಿನ ಸುತ್ತ ಹೊಸದಾಗಿ ಮಣ್ಣಿನ ಕೋಟೆ ಕಟ್ಟಿಸಿ ಅಲ್ಲಿ ತನ್ನ ಸೈನ್ಯವನ್ನು ನೆಲೆಗೊಳಿಸಿದ. ಅದೇ ಸಮಯದಲ್ಲಿ ಕೋಟೆಯಲ್ಲಿ ವೆಂಕಟರಮಣಸ್ವಾಮಿ ದೇವಾಲಯವನ್ನು ಕಟ್ಟಿಸಿದ. 1759ರಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶ ಹೈದರನಿಗೆ ಜಗೀರಾಗಿ ದೊರಕಿತು. ಅದೇ ಸಮಯದಲ್ಲಿ ಮರಾಠರ ಸೈನ್ಯ ಬೆಂಗಳೂರು ಮತ್ತು ಶ್ರೀರಂಗಪಟ್ಟಣದ ಮೇಲೆ ಧಾಳಿ ಮಾಡಿದಾಗ ಹೈದರ್ ಅವರನ್ನು ಹೊಡೆದಟ್ಟಿ ರಾಜ್ಯಕ್ಕೆ ಬಂದ ಅಪಾಯವನ್ನು ನಿವಾರಿಸಿದ. 1761ರ ಹೊತ್ತಿಗೆ ಹೈದರ್ ರಾಜ್ಯದ ರಕ್ಷಣೆಗೆ ಬೆಂಗಳೂರಿನ ಪ್ರಾಮುಖ್ಯವನ್ನು ಗುರುತಿಸಿ ಅದರ ಸುತ್ತ ಹೊಸದಾಗಿ ಕಲ್ಲಿನ ಕೋಟೆಯನ್ನು ಕಟ್ಟಿಸಿದ. ಬೆಂಗಳೂರಿನ ಕಿಲ್ಲೇದಾರನಾಗಿದ್ದ ಇಬ್ರಾಹಿಮ್ ಖಾನ್ ಈ ಕೋಟೆಯ ನಿರ್ಮಾಣವನ್ನು ಸ್ವತಃ ಮಾಡಿಸಿದನೆಂದು ಹೇಳಲಾಗಿದೆ. ಅನಂತರದ ವರ್ಷಗಳಲ್ಲಿ ಬ್ರಿಟಿಷರು ಮತ್ತು ಮೈಸೂರು ಸುಲ್ತಾನರ ಹೋರಾಟಗಳಲ್ಲಿ ಬೆಂಗಳೂರು ಬ್ರಿಟಿಷರ ಪ್ರಮುಖ ಗುರಿಯಾಯಿತು. 1791ರ ಮಾರ್ಚ್‍ನಲ್ಲಿ ಲಾರ್ಡ್ ಕಾರನ್ ವಾಲೀಸನ ನೇತೃತ್ವದ ಬ್ರಿಟಿಷ್ ಸೈನ್ಯ ಬೆಂಗಳೂರನ್ನು ವಶಪಡಿಸಿಕೊಂಡಿತು. ಯುದ್ಧ ಮುಗಿದು ಸಂಧಿ ಏರ್ಪಟ್ಟಾಗ ಶ್ರೀರಂಗಪಟ್ಟಣದ ಒಡಂಬಡಿಕೆಗನುಗುಣವಾಗಿ ಮತ್ತೆ ಬೆಂಗಳೂರು ಟಿಪ್ಪುಸುಲ್ತಾನನ ವಶವಾಯಿತು. 1799ರಲ್ಲಿ ಟಿಪ್ಪುಸುಲ್ತಾನ ಮರಣ ಹೊಂದಿದ ಅನಂತರ ಬ್ರಿಟಿಷರು ಬೆಂಗಳೂರನ್ನು ಮೈಸೂರು ರಾಜಮನೆತನದ ವಶಕ್ಕೆ ವಹಿಸಿ ಕೊಟ್ಟರು. 

1831ರಲ್ಲಿ ಮೈಸೂರು ಸಂಸ್ಥಾನದ ಆಡಳಿತವನ್ನು ಬ್ರಿಟಿಷರೇ ನೇರವಾಗಿ ನಿರ್ವಹಿಸತೊಡಗಿದರು. ಮಾರ್ಕ್ ಕಬ್ಬನ್ ಮೈಸೂರು ಸಂಸ್ಥಾನದ ಕಮಿಷನರ್ (1834-61) ಆಗಿದ್ದ ಕಾಲದಲ್ಲಿ ಬೆಂಗಳೂರು ಬಹುವಾಗಿ ಅಭಿವೃದ್ಧಿ ಹೊಂದಿತು. ತಂತಿ ಸಮಾಚಾರ ಸೌಲಭ್ಯ ಮತ್ತು ಬೆಂಗಳೂರು-ಜೋಲಾರಪೇಟೆ ರೈಲು ಮಾರ್ಗ ನಿರ್ಮಾಣ ಕಾರ್ಯಗಳು ನಡೆದು ನಗರದ ಪ್ರಾಮುಖ್ಯ ಹೆಚ್ಚಿತು. ಅನಂತರದ ಕಮಿಷನರ್ ಎಲ್.ಬಿ. ಬೌರಿಂಗ್‍ನ (1862-70) ಕಾಲದಲ್ಲಿ ಆಡಳಿತ ಕಚೇರಿಗಳಿಗೆ ಹೆಚ್ಚಿನ ಸ್ಥಳಾವಕಾಶ ಕಲ್ಪಿಸಲು ಕಬ್ಬನ್ ಪಾರ್ಕಿನಲ್ಲಿ ಅಠಾರ ಕಚೇರಿಯನ್ನು ಕಟ್ಟಿಸಲಾಯಿತು (1868). 1881ರ ಮಾರ್ಚ್ ಸಂಸ್ಥಾನದ ಆಡಳಿತ ಮತ್ತೆ ಮೈಸೂರು ರಾಜವಂಶದವರ ವಶಕ್ಕೆ ಬಂದಾಗ ಬೆಂಗಳೂರಿನಲ್ಲಿ ಬ್ರಿಟಿಷರ ನೇರ ಆಡಳಿತ ಕೊನೆಗೊಂಡರೂ ದಂಡು ಪ್ರದೇಶ ಮಾತ್ರ ಅವರ ಆಡಳಿತದಲ್ಲೇ ಮುಂದುವರಿಯಿತು. ಲಾರ್ಡ್ ವಿಲ್ಲಿಂಗ್ಡನ್ 1933 ಡಿಸೆಂಬರಿನಲ್ಲಿ ಮೈಸೂರಿಗೆ ಭೇಟಿಯಿತ್ತಾಗ ನಾಲ್ಮಡಿ ಕೃಷ್ಣರಾಜ ಒಡೆಯರ್ ದಂಡು ಪ್ರದೇಶದ ನಾಗರಿಕ ಆಡಳಿತವನ್ನು ರಾಜ್ಯ ಸರ್ಕಾರಕ್ಕೆ ವಹಿಸಿಕೊಡಬೇಕೆಂದು ಒತ್ತಾಯಿಸಿದರು. ಆದರೂ ಈ ಪ್ರಶ್ನೆ ಬಗೆ ಹರಿಯದೆ ಉಳಿದಿದ್ದು ಅಂತಿಮವಾಗಿ ಸ್ವಾತಂತ್ರ್ಯಕ್ಕೆ ಕೆಲವು ದಿನಗಳ ಮುನ್ನ 1947 ಜುಲೈ 26ರಂದು ದಂಡು ಪ್ರದೇಶದ ಪೂರ್ಣ ಆಡಳಿತವನ್ನು ರಾಜ್ಯ ಸರ್ಕಾರಕ್ಕೆ ವಹಿಸಿಕೊಡಲಾಯಿತು. ಮೈಸೂರು ರಾಜಮನೆತನದ ಆಡಳಿತ ಅಸ್ತಿತ್ವಕ್ಕೆ ಬಂದ ಕಾರಣ ಸಹಜವಾಗಿ ಮೈಸೂರು ರಾಜಧಾನಿಯ ಗೌರವ ಸ್ಥಾನವನ್ನು ಪಡೆದರೂ ಬೆಂಗಳೂರು ಆಡಳಿತ ಕೇಂದ್ರವಾಗಿ ಮುಂದುವರಿಯಿತು. ಹೊಸದಾಗಿ ಆಸ್ತಿತ್ವಕ್ಕೆ ಬಂದ ಪ್ರಜಾಪ್ರತಿನಿಧಿ ಸಭೆ ಬೆಂಗಳೂರಿನಲ್ಲಿ ಸೇರುತ್ತಿತ್ತು. ಇದೇ ಕಾಲದಲ್ಲಿ ಬೆಂಗಳೂರು ನಗರದಲ್ಲಿ ಹೊಸ ಹೊಸ ಬಡಾವಣೆಗಳು ಕೋಟೆಯ ಹೊರಗೆ ಬೆಳೆದುವು. ಕೋಟೆಯ ಬಳಿ ಕೃಷ್ಣರಾಜೇಂದ್ರ ಮಾರ್ಕೆಟ್, ವಿಕ್ಟೋರಿಯ ಆಸ್ಪತ್ರೆಗಳು ಸ್ಥಾಪಿತವಾದುವು. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಸಾರ್ವಭೌಮಾಧಿಕಾರ ಜನತಾ ಪ್ರತಿನಿಧಿಗಳಿಗೆ ದೊರೆತು ಚುನಾಯಿತ ಜನತಾ ಮಂತ್ರಿಮಂಡಲ ಅಧಿಕಾರ ವಹಿಸಿಕೊಂಡಾಗ ಬೆಂಗಳೂರು ಪೂರ್ಣರಾಜಧಾನಿಯ ಗೌರವ ಪಡೆಯಿತು.

ಬೆಂಗಳೂರಿನಲ್ಲಿ ಹೆಚ್ಚು ಪ್ರಸಿದ್ಧವಾದ, ವಾಸ್ತುಶಿಲ್ಪ ದೃಷ್ಟಿಯಿಂದ ಮುಖ್ಯವಾದ ಐತಿಹಾಸಿಕ ಕಟ್ಟಡ ಕೋಟೆವೆಂಕಟ ರಮಣ ದೇವಸ್ಥಾನ. ಚಿಕ್ಕ ದೇವರಾಜ ಬೆಂಗಳೂರನ್ನು ಮುಗಲರಿಂದ 1690ರಲ್ಲಿ ಕೊಂಡ ಅನಂತರ ಕೆಂಪೇಗೌಡನ ಕೋಟೆಯಲ್ಲದೆ ಮತ್ತೊಂದು ಮಣ್ಣಿನ ಕೋಟೆಯನ್ನೂ ಅದರೊಳಗೆ ವೆಂಕಟರಮಣ ದೇವಾಲಯವನ್ನೂ ಕಟ್ಟಿಸಿದನೆಂದು ಅವನ ಮಗ ಇಮ್ಮಡಿಕಂಠೀರವ ನರಸರಾಜನ 1705ರ ಕೆಂಗೇರಿ ಹೋಬಳಿಯ ಕೊತ್ತನೂರು ಶಾಸನ ತಿಳಿಸುತ್ತದೆ. ದೇವಾಲಯದ ನಿರ್ಮಾಣ ಕಾಲವನ್ನು 1695 ಎಂಬು ನಿರ್ಧರಿಸಬಹುದು. ದ್ರಾವಿಡ ಶೈಲಿಯಲ್ಲಿ ವಿಜಯನಗರನಾಯಕ ಕಾಲದ ವಾಸ್ತುಶೈಲಿಯ ಲಕ್ಷಣಗಳನ್ನು ಹೊಂದಿರುವ ಈ ಕಟ್ಟಡದ ಮುಂಭಾಗದಲ್ಲಿ ಏಕಶಿಲೆಯ ಅಷ್ಟಕೋನಗಳುಳ್ಳ ಗರುಡಗಂಬವಿದೆ. ಕಂಬದ ಅಡಿ ಭಾಗದಲ್ಲಿ ಪೂರ್ವದಲ್ಲಿ ಶಂಖ, ದಕ್ಷಿಣದಲ್ಲಿ ಅಂಜಲೀಬುದ್ಧನಾದ ಗರುಡ, ಪಶ್ಚಿಮದಲ್ಲಿ ತ್ರಿಪುಂಡ್ರ ಮತ್ತು ಉತ್ತರದಲ್ಲಿ ಅಂಜಲಿ ಬುದ್ಧ ಹನುಮಂತನ ಕ್ಷೇತ್ರಗಳಿವೆ. ಈ ದೇವಾಲಯದಲ್ಲಿ ಎತ್ತರ ಜಗಲಿಯ ಮೇಲೆ ನಿಂತ ಸುಂದರ ಕೆತ್ತನೆಗಳುಳ್ಳ ಕಂಬಗಳಿಂದ ಕೂಡಿದ ಒಂಬತ್ತು ಅಂಕಣಗಳ ಮುಖಮಂಟಪ, ನವರಂಗ, ಸುಕನಾಸಿ ಮತ್ತು ಗರ್ಭ ಗುಡಿಗಳಿವೆ. ಕಂಬಗಳಿಂದ ಮುನ್ ಚಾಚಿದಂತೆ ಇರುವ, ಆನೆಗಳ ಮೇಲೆ ನಿಂತ, ಸಿಂಹಗಳ ಮೇಲೆ ಕುಳಿತಂತೆ ಕೆತ್ತಲಾಗಿರುವ ವೀರರ ಪ್ರತಿಮೆಗಳು ಸುಂದರ ಶಿಲ್ಪಗಳು. ಗರ್ಭಗುಡಿಯಲ್ಲಿ ವೆಂಕಟರಮಣ ಸ್ವಾಮಿಯ ಸುಂದರ ಮೂರ್ತಿಯನ್ನು ಪ್ರತಿಷ್ಠಾಪಿಸಿದೆ. ದೇವಾಲಯದ ಹೊರಗೋಡೆಗಳ ಮೇಲೆ ವಾಹನಾರೂಢನಾದ ವಿಷ್ಣು, ಬ್ರಹ್ಮ, ಶಿವನ ಮೂರ್ತಿಗಳಲ್ಲದೆ ಗಿರಿಜಾ ಕಲ್ಯಾಣದ ದೃಶ್ಯ, ಸಪ್ತರ್ಷಿಗಳ ಮತ್ತು ಸಪ್ತಮಾತೃಕೆಯರ ಉಬ್ಬುಶಿಲ್ಪಗಳಿವೆ. 

ಬೆಂಗಳೂರಿನ ಮತ್ತೊಂದು ಪ್ರಮುಖ ಐತಿಹಾಸಿಕ ಕಟ್ಟಡವೆಂದರೆ ಟಿಪ್ಪುಸುಲ್ತಾನನ ಕೋಟೆ ಮತ್ತು ಅರಮನೆ. ಇದು ಹೈದರ್ 1761ರಲ್ಲಿ ಕಟ್ಟಿಸಿದ ಕಲ್ಲಿನ ಕೋಟೆಯ ಭಾಗ. 1799ರಲ್ಲಿ ಬ್ರಿಟಿಷರು ಮೈಸೂರು ರಾಜ್ಯವನ್ನು ವಶಪಡಿಸಿಕೊಂಡ ತರುವಾಯ 32 ವರ್ಷ ತನ್ನ ಪ್ರಾಮುಖ್ಯ ಕಳೆದುಕೊಂಡ ಮಹಲ್ 1831ರಲ್ಲಿ ಬ್ರಿಟಿಷರು ರಾಜ್ಯಾಡಳಿತವನ್ನು ಮುಮ್ಮಡಿ ಕೃಷ್ಣರಾಜರಿಂದ ತಮ್ಮ ಕೈಗೆ ತೆಗೆದುಕೊಂಡಾಗ ಮತ್ತೆ ರಾಜ್ಯ ಆಡಳಿತ ಕೇಂದ್ರವಾಯಿತು. ಕಮಿಷನರುಗಳ ಆಳ್ವಿಕೆ ಕಾಲದಲ್ಲಿ ಆಡಳಿತ ಕಚೇರಿಗಳನ್ನು ಟಿಪ್ಪುಸುಲ್ತಾನನ ಅರಮನೆಯಲ್ಲಿ ಸ್ಥಾಪಿಸಲಾಯಿತು. 1868ರಲ್ಲಿ ಸಂಸ್ಥಾತನ ಆಡಳಿತ ಕಚೇರಿಗಳು ಅಠಾರ ಕಚೇರಿಗೆ ವರ್ಗವಾದಾಗ ಈ ಅರಮನೆಯನ್ನು ನಗರಸಭೆಗೆ ಬಿಟ್ಟುಕೊಡಲಾಯಿತು. ತರುವಾಯದ ಕಾಲದಲ್ಲೂ ಇಲ್ಲಿ ಕೆಲವು ಸಾರ್ವಜನಿಕ ಕಚೇರಿಗಳಿದ್ದುವು. ಅವುಗಳಲ್ಲಿ ಸರ್ಕಾರಿ ಮುದ್ರಣಾಲಯವೂ ಒಂದು. ಅನಂತರ ಕಟ್ಟಡದ ಬಹುಭಾಗವನ್ನು ಕೆಡವಲಾಯಿತು. ಈಗ ಉಳಿದು ಬಂದಿರುವ ಭಾಗಗಳನ್ನು ರಾಷ್ಟ್ರೀಯ ಸ್ಮಾರಕವೆಂದು ಭಾರತ ಸರ್ಕಾರದ ಪುರಾತತ್ವ ವಿಭಾಗ ರಕ್ಷಿಸುತ್ತಿದೆ.

	ಬೆಂಗಳೂರಿನಲ್ಲಿ ನಗರ್ತಪೇಟೆಯಲ್ಲಿರುವ ಧರ್ಮರಾಯನ ಗುಡಿ ಪ್ರಸಿದ್ಧ ದೇವಾಲಯ. ಇದು 19ನೆಯ ಶತಮಾನದ ಆದಿಭಾಗದಲ್ಲಿ ನಿರ್ಮಿಸಲಾದ ದ್ರಾವಿಡಶೈಲಿಯ ಸಾಮಾನ್ಯ ಕಟ್ಟಡ. ಯೂರೊಪಿಯನ್ನರ ನಿರ್ಮಾಣಗಳಲ್ಲಿ ಬಹಳ ಹಳೆಯದೆಂದರೆ ಪೋರ್ಚುಗಲ್ಲಿನ ಪಾದ್ರಿಟರ್ನರ್ 1830ರಲ್ಲಿ ಪ್ರತಿಷ್ಠಾಪಿಸಿದ ಕೋಟೆಯಲ್ಲಿರುವ ಪುಟ್ಟ ಚರ್ಚು, ತರಗುಪೇಟೆಯಲ್ಲಿರುವ ಸೇಂಟ್ ಜೋಸೆಫ್ ಚರ್ಚು ವಿಶಾಲವಾದ ಶಿಲುಬೆಯ ಆಕಾರದ ತಳಪಾಯವಿರುವ ಕಟ್ಟಡ. ಇವೆಲ್ಲವೂ ಗಾಥಿಕ್ ಶೈಲಿಯ ಕಟ್ಟಡಗಳು. ಗಾಥಿಕ್ ಶೈಲಿಯ ಇತರ ಪ್ರಮುಖ ಕಟ್ಟಡಗಳೆಂದರೆ ಅಠಾರಾ ಕಚೇರಿ, ವಸ್ತುಸಂಗ್ರಹಾಲಯ, ಡ್ಯಾಲಿ ಮೆಮೋರಿಯಲ್ ಹಾಲ್ ಮತ್ತು ಸೆಂಟ್ರಲ್ ಕಾಲೇಜು-ಇವೆಲ್ಲ ಕಟ್ಟಡಗಳೂ 19ನೆಯ ಶತಮಾನದಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ನಿರ್ಮಾಣವಾದುವು. ದಂಡು ರೈಲು ನಿಲ್ಧಾಣದ ಬಳಿ ಇರುವ ಮಹಾರಾಜರ ಅರಮನೆ ಮತ್ತೊಂದು ಗಮನಾರ್ಹ ಕಟ್ಟಡ. ಭಾರತಾಂಗ್ಲ ವಾಸ್ತು ಶೈಲಿಯ ಈ ಕಟ್ಟಡ ಇಂಗ್ಲೆಂಡ್ ಮತ್ತು ನಾರ್ಮಂಡಿಗಳ ಮಧ್ಯಯುಗದ ದುರ್ಗಗಳನ್ನು ಹೋಲುತ್ತದೆ. ವಿಂಡ್ಸರ್ ಅರಮನೆಯ ಮಾದರಿಯಲ್ಲಿ ಇದನ್ನು ಕಟ್ಟಲಾಗಿದೆ. ಇತ್ತೀಚೆಗೆ ಅಂದರೆ ಸ್ವಾತಂತ್ರ್ಯಾ ನಂತರ ಕಟ್ಟಿದ ಮುಖ್ಯ ಕಟ್ಟಡವೆಂದರೆ ವಿಧಾನಸೌಧ. ರಾಜ್ಯದ ಆಡಳಿತ ಕಚೇರಿಗಳಿಗೆ, ವಿಧಾನಸಭೆ ಸಮಿತಿಗಳಿಗೆ, ಸಚಿವಾಲಯಕ್ಕೆ ಸ್ಥಳ ಒದಗಿಸಲು ರಾಜ್ಯದ ಆಗಿನ ಮುಖ್ಯಮಂತ್ರಿ ಕೆ. ಹನುಮಂತಯ್ಯನವರ ನೇತೃತ್ವದಲ್ಲಿ ಕಟ್ಟಿಸಿದ ಆಧುನಿಕ ರೀತಿಯ ಈ ಕಟ್ಟಡದಲ್ಲಿ ದ್ರಾವಿಡ ಶೈಲಿಯ ಗೋಪುರಗಳು, ಭಾರತಾಂಗ್ಲ ಶೈಲಿಯ ವಾಸ್ತು ಲಕ್ಷಣಗಳು ಮತ್ತು ಆಧುನಿಕ ವಾಸ್ತು ಪ್ರಗತಿ ಕುರುಹುಗಳನ್ನು ಅಳವಡಿಸಲಾಗಿದೆ. ಗಾಂಭೀರ್ಯ ಮತ್ತು ಭವ್ಯತೆಗಳ ಕೇಂದ್ರದಂತಿರುವ ಈ ಕಟ್ಟಡ ಬೆಂಗಳೂರಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಇತ್ತೀಚೆಗೆ ನಿರ್ಮಾಣವಾಗಿರುವ ಯುಟಿಲಿಟಿ ಬಿಲ್ಡಿಂಗ್ ಬೆಂಗಳೂರಿನ ಅತ್ಯಂತ ಎತ್ತರದ ಕಟ್ಟಡ. ಬೆಂಗಳೂರು ಉದ್ಯಾನದ ನಗರ ಎಂದು ಪ್ರಸಿದ್ಧವಾಗಿದ್ದು ಲಾಲ್‍ಬಾಗ್ ಮತ್ತು ಕಬ್ಬನ್ ಪಾರ್ಕುಗಳು ಹೆಸರಾದವು.