ಬೆನ್ನುಮೂಳೆ ದೇಹದ ಕಂಠಮುಂಡಗಳ ಬೆನ್ನಿನ ನಡುಮಧ್ಯೆ ಕಾಣಿಸುವ ಮೂಳೆಗಳ ಸರ (ಸ್ಪೈನ್) ಪರ್ಯಾಯ ನಾಮಗಳು ಕಶೇರುಸರ, ಬೆನ್ನೆಲಬು, ಬೆನ್ನುಕಂಬ ಇತ್ಯಾದಿ (ವರ್ಟಿಬ್ರಲ್‍ಚೆಯ್ನ್ ವರ್ಟಿಬ್ರಲ್‍ಕಾಲಮ್, ಬ್ಯಾಕ್ ಬೋನ್) ಇದರ ರಚನೆ ಕಶೇರುಗಳೆಂಬ ಬಿಡಿ ಎಲುಬುಗಳ ಸರ ರೂಪಕ ಜೋಡಣೆಯಿಂದ ಆಗಿರುವುದಾದರೂ ಜೋಡಣೆ ಮೃದ್ವಸ್ಥಿ ಹಾಗೂ ರಜ್ಜುಗಳಿಂದ ಬಿಗಿಯಾಗಿದ್ದು ವ್ಯಕ್ತಿ ನೆಟ್ಟಗೆ ನಿಂತಾಗ ಸ್ಥಿರವಾದ ಕಂಬದಂತೆಯೇ ಇರುವುದರಿಂದ ಈ ಸರವನ್ನು ಬೆನ್ನುಮೂಳೆ ಅಥವಾ ಬೆನ್ನುಕಂಬ ಎಂದು ಹೇಳುವುದುಂಟು. ಬೆನ್ನುಮೂಳೆ ಮಾನವನ ರುಂಡಮುಂಡಗಳಿಗೆ ಆಧಾರ ಸ್ತಂಭ. ಅವುಗಳ ಭಾರ ಕಾಲುಗಳ ಮೇಲೆ ನೇರವಾಗಿ ಬೀಳುವಂತೆ ಮಾಡಿದೆ. ವ್ಯಕ್ತಿಯ ನೆಟ್ಟನಿಲವು ನಡಿಗೆಗಳ ಸಮತೋಲನ ಅತ್ಯಲ್ಪ ಸ್ನಾಯುಕ್ರಿಯೆಯಿಂದ ಸಾಧ್ಯವಾಗುತ್ತದೆ. ಆದರೂ ಒಂದು ಕಶೇರು ಅದರ ಒತ್ತಿನ ಕಶೇರುಗಳೊಡನೆ ಸ್ವಲ್ಪ ಮಟ್ಟಿಗೆ ಚಲಿಸಲು ಸಾಧ್ಯವಿರುವುದರಿಂದ ಮುಂಡವನ್ನು ಅಕ್ಕ ಪಕ್ಕಕ್ಕೆ ಹಾಗೂ ಹಿಂದುಮುಂದಕ್ಕೆ ಬಾಗಿಸುವುದು, ಎಡಬಲಗಳಿಗೆ ಸ್ವಲ್ಪ ಮಟ್ಟಿಗೆ ತಿರುಗಿಸುವುದು ಇತ್ಯಾದಿ ಚಲನೆಗಳು ಸಾಧ್ಯವಾಗಿವೆ. ಇಂಥ ಚಲನೆ ಕಂಠ ಮತ್ತು ಸೊಂಟ ಪ್ರದೇಶಗಳಲ್ಲಿ ಗರಿಷ್ಠ. ಒಟ್ಟಿನಲ್ಲಿ ಬೆನ್ನು ಮೂಳೆ ಒಂದು ಗಡುಸಾದ ಆದರೂ ಉಪಯುಕ್ತವಾಗಿರುವಷ್ಟರ ಮಟ್ಟಿಗೆ ನಮ್ರತೆ ಉಳ್ಳ ರಚನೆ. ಮಿದುಳು ಬಳ್ಳಿಗೆ ಸುರಕ್ಷ ಕವಚವಾಗಿ ವರ್ತಿಸುವುದು ಬೆನ್ನು ಮೂಳೆಯ ಇನ್ನೊಂದು ಕ್ರಿಯೆ. ಇದರ ಉದ್ದಕ್ಕೂ ಎಲುಬುಚಾಚುಗಳಿಂದಲೇ ರಚಿತವಾದ ಒಂದು ನಾಳ ಏರ್ಪಟ್ಟಿದ್ದು ಇದರೊಳಗೆ ಮಿದುಳಬಳ್ಳಿ ಸಾಗುವುದರಿಂದ ಈ ರಕ್ಷಣೆ ಒದಗುತ್ತದೆ. ಬೆನ್ನೆಲುಬಿನ ಅಗ್ರದಲ್ಲಿ ರುಂಡವಿದ್ದು ಇವೆರಡರ ನಡುವೆ ಸಮಚಲನ ಸಾಮಥ್ರ್ಯಯುತ ಕೀಲು ಏರ್ಪಟ್ಟಿದೆ. ಹೀಗಾಗಿ ತಲೆಯನ್ನು ದೇಹದ ಮೇಲೆ ಹಿಂದಕ್ಕೂ ಮುಂದಕ್ಕೂ ಅಕ್ಕಪಕ್ಕಗಳಿಗೂ ಬಾಗಿಸಬಹುದು. ಅಲ್ಲದೆ ಅದನ್ನು ಎಡಬಲಭಾಗಗಳಿಗೆ ಹೊರಳಿಸಿ ತಕ್ಕಮಟ್ಟಿಗೆ ಹಿನ್ನೋಟ ಪಡೆಯುವುದು ಕೂಡ ಸಾಧ್ಯವಾಗಿದೆ. ವೃಕ್ಷದ ಅಗ್ರಭಾಗ ಹಾಗೂ ಸೊಂಟ ಪ್ರದೇಶದಲ್ಲಿ ಬೆನ್ನುಲಿಬಿಗೆ ಕೈ ಕಾಲುಗಳ ಮತ್ತು ಇತರ ಎಲುಬುಗಳು ಸೇರಿ ಕೀಲುಗಳು ಏರ್ಪಟ್ಟಿವೆಯಾಗಿ ಬೆನ್ನುಮೂಳೆಯ ಆಧಾರದ ಮೇಲೆ ಕೈ ಕಾಲು ಆಡಿಸುವುದು ಸಾಧ್ಯವಾಗಿದೆ.
ವಾಸ್ತವವಾಗಿ ಬೆನ್ನು ಕಂಬದಂಥ ಆಸರೆ ಪ್ರಾಣಿ ರಾಜ್ಯದಲ್ಲಿ ಮೀನುಗಳಿಗಿಂತಲೂ ಕಡಿಮೆ ವಿಕಸಿತ ಪ್ರಾಣಿಗಳಾದ ಅಸೀಡಿಯನ್ನುಗಳು, ಅಂಫಿಯಾಕ್ಸಸ್ ಮುಂತಾದವುಗಳಲ್ಲಿ ಕಂಡುಬರುವುದಿದೆ. ಇದಕ್ಕೆ ನೋಟೊಕಾರ್ಡ್ ಎಂದು ಹೆಸರು. ದೈಹಿಕ ಖಂಡ ಪ್ರತಿಯೊಂದಕ್ಕೂ ಅನುರೂಪ ಆಸರೆ ಖಂಡವಾಗಿ ಕಾಣಬರುವ ಇದು ಒಂದು ರೀತಿಯ ಗಡಸು ಆದರೂ ತಕ್ಕಮಟ್ಟಿಗೆ ನಮ್ಯವಾದ ಬಂಧನಾಂಗಾಂಶದಿಂದ ರಚಿತವಾಗಿದೆ. ಈ ಕೆಳದರ್ಜೆ ಪ್ರಾಣಿಗಳ ವಿವಿಧ ಪಂಗಡಗಳಲ್ಲಿ ನೋಟೊಕಾರ್ಡ್ ವಿವಿಧ ದೇಹಭಾಗಗಳಿಗೆ ಮಾತ್ರ ಸೀಮಿತವಾಗಿರ ಬಹುದು. ವಿಕಾಸ ಮುಂದುವರಿದಂತೆ ನೋಟೊಕಾರ್ಡಿನ ಖಂಡಗಳ ಬದಲು ಮೃದ್ವಸ್ಥಿ ಖಂಡಗಳು ಕಂಡುಬಂದು ಅವುಗಳ ನಡುವೆ ಹಾಗೂ ನಡುಮಧ್ಯೆ ನೋಟೂಕಾರ್ಡಿನ ಅವಶೇಷ ಇರುತ್ತದೆ. ನಾಯಿ ಮೀನು, ಶಾರ್ಕ್ ಇಂಥವುಗಳಲ್ಲಿ ಬೆನ್ನುಕಂಬ ಹೀಗಿದೆ. ಇನ್ನೂ ಮುಂದುವರಿದ ವಿಕಾಸದಲ್ಲಿ ಮೃದ್ವಸ್ಥಿಯ ಬದಲು ಎಲುಬೇ ಉಪಸ್ಥಿತವಾಗುತ್ತದೆ. ಎಲುಬು ಖಂಡಗಳ ನಡುವೆ ಮೃದ್ವಸ್ಥಿ ಫಲಕವಿದ್ದು ಅದು ಖಂಡಗಳನ್ನು ಪರಸ್ಪರ ಬಂಧಿಸುತ್ತದೆ. ಆದರೂ ಒಂದು ಖಂಡ (ಕಶೇರು) ನೆರೆಯ ಕಶೇರುವಿನೊಡನೆ ಈ ರೀತಿ ಕೀಲುಗೊಂಡಿದ್ದು ಸ್ವಲ್ಪ ಚಲನೆ ಉಳ್ಳದ್ದಾಗಿರುತ್ತದೆ. ಅಲ್ಲದೆ ನಡೆದಾಡುವಾಗ ಓಡಾಡುವಾಗ ಮತ್ತು ಧುಮುಕಿ ಕುಪ್ಪಳಿಸುವಾಗ ಸಂಭವಿಸುವ ಕಶೇರುಗಳ ಪರಸ್ಪರ ಜಖಮ್ಮನ್ನು ಈ ಮೃದ್ವಸ್ಥಿ ಫಲಕಗಳು ಶಮನಗೊಳಿಸುತ್ತವೆ. ಫಲಕಗಳ ನಡು ಮಧ್ಯ ಮಾತ್ರ ಪ್ರಾಚೀನ ಆಧಾರವಾದ ನೋಟೋಕಾರ್ಡಿನ ಅವಶೇಷವನ್ನು ಗುರುತಿಸಬಹುದಾಗಿದೆ. ಕೆಲವು ಮೀನು ಹಾಗೂ ಕೆಲವು ಸರ್ಪಗಳಲ್ಲಿ ಈ ಅವಶೇಷವನ್ನು ಕಶೇರುಮಣಿಯ ನಡುಮಧ್ಯದಲ್ಲಿ ಗುರುತಿಸಬಹುದು. ವಿಕಾಸ ಈ ಕ್ರಮದಲ್ಲಿ ಸಾಗಿದೆ ಎಂಬುದಕ್ಕೆ ಬೆನ್ನಲುಬುಳ್ಳ ಎಲ್ಲ ಪ್ರಾಣಿಗಳಲ್ಲು ಅವುಗಳ ಭ್ರೂಣಾವಸ್ಥೆಯಲ್ಲಿ ಮೇಲೆ ವಿವರಿಸಿರುವ ವಿವಿಧ ಹಂತಗಳು ಕಂಡು ಬರುವುದೇ ಸಾಕ್ಷಿ. ನೋಟೋಕಾರ್ಡೇ ಆಗಲಿ ಅದರ ಅವಶೇಷವೇ ಆಗಲಿ ಕಂಡುಬರುವ ಪ್ರಾಣಿಗಳನ್ನು ಕಾರ್ಡೇಟುಗಳೆಂದು ಇನ್ನೂ ಕೆಳದರ್ಜೆಯ (ಅಂದರೆ ಬೆನ್ನುಕಂಬದಂಥ ಆಸರೆಯೇ ಇಲ್ಲದ) ಪ್ರಾಣಿಗಳನ್ನು ನಾನ್‍ಕಾರ್ಡೇಟುಗಳೆಂದೂ ವಿಂಗಡಿಸವುದಿದೆ. ಮೃದ್ವಸ್ಥಿ ಇಲ್ಲವೇ ಎಲುಬಿನಿಂದ ಮರೆಮಾಚಲ್ಪಟ್ಟ ನೋಟೊಕಾರ್ಡ್ ಇರುವ ಮೀನುಗಳು ಉಭಯಚರಿಗಳು, ಸರೀಸೃಪಗಳು, ಪಕ್ಷಿಗಳು ಹಾಗೂ ಸ್ತನಿಗಳನ್ನು ಕಶೇರುಕಗಳೆಂದು (ವರ್ಟಿಬ್ರೇಟ್ಸ್) ವರ್ಗೀಕರಿಸಲಾಗಿದೆ.
ಬೆನ್ನಕಂಬದ ರಚನೆಯಲ್ಲಿ ಭಾಗವಹಿಸುವ ಕಶೇರುಗಳ ಸಂಖ್ಯೆ ವಿವಿಧ ಪ್ರಾಣಿಗಳಲ್ಲಿ ವಿವಿಧವಾಗಿದೆ. ಹಾವುಗಳಲ್ಲಿ ಅತ್ಯಧಿಕ. ಜೊತೆಗೆ ಎಲ್ಲ ಕಶೇರುಗಳೂ ಒಂದೇ ಅಕೃತಿಯವು. ಆಮೆಗಳಲ್ಲಿ ಸೇರಿಕೊಂಡು ಚಿಪ್ಪಾಗಿವೆ. ಪಕ್ಷಿಗಳಲ್ಲಿ ಕಂಠಭಾಗದಲ್ಲಿ ಮಾತ್ರ ಮಣಿಗಳನ್ನು ಗುರುತಿಸಬಹುದು. ಮಿಕ್ಕವುಒಂದೇ ಮೂಳೆ ಆಗಿ ಸೇರಿಹೋಗಿ ಬೆನ್ನುಮೂಳೆ ಆಗಿದೆ. ಸ್ತನಿಗಳಲ್ಲಿ ಸಾಮಾನ್ಯವಾಗಿ 33-34 ಮಣಿಗಳು ಕಂಡುಬರುವುವಲ್ಲದೆ ಇವುಗಳ ಆಕಾರ ಗಾತ್ರ ಇತ್ಯಾದಿ ವ್ಯತ್ಯಾಸಗಳಿಂದ ಕಂಠಪ್ರದೇಶದ ಕಶೇರುಗಳು, ವಕ್ಷ ಕಶೇರುಗಳು, ಉದರ ಕಶೇರುಗಳು, ಶ್ರೋಣಿ ಕಶೇರುಗಳು ಮತ್ತು ಪಚ್ಛ ಕಶೇರುಗಳು ಎಂದು ಗುರುತಿಸಬಹುದಾಗಿದೆ. ಕಂಠಕಶೇರುಗಳು 7 ಕಂಠ ಎಷ್ಟೇ ಉದ್ದವಾಗಿರಲಿ ಗಿಡ್ಡವಾಗಿರಲಿ ಇವುಗಳ ಸಂಖ್ಯ ಸಾಮಾನ್ಯವಾಗಿ ಅಷ್ಟೆ. ತಿಮಿಂಗಿಲಗಳಲ್ಲಿ ಮಾತ್ರ ಇವು ಹೆಚ್ಚು ಕಡಿಮೆ ಆಗಿರಬಹುದು. ಕಶೇರುವiಣಿಯ ಉದ್ದ ಅಥವಾ ಗಿಡ್ಡ ಆಕಾರದಮೇಲೆ ಪ್ರಾಣಿಯ ಕಂಠದ ಉದ್ದ ನಿರ್ಧಾರವಾಗುತ್ತದೆ. ವಕ್ಷ ಕಶೇರುಗಳು ಯಾವಾಗಲೂ 12. ಉದರ ಭಾಗದ ಮತ್ತಿರದ ಕಶೇರುಗಳ ಸಂಖ್ಯೆ ವಿವಿಧ ಪ್ರಾಣಿ ಜಾತಿಗಳಲ್ಲಿ ವಿವಿಧ. ಮಾನವನಲ್ಲಿ ಬೆನ್ನಕಂಬ 32-34 ಕಶೇರುಗಳಿಂದಾಗಿದೆ. (ಚಿತ್ರ - 9) ಕಂಠಕಶೇರುಗಳು 7, ವಕ್ಷಕಶೇರುಗಳು 12, ಉದರ ಕಶೇರುಗಳು 5, ಶ್ರೋಣಿ ಕಶೇರುಗಳು 4 ಮತ್ತು ಪುಚ್ಛಕಶೇರುಗಳು 4-5. ಆದರೆ ಈ ಸಂಖ್ಯೆ ಭ್ರೂಣಾವಸ್ಥೆಯಲ್ಲಿ ಮಾತ್ರ ನಿಜ. ಹುಟ್ಟಿದ ಮೇಲೆ ಸಾಮಾನ್ಯವಾಗಿ 26 ಮಣಿಗಳನ್ನು ಮಾತ್ರ ಲೆಕ್ಕಿಸಬಹುದು. ಏಕೆಂದೆರೆ ಶ್ರೋಣಿ ಕಶೇರುಗಳೆಲ್ಲ ಸೇರಿ ತ್ರಿಕಾಸ್ಥಿ (ಸೇಕ್ರಮ್) ಎಂಬ ಒಂದೇ ಎಲುಬಾಗಿ ಹೋಗಿದೆ. ಹಾಗೆಯೇ ಪಚ್ಛಕಶೇರುಗಳೆಲ್ಲ ಸೇರಿ ಪುಚ್ಛ ಎಲುಬಾಗಿದೆ. (ಕಾಕ್ಸಿಕ್ಸ್).
ಮಾನವನ ಆದರ್ಶರೂಪದ ಕಶೇರುವಿನಲ್ಲಿ ದಪ್ಪವಾಗಿ ಎದ್ದು ಕಾಣುವ ಭಾಗ ಕಶೇರು ಕಾಯ, ಇದರ ಮೇಲಿನ ಹಾಗೂ ಕೆಳಗಿನ ಮೈಗಳು ತಟ್ಟೆಯಾಗಿಯೂ ಮಿಕ್ಕಮೈ ಕಂಬದಂತೆ ಗುಂಡಗೂ ಇವೆ. ಕಾಯದ ವ್ಯಾಸ ವಿವಿಧ ಕಶೇರುಗಳಲ್ಲಿ 20-40 ಸೆಂಮೀನಷ್ಟಿದೆ.
ಕಶೇರು ಕಾಯದ ಎರಡು ಪಕ್ಕಗಳಿಂದಲೂ ಹಿಂದಕ್ಕೆ ಎರಡು ಕಮಾನುಗಳು ಚಾಚಿಕೊಂಡಿದೆ. ಇವೆರಡೂ ಹಿಂದೆ ಸೇರಿಕೊಂಡು ಒಂದು ಮೊಂಡು ಮುಳ್ಳಿನಂತಾಗುತ್ತದೆ. ಚಾಚುಗಳ ನಡುವೆ ಉಂಗುರ ಏರ್ಪಡುತ್ತದೆ. ಕಮಾನುಗಳ ಎರಡು ಪಕ್ಕಗಳಿಂದಲೂ ಮೇಲಕ್ಕೆ ಮತ್ತು ಕೆಳಕ್ಕೆ ಹಾಯುವ ಎರಡು ಚಾಚುಗಳು (ಆರ್ಟಿಕ್ಯುಲೇಟಿಂಗ್ ಪ್ರಾಸೆಸ್) ಇದ್ದು ಅವುಗಳ ಮೂಲಕ ಮೇಲಿನ ಮತ್ತು ಕೆಳಗಿನ ಕಶೇರುವಿನೊಡನೆ ಅಲ್ಪ ಚಲನೆಯ ಕೀಲುಗಳು ಏರ್ಪಡುತ್ತವೆ. ಸುಮಾರು ಈ ಚಾಚುಗಳ ನೇರದಲ್ಲಿ ಕಶೇರು ಕಾಯದಿಂದ ಎಡ ಬಲಪಕ್ಕಗಳಲ್ಲಿ ಅಡ್ಡ ಚಾಚುಗಳು (ಟ್ರಾನ್ಸ್‍ವರ್ಸ್ ಪ್ರ್ರಾಸೆಸ್) ಉದ್ಭವಿಸುತ್ತವೆ. ಈ ಎಲ್ಲ ಚಾಚುಗಳನ್ನೂ ಕೆಶೇರು ಮುಳ್ಳುಗಳನ್ನೂ ರಜ್ಜುಗಳು ಮತ್ತು ಸ್ನಾಯುಬಂಧನಗಳು ಮೇಲಿನಿಂದ ಕೆಳಗಿನವರೆಗೆ ಭದ್ರವಾಗಿ ಬಂಧಿಸುತ್ತವೆ. ನೆಟ್ಟಗೆ ನಿಂತಾಗ ಕಶೇರು ಸರದ ಮುಳ್ಳುಗಳೆಲ್ಲ ಮೇಲಿನಿಂದ ಕೆಳಕ್ಕೆ ಒಂದೇ ನೆರದಲ್ಲಿದ್ದು ಬೆನ್ನುಹುರಿಯಂತೆ ಕಾಣಲೂ ಮುಟ್ಟಲೂ ಸಿಕ್ಕುತ್ತವೆ. ಕಶೇರು ಕಮಾನುಗಳ ನಡುವಿನ ಉಂಗುರಗಳು ಕಶೇರು ಸರದಲ್ಲಿ ನೇರವಾಗಿ ಒಂದರ ಕೆಳಗೆ ಒಂದು ಇವೆ. ಇದೊಂದು ಎಲುಬು ಅಚ್ಚಾದಿತ ನಾಳದಂಥ ರಚನೆ. ಈ ಬೆನ್ನೆಲುಬು ನಾಳದಲ್ಲಿ (ಸ್ಪೈನಲ ಕೆನಾಲ್) ಮಿದುಳುಬಳ್ಳಿ ಮೇಲಿನಿಂದ ಕೆಳಸಾಗಿ ಅಂತ್ಯಗೊಳ್ಳುತ್ತದೆ. ಎರಡು ಕಶೇರು ಉಂಗುರಗಳ ನಡುವೆ ಎಡಬಲ ಎರಡು ಪಕ್ಕಗಳಲ್ಲೂ ನರಗಳು ಸಾಗಿ ಮುಂಡ ಕೈಕಾಲುಗಳ ಎಲ್ಲ ಭಾಗಗಳನ್ನೂ ವಿದುಳು ಬಳ್ಳಿಗೆ ಸಂಪರ್ಕಿಸುತ್ತವೆ.
ಕಂಠಕಶೇರುಗಳ ಅಡ್ಡ ಚಾಚುಗಳಲ್ಲಿ ಒಂದು ರಂಧ್ರವಿದ್ದು ಅದರ ಮೂಲಕ ಕಶೇರು ಅಪಧಮನಿ (ವರ್ಟಿಬ್ರಲ್ ಆರ್ಟರಿ) ಒಂದೊಂದು ಕಶೇರುವಿನ ಮೂಲಕ ಮೇಲಕ್ಕೇರಿ ತಲೆಯ ಒಳಹೋಗುತ್ತದೆ. ಕಂಠದ ಮೊದಲ ಮತ್ತು ಎರಡನೆಯ ಕಶೇರುಗಳಿಗೆ ಅನುಕ್ರಮವಾಗಿ ಅಟ್ಲಾಸ ಮತ್ತು ಆಕ್ಸಿಸ್ ಎಂಬ ಅನ್ವರ್ಥನಾಮಗಳಿವೆ. ಗ್ರೀಕ್ ಪುರಾಣದಂತೆ ಗುಂಡಾಗಿರುವ ಭೂಮಿಯನ್ನು ಅಟ್ಲಾಸ್ ಎಂಬ ದೈತ್ಯ ಹೊತ್ತಿರುವನಂತೆ. ಮಾನವನಲ್ಲಿ ಗುಂಡಾಗಿರುವ ರುಂಡವನ್ನು ಮುಂಡದ ಕಶೇರು ಸರದ ಮೊದಲ ಘಟಕ ಹಾಗೆಯೇ ಹೊತ್ತಿರುವುದರಿಂದ ಅದಕ್ಕೆ ಅಟ್ಲಾಸ್ ಎಂದು ಪ್ರಾಚೀನ ಪಾಶ್ಚಾತ್ಯ ವೈದ್ಯರು ಹೆಸರಿಸಿದರು. ಅಟ್ಲಾಸಿನ ಹಿಂಚಾಚುಗಳ ನಡುವೆ ಇರುವ ರಂಧ್ರವನ್ನು ಜೀವಿತ ಕಾಲದಲ್ಲಿ ಮುಂದಿನ ಮತ್ತು ಹಿಂದಿನ ರಂಧ್ರಗಳಾಗಿ ಭದ್ರವಾದ ಒಂದು ರಜ್ಜು ತಡಿಕೆ ಇಬ್ಭಾಗಿಸುತ್ತದೆ. ಹಿಂಭಾಗದ ರಂಧ್ರದ ಮೂಲಕ ಮಿದುಳು ಬಳ್ಳಿ ಕೆಳಹಾಯುತ್ತದೆ. ಎರಡನೆಯ ಕಶೇರು ಕಾಯದಿಂದ ಒಂದು ಗೂಟ ಮೇಲಕ್ಕೆ ಚಾಚಿಕೊಂಡಿದ್ದು ಅಟ್ಲಾಸಿನ ಮುಂದಿನ ರಂಧ್ರದ ಒಳನುಗ್ಗುತ್ತದೆ ಮತ್ತು ಅಟ್ಲಾಸಿಗೆ ತಿರುಗಡೆ ಗೂಟದಂತೆ ಅಥವಾ ಅಕ್ಷದಂತೆ ವರ್ತಿಸುತ್ತದೆ. ಎಂದೇ ಈ ಕಶೇರುವಿಗೆ ಆಕ್ಸಿಸ್ ಎಂದು ಹೆಸರು. ಗೂಟದ ಹಿಂದಿರುವ ರಜ್ಜುತಡಿಕೆ ಅದಕ್ಕೂ ಹಿಂದಕ್ಕೆ ಇರುವ ಮಿದುಳುಬಳ್ಳಿಗೂ ಗೂಟದಿಂದ ಜಖಮ್ಮಾಗದಂತೆ ರಕ್ಷಣೆ ಒದಗಿಸುತ್ತದೆ. ಎತ್ತರದಿಂದ ಬಿದ್ದಾಗ ಇಲ್ಲವೇ ನೇಣುಹಾಕಿಕೊಂಡಾಗ ರಜ್ಜು ತಡಿಕೆ ಹರಿದುಹೋಗುವುದರಿಂದ ಜಖಮ್ಮು ಆಗಿಯೇ ತೀರುತ್ತದೆ. ತತ್ಪರಿಣಾಮವಾಗಿ ಮಿದುಳು ಬಳ್ಳಿ ಅಪ್ಪಚ್ಚಿ ಆಗಿ ಒಡನೆ ಮರಣ ಸಂಭವಿಸುತ್ತದೆ. ವಕ್ಷ ಕಶೇರುಗಳ ಅಡ್ಡ ಚಾಚುಗಳೊಡನೆ ಎಡ ಬಲಪಕ್ಕೆಲುಬುಗಳು ಕೀಲುಗೂಡಿವೆ. ಉಸಿರಾಟದಲ್ಲಿ ಪಕ್ಕೆಲುಬುಗಳಚಲನೆಗೆ ಈ ಕೀಲುಗಳು ಆಧಾರಬಿಂದುಗಳಾಗಿ (ಫಲ್ಕ್ರ) ವರ್ತಿಸುತ್ತವೆ. ಉದರ ಕಶೇರುಗಳ ಕಾಯದ ಗಾತ್ರ ಎಲ್ಲ ಕಶೇರುಗಳಿಗಿಂತಲೂ ದೊಡ್ಡದಾಗಿವೆ. ಇಲ್ಲಿ ಕಶೇರುಗಳ ಮಧ್ಯ ಬಾಗುವಿಕೆ ಸಾಧ್ಯವಿದೆ. ಇದರ ಕೆಳಗಿರುವ ಕಶೇರುಗಳು ಸೇರಿಹೋಗಿ ತ್ರಿಕಾಸ್ಥಿ ಮತ್ತು ಕಾಕ್ಸಿಕ್ಸ್ ಆಗುವುದನ್ನು ಹೇಳಿದೆ. ತ್ರಿಕಾಸ್ಥಿ ಹಿಂದಕ್ಕೆ ಉಬ್ಬಿ ಬಾಗಿರುವ ದೊಡ್ಡ ಚಮಚದಂತಿದೆ. ಶ್ರೋಣಿಯ ಮಿಕ್ಕ ಎಲುಬುಗಳೊಡನೆ ಅಚಲವಾಗಿ ಬಂಧಿತವಾಗಿದ್ದ ಕಿಬ್ಬೊಟ್ಟೆ ಅಂಗಗಳಾದ ಮೂತ್ರಾಲಯ, ಗರ್ಭಾಶಯ (ಸ್ತ್ರೀಯರಲ್ಲಿ), ಮಲಾಶಯಗಳಿಗೆ ಇದು ಒಂದು ಅಸ್ಥಿನಿರ್ಮಿತ ಗೂಡಿನಂತಿದೆ (ಪೆಲ್ವಿಕ್‍ಕ್ಯಾವಿಟಿ). ಅಲ್ಲದೆ ಬೊಗಸೆಯಂತಿರುವ ತ್ರಿಕಾಸ್ಥಿಯ ಆಸರೆಯಲ್ಲಿ ಉದರದ ಅಂಗಗಳು ನೆಲೆಯಾಗಿವೆ.
ಚತುಷ್ಪಾದಿಸ್ತನಿಗಳಲ್ಲಿಯೂ ಎಳೆಮಗುವಿನಲ್ಲಿಯೂ ಕಶೇರುಸರ ಅಗ್ರದಿಂದ ಅಂತ್ಯದವರೆಗೂ ಒಂದೇ ಸಮನೆ ಬೆನ್ನಕಡೆ ಡುಬ್ಬಾಗಿದೆ. ಆದರೆ ನಡೆದಾಡುವಂತಾದ ಮೇಲೆ ಮಾನವನ ಬೆನ್ನುಕಂಬದಲ್ಲೆ ನಾಲ್ಕು ಬಾಗುಗಳನ್ನು ಗುರುತಿಸಬಹುದು. ಕಂಠ ಪ್ರದೇಶದಲ್ಲಿ ಸರದ ಡುಬ್ಬು ಮುಂದಕ್ಕೆ ಇದೆ. ಎಳೆಮಗು ಮಗುಚಿಕೊಂಡು ತಲೆ ಎತ್ತಲು ಪ್ರಾರಂಭವಾದಾಗನಿಂದ ಮೂಡಿ ಮುಂದೆ ಬಾಗಿ ಉಳಿಯುವ ಬಾಗು ಇದು. ಕುತ್ತಿಗೆಯನ್ನು ಮುಂದಕ್ಕೆ ಬಗ್ಗಿಸಿದಾಗ ಈ ಡೊಂಕು ಮಾಯವಾಗಿ ಪುನಃ ತಲೆ ಎತ್ತಿದಾಗ ಪ್ರಕಾಶವಾಗುತ್ತದೆ. ನೆಟ್ಟ ನಡಿಗೆಯ ಆದಿಮಾನವ ಮೊದಲುಗೊಂಡು ಎಲ್ಲ ಮಾನವ ವರ್ಗಗಳಲ್ಲೂ ಈ ಬಾಗು ಕಂಡುಬರುತ್ತದೆ. ಸೊಂಟ ಮುಂದಕ್ಕೆ ಬಗ್ಗಿಸಿದಾಗಲೂ ಇದು ಮಾಯವಾಗುವುದಿಲ್ಲ. ಮಾನವನಿಗಿಂತ ಕೆಳದರ್ಜೆ ಕಶೇರುಕಗಳಲ್ಲಿ ಈ ಬಾಗು ಕಾಣಬರುವುದಿಲ್ಲವಾದರೂ ವಾನರಗಳು ತಳಊರಿ ಕುಳಿತಾಗ ಹಂಗಾಮಿಯಾಗಿ ಕಂಡುಬರಬಹುದು. ಕಶೇರು ಸರದ ಕಂಠ ಭಾಗದ ಮುಂಚಾಚಿಗೂ ಉದರ ಭಾಗದ ಮುಂಚಾಚಿಗೂ ನಡುವೆ ಕಶೇರು ಸರದ ವಕ್ಷಭಾಗದಲ್ಲಿ ಈ ಎರಡು ಬಾಗುಗಳನ್ನೂ ವಿನಾಯಿಸುವಂತೆ ಒಂದು ಹಿಂಬಾಗು ಇದೆ. ಮುಂಡವನ್ನು ಹಿಂದಕ್ಕೆ ಅಥವಾ ಮುಂದಕ್ಕೆ ಬಗ್ಗಿಸಿದಾಗ ಈ ಬಾಗಿನ ಡೊಂಕು ಅನುರೂಪವಾಗಿ ಹಂಗಾಮಿಯಾಗಿ ವ್ಯತ್ಯಾಸವಾಗುವುದು ಇದೆ. ಕಶೇರುಸರ ದೇಹಕ್ಕೆ ಒಂದು ನೇರವಾದ ಅಕ್ಷ ನೀಡಿದಂತಿದೆ.
ರೋಗದ ಪರಿಣಾಮವಾಗಿ ಬೆನ್ನು ಕಂಬದ ನೇರ ಅಕ್ಷದಲ್ಲಿ ಅರೂಪತೆ ಉಂಟಾಗುವುದಿದೆ. ದೇಹ ಮುಂಬಾಗಿ ಗೂನುಬೆನ್ನು ಸ್ಥಿತಿ ಉಂಟಾಗಬಹುದು. ಇದಕ್ಕೆ ಕೈಫೋಸಿಸ್ ಎಂದು ಹೆಸರು. ಉದರದ ಸಹಜ ಬಾಗು ಹೆಚ್ಚಾಗುವುದು ಇದೆ. ಇದಕ್ಕೆ ಲಾರ್ಡೊಸಿಸ್ ಎಂದು ಹೆಸರು. ಕಶೇರುಸರ ಯಾವುದಾದರೂ ಪಕ್ಕಕ್ಕೆ ಡೊಂಕಾಗಿರಬಹುದು. ಇದಕ್ಕೆ ಸ್ಕೋಲಿಯೋಸಿಸ್ ಎಂದು ಹೆಸರು. ಈ ಸ್ಥಿತಿಗಳು ವ್ಯಕ್ತಿಯ ಚಲನವಲನಗಳಿಗೆ ತೊಂದರೆಯಾಗದಷ್ಟು ಅಲ್ಪವಾಗಿರಬಹುದು. ಇಲ್ಲವೇ ತುರ್ತುಶಸ್ತ್ರ ಚಿಕಿತ್ಸೆಯೇ ಅಗತ್ಯವಾಗುವಷ್ಟು ತೀವ್ರವಾಗಿರಬಹುದು. ರೋಗದ ಪರಿಣಾಮವಾಗಿ ಬೆನ್ನುಕಂಬದಲ್ಲಿ ಅರೂಪತೆ ಉಂಟಾಗದೆ ಅದರ ಚಲನಸಾಮಥ್ರ್ಯ ತೀರ ಕಂಠಿತವಾಗುವುದೂ ಉಂಟು. ಅಘಾತ ಪ್ರಸಂಗಗಳಲ್ಲಿ ಕಶೇರು ಮಣಿಯ ಅಂಚುಚಾಚುಗಳು ಛಿದ್ರವಾಗಬಹುದು. ಕಶೇರುಗಳನ್ನು ಬಂಧಿಸುವ ರಜ್ಜುಗಳೂ ಹರಿದು ಮೇಲಿನ ಕಶೇರು ಕೆಳಗಿನ ಕಶೇರುವಿನ ಮೇಲೆ ಮುಂದಕ್ಕೆ ಜಾರಬಹುದು. ಹೀಗಾದರೆ ಈ ಎರಡು ಕಶೇರುಗಳ ನಡುವೆ ಮಿದುಳು ಬಳ್ಳಿ ಸಿಕ್ಕಿ ಅಪ್ಪಚ್ಚಿ ಆಗುವುದು ಅಥವಾ ಛಿದ್ರವಾಗುವುದು ವ್ಯಕ್ತ. ಕಂಠಭಾಗದಲ್ಲಿ ಹೀಗಾದರೆ ಒಡನೆ ಮರಣ ಸಂಭವಿಸುತ್ತದೆ-ನೇಣು ಪ್ರಸಂಗದಲ್ಲಿಯಂತೆ. ವಕ್ಷ ಭಾಗದಲ್ಲಿ ಇಂಥ ಆಘಾತಗಳಿಂದ ಆ ಮಟ್ಟದ ಕೆಳಗಿನ ದೇಹಭಾಗಗಳ ಸ್ವಾಧೀನ ಹಾಗೂ ಸಂವೇದನೆಗಳ ನಾಶ, ಮೂತ್ರ ವಿಸರ್ಜನೆಯ ಹತೋಟಿ ತಪ್ಪುವುದು ಮುಂತಾದವು ಕಂಡುಬರುತ್ತದೆ. (ಎಸ್.ಆರ್.ಆರ್.)