ಬೆಳ್ಳಾವೆ ವೆಂಕಟನಾರಣಪ್ಪ 1872-1943. ಕನ್ನಡ ನಾಡು ನುಡಿಯ ಉಜ್ಜ್ವಲ ಅಭಿಮಾನಿ. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕರಲ್ಲಿ ಒಬ್ಬರು. ಶ್ರೇಷ್ಠ ಅಧ್ಯಾಪಕ. ಕನ್ನಡದ ವಿಜ್ಞಾನ ಸಾಹಿತ್ಯ ರಚಕರಲ್ಲಿ ಆದ್ಯರು. ಆಂಧ್ರದಿಂದ ಬಂದು ತುಮಕೂರು ಜಿಲ್ಲೆಯ ಬೆಳ್ಳಾವೆಯಲ್ಲಿ ನೆಲಸಿದ ಮನೆತನದಲ್ಲಿ ಜನಿಸಿದರು. ತಂದೆ ವೆಂಕಟ ಕೃಷ್ಣಯ್ಯ. ತಾಯಿ ಲಕ್ಷ್ಮೀದೇವಿ. ತುಮಕೂರಿನಲ್ಲಿ ಮೆಟ್ರಿಕ್ಯುಲೇಷನ್ ಮುಗಿಸಿ ಬೆಂಗಳೂರಿನಲ್ಲಿ ಎಫ್.ಎ. ಮತ್ತು ಬಿ.ಎ., ತರಗತಿಗಳಲ್ಲಿ ಉತ್ತೀರ್ಣರಾಗಿ ಪದವೀಧರರಾದರು.
ಪ್ರಿನ್ಸಿಪಾಲ್ ಜಾನ್ ಕುಕ್‍ರ ಶಿಫಾರಸಿನ ಮೇರೆಗೆ ಸೆಂಟ್ರಲ್ ಕಾಲೇಜಿನಲ್ಲಿ ಸಹಾಯಕ ಅಧ್ಯಾಪಕರಾಗಿ ನೇಮಕಗೊಂಡ ವೆಂಕಟನಾರಣಪ್ಪನವರು ಅಲ್ಲಿ ಮಾನವಶರೀರ ವಿಜ್ಞಾನ ಮತು ಭೌತವಿಜ್ಞಾನ ಬೋಧಿಸಿದರು. ಈ ಮಧ್ಯೆ ಕುಕ್‍ರ ಸಲಹೆಯಂತೆ (1905) ಅಧ್ಯಯನ ಮಾಡಿ ಭೌತವಿಜ್ಞಾನದಲ್ಲಿ ಎಂ.ಎ. ಪದವಿ ಪಡೆದರು. ಬೆಳ್ಳಾವೆಯವರು ಶ್ರೇಷ್ಠ ಅಧ್ಯಾಪಕರು. ಶಿಸ್ತಿಗೆ ಹೆಸರಾದವರು. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಅಲ್ಲಿ ನಡೆದ ಬೈಯಕ್ತಿಕ ಅನ್ಯಾಯಕ್ಕೆ ನೊಂದು ಸೇವಾವಧಿಗೆ ಮೊದಲೇ ನಿವೃತ್ತರಾದರು.
ಕನ್ನಡದಲ್ಲಿ ವಿಜ್ಞಾನ ಬೋಧನೆ, ಸಾಹಿತ್ಯರಚನೆ ಮತ್ತು ಪ್ರಸಾರಗಳಿಗಾಗಿ 1917ರಲ್ಲಿ ಕರ್ನಾಟಕ ವಿಜ್ಞಾನ ಪ್ರಚಾರಣೀ ಸಮಿತಿಯನ್ನು ಆರಂಭಿಸಿದರು. ವೆಂಕಟನಾರಾಣಪ್ಪನವರ ಗುರು ನಂಗಪುರಂ ವೆಂಕಟೇಶಯ್ಯಂಗಾರ್ಯರು ಈ ಸಮಿತಿಯ ಮುಖ್ಯ ಪತ್ರಿಕೆಯಾಗಿದ್ದ ವಿಜ್ಞಾನದ ಸಂಪಾದಕರಾಗಿದ್ದರು. ಇಂದಿಗೂ ಈ ಪತ್ರಿಕೆ ವಿಜ್ಞಾನ ವಿಷಯಗಳ ವಸ್ತು ವೈವಿಧ್ಯ ಸರಳ ನಿರೂಪಣೆ ಮತ್ತು ಭಾಷಾ ಶುದ್ಧಿಗೆ ಹೆಸರಾಗಿ ಮಾರ್ಗದರ್ಶಿ ಸ್ಥಾನದಲ್ಲಿದೆ.
ಕನ್ನಡ ಸಾಹಿತ್ಯ ಪರಿಷತ್ತಿಗೂ ಬೆಳ್ಳಾವೆ ವೆಂಕಟನಾರಣಪ್ಪನವರಿಗೂ ಬಿಡಿಸಲಾಗದ ನಂಟು. 1916ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ, 1919-36ರ ತನಕ ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆಯ ಸಂಪಾದಕ ಮಂಡಲಿಯ ಸದಸ್ಯ. 1920-21 ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿ, 1922-26 ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಹೀಗೆ ಇವರು ಅನೇಕ ಘಟ್ಟಗಳಲ್ಲಿ ಪರಿಷತ್ತಿಗಾಗಿ ದುಡಿದಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಗಳಾದ ಶಬ್ದಮಣಿದರ್ಪಣ (1920), ಪಂಪರಾಮಾಯಣ (1921), ಸೋಮೇಶ್ವರ ಶತಕ (1923), ಪಂಪಭಾರತ (1931), ಕುಸುಮಾವಳಿಗಳಲ್ಲಿ ಇವರದು ಪ್ರಮುಖ ಪಾತ್ರ. ಅಪ್ರಕಟಿತ ಕೃತಿಗಳಾದ ಷಟ್ಪದಿ ಗ್ರಂಥಗಳ ನಿಘಂಟು, ನಿಘಂಟುಗಳ ನಿಘಂಟು ಮತ್ತು ¾ವಿಕುಳಗಳ ನಿಘಂಟುಗಳನ್ನು ಸಿದ್ಧಪಡಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ಕನ್ನಡ ನಿಘಂಟುವಿಗೆ ಪ್ರಧಾನ ಸಂಪಾದಕರಾಗಿದ್ದರು. ಕನ್ನಡ ಐದನೆಯ ಪುಸ್ತಕ (1927), ಗುಣಸಾಗರ (1931), ಜೀವ ವಿಜ್ಞಾನ (1939)- ಇವು ಇವರ ಸ್ವತಂತ್ರ ರಚನೆಗಳು.
ಬೆಳ್ಳಾವೆ ವೆಂಕಟನಾರಣಪ್ಪನವರು ಸಂಪ್ರದಾಯಸ್ಥ ಬ್ರಾಹ್ಮಣರು. ದೈವ ಭಕ್ತರು. ಬೆಂಗಳೂರು ಬಸವನಗುಡಿಯ ಮಲ್ಲಿಕಾರ್ಜುನ ದೇವಾಲಯ, ಚಾಮರಾಜಪೇಟೆಯ ರಾಮೇಶ್ವರ ದೇವಾಲಯಗಳ ವ್ಯವಸ್ಥೆನೋಡಿಕೊಂಡಿದ್ದರು. ಮುಲಕನಾಡು ಸಭೆಯ ಅಧ್ಯಕ್ಷತೆ (1933-37), ಧರ್ಮಸಭೆಯ ಸದಸ್ಯತ್ವ (1910-18) ಮತ್ತು ಮಾಗಡಿ ಕರಣಿಕರ ವೈದಿಕ ಧರ್ಮಶಾಲೆಯ ನಿರ್ದೇಶಕತ್ವ (1930) ಇವರು ನಿರ್ವಹಿಸಿದ ಇತರ ಕರ್ತವ್ಯಗಳು. ಸಾಮಾಜಿಕವಾಗಿ ಬಸವನಗುಡಿ ಯೂನಿಯನ್ ಮತ್ತು ಸರ್ವಿಸ್ ಕ್ಲಬ್ಬಿನ ಸ್ಥಾಪಕ ಕಾರ್ಯದರ್ಶಿ (1901-22), ಶ್ರೀರಾಮಕೃಷ್ಣ ವಿದ್ಯಾರ್ಥಿ ಸಂಸ್ಥೆಯ ಸ್ಥಾಪಕ ಸದಸ್ಯ (1919) ಮತ್ತು ಬೆಂಗಳೂರು ಸಿಟಿ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ (1930-37) ಆಗಿದ್ದರು.
ವೆಂಕಟನಾರಣಪ್ಪನವರು ಕನ್ನಡ ನಾಡು ನುಡಿಗೆ ಮತ್ತು ಸಮಾಜಕ್ಕೆ ಸಲ್ಲಿಸಿದ ಸೇವೆ ಗಮನಿಸಿದ ಕನ್ನಡ ಜನತೆ ಇವರಿಗೆ 1937ರಲ್ಲಿ ಜಮಖಂಡಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಪೀಠ ಕೊಟ್ಟು ಗೌರವಿಸಿತು. ಆಗಿನ ಮಹಾರಾಜರ ಸರ್ಕಾರ `ರಾಜಸೇವಾಸಕ್ತ ಎನ್ನುವ ಬಿರುದನ್ನು 1940ರಲ್ಲಿ ಕೊಟ್ಟಿತು. 1943 ಆಗಸ್ಟ್ 30 ರಂದು ಬೆಂಗಳೂರಿನಲ್ಲಿ ವೆಂಕಟನಾರಣಪ್ಪನವರು ನಿಧನ ಹೊಂದಿದರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇವರ ಹೆಸರಿನಲ್ಲಿ ದತ್ತಿಯೊಂದನ್ನು ವಿಜ್ಞಾನ ಬರವಣಿಗೆಯನ್ನು ಪ್ರೋತ್ಸಾಹಿಸಲು ಅಭಿಮಾನಿಗಳು ಸ್ಥಾಪಿಸಿದ್ದಾರೆ. (ಜಿ.ಜಿ.ಎಂ.)