ಬೊಗೋಟ - ಕೊಲಂಬಿಯ ಗಣರಾಜ್ಯದ ರಾಜಧಾನಿ ಹಾಗೂ ಕೊಲಂಬಿಯದ ಕೊಂಡಿನಮಾರ್ಕ ಪ್ರಾಂತ್ಯದ ಆಡಳಿತ ಕೇಂದ್ರನಗರ. ಸಮುದ್ರ ಮಟ್ಟದಿಂದ 2639 ಮೀಟರ್ ಎತ್ತರದಲ್ಲಿ ಉ.ಅ. 4ಲಿ 36 ಪ.ರೇ. 74 05 ಗಳ ನಡುವೆ ಇದೆ. ವಿಸ್ತೀರ್ಣ ಸುಮಾರು 1578 ಚ.ಕಿ.ಮೀ, ಜನಸಂಖ್ಯೆ 2,855,065 (1973). ಸುತ್ತಲೂ ಪರ್ವತಗಳಿಂದಾವೃತವಾಗಿದ್ದು ಹವೆ ತಂಪಾಗಿರುವುದು. ಬೊಗೋಟ ರೈಲು ಮಾರ್ಗ. ಹೆದ್ದಾರಿ ಮತ್ತು ವಾಯು ಮಾರ್ಗಗಳ ಉತ್ತಮ ಸಂಪರ್ಕ ಪಡೆದಿದೆ. ಇದೊಂದು ವ್ಯಾಪಾರ ವಾಣಿಜ್ಯ ಕೇಂದ್ರ. ಕಲೆ, ಶಿಕ್ಷಣ ಹಾಗೂ ಸಾಂಸ್ಕøತಿಕ ಕೇಂದ್ರಕೂಡ. ದಕ್ಷಿಣ ಅಮೆರಿಕದ ಆತೆನ್ಸ್ ಎಂದು ಪ್ರಸಿದ್ಧ. ನಗರದ ಮಧ್ಯದಲ್ಲಿ ಇಟಲಿಯ ವಾಸ್ತುಶಿಲ್ಪಿಯಿಂದ ನಿರ್ಮಿತವಾದ ಸೈಮನ್ ಬೊಲಿವರನ ವಿಗ್ರಹವಿದೆ. ನಗರ ಅನೇಕ ಹಳೆಯ ಹಾಗೂ ಹೊಸ ಮಾದರಿಯ ಕಟ್ಟಡಗಳಿಂದಲೂ ಉದ್ಯಾನಗಳಿಂದಲೂ ಕೂಡಿದೆ. ಬೊಲಿವರನ ನಿವಾಸವಾಗಿದ್ದುದಾದ ಸುಂದರ ಮನೆಯಿರುವ ನ್ಯಾಷನಲ್ ಪಾರ್ಕ್ ಬೊಗೋಟದ ಪ್ರಮುಖ ಉದ್ಯಾನ. ವೈದ್ಯ, ಕಾನೂನು, ರಾಜ್ಯಶಾಸ್ತ್ರ, ಗಣಿತಶಾಸ್ತ್ರ ಹಾಗೂ ಎಂಜನಿಯರಿಂಗ್ ಶಿಕ್ಷಣ ಸಂಸ್ಥೆಗಳನ್ನೊಳಗೊಂಡ ನ್ಯಾಷನಲ್ ಯೂನಿವರ್ಸಿಟಿಯನ್ನು 1572ರಲ್ಲಿ ಈ ನಗರದಲ್ಲಿ ಸ್ಥಾಪಿಸಲಾಯಿತು. ಇದಲ್ಲದೆ ಕೊಲೋಜಿಯೂ ನ್ಯಾಷನಲ್ ಡೆಸ್ಯಾನ್ ಬಾತ್‍ಲೋಮ್ (1604). ಒಂದು ಯೆಹೂದಿ ಕಾಲೇಜು (1653) ಮತ್ತು ಕಾನೂನಿನಲ್ಲಿ ವಿಶೇಷ ವ್ಯಾಸಂಗ ನೀಡುವ ಇನ್ನೆರಡು ವಿಶ್ವವಿದ್ಯಾಲಯ ಇಲ್ಲಿವೆ. ನ್ಯಾಷನಲ್ ಮೂಸಿಯಮ್ (1823) ಮತ್ತು ಗ್ರಂಥಾಲಯ, ಸಂಗೀತ ಶಿಕ್ಷಣಶಾಲೆ ಹಾಗೂ ಖಗೋಳ ವಿಜ್ಞಾನ ವೀಕ್ಷಣ ಮಂದಿರಗಳೂ ಉಂಟು.

ತಂಬಾಕು, ರಾಸಾಯನಿಕ ವಸ್ತುಗಳು, ಗಾಜು, ಬಟ್ಟೆ, ಚರ್ಮದ ವಸ್ತುಗಳು, ಹಿಟ್ಟು, ಸಿಮೆಂಟ್, ಸಕ್ಕರೆ, ಸುಗಂಧ ದ್ರವ್ಯಗಳು, ಬಿಯರ್, ಪೆಯಿಂಟ್, ಇಟ್ಟಿಗೆಗಳು, ಬೆಂಕಿಪೆಟ್ಟಿಗೆ ಹಾಗೂ ಚಾಕೊಲೆಟ್ ಪ್ರಮುಖ ಉತ್ಪಾದನೆಗಳು.

ಈ ನಗರವನ್ನು 1538ರಲ್ಲಿ ಸ್ಥಾಪಿಸಲಾಯಿತು. ನ್ಯೂ ಗ್ರಾನಡದ ಆಡಳಿತ ಕೇಂದ್ರವಾಗಿ ಮುಂದೆ ಸ್ಪ್ಯಾನಿಷರ ವಸಾಹತು ಹಾಗೂ ದಕ್ಷಿಣ ಅಮೆರಿಕದ ಸಾಂಸ್ಕøತಿಕ ಕೇಂದ್ರವಾಯಿತು. 1811ರಲ್ಲಿ ಸ್ಪ್ಯಾನಿಷರ ವಿರುದ್ಧ ದಂಗೆ ಎದ್ದ ಜನ ತಮ್ಮದೇ ಸರ್ಕಾರ ರಚಿಸಿಕೊಂಡರು. 1814ರಲ್ಲಿ ಸೈಮರ್ ಬೊಲಿವರ್ ಸ್ಪ್ಯಾನಿಷರನ್ನು ಯುದ್ಧದಲ್ಲಿ ಸೋಲಿಸಿ ಬೊಗೋಟಾವನ್ನು ಆಡಳಿತ ಕೇಂದ್ರವಾಗಿ ಮಾಡಿಕೊಂಡ. ಮತ್ತೆ 1819ರ ತನಕ ಸ್ಪ್ಯಾನಿಷರ ಆಡಳಿತದಲ್ಲಿತ್ತು. ಅನಂತರ ಕೊಲಂಬಿಯಾದ ರಾಜಧಾನಿಯಾಯಿತು.

(ಎಚ್.ಜಿ.ಎ.)