ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೋಮಾಂಟ್, ಫ್ರಾನ್ಸಿಸ್

ಬೋಮಾಂಟ್, ಫ್ರಾನ್ಸಿಸ್ 1584-1616. ಇಂಗ್ಲಿಷ್ ನಾಟಕಕಾರ. ಲೆಸ್ಟರ್‍ಷೈರ್‍ನ ಗ್ರೇಸ್-ಡೂನಲ್ಲಿ ಜನನ. ಆಕ್ಸ್‍ಫರ್ಡಿನ ಬ್ರಾಡಗೇಟ್ಸ್ ಹಾಲ್‍ನಲ್ಲಿ ಮ್ಯಾಟ್ರಿಕ್ ಪಾಸಾದ (1597). 1600ರಲ್ಲಿ ಇನ್ನರ್ ಟೆಂಪಲ್ ಪ್ರವೇಶಮಾಡಿದ. 1602ರಲ್ಲಿ ಓವಿಡ್‍ನ ಕತೆಯೊಂದರ ಆಧಾರದ ಮೇಲೆ ಸಾಲಾಮ್ಯಾಸಿಸ್ ಅಂಡ್ ಹರ್ಮಾ ಫ್ರೊಡೈಟಸ್ ಎಂಬ ಕವಿತೆ ರಚಿಸಿದ. ಡ್ರೇಟನ್ ಮತ್ತು ಬೆನ್ ಜಾನ್ಸನ್‍ರ ಆಪ್ತಮಿತ್ರನಾಗಿ ಅವರ ನಾಟಕಗಳಿಗೆ ಪ್ರಶಸ್ತಿ ಕವನಗಳನ್ನು ಬರೆದ. ಮತ್ತೊಬ್ಬ ನಾಟಕಕಾರ ಜಾನ್ ಫ್ಲೆಚರ್ ಈತನ ಬಾಲ್ಯ ಸ್ನೇಹಿತ. ಇಂದೇ ಮನೆಯಲ್ಲಿ ಒಟ್ಟಿಗೇ ಇದ್ದವರು. 1606-16 ಅವಧಿಯಲ್ಲಿ ಕಲಾವಿನೋದಗಳಿಗಾಗಿ ಹಲವು ಮೊಗವಾಡದ ಗೀತ ನಾಟಕಗಳನ್ನು ಇಬ್ಬರೂ ಜೊತೆಗೊಡಿ ಬರೆದರು. ಈ ಜೋಡಿ ನಾಟಕಕಾರರು ಬಹುಜನ ಪ್ರಿಯರಾದರು. ಹತ್ತು ವರ್ಷಗಳಲ್ಲಿ ಇಬ್ಬರೂ ಸೇರಿ ಬರೆದವೆಂದು ಹೇಳಲಾದ 50 ನಾಟಕಗಳನ್ನು ಹೆಸರಿಸಲಾಗಿದೆ. ಬಹುಶಃ ಇವರ ಜೋಡಿ ಜನಪ್ರಿಯವಾಗಿದ್ದುದರ ಲಾಭಪಡೆಯಲು ಬೇರೆ ಹಲವು ನಾಟಕಗಳನ್ನೂ ಈ ಇಬ್ಬರ ಹೆಸರಿನಲ್ಲೇ ಪ್ರದರ್ಶಿಸಿರಬಹುದು. ಫ್ಲೆಚರ್‍ನೊಂದಿಗೆ ಬೋಮಾಂಟ್ ಸುಮಾರು 12 ನಾಟಕಗಳನ್ನು ಬರೆದಿರಬಹುದೆಂದು ಊಹಿಸಲಾಗಿದೆ. ಅವುಗಳ ಪೈಕಿ ದಿ ಸ್ಕಾರ್ನ್ ಫುಲ್‍ಲೇಡಿ (1610), ಫಿಲೇಸ್ಟರ್ (1611), ದಿ ಮೈಂಡ್ಸ್ ಟ್ರ್ಯಾಜಿಡಿ (1611), ಎ ಕಿಂಗ್ ಅಂಡ್ ನೊ ಕಿಂಗ್ (1611) ಬಾನ್‍ಡ್ಯೂಸ್ (1614), ಥಿಯೆರ್ರಿ ಅಂಡ್ ಥೊಯೊಡೊರೆಟ್ (1616) ಶ್ರೇಷ್ಠ ನಾಟಕಗಳೆಂದು ಪರಿಗಣಿತವಾಗಿವೆ. ದಿ ವಿಮೆನ್ ಹೇಟರ್ (1607), ದಿ ನೈಟ್ ಆಫ್ ದಿ ಬರ್ನಿಗ್ ಪೆಸಲ್ (1609)- ಇವು ಬೊಮಾಂಟ್ ಒಬ್ಬನೇ ಬರೆದವು ಎನ್ನಲಾಗಿದೆ.

ಗೀತ ರಚನೆಯಲ್ಲಿ ಈತನದು ಪಳಗಿದ ಕೈ. ಫ್ಲೆಚರ್‍ನೊಂದಿಗೆ ಬರೆದ ನಾಟಕಗಳಲ್ಲಿ ಬರುವ ಸೊಗಸಾದ ಹಾಡುಗಳೆಲ್ಲ ಈತನವೇ. ನಾಟಕದ ಭಾಗ ಹೆಚ್ಚಾಗಿ ಫ್ಲೆಚರ್‍ನದು. ಇವರ ನಾಟಕಗಳಲ್ಲಿ ಕಥಾಸಂವಿಧಾನ, ಕಲಾತ್ಮಕ ಶಿಲ್ಪ ಒಂದು ವಿಶೇಷಗುಣ. (ಕೆ.ಬಿ.ಪಿ.)