ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೋಯೆನ್ ನಾರ್ಮನ್ ವಿಲ್

ಬೋಯೆನ್ ನಾರ್ಮನ್ ವಿಲ್ 1887-1956 ಕೆನಡದ ಶಿಲಾವಿಜ್ಞಾನಿ, ಅಗ್ನಿಶಿಲೆಗಳ ಹುಟ್ಟು, ಹರವು, ವೈವಿಧ್ಯ, ವರ್ಗಿಕರಣ ಈ ಎಲ್ಲ ಪ್ರಕಾರಗಳಲ್ಲಿ ಪ್ರಮುಖ ಶೋಧನೆ ನಡೆಸಿದವ. ಶಿಲೆಗಳಲ್ಲಿ ಕಾಣುವ ವೈವಿಧ್ಯಕ್ಕೆ ಮೂಲ ಕಾರಣ ಕಂಡುಕೊಂಡು ಅವನ್ನು ಮೊದಲಿಗೆ ತಿಳಿಯಪಡಿಸಿದವ. ಕೆನಡ ಸಂಸ್ಥಾನದ ಆಂಟೇರಿಯೋ ರಾಜ್ಯದ ಕಿಂಗ್‍ಸ್ಟನ್ನಿನಲ್ಲಿ ಜನನ. ಬಾಲ್ಯದ ವಿದ್ಯಾಭ್ಯಾಸವೆಲ್ಲ ಕಿಂಗ್‍ಸ್ಟನ್ನಿನಲ್ಲೇ ನಡೆಯಿತು. ಹವಾವಿಜ್ಞಾನ, ಖನಿಜವಿಜ್ಞಾನ, ಭೂವಿಜ್ಞಾನ ಇವೆಲ್ಲದರಲ್ಲೂ ಈತನಿಗೆ ವಿಶೇಷಾಸಕ್ತಿ. ಇದರಿಂದ ಇವೆಲ್ಲದರಲ್ಲಿಯೂ ಉತ್ತಮಪ್ರಶಸ್ತಿ ಪಡೆದು, ವಿದ್ಯಾರ್ಥಿವೇತನಗಳಿಸಲು ಸಾಧ್ಯವಾಯಿತು. ಮುಂದಿನ ವಿದ್ಯಾಭ್ಯಾಸಕ್ಕಾಗಿ ಮ್ಯಾಸಾಚುಸೆಟ್ಸ್‍ನ ತಾಂತ್ರಿಕ ವಿದ್ಯಾಲಯ ಸೇರಿಕೊಂಡ. ಅನಂತರ ವಾಷಿಂಗ್‍ಟನ್ನಿನಲ್ಲಿಯ ಕಾರ್ನೆಗಿ ಭೂಭೌತಪ್ರಯೋಗಶಾಲೆ ಇವನ ಮುಖ್ಯ ಕಾರ್ಯಕ್ಷೇತ್ರವಾಯಿತು. ಅಲ್ಲಿಯೇ ಕೆಲವು ಖನಿಜರೂಪಗಳನ್ನು ಕೃತಕವಾಗಿ ಸೃಷ್ಟಿಸಿ ಅವುಗಳ ರೂಪಣೆಗೆ ಅಗತ್ಯವಾದ ಪರಿಸರ ಎಂಥದ್ದಿರಬೇಕು ಎಂಬುದನ್ನು ಪ್ರಯೋಗಗಳಿಂದ ಸ್ಥಿರಪಡಿಸಿದ. ಇದನ್ನು ಕುರಿತ ಅಧ್ಯಯನ, ಪ್ರಯೋಗ ಮತ್ತು ಸಂಶೋಧನೆಗಳಿಂದಾಗಿ ಇವನಿಗೆ 1912ರಲ್ಲಿ ಡಾಕ್ಟರೇಟ್ ಪದವಿ ಲಭಿಸಿತು. ಅಲ್ಲಿಂದ ಮುಂದೆ ತನ್ನ ಜೀವನದ ಅಧಿಕಭಾಗವನ್ನು ಕಾರ್ನೆಗಿ ಸಂಸ್ಥೆಯಲ್ಲೇ ಕಳೆದ. ಈತ ಅಲ್ಲಿ ನಡೆಸಿದ ಸಂಶೋಧನೆಗಳಿಂದ ಆ ಸಂಸ್ಥೆಗೆ ಖ್ಯಾತಿ ಬಂತು. ತನ್ನ ಶೋಧನೆಗಳ ಫಲಿತಾಂಶಗಳನ್ನೆಲ್ಲ ಕ್ರೋಢೀಕರಿಸಿ ಅಗ್ನಿಶಿಲೆಗಳ ವಿಕಾಸದಲ್ಲಿ ಹಂತಗಳು ಎಂಬ ಅರ್ಥ ಬರುವಂಥ ಹೆಸರಿನಲ್ಲಿ ಪ್ರೌಢಪ್ರಬಂಧ ಬರೆದು ಅಗ್ನಿಶಿಲೆಗಳ ವೈವಿಧ್ಯಕ್ಕೆ ಕಾರಣವಾದ ಮೂಲಸೂತ್ರಗಳನ್ನು ಗುರುತಿಸಿದ. ಇವು ಇಂದಿಗೂ ಶಿಲಾಧ್ಯಯನದಲ್ಲಿ ವಿಶಿಷ್ಟ ಸೂತ್ರಗಳೆನಿಸಿವೆ. ಮುಂದೆ ಅನೇಕ ವರ್ಷ ಪರ್ಯಂತ ತನ್ನ ವ್ಯಾಸಂಗವನ್ನು ಕಾರ್ನೆಗಿ ಸಂಸ್ಥೆಯಲ್ಲೇ ಮುಂದುವರಿಸಿದ. ಪ್ರಮುಖ ವಿದ್ಯಾಕೇಂದ್ರವೆನಿಸಿರುವ ಪ್ರಿನ್‍ಸ್ಟನ್ ವಿಶ್ವವಿದ್ಯಾಲಯದಲ್ಲಿ ಪ್ರೌಢÀವಿದ್ಯಾರ್ಥಿಗಳನ್ನು ಉದ್ದೇಶಿಸಿ ಉಪನ್ಯಾಸ ನೀಡಿದ (1927). ಈ ಉಪನ್ಯಾಸಗಳು ಮುಂದೆ ಅಗ್ನಿಶಿಲೆಗಳ ವಿಕಾಸ, ಎಂಬ ಹೆಸರಿನ ಗ್ರಂಥ ರೂಪವಾಗಿ ಪ್ರಕಟವಾದುವು. ಇಂದಿಗೂ ಅಗ್ನಿ ಶಿಲೆಗಳನ್ನು ಅಧ್ಯಯನ ಮಾಡುವವರಿಗೆ ಇದು ಅತ್ಯುಪಯುಕ್ತ ಗ್ರಂಥವೆನಿಸಿದೆ.

1937ರಿಂದ 1947ರ ತನಕ ಷಿಕಾಗೊ ವಿಶ್ವವಿದ್ಯಾಲಯದಲ್ಲಿ ಕೆಲಸಮಾಡಿ ಅಲ್ಲಿಯೂ ಮುಖ್ಯ ಸಂಶೋಧಕರನ್ನು ಒಟ್ಟುಗೂಡಿಸಿ ಅಮೂಲ್ಯ ಸಂಶೋಧನೆ ನಡೆಸಿದ. ಜೀವನದ ಕೊನೆಯ ವರ್ಷಗಳಲ್ಲಿ ವಾಷಿಂಗ್‍ಟನ್ನಿನಲ್ಲಿಯೇ ಇದ್ದ. ಅವನಿಗೆಂದೇ ಅಲ್ಲಿ ಪ್ರತ್ಯೇಕ ಕೋಣೆಯನ್ನು ಮೀಸಲಿಟ್ಟು ಅಲ್ಲಿಯ ಜನ ಅವನನ್ನು ವಿಶೇಷ ಗೌರವದಿಂದ ಆದರಿಸಿದರು. (ಬಿ.ಪಿ.ಆರ್.)