ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೌರಿಂಗ್, ಎಲ್ ಬಿ

ಬೌರಿಂಗ್, ಎಲ್ ಬಿ 1824-90. ಮೈಸೂರು ಮತ್ತು ಕೊಡಗಿನ ಚೀಫ್ ಕಮಿಷನರ್ (1862-70); ರಾಜಕೀಯ ಮುತ್ಸದ್ದಿ ಮತ್ತು ದಕ್ಷ ಆಡಳಿತಗಾರ.

 	 ಸರ್ ಜಾರ್ಜ್ ಬೌರಿಂಗ್‍ನ ಮೂರನೆಯ ಮಗ. 1824ರ ಜುಲೈ 15ರಂದು ಜನಿಸಿದ. ಎಕ್ಸೆಟರ್, ಲೆಪ್ಸಿಗ್ ಮತ್ತು ಹೈಲ್‍ಬರಿ ನಗರಗಳಲ್ಲಿ ಶಿಕ್ಷಣ ಪಡೆದ ಅನಂತರ ಸಿವಿಲ್ ಸರ್ವಿಸ್ ಅಧಿಕಾರಿಯಾಗಿ ಭಾರತಕ್ಕೆ ಆಗಮಿಸಿದ (1843). ಮೊದಲು ಪಂಜಾಬಿನ ಡೆಪ್ಯುಟಿ ಕಮಿಷನರ್ (1849-54), ಅನಂತರ ವೈಸ್‍ರಾಯ್ ಲಾರ್ಡ್ ಕ್ಯಾನಿಂಗ್‍ನ ಆಪ್ತ ಕಾರ್ಯದರ್ಶಿ (1858-62).

ಸುಸಂಸ್ಕøತ, ವಿದ್ಯಾವಂತ. ನಿಷ್ಟಕ್ಷಪಾತಿ ಹಾಗೂ ದಕ್ಷ ಆಡಳಿತಗಾರನಾಗಿ ಈತ ಒಳ್ಳೆಯ ಹೆಸರು ಪಡೆದ. 1870ರಲ್ಲಿ ಚೀಫ್ ಕಮಿಷನರ್ ಹುದ್ದೆಗೆ ರಾಜೀನಾಮೆ ಕೊಟ್ಟು ಇಂಗ್ಲೆಂಡಿಗೆ ತೆರಳಿದ. ಜನಪ್ರಿಯನಾಗಿದ್ದ ಈತನ ಹೆಸರಿನಲ್ಲಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಮತ್ತು ಬೌರಿಂಗ್ ಇನ್‍ಸ್ಟಿಟ್ಯೂಟ್ ಸ್ಥಾಪಿತವಾದುವು. 1864ರಲ್ಲಿ ಸ್ಥಾಪಿತವಾದ ಈಗಿನ ಬಂಗಾರಪೇಟೆಗೆ ಹಿಂದೆ ಬೌರಿಂಗ್ ಪೇಟೆ ಎಂದು ಹೆಸರಿಡಲಾಗಿತ್ತು. ಬ್ರಿಟಿಷ್ ಸರ್ಕಾರ ಈತನಿಗೆ ಸಿ.ಎಸ್.ಐ. ಪ್ರಶಸ್ತಿ ನೀಡಿ ಗೌರವಿಸಿತು (1867). ಈಸ್ಟರ್ನ್ ಎಕ್ಸ್‍ಪೀರಿಯನ್ನಸ್, ಹೈದರ್ ಆಲಿ ಆ್ಯಂಡ್ ಟೀಪ್ಪುಸುಲ್ತಾನ್ ಈತನ ಗ್ರಂಥಗಳು. ಬಂಗಾಳದ ರಾಯಲ್ ಏಷ್ಯಾಟಿಕ್ ಸೊಸೈಟಿಯ ಪತ್ರಿಕೆಗೆ ಲೇಖನಗಳನ್ನೂ ಬರೆದಿದ್ದಾನೆ. ಈತನ ಆದೇಶದಂತೆ ಕರ್ನಲ್ ಡಿಕ್ಸನ್ 1865ರಲ್ಲಿ ಅನೇಕ ಶಾಸನಗಳ ಫೋಟೋ ಹಿಡಿದ. ಅವು ಲೂಯಿ ರೈಸರಿಂದ ಭಾಷಾಂತರವಾಗಿ ತರುವಾಯ ಮೈಸೂರ್ ಇನ್‍ಸ್ಕ್ರಿಪ್‍ಷನ್ಸ್ ಎಂಬ ಹೆಸರಿನಲ್ಲಿ ಪ್ರಕಟವಾದವು (1879).

ಈತ ಚೀಫ್ ಕಮಿಷನರ್ ಆಗಿದ್ದಾಗ ಹೈದರ್ ಮತ್ತು ಟಿಪ್ಪು ಕಾಲದಿಂದ ನಡೆದುಬಂದಿದ್ದ ಆಡಳಿತ ವಿಧಾನಗಳಿಗೆ ಬದಲಾಗಿ ಬ್ರಿಟಿಷ್ ಪ್ರಾಂತ್ಯಗಳಲ್ಲಿದ್ದ ಆಡಳಿತ ರೀತಿನೀತಿಗಳನ್ನು ಮೈಸೂರು ಸಂಸ್ಥಾನದಲ್ಲಿ ರೂಢಿಗೆ ತರಲು ಪ್ರಯತ್ನಿಸಿದ. 1862ರಲ್ಲಿ ಸಂಸ್ಥಾನವನ್ನು ಜಿಲ್ಲೆಗಳಾಗಿ ಮಾಡಿ ಅವನ್ನು ಮೂರು ವಿಭಾಗಗಳಾಗಿ ವಿಂಗಡಿಸಿದ. ಪ್ರತಿ ಜಿಲ್ಲೆಗೆ ಒಬ್ಬ ಸೂಪರಿಂಟೆಂಡೆಂಟ್ ಮತ್ತು ಅಸಿಸ್ಟೆಂಟ್ ಸೂಪರಿಂಟೆಂಡೆಂಟರು ನಿಯಮಿತರಾದರು. ರಾಜ್ಯದ ಹಣಕಾಸು ವ್ಯವಹಾರದಲ್ಲಿ ಮಾರ್ಪಾಡುಗಳಾದುವು. ಅಧಿಕಾರಿಗಳು ಇಚ್ಚಾವರ್ತಿಯಾಗಿ ಹಣಕಾಸಿನ ವಿನಿಯೋಗ ಮಾಡುತ್ತಿದ್ದ ಪದ್ಧತಿ ರದ್ದು ಮಾಡಿ ಬಡ್ಜೆಟ್ ವಿಧಾನ ಮತ್ತು ಲೆಕ್ಕ ತನಿಖಾ ವಿಧಾನ ಜಾರಿಗೆ ತಂದ. ಹೆಚ್ಚುವರಿ ಆದಾಯವನ್ನು ಸಂಗ್ರಹಿಸಿಡದೆ ಅದನ್ನು ಪುನಃ ಜನೋಪಯೋಗಿ ಕೆಲಸಗಳಿಗೆ ವಿನಿಯೋಗಿಸುವ ವ್ಯವಸ್ಥೆಮಾಡಿದ. ಭೂಕಂದಾಯವನ್ನು ಹಿಂದಿನ 30 ವರ್ಷಗಳ ಉತ್ಪನ್ನ ಆಯವ್ಯಯಗಳ ಸರಾಸರಿಯನ್ನು ಅನುಸರಿಸಿ ನಿಷ್ಕರ್ಷಿಸಲಾಯಿತು. ಇನಾಮ್ ಕಮಿಷನ್ ಸ್ಥಾಪನೆಯಾಗಿ ಸಂಸ್ಥಾನದ ಎಲ್ಲ ವ್ಯಕ್ತಿ ಮತ್ತು ಧಾರ್ಮಿಕ ಸಂಸ್ಥೆಗಳ ಇನಾಮ್‍ಗಳ ಸಿಂಧುತ್ವ ನಿಷ್ಕರ್ಪಿಸಲಾಯಿತು. ನೂರಾರು ಹೊಸ ಸೇತುವೆಗಳು, ಸಾರ್ವಜನಿಕ ಕಛೇರಿ ಕಟ್ಟಡಗಳು ಈತನ ಕಾಲದಲ್ಲಿ ನಿರ್ಮಾಣಗೊಂಡವು. ಸೆರೆಮನೆಗಳ ಆಡಳಿತವನ್ನು ವ್ಯವಸ್ಥಿತ ಗೊಳಿಸಲಾಯಿತಲ್ಲದೆ ನಗರ ನೈರ್ಮಲ್ಯದೆಡೆಗೆ ಗಮನ ನೀಡಲು ಅನೇಕ ನಗರ ಸಭೆಗಳು ಸ್ಥಾಪಿತವಾದುವು. ಮೈಸೂರು ಸಂಸ್ಥಾನದಲ್ಲಿ ಐರೋಪ್ಯ ಆಡಳಿತ ಪದ್ಧತಿ, ವಿದ್ಯಾಭ್ಯಾಸ, ಜೀವನ ರೀತಿನೀತಿಗಳು ನೆಲೆಗೊಳ್ಳುವುದರಲ್ಲಿ ಈತನ ಕಾರ್ಯಕ್ರಮಗಳು ಬಹುಮುಖ್ಯ ಪಾತ್ರ ವಹಿಸಿದುವು.