ಬ್ಯಾಡಗಿ ಕರ್ನಾಟಕ ರಾಜ್ಯದ ಧಾರವಾಡ ಜಿಲ್ಲೆಯ ಒಂದು ತಾಲ್ಲೂಕು, ಮತ್ತು ಹೋಬಳಿ. ತಾಲ್ಲೂಕಿನ ಮತ್ತು ಹೋಬಳಿಯ ಆಡಳಿತಕೇಂದ್ರ ಪಟ್ಟಣ. ಹಾವೇರಿಯ ಉಪವಿಭಾಗಕ್ಕೆ ಸೇರಿರುವ ಈ ತಾಲ್ಲೂಕು ಜಿಲ್ಲೆಯ ದಕ್ಷಿಣ ಭಾಗದಲ್ಲಿದೆ. ಈ ತಾಲ್ಲೂಕನ್ನು ಉತ್ತರದಲ್ಲಿ ಹಾವೇರಿ, ಪೂರ್ವದಲ್ಲಿ ರಾಣೆಬೆನ್ನೂರು, ದಕ್ಷಿಣದಲ್ಲಿ ಹಿರೇಕೆರೂರು ಮತ್ತು ಪಶ್ಚಿಮದಲ್ಲಿ ಹಾನಗಲ್ ತಾಲ್ಲೂಕುಗಳು ಸುತ್ತುವರಿದಿವೆ. ಬ್ಯಾಡಗಿ ಮತ್ತು ಕಾಗಿನೆಲೆ ತಾಲ್ಲೂಕಿನ ಎರಡು ಹೋಬಳಿಗಳು. 63 ಗ್ರಾಮಗಳಿವೆ. ತಾಲ್ಲೂಕಿನ ವಿಸ್ತೀರ್ಣ 436 ಚ.ಕಿ.ಮೀ. ಜನಸಂಖ್ಯೆ 1,27,879 (2001).
ಬ್ಯಾಡಗಿ ತಾಲ್ಲೂಕು ಬಹುತೇಕ ಚಪ್ಪಟೆಯಾಗಿದೆ. ಕೆಲವು ಗುಡ್ಡಗಳು ಅಲ್ಲಲ್ಲಿವೆ. ತಾಲ್ಲೂಕಿನ ಎರೆಮಣ್ಣಿನ ಭಾಗ ವಿನಾ ಉಳಿದದ್ದು ಬೇಸಾಯಕ್ಕೆ ಅಷ್ಟು ಸಹಾಯಕವಾಗಿಲ್ಲ. ವ್ಯವಸಾಯಕ್ಕೆ ಮಳೆಯೇ ಆಧಾರ. ಇಲ್ಲಿ ವರ್ಷಕ್ಕೆ ಸರಾಸರಿ 654 ಮಿಮೀ ಮಳೆಯಾಗುತ್ತದೆ. ದೊಡ್ಡ ನದಿಗಳು ಯಾವುವೂ ಇಲ್ಲ, ಕಾಗಿನೆಲೆಯ ಕೆರೆ, ಚಿಕ್ಕ ಬಾಸೂರು ಕೆರೆ, ತುಂಮೂರ ಕೆರೆ ಮತ್ತು ಬಾವಿಗಳು ಸ್ವಲ್ಪಮಟ್ಟಿಗೆ ನೀರಾವರಿ ಸೌಲಭ್ಯ ಒದಗಿಸುತ್ತವೆ. ಮೆಣಸಿನಕಾಯಿ, ಹತ್ತಿ, ರಾಗಿ, ಬಿಳಿಜೋಳ, ಸೇಂಗಾ, ಸಾಮೆ, ಬತ್ತ ಇಲ್ಲಿನ ಬೆಳೆಗಳು.
ತಾಲ್ಲೂಕಿನ ಮುಖ್ಯ ಸ್ಥಳಗಳು ಕದರಮಂಡಲಗಿ, ಕಾಗಿನೆಲೆ ಮತ್ತು ಮೋಟೆ ಚೆನ್ನೂರು. ಕದರಮಂಡಲಗಿ ರಾಣೆಬೆನ್ನೂರಿಗೆ 14 ಕಿಮೀ ಪಶ್ಚಿಮದಲ್ಲಿದೆ. ಇಲ್ಲಿಯ ಮಾರುತಿ ದೇವಾಲಯವನ್ನು ಜನಕ ದೊರೆ ಕಟ್ಟಿಸಿದನೆನ್ನಲಾಗಿದೆ. ಕಾಗಿನೆಲೆಯಲ್ಲಿ ಆದಿಕೇಶವನ ದೇವಾಲಯವಿದೆ. ಇಲ್ಲಿಯ ಇತರ ಎರಡು ಮುಖ್ಯ ದೇವಾಲಯಗಳು ಕಾಲಹಸ್ತೀಶ್ವರ ಮತ್ತು ಲಕ್ಷ್ಮೀನರಸಿಂಹ. ಆದಿಕೇಶನ ಮೂರ್ತಿಯನ್ನು ಕನಕದಾಸರು ಪ್ರತಿಷ್ಠಿಸಿದರೆನ್ನಲಾಗಿದೆ. ಇಲ್ಲಿಯ ದೇವಸ್ಥಾನಗಳಲ್ಲಿ ಹಲವಾರು ಶಾಸನಗಳಿವೆ. ಇವುಗಳಲ್ಲಿ ಬಹುಪಾಲು ಅನಂತರದ ಚಾಳುಕ್ಯರ ಕಾಲದವು. ಬ್ಯಾಡಗಿ ರೈಲುನಿಲ್ದಾಣಕ್ಕೆ 2.5 ಕಿಮೀ ದೂರದಲ್ಲಿರುವ ಮೋಟೆ ಬೆನ್ನೂರಿನಲ್ಲಿ ಮಲ್ಲಿಕಾರ್ಜುನ ದೇವಾಲಯವಿದೆ. ಇಲ್ಲಿ ಜೈನಮುನಿಗಳಿದ್ದರೆಂದು ಹೇಳಲಾಗಿದೆ. 1051ರ ಒಂದು ಶಾಸನ ಇಲ್ಲಿದೆ.
ತಾಲ್ಲೂಕಿನ ಆಡಳಿತ ಕೇಂದ್ರ ಪಟ್ಟಣ ಬ್ಯಾಡಗಿ ಹುಬ್ಬಳ್ಳಿಯ ಆಗ್ನೇಯಕ್ಕೆ 88 ಕಿಮೀ ದೂರದಲ್ಲಿದೆ. ಬೆಂಗಳೂರು-ಧಾರವಾಡ ರೈಲುಮಾರ್ಗ ಪುಣೆ-ಬೆಂಗಳೂರು ಹೆದ್ದಾರಿ ಈ ಪಟ್ಟಣದ ಮೂಲಕ ಹಾದುಹೋಗಿವೆ. ಬ್ಯಾಡಗಿ ಒಂದು ರೈಲ್ವೆನಿಲ್ದಾಣ. ಈ ಪಟ್ಟಣದ ಜನಸಂಖ್ಯೆ 25,658 (2001). ಇಲ್ಲಿ ವೀರಭದ್ರಸ್ವಾಮಿ ಮತ್ತು ಸಿದ್ಧೇಶ್ವರ ದೇವಾಲಯಗಳಿವೆ. ವಿದ್ಯುತ್, ಅಂಚೆತಂತಿ ಕಚೇರಿ, ಆಸ್ಪತ್ರೆ, ಜೂನಿಯರ್ ಕಾಲೇಜು, ಶಾಲೆಗಳು ಇವೆ. ಕೊಳವೆ ಭಾವಿಗಳಿಂದ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ. ಇಲ್ಲಿ 1879ರಲ್ಲಿ ಸ್ಥಾಪಿತವಾದ ಪುರಸಭೆಯಿದೆ. (ವಿ.ಎಸ್.ಬಿ.ಎ.ಎನ್.)