ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭಾರತದ ಜನಪದ ನೃತ್ಯಗಳು

ಭಾರತದ ಜನಪದ ನೃತ್ಯಗಳು

ಭಾರತ ಅನೇಕ ಬಗೆಯ ಶ್ರೀಮಂತ ಜನಪದ ನೃತ್ಯಗಳ ಆಕರ. ಈ ದೇಶದ ಪ್ರತಿಯೊಂದು ಪ್ರದೇಶದಲ್ಲಿಯೂ ವಿಶಿಷ್ಟವಾದ ಸಾಂಪ್ರದಾಯಿಕ ಕಲೆ ಹಾಗೂ ಸಂಸ್ಕøತಿ ನಳನಳಿಸುತ್ತಿರುವುದೇ ಈ ವ್ಯಾಪಕ ವೈವಿಧ್ಯದ ಮುಖ್ಯ ಕಾರಣ. ಜನಪದ ನೃತ್ಯಗಳು ಜನತೆಯ ಜೀವನದ ಸುಖದುಃಖಗಳನ್ನು ಸರಳ ಮತ್ತು ನೇರ ರೀತಿಯಲ್ಲಿ ಅಭಿವ್ಯಕ್ತಿಸುತ್ತವೆ. ಶಿಷ್ಟ ನೃತ್ಯಗಳಲ್ಲಿ ಪ್ರಕಟವಾಗುವ ಕಲಾತ್ಮಕತೆಯ ಗೀಳು ಇವುಗಳಲ್ಲಿ ಕಂಡುಬರುವುದಿಲ್ಲ. ಇಲ್ಲಿ ಕಲಾತ್ಮಕಗೆ ಸಹಜವಾಗಿಯೇ ಮೈದಳೆದಿರುವ ಗುಣ. ನರ್ತಕ-ಪ್ರೇಕ್ಷಕರೆಂಬ ಭೇದಭಾವವಿಲ್ಲದಿರುವುದು, ಸಾಮೂಹಿಕ ತೊಡಗುವಿಕೆ ಜನಪದ ನೃತ್ಯಗಳ ವೈಶಿಷ್ಟಗಳೆನ್ನಬಹುದು. ಜನಪದ ನೃತ್ಯಗಳಲ್ಲಿ ಕೆಲವನ್ನು ಗಂಡಸರು ಅಭಿನಯಿಸಿದರೆ, ಇನ್ನು ಕೆಲವನ್ನು ಹೆಂಗಸರು ಅಭಿನಯಿಸುತ್ತಾರೆ; ಮತ್ತೆ ಕೆಲವನ್ನು ಇಬ್ಬರೂ ಕೂಡಿ ಅಭಿನಯಿಸುತ್ತಾರೆ. ಹಲವಾರು ನೃತ್ಯಗಳಲ್ಲಿ ನೃತ್ಯಗಾರರೇ ಗೀತೆಗಳನ್ನು ನೃತ್ಯಕ್ಕೆ ಹಿನ್ನೆಲೆಯಾಗಿ ಹಾಡುತ್ತಾರೆ. ಕೆಲವು ಬಾರಿ ನೃತ್ಯಗಳು ಅನೇಕ ಸಂಗೀತವಾದ್ಯಗಳ ಮುನ್ನೆಲೆಯಲ್ಲಿ ಅಭಿನಯಿಸಲ್ಪಡುತ್ತವೆ. ಆದರೆ, ಮದ್ದಲೆ ಅಥವಾ ಡೋಲು ಮಾತ್ರ ಎಲ್ಲ ನೃತ್ಯಗಳಲ್ಲೂ ಅನಿವಾರ್ಯ. ವೃತ್ತಾಕಾರವಾಗಿ ನಿಂತು ಚಪ್ಪಾಳೆ ತಟ್ಟುತ್ತ ನೃತ್ಯಮಾಡುವುದು, ಚಪ್ಪಾಳೆ ತಟ್ಟುವುದಕ್ಕೆ ಬದಲಾಗಿ ಚಿಕ್ಕ ಚಿಕ್ಕ ಕೋಲುಗಳಿಂದ ಕೋಲು ಹುಯ್ಯುತ್ತ ನರ್ತಿಸುವುದು-ಇಂಥವು ಸಾಮಾನ್ಯ ನೃತ್ಯಗಳೆನ್ನಬಹುದು. ನೃತ್ಯಕ್ಕೆ ಹೊಂದುವ ವೇಷ ಭೂಷಣ, ಆಭರಣಗಳು ಒಂದೊಂದು ಪ್ರದೇಶಕ್ಕೂ ಒಂದೊಂದು ಬಗೆಯದಾಗಿರುವುದು ಕಂಡುಬರುತ್ತದೆ. ಜನಪದ ನೃತ್ಯಗಳನ್ನೂ ಸ್ಥೂಲವಾಗಿ ಧಾರ್ಮಿಕ ನೃತ್ಯಗಳು, ಸಾಮಾಜಿಕ ಅಥಾವಾ ಲೌಕಿಕ ನೃತ್ಯಗಳು ಎಂದು ವರ್ಗೀಕರಿಸಬಹುದು. ಆರಾಧನೆಯೇ ಮೂಲವಾದ, ಆಚರಣೆಯಲ್ಲಿ ವಿಶಿಷ್ಟ ಸಂಪ್ರದಾಯ ಅನುಸರಿಸುವಂಥ ನೃತ್ಯಗಳನ್ನು ಧಾರ್ಮಿಕ ನೃತ್ಯಗಳೆನ್ನಬಹುದು. ಮನರಂಜನೆಯೇ ಮೂಲೋದ್ದೇಶವಾಗಿರುವ ನೃತ್ಯಗಳೇ ಲೌಕಿಕ ನೃತ್ಯಗಳು. ಇವುಗಳ ಆಚರಣೆಯಲ್ಲಿ ಯಾವುದೇ ಕಟ್ಟುಪಾಡಿಲ್ಲ; ಕಠಿಣ ಸಂಪ್ರದಾಯವಿಲ್ಲ. ಮನಸ್ಸಿನ ಬೇಗುದಿ ಬೇಸರ ನೀಗಿ ಉಲ್ಲಾಸವನ್ನೂ ಜೀವನೋತ್ಸಾಹವನ್ನೂ ತಂದುಕೊಡುವುದು ಈ ನೃತ್ಯಗಳ ಮುಖ್ಯ ಗುರಿ.

ಆದಿವಾಸಿ ಜನರ ನೃತ್ಯಗಳು ಜನಪದ ನೃತ್ಯಗಳಿಗೆ ತೀರ ಹತ್ತಿರದ ಸಂಬಂಧ ಹೊಂದಿರುತ್ತವೆ. ನೃತ್ಯಗಳನ್ನು ಅಭ್ಯಸಿಸುವ ದೃಷ್ಟಿಯಿಂದ ಆದಿವಾಸಿ ನೃತ್ಯಗಳನ್ನು ಜನಪದ ನೃತ್ಯಗಳ ಗುಂಪಿನಲ್ಲೇ ಸೇರಿಸಬಹುದು. ಭಾರತ ಬಗೆಬಗೆಯ ಆದಿವಾಸಿಗಳ ತೌರೂರು. ಪ್ರತಿಯೊಂದು ಬುಡಕಟ್ಟೂ ತನ್ನದೇ ಆದ ಸಾಂಪ್ರದಾಯಿಕ ನೃತ್ಯಗಳನ್ನು ಹೊಂದಿದೆ. ಕೆಲವು ಬಾರಿ ಈ ನೃತ್ಯಗಳು ತುಂಬ ಸರಳವಾಗಿದ್ದು ಲಯಬದ್ಧವಾದ ಪದಗತಿಯ ನಡೆಯಲ್ಲೇ ವಿಶಿಷ್ಟವಾಗಿರುತ್ತವೆ. ಆದರೆ ಇನ್ನು ಕೆಲವು ಸಂದರ್ಭಗಳಲ್ಲಿ ನೃತ್ಯಗಾರರ ಚಲನೆ ಮತ್ತು ಪದಗತಿ ತುಂಬ ಸಂಕೀರ್ಣವಾಗಿರುವುದುಂಟು. ಬಹುಪಾಲು ಆದಿವಾಸಿಗಳ ನೃತ್ಯಗಳಲ್ಲಿ ವಾದ್ಯ ಮತ್ತು ಗೀತೆ ಅನಿವಾರ್ಯ ಅಂಗಗಳಾಗಿರುತ್ತವೆ. ಸಾಮಾನ್ಯವಾಗಿ ಪ್ರತಿಯೊಂದು ಜನಾಂಗವೂ ತನಗೇ ವಿಶಿಷ್ಟವಾದ ಅನೇಕ ಬಗೆಯ ಸಂಗೀತ ವಾದ್ಯಗಳನ್ನು ಹೊಂದಿರುತ್ತದೆ. ರಂಗುರಂಗಿನ ವಸ್ತ್ರ, ವೈವಿಧ್ಯಮಯ ಆಭರಣಗಳು ಆದಿವಾಸಿ ನೃತ್ಯಗಳ ಪ್ರಧಾನ ಆಕರ್ಷಣೆ.

ಭಾರತದ ಜನಪದ ನೃತ್ಯಗಳನ್ನು ಅನೇಕ ಬಗೆಯ ವಿಭಾಗಕ್ರಮ ಅನುಸರಿಸಿ ಅಧ್ಯಯನ ಮಾಡುವುದು ಕಂಡುಬರುತ್ತದೆ. ಉತ್ತರಭಾರತ, ಪಶ್ಚಿಮ ಭಾರತ. ಮಧ್ಯಭಾರತ, ಪೂರ್ವಭಾರತ ಮತ್ತು ದಕ್ಷಿಣಭಾರತ-ಈ ಕ್ರಮದಲ್ಲಿ ಜನಪದ ನೃತ್ಯಗಳನ್ನು ಅಭ್ಯಾಸಮಾಡುವುದು ರೂಢಿಯಲ್ಲಿದೆ. ಪ್ರಸ್ತುತ ಲೇಖನದಲ್ಲಿ ಅನುಕೂಲತೆಯ ದೃಷ್ಟಿಯಿಂದ ರಾಜ್ಯವಾರು ಕ್ರಮದಲ್ಲಿ ಜನಪದ ನೃತ್ಯಗಳನ್ನು ಸ್ಥೂಲವಾಗಿ ಸಮೀಕ್ಷಿಸಲಾಗಿದೆ.

ಕಾಶ್ಮೀರದಲ್ಲಿ ರಉಫ್ ಮತ್ತು ಬಚ್ಚನಗಮ ಎಂಬ ಎರಡು ಪ್ರಮುಖ ನೃತ್ಯಗಳಿವೆ. ಹಬ್ಬದ ಸಂದರ್ಭಗಳಲ್ಲಿ ಹೆಂಗಸರು ನರ್ತಿಸುವ ಸರಳ ನೃತ್ಯವೇ ರಉಫ್. ನರ್ತಿಸುವವರು ಎರಡು ಸಾಲುಗಳಲ್ಲಿ ಎದುರುಬದುರಾಗಿ ನಿಂತು, ತೋಳುಗಳಿಂದ ಒಬ್ಬರು ಇನ್ನೊಬ್ವರ ಕೊರಳು ಬಳಸಿ ಹಾಡುತ್ತ, ಹೆಜ್ಜೆಗಳನ್ನು ಹಿಂದಕ್ಕೂ ಮುಂದಕ್ಕೂ ಇಡುತ್ತ ನರ್ತಿಸುವರು. ಕಲೆಯಲ್ಲಿ ಪಳಗಿದ ಚಿಕ್ಕ ಹುಡುಗರು ಮನರಂಜನೆಗಾಗಿ ಬಚ್ಚನಗಮ ಎಂಗ ನೃತ್ಯವನ್ನು ಮಾಡುತ್ತಾರೆ. ನರ್ತಿಸುವವರು ಕಾಶ್ಮೀರಿ ಹೆಂಗಸರಂತೆ ಉಡುಪುತೊಟ್ಟು ಉದ್ದವಾದ ಕೂದಲ ಚವರಿ ಧರಿಸುತ್ತಾರೆ. ತಾವು ಹಾಡುವ ಹಾಡಿನ ಮೂಲಕವೇ ನೃತ್ಯಕಾರರು ಭಾವವನ್ನು ವ್ಯಕ್ತಪಡಿಸುತ್ತಾರೆ. ಸಾಮಾನ್ಯವಾಗಿ ಈ ಹಾಡುಗಳ ವಸ್ತು ಪ್ರೇಮವನ್ನು ಕುರಿತದ್ದಾಗಿರುತ್ತದೆ. ಈ ನೃತ್ಯದ ವೈಶಿಷ್ಟವೆಂದರೆ ಶರೀರದ ವೇಗವಾದ ಚಲನೆ ಮತ್ತು ಪದವಿನ್ಯಾಸ. ಈ ಲಕ್ಷಣಗಳನ್ನು ಕಥಕ್ ನೃತ್ಯದಿಂದ ಎರವಲು ಪಡೆಯಲಾಗಿದೆಯೆಂದು ನಂಬಿಕೆಯಿದೆ.

ಹಿಮಾಚಲ ಪ್ರದೇಶದಲ್ಲಿ ರಾಸನೃತ್ಯ, ಛತ್ರೌರನೃತ್ಯ, ಗಡ್ಡಿನೃತ್ಯ, ಚಂಬಾನೃತ್ಯ, ಚಿನಿನೃತ್ಯ, ಕೋರ್ಕುಸ್‍ನೃತ್ಯ, ಪಂಗಿನೃತ್ಯ ಮುಂತಾದವು ಪ್ರಚಲಿತವಾಗಿವೆ. ಇವುಗಳಲ್ಲಿ ಹೆಂಗಸರು ಭಾಗವಹಿಸುವ ಪಂಗಿನೃತ್ಯ ಅಲ್ಲಿಯ ಜನಪ್ರಿಯ ನೃತ್ಯ. ನರ್ತಿಸುವವರು ವೃತ್ತಾಕಾರವಾಗಿ ನಿಂತು, ಶರೀರವನ್ನು ನೆಟ್ಟಗೆ ನಿಲ್ಲಿಸಿ, ಮುಖವನ್ನು ಗಂಭೀರವಾಗಿ ಆ ಕಡೆ ಈ ಕಡೆ ತಿರುಗಿಸಿ, ಕೈಗಳನ್ನು ತಲೆಯ ಮೇಲೆ ಎತ್ತಿ ಮೃದುವಾಗಿ ಚಲನೆಯನ್ನು ಮುಂದುವರಿಸುತ್ತ ನರ್ತಿಸುತ್ತಾರೆ. ಹೆಂಗಸರು ಮತ್ತು ಗಂಡಸರು ಕೂಡಿಯೇ ನರ್ತಿಸುವ ನೃತ್ಯ ಸಾಂಗಲ. ಸಾಮಾನ್ಯವಾಗಿ ಈ ನೃತ್ಯವನ್ನು ಸ್ಥಳೀಯ ದೇವರುಗಳ ಗೌರವಾರ್ಥವಾಗಿಯೋ ಇಲ್ಲವೆ ಐತಿಹ್ಯವೀರರ ಗೌರವಾರ್ಥವಾಗಿಯೋ ನಡೆಸುವುದುಂಟು. ಹೆಂಗಸರು ಮತ್ತು ಗಂಡಸರು ಎದುರುಬದುರು ಸಾಲಾಗಿ ನಿಂತು ನೃತ್ಯಮಾಡುತ್ತ, ನೃತ್ಯ ಮುಂದುವರಿದಂತೆಲ್ಲ ಎಲ್ಲರೂ ಒಟ್ಟಿಗೇ ಬೆರೆಯುತ್ತ ಹೋಗುತ್ತಾರೆ. ನರ್ತಿಸುವವರು ಸವಾಲು ಜವಾಬುಗಳನ್ನುಳ್ಳ ಹಾಡುಗಳನ್ನು ಕೂಡ ಹಾಡುತ್ತಾರೆ. ಹೆಂಗಸರು ಮತ್ತು ಗಂಡಸರು ಕೂಡಿ ಅಭಿನಯಿಸುವ ಇನ್ನೊಂದು ಬಗೆಯ ನೃತ್ಯ ಪೇಖ. ನೃತ್ಯದಲ್ಲಿ ನೃತ್ಯಕಾರರು ವೃತ್ತಾಕಾರವಾಗಿ ನಿಂತು, ಒಬ್ಬರ ತೋಳನ್ನು ಇನ್ನೊಬ್ವರ ತೋಳಿನೊಡನೆ ಸೇರಿಸಿ ಹಾಡುಹಾಡುತ್ತ, ನೃತ್ಯಕ್ಕೆ ತಕ್ಕಂತೆ ಹಾರುತ್ತ ಕುಪ್ಪಳಿಸುತ್ತ ಲಯಬದ್ಧವಾಗಿ ಕುಣಿಯುತ್ತಾರೆ.

ಛತ್ರಾರಿ ನೃತ್ಯ ಮೋಹಕವಾದುದು. ಇದರಲ್ಲಿ ದಂಗಿ, ದೀಪಕ್, ಜಂಜಾರ್ ಎಂಬ ಮೂರು ಬಗೆಗಳಿವೆ. ದಂಗಿ ನೃತ್ಯವನ್ನು ಸ್ತ್ರೀಯರು ಯಾತ್ರೆ ಹಾಗೂ ವಿವಾಹ ಸಂದರ್ಭಗಳಲ್ಲಿ ನಡೆಸುತ್ತಾರೆ. ನರ್ತನದ ಜೊತೆಗೆ ಗಾಯನವೂ ಸೇರಿರುತ್ತದೆ. ದೀಪಕ್ ನೃತ್ಯದಲ್ಲಿ ಹಿಮ್ಮೇಳ ಕೂಡ ಇರುತ್ತದೆ. ಈ ನೃತ್ಯದ ಹಿನ್ನೆಲೆಯ ಹಾಡಿಗೆ ಛಿನ್‍ಜೋತಿ ಎಂಬ ಹೆಸರಿದೆ. ಜೀವನ ನಿರ್ವಹಣೆಗಾಗಿ ಕಾಂಗ್ರಾ ಬೆಟ್ಟಗಳೆಡೆ ಸಾಗಿದ ಪತಿಯ ಹಾದಿ ಕಾಯುತ್ತಿರುವ ವಿರಹಿಣಿಯ ಕಥೆ ಈ ಹಾಡಿನ ವಸ್ತು. ಜಂಜಾರ್ ಒಂದು ಬಗೆಯ ವೀರನೃತ್ಯ. ಮಳೆಗಾಲದ ಅನಂತರ ಹಬ್ಬಗಳ ಕಾಲದಲ್ಲಿ ಧರಂಗಸರನ್ ಎಂಬ ಗೀತೆಯ ಮುನ್ನೆಲೆಯಲ್ಲಿ ಸ್ತ್ರೀಪುರುಷರಿಬ್ಬರೂ ನರ್ತಿಸುತ್ತಾರೆ.

ಪಂಜಾಮಿನಲ್ಲಿ ಭಾಂಗ್ರಾ, ಜ್ಹುಮರ್, ಕಾರ್ತಿ, ಗಿಡ್ಡಾ, ಧಮ್ಯಾಲ್ ನೃತ್ಯಗಳು ಪ್ರಸಿದ್ಧವಾಗಿವೆ. ಗಂಡಸರು ಮಾಡುವ ಭಾಂಗ್ರಾ ನೃತ್ಯ ಪಂಜಾಬಿನ ಅತ್ಯಂತ ಜನಪ್ರಿಯ ನೃತ್ಯವೆಂದು ಹೆಸರು ಪಡೆದಿದೆ. ಇದೊಂದು ಸಾಮಾಜಿಕ ನೃತ್ಯ. ಇದರಲ್ಲಿ ಮದ್ದಳೆಯವ ಬಯಲಿನಲ್ಲಿ ನಿಲ್ಲುತ್ತಾನೆ. ನೃತ್ಯಗಾರರು ಅವನ ಸುತ್ತಲೂ ಒಂದು ದೊಡ್ಡ ವೃತ್ತ ರಚಿಸುತ್ತಾರೆ. ನರ್ತಕರು ಮನಸೆಳೆವ ಬಣ್ಣದ ಪೇಟ. ಅದಕ್ಕೆ ಹೊಂದಿಕೆಯಾಗುವ ಬಣ್ಣದ ಲುಂಗಿ ಅಥವಾ ಕಚ್ಚಾ, ಉದ್ದನೆಯ ಬಿಳಿಯ ಕುರ್ತಾ, ಕಾಲಿಗೆ ಗೆಜ್ಜೆ ಧರಿಸಿರುತ್ತಾರೆ. ಪ್ರಾರಂಭದಲ್ಲಿ ನೃತ್ಯ ನಿಧಾನ ಗತಿಯಿಂದ ಸಾಗಿ ಮುಕ್ತಾಯದ ವೇಳೆಗೆ ವೇಗಯುತವಾಗುತ್ತದೆ. ದೇಹವನ್ನು ನಾನಾತೆರನಾಗಿ ಬಗ್ಗಿಸುವುದು, ಕುಗ್ಗಿಸುವುದು, ಬೆರಳುಗಳನ್ನು ತಟಕ್ಕನೆ ಮಡಿಸುವುದು ಈ ನೃತ್ಯದ ಪ್ರಮುಖ ಲಕ್ಷಣಗಳು. ನೃತ್ಯಮಾಡುವಾಗ ಯಾರಾದರೂ ಒಬ್ಬ ಅಭಿನಯಕಾರ ಒಂದು ಹಾಡಿನ ಯಾವುದಾದರೊಂದು ಸಾಲನ್ನು ಹಾಡುತ್ತಾನೆ. ಉಳಿದವರು ಅದನ್ನು ಊರ್ಜಿತಗೊಳಿಸಿ ನೃತ್ಯ ಮುಂದುವರಿಸುತ್ತಾರೆ. ಪಂಜಾಬಿ ಮಹಿಳೆಯರ ಅತ್ಯಂತ ಜನಪ್ರಿಯ ನೃತ್ಯ ಗಿಡ್ಡಾ. ಇದರಲ್ಲಿ ನೃತ್ಯಗಾರ್ತಿಯರು ವೃತ್ತಾಕಾರವಾಗಿ ನಿಂತು, ಹಾಡು ಹಾಡುತ್ತ ತಮ್ಮ ಇಲ್ಲವೆ ತಮಗೆ ತೀರ ಹತ್ತಿರವಿರುವವರ ಕೈತಟ್ಟುತ್ತ ನರ್ತಿಸುತ್ತಾರೆ.

ಉತ್ತರ ಪ್ರದೇಶದಲ್ಲಿ ಬರಡಿನಟಿ, ಜೋಹ್ರಾ, ಚೌಪಾಲ ಕೇದಾರ್, ಪಾಂಡವ ನೃತ್ಯ, ಚೆಪೇಲಿ, ಅಹಿರ್ ಮುಂತಾದ ನೃತ್ಯಗಳಿವೆ. ಉತ್ತರ ಪ್ರದೇಶದ ಒಂದು ಜನಪ್ರಿಯ ನೃತ್ಯ ಅಹಿರ್ ಇಲ್ಲವೆ ಹಾಲುಮನುಷ್ಯರು. ಕಿರುಗೆಜ್ಜೆಗಳನ್ನು ಕಟ್ಟಿರುವ ಚಡ್ಡಿಗಳನ್ನು ಧರಿಸಿದ ಗಂಡಸರು, ಲಯಬದ್ಧವಾಗಿ ತಾವು ಹಿಡಿದಿರುವ ಕೋಲುಗಳನ್ನು ಬಡಿಯುತ್ತಾರೆ. ಕೆಲವು ಸಾರಿ ಕುಳಿತು, ಕೆಲವು ಸಾರಿ ನಿಂತು ಕೆಲವು ಸಾರಿ ಕುಪ್ಪಳಿಸುತ್ತ ನೃತ್ಯಕಾರರು ನೃತ್ಯ ಮುಂದುವರಿಸುತ್ತಾರೆ. ಕುಮಾಂಓ ಮತ್ತು ಗಡವಾಲ ಪ್ರದೇಶಗಳ ನೃತ್ಯ ಚೌಪಾಲ ಕೇದಾರ. ಕುರಿಯ ಕೂದಲಿನ ಕುಂಚವನ್ನೋ ಇಲ್ಲವೇ ಕರವಸ್ತ್ರವನ್ನೊ ಹೆಣೆಯುತ್ತ ಹೆಂಗಸರು ಮತ್ತು ಗಂಡಸರು ಈ ನೃತ್ಯವನ್ನು ಅಭಿನಯಿಸುತ್ತಾರೆ. ಜೋಂಸಾರ್ ಪ್ರಾಂತ್ಯದ ಹೆಂಗಸರು ಧಾರ್ಮಿಕ ಹಾಗೂ ಸಾಂಸ್ಕøತಿಕ ಉತ್ಸವಗಳ ಸಂದರ್ಭಗಳಲ್ಲಿ ನರ್ತಿಸುವ ಬರಡಿ ನಟಿ ನೃತ್ಯ ಅತ್ಯಂತ ಜನಪ್ರಿಯವಾಗಿದೆ. ನೃತ್ಯಗಾರ್ತಿಯರು ಚಿಕ್ಕ ಚಿಕ್ಕ ಹೆಜ್ಜೆಗಳನ್ನು ಹಾಕುತ್ತ ತಮ್ಮ ತುದಿಬೆರಳಿನಲ್ಲಿ ತಟ್ಟೆಗಳನ್ನು ತಿರುಗಿಸುವರು. ಕೆಲವು ಸಲ ನೀರು ತುಂಬಿದ ಕೊಡಗಳನ್ನು ಕೂಡ ತಲೆಯಮೇಲೆ ಇಟ್ಟುಕೊಂಡು, ಒಂದುತೊಟ್ಟು ನೀರೂ ಚೆಲ್ಲದಂತೆ ಬಲು ಜಾಗರೂಕವಾಗಿ ಸೊಗಸಾಗಿ ನರ್ತಿಸುತ್ತಾರೆ. ಕೇದಾರನಾಥ ದೇವಾಲಯದ ಸುತ್ತಮುತ್ತ ವಾಸಿಸುವ ಟೆಹ್ರಿಗರ್ವಾಲ್‍ಗೆ ಸೇರಿದ ಆದವಾಸಿಗಳ ನೃತ್ಯ ಚೌಪಾಲ ಕೇದಾರ್. ಸಾಮಾನ್ಯವಾಗಿ ಈ ನೃತ್ಯವನ್ನು ಚಳಿಗಾಲ ಕಳೆದು ದೇವಾಲಯದ ಬಾಗಿಲು ತೆರೆಯುವ ಸಂದರ್ಭದಲ್ಲಿ ನಡೆಸುತ್ತಾರೆ. ಈ ನೃತ್ಯದಲ್ಲಿ ಗರ್ವಾಲಿ ಉಡುಪು ಧರಿಸಿದ ಪುರಷರು ಮಾತ್ರ ಭಾಗವಹಿಸುತ್ತಾರೆ. ನೃತ್ಯದ ಹಿನ್ನೆಲೆಗೆ ನಗಾರಿ, ಶಂಖ, ದುಂದುಭಿಗಳಿರುತ್ತವೆ.

ರಾಜಸ್ಥಾನ ಅನೇಕ ಬಗೆಯ ವರ್ಣರಂಜಿತ ನೃತ್ಯಗಳ ತೌರೂರು. ಇಲ್ಲಿ ಭಿಲ್ಲರ ಅನೇಕ ನೃತ್ಯಗಳು ಪ್ರಸಿದ್ಧವಾಗಿವೆ. ಜಾರಿಯಾ ಅಥವಾ ಮರದ ಕೋಲಿನ ನೃತ್ಯ ವಿವಾಹಕಾಲದಲ್ಲಿ ನಡೆಸುವಂಥಾದ್ದು. ಫಡಾರೋ ಮತ್ತು ಮೌಹುಲ್ಲೋ ನೃತ್ಯಗಳು ಭಿಲ್ಲ ಸ್ತ್ರೀಯರು ಮಾತ್ರ ಭಾಗವಹಿಸುವ ನೃತ್ಯಗಳಾಗಿವೆ. ಸುಂದರವಾಗಿ ಅಲಂಕೃತವಾದ ಮಡಕೆಯನ್ನು ನೆಲದಮೇಲಿರಿಸಿ, ಚಪ್ಪಾಳೆ ತಟ್ಟುತ್ತ ಅದರ ಸುತ್ತಲೂ ತಾಳಬದ್ಧವಾಗಿ ಬಳಕುತ್ತ ನರ್ತಿಸುವ ಗಾರ್ಬಾನೃತ್ಯ ಗುಜರಾತ್ ಹಾಗೂ ಮಧ್ಯಭಾರತದಲ್ಲಿಯೂ ಕೂಡ ಪ್ರಚಲಿತವಿದೆ. ಗಂಡಸರೇ ಭಾಗವಹಿಸುವ ವೀರನೃತ್ಯವೆಂದರೆ ತೀರ್‍ತಲ್ವಾರ್. ಪುರುಷರು ಕತ್ತಿ ಹಾಗೂ ಬಿಲ್ಲು ಬಾಣಗಳನ್ನು ಹಿಡಿದು ಶಹನಾಯ್ ಮತ್ತು ನಗಾರಿಗಳ ಸಂಗೀತದ ಮುನ್ನೆಲೆಯಲ್ಲಿ ನರ್ತಿಸುವ ರೀತಿ ಮೋಹಕವಾಗಿರುತ್ತದೆ. ಹೆಂಗಸರಿಂದ ಎಲ್ಲ ಸಂದರ್ಭಗಳಲ್ಲೂ ಅಭಿನಯಿಸಲ್ಪಡುವ ಘಮರ್ ರಾಜಸ್ಥಾನದ ಅತಿ ಮುಖ್ಯವಾದ ಮತ್ತು ಜನಪ್ರಿಯವಾದ ನೃತ್ಯ. ನರ್ತಿಸುವವರು ವೃತ್ತಾಕಾರವಾಗಿ ನಿಂತು ಬಹಳ ವೇಗವಾಗಿ ಚಲನೆಯನ್ನು ಮುಂದುವರಿಸುತ್ತಾರೆ. ದೇಹವನ್ನು ಬಹಳ ವೇಗವಾಗಿ ತಿರುಗಿಸುವ ಮತ್ತು ಸುತ್ತಿಸುವ ಕ್ರಿಯೆ ಒಂದು ಸ್ಥಳದಲ್ಲಿ ಬಹಳ ಹೊತ್ತು ಒಂದೇ ಸಮನೆ ನಡೆಯುತ್ತದೆ. ಈ ಕಾರಣದಿಂದಲೇ ಈ ನೃತ್ಯಕ್ಕೆ ಘಮರ್ ಎಂಬ ಹೆಸರು ಬಂದಿದೆ. ರಸಿಯ ಗಂಡಸರ ಒಂದು ನೃತ್ಯ. ಬಣ್ಣ ಬಣ್ಣದ ಹತ್ತಿಯಿಂದ ಬಿಗಿದು ಅಲಂಕರಿಸಿದ ಉದ್ದದ ಕೋಲುಗಳನ್ನು ಹಿಡಿದುಕೊಂಡು ನೃತ್ಯಗಾರರು ನೃತ್ಯ ಮಾಡುತ್ತಾರೆ. ತೇರತಾಲಿ ಎಂಬ ಹೆಂಗಸರ ನೃತ್ಯದಲ್ಲಿ ನೃತ್ಯಗಾರ್ತಿಯರು ನೆಲದ ಮೇಲೆ ಕುಳಿತು ಅಭಿನಯಿಸುತ್ತಾರೆ. ಪ್ರತಿ ನೃತ್ಯಗಾರ್ತಿಯೂ ಚಿಕ್ಕ ತಾಳಗಳನ್ನು ದೇಹದ ಅನೇಕ ಭಾಗಗಳಲ್ಲಿ ಸಿಕ್ಕಿಸಿ, ಮುಖವನ್ನು ಫೋಷದಿಂದ ಮುಚ್ಚಿಕೊಂಡು, ಚಿಕ್ಕದಾದ ಒಂದು ಕತ್ತಿಯನ್ನು ಹಲ್ಲಿನಿಂದ ಕಚ್ಚಿ ಹಿಡಿದಿರುತ್ತಾಳೆ. ಅನಂತರ ಅಭಿನಯಕಾರರು ಚಿಕ್ಕ ತಾಳಗಳನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು, ಲಯಬದ್ಧ ಮತ್ತು ಗಂಭೀರ ಚಲನೆಗಳೊಂದಿಗೆ ದೇಹದ ಬೇರೆ ಬೇರೆ ಭಾಗಗಳಲ್ಲಿರುವ ತಾಳಗಳನ್ನು ಬಡಿಯುತ್ತ ಸಾಗುತ್ತಾರೆ. ಕಚ್ಚಿಫೋಡಿ ಎಂಬುದು ಗಂಡಸರು ಅಭಿನಯಿಸುವ ಒಂದು ಬಗೆಯ ನೃತ್ಯ. ಬವಾಲಿಯ, ಕುಂಹಾರ್, ಸಾಯ್‍ಗರು ಮುಂತಾದ ಪಂಗಡಗಳಲ್ಲಿ ಈ ನೃತ್ಯ ಪ್ರಚಲಿತವಿದೆ. ಅಭಿನಯಕಾರರು ಬೊಂಬು ಮತ್ತು ಬಟ್ಟಿಗಳಿಂದ ಮಾಡಿದ ವೇಷದ ಕುದುರೆಗಳ ಮೇಲೆ ಕುಳಿತುಕೊಂಡು ಅಣಕುಯುದ್ಧ ನಡೆಸುತ್ತಾರೆ.

ಗುಜರಾತಿನ ಸರ್ವೆ ಸಾಮಾನ್ಯ ನೃತ್ಯ ಗಾರ್ಬಾ. ವಿಶೇಷವಾಗಿ ಹೆಣ್ಣು ಮಕ್ಕಳು ಇದನ್ನು ನವರಾತ್ರಿ ಹಬ್ಬದ ಸಂದರ್ಭದಲ್ಲಿ ಅಭಿನಯಿಸುತ್ತಾರೆ. ವೃತ್ತಾಕಾರವಾಗಿ ನಿಂತು, ಮಧ್ಯದಲ್ಲಿ ದೀಪವಿರುವ ಗಡಿಗೆ ಇರಿಸಿ ಹಾಡುತ್ತ, ಲಯಬದ್ಧವಾಗಿ ಚಪ್ಪಾಳೆ ಇಕ್ಕುತ್ತ ಚಿಕ್ಕ ಚಿಕ್ಕ ಹೆಜ್ಜೆ ಹಾಕುತ್ತ ಚಲಿಸುತ್ತಾರೆ. ಗುಜರಾತಿನ ಗಂಡಸರು ಗಾರ್ಬಿ ಎಂಬ ಒಂದು ಬಗೆಯ ನೃತ್ಯ ಮಾಡುತ್ತಾರೆ. ಉರಿಯುತ್ತಿರುವ ದೀಪವನ್ನು ಮಣ್ಣಿನ ಗಡಿಗೆಯಲ್ಲಿಟ್ಟು (ಗರ್ಬಿ) ಮನೆಮನೆಗೂ ಹೋಗುತ್ತಾರೆ. ಆ ಸಂದರ್ಭದಲ್ಲಿ ರಾಸ ಎಂಬುದು ಮುಖ್ಯವಾಗಿ ಗಂಡಸರೇ ಮಾಡುವ ಇನ್ನೊಂದು ಬಗೆಯ ನೃತ್ಯ. ಕೆಲವುಸಲ ಹೆಂಗಸರೂ ಈ ನೃತ್ಯ ಮಾಡುವುದಿದೆ. ಇಲ್ಲಿ ನರ್ತಿಸುವವರು ಹಾಡು ಹಾಡುತ್ತ ಕೋಲು ಹುಯ್ಯುತ್ತಾರೆ. ಗುಜರಾತಿನ ಕೆಲವು ಭಾಗಗಳಲ್ಲಿ ಮತ್ತು ರಾಜಸ್ಥಾನದ ಮಗ್ಗುಲಲ್ಲಿರುವ ಪ್ರದೇಶಗಳಲ್ಲಿ ಭಿಲ್ಲಬುಡಕಟ್ಟಿನ ಜನ ಪಾಲೀ ನಟವಲೀ ಎಂಬಂಥ ತಮ್ಮದೇ ಆದ ನೃತ್ಯ ಸಂಪ್ರದಾಯಗಳನ್ನು ಹೊಂದಿದ್ದಾರೆ.

ಸಾಂಸ್ಕøತಿಕವಾಗಿ ಗುಜರಾತಿನೊಂದಿಗೆ ಹೆಚ್ಚು ಸಂಬಂಧ ಹೊಂದಿರುವ ಸೌರಾಷ್ಟ್ರದಲ್ಲಿ ಗುಜರಾತಿನ ಗಾರ್ಬಾ, ಗಾರ್ಮಿ ಮತ್ತು ದಾಸ ನೃತ್ಯ ಸಂಪ್ರದಾಯಗಳ ಜೊತೆಗೆ ಇರುವ ಇನ್ನೊಂದು ಮುಖ್ಯ ನೃತ್ಯ ಪ್ರಕಾರ ಟಿಪ್ಪನೀ. ಇದೊಂದು ಬಗೆಯ ಕಾರ್ಮಿಕ ನೃತ್ಯವೆನ್ನಬಹುದು. ಬಿಡುವಿನ ವೇಳೆಯಲ್ಲಿ ಖೋಲಿಜಾತಿಯ ಹೆಣ್ಣು ಕೂಲಿ ಆಳುಗಳು ಕಟ್ಟಡಗಳ ಗಾರೆಗಚ್ಚನ್ನು ಹಾಕುವ ಸಂದರ್ಭಗಳಲ್ಲಿ ಈ ನೃತ್ಯವನ್ನು ಅಭಿನಯಿಸುತ್ತಾರೆ. ಪ್ರತಿ ಹೆಂಗಸು ಉದ್ದವಾದ ಹಿಡಿಯುಳ್ಳ ಮರದ ತುಂಡೊಂದನ್ನು (ದಂಸವನ್ನು) ಹಿಡಿದು ನೆಲವನ್ನು ಬಡಿಯುತ್ತಿರುವಾಗಲೇ ಹಾಡುತ್ತ ವೃತ್ತಾಕಾರವಾಗಿ ತಿರುಗುತ್ತ ಒಂದು ಬಗೆಯ ನೃತ್ಯವನ್ನು ಮಾಡುತ್ತಾಳೆ. ಪಧರ ಎಂಬುದು ಸೌರಾಷ್ಟ್ರದ ಬೆಸ್ತರು ಮಾಡುವ ನೃತ್ಯ. ಅವರು ದೋಣಿಯೊಂದರ ನಡೆಯನ್ನು ಅನುಕರಿಸುತ್ತ, ಚಿಕ್ಕ ಕೋಲುಗಳನ್ನು ಬಡಿಯುತ್ತ ನೃತ್ಯ ಮಾಡುತ್ತಾರೆ. ಆಫ್ರಿಕದ ನೀಗ್ರೋ ಬುಟಕಟ್ಟಿಗೆ ಸೇರಿದ. ಈ ಪ್ರಾಂತ್ಯದ ಸಿದ್ಧಿ ಎಂಬ ಜನ ಧಮಾಲ್ ಎಂಬ ನೃತ್ಯವನ್ನು ಅಭಿನಯಿಸುತ್ತಾರೆ. ಮೊಗಲರ ಕಾಲದಲ್ಲಿ ಇವರನ್ನು ಗುಲಾಮರನ್ನಾಗಿ ಭಾರತಕ್ಕೆ ತರಲಾಯಿತು. ಧಮಾಲ್‍ನಲ್ಲಿ ವಕ್ರವಕ್ರವಾದ ಚಲನೆಯೇ ಹೆಚ್ಚು. ಆದರೆ ಕೆಲವು ಸಮಯಗಳಲ್ಲಿ ನೃತ್ಯಗಾರರು ಕೆಲವೊಂದು ಪ್ರಾಣಿ ಪಕ್ಷಿಗಳ ಚಲನೆ, ಭಂಗಿ ಮತ್ತು ಧ್ವನಿಯನ್ನು ಅನುಕರಿಸುತ್ತ ನರ್ತಿಸುವರು.

ಮಹಾರಾಷ್ಟ್ರದಲ್ಲಿ ನಕ್ತಾ, ದಹಿಕಲಾ ಅಥವಾ ದಹಿಹಂಡಿ, ಫೂಂಗಡಿ ಮೊದಲಾದ ಅನೇಕ ಬಗೆಯ ಜನಪದ ನೃತ್ಯಗಳು ಇದ್ದರೂ ಲೆಜಿಮ್ ಎಂಬ ನೃತ್ಯ ತುಂಬ ಪ್ರಸಿದ್ಧವಾದುದು. ಇದೊಂದು ಬಗೆಯ ಕ್ರೀಡಾನೃತ್ಯ. ಇದರಲ್ಲಿ ಹುಡುಗರು, ಹುಡುಗಿಯರು ಭಾಗವಹಿಸುತ್ತಾರೆ. ಮರದ ಆಯಕಟ್ಟಿನಿಂದ ಬಿಗಿದ ಒಂದು ಚಿಕ್ಕಲೋಹದ ತಟ್ಟೆ ಹಿಡಿದು ನಾನಾ ರೀತಿಯ ಅಂಗವಿನ್ಯಾಸಗಳನ್ನು ಪ್ರದರ್ಶಿಸುವುದು ಇದರ ವೈಶಿಷ್ಟ್ಯ. ಕೊಲ್ಯಾಚ ಮತ್ತು ನಾಕಟ ಎಂಬ ನೃತ್ಯಗಳನ್ನು ಬೆಸ್ತರು ಮತ್ತು ಬೆಸ್ತಗಿತ್ತಿಯರು ಕ್ರಮವಾಗಿ ಅಭಿನಯಿಸುತ್ತಾರೆ. ಮನರಂಜನೆಯೇ ಇವುಗಳ ಮುಖ್ಯ ಉದ್ದೇಶ. ಕೆಲವೊಮ್ಮೆ ಲೈಂಗಿಕತೆಯ ಸಂಬಂಧಪಟ್ಟ ಅಂಶಗಳು ಕೂಡ ಇದರಲ್ಲಿ ಸೇರಿರುತ್ತದೆ. ದಶಾವತಾರ ಎಂಬ ನೃತ್ಯವನ್ನು ಮಾಡುವವರು ಗಂಡಸರು. ಇಲ್ಲಿ ನರ್ತನಕಾರರು ಬೇರೆ ಬೇರೆ ಅವತಾರಗಳನ್ನು ಪ್ರತಿನಿಧಿಸುವಂಥ ಮುಳವಾಡ ಧರಿಸಿ ಹಾಡು ಹಾಡುತ್ತ ಸಾಂಕೇತಿಕವಾಗಿ ನರ್ತಿಸುತ್ತಾರೆ. ತಮ್ಮ ಕೈಯಲ್ಲಿರುವ ಚಿಕ್ಕ ಕೋಲುಗಳನ್ನು ಲಯಬದ್ಧವಾಗಿ ಬಡಿಯುತ್ತ, ನಿಧಾನವಾಗಿ ಹೆಜ್ಜೆ ಇಡುತ್ತ ಹೆಂಗಸರು ಅಭಿನಯಿಸುವ ನೃತ್ಯ ಟೆಪರಿ. ಮುಂಬಯಿ ಗೋವಾಗಳಲ್ಲಿ ಕೂಡ ಕೆಲವು ನೃತ್ಯಗಳಿವೆ. ಅವುಗಳಲ್ಲಿ ಕುಂಬಿ ಜನ ಹಾರೆಯನ್ನು ಹೆಗಲ ಮೇಲೆ ಹೊತ್ತು. ಗುಮ್ಮಟೆಯ ಹಿಮ್ಮೆಳಕ್ಕೆ ಅನುಗುಣವಾಗಿ ನರ್ತಿಸುವ ಕುಂಬಿಗುಮ್ಮಟೆನೃತ್ಯ, ಮೋಹಕ ಉಡುಪು ಮತ್ತು ಆಭರಣ ಧರಿಸಿ ಕುಣಿವ ದಖಣಿನೃತ್ಯ ಹೆಸರಿಸುವಂಥವು.

ಮಧ್ಯಪ್ರದೇಶದ ಗೊಂಡ ಬುಡಕಟ್ಟಿನ ಹೆಂಗಸರು ಮತ್ತು ಗಂಡಸರು ಅಭಿನಯಿಸುವ ಅತಿ ಮುಖ್ಯವಾದ ನೃತ್ಯ ಕರ್ಮ, ಹೆಂಗಸರು ಸಾಲಾಗಿ ನಿಂತು, ಒಬ್ಬರ ತೋಳಿನೊಂದಿಗೆ ಇನ್ನೊಬ್ಬರ ತೋಳನ್ನು ಜೊತೆಯಾಗಿ ಕೂಡಿಸಿ ಲಯಬದ್ಧವಾಗಿ ಬೀಸುತ್ತಾರೆ. ಗಂಡಸರು ಅವರ ಮುಂಭಾಗದಲ್ಲಿ ವೃತ್ತಾಕಾರವಾಗಿ ನಿಂತು, ಅನೇಕ ಬಗೆಯ ಶಾರೀರಕ ವಿನ್ಯಾಸಗಳನ್ನು ಮಾಡುತ್ತಾರೆ. ಒಂದುಸಾಲಿನ ಗಂಡಸರು ಇನ್ನೊಂದು ಸಾಲಿನ ಗಂಡಸರ ಭುಜಗಳ ಮೇಲೆ ನಿಂತುಕೊಳ್ಳುವುದು, ಜನಪ್ರಿಯವಾದ ಅಂಥ ಅಂಗವಿನ್ಯಾಸಗಳಲ್ಲಿ ಒಂದು. ಒರಟಾದ ಮತ್ತು ವೇಗವಾದ ಚಲನೆಯಿಂದ ಮತ್ತು ತೀವ್ರವಾಗಿ ಶರೀರಬಾಗಿಸುವುದರಿಂದ ಮಾಡುವ ಗೋಡ ಜನರ ಇನ್ನೊಂದು ಬಗೆಯ ನೃತ್ಯ ಸೈಲಾರೀನಾ. ಗೌರ ಎಂಬ ಇನ್ನೊಂದು ಬಗೆಯ ನೃತ್ಯವನ್ನು ಅಭಿನಯಿಸುವವರು ಮಧ್ಯಪ್ರದೇಶದ ಮಡಿಯಾ ಬುಡಕಟ್ಟಿನವರು. ಈ ನೃತ್ಯದಲ್ಲಿ ನರ್ತಕರು ಹಸುವಿನ ಕೊಂಬುಗಳಿರುವ ಶಿರಸ್ತ್ರಾಣ ಧರಿಸಿ, ಹಸುವಿನ ಚಲನೆಗಳನ್ನು ಅನುಕರಿಸುತ್ತಾರೆ. ಕಾಲನ್ನು ಉದ್ದ ಗಣೆಗಳ ಮೇಲಿರಿಸಿ ಕೈಯ್ಯಲ್ಲಿ ಅವನ್ನು ಹಿಡಿದು ಗಂಡಸರು ಮತ್ತು ಚಿಕ್ಕಹುಡುಗರು ಮಾಡುವ ನೃತ್ಯ ಮಧ್ಯ ಪ್ರವೇಶದ ಕೆಲವೊಂದು ಬುಡಕಟ್ಟುಗಳಲ್ಲಿ ಇದೆ. ಈ ನೃತ್ಯ ನೋಡಲು ರೋಮಾಂಚನಕಾರಿಯಾಗಿಯೂ ಇರುತ್ತದೆ.

ಬಿಹಾರದಲ್ಲಿ ಅನೇಕ ನೃತ್ಯಗಳು ಬುಡಕಟ್ಟುಗಳಿಗೆ ಸೇರಿದಂಥವು. ಜ್ಹುಮರ್ ಎಂಬ ನೃತ್ಯವನ್ನು ಜನಸಾಮಾನ್ಯರೂ ಅಭಿನಯಿಸುತ್ತಾರೆ. ಆದರೂ ಮುಖ್ಯವಾಗಿ ಇದನ್ನು ಅಭಿನಯಿಸುವವರು ಹೆಂಗಸರು. ನೃತ್ಯಗಾರ್ತೀಯರು ಒಬ್ಬರ ಕೈಯನ್ನು ಒಬ್ಬರು ಹಿಡಿದು, ಸಾಲಾಗಿ ನಿಂತು, ದೇಹವನ್ನು ಬಳುಕಿಸುತ್ತ, ನಿರ್ದಿಷ್ಟ ಸಮಯದಲ್ಲಿ ನೆಗೆಯುತ್ತ ನೃತ್ಯ ಮಾಡುತ್ತಾರೆ. ಛೋಟಾನಾಗಪುರದ ಓರಾನ್ ಎಂಬ ಆದಿವಾಸಿಗಳು ಜಡೂರ್ ಎಂಬ ನೃತ್ಯವನ್ನು ಮಾಡುತ್ತಾರೆ. ಇದರಲ್ಲಿ ಹೆಂಗಸರು ಮತ್ತು ಗಂಡಸರು ಪ್ರಣಯಕ್ಕೆ ಸಂಬಂಧ ಪಟ್ಟ ಹಾಡುಗಳನ್ನು ಹಾಡುತ್ತಾರೆ. ನೂರಾರು ಸಂಖ್ಯೆಯಲ್ಲಿ ನರ್ತಕರು ಭಾಗವಹಿಸುವ ಈ ನೃತ್ಯದಲ್ಲಿ ವೈವಿಧ್ಯ ಕಂಡ ಬರುತ್ತದೆ. ಕೆಲವುಸಾರಿ ನೃತ್ಯಗಾರರು ಸಾಲಾಗಿ ನಿಂತು ನರ್ತಿಸಿದರೆ ಇನ್ನು ಕೆಲವು ಸಾರಿ ಹೆಂಗಸರು. ಗಂಡಸರು ಬೇರೆ ಬೇರೆ ಸಾಲುಗಳಲ್ಲಿ ನಿಂತು ಒಟ್ಟಿಗೆ ಸೇರಿ ದೊಡ್ಡದಾಗಿ ವೃತ್ತ ರಚಿಸಿ ನರ್ತಿಸುವುದುಂಟು. ರಭಸಗತಿಯ. ಅತ್ಯುತ್ಸಾಹದ ಚಲನೆ ಈ ನೃತ್ಯದ ಕೇಂದ್ರಬಿಂದುವಾಗಿದೆ. ಶಿಕಾರ್ ಎಂಬುದು ಇವರ ಪ್ರಸಿದ್ಧ ನೃತ್ಯ. ಈ ನೃತ್ಯದಲ್ಲಿ ಕಾಡು ಪ್ರಾಣಿಗಳ ಭೇಟೆಗೆ ಹೋಗುವುದಕ್ಕೂ ಬೇಟೆಯೊಂದಿಗೆ ಹಿಂತಿರುಗವುದಕ್ಕೂ ನರ್ತನಾಭಿನಯವಿರುತ್ತದೆ. ಖಾರಿಯಾ ಎಂಬ ಬುಡಕಟ್ಟಿನ ನೃತ್ಯ ಖೋಯಾಲ್. ಈ ನೃತ್ಯವನ್ನು ಮಾಡುವವರು ಆ ಜನರ ಹುಡುಗ ಹುಡುಗಿಯರು. ಅವರು ಸಾಲಾಗಿ ನಿಂತು ಒಬ್ಬರ ತೋಳನ್ನೊಬ್ಬರು ತಟ್ಟುತ್ತ, ಕೆಲವು ಸಾರಿ ವೃತ್ತಾಕಾರವಾಗಿ ಚಲಿಸುತ್ತ, ಕೈ ಕಾಲುಗಳನ್ನು ಬೀಸುತ್ತ ನೃತ್ಯವಾಡುತ್ತಾರೆ.

ಒರಿಸ್ಸ ಅನೇಕ ಬಗೆಯ ಆದಿವಾಸಿಗಳ ತೌರೂರು. ಇಲ್ಲಿ ಅನೇಕ ರೀತಿಯ ಜನಪದ ನೃತ್ಯಗಳು ಕಂಡುಬರುತ್ತದೆ. ಇಲ್ಲಿಯ ಪ್ರಾಚೀನ ಮತ್ತು ಜನಪ್ರಿಯ ನೃತ್ಯ ಪಯಕ. ಪಯಕ ಸೈನಿಕರು ಅಂಗಸಾಧನೆಗಾಗಿ ಪಡೆಯುತ್ತಿದ್ದ ಶಿಕ್ಷಣದಿಂದ ಇದು ಆವಿರ್ಭವಿಸಿದೆ. ಈ ನೃತ್ಯದಲ್ಲಿ ನೃತ್ಯಕಾರರು ಕತ್ತಿಗಳನ್ನು ಮತ್ತು ಗುರಾಣಿಗಳನ್ನು ಹಿಡಿದು ಅಣಕು ಹೋರಾಟದಲ್ಲಿ ತೊಡಗುತ್ತಾರೆ. ಇಲ್ಲಿಯ ಗಂಡಸರ ಇನ್ನೊಂದು ನೃತ್ಯ ಛಡಯಾ. ನರ್ತಿಸುವವರು ಕೆಲವು ಗೊತ್ತಾದ ಪ್ರಾಣಿಗಳ ಮತ್ತು ಪಕ್ಷಿಗಳ ನಡೆಯನ್ನು ಅನುಕರಿಸುತ್ತಾರೆ. ನೃತ್ಯಗಾರರು ಆಗಾಗ ಬಿದಿರಿನ ಕೋಲುಗಳನ್ನು ಹಿಡಿಯುತ್ತಾರೆ. ಭೂಮಿಯಾ ಎಂಬ ಬುಡಕಟ್ಟಿನ ಗಂಡಸರು ಮತ್ತು ಹೆಂಗಸರು ಜಡೂರ್ ಎಂಬ ನೃತ್ಯ ಮಾಡುತ್ತಾರೆ. ನರ್ತನಕಾರರು ಈ ಸಂದರ್ಭದಲ್ಲಿ ತಲೆಗೆ ನವಿಲುಗರಿಗಳನ್ನು ಧರಿಸುತ್ತಾರೆ. ಒರಿಸ್ಸದ ಮತ್ತೊಂದು ನೃತ್ಯು ಗುಮ್ರಾ. ಇದರಲ್ಲಿ ಹಲವು ವಿಧಗಳಿವೆ. ಗುಮಾರ್ ಮದ್ದಳೆಯಿಂದ ನೃತ್ಯಕ್ಕೆ ಈ ಹೆಸರು ಬಂದಿದೆ. ನೃತ್ಯಗಾರರು ತಾವು ನೃತ್ಯ ಮಾಡುವಾಗ ಈ ಮದ್ದಳೆಯನ್ನು ನಡುವಿಗೆ ಕಟ್ಟಿಕೊಂಡು ಬಡಿಯುತ್ತಲೂ ನೃತ್ಯಮಾಡುತ್ತಾರೆ. ಈ ನೃತ್ಯದಲ್ಲಿ ಸಾಮಾನ್ಯವಾಗಿ ಹುಲಿ ಆಡುಮರಿಯನ್ನು ಹಿಡಿದ ಪ್ರಸಂಗ ಮತ್ತು ಬಂಜೆ ಸಂತಾನಕ್ಕಾಗಿ ಪರಿತಪಿಸುವ ಸಂದರ್ಭಗಳ ನಿರೂಪಣೆ ಕಂಡುಬರುತ್ತದೆ.

ಬಂಗಾಲದಲ್ಲಿ ಗುಲಾರಿಯಾ, ಭಾತ್ರಾ, ಜುಮಾರ್ ಬೊಲಾನ್, ರಾಯ್ ಬನ್ಷಿ, ಕತಿ ಮೊದಲಾದ ನೃತ್ಯಗಳು ಕಂಡು ಬರುತ್ತವೆ. ಗಂಡಸರು ಭಾಗವಹಿಸುವ ರಾಯ್‍ಬನ್ನಿ ಒಂಡು ಬಗೆಯ ಯುದ್ಧನೃತ್ಯ. ಹಿಮ್ಮೇಳವಾಗಿ ಢೋಲ್ ಮತ್ತು ಕಾನ್ಸಿವಾದ್ಯಗಳಿರುತ್ತವೆ. ನರ್ತನಕಾರರು ಬಾಣ ಹೊಡೆಯುವುದು, ಕತ್ತಿ ಝಳಪಿಸುವುದು, ಭರ್ಜಿ ಹಿಡಿದು ಘರ್ಜಿಸುವುದು ಮುಂತಾದ ಅಭಿನಯ ಮಾಡುತ್ತಾರೆ. ಕೆಲವು ಸಾರಿ ಒಂದು ಗುಂಪಿನ ನೃತ್ಯಗಾರರು ಬಿಗಿಯಾದ ಒಂದು ವೃತ್ತರಚಿಸಿದರೆ ಇನ್ನೊಂದು ಗುಂಪಿನ ನೃತ್ಯಗಾರರು ಅವರ ಹೆಗಲ ಮೇಲೆ ನಿಂತು ಅನೇಕ ಬಗೆಯ ಅಂಗಾಭಿನಯ ಮಾಡುವುದುಂಟು. ಕತೆ ನೃತ್ಯದಲ್ಲಿ ನೃತ್ಯಗಾರರು ಕೋಲುಗಳನ್ನು ಹಿಡಿದು ಲಯಬದ್ಧವಾಗಿ ನರ್ತಿಸುತ್ತಾರೆ. ಅತ್ಯಂತ ಭಕ್ತಿ ಪ್ರಧಾನವಾದ ಇನ್ನೊಂದು ಬಗೆ ಎಂದರೆ ನೃತ್ಯ ಕೀರ್ತನ. ಭಕ್ತರು ಧಾರ್ಮಿಕ ಹಾಡುಗಳನ್ನು ಹಾಡುವಾಗ ಇದನ್ನು ಅಭಿನಯಿಸುತ್ತಾರೆ.

ಅಸ್ಸಾಮ್ ವಿಶೇಷವಾಗಿ ಜನಪದ ನೃತ್ಯಗಳಿಂದಲೂ ಆದಿವಾಸಿಗಳ ನೃತ್ಯಗಳಿಂದಲೂ ಶ್ರೀಮಂತವಾಗಿದೆ. ವ್ಯಾಪಕವಾಗಿ, ಅಲ್ಲಿಯ ಎಲ್ಲ ಪಂಗಡಗಳ ಜನರಿಂದ ಅಭಿನಯಿಸಲ್ಪಡುವ ನೃತ್ಯವೆಂದರೆ ಬಹು ಅಥವಾ ಬೊಹಾಗ್ ಬಿಹು. ಕೆಲವುಸಾರಿ ಕೇವಲ ಯುವಕರು, ಕೆಲವುಸಾರಿ ಕೇವಲ ಯುವತಿಯರು ಇನ್ನು ಕೆಲವುಬಾರಿ ಇಬ್ಬರೂ ಒಟ್ಟಿಗೆ ಸೇರಿ ನರ್ತಿಸುವರು. ನೃತ್ಯದ ಸಂದರ್ಭದಲ್ಲಿ ಬಿಹು ಹಾಡನ್ನು ಹಾಡುತ್ತಾರೆ. ಬೋಡೋ ಬುಡಕಟ್ಟಿನ ಜನ ಮೈಗೈನೈ ಎಂಬ ಸುಗ್ಗಿಯನ್ನು ಕುರಿತಂಥ ನೃತ್ಯ ಅಭಿನಯಿಸುತ್ತಾರೆ. ಕೊಯ್ಲಿಗೆ ಸೇರಿದಂತೆ ದುಡಿಮೆಯ ವಿವಿಧ ಹಂತಗಳನ್ನು ಈ ನೃತ್ಯದಲ್ಲಿ ನಿರೂಪಿಸಲಾಗುವುದು. ಮದುವೆಯಾಗದ ಖಾಸಿ ಆದಿವಾಸಿಗಳು ತಮ್ಮದೆ ಆದ ವಿಶಿಷ್ಟ ನೃತ್ಯಪ್ರಕಾರ ಹೊಂದಿದ್ದಾರೆ. ನೃತ್ಯಗಾರ್ತಿಯರು ಈ ನೃತ್ಯದಲ್ಲಿ ಜೊತೆಜೊತೆಯಾಗಿ ನಿಂತು ಲಜ್ಜೆಯಿಂದ ಹೆಜ್ಜೆಗಳನ್ನು ಇಡುತ್ತಾರೆ; ಗಂಡಸರು ಅವರ ಸುತ್ತ ವೃತ್ತಾಕಾರವಾಗಿ ನಿಂತು ಬೇಗ ಬೇಗನೆ ಮುಂದೆ ಬರುವುದು ಮತ್ತು ಹಿಂದೆ ಹೋಗುವುದು-ಹೀಗೆ ನೃತ್ಯ ಮುಂದುವರಿಸುತ್ತಾರೆ. ಮಿಜೋ ಹೆಣ್ಣುಮಕ್ಕಳು ಕುತೂಹಲಕರ ಬೊಂಬಿನ ನೃತ್ಯ ಮಾಡುತ್ತಾರೆ. ನೆಲದಮೇಲೆ ಬಿದಿರುಗಳನ್ನು ಚದರದ ಆಕಾರದಲ್ಲಿ ಜೋಡಿಸಿ, ಬಣ್ಣ ಬಣ್ಣದ ಉಡುಪು ಧರಿಸಿದ ತರುಣಿಯರು ಸಂಗೀತದ ಮುನ್ನೆಲೆಯಲ್ಲಿ ಲಯಬದ್ಧವಾಗಿ ನರ್ತಿಸುವ ರೀತಿ ಕುತೂಹಲಕಾರಿಯಾಗಿರುತ್ತದೆ. ಗಾರೋಗುಡ್ಡಗಳ ಜಿಲ್ಲೆಯ ನಿವಾಸಿಗಳಲ್ಲಿ ಗಾರೋನೃತ್ಯ ಸಾಮಾನ್ಯವಾಗಿ ಕಂಡುಬರುತ್ತದೆ. ಮಣಿಪುರ, ನೇಫಾ ಮತ್ತು ನಾಗಾ ಗಿರಿಜನರು ತಮ್ಮವೇ ಆದ ರಂಗುರಂಗಿನ ನೃತ್ಯಗಳನ್ನು ಹೊಂದಿದ್ದಾರೆ. ಮಣಿಪುರದಲ್ಲಿ ರಂಗಾಲಾಮ ಎಂಬ ಒಂದು ಬಗೆಯ ನೃತ್ಯವನ್ನು ನೋಡಬಹುದು. ಈ ನೃತ್ಯದಲ್ಲಿ ನರ್ತನಕಾರರು ಗಂಭೀರವಾದ ಚಲನ ಮಾಡುತ್ತ, ಪಕ್ಷಿಗಳು ಒಂದು ಮರದಿಂದ ಮತ್ತೊಂದು ಮರಕ್ಕೆ ಹಾರುವುದನ್ನೂ ಆಹಾರ ಹುಡುಕುವುದನ್ನೂ ಅನುಕರಿಸುತ್ತಾರೆ. ತಲ್ ಚೊಂಗ್ ಬಿ ಮಣಿಪುರದ ಋತುಕಾಲದ ನೃತ್ಯಗಳ ಪೈಕಿ ಅತ್ಯಂತ ಹರ್ಷಪೂರಿತವಾದ ಕೂಟನೃತ್ಯ. ಬೆಳೆದಿಂಗಳ ಬೆಳಕಿನಲ್ಲಿ ಕುಣಿಯುವುದು ಎಂಬುದು ಇದರ ಅರ್ಥ. ಹೋಳಿ ಹಬ್ಬದ ಕಾಲದಲ್ಲಿ ಈ ನೃತ್ಯ ನಡೆಯುತ್ತವೆ. ಲಿಯ್‍ಪೌಚೊಂಗ್ಬಾ, ಮಖೊಮ್‍ಲಮ್, ಪೂನ್‍ಸಲಮ್, ತಂಡನ್ ಫೈಬೊಕ್-ಇವು ಮಣಿಪುರದ ಇನ್ನಿತರ ಪ್ರಮುಖ ನೃತ್ಯಗಳು. ಹಿಮಾಲಯ ಪ್ರದೇಶದ ಸಿಕ್ಕಿಮ್, ಭೂತಾನ್, ಡಾರ್ಜಿಲಿಂಗ್‍ಗಳಲ್ಲಿ ಹಲವಾರು ಜನಪದ ನೃತ್ಯಗಳನ್ನು ನಾವು ನೋಡಬಹುದಾಗಿದೆ. ಹೆಚ್ಚಿನವು ಮುಖವಾಡ ನೃತ್ಯಗಳು. ಭಕ್ತಿರಸವೇ ಪ್ರಧಾನ, ಲೇಪಚ್ ಇಲ್ಲಿಯ ಖ್ಯಾತನೃತ್ಯ. ಲಾಮಾನೃತ್ಯ ಕೂಡ ಅಷ್ಟೇ ಪ್ರಸಿದ್ಧವಾಗಿದೆ. ನೇಫಾದ ಕುತೂಹಲಕರವಾದ ನೃತ್ಯ ಸೌವಾ ಛಾಮ್. ಇದರಲ್ಲಿ ನೃತ್ಯಗಾರರು ದೆವ್ವಗಳನ್ನು ಪ್ರತಿನಿಧಿಸುವ ಬಣ್ಣ ಬಳಿದ ಮರದ ಮುಖವಾಡಗಳನ್ನು ಧರಿಸಿ ಕುಣಿಯುತ್ತಾರೆ. ನೇಫಾದ ಇನ್ನೊಂದು ಆದಿನಿವಾಸಿಗಳ ನೃತ್ಯ ಆದಿ ಗಲೋಂಗ್. ಯುದ್ಧ ನೃತ್ಯವಾದ ಇದರಲ್ಲಿ ನೃತ್ಯಗಾರರು ಭರ್ಜಿಗಳನ್ನೂ ಗುರಾಣಿಗಳನ್ನೂ ಹಿಡಿದು ಮಲ್ಲಯುದ್ಧದ ಅಣಕಮಾಡುತ್ತಾರೆ. ನಾಗಾಗುಡ್ಡಗಾಡು ಪ್ರದೇಶದಲ್ಲೂ ರೆಂಗಮ ಎಂಬ ಇದೇ ರೀತಿಯ ಯುದ್ಧನೃತ್ಯವಿದೆ. ಈ ನೃತ್ಯ ಮಾಡುವಾಗ ನೃತ್ಯಕಾರರು ರಣಕೂಗುಗಳನ್ನು ಹಾಕುತ್ತಾರೆ.

ಆಂಧ್ರಪ್ರದೇಶದಲ್ಲಿ ಸಿದ್ಧಿಗಳ ಖಡ್ಗನೃತ್ಯ, ಬಂಜಾರರ ಬಂಜಾರಿನೃತ್ಯ, ಡಪ್ಪುವಾದ್ಯ, ಬಾತ್‍ಕಮ್ಮ ಮೊದಲಾದ ನೃತ್ಯಗಳು ಪ್ರಸಿದ್ಧವಾಗಿವೆ. ಸಾಮಾನ್ಯವಾಗಿ ಗಂಡಸರಲ್ಲಿ ಅಭಿನಯಿಸುವ ನೃತ್ಯ ಡಪ್ಪುವಾದ್ಯ. ಪ್ರತಿ ನೃತ್ಯಗಾರನೂ ಬಾರಿಸುವ ಮದ್ದಳೆಯ ಥರದ ಡಪ್ಪುವಾದ್ಯದಿಂದಾಗಿ ನೃತ್ಯಕ್ಕೆ ಈ ಹೆಸರು ಬಂದಿದೆ. ನೃತ್ಯ ಮಾಡುವಾಗ ನರ್ತಕರು ಚಿಕ್ಕ ಕೋಲುಗಳಿಂದ ಡಪ್ಪು ಬಾರಿಸುತ್ತ, ದೇಹವನ್ನು ಬಾಗಿ ಬಳುಕಿಸುತ್ತ, ಕಾಲನ್ನು ಹಿಂದಕ್ಕೂ ಮುಂದಕ್ಕೂ ಹಾಕುತ್ತ ನರ್ತಿಸುತ್ತಾರೆ. ಹೆಂಗಸರು ಮತ್ತು ಗಂಡಸರು ಕೂಡಿ ಅಭಿನಯಿಸುವ ನೃತ್ಯ ಮಧುರಿ. ಎರಡು ಗುಂಪುಗಳಾಗಿ ನಿಂತು, ಗಂಡಸರ ಗಂಪು ಕೋಲು ಹೊಯ್ದರೆ ಹೆಂಗಸರು ಕೋಲಿನ ಬಡಿತಕ್ಕೆ ಅನುಗಣವಾಗಿ ಚಪ್ಪಾಳೆ ಇಕ್ಕುತ್ತ ನರ್ತಿಸುವರು. ಜಿಪ್ಸಿ ಹೆಂಗಸರು ಅಭಿನಯಿಸುವ ಲಂಬಾಣಿ ನೃತ್ಯ ಮೋಹಕವಾದುದು. ನೃತ್ಯ ಮಾಡುಕೊಂಡು ನರ್ತಿಸುತ್ತಾರೆ. ಆಫ್ರಿಕ ಮೂಲದವರಾದ ಸಿದ್ಧಿಗಳ ಖಡ್ಗನೃತ್ಯ ಸೊಂಟದ ಪಟ್ಟಿಗೆ ಕಠಾರಿ ಸಿಕ್ಕಿಸಿ, ಕೈಯಲ್ಲಿ ಖಡ್ಗ ಹಿಡಿದು ಕಾಕುಹಾಕುತ್ತ ವೀರಾವೇಶದಿಂದ ಕುಣಿಯುತ್ತಾರೆ. ಹಿನ್ನಲೆಗೆ ರಣವಾದ್ಯಗಳಿರುತ್ತವೆ.

ತಮಿಳುನಾಡಿನಲ್ಲಿ ಅನೇಕ ಬಗೆಯ ಜನಪದ ನೃತ್ಯಗಳಿವೆ. ಹೆಣ್ಣುಮಕ್ಕಳ ಸಾಮ್ಯಾನ ನೃತ್ಯ ಕುಮ್ಮಿ ನೃತ್ಯಗಾರ್ತಿಯರು ಒಂದು ಸಾಲಿನಲ್ಲಿ ನಿಂತು, ಹಾಡುಹಾಡುತ್ತ ಮೆಲ್ಲಗೆ ಹೆಜ್ಜೆ ಇಡುತ್ತ, ಲಯಬದ್ಧವಾಗಿ ಚಪ್ಪಾಳೆ ಇಕ್ಕುತ್ತ ನರ್ತಿಸುತ್ತಾರೆ. ಕೋಲಾಟಮ್ ಎಂಬ ನೃತ್ಯದಲ್ಲಿ ಅಭಿನಯಕಾರರು ಚಪ್ಪಾಳೆ ಇಕ್ಕುವ ಬದಲು ಚಿಕ್ಕ ಚಿಕ್ಕ ಕೋಲುಗಳನ್ನು ಬಡಿಯುತ್ತ ನರ್ತಿಸುವರು. ಕೋಲಾಟದಲ್ಲಿಯೇ ಇನ್ನೊಂದು ಪ್ರಭೇದ ಪಿನ್ನಲ್ ಕೋಲಾಟಮ್ ಕೋಲುಗಳಿಗೆ ಬಣ್ಣ ಬಣ್ಣದ ಬಟ್ಟೆಗಳನ್ನು ಉದ್ದವಾಗಿ ಕಟ್ಟಿದ್ದು ನೃತ್ಯಗಾರರು ಬೇರೆ ಬೇರೆ ರೀತಿಯಲ್ಲಿ ಅಭಿನಯಿಸುವಾಗ ಅವು ಹೆಣೆದುಕೊಳ್ಳುತ್ತವೆ ಮತ್ತು ಬಿಚ್ಚಿಕೊಳ್ಳುತ್ತವೆ. ಬೊಂಬು, ಬಣ್ಣದ ಬಟ್ಟೆ ಮತ್ತು ಕಾಗದದಿಂದ ಮಾಡಿದ ಕುದರೆ ಅಥವಾ ಹುಲಿ, ಒಂಟೆ ಇತ್ಯಾದಿ ಪ್ರಾಣಿಗಳ ಮೇಲೆ ಕುಳಿತು, ವೃತ್ತಿಪರ ನೃತ್ಯಗಾರರು ಅನೇಕ ಬಗೆಯ ನೃತ್ಯ ಪ್ರದರ್ಶನ ಮಾಡುತ್ತಾರೆ. ಇದನ್ನು ಪೊರವಿ ಆಟಮ್ ಅಥವಾ ಪೊಯ್ ಕಾಲ ಕುತಿರೈ ಎಂದು ಕರೆಯುತ್ತಾರೆ. ಚಿಕ್ಕ ಹುಡಗರಿಂದ ಅಭಿನಯಿಸಲ್ಪಡುವ ನೃತ್ಯವೆಂದರೆ ಭೂತಮ್, ರಾಜ ರಾಣಿ, ಹಾವಾಡಿಗ-ಈ ಬಗೆಯ ವೇಷಗಳನ್ನು ಧರಿಸಿ ನೆಗೆಯುತ್ತ, ಕುಪ್ಪಳಿಸುತ್ತ, ತಾಳಕ್ಕನುಗುಣವಾಗಿ ಮಕ್ಕಳು ನರ್ತಿಸುವ ರೀತಿ ಆಕರ್ಷಕವಾಗಿರುತ್ತದೆ.

ಕೇರಳದಲ್ಲಿ ಎಳೆಲಕರಡಿ ನೃತ್ಯ, ಪುಲಿಯಾರಕಳಿ ವೇಲಕಳಿ, ಕೈಕೊಟ್ಟುಕಳಿ, ಕೋಲುಕಳಿ, ತಿರುವದಿರಕಳಿ ಮುಂತಾದ ನೃತ್ಯಗಳು ಪ್ರಸಿದ್ಧವಾಗಿವೆ. ಮಾಪಿಳ್ಳೆ ಅಥವಾ ಮುಸಲ್ಮಾನ ಗಂಡಸರು ಅಭಿನಯಿಸುವ ಕೋಲುಕಳಿ ನೃತ್ಯದಲ್ಲಿ ನೃತ್ಯಕಾರರು ಹಾಡುಹಾಡುತ್ತ, ತಲೆಯ ಮೇಲೆ ಕೈಯೆತ್ತಿ ಕೋಲು ಹೊಯ್ಯುತ್ತ ನರ್ತಿಸುತ್ತಾರೆ. ಕೇರಳದ ವೀರಪರಂಪರೆಯನ್ನು ನೆನಪಿಸುವ ನೃತ್ಯ ವೇಲಕಳಿ. ಖಡ್ಗ ಮತ್ತು ಗುರಾಣಿ ಹಿಡಿದ ನರ್ತಕರು ಚಂಡೆ, ಕಹಳೆಗಳ ಭೋಗರೆತದ ಹಿನ್ನಲೆಯಲ್ಲಿ ಅಣಕು ಯುದ್ಧವನ್ನು ಅಭಿನಯಿಸುತ್ತಾರೆ. ಪುಲಿಯಾರಕಳಿ ಎಂಬ ನೃತ್ಯ ವೇಲಕಳಿಯ ಇನ್ನೊಂದು ಪ್ರಭೇದ, ಇದನ್ನು ಕೇರಳದ ಕೆಳವರ್ಗದ ಜನ ಅಭಿನಯಿಸುತ್ತಾರೆ. ಕೈ ಕೊಟ್ಟುಕಳಿ ಹೆಂಗಸರ ನೃತ್ಯ. ಇದರಲ್ಲಿ ನೃತ್ಯಗಾರ್ತಿಯರು ಉರಿಯುತ್ತಿರುವ ದೀಪದ ಸುತ್ತ ನಿಂತು ಹಾಡುತ್ತ, ಮೆಲ್ಲಗೆ ಹೆಜ್ಜೆ ಹಾಕುತ್ತ ಚಪ್ಪಾಳೆ ಇಕ್ಕುತ್ತ ನರ್ತಿಸುವರು. ಕಾಮದೇವನ ಗೌರವಾರ್ಥವಾಗಿ ಅಭಿನಯಿಸಲ್ಪಡುವ ಹೆಂಗಸರ ಇನ್ನೊಂದು ನೃತ್ಯ ತಿರುವದಿರಕಳಿ, ನೃತ್ಯಗಾರ್ತಿಯರು ಪ್ರಣಯ ಗೀತೆಗಳನ್ನು ಹಾಡುತ್ತ ಸಾಂಕೇತಿಕ ಅಂಗಾಭಿನಯ ಮಾಡುತ್ತ, ದೇಹ ಬಳುಕಿಸುತ್ತ ಮಂದಗತಿಯಲ್ಲಿ ನರ್ತಿಸುವರು. (ಎಂ.ಕೆ.ಒ.)

ಕರ್ನಾಟಕದಲ್ಲಿ ಸುಮಾರು ನಲವತ್ತಕ್ಕೂ ಹೆಚ್ಚು ಜನಪದ ನೃತ್ಯಗಳು ಪ್ರಚಲಿತವಾಗಿವೆ. ಅವನ್ನು ಪ್ರಾದೇಶಿಕವಾಗಿ ಹೀಗೆ ವರ್ಗೀಕರಿಸಬಹುದು. ಉತ್ತರ ಕರ್ನಾಟಕ: ಕರೆಡೆ ಮಜಲು, ಡೊಳ್ಳುಕುಣಿತ, ಗೊಂದಲಿಗರ ಮೇಳ ವಾಘೆಮುರುಳಿ ಮೇಳ ಕೋಲಾಟ.

ದಕ್ಷಿಣ ಕರ್ನಾಟಕ: ವೀರಗಾಸೆ ಕುಣಿತ, ಸೋಮನ ಕುಣಿತ, ಕುರುಬ ದೇವರ ಕುಣಿತ, ಲಿಂಗದ ಬೀರರ ಕುಣಿತ, ಕೋಲ ಕುಣಿಯುವುದು, ಗಡ್ಡರ ಕುಣಿತ, ರಂಗದ ಕುಣಿತ, ಗಾರುಡಿ ಕುಣಿತ, ಬೀಸುಕಂಸಾಳೆ, ಪಟ ಕುಣಿತ, ಗೋರವರಕುಣಿತ ರಂಗದಕುಣಿತ ನಂದೀಕೋಲು ಕುಣಿತ ಮಾರಮ್ಮನ ಕುಣಿತ, ಮಣೇವು ಕುಣಿತ, ಪೂಜಾ ಕುಣಿತ, ಚಿಟ್‍ಮೇಳ, ಕಂಬಳಿಕುಣಿತ, ಚೌಡಿಕೆ ಮೇಳ, ಕರಪಾಲಮೇಳ, ಭಾಗವಂತಿಕೆಮೇಳ, ಕರಗನೃತ್ಯ.

ಕೊಡಗು: ಹುತ್ತರಿ ಕುಣಿತ, ಬೊಳಕಾಟ, ಉಮ್ಮತ್ತಾಟ, ಕೋಲಾಟ.

ದಕ್ಷಿಣ ಕನ್ನಡ ಜಿಲ್ಲೆ: ದುಡಿಕುಣಿತ, ಡೋಲಿನ ಕುಣಿತ, ವೈದ್ಯನೃತ್ಯ, ಭೂತನೃತ್ಯ, ಹೋಳಿನೃತ್ಯ, ಆಟಿಕೆಡೆಂಜ, ಕೋರತನಯ, ಕೋಲಾಟ.

ಉತ್ತರ ಕನ್ನಡ ಜಿಲ್ಲೆ: ಸುಗ್ಗಿಕುಣಿತ, ಕರಡಿ ಕುಣಿತ, ಸಿಂಹನೃತ್ಯ. ಹೂವಿನ ಮಕ್ಕಳ ಕುಣಿತ, ಕೋಲಾಟ. ಇವುಗಳಲ್ಲಿ ಡೊಳ್ಳು ಕುಣಿತ, ವೀರಾಗಾಸೆ ಕುಣಿತ, ಬೀಸುಕಂಸಾಳೆ, ಸೋಮನ ಕುಣಿತ, ಹುತ್ತರಿ ಕುಣಿತ, ಕೋಲಾಟ ವಿಶಿಷ್ಟವಾದವು. ಡೊಳ್ಳು ಕುಣಿತ ಬೀರೇಶ್ವರ ಸಂಪ್ರದಾಯಕ್ಕೆ ಸೇರಿದ ಧಾರ್ಮಿಕನೃತ್ಯ. ಕುರುಬಜನಾಂಗದ ಈ ನೃತ್ಯ ಒಂದು ಗಂಡುಕಲೆ. ಬೃಹದಾಕಾರದ ಡೊಳ್ಳು ವಾದ್ಯಗಳನ್ನು ನಡುವಿಗೆ ಕಟ್ಟಿ ಕೊಂಡು, ಅವನ್ನು ಶಕ್ತಿಮೀರಿ ಬಡಿಯುತ್ತ ವಿವಿಧ ಭಂಗಿಗಳಲ್ಲಿ ನರ್ತಿಸುವ ದೃಶ್ಯ ರೋಮಾಂಚನಕಾರಿಯಾಗಿರುತ್ತದೆ. ನೃತ್ಯದ ಜೊತೆಗೆ ಡೊಳ್ಳಿನ ಪದಗಳ ಗೇಯತೆಯೂ ಕೂಡಿಕೊಂಡು ಒಂದು ವಿಶಿಷ್ಟ ಅನುಭವ ತಂದು ಕೊಡುತ್ತದೆ. ವೀರಗಾಸೆಕುಣಿತ ಶೈವಧಾರ್ಮಿಕ ಪರಂಪರೆಗೆ ಸೇರಿದ ವೀರನೃತ್ಯ. ಚಮಾಳೆ, ಕರಡೆ, ದೋಣು, ತಾಳ, ಓಲಗ-ಈ ವಾದ್ಯಗಳ ಮುನ್ನಲೆಯಲ್ಲಿ ನಡೆಯುವ ಈ ನೃತ್ಯದಲ್ಲಿ ಇಬ್ಬರಿಂದ ಇಪ್ಪತ್ತು ಮೂವತ್ತು ಜನರವರೆಗೆ ಪಾಲ್ಗೊಳ್ಳುತ್ತಾರೆ. ವೀರಗಾಸೆ ಹಾಕುವುವವರನ್ನು ಪುರವಂತರೆಂದು ಕರೆಯುತ್ತಾರೆ. ಇವರೇ ವೀರಭದ್ರಕುಮಾರರು. ಬಿಳೀಯಪಂಚೆಯ ವೀರಗಚ್ಚೆ. ತಲೆಯ ಹಳದಿ ಬಣ್ಣದ ರುಮಾಲು, ಕಾವಿಬಣ್ಣದ ಕಸೆ ಅಂಗಿ, ಕೊರಳಲ್ಲಿ ರುದ್ರಾಕ್ಷಿಸರ, ಹಣೆಗೆ ವಿಭೂತಿ ಕಿವಿಯಲ್ಲಿ ಕುಂಡಲ. ಸೊಂಟಕ್ಕೆ ಸೊಂಟಪಟ್ಟಿ. ಕೈಯಲ್ಲಿ ಬಿಚ್ಚುಗತ್ತಿ, ಕಾಲಲ್ಲಿ ಗೆಜ್ಜೆ -ಇವು ಇವರ ವೇಷಭೂಷಣಗಳು. ಹೃದಯಭೇದಕವಾದ ಚಮಾಳಬಡಿತ, ವೀರಗಾಸೆ ನರ್ತಕ ಹೇಳುವ ಒಡಪು (ಖಡ್ಗಗಳು) ಈ ನೃತ್ಯದ ಪ್ರಧಾನ ಆಕರ್ಷಣೆ, ವೀರಭದ್ರದೇವರ ಪರಾಕ್ರಮದ ವರ್ಣನೆ ಈ ಖಡ್ಗಗಳ ತಿರುಳು.

ಮಹದೇಶ್ವರ ಭಕ್ತನಾದ ದೇವರಗುಡ್ಡರು ಕಂಸಾಳೆ ವಾದ್ಯದೊಂದಿಗೆ ನಡೆಸುವ ಬೀಸುಕಂಸಾಳೆ ನೃತ್ಯ ಕೂಡ ಶೈವಧಾರ್ಮಿಕ ಸಂಪ್ರದಾಯದ ವೀರನೃತ್ಯ. ಈ ನೃತ್ಯದಲ್ಲಿ ದೇವರಗುಡ್ಡರು ಕಂಸಾಳೆ ಬೀಸುತ್ತ, ಹಾರಿ ನಗೆದು ಗತ್ತಿನಿಂದ ನರ್ತಿಸುವರು. ಸೋಮನ ಕುಣಿತ ಕರ್ನಾಟಕ ಮುಖವಾಡ ನೃತ್ಯಗಳಲ್ಲಿ ಬಹುಮುಖ್ಯವಾದುದು. ಬಣ್ಣದ ವಸ್ತ್ರದಲ್ಲಿ ಕಚ್ಚೆಹಾಕಿ, ಕೈಯಲ್ಲಿ ಬೆಳ್ಳಿಬೆತ್ತ ಹಿಡಿದು ಬರಿಮೈಯಲ್ಲಿ ಸೋಮಗಳ (ಕೆಂಚರಾಯ, ಕರಿರಾಯ) ಮುಖವಾಡ ಧರಿಸಿದ ವ್ಯಕ್ತಿಗಳು ತಮ್ಮಡೆ, ಹರೆ, ಡೋಲು, ಮೌರಿಗಳ ಹಿನ್ನೆಲೆಯಲ್ಲಿ ನರ್ತಿಸುವರು. ಹುತ್ತರಿಕುಣಿತ ಕೊಡಗಿನ ವಿಶಿಷ್ಟ ನೃತ್ಯ. ಹುತ್ತರಿ ಹಬ್ಬದ ಸಂದರ್ಭದಲ್ಲಿ ನಡೆಯುವ ಈ ನೃತ್ಯದಲ್ಲಿ ಸಾಂಪ್ರದಾಯಿಕ ಉಡುಪು ಧರಿಸಿ, ಕೈಯಲ್ಲಿ ಕರ್ನಾಟಕದ ಅತ್ಯಂತ ಜನಪ್ರಿಯ ಲೌಕಿಕ ನೃತ್ಯಗಳಲ್ಲಿ ಒಂದು. ಇದರಲ್ಲಿ ಎಂಟರಿಂದ ಇಪ್ಪತ್ತನಾಲ್ಕು ಜನ ಭಾಗವಹಿಸುವವರು ಗಂಡಸರು. ಕಾಲಿಗೆ ಗೆಜ್ಜೆ ಕಟ್ಟಿ ತಲೆಗೆ ರುಮಾಲು ಸುತ್ತಿ, ಕಸೆ ಅಂಗಿ ಹಾಕಿ, ಕೋಲು ಹೊಯ್ಯುತ್ತ ಹಾಡಿನ ಹಿನ್ನೆಲೆಯಲ್ಲಿ ನರ್ತಿಸುವ ರೀತಿ ಮೋಹಕವಾದುದು. ಇದರಲ್ಲಿ ಜಡೆಕೋಲಾಟ, ಸುತ್ತುಕೋಲಾಟ, ಗೆಜ್ಜೆಕೋಲಾಟ ಎಂಬ ಪ್ರಭೇದಗಳೂ ಇವೆ. (ನೋಡಿ- ಜನಪದ-ನೃತ್ಯಗಳು)