ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಧ್ಯ ಶಿಲಾಯುಗ

ಪ್ಲಿಸ್ಟೊಸೀನ್ ಯುಗದ ಅನಂತರ ಪ್ರಾರಂಭವಾದ ಮಧ್ಯಶಿಲಾ ಯುಗದ ಸಂಸ್ಕೃತಿಯ ಅವಶೇಷಗಳು ಇಂಗ್ಲೆಂಡಿನಲ್ಲಿ ಕಂಡುಬಂದು, ಮೂರು ಗುಂಪುಗಳಾಗಿ ವಿಂಗಡವಾಗುತ್ತದೆ. ಸ್ಕಾಂಡಿನೇವಿಯದ ಪ್ರಭಾವಕ್ಕೊಳಗಾದ ಆಗ್ನೇಯ ಭಾಗಗಳಲ್ಲಿ ಚಕಮಕಿಕಲ್ಲಿನ ಕೊಡಲಿ, ಪಕ್ಕಗಳಲ್ಲಿ ಕಲ್ಲಿನ ಹಲ್ಲುಗಳಿಂದ ಸಜ್ಜಿತವಾದ ಮೂಳೆಯ ಮೀನುಭರ್ಜಿಗಳು ಮತ್ತಿತರ ಬೇಟೆಯ ಆಯುಧಗಳನ್ನೊಳಗೊಂಡಿದ್ದ ಸಂಸ್ಕೃತಿ ನಾರ್ಥಂಬರ್ಲೆಂಡಿನಿಂದ ಈಸ್ಟ್ ಆಂಗ್ಲಿಯದವರೆಗೂ ಹಬ್ಬಿದ್ದಿತು. ಫ್ರಾನ್ಸ್ ಮತ್ತು ಬೆಲ್ಜಿಯಂ ಸಂಸ್ಕೃತಿಗಳಿಂದ ಪ್ರಭಾವಿತವಾಗಿದ್ದ ಎರಡನೆಯ ಗುಂಪಿನ ಸಂಸ್ಕೃತಿಗಳು ಆಗ್ನೇಯ ಇಂಗ್ಲೆಂಡಿನಿಂದ ವೇಲ್ಸ್ವರೆಗೂ ಹಬ್ಬಿದ್ದುವು. ಇವರ ಸಂಸ್ಕೃತಿಗೆ ಟಾರ್ಡೆನಾಸಿಯನ್ ಸಂಸ್ಕೃತಿಯೆಂದು ಹೆಸರಿಸಲಾಗಿದೆ (ಟಾರ್ಡೆನಾನೀಯನ್). ಮೂರನೆಯ ಗುಂಪಿನ ಓಬಾನಿಯನ್ ಸಂಸ್ಕೃತಿ ಫ್ರಾನ್ಸಿನ ಅಜೀಲಿಯನ್ ಸಂಸ್ಕೃತಿಯ ಗುಂಪಿಗೆ ಸೇರಿದ್ದು ಸ್ಕಾಟ್ಲೆಂಡ್ ಮುಖಾಂತರ ಬ್ರಿಟನ್ನಿಗೆ ಬಂದು ಅದರ ಪ್ರಭಾವಗಳು ಉತ್ತರ ಭಾಗಗಳಲ್ಲಿ ಕಂಡುಬರುತ್ತವೆ.

ಈ ಮಧ್ಯಯುಗೀನ ಸಂಸ್ಕೃತಿಯ ಜನ ಬೇಟೆ ಮತ್ತು ಆಹಾರ ಸಂಗ್ರಹಣೆಯಿಂದ ಜೀವನ ನಡೆಸುತ್ತಿದ್ದರು. ಪೂರ್ವ ಶಿಲಾಯುಗಕಾಲದ ಇಲ್ಲಿನ ಜನರು ಹೊರಗಿನಿಂದ ಬಂದ ಜನ ಮತ್ತು ಸಂಸ್ಕೃತಿಗಳನ್ನು ಅಳವಡಿಸಿಕೊಂಡರು. ಮಧ್ಯ ಶಿಲಾಯುಗದ ಉತ್ತರಾರ್ಧದಲ್ಲಿ ಡೆನ್ಮಾರ್ಕ್ ಮುಂತಾದ ಕಾಡುಪ್ರದೇಶಗಳಿಂದ ಬಂದ ಜನ ನಯ ಮಾಡಿದ ಅಂಚುಗಳುಳ್ಳ ಕಲ್ಲಿನ ಕೊಡಲಿಗಳನ್ನು ಮೂಳೆ ಅಥವಾ ಕೊಂಬಿನ ಹಿಡಿಗಳಲ್ಲಿ ಸಿಕ್ಕಿಸಿ ಕಾಡುಗಳನ್ನು ಕಡಿಯಲು ಉಪಯೋಗಿಸಲಾರಂಭಿಸಿದರು. ಈ ಜನ ಸಸ್ಸಿಕ್ಸ್, ಯಾರ್ಕ್ಷೈರ್ ಪ್ರದೇಶಗಳಲ್ಲಿ ನೆಲೆಸಿದರು.