ಮಹಾಭಾರತ ಪ್ರಪಂಚದ ಶ್ರೇಷ್ಠತಮ ಗ್ರಂಥಗಳಲ್ಲಿ ಒಂದೆನಿಸಿದೆ. ಹಲವು ದೃಷ್ಟಿಗಳಿಂದ ಅದ್ವಿತೀಯ ಎನಿಸಿ ಮಹತ್ತು ಬೃಹತ್ತು ಎರಡೂ ದೃಷ್ಟಿಗಳಿಂದ ಅಗ್ರಪಂಕ್ತಿಗೆ ಸೇರಿದ ಭಾರತೀಯ ಮಹಾನ್ ಕೃತಿ ಹಾಗೂ ಐತಿಹಾಸಿಕ ಮಹಾಕಾವ್ಯ. ಇದರ ಪಠಣ, ಶ್ರವಣ ಮತ್ತು ಮನನ ಸರ್ವವಿಧದಿಂದಲೂ ಕಲ್ಯಾಣಕಾರಕವಾದುದು. ಭಾರತೀಯ ಸಾಹಿತ್ಯದ ಸರ್ವಶ್ರೇಷ್ಠವಾದ ಭಗವದ್ಗೀತೆ ಇದರ ಒಂದು ಭಾಗ. ಮಹಾಭಾರತವನ್ನು ಅವಲಂಬಿಸಿಯೇ ಅರ್ವಾಚೀನ ಕವಿಗಳು ಕಾವ್ಯ, ನಾಟಕ, ಗದ್ಯ, ಪದ್ಯ, ಚಂಪೂ, ಕಥಾ, ಆಖ್ಯಾಯಿಕಾ ಇತ್ಯಾದಿ ನಾನಾವಿಧವಾದ ಸಾಹಿತ್ಯ ಸೃಷ್ಟಿ ಮಾಡಿದ್ದಾರೆ. ಜಾವ, ಸುಮಾತ್ರ ದೇಶಗಳ ಸಾಹಿತ್ಯದಲ್ಲಿಯೂ ಮಹಾಭಾರತದವಿದ್ದು ಅಲ್ಲಿಯ ಜನ ಇದರ ಅಧ್ಯಯನ ಮಾಡುತ್ತಾರೆ. ಪ್ರಾಚೀನ ಕಾಲದ ರಾಜನೀತಿ ಪದ್ಧತಿ ಇದರಿಂದ ವ್ಯಕ್ತವಾಗುತ್ತದೆ. ಮಹಾಭಾರತದ ಶಾಂತಿ ಪರ್ವ ಜೀವನದ ಅನೇಕ ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದಾಗಿದೆ. ವಿದುರ ನೀತಿಯಲ್ಲಿ ಆಚಾರ ಮತ್ತು ಲೋಕವ್ಯವಹಾರ ನಿಯಮಗಳ ಸುಂದರ ನಿರೂಪಣೆ ಇದೆ. ಇದೂ ಇದರ ಒಂದು ಭಾಗವೇ ಆಗಿದೆ. ಹೀಗೆ ಐತಿಹಾಸಿಕ ಧಾರ್ಮಿಕ ರಾಜನೀತಿ ಇತ್ಯಾದಿ ಅನೇಕ ದೃಷ್ಟಿಗಳಿಂದ ಇದೊಂದು ಆದರಣೀಯ ಗ್ರಂಥವಾಗಿದೆ.
ಕಥಾವಸ್ತು ಕೌರವ ಪಾಂಡವರ ವೃತ್ತಾಂತವಾದರೂ ಇದು ಕೇವಲ ದಾಯಾದಿಗಳ ಜಗಳದ ಕಥೆ ಅಥವಾ ವೀರಗಥಾ ಕಾವ್ಯವಲ್ಲ. ಎಲ್ಲ ವಿದ್ಯೆಗಳ ಸಾರ ಸಂಗ್ರಹ; ತತ್ತ್ವ, ನೀತಿ, ದರ್ಶನ, ವಿಜ್ಞಾನ, ಸಮಾಜಶಾಸ್ತ್ರ, ಭೂಗೋಳ, ಚರಿತ್ರೆ, ಕಥೆ ಎಲ್ಲವನ್ನೂ ಒಳಗೊಂಡಿರುವ ಪ್ರಾಚೀನ ಭಾರತದ ವಿಶ್ವಕೋಶ ಎನಿಸಿದೆ. ಜೀವನದ ಮಹಾಮೌಲ್ಯಗಳನ್ನೂ ಆವುಗಳ ಸಾಧನೆ ಸಿದ್ಧಿಗಳನ್ನೂ ಸಮಗ್ರವಾಗಿ ಮತ್ತು ಸುಂದರವಾಗಿ ಚಿತ್ರಿಸುವ ಶ್ರೇಷ್ಠ ಗ್ರಂಥ. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳ ಬಗೆಗೆ ಇಲ್ಲಿ ಏನಿದೆಯೋ ಅದು ಬೇರೆಡೆಯಲ್ಲಿದೆ. ಇಲ್ಲಿ ಏನಿಲ್ಲವೋ ಅದು ಬೇರೆ ಎಲ್ಲಿಯೂ ಇಲ್ಲ (ಯದಿಹಾಸ್ತಿ ತದನ್ಯತ್ರ ಯನ್ನೇಹಾಸಿತ ನ ತತ್ ಕ್ವಚಿತ್) ಎಂದು ಸಹಸ್ರಾರು ವರ್ಷಗಳ ಹಿಂದೆ ಇದರ ಬಗ್ಗೆ ಹೇಳಿರುವ ಪ್ರಶಸ್ತಿ ವಾಕ್ಯ ಇಂದಿಗೂ ಸತ್ಯವಾಗಿದೆ. ಪಾಂಡವರ ಮತ್ತು ಅವರು ಪ್ರತಿನಿಧಿಸುವ ಧರ್ಮದ ವಿಜಯವನ್ನು ಪ್ರತಿಪಾದಿಸುವುದರಿಂದ ಇದು ಜಯ ಎಂದು ಹೆಸರು ಪಡೆಯಿತು. 'ಜಯನಾಮೇತಿ ಹಾಸೋ ಯಂ' ತತೊ ಜಿಯಮುದೀರಯೇತ್". ಭರತವಂಶದವರ ಇತಿವೃತ್ತವನ್ನು ನಿರೂಪಿಸುವುದರಿಂದ ಭಾರತ ಎಂಬ ಆಭಿಧಾನಕ್ಕೆ ವಿಷಯವಾಯಿತು. ಉಪಾಖ್ಯಾನ ಮುಂತಾದವುಗಳೊಡನೆಯೂ ವಿದ್ಯಾಸ್ಥಾನಗಳೊಡನೆಯೂ ಹೆಮ್ಮರವಾಗಿ ಬೆಳೆದು ಮಹತ್ತ್ವವನ್ನೂ ಗೌರವವನ್ನೂ ಪಡೆದುದರಿಂದ ಇದು ಮಹಾಭಾರತವೆಂದು ಪ್ರಸಿದ್ಧವಾಯಿತು. ಮಹತ್ತ್ವಾತ್ ಭಾರವತ್ತ್ವಾಚ್ಚ ಮಹಾಭಾರತ ಮುಚ್ಯತೆ.
ಇದು ವೇದದಂತೆಯೇ ಋಷಿಗಳ ಒಳದರ್ಶನದ ವಿಕಾಸವಾಗಿದೆ. ಎರಡಕ್ಕೂ ಒಂದೇ ತಾತ್ಪರ್ಯ. ವೇದದಂತೆಯೇ ಮತಸತ್ಯಗಳ ಆದರ್ಶವನ್ನು ಎತ್ತಿ ಹಿಡಿಯುತ್ತದೆ. ದೇವತೆಗಳನ್ನೂ ಧರ್ಮವನ್ನೂ ಬ್ರಹ್ಮವನ್ನೂ ಪ್ರತಿಪಾದಿಸುತ್ತದೆ. ಕರ್ಮಕಾಂಡ, ಉಪಾಸನಾಕಾಂಡ, ಜ್ಞಾನಕಾಂಡಗಳಿಂದ ಸಂಪನ್ನವಾಗಿದೆ. ಅನೇಕ ಕಡೆಗಳಲ್ಲಿ ವೈದಿಕವಾಕ್ಯಗಳಿಂದಲೂ ಅವುಗಳ ಭಾವಾನುವಾದಗಳಿಂದಲೂ ವೈದಿಕ ಉಪಾಖ್ಯಾನಗಳಿಂದಲೂ ಭೂಷಿತವಾಗಿದೆ. ಆದ್ದರಿಂದ ಇದು ಐದನೆಯ ವೇದ ಎಂದು ಸಂಭಾವಿತವಾಯಿತು. ವೇದಕ್ಕಿಂತಲೂ ಸುಲಭವಾಗಿ ಮತ್ತು ರಮಣೀಯವಾಗಿ ಮೇಲಿನ ವಿಷಯಗಳನ್ನು ಪ್ರತಿಪಾದಿಸುತ್ತದೆ ಮತ್ತು ಸರ್ವರಿಗೂ ಸೇವ್ಯವಾಗಿದೆ.
ಈ ಕಾರಣದಿಂದ ವೇದಕ್ಕಿಂತಲೂ ಒಂದು ಕೈ ಮೇಲು ಎಂಬ ಪ್ರಶಸ್ತಿಯನ್ನೂ ಪಡೆಯಿತು. (ಚುತುಭ್ರ್ಯಃ ಸರಹಸ್ಯೇಭ್ಯೋ ವೇದೇಭ್ಯೋಹ್ಯದಿಕಂ ಯದಾ). ಶ್ರುತಿ ಮೂಲವನ್ನು ಸ್ಮರಿಸಿ ಧರ್ಮದ ಲಕ್ಪಣ, ಪ್ರಬೇಧ, ಅಧಿಕಾರಿ ಅನುಷ್ಠಾನ, ಪ್ರಯೋಜನ ಮುಂತಾದವನ್ನು ವಿಸ್ತರಿಸುವುದರಿಂದ ಸ್ಮøತಿ ಎಂದು ಮನ್ನಣೆ ಪಡೆಯಿತು. ಸೃಷ್ಠಿ, ಪ್ರಳಯ, ದೇವ-ದೈತ್ಯವರ್ಗ, ಋಷಿ-ರಾಜವರ್ಗ ಮುಂತಾದವುಗಳ ವಂಶವೃತ್ತಗಳನ್ನೂ ಪುರಾತನ ಕಥೆಗಳನ್ನೂ ತಿಳಿಯಾದ ಭಾಷೆಯಲ್ಲಿ ಹೇಳಿ ವೇದಾರ್ಥವನ್ನು ವಿಸ್ತರಿಸುವುದರಿಂದ ಪುರಾಣ ಸಂಜ್ಞೆಯನ್ನೂ ಪಡೆಯಿತು. ವ್ಯಕ್ತಿ ಮತ್ತು ಸಮಾಜ ಸಂಸ್ಕøತಿಗಳ ಚರಿತ್ರೆ, ಕಥೆ, ಧರ್ಮಶಾಸ್ತ್ರ ಮತ್ತು ಅರ್ಥಶಾಸ್ತ್ರಗಳನ್ನೂ ಒಳಗೊಂಡಿರುವುದರಿಂದ ಇತಿಹಾಸ ಎಂದೂ ಕರೆಯಲ್ಪಟ್ಟಿದೆ. ಪುರಾನಂ ಇತಿ ವೃತ್ತಂ ಆಖ್ಯಾಯಿಕಾ ಉದಾಹರಣಂ ಧರ್ಮಶಾಸ್ತ್ರಂ ಅರ್ಥಶಾಸ್ತ್ರಂ ಚೇತಿ ಇತಿಹಾಸಃ :ಇತಿಹಾಸಮಿಮಂಚಕ್ರೇಪುಣ್ಯಂ ಸತ್ಯವತೀ ಸುತಃ.
ಇದರ ಕಾವ್ಯಗುಣಸಂಪತ್ತೂ ಪುಷ್ಕಳವಾಗಿದೆ. ಇದರಲ್ಲಿ ಉತ್ತಮಕಾವ್ಯಕ್ಕೆ ಅವಶ್ಯಕವಾದ ರಸಪ್ರವಾಹ, ಧ್ವನಿ, ಗುಣ, ರೀತಿ, ಅಲಂಕಾರ, ಛಂದಸ್ಸು, ಪಾತ್ರಗಳ ವೈವಿಧ್ಯ, ವೈಚಿತ್ರ್ಯ, ವರ್ಣನೆ, ವಿಶ್ಲೇಷಣೆ, ಜೀವನ ವಿಮರ್ಶೆ ಎಲ್ಲವೂ ತುಂಬಿವೆ. ಆದರೆ ಯಾವುದೂ ಕೃತಕವಾಗಿಲ್ಲ. ಯಾವುದನ್ನು ಸೇವಿಸಿದರೆ ಎಲ್ಲ ಪುರುಷಾರ್ಥಗಳ ಸಿದ್ಧಿಯುಂಟಾಗುತ್ತದೆಯೋ ಕಲೆಗಳಲ್ಲಿ ವಿಚಕ್ಷಣತೆಯುಂಟಾಗುತ್ತದೆಯೋ ಕೀರ್ತಿ ಪ್ರೀತಿಗಳುಂಟಾಗುತ್ತವೆಯೋ ಆದು ಉತ್ತಮ ಕಾವ್ಯ- ಎಂಬ ಭಾಮಹನ ಕಾವ್ಯ ಲಕ್ಷಣಕ್ಕೆ ಹೊಂದಿಕೊಳ್ಳುವ ಕಾವ್ಯವಾಗಿದೆ. ಕೃತಂ ಮಯೇದಂ ಭಗವನ್ ಕಾವ್ಯಂ ಪರಮಪೂಜಿತಂ.
ದೇವತೆಗಳು ದಾನವರು, ಶೂರರು, ವೀರರು, ಸಾಧುಸಾಧ್ವಿಯರು, ಋಷಿಮುನಿಗಳು, ಯೋಗಿಗಳು, ತ್ಯಾಗಿಗಳು, ಭೋಗಿಗಳು, ಖಳರು, ಪಶುಪ್ರಾಣಿಗಳು ಮುಂತಾದ ಎಲ್ಲ ವರ್ಗಗಳ ಕಥೆಗಳಿಗೂ ಗಣಿಯಾಗಿದೆ. ನಾನಾ ನೀತಿಕಥೆಗಳಿಗೆ ಆಕರವಾಗಿದೆ. ಶಕುಂತಲೆ, ಸಾವಿತ್ರಿ, ನಳ, ಸುಕನ್ಯೆ ಮುಂತಾದವರ ಕಥೆಗಳು ರಮಣೀಯತೆಯ ಎಲ್ಲೆಯಾಗಿದೆ. ಭಾಷ, ಕಾಳಿದಾಸ, ಭಟ್ಟನಾರಾಯಣ ಮುಂತಾದ ನಾಟಕಕಾರರ ಭಾರವಿ. ಮಾಗ, ಶ್ರೀಹರ್ಷ, ಪಂಪ, ಕುಮಾರವ್ಯಾಸ ಮುಂತಾದ ಮಹಾಕಾವ್ಯಕಾರರ ಮತ್ತು ತ್ರಿವಿಕ್ರಮಭಟ್ಟ, ಅನಂತಭಟ್ಟ ಮುಂತಾದ ಚಂಪೂಕಾರರ ಭವ್ಯಕೃತಿಗಳು ಪಂಚತಂತ್ರ, ಹಿತೋಪದೇಶ ಇತ್ಯಾದಿ ನೀತಿಗ್ರಂಥಗಳು ಈ ಕಾವ್ಯಕ್ಕೆ ಋಣಿಯಾಗಿದೆ. ಇತಿಹಾಸೋತ್ತಮಾದಸ್ಮಾತ್ ಜಾಯಂತೇ ಕಾವ್ಯ ಬುದ್ಧಯಃ ನಾನಾ ಪ್ರಸಂಗಗಳಲ್ಲಿ ವಿದುರ. ನಾರದ, ಶ್ರೀಕೃಷ್ಣ, ಭೀಷ್ಮ ಮುಂತಾದ ಮೇಧಾವಿಗಳ ಉಪದೇಶದ ಮೂಲಕ ಅರ್ಥಸಂಗ್ರಹ ಮತ್ತು ವಿತರಣೆಗಳನ್ನು ಹೃದಯಂಗಮವಾಗಿ ತಿಳಿಸುವ ಅರ್ಥಶಾಸ್ತ್ರವೂ ಆಗಿದೆ. ಭಗವದ್ಗೀತೆ, ಅನುಗೀತೆ, ಸನತ್ಸುಜಾತೀಯ, ಸಹಸ್ರನಾಮ, ಸ್ತವರಾಜ ಮುಂತಾದ ಆಧ್ಯಾತ್ಮ ಪ್ರಕರಣಗಳ ಮೂಲಕ ಮತ್ತು ಮೋಕ್ಷಧರ್ಮಪರ್ವವೆಂಬ ಒಂದು ದೊಡ್ಡ ಉಪಪರ್ವದ ಮೂಲಕ ಮೋಕ್ಷವನ್ನು ಪ್ರತಿಪಾದಿಸುವ ಗ್ರಂಥವಾಗಿದೆ. ಎಲ್ಲ ವರ್ಗಗಳ ಜನರಿಗೂ ಸಂತೃಪ್ತಿ ಉಂಟುಮಾಡುವ ಸರ್ವಭೋಗ್ಯವಾದ ಕೃತಿ, ಕುಮಾರವ್ಯಾಸ ಹೇಳುವಂತೆ ಅರಸುಗಳಿಗೆ ವೀರ, ದ್ವಿಜರಿಗೆ ಪರಮವೇದದ ಸಾರ, ಯೋಗೀಶ್ವರರ ತತ್ತ್ವ ವಿಚಾರ, ಮಂತ್ರಿಜನಕ್ಕೆ ಬುದ್ಧಿಗುಣ. ವಿರಹಿಗಳ ಶೃಂಗಾರ, ವಿದ್ಯಾಪರಿಣತರ ಅಲಂಕಾರ ಮತ್ತು ಕಾವ್ಯಗಳ ಗುರು.
ಲೋಕಕ್ಕೆ ತತ್ತ್ವ, ಹಿತ, ಪುರುಷಾರ್ಥಗಳನ್ನು ಉಪದೇಶಿಸಲು ಪ್ರಭುಸಂಮಿತ, ಮಿತ್ರಸಂಮಿತ ಮತ್ತು ಕಾಂತಾಸಂಮಿತ ಎಂಬ ಮೂರು ಪ್ರಕಾರಗಳುಂಟು. ಇದು ಶ್ರೇಷ್ಠವಾದ ಶ್ರುತಿಸ್ಮøತಿ, ಪುರಾಣೇತಿಹಾಸ ಮತ್ತು ಕಾವ್ಯ ಆಗಿರುವುದರಿಂದ ಈ ಮೂರು ರೀತಿಗಳಿಂದಲೂ ಲೋಕಕ್ಕೆ ಶ್ರೇಯಸ್ಸನ್ನು ಉಪದೇಶಿಸುವ ಅಸಾಧಾರಣ ಶಕ್ತಿಯುಳ್ಳ ಗ್ರಂಥ.
ಈ ಬೃಹತ್ ಗ್ರಂಥ ಹದಿನೆಂಟು ಪರ್ವ, 2100 ಅಧ್ಯಾಯ ಮತ್ತು ಒಂದು ಲಕ್ಷ ಶ್ಲೋಕಗಳ ಹರಹು ಪಡೆದಿದೆ. ಹನ್ನೆರಡು ಸಾವಿರ ಶ್ಲೋಕಗಳುಳ್ಳ ಹರಿವಂಶ ಇದರ ಅನುಬಂಧ ಎನಿಸಿದೆ. ಇದರ ಉಪಪರ್ವಗಳೇ ದೊಡ್ಡ ಗ್ರಂಥವಾಗುವ ಪ್ರಮಾಣದಲ್ಲಿವೆ. ಪರ್ವಗಳಲ್ಲಿ ಅತಿದೊಡ್ಡದು ಶಾಂತಿಪರ್ವ. ಅತಿ ಚಿಕ್ಕದು ಸ್ವರ್ಗಾರೋಹಣ ಪರ್ವ.
ಇದರ ಹದಿನೆಂಟು ಪರ್ವಗಳ ವಿಷಯವನ್ನು ಹೀಗೆ ಸಂಕ್ಷೇಪಿಸಬಹುದು :
1. ಆದಿಪರ್ವ : ಪಾಂಡವ ಕೌರವರ ಮತ್ತು ಅವರ ಪೂರ್ವಜರ ಜನನ, ಬಾಲ್ಯ, ವಿದ್ಯಾಭ್ಯಾಸ, ದುರ್ಯೋಧನನ ದ್ವೇಷ, ಪಾಂಡವರು ಅರಗಿನ ಮನೆಯಿಂದ ಬಿಡುಗಡೆ, ಹೊಂದಿದುದು, ದ್ರೌಪದೀಪರಿಣರು, ರಾಜ್ಯಲಾಭ, ಅರ್ಜುನನ ತೀರ್ಥಯಾತ್ರೆ, ಸುಭದ್ರಾವಿವಾಹ, ಖಾಂಡವ ದಹನ.
2. ಸಭಾಪರ್ವ : ಮಯನಿರ್ಮಿತ ಸಭೆಯಲ್ಲಿ ಧರ್ಮರಾಜನಿಂದ ರಾಜಸೂಯ ಯಜ್ಞ, ಪಾಂಡವರ ದಿಗ್ವಿಜಯ, ಜರಾಸಂಧವಧೆ, ಯಜ್ಞದಲ್ಲಿ ದಂಗೆಯೆದ್ದ ಶಿಶುಪಾಲನ ವಧೆ. ಜೂಜಿಗಾಗಿ ಯುಧಿಷ್ಠರನಿಗೆ ಕೌರವರಿಂದ ಆಹ್ವಾನ, ಧರ್ಮರಾಜನ ಪರಾಜಯ, ಸಭೆಯಲ್ಲಿ ದ್ರೌಪದಿಗೆ ಅಪಮಾನ, ಕೃಷ್ಣನಿಂದ ಅವಳ ಮಾನಸಂರಕ್ಷಣೆ, ರಾಜ್ಯವನ್ನು ಹಿಂದಕ್ಕೆ ಪಡೆದು ಮತ್ತೆ ಜೂಜಿನ ಆಹ್ವಾನವನ್ನು ಸ್ವೀಕರಿಸಿ ಧರ್ಮರಾಜ ಎಲ್ಲವನ್ನೂ ಸೋತದ್ದು, ಪಾಂಡವ ವನವಾಸ.
3. ವನಪರ್ವ : ಕಿರಾತವೇಷಧಾರಿ ಶಿವನನ್ನು ಮೆಚ್ಚಿಸಿ ಅರ್ಜುನ ಪಾಶುಪತಾಸ್ತ್ರ ಪಡೆದದ್ದು, ಸ್ವರ್ಗಕ್ಕೆ ಹೋಗಿ ಇಂದ್ರನಿಂದ ಸತ್ಕಾರ ಪಡೆದದ್ದು, ಯುಧಿಷ್ಠರನ ತೀರ್ಥಯಾತ್ರೆ, ಅರ್ಜುನ ಹಿಂತಿರುಗಿದ್ದು, ಅಜಗರರೂಪಿ ನಹುಷನಿಂದ ಭೀಮನನ್ನು ಧರ್ಮರಾಜ ಬಿಡಿಸಿದ್ದು, ಗಂಧರ್ವರ ದೆಸೆಯಿಂದ ದುರ್ಯೋಧನನ್ನು ಬಿಡಿಸಿದ್ದು, ಯಕ್ಷಪ್ರಶ್ನೆಗಳಿಗೆ ಧರ್ಮರಾಜ ಸಮಾಧಾನಕರ ಉತ್ತರಕೊಟ್ಟು ತಮ್ಮಂದಿರನ್ನು ಬದುಕಿಸಿದ್ದು.
4. ವಿರಾಟಪರ್ವ : ವಿರಾಟರಾಜನ ಆಶ್ರಯದಲ್ಲಿ ದ್ರೌಪದೀಸಹಿತ ಪಾಂಡವರ ಅಜ್ಞಾತವಾಸ, ದ್ರೌಪದಿಯನ್ನು ಕೆಣಕಿದ ಕೀಚನಕ ಸಂಹಾರ, ಕೌರವರಿಂದ ವಿರಾಟನ ಗೋಗ್ರಹಣ, ಪಾಂಡವರಿಂದ ಕೌರವಸೇನೆಯ ಪರಾಭವ, ವಿರಾಟನಿಗೆ ಪಾಂಡವರ ನಿಜರೂಪದ ಪರಿಚತ, ಕೃತಜ್ಞತೆ, ಉತ್ತರಾಭಿಮನ್ಯು ವಿವಾಹ.
5. ಉದ್ಯೋಗಪರ್ವ : ಉಭಯ ಪಕ್ಷಗಳಿಂದ ಸೇನಾಸಂಗ್ರಹ, ಪಾಂಡವದೂತನಾಗಿ ಹಸ್ತಿನಾವತಿಯಲ್ಲಿ ಕೃಷ್ಣ, ಸಭೆಯಲ್ಲಿ ಸಂಧಿಪ್ರಸ್ತಾಪ, ದುರ್ಯೋಧನನ ಹಠ ಮತ್ತು ಕೃಷ್ಣನನ್ನು ಸೆರೆಹಿಡಿಯಲು ವಿಫಲ ಪ್ರಯತ್ನ, ಪಾಂಡವ ಪಕ್ಷಕ್ಕೆ ಸೇರಲು ಕೃಷ್ಣ-ಕುಂತಿ ಇವರಿಂದ ಕರ್ಣನಿಗೆ ಸಲಹೆ, ಕರ್ಣನ ಅಚಲ ಸ್ವಾಮಿನಿಷ್ಠೆ.
6. ಭೀಷ್ಮಪರ್ವ : ಸೇನಾ ಸನ್ನಾಹ, ಧೃಷ್ಟದ್ಯುಮ್ನ ಮತ್ತು ಭೀಷ್ಮರ ಸೇನಾಪತ್ಯ, ಸ್ನೇಹವೈರಾಗ್ಯ ತೋರಿದ ಅರ್ಜುನನಿಗೆ ಕೃಷ್ಣನ ಗೀತೋಪದೇಶ, ಯುದ್ಧದಲ್ಲಿ ಭೀಷ್ಮನ ಭೀಷ್ಮಪರಾಕ್ರಮ, ಭೀಷ್ಮ ತನ್ನ ವಧೋಪಾಯವನ್ನು ತಾನೇ ತಿಳಿಸಿದ್ದು, ಶಿಖಂಡಿಯನ್ನು ಮುಂದಿಟ್ಟುಕೊಂಡು ಭೀಷ್ಮನ ಮೇಲೆ ಅರ್ಜುನ ಬಾಣದ ಮಳೆ ಕರೆದದ್ದು, ಭೀಷ್ಮರ ಶರಶಯ್ಯೆ.
7. ದ್ರೋಣಪರ್ವ : ಕೌರವ ಸೇನಾಪತಿಯಾಗಿ ದ್ರೋಣರ ರುದ್ರಪರಾಕ್ರಮ, ಅರ್ಜುನನ ಅನುಪಸ್ಥತಿಯಲ್ಲಿ ಅಭಿಮನ್ಯುವಿನ ವಧೆ, ಅರ್ಜುನನಿಂದ ಸೈಂಧವ ಸಂಹಾರ ಪ್ರತಿಜ್ಞೆ, ಕೃಷ್ಣನ ಯೋಗಬಲದಿಂದ ಪ್ರತಿಜ್ಞೆ ನೆರವೇರಿದ್ದು ಇಂದ್ರದತ್ತ ಶಕ್ತಿಯಿಂದ ಘಟೋತ್ಕಚನನ್ನು ಕರ್ಣ ಸಂಹರಿಸಿದ್ದು, ದ್ರೋಣರ ಘೋರಸಂಕಲ್ಪ ಮತ್ತು ಶಸ್ತ್ರಸನ್ಯಾಸ, ಯೋಗಸಮಾಧಿಯಲ್ಲಿದ್ದ ಅವರನ್ನು ಧೃಷ್ಟದ್ಯುಮ್ನ ಸಂಹರಿಸಿದ್ದು, ಅಶ್ವತ್ಥಾಮನ ನಾರಾಯಣಾಸ್ತ್ರದಿಂದ ಪಾಂಡವ ಸೇನೆಯನ್ನು ಕೃಷ್ಣ ಸಂರಕ್ಷಿಸಿದ್ದು.
8. ಕರ್ಣಪರ್ವ: ಭೀಮನಿಂದ ದುಶ್ಯಾಸನನ ವಧೆ. ಸೇನಾಪತಿ ಕರ್ಣನಿಗೆ ಶಲ್ಯನ ಸಾರಥ್ಯ, ಅರ್ಜುನನ ಕರ್ಣರ ಮುಖಾಮುಖಿ, ಆರ್ಜುನನನ್ನು ಸರ್ಪಾಸ್ತ್ರದಿಂದ ಕೃಷ್ಣ ಸಂರಕ್ಷಿಸಿದ್ದು, ಶಾಪಹತನಾಗಿದ್ದ ಕರ್ಣನನ್ನು ಅರ್ಜುನ ಸಂಹರಿಸಿದ್ದು
9. ಶಲ್ಯಪರ್ವ : ಧರ್ಮರಾಜನಿಂದ ಶಲ್ಯವಧೆ, ಮಡುವಿನಲ್ಲಿ ಅಡಗಿಕೊಂಡಿದ್ದ ದುರ್ಯೋಧನನನ್ನು ಹೊರಕ್ಕೆ ಬರಮಾಡಿದ್ದು, ಬಲರಾಮನ ಸಾನಿಧ್ಯದಲ್ಲಿ ಭೀಮದುರ್ಯೋಧನರ ಗದಾಯುದ್ಧ, ಭೀಮಸೇನ ದುರ್ಯೋಧನನ ತೊಡೆಗೆ ಬಡಿದು ಬೀಳಿಸಿದ್ದು. ಕುಪಿತನಾದ ಬಲರಾಮನಿಗೆ ಕೃಷ್ಣನ ಸಮಾಧಾನ. ದುರ್ಯೋಧನನ ದುರವಸ್ಥೆ ಕಂಡು ಅಶ್ವತ್ಥಾಮನ ವಿಷಾದ.
10. ಸೌಪ್ತಿಕ ಪರ್ವ : ಅಶ್ವತ್ಥಾಮನ ಭೀಕರ ಪ್ರತಿಜ್ಞೆ, ಅಶ್ಥತ್ಥಾಮ ನಿಶಿಯಲ್ಲಿ ನಿದ್ರಿಸುತ್ತಿದ್ದ ಧೃಷ್ಟದ್ಯುಮ್ನ ಮತ್ತು ಪಾಂಡವಪುತ್ರರನ್ನು ಕೊಲೆಮಾಡಿದ್ದು, ಅದನ್ನು ಕೇಳಿ ಸಂತೋಷದಿಂದ ದುರ್ಯೋಧನನ ಪ್ರಾಣತ್ಯಾಗ, ದ್ರೌಪದಿಯ ಮತ್ತು ಪಾಂಡವರ ಶೋಕಕ್ರೋದಗಳು, ಅಶ್ವತ್ಥಾಮನ ತೇಜೋಭಂಗ.
11. ಸ್ತ್ರೀಪರ್ವ : ಸ್ತ್ರೀಯರ ವಿಲಾಪ. ಹತರಾದ ಬಂಧುಗಳಿಗೆ ತರ್ಪಣ ಶ್ರಾದ್ಧಾದಿಗಳು.
12. ಶಾಂತಿಪರ್ವ : ಶೋಕದಲ್ಲಿ ಮುಳುಗಿದ ಧರ್ಮರಾಜನಿಗೆ ಕರ್ತವ್ಯದ ಉಪದೇಶ, ಧರ್ಮರಾಜನ ಪಟ್ಟಾಭಿಷೇಕ, ಭೀಷ್ಮನಿಂದ ಧರ್ಮೊಪದೇಶ ಪಡೆಯುವಂತೆ ಧರ್ಮರಾಜನಿಗೆ ಕೃಷ್ಣನ ಆದೇಶ, ಭೀಷ್ಮನಿಂದ ರಾಜಧರ್ಮಾದಿ ಸಕಲಧರ್ಮಗಳ ಉಪದೇಶ.
13. ಅನುಶಾಸನಿಕಪರ್ವ: ದಾನಧರ್ಮದ ವಿಸ್ತಾರ ಉಪದೇಶ, ಕೃಷ್ಣನ ಅನುಮತಿ ಪಡೆದು ಭೀಷ್ಮ ಸ್ವರ್ಗಸ್ಥನಾಗುವುದು, ಭೀಷ್ಮನ ಅಂತಿಮ ಸಂಸ್ಕಾರ.
14. ಅಶ್ವಮೇಧಿಕಪರ್ವ : ಯಜ್ಞ ಮಾಡಲು ಧರ್ಮರಾಜನಿಗೆ ಪ್ರೇರಣೆ. ಅರ್ಜುನನಿಗೆ ಅನುಗೀತೆಯ ಉಪದೇಶ, ಉತ್ತರೆಯ ಮೃತಶಿಶುವನ್ನು ಕೃಷ್ಣ ರಕ್ಷಿಸಿದ್ದು, ಅರ್ಜುನ ದಿಗ್ವಿಜಯ. ಧರ್ಮರಾಜನಿಂದ ವೈಭವದ ಯಜ್ಞ.
15. ಮೌಸಲಪರ್ವ : ಪಾಂಡವರು ಕಂಡ ಅಪಶಕುನಗಳು, ಯಾದವರ ಯಾದವೀ ಕಲಹ ಮತ್ತು ಶಾಪದ ಒನಕೆಯಿಂದ ಅವರ ಸರ್ವನಾಶ. ಬಲರಾಮ ಕೃಷ್ಣರ ಪರಂಧಾಮ, ಅರ್ಜುನನಿಂದ ಅವರ ಸಂಸ್ಕಾರ. ಮಧ್ಯಮಾರ್ಗದಲ್ಲಿ ದಸ್ಯುಗಳಿಂದ ಅವನ ಪರಾಭವ.
17. ಮಹಾಪ್ರಸ್ಥಾನಪರ್ವ; ಪರೀಕ್ಷಿತನಿಗೆ ಪಟ್ಟಕಟ್ಟಿ ದ್ರೌಪದೀಸಹಿತ ಪಾಂಡವರು ಮಹಾಪ್ರಸ್ಥಾನ ಮಾಡಿದ್ದು, ಧರ್ಮರಾಜನನ್ನು ಬಿಟ್ಟು ಉಳಿದವರು ಮಧ್ಯದಲ್ಲೇ ಸ್ವರ್ಗಸ್ಥರಾದದು, ಧರ್ಮರಾಜನ ಸಶರೀರ ಸ್ವರ್ಗ.
18. ಸ್ವರ್ಗಾರೋಹಣಪರ್ವ: ಧರ್ಮರಾಜನಿಗೆ ನರಕದರ್ಶನ, ಅಲ್ಲಿ ತಮ್ಮಂದಿರ ಕರುಣದ ಕೂಗನ್ನು ಕೇಳಿ ಅಲ್ಲಿಯೇ ಇರಲು ನಿಶ್ಚಯ. ಇಂದ್ರನಿಂದ ಸಮಾಧಾನ, ಧರ್ಮರಾಜ ಮಾನುಷ ದೇಹಬಿಟ್ಟು ದಿವ್ಯದೇಹ ಪಡೆದುದು. ಸ್ವರ್ಗದಲ್ಲಿ ಭೀಮಾದಿಗಳನ್ನು ದೇವರೂಪದಲ್ಲಿ ನೋಡಿದ್ದು, ಎಲ್ಲರೂ ತಮ್ಮ ತಮ್ಮ ಮೂಲ ಸ್ವರೂಪದಲ್ಲಿ ಸೇರಿಕೊಂಡುದು.
ಈ ಬೃಹತ್ ಗ್ರಂಥದಲ್ಲಿ ಕಾಲಕಾಲಕ್ಕೆ ಪ್ರಕ್ಷಿಪ್ತ ಭಾಗಗಳು ಪುಷ್ಕಳವಾಗಿ ಸೇರಿಕೊಂಡಿರುವುದರಿಂದ ಪ್ರಾಮಾಣಿಕ ಭಾಗಗಳನ್ನು ಗುರುತಿಸುವುದು ಕಷ್ಟಸಾಧ್ಯ. ಪಾಠಾಂತರಗಳೂ ಹೇರಳವಾಗಿವೆ. ದಾಕ್ಷಿಣಾತ್ಯ ಮತ್ತು ಔತ್ತರೇಯ ಎಂಬ ಎರಡು ಪಾಠಗಳನ್ನು ಮುಖ್ಯವಾಗಿ ಇಲ್ಲಿ ಗಮನಿಸಬಹುದು. ಇವುಗಳಲ್ಲಿ ಮೊದಲನೆಯದು ಶಾರದಾ, ನೇಪಾಳೀ, ಬಂಗಾಳೀ ಮೈಥಿಲೀ ಅಥವಾ ದೇವನಾಗರೀ ಲಿಪಿಗಳಲ್ಲೂ ಕಂಡುಬರುತ್ತದೆ. ದಕ್ಷಿಣದ ಪಾಠ ಉತ್ತರದ ಪಾಠಕ್ಕಿಂತ ಹೆಚ್ಚು ಕ್ರಮಬದ್ಧವಾಗಿದೆ. ಸ್ಪಷ್ಟವಾಗಿದೆ ಮತ್ತು ದೀರ್ಘವಾಗಿದೆ. ಕಲ್ಕತ್ತ, ಮುಂಬಯಿ, ಕುಂಭಕೋಣಮ್, ವಿವೇಕಾದರ್ಶ (ಹಯವದನಶಾಸ್ತ್ರಿ), ಗೋರಖ್‍ಪುರ್ ಮತ್ತು ಪುಣೆ ಸಂಸ್ಸರಣಗಳು ಮುದ್ರಿತವಾಗಿವೆ. ಪುಣೆಯ ಭಂಡಾರ್‍ಕರ್ ಸಂಶೋಧನ ಸಂಸ್ಥೆ ಲಭ್ಯವಿರುವ ಎಲ್ಲ ಪಾಠಾಂತರ ಸಹಿತ ಸಂಸ್ಕರಣವನ್ನು ಇತ್ತೀಚೆಗೆ ಹೊರತಂದಿದೆ.
ಮಹಾಭಾರತಕ್ಕೆ ಅನೇಕ ವ್ಯಾಖ್ಯಾನಗಳೂ ಟೀಕೆಟಿಪ್ಪಣಿಗಳೂ ಸಾರಾಂಶ ಗ್ರಂಥಗಳೂ ಇವೆ. ಇವುಗಳಲ್ಲಿ ನೀಲಕಂಠ, ಅರ್ಜನಮಿಶ್ರ, ಸರ್ವಜ್ಞ ನಾರಾಯಣ, ಯಜ್ಞ ನಾರಾಯಣ, ವೈಶುಪಾಲನ, ಶ್ರೀನಂದನ, ವಿಮಲದೇವ, ಶ್ರೀಧರಾಚಾರ್ಯ, ಆನಂದತೀರ್ಥ, ವ್ಯಾಸತೀರ್ಥ ಮತ್ತು ಇವರ ಗ್ರಂಥಗಳನ್ನು ಗಮನಿಸಬಹುದು. ಕೂಟಶ್ಲೋಕಗಳನ್ನು ವಿವರಿಸುವ ವ್ಯಾಸ ಕೂಟ ಎಂಬ ಅಜ್ಞಾತ ಕರ್ತೃವಿನ ಗ್ರಂಥವೂ ಇದೆ. ಭಾರತ ಇದ್ದ ವಿವಾದ, ನಾರಾಯಣ ದಾಸರ ಗ್ರಂಥ ಭಾರತ ಯುದ್ಧದ ಕಾಲವನ್ನು ವಿಮರ್ಶಿಸುತ್ತದೆ. ಶುಭ ಚಂದ್ರನ ಬೃಹತ್ ಪಾಂಡವಪುರಾಣ ವಾದಿಚಂದ್ರನ ಪ್ರಭು ಸೂರ್ಯ ಶೃತಿ ಪಾಂಡವ ಚರಿತ ಜೀನಸೇನನ ಜೈನ ಹರಿವಂಶ-ಇವು ಜೈನಧರ್ಮಕ್ಕೆ ಅನುಗುಣವಾದ ಮಹಾಭಾರತ ಗ್ರಂಥಗಳು.
ಸಾಂಪ್ರದಾಯಿಕ ಅಭಿಪ್ರಾಯದಂತೆ ಮಹಾಭಾರತವನ್ನು ರಚಿಸಿದವ ಮಹಾಋಷಿ ಕೃಷ್ಣ ದ್ವೈಪಾಯನ ವ್ಯಾಸ. ಈತ ಬ್ರಹ್ಮ ಋಷಿ ವಸಿಷ್ಠರ ಮರಿಮಗ ಶಕ್ತಿಯ ಮೊಮ್ಮಗ ಸತ್ಯವತಿ-ಪರಾಶರ ಪುತ್ರ. ಶುಕ ಮಹರ್ಷಿಯ ತಂದೆ ಈತ ಬ್ರಹ್ಮ ಸೂತ್ರ ರಚಿಸಿದವ. ಪುರಾಣಕಾರ ಮತ್ತು ವೇದಗಳನ್ನು ವಿಭಾಗಮಾಡಿದವ. ಶ್ಯಾಮಲ ದೇಹಕಾಂತಿಯಿಂದ ಕೂಡಿದ್ದರಿಂದ ಕೃಷ್ಣ ಎಂದು ದ್ವಿಪದದಲ್ಲಿ ಹುಟ್ಟಿದ್ದರಿಂದ ದ್ವೈಪಾಯನನೆಂದೂ ಬದರಿಯಲ್ಲಿ ನೆಲೆಸಿದ್ದರಿಂದ ಬಾದಾರಾಯಣನೆಂದೂ ವೇದಗಳನ್ನು ವಿಭಾಗಮಾಡಿದ್ದರಿಂದ ವೇದವ್ಯಾಸನೆಂದು ಈತನಿಗೆ ಅಭಿದಾನಗಳು. ವ್ಯಾಸ ಎಂಬುದು ಒಂದು ವ್ಯಕ್ತಿ ಹೆಸರಲ್ಲ. ಒಂದು ಆರ್ಷ ಅಧಿಕಾರದ ಹೆಸರು. ಆದ್ದರಿಂದ ವ್ಯಾಸರು ಅನೇಕ ಮಂದಿ ಇರುವರು. ಅವರಲ್ಲಿ ಭಾರತವನ್ನು ರಚಿಸಿದವ ಕೃಷ್ಣ ದ್ವೈಪಾಯನ. ಈತ ಭಾರತದ ಒಂದು ಪತ್ರವೂ ಆಗಿದ್ದಾನೆ. ವಿಚಿತ್ರ ವೀರ್ಯನ ಕ್ಷೇತ್ರದಲ್ಲಿ ಧೃತರಾಷ್ಟ್ರ ಪಾಂಡು ಮತ್ತು ವಿದುರರನ್ನು ಪಡೆದು ಆ ವಂಶದವರಿಗೆ ಅನೇಕ ಸಮಯಗಳಲ್ಲಿ ಸಲಹೆ ಸಹಾಯಗಳನ್ನು ನೀಡಿದಾತ ಮಹಾಭಾರತವನ್ನು ಗಣಪತಿಯಿಂದ ಬರೆಯಿಸಿ ಅದನ್ನು ಸುಖ ವೈಷ್ಣಪಾಯಣ ಮುಂತಾದವರಿಗೆ ಉಪದೇಶಿಸಿದವ.
ವೇದಗಳನ್ನು ವಿಭಾಗ ಮಾಡಿದ ಅನಂತರ ಪಾಂಡವರು ಜೀವಂತರಾಗಿದ್ದಾಗಲೇ ಭಾರತವನ್ನು ರಚಿಸಿದ. ಇದರ ಕಾಲ ಕಲಿಯುಗದ ಪ್ರಾರಂಭಕ್ಕೆ ಕ್ರಿ.ಶ.ಪೂರ್ವ 3102 ಭಾರತ ಯುದ್ಧದ ಕಾಲ ಮಿಲ್ ಫೋರ್ಡ್ ಅವರ ಅಭಿಪ್ರಾಯದಂತೆ ಕ್ರಿ.ಶ.ಪೂರ್ವ 1370 ಬುಚ್‍ನನ್, ಫರ್‍ಗುಸನ್, ಶ್ಯಾಮಶಾಸ್ತ್ರಿ ಮುಂತಾದವರ ಅಭಿಪ್ರಾಯದಂತೆ ಕ್ರಿ.ಶ. ಪೂರ್ವ 13ನೆ ಶತಮಾನ ಬೆಂಟ್ಲೆಯವರ ಅಭಿಪ್ರಾಯದಂತೆ ಯುದಿಷ್ಠರ ಕಾಲ ಕ್ರಿ.ಶ, ಪೂರ್ವ 525. ಸುಮಾರು ಮೂವತ್ತು ವರ್ಷಗಳ ಹಿಂದೆ ಈ ಕಾಲ ನಿರ್ಣಯ ಗ್ರಂಥದ ಆಂತರ್ಯ ಪ್ರಮಾಣಕ್ಕೂ ದೈವಜ್ಞರ ಸಿದ್ಧಾಂತಗಳಿಗೂ ಅನುಗುಣವಾಗಿದೆ.
ಆಧುನಿಕ ವಿಮರ್ಶಕರ ಅಭಿಪ್ರಾಯದಂತೆ ಭಾರತದ ಕರ್ತೃ ಯಾರು ಗೊತ್ತಿಲ್ಲ. ವ್ಯಾಸ ಎಂಬಾತ ಕಲ್ಪಿತ ವ್ಯಕ್ತಿ. ಮಹಾಭಾರತ ಒಬ್ಬ ಕವಿಯ ರಚನೆಯಲ್ಲ. ಕ್ರಿ.ಶ. ಪೂರ್ವ 400 ರಿಂದ ಕ್ರಿ. ಶ. 400ರಲ್ಲಿ ಅದರ ರಚನೆ ನಡೆದಿರಬೇಕು ಎಂದು ಮಿಟರ್‍ನಿಟ್ನರ್‍ನ ಅಭಿಪ್ರಾಯ ಯಜುರ್ವೇವೇದದಲ್ಲಿ ಕುರುಪಾಂಚಾಲವನ್ನು ಸಂಯುಕ್ತ ರಾಷ್ಟ್ರವಾಗಿ ಹೇಳಿದೆ. ಆದ್ದರಿಂದ ಮಹಾಭಾರತದ ಘಟನೆ ಕ್ರಿ.ಶ. 10ಕ್ಕೆ ಮೊದಲೇ ಆಗಿರಬೇಕು. ಎಂದು ಮೆಕ್‍ಡೊನಾಲ್ಡ್‍ನ ಅಭಿಪ್ರಾಯ. ಆ ಘಟನೆಯ ಬಗ್ಗೆ ಪ್ರಚಲಿತವಾಗಿದ್ದ ಹಳೆ ಕಥೆಗಳ ಆಧಾರದ ಮೇಲೆ ರಚಿತವಾಗಿದ್ದ ಒಂದು ಸಂಕ್ಷಿಪ್ತ ವೀರಗಾಥಾಕಾವ್ಯ ಎಂಟುನೂರು ವರ್ಷಗಳಲ್ಲಿ ಸ್ಮøತಿ ಇತಿಹಾಸ ಪುರಾಣ ರೂಪದ ಹೆಮ್ಮರವಾಗಿ ಬೆಳೆಯಿತು ಎನ್ನಲಾಗಿದೆ.
ಈ ವಿಕಾಸ ಮೂರು ಹಂತಗಳಲ್ಲಿ ನಡೆದಿರಬೇಕೆಂದು ಆಧುನಿಕ ವಿದ್ವಾಂಸರ ಅಭಿಪ್ರಾಯ. ಅದಕ್ಕೆ ಅವರು ಈ ಕಾರಣಗಳನ್ನು ಈ ಗ್ರಂಥದ ಶ್ಲೋಕ ಸಂಖ್ಯೆಯ ವಿಷಯದಲ್ಲಿ 8,800, 24,000 ಮತ್ತು ಒಂದು ಲಕ್ಷ ಎಂಬ ಮೂರು ಹೇಳಿಕೆಗಳಿವೆ. 'ಅಪ್ಟೌ ಶ್ಲೋಕ ಸಹಸ್ರಾಣಿ, ಅಪ್ಟೌಶ್ಲೋಕ ಶತಾನಿಚ; ಚತುರ್ವಿಂಶತಿ ಸಾಹಸ್ರಿಂ ಚಕ್ರೇ ಭಾರತ ಸಂಹಿತಾಂ ಇದಂ ಶತಸಹಸ್ರಂತಾ ಶ್ಲೋಕಾನಾಂ ಪುಣ್ಯ ಕರ್ಮನಾಂ, 2 ಮಹಾಭಾರತದ ಕಥೆಗೆ ಮನ್ವಾದಿ, ಆಸ್ತಿಕಾರಿ, ಉಪರೀಚರಾದಿ ಎಂಬ ಮೂರು ಆರಂಭಗಳಿವೆ. 3 ಗ್ರಂಥಕ್ಕೆ ಬೇರೆ ಬೇರೆ ಪ್ರಾರಂಭ ಶ್ಲೋಕಗಳಿವೆ. ನಾರಾಯಣಂ ನಮಸ್ಕøತ್ಯ…… ಗುರುವೇ ಪ್ರಾಙ್ಞಮಸ್ಮøತ್ಯ…. ಆದ್ಯಂಪುರುಷಮೀಶಾನಂ…. 4 ಗ್ರಂಥದ ಕಥೆಯನ್ನು ಹೇಳಿದವರ ಮತ್ತು ಕೇಳಿದವರ ಬಗೆಗೆ ಮೂರು ಉಲ್ಲೇಖಗಳಿವೆ- ಅ. ವ್ಯಾಸ ವೈಶಂಪಾರಯನರು, ಆ, ವೈಶಂಪಾಯನ-ಜನಮೇಜಯರು (ಸರ್ಪಯಾಗ ಸಮಯದಲ್ಲಿ) ಮತ್ತು ಇ. ಸೂತ ಪುರಾಣಿಕಶೌನಕಾದಿಗಳು (ನೈಮಿಶಾರಣ್ಯದಲ್ಲಿ.)
ಮೊದಲೇ ಘಟ್ಟದಲ್ಲಿ ಬ್ರಹ್ಮದೇವನಿಗೆ ಮಾನ್ಯತೆ ಇದೆ. ಅದು ವೇದ ನಂತರದ ಮತ್ತು ಬುದ್ಧನ ಕಾಲದ ಪರಿಸ್ಥಿತಿ ಆದ್ದರಿಂದ ಕ್ರಿ.ಶ. 5-6ನೆಯ ಶತಮಾನಕ್ಕೆ ಸೇರಿದಿದ್ದು. ಆಗ ಶ್ಲೋಕ ಸಂಖ್ಯೆ 8,800. ಎರಡನೆಯ ಘಟ್ಟದ ಕಾಲ ಕ್ರಿ.ಶ. 300 ಬುದ್ಧನ ಅನಂತರದ ಮತ್ತು ಮೆಗಾಸ್ತನೀಸನಿಗೆ ಇಂದಿನ ಕಾಲ. ಆಗ ಕೃಷ್ಣ ಪೂಜ್ಯನಾಗಿದ್ದ. ಶ್ಲೋಕಗಳ ಸಂಖ್ಯೆ 24,000 ಆಗಿತ್ತು. 3ನೆಯ ಘಟ್ಟದಲ್ಲಿ ಆದು ಸ್ಮøತಿ ಮತ್ತು ದರ್ಶನ ಶಾಸ್ತ್ರವೆನಿಸಿತು. ಏಕೆಂದರೆ ಕ್ರಿ.ಶ. 5ನೆ ಶತಮಾನದ ಶಿಲಾಶಾಸನದಲ್ಲಿ ಸ್ಮøತಿ ಮಹಾಭಾರತದ ಪ್ರವಚನಕ್ಕಾಗಿ ದತ್ತಿ ಕೂಟ ಉಲ್ಲೇಖನವಿದೆ.
ಇಡೀ ಗ್ರಂಥ ಒಬ್ಬನೇ ಕವಿಯ ರಚನೆ. ಮೊದಲಿನಿಂದಲೂ ಅದು ಸ್ಮøತಿ ಗ್ರಂಥವೂ ಆಗಿತ್ತು ಬುದ್ಧನ ಕಾಲಕ್ಕೆ ಹಿಂದಿನದು. ಭಗವತ್ ಗೀತೆಯೇ ಅದರ ಕೇಂದ್ರ. ವಿಶೇಷವಾಗಿ ಕ್ಷತ್ರಿಯರಿಗೋಸ್ಕರ ರಚಿಸಲ್ಪಟ್ಟ ಭಗವತಧರ್ಮದ ಕೈಪಿಡಿ ಎಂದು ರೆವರೆಂಡ್ ದಾಲ್‍ಮನ್‍ನ ಅಭಿಪ್ರಾಯ ಯುಕ್ತಿಗೆ ಎಲ್ಲಿ ಪ್ರಬಲ ವಿರೋಧವಿಲ್ಲವೋ ಅಲ್ಲಿ ಸಂಪ್ರದಾಯವನ್ನು ಮಾನ್ಯ ಮಾಡುವುದು ಯುಕ್ತವಾಗಿದೆ. ಅದರ ಪ್ರಕಾರ ಮಹಾಭಾರತದಲ್ಲಿ ಪ್ರಕ್ಷಿಪ್ತಗಳು ಸೇರಿಕೊಂಡಿದ್ದವು ಮೂಲ ಭಾರತವನ್ನು ವ್ಯಾಸ ಎಂಬಾತ ರಚಿಸಿದ ಬಗ್ಗೆ ಸಂಶಯವಿಲ್ಲ. ವ್ಯಾಸರ ಶಿಷ್ಯರು ಉಪಖ್ಯಾನಗಳನ್ನು ಸೇರಿಸಿದ ಬಳಿಕ ಗುರುಗಳು ಅವನ್ನು ಪರಿಷ್ಕರಿಸಿರುವ ಸಂಭವವುಂಟು. ಬ್ರಹ್ಮ ವಿಷ್ಣು ರುದ್ರರಿಗೆ ಮಾನ್ಯತೆ ವೇದದ ಜ್ಞಾನಕಾಂಡದಲ್ಲೂ ಇಂದ್ರಾದಿಗಳಿಗೆ ಮಾನ್ಯತೆ ಕರ್ಮಕಾಂಡದಲ್ಲೂ ಕಂಡುಬರುತ್ತದೆ. ಇದೇ ಪರಂಪರೆ ಮಹಾಭಾರತದಲ್ಲೂ ಮುಂದುವರಿದಿದೆ.
ಮಹಾಭಾರತ ಮೊದಲು ಬೌದ್ಧಕವಿಗಳದ್ದಾಗಿತ್ತು. ಅಶೋಕನನ್ನು ಪ್ರತಿನಿಧಿಸುವ ದುರ್ಯೋಧನ ಅದರ ನಾಯಕನಾಗಿದ್ದ ಅನಂತರ ಬ್ರಾಹ್ಮಣ ಕವಿಗಳು ಅದನ್ನು ಪಾಂಡವರ ಪರವಾಗಿಯೂ ಕೃಷ್ಣ ಭಕ್ತ ಪರವಾಗಿಯೂ ಬದಲಾಯಿಸಿದರು ಎಂಬ ವಾದವಿದೆ. ಅದು ಸರಿಯಲ್ಲ. ಏಕೆಂದರೆ ಮಹಾಭಾರತ ತಮ್ಮ ಗ್ರಂಥವೆಂದು ಬೌದ್ಧರು ಎಲ್ಲೂ ಉಲ್ಲೇಖಿಸಿಲ್ಲ.
ಕ್ರೈಸ್ತಧರ್ಮದ ಪ್ರಭಾವದಿಂದ ಕೃಷ್ಣನ ಪೂಜೆ ಪ್ರಾರಂಭವಾಯಿತು ಎಂಬ ವಾದ ಹಾಸ್ಯಾಸ್ಪದ, ಏಕೆಂದರೆ ಮೆಗಾಸ್ತನೀಸ್ (ಕ್ರಿ.ಪೂ. 300) ಕೃಷ್ಣನ ಪೂಜೆಯನ್ನು ಉಲ್ಲೇಖಿಸುತ್ತಾನೆ.
ತುಲನಾತ್ಮಕ ವಿಮರ್ಶೆ : ರಾಮಾಯಣ ಮಹಾಭಾರತಗಳೆರಡೂ ಭಾರತದ ರಾಷ್ಟ್ರೀಯ ಮಹಾಕಾವ್ಯಗಳು. ಎರಡಕ್ಕೂ ಕಾವ್ಯ, ಪುರಾವೃತ್ತ ಮತ್ತು ವೇದ ಪ್ರತಿರೂಪ ಎಂಬ ಮಾನ್ಯತೆ ಇದೆ. ಎರಡರಲ್ಲೂ ದೇವಾಸುರರನ್ನು ಭೂಮಿಗೆ ಇಳಿಸಿ ಯುದ್ಧ ಮಾಡಿಸಿ ದೇವತೆಗಳ ಮತ್ತು ಧರ್ಮದ ವಿಜಯವನ್ನು ಸಾರಿದೆ. ಅದರೆ ರಾಮಾಯಣದಲ್ಲಿ ಕಾವ್ಯ ಗುಣಕ್ಕೆ ಪ್ರಧಾನ್ಯ. ರಾಮಾಯಣದ ನಾಯಕನಾದ ರಾಮ ದೈವತ್ವವನ್ನು ಮೆರೆಸಿಕೊಂಡಿರುವ ಆದರ್ಶ ಮಾನವ. ಭಾರತದ ನಾಯಕ ಲಕ್ಷಣ ಶಾಸ್ತ್ರದಂತೆ ಫಲಸ್ವಾಮಿಯಾದ ಧರ್ಮರಾಜ ಧೀರೋಧಾತ ಪಾತ್ರನಾದ ಅರ್ಜುನನು ನಾಯಕನಾಗಬಹುದು. ಆದರೆ ಅಂತರಂಗ ವಿಶ್ಲೇಷಣೆ ಮಾಡಿದಾಗ ನಿಜವಾದ ನಾಯಕ ಕೃಷ್ಣ. ಅವನೇ ಕಾವ್ಯದ ಎಲ್ಲ ಮುಖ್ಯಕಾರ್ಯಗಳ ಜೀವನಾಡಿ ಮತ್ತು ಸೂತ್ರಧಾರ. ಅವನು ದೈವಮಾನುಷ ಎರಡನ್ನೂ ಇಷ್ಟಬಂದಂತೆ ಪ್ರಕಟಿಸುವ ಅತಿಮಾನುಷ ವ್ಯಕ್ತಿ. ರಾಮಾಯಣದ ಪಾತ್ರಗಳು ಬಹುಮಟ್ಟಿಗೆ ಆದರ್ಶರೂಪ. ಮಹಾಭಾರತದ ಪಾತ್ರಗಳು ಬಲುಮಟ್ಟಿಗೆ ಗುಣಗಳಲ್ಲಿ ಈ ಕಾಲಕ್ಕೆ ಹತ್ತಿರದವು. ರಾಮಾಯಣ ಪದ್ಯರೂಪದಲ್ಲಿದೆ. ಭಾರತ ಗದ್ಯ ಪದ್ಯತ್ಮಾಕ ರಾಮಾಯಣ ಶೈಲಿ ಮತ್ತು ಛಂದಸ್ಸುಗಳು ಸರಳ ಸುಲಭ ಭಾರತದ ಶೈಲಿ ಮತ್ತು ಛಂದಸ್ಸುಗಳು ಅನೇಕ ಕಡೆ ಕ್ಲಿಷ್ಟವಾಗಿವೆ. ರಾಮಾಯಣ ಸೂರ್ಯವಂಶದ ಅರಸರ ಕಥೆ ಭಾರತ ಚಂದ್ರವಂಶದ ರಾಜರ ಕಥೆ ರಾಮಾಯಣದಲ್ಲಿ ಭಾರತದ ಕಥೆಯ ಸೂಚನೆಯೂ ಇಲ್ಲ. ಭಾರತದಲ್ಲಿ ರಾಮಾಯಣದ ಕಥೆಯ ಸಂಕ್ಷಿಪ್ತವೇ ಒಂದು ಕಡೆ ಕಂಡುಬರುತ್ತದೆ. ರಾಮಾಯಣ ಆರ್ಯ ಸಂಸ್ಕøತಿಯನ್ನು ವಿಶೇಷವಾಗಿ ಹೇಳುತ್ತದೆ. ಮಹಾಭಾರತದ ಕಾಲದಲ್ಲಿ ಅದರೊಡನೆ ಮ್ಲೇಚ್ಛ ಸಂಸ್ಕøತಿಯ ಸಂಪರ್ಕವನ್ನು ಕಾಣುತ್ತೇವೆ. ಎರಡು ಗ್ರಂಥಗಳಲ್ಲಿ ಈಗಿನ ರೂಪದ ಮಹಾಭಾರತ ರಾಮಾಯಣಕ್ಕಿಂತ ಈಚಿನದು. ಆದರೆ ಅದರಲ್ಲಿ ಕೆಲವು ಕಡೆ ಅತ್ಯಂತ ಪ್ರಾಚೀನ ಕಾಲದ ಕಥೆ ಮತ್ತು ಪರಂಪರೆಗಳನ್ನು ಕಾಣುತ್ತೇವೆ.
ಮಹಾಭಾರತ ತಪಸ್ಸು, ಸತ್ಯ, ಸದಾಚಾರ ಮುಂತಾದ ಉತ್ತಮ ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ. ಆದರ್ಶ ಅನಾದರ್ಶ ಎರಡನ್ನೂ ಚಿತ್ರಿಸಿ ಆದರ್ಶದಲ್ಲಿ ಮನಸ್ಸನ್ನು ನಿಲ್ಲಿಸುತ್ತದೆ. ಆಗ ಸಮಾಜದಲ್ಲಿ ವರ್ಣಾಶ್ರಮ ಧರ್ಮಗಳ ಪದ್ಧತಿ ಇದ್ದರೂ ವರ್ಣಸಾಂಕರ್ಯ ಇದ್ದುದನ್ನೂ ಕಾಣುತ್ತೇವೆ.
ಜೀವನ ದರ್ಶನದ ಬಗ್ಗೆ ಚಾರ್ವಾಕ, ಬೌದ್ಧ, ಜೈನ, ಮೀಮಾಂಸಕ, ಸಾಂಖ್ಯ, ಯೋಗ ಮತ್ತು ವೇದಾಂತಗಳ ಅಭಿಪ್ರಾಯಗಳನ್ನು ಮಹಾಭಾರತದಲ್ಲಿ ನೋಡುತ್ತೇವೆ. ಅದರೆ ಇವು ವ್ಯವಸ್ಥಿತವಾದ ದರ್ಶನಗಳಾಗಿದ್ದವು ಎಂಬುವುದು ಸ್ಪಷ್ಟವಾಗಿಲ್ಲ. ಸಾಂಖ್ಯ, ಯೋಗ ಮತ್ತು ವೇದಾಂಗ ದರ್ಶನಗಳ ಪ್ರಶಂಸೆ ಹೆಚ್ಚಾಗಿ ಕಂಡುಬರುತ್ತದೆ. ಯಜ್ಞ, ದಾನ ಮತ್ತು ತಪಸ್ಸುಗಳ ಮಹಿಮೆಯನ್ನು ಇಲ್ಲಿ ಎತ್ತಿ ಹೇಳಿದೆ. ಮೋಕ್ಷಪ್ರಾಪ್ತಿಗೆ ಕರ್ಮಭಕ್ತಿ ಯೋಗ ಜ್ಞಾನಯೋಗ ಎಲ್ಲವೂ ಅಧಿಕಾರಿ ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಸಾಧನವಾಗುತ್ತವೆ ಎಂಬುದು ಭಗವದ್ಗೀತೆಯ ಅಭಿಪ್ರಾಯ. ಇದೇ ಆಶಯ ಭಾರತದ ಇತರ ಕಡೆಗಳಲ್ಲಿಯೂ ಕಂಡುಬರುತ್ತದೆ. ಗೀತೆ ಉಪನಿಷತ್ತುಗಳ ಸಾರ, ಬ್ರಹ್ಮವಿದ್ಯೆ ಮತ್ತು ಯೋಗ ಶಾಸ್ತ್ರ ಎರಡೂ ಆಗಿದೆ. ಮೋಕ್ಷ ಧರ್ಮ ಪ್ರತಿಪಾದನೆಯ ಜೊತೆಗೆ ಜೀವನ ಧರ್ಮವನ್ನೂ ಹೃದ್ಯವಾಗಿ ಪ್ರತಿಪಾದಿಸುತ್ತದೆ. ಶ್ರೇಷ್ಠತಮವಾದ ಶಾಸ್ತ್ರವಾಗಿರುವಂತೆಯೇ ಕಾವ್ಯವೂ ಆಗಿದ್ದು ಎಲ್ಲ ಮಟ್ಟಗಳ ಜನರಿಗೂ ಆನಂದವನ್ನೂ ಶಾಂತಿಯನ್ನೂ ನೀಡುತ್ತಿದೆ. ಅರ್ಜುನನ್ನು ನೆಪಮಾಡಿಕೊಂಡು ಕೃಷ್ಣ ಪ್ರಪಂಚದ ಮಾನವರಿಗೆ ಕೊಟ್ಟ ಸಂದೇಶವಾಗಿದೆ ಗೀತೆ. ನಾನಾ ಪಂಥಗಳ ಪ್ರಾಚೀನ ಮತ್ತು ಆಧುನಿಕ ಆಚಾರ್ಯರು ಇದಕ್ಕೆ ತಮ್ಮ ಭಾಷೆ ವ್ಯಾಖ್ಯಾನಗಳನ್ನು ಮಾಡಿದ್ದಾರೆ.
ಮಹಾಭಾರತದಲ್ಲಿ ನಾನಾ ದೇವತೆಗಳ ಉಪಾಸನೆ ಅನೇಕ ಕಡೆಗಳಲ್ಲಿ ಹೇಳಲ್ಪಟ್ಟಿದ್ದರೂ ವಿಷ್ಣು ಮತ್ತು ಶಿವ ಇವರುಗಳಿಗೇ ಪ್ರಾಧಾನ್ಯ. ಇದು ವೈಷ್ಣವ ಮತ್ತು ಶೈವ ಉಭಯ ಮತಗಳ ದಿವ್ಯ ಗ್ರಂಥವೂ ಆಗಿದೆ. ರುದ್ರ ಮತ್ತು ನಾರಾಯಣ ಇಬ್ಬರೂ ಒಂದೇ ತತ್ವದ ರೂಪಗಳು ಎಂಬ ಅಭಿಪ್ರಾಯವನ್ನು ಇದರಲ್ಲಿ ನೋಡುತ್ತೇವೆ. ರುದ್ರ ನಾರಾಯಣಶ್ಛೇತಿ ತತ್ತ್ವಮೇಕಂ ದ್ವಿಧಾಸ್ಥಿತಂ,
ಎಲ್ಲ ದೇಶಕಾಲಗಳ ಮನುಷ್ಯರಿಗೂ ಸ್ಫೂರ್ತಿಯನ್ನು ಕೊಡುವ ಸುಭಾಷಿತ ಮತ್ತು ಸಂದೇಶಗಳ ತೌರುಮನೆಯಾಗಿದೆ. - ಮಹಾಭಾರತ. ಅವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಉದಾಹರಿಸಬಹುದು. ಧರ್ಮ ಎಲ್ಲ ಜೀವಿಗಳನ್ನೂ ಏಕಸೂತ್ರವಾಗಿ ಧರಿಸುವ ನಿಯಮ. ಧರ್ಮೇಣ ವಿಧೃತಾಃ ಪ್ರಜಾಃ ಅರ್ಥಕಾಮಗಳೂ ಧರ್ಮದಿಂದಲೇ ಸಿದ್ಧಿಸುವುದರಿಂದ ಅದನ್ನು ಸೇವಿಸಲೇಬೇಕು. ಧರ್ಮಾದರ್ಥಶ್ಚ ಕಾಮಶ್ಚಸ ಕಿಮರ್ಥಂ ಸೇವ್ಯತೇ ಪರಮ ತಪಸ್ಸು, ನಾಸ್ತಿ ಸತ್ಯ ತಮಂ ತಪಃ'. ಜ್ಞಾನಕ್ಕೆ ಸದೃಶವಾದ ಪವಿತ್ರ ಪದಾರ್ಥ ಬೇರಾವುದೂ ಇಲ್ಲ. 'ನಹಿ ಜ್ಞಾನೇನ ಸದೃಶಂ ಪವಿತ್ರಮಿಹವಿದ್ಯತೇ, ಪ್ರಮಾದವೇ ಮೃತ್ಯು, ಅಪ್ರಮಾದವೇ ಅಮೃತಪದ, ' ಪ್ರಮಾದಂ ವೈ ಮೃತ್ಯುವಾಹಂ ಬ್ರವೀಮಿ ಅಪ್ರಮಾದ್ಯೋ ಮೃತಪದಂ', ಧರ್ಮ, ಸತ್ಯ, ವೃತ್ತ, ಬಲ ಮತ್ತು ಸಂಪತ್ತು ಎಲ್ಲಕ್ಕೂ ಶೀಲವೇ ಮೂಲ, 'ಧರ್ಮಂ ಸತ್ಯಂ ತಥಾ ವೃತ್ತಂ ಬಲು ಚೈವ ತಥಾಪ್ಯಹಂ ಶೀಲಮೂಲಾ ಮಹಾಪ್ರಾಜ್ಞ ಸದಾ ನಾಸ್ತ್ಯತ್ರ ಸಂಶಯಃ'. ಯಾವುದರಿಂದ ಭೂತಗಳಿಗೆ ಅತ್ಯಂತ ಹಿತವುಂಟಾಗುತ್ತದೆಯೋ ಅದೇ ಸತ್ಯ. 'ಯದ್ಭೂತಹಿತಮತ್ಯಂತಂ ತದ್ಧಿಸತ್ಯಂ ಪ್ರಚಕ್ಷತೇ. ಪಂಡಿತ ಶತ್ರುವಾಗಿದ್ದರೂ ಶ್ರೇಷ್ಠ, ಮೂರ್ಖ ಮಿತ್ರನಾಗಿದ್ದರೂ ಕೆಡಕು. 'ಶ್ರೇಷ್ಠೋ ಹಿ ಪಂಡಿತಃ ಶತ್ರುಃ ನ ಚ ಮಿತ್ರಮಪಂಡಿತಃ ಕುಲದ ಹಿತಕ್ಕಾಗಿ ಒಬ್ಬನನ್ನು ತ್ಯಾಗ ಮಾಡಬೇಕಾಗುತ್ತದೆ. ಗ್ರಾಮದಹಿತಕ್ಕಾಗಿ ಕುಲವನ್ನು ತ್ಯಾಗಮಾಡಬೇಕಾಗುತ್ತದೆ. ದೇಶದ ಹಿತಕ್ಕಾಗಿ ಗ್ರಾಮವನ್ನು ತ್ಯಜಿಸಬೇಕಾಗುತ್ತದೆ ಮತ್ತು ಆತ್ಮಹಿತಕ್ಕೋಸ್ಕರ ಇಡೀ ಭೂಮಂಡಲವನ್ನೇ ತ್ಯಜಿಸಬೇಕಾಗುತ್ತದೆ. 'ತ್ಯಜೇದೇಕಂ ಕುಲಸ್ಯಾರ್ಥೇ ಗ್ರಾಮಸ್ಯಾರ್ಥೇ ಕುಲಂ ತ್ಯಜೇತ್ ಗ್ರಾಮಂ ಜನಪದ ಸ್ಯಾರ್ಥೇ ಪೃಥಿವೀಂ ತ್ಯಜೇತ್. ರಾಜನೇ ಕಾಲಕ್ಕೆ ಕಾರಣ. 'ರಾಜಾ ಕಾಲಸ್ಯ ಕಾರಣಂ'. ವಿದ್ಯೆಯಿಂದಲೇ ಎಲ್ಲದರ ಸೃಷ್ಟಿ. ಎಲ್ಲವರ ಪರಾಗತಿಯೂ ವಿದ್ಯೆಯೇ, ' ವಿದ್ಯೈಯಾ ತಾತ ಸೃಷ್ಟಾನಾಂ ವಿದ್ಯೈವೇಹ ಪರಾಗತಿಃ', ಮನೆ ಮನೆಯಲ್ಲ, ಗೃಹಿಣಿಯೇ ನಿಜವಾದ ಮನೆ, ' ನ ಗೃಹಂ ಗೃಹಮಿತ್ಯಾಹು ಗೃಹಿಣೀ ಗೃಹ ಮುಚ್ಯತೇ. ಎಲ್ಲ ಕರ್ಮಗಳಿಗೂ ಜ್ಞಾನದಲ್ಲೇ ತಾತ್ಪರ್ಯ, ' ಸರ್ವಂ ಕರ್ಮಾಖಿಲು ಪಾರ್ಥ ಜ್ಞಾನೇ ಪರಿಸಮಾಪೃತೇ, ತನ್ನ ಉದ್ಧಾರವನ್ನು ತನ್ನಿಂದಲೇ ಮಾಡಿಕೊಳ್ಳಬೇಕು. 'ಉದ್ಧರೇವಾತ್ಮನಾತ್ಮಾನಂ'. ಎಲ್ಲ ಭಾವದಿಂದಲೂ ಪರಮಾತ್ಮನನ್ನೇ ಶರಣು ಹೊಂದಬೇಕು. ಅವನ ಅನುಗ್ರಹದಿಂದಲೇ ಪರಮಶಾಂತಿ ಮತ್ತು ಶಾಶ್ವತವಾದ ಸ್ಥಾನ ದೊರೆಯುತ್ತದೆ. 'ತ್ವಮೇವ ಶರಣಂ ಗಚ್ಚ ಸರ್ವಭಾವೇನ ಭಾರತ ತತ್ಪ್ರಸಾದಾತ್ಪರಾಂ ಶಾಂತಿ ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಂ'.
(ವಿ.ಡಿ.)