ಮಹಾವೀರ ಕ್ರಿ. ಪೂ. 599-527 ? ಜೈನರ ಇಪ್ಪತ್ತನಾಲ್ಕು ತೀರ್ಥಂಕರರಲ್ಲಿ ಕೊನೆಯವ. ಗೌತಮಬುದ್ಧನ ಹಿರಿಯ ಸಮಕಾಲೀನ. ಈತ ಮಗಧದೇಶದಲ್ಲಿ ಹುಟ್ಟಿದ. ಈಗೀನ ಚಂಪಾರಣ್ಯ, ಮುಜಫರಪುರ, ದರಭಾಂಗಾ ಮತ್ತು ಛೆಪರಾ ಜಿಲ್ಲೆಗಳಿಗೆ ಸೇರಿದ ಭಾಗಕ್ಕೆ ಹಿಂದೆ ವಜ್ಜಿಯೋ (ಲಿಚ್ಛವಿಯರ ನಾಡು) ಎಂದೂ ವಿದೇಹ ದೇಶವೆಂದೂ ಹೆಸರಿತ್ತು. ಅದರ ರಾಜಧಾನಿ ವೈಶಾಲಿ (ಈಗಿನ ಬಸಾಢನಗರ). ಈ ನಗರದ ಮಧ್ಯದಲ್ಲಿ ಗಂಡಕಿ ನದಿ ಹರಿಯುತ್ತಿದೆ. ಅದರ ಎರಡೂ ತೀರಗಳಲ್ಲಿ ವೈಶಾಲಿಯ ಎರಡು ಉಪನಗರಗಳಿದ್ದುವು. ಅವು ಒಂದು ಕ್ಷತ್ರಿಯ ಕುಂಡಗ್ರಾಮ; ಇನ್ನೊಂದು ಬ್ರಾಹ್ಮಣ ಕುಂಡಗ್ರಾಮ; ಅಲ್ಲಿ ಅನೇಕ ಗಣರಾಜ್ಯಗಳಿದ್ದುವು. ಅವುಗಳಲ್ಲಿ ಪರಸ್ಪರ ಯುದ್ಧಗಳಿಲ್ಲದೆ ಶಾಂತಿಯುತ ಸಹಬಾಳ್ವೆ ನೆಲಸಿದ್ದಿತು. ಈ ಗಣರಾಜ್ಯದಲ್ಲಿ ಚೇಟಕ ಎಂಬಾತ ವೈಶಾಲಿಯ ಪ್ರಸಿದ್ಧ ರಾಜ. ಆತ ಕಾಶಿ, ಕೋಸಲಗಳನ್ನುಳ್ಳ ಒಂಬತ್ತು ಲಿಚ್ಛವಿ ಹಾಗೂ ಮಲ್ಲರಾಜರ ಅಧಿಪತಿಯಾಗಿದ್ದ. ಈ ಚೇಟಕದ ಮಹಾರಾಜನಿಗೆ ಎಂಟು ಮಂದಿ ಹೆಣ್ಣು ಮಕ್ಕಳು, ಅವರಲ್ಲಿ ಹಿರಿಯಳಾದ ತ್ರಿಶಲಾದೇವಿಯನ್ನು(ಪ್ರಿಯಕಾರಿಣಿ) ಕುಂಡಲಪುರದ ಗಣ ರಾಜ ಸಿದ್ಧಾರ್ಥಮಹಾರಾಜನಿಗೆ ಕೊಟ್ಟು ವಿವಾಹವಾಗಿದ್ದಿತು. ಸಿದ್ಧಾರ್ಥ ಜ್ಞಾತೃವಂಶಕ್ಕೆಸೇರಿದವ. ಸಿದ್ಧಾರ್ಥ, ತ್ರಿಶಲಾದೇವಿಯರು 23ನೆಯ ತೀರ್ಥಂಕರನಾದ ಪಾಶ್ರ್ವನಾಥನ ಶ್ರಮಣ ಪರಂಪರೆಯ ಅನುಯಾಯಿಗಳಾಗಿದ್ದರು. ಇವರ ಹೊಟ್ಟೆಯಲ್ಲಿ ಕ್ರಿ. ಪೂ. 599ನೆಯ ಸಂವತ್ಸರದಲ್ಲಿ ಚೈತ್ರ ಶುದ್ಧ ತ್ರಯೋದಶಿಯ ದಿವಸ ಮಹಾವೀರ ಜನಿಸಿದ. ಈ ಶಿಶು ಜನನವಾದಕೂಡಲೆ ನಾಡು ಸಂಪದ್ಭರಿತವಾಗಿ ಶಾಂತಿಸೌಖ್ಯಗಳು ವರ್ಧಿಸಿದುದರಿಂದ ಶಿಶುವಿಗೆ ವರ್ಧಮಾನನೆಂಬ ಹೆಸರಿಟ್ಟರು. ಕೆಲಕಾಲದ ಮೇಲೆ ಕೆಲವು ಯೋಗಿಗಳು ಈ ಶಿಶುವಿನ ದರ್ಶನ ಮಾಡಿ ಈತನ ಅಲೌಕಿಕ ಸಾರ್ಮಥ್ಯ ಕಂಡು ಬೆರಗಾಗಿ ಈತನನ್ನು ಮಹಾವೀರನೆಂದೂ ಈತನ ಬುದ್ಧಿ ಚಾತುರ್ಯಗಳಿಗೆ ಮೆಚ್ಚಿ ಸನ್ಮತಿ ಎಂದೂ ಕರೆದರು. ಮಹಾವೀರನಿಗೆ ಹುಟ್ಟುವಾಗಲೇ ಮತಿ, ಶ್ರುತ, ಅವಧಿಗಳೆಂಬ ಮೂರು ಪ್ರಕಾರದ ಜ್ಞಾನಗಳು ಲಭಿಸಿದ್ದುವು. ಮಹಾವೀರ ತೇಜಸ್ವಿಯಾಗಿ, ಮೇಧಾವಿಯಾಗಿ, ಸಕಲ ವಿದ್ಯಾ ಪಾರಂಗತನಾಗಿ ಬೆಳೆದು. ಹೀಗೆ ಮೂವತ್ತು ವರ್ಷಗಳು ಕಳೆದುವು. ಈತ ಯಾವಾಗಲೂ ಧ್ಯಾನಾಸಕ್ತನಾಗಿರುತ್ತಿದ್ದ, ಒಂದು ದಿನ ತನ್ನ ಹಿಂದಿನ ಭವಗಳ ಅರಿವಾಗಿ ಸಂಸಾರ ಅಸಾರದೆಂದು ಕಂಡು ವೈರಾಗ್ಯ ಅಂಕುರಿಸಿತು. ಆಗ ಮಹಾವೀರ ಐಹಿಕ ಸಂಪತ್ತನ್ನೂ ಭೋಗೋಪಯೋಗ ವಿಷಯಗಳನ್ನೂ ತೊರೆದು ಸಂನ್ಯಾಸ ಸ್ವೀಕರಿಸಿದ. ಆಗಲೇ ಅತನಿಗೆ ನಾಲ್ಕನೆಯದಾದ ಮನಃಪರ್ಯಯ (ಇನ್ನೊಬ್ಬರ ಮನಸ್ಸಿನಲ್ಲಿರುವ ಭಾವನೆಗಳನ್ನು ತಿಳಿಯುವುದು) ಜ್ಞಾನ ಲಭಿಸಿದುದು. ಮಹಾ ವೀರ 12 ವರ್ಷಗಳ ಕಾಲ ಉಗ್ರ ತಪಸ್ಸು ಆಚರಿಸಿದುದರ ಫಲವಾಗಿ ನಾಲ್ಕು ಘಾತಿ ಕರ್ಮಗಳು ನಾಶವಾಗಿ ಐದನೆಯ ಕೇವಲ ಜ್ಞಾನ (ಸರ್ವಜ್ಞತ್ವ) ಪ್ರಾಪ್ತಿವಾಯಿತು. ಈ ದೇವತೆಗಳಿಂದ ಸಮವಸರಣ ರಚನೆಯಾಯಿತು. ಆನಂತರ ಮಹಾವೀರ ಮೂವತ್ತು ವರ್ಷಗಳ ಕಾಲ ಧರ್ಮೋಪದೇಶ ಮಾಡಿದ. ಕೊನೆಗೆ ಸಮವಸರಣ ಪರಿತ್ಯಜಿಸಿ ಪಾಟಲಿಪುತ್ರ (ಪಾಟ್ನ) ನಗರಕ್ಕೆ ಸಮೀಪದಲ್ಲಿರುವ ಪಾವಾಪುರಿಯ ಸರೋವರದ ಮಧ್ಯದ ಶಿಲೆಯ ಮೇಲೆ ನಿಂತು ಉಳಿದಿದ್ದ ಅಘಾತಿಕರ್ಮಗಳನ್ನು ನಾಶಮಾಡಿ ಅಶ್ವಯುಜ ಬಹುಳ ಚತುರ್ದಶಿಯ ರಾತ್ರಿಯ ಅಂತ್ಯ ಸಮಯದಲ್ಲಿ ಅಂದರೆ ಅಮಾವಾಸ್ಯೆಯ ಪ್ರಾತಃಕಾಲದಲ್ಲಿ ಸರ್ವಕರ್ಮಗಳಿಂದ ಮುಕ್ತನಾಗಿ ಸಿದ್ಧಪದವಿ ಪಡೆದ, ಈ ಜ್ಞಾನಜ್ಯೋತಿಯ ಪ್ರತೀಕವಾಗಿ ಆದಿನ ರಾತ್ರಿ ಜನರು ಅನೇಕ ದೀಪಗಳನ್ನು ಹೊತ್ತಿಸಿ ಮಹಾವೀರ ಸ್ವಾಮಿಯ ಪೂಜೆ ಸ್ತವನಗಳನ್ನು ನಡೆಸಿದರು. ಅದೇ ದೀಪಾವಳಿ ಹಬ್ಬ. (ಕೆ.ಎಸ್.ಡಿ.)