ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಾಕಸಿನ್ ಹಾವು

ಮಾಕಸಿನ್ ಹಾವು- ಅಮೆರಿಕ ಸಂಯುಕ್ತ ಸಂಸ್ಥಾನಗಳ ಆಗ್ನೇಯ ಹಾಗೂ ದಕ್ಷಿಣ ಭಾಗದಲ್ಲಿ ಕಂಡುಬರುವ ವಿಷಪೂರಿತ ಹಾವು. ಮಿಸಿಸಿಪ್ಪಿ ಮತ್ತು ಫ್ಲಾರಿಡ ರಾಜ್ಯಗಳ ಜವುಗು ಪ್ರದೇಶಗಳಲ್ಲಿ ಇದು ಬಲು ಸಾಮಾನ್ಯ. ವೈಪರಿಡೀ ಕುಟುಂಬದ ಕ್ರೋಟಾಲಿನೀ ಉಪಕುಟುಂಬಕ್ಕೆ ಸೇರಿದ ಇದು ಬುಡಬುಡಿಕೆ ಹಾವು (ರ್ಯಾಟಲ್ ಸ್ನೇಕ್), ಕೆಂಪುತಲೆ ಹಾವು (ಕಾಪರ್ ಹೆಡ್) ಕುಳಿಮಂಡಲ ಹಾವುಗಳಿಗೆ (ಪಿಟ್ ವೈಪರ್ಸ್) ಹತ್ತಿರ ಸಂಬಂಧಿಯಾಗಿದೆ. ಅಗ್‍ಕಿಸ್ಟ್ರೊಡಾನ್ ಪಿಸಿವೊರಸ್ ಇದರ ಶಾಸ್ತ್ರೀಯ ನಾಮ. ವಾಟರ್ ಮಾಕಸಿನ್ ಅಥವಾ ಕಾಟನ್ ಮೌತ್ (ಅರಳೆ ಬಾಯಿಯ ಹಾವು) ಎಂದೂ ಹೆಸರಿದೆ. ಇದು ಮಧ್ಯಮ ಗಾತ್ರದ ಹಾವು: 2 ಮೀ.ಉದ್ದಕ್ಕೆ ಬೆಳೆಯುವ ದಾಖಲೆ ಇದೆಯಾದರೂ ಇದರ ಉದ್ದ ಸಾಧಾರಣವಾಗಿ 1 ಮೀ. ಮೀರದು. ಇದರ ಮೈಬಣ್ಣ ಕಂದು ಮಿಶ್ರಿತ ಬೂದು.

ಇದು ನೆಲವಾಸಿಯಾದರೂ ಸಾಮಾನ್ಯವಾಗಿ ನೀರಿನಲ್ಲಿ ಇಲ್ಲವೆ ನೀರಿಗೆ ಹತ್ತಿರದಲ್ಲಿ ವಾಸಿಸುತ್ತದೆ. ಕೆರೆ ನದಿಗಳ ಅಂಚಿನಲ್ಲಿ ಅಥವಾ ನೀರಿನಲ್ಲಿರುವ ದಿಮ್ಮಿಗಳ ಮೇಲೆ ಬಿಸಿಲಿಗೆ ಮೈಯೊಡ್ಡಿರುತ್ತದೆ. ಇದರ ನೆಲೆ ನೀರಾದ್ದರಿಂದ ಕಪ್ಪೆ, ಮೀನು, ಮೆತುಬೆನ್ನಿನ ಆಮೆ ಮುಂತಾದ ಜಲಚರಿಗಳೇ ಇದರ ಪ್ರಧಾನ ಆಹಾರ.

ಇದು ಮಂದಸ್ವಭಾವದ ಹಾವು. ಸಮೀಪಿಸಿದಾಗ ಓಡಿಹೋಗದು. ಇದರಿಂದ ಇದರ ಬಗ್ಗೆ ಹುಷಾರಿರುವುದು ಅಗತ್ಯ. ಆದರೆ ಕೆಣಕಿದಾಗ ಒಮ್ಮಲೆ ಕಚ್ಚದೆ ತಲೆಯೆತ್ತಿ ಬಾಯಂಗಳ ಕಾಣುವಂತೆ ಬಾಯನ್ನು ಅಗಲಿಸಿ ತನ್ನ ಕೋಪವನ್ನು ವ್ಯಕ್ತಪಡಿಸುತ್ತದಾಗಿ ಕಚ್ಚಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಬಹುದು. ಬಾಯನ್ನು ತೆರೆದಾಗ ಒಳಗಿನ ಭಾಗ ಬೆಳ್ಳಗೆ ಅರಳೆಯಂತೆ ಕಾಣುತ್ತದೆ. ಆದ್ದರಿಂದಲೇ ಇದಕ್ಕೆ ಕಾಟನ್ ಮೌತ್ ಎಂಬ ಹೆಸರು ಬಂದಿದೆ. ಇದರ ಸಂತಾನವೃದ್ಧಿಯ ಕಾಲ ಸೆಪ್ಟೆಂಬರ್. ಒಂದು ಸಲಕ್ಕೆ ಎಂಟು ಮರಿಗಳನ್ನು ಪಡೆಯುತ್ತದೆ. ಹುಟ್ಟುವಾಗ ಸುಮಾರು 16 ಸೆಂಮೀ ಉದ್ದವಿರುವ ಇವುಗಳ ಮೈಮೇಲೆ ಹೊಳೆಯುವ ಪಟ್ಟೆಗಳಿರುವುದಲ್ಲದೆ ಬಾಲ ಹಳದಿ ಬಣ್ಣದ್ದಾಗಿರುತ್ತದೆ. (ಕೆ.ಎಂ.ವಿ.) ಪರಿಷ್ಕರಣೆ ಡಿ.ಆರ್. ಪ್ರಹ್ಲಾದ್