ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಾನವಿಕ ಕರ್ಣಾಟಕ

ಮಾನವಿಕ ಕರ್ಣಾಟಕ - ಮಾನವಿಕ ವಿಷಯಗಳಿಗೆ ಮೀಸಲಾಗಿರುವ ಕನ್ನಡ ತ್ರೈಮಾಸಿಕ ಪತ್ರಿಕೆಗಳ ಪೈಕಿ ಗಣ್ಯವಾದುದು. ಮೈಸೂರು ವಿಶ್ವವಿದ್ಯಾನಿಲಯದಿಂದ 1970ರಿಂದಲೂ ಪ್ರಕಟಗೊಳ್ಳುತ್ತಿದೆ. ಕನ್ನಡದಲ್ಲಿ ಹೊಸ ಆಲೋಚನೆ ಬರವಣಿಗೆ ಹೆಚ್ಚಾದಂತೆಲ್ಲ ಪ್ರಬುದ್ಧ ಕರ್ಣಾಟಕ, ವಿಜ್ಞಾನ ಕರ್ಣಾಟಕ ಪತ್ರಿಕೆಗಳು ಸಾಲದಾಗಿ, ಮಾನವಿಕ ವಿಷಯಗಳಿಗೂ ಸ್ವತಂತ್ರವಾದ ಪತ್ರಿಕೆಯೊಂದನ್ನು ಹೊರತರುವ ಆವಶ್ಯಕತೆ ಉಂಟಾದ್ದರಿಂದ ಇದರ ಪ್ರಥಮ ಸಂಚಿಕೆ 1970ರ ಕನ್ನಡ ರಾಜ್ಯೋತ್ಸವದಂದು ಪ್ರಕಟವಾಯಿತು. ಸಾಹಿತ್ಯ ಹಾಗೂ ವಿಜ್ಞಾನ ಕ್ಷೇತ್ರಗಳನ್ನುಳಿದು ಎಲ್ಲ ಕ್ಷೇತ್ರಗಳೂ ಈ ಪತ್ರಿಕೆಯ ವ್ಯಾಪ್ತಿಗೆ ಒಳಪಡುತ್ತವೆ. ಇತಿಹಾಸ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ತತ್ತ್ವಶಾಸ್ತ್ರ, ತರ್ಕಶಾಸ್ತ್ರ, ಮನಶ್ಶಾಸ್ತ್ರ, ಪುರಾತತ್ವ, ಪತ್ರಿಕೋದ್ಯಮ, ಶಿಕ್ಷಣಶಾಸ್ತ್ರ, ಮಾನವಶಾಸ್ತ್ರ, ಭಾಷಾಶಾಸ್ತ್ರ, ಜಾನಪದ, ನ್ಯಾಯಶಾಸ್ತ್ರ, ವಾಣಿಜ್ಯ, ಸಂಗೀತ, ನೃತ್ಯ, ಚಿತ್ರಕಲೆ, ವಾಸ್ತುಶಿಲ್ಪ ಮುಂತಾದ ಕ್ಷೇತ್ರಗಳಲ್ಲಿ ಉಪಯುಕ್ತವೂ ವಿಚಾರಪೂರ್ಣವೂ ಸಂಶೋಧನಾತ್ಮಕವೂ ಆದ ಲೇಖನ, ವಿಮರ್ಶೆ, ಪ್ರಬಂಧಗಳನ್ನು ಸಮರ್ಥವಾಗಿ ಬರೆಯುವವರಿಗೆ ಯುಕ್ತ ಮಾಧ್ಯಮವಾಗಿರುವ ಪತ್ರಿಕೆಯಿದು.

ಈ ವರೆಗೆ ನಡೆದುಬಂದ ಈ ಪತ್ರಿಕೆಯ ಸಂಪಾದಕವರ್ಗದ ವಿವರ:

ಎಚ್.ಎಸ್.ಕೃಷ್ಣಸ್ವಾಮಿ ಅಯ್ಯಂಗಾರ್, ಡಾ|| ಎ.ವಿ.ನರಸಿಂಹಮೂರ್ತಿ, ಡಾ|| ಬಾ.ರಾ. ಗೋಪಾಲ್, ಡಾ|| ಬಿ.ಎಸ್.ಶ್ರೀಕಂಠಯ್ಯ, ಡಾ|| ಸಿ.ಎಂ.ಮುನಿರಾಮಪ್ಪ, ಡಾ|| ಬಿ.ಕೆ. ಗುರುರಾಜರಾವ್, ಡಾ|| ಸಿ.ಕೆ. ರೇಣುಕಾರ್ಯ, ಡಾ|| ಎಂ.ವಿ.ಶ್ರೀನಿವಾಸ್, ಎಂ.ಎನ್.ನಂಜುಂಡರಾಜೇಅರಸ್, ಡಾ|| ಕೆ.ಕೆಂಪೇಗೌಡ, ಡಾ|| ಲಕ್ಷ್ಮೀನಾರಾಯಣ ಅಶೋಕ, ಪ್ರೊ. ಅಂಬಳಿಕೆ ಹಿರಿಮಣ್ಣ, ಡಾ|| ಆರ್. ರಾಮಕೃಷ್ಣ ಮುಂತಾದವರು ಸಂಪಾದಕರಾಗಿ, ಕಾರ್ಯನಿರ್ವಹಿಸಿದ್ದಾರೆ. ನಿರ್ದಿಷ್ಟ ಅವಧಿಗಳಲ್ಲಿ ಸಂಪಾದಕ ಮಂಡಳಿಯೂ ಇತ್ತು. ಅದರ ಅಧ್ಯಕ್ಷರಾಗಿ ಜಿ.ಎನ್.ಕುಂದರಗಿ, ಡಾ|| ಅಂಬಳಿಕೆ ಹಿರಿಯಣ್ಣ, ಸದಸ್ಯರಾಗಿ ಡಾ|| ಓ.ಅನಂತರಾಮಯ್ಯ, ಡಾ|| ಎಚ್.ಎಂ.ರಾಜಶೇಖರ, ಶ್ರೀ ಕೃಷ್ಣೇಗೌಡ, ಡಾ|| ಅಂಬಳಿಕೆ ಹಿರಿಯಣ್ಣ, ಡಾ|| ಸೋಮಶೇಖರ ಗೌಡ, ಕೆ.ಮೊಹಮದ್ ಷರೀಫ್, ಡಾ|| ವಿ.ಎನ್. ಶೇಷಗಿರಿರಾವ್, ಡಾ|| ಜಿ.ವೆಂಕಟೇಶ್ ಕುಮಾರ್, ಡಾ|| ಮೈಲಹಳ್ಳಿ ರೇವಣ್ಣ, ಡಾ|| ಕೆ. ಯಶೋಧರ, ಸಲಹೆಗಾರರಾಗಿ ಡಾ|| ಡಿ.ಕೆ. ರಾಜೇಂದ್ರ, ಡಾ|| ಸಿ.ವಿ. ಸಿದ್ಧಾಶ್ರಮ ಅವರು ಕೆಲಸ ಮಾಡಿದ್ದಾರೆ.

ವರ್ಷಕ್ಕೆ ನಾಲ್ಕು ಸಂಚಿಕೆಗಳಂತೆ ಅನುಕ್ರಮವಾಗಿ ಪ್ರಕಟಗೊಳ್ಳುತ್ತಿರುವ ಈ ಪತ್ರಿಕೆ ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ವತಿಯಿಂದ ನಡೆಯುತ್ತಿದೆ. ಎಷ್ಟೇ ಕ್ಲಿಷ್ಟ ಸಮಸ್ಯೆಗಳು ಎದುರಾದರೂ ಗುಣಮಟ್ಟವನ್ನು ಉಳಿಸಿಕೊಂಡು ಬಂದಿದೆ. ವಿಶ್ವವಿದ್ಯಾನಿಲಯದಲ್ಲಿ ಮಾತ್ರವಲ್ಲದೆ ಹೊರಗಡೆಯ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿದ್ವಾಂಸರಿಗೂ ಸಂಶೋಧಕರಿಗೂ ಈ ಪತ್ರಿಕೆ ಮಹತ್ವದ ವೇದಿಕೆಯೊಂದನ್ನು ರಚಿಸುವಲ್ಲಿ ಸಮರ್ಥವಾಗಿದೆ. ಮೂವತ್ತೈದು ವಸಂತಗಳನ್ನು ಕಂಡಿರುವ ಈ ಪತ್ರಿಕೆಯ ಬೆಳ್ಳಿ ಸಂಪುಟ 1994ರಲ್ಲಿ ಪ್ರಕಟವಾಗಿದೆ. (ಆರ್.ರಾಮಕೃಷ್ಣ)