ಮಾಲೂರು ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಒಂದು ತಾಲ್ಲೂಕು ಮತ್ತು ಅದರ ಆಡಳಿತ ಕೇಂದ್ರ. ಕೋಲಾರ ಉಪವಿಭಾಗಕ್ಕೆ ಸೇರಿದೆ. ಈ ತಾಲ್ಲೂಕನ್ನು ಪೂರ್ವದಲ್ಲಿ ಬಂಗಾರಪೇಟೆ, ಉತ್ತರದಲ್ಲಿ ಕೋಲಾರ, ಪಶ್ಚಿಮದಲ್ಲಿ ಬೆಂಗಳೂರು ಜಿಲ್ಲೆಯ ಹೊಸಕೋಟೆ ತಾಲ್ಲೂಕುಗಳೂ ದಕ್ಷಿಣದಲ್ಲಿ ತಮಿಳುನಾಡೂ ಬಳಸಿವೆ. ಒಟ್ಟು 364 ಗ್ರಾಮಗಳಿವೆ. ಲಕ್ಕೂರು, ಮಾಲೂರು, ಮಾಸ್ತಿ ಮತ್ತು ಟೇಕಲ್ ಹೋಬಳಿಗಳು. ವಿಸ್ತೀರ್ಣ 648 ಚಕಿಮೀ. ಜನಸಂಖ್ಯೆ 2,06,059 (2001).

ತಾಲ್ಲೂಕು ಪಾಲಾರ್ ಮತ್ತು ದಕ್ಷಿಣ ಪಿನಾಕಿನಿ ನದಿಗಳ ಜಲವಿಭಾಜಕ ಪ್ರದೇಶದಲ್ಲಿದೆ. ಇಲ್ಲಿಯ ಎತ್ತರ ಪ್ರದೇಶಗಳು ಶುಷ್ಕವಾಗಿವೆ. ಇಲ್ಲವೇ ಕುರುಚಲು ಕಾಡಿನಿಂದ ಕೂಡಿವೆ. ವಕ್ಕಲೇರಿ ಮತ್ತು ಟೇಕಲ್ ಬಳಿ ಕಣಶಿಲೆಯ ಬೆಟ್ಟಗಳಿವೆ. ತಾಲ್ಲೂಕಿನ ಅಧಿಕ ಭಾಗದಲ್ಲಿ ಅದರಲ್ಲೂ ಮಾಲೂರು ಮತ್ತು ಲಕ್ಕೂರು ಹೋಬಳಿಗಳಲ್ಲಿ ಮರಳು ಮಿಶ್ರಿತ ಕೆಂಪು ಮಣ್ಣಿನ ಭೂಮಿ ಇದೆ. ಟೇಕಲ್ ಬೆಟ್ಟಗಳ ಬಳಿಗೆ ಸೇರಿದಂತೆ ಈ ಮಣ್ಣಿನ ಆಳ ಕಡಿಮೆ ಆಗುತ್ತದೆ. ಕರಡಿಬಂಡೆ ಮತ್ತು ದೊಡ್ಡ ಕುಂತೂರುಗಳ ಬಳಿ ಪಿಂಗಾಣಿ ಮಣ್ಣು ಇದೆ. ಫಲವತ್ತಾದ ಪ್ರದೇಶ ಮಾಸ್ತಿ ಹೋಬಳಿ. ಇಲ್ಲಿ ದಕ್ಷಿಣ ಪಿನಾಕಿನಿಗೆ ಸೇರುವ ತೊರೆಗಳು ಹರಿಯುತ್ತವೆ. ಮಾರ್ಕಂಡೇಯ ನದಿಯ ಒಂದು ಕವಲು ಟೇಕಲ್ ಬೆಟ್ಟಗಳ ಬಳಿ ಹುಟ್ಟಿ ಆಗ್ನೇಯ ದಿಕ್ಕಿನಲ್ಲಿ ಹರಿದು ಪಕ್ಕದ ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಬಳಿ ಮತ್ತೊಂದು ಕವಲನ್ನು ಸೇರಿಕೊಳ್ಳುವುದು. ವಾರ್ಷಿಕ ಸರಾಸರಿ ಮಳೆ 733 ಮಿ.ಮೀ. ಇಲ್ಲಿ ಕೆರೆಗಳು ಮತ್ತು ಬಾವಿಗಳು ಅಧಿಕ ಸಂಖ್ಯೆಯಲ್ಲಿವೆ. ರಾಗಿ, ಬತ್ತ, ಆಲೂಗೆಡ್ಡೆ, ಸೇಂಗಾ, ಹೈಬ್ರಿಡ್ ಜೋಳ, ಮುಸುಕಿನ ಜೋಳ, ವಿವಿಧ ತರಕಾರಿಗಳು ಮುಖ್ಯ ಬೆಳೆಗಳು. ಹಿಪ್ಪುನೇರಳೆ, ಗೋದಿ, ಈರುಳ್ಳಿ, ಮೆಣಸಿನ ಕಾಯಿ, ಮಾವು, ಬಾಳೆ, ದ್ರಾಕ್ಷಿ, ಹೊಗೆಸೊಪ್ಪು ಬೆಳೆಸುತ್ತಾರೆ. ಮಲ್ಲಿಗೆ, ಸೇವಂತಿಗೆ ವಿಶೇಷ ಹೂ ಬೆಳೆಗಳು. ವ್ಯವಸಾಯದೊಂದಿಗೆ ಪಶುಪಾಲನೆ ಇದ್ದು ಅವುಗಳ ರಕ್ಷಣೆ ಮತ್ತು ಅಭಿವೃದ್ಧಿಗೆ ತಾಲ್ಲೂಕು ಮತ್ತು ಗ್ರಾಮಮಟ್ಟದ ಪಶುವೈದ್ಯಾಲಯಗಳಿವೆ.

ಮಾಲೂರಿನ ಹತ್ತಿರದಲ್ಲಿ ದೊರೆಯುವ ಮಣ್ಣು ಹೆಂಚು ಮತ್ತು ಇಟ್ಟಿಗೆ ತಯಾರಿಕೆಗೆ ಉತ್ತಮವಾದದ್ದು. ಇಲ್ಲಿ ತಲಾ ನಾಲ್ಕು ಹೆಂಚಿನ ಮತ್ತು ಇಟ್ಟಿಗೆ ಕಾರ್ಖಾನೆಗಳೂ ಇವೆ. ಗೃಹಕೈಗಾರಿಕೆಗಳಾಗಿ ಬೆಂಕಿಪೊಟ್ಟಣ, ಊದುಬತ್ತಿ, ಬೀಡಿ ತಯಾರಿಕೆ, ಜೇನು ಮತ್ತು ಕೋಳಿ ಸಾಕಣೆ, ಹಾಲಿನ ಉತ್ಪಾದನೆ ಮತ್ತು ರೇಷ್ಮೆ ವ್ಯವಸಾಯ ಇವು ಇತರ ಪ್ರಚಲಿತವಿರುವ ಉದ್ಯಮಗಳು. ಇಲ್ಲಿ ತಯಾರಾಗುವ ಇಟ್ಟಿಗೆ ಹೆಂಚುಗಳನ್ನು ಹೊರಜಿಲ್ಲೆಗಳಿಗೂ ಕಳುಹಿಸಲಾಗುವುದು. ಶಿವಾರಪಟ್ಟಣದಲ್ಲಿ ತಯಾರಾಗುವ ಲೋಹದ ಮತ್ತು ಕಲ್ಲಿನ ವಿಗ್ರಹಗಳಿಗೆ ವಿದೇಶಗಳಲ್ಲಿ ಬೇಡಿಕೆ ಇದೆ. ಇಲ್ಲಿ ಬೆಳೆಯುವ ವಿವಿಧ ತರಕಾರಿಗಳನ್ನೂ ಮಲ್ಲಿಗೆ, ಸೇವಂತಿಗೆ, ಗುಲಾಬಿ ಹೂಗಳನ್ನೂ ಹೊರರಾಜ್ಯಗಳಿಗೆ ರವಾನಿಸಲಾಗುತ್ತದೆ. ಇಲ್ಲಿಯ ವ್ಯಾಪಾರ ವಾಣಿಜ್ಯೋದ್ಯಮಗಳಿಗೆ ಸಹಕಾರಿಯಾಗಿರುವ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳಿವೆ.

ಚೆನ್ನೈ-ಬೆಂಗಳೂರು ಬ್ರಾಡ್‍ಗ್ರೇಜ್ ರೈಲು ಮಾರ್ಗ ಈ ತಾಲ್ಲೂಕಿನ ಮಧ್ಯದಲ್ಲಿ ಹಾದುಹೋಗಿದೆ. ಮಾಲೂರು ಮತ್ತು ಟೇಕಲ್ ರೈಲ್ವೆ ನಿಲ್ದಾಣಗಳು. ಮಾಲೂರಿನಿಂದ ಹೊಸಕೋಟೆ, ಕೋಲಾರ, ಹೊಸೂರು, ಮಾಸ್ತಿ, ಸೇಲಮ್ ಈ ಸ್ಥಳಗಳಿಗೆ ಹೋಗುವ ರಸ್ತೆಗಳು ತಾಲ್ಲೂಕಿನ ಮುಖ್ಯಹಾದಿಗಳು. ತಾಲ್ಲೂಕಿನಲ್ಲಿ ಅಂಚೆ, ತಂತಿ, ದೂರವಾಣಿ ಮತ್ತು ವಿದ್ಯುಚ್ಛಕ್ತಿ ಸೌಲಭ್ಯವೂ ಆರೋಗ್ಯ ಕೇಂದ್ರಗಳೂ ಉಂಟು. ತಾಲ್ಲೂಕಿನಲ್ಲಿ ಪ್ರೌಢಶಾಲೆಗಳೂ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳೂ ಇವೆ. ಕೇಂದ್ರದಲ್ಲಿ ಸರ್ಕಾರಿ ಜೂನಿಯರ್ ಕಾಲೇಜು ಇದೆ.

ಈ ತಾಲ್ಲೂಕಿನ ಮುಖ್ಯ ಸ್ಥಳಗಳಲ್ಲಿ ಚಿಕ್ಕತಿರುಪತಿ ಒಂದು ಪುಣ್ಯಕ್ಷೇತ್ರ. ಮಡಿವಾಳ ಗ್ರಾಮದಲ್ಲಿ ಚೋಳರ ಕಾಲದ ಗಂಗಾಧರೇಶ್ವರ ದೇವಾಲಯವಿದೆ. ಮಾಲೂರಿನ ಉತ್ತರಕ್ಕಿರುವ ತೋರಣಹಳ್ಳಿಯಲ್ಲಿ ದನಗಳಿಗೆ ಬರುವ ಚಪ್ಪೆಜಾಡ್ಯವನ್ನು ವಾಸಿಮಾಡುವ ದೇವರೆಂಬ ನಂಬಿಕೆಯುಳ್ಳ ಸಪ್ಪಲಮ್ಮನ ದೇವಾಲಯವಿದೆ. ಇಲ್ಲಿ ಪ್ರತಿವರ್ಷ ಪುಷ್ಯಮಾಸದಲ್ಲಿ ದನಗಳ ಜಾತ್ರೆ ನಡೆಯುತ್ತದೆ. ಶಿವಾರಪಟ್ಟಣದಲ್ಲಿ ಗಂಗದೊರೆ ಶ್ರೀಪುರುಷನ ಕಾಲದ ಶಿಲಾಶಾಸನಗಳಿವೆ. ಚಿಕ್ಕಕಡತೂರಿನಲ್ಲಿ ಪ್ರಾಚೀನ ಕಾಲದ ವೀರರ ಗುಡಿಗಳಿವೆ. ಟೇಕಲ್ ಪವಿತ್ರ ಸ್ಥಳ. ಮಾಸ್ತಿ ಹೋಬಳಿ ಕೇಂದ್ರ ಮತ್ತು ದೊಡ್ಡ ಗ್ರಾಮ. ಈ ತಾಲ್ಲೂಕಿನ ವಿರೂಪಾಕ್ಷಪುರದಲ್ಲಿ ವಿಜಯನಗರದ ದೊರೆ ಎರಡನೆಯ ದೇವರಾಯನ ಕಾಲದ ವಿರೂಪಾಕ್ಷ ದೇವಾಲಯವಿದೆ.

ಮಾಲೂರು ಈ ತಾಲ್ಲೂಕಿನ ಆಡಳಿತ ಕೇಂದ್ರ. ಕೋಲಾರದಿಂದ ನೈಋತ್ಯಕ್ಕೆ 24 ಕಿ.ಮೀ. ದೂರದಲ್ಲಿದೆ. ಜನಸಂಖ್ಯೆ 27,791 (2001). ಇದು ಬೆಂಗಳೂರು-ಕೋಲಾರ, ಬೆಂಗಳೂರು-ಚೆನ್ನೈ ರೈಲ್ವೆಹಾದಿಯಲ್ಲಿಯ ಒಂದು ನಿಲ್ದಾಣ. ಈ ಊರು ಬೆಂಗಳೂರಿನ ಪೂರ್ವಕ್ಕಿದ್ದು ಕೋಲಾರ, ಬಂಗಾರಪೇಟೆ, ತಮಿಳುನಾಡಿನ ಸೇಲಮ್ ಜಿಲ್ಲೆ-ಇವುಗಳಿಗೆ ಮಧ್ಯವರ್ತಿಯಾದ ವ್ಯಾಪಾರಕೇಂದ್ರವಾಗಿದೆ. ತಾಲ್ಲೂಕಿನ ಆಡಳಿತ ಕೆಂದ್ರವಾಗಿರುವುದರಿಂದ ಸರ್ಕಾರಿ ಕಚೇರಿಗಳೂ ಬ್ಯಾಂಕುಗಳೂ ಇದ್ದು ಪ್ರೌಢಶಾಲೆ, ಆಸ್ಪತ್ರೆ, ಪಶುವೈದ್ಯಾಲಯ, ಅಂಚೆ, ತಂತಿ ದೂರವಾಣಿ ಮತ್ತು ವಿದ್ಯುಚ್ಛಕ್ತಿಯ ಸೌಲಭ್ಯಗಳಿವೆ. ಪುರಸಭೆಯ ಆಡಳಿತಕ್ಕೆ ಒಳಪಟ್ಟಿದೆ. ಸುರಕ್ಷಿತ ಕುಡಿಯುವ ನೀರಿನ ಸರಬರಾಜಿದೆ.

ವಕ್ಕಲೇರಿ ಬೆಟ್ಟದಲ್ಲಿರುವ ಮಾರ್ಕಂಡೇಶ್ವರ ದೇವಾಲಯಕ್ಕೆ ಮಲ್ಲಿಗೆ ಹೂವನ್ನು ಮಾಲೂರಿನ ತೋಟಗಳಿಂದ ಕಳುಹಿಸುತ್ತಿದ್ದುದರಿಂದ ಈ ಊರಿಗೆ ಹಿಂದೆ ಮಲ್ಲಿಕಾಪುರ ಅಥವಾ ಮಲ್ಲಿಗೆಪಟ್ಟಣವೆಂಬ ಹೆಸರಿತ್ತು ಎನ್ನಲಾಗಿದೆ. ಈ ಊರು 16ನೆಯ ಶತಮಾನದಲ್ಲಿ ಹೊಸಕೋಟೆಯ ನಾಯಕ ತಿಮ್ಮೇಗೌಡನ ಅಧೀನದಲ್ಲಿದ್ದು ಅನಂತರ ಬಿಜಾಪುರದ ಆಡಳಿತಕ್ಕೆ ಸೇರಿದ್ದು ಹಲವು ಮನ್‍ಸಬ್‍ದಾರರಿಗೆ ಜಹಗೀರಿಯಾಗಿ ನೀಡಲಾಗಿತ್ತು. ಮರಾಠರ ಕೈವಶವಾದ ಈ ಊರನ್ನು ರಜಪೂತ ಜಮೀನ್‍ದಾರ ಹ್ರಿದರಾಮ್‍ಸಿಂಗ್ ತನ್ನ ವಶಪಡಿಸಿಕೊಂಡು ವಿಸ್ತರಿಸಿ ಊರಿಗೆ ಮಾಲೂರು ಎಂದು ಹೆಸರಿಸಿದ. ಹೈದರ್ ಆಕ್ರಮಿಸಿಕೊಳ್ಳುವ ತನಕ ಈ ಊರನ್ನು ಹ್ರಿದರಾಮ್ ಸಿಂಗನ ವಂಶಜರೇ ಆಳುತ್ತಿದ್ದರು.

ಶಂಕರನಾರಾಯಣಸ್ವಾಮಿ, ಧರ್ಮರಾಯಸ್ವಾಮಿ, ಬೀರೇಶ್ವರಸ್ವಾಮಿ ಮತ್ತು ಕೋದಂಡರಾಮಸ್ವಾಮಿ ದೇವಾಲಯಗಳು ಇಲ್ಲಿಯ ಪ್ರಮುಖ ಗುಡಿಗಳು. ಕೋದಂಡರಾಮಸ್ವಾಮಿ ದೇವಾಲಯದ ಮುಂಭಾಗದಲ್ಲಿ ಒಂದು ದೊಡ್ಡ ಪುಷ್ಕರಿಣಿ ಇದೆ. ಫಾಲ್ಗುಣಮಾಸದಲ್ಲಿ ಶಂಕರನಾರಾಯಣಸ್ವಾಮಿಗೆ ಏಳು ದಿನಗಳು ವಿಶೇಷ ಪೂಜೆ ಮತ್ತು ರಥೋತ್ಸವ ನಡೆಯುತ್ತದೆ. ಚೈತ್ರಮಾಸದಲ್ಲಿ ಈ ಊರಿನಲ್ಲಿ ನಡೆಯುವ ಧರ್ಮರಾಯಸ್ವಾಮಿ ಕರಗ ಪ್ರಸಿದ್ಧ.