ಮುತ್ತುಗ -
ಫ್ಯಾಬೇಸೀ (ಲೆಗ್ಯೂಮಿನೇಸೀ) ಕುಟುಂಬದ ಪ್ಯಾಪಿಲಿಯೊನಾಯ್ಡೀ ಉಪಕುಟುಂಬಕ್ಕೆ ಸೇರಿದ ಕಾಡುಮರ (ಫ್ಲೇಮ್ ಆಫ್ ದ ಫಾರೆಸ್ಟ್). ಬ್ಯೂಟಿಯ ಮಾನೊಸ್ಟರ್ಮ ಇದರ ವೈಜ್ಞಾನಿಕ ಹೆಸರು. ಸಂಸ್ಕøತದಲ್ಲಿ ಇದಕ್ಕೆ ಪಲಾಶ ಎಂಬ ಹೆಸರಿದೆ.
ಸಣ್ಣ ಇಲ್ಲವೆ ಮಧ್ಯಮ ಗಾತ್ರದ ಮರ: 10 ಮೀಟರಿಗಿಂತ ಹೆಚ್ಚು ಬೆಳೆಯದು. ಬೆಳೆವಣಿಗೆಯಲ್ಲೂ ಟಿಸಿಲೊಡೆಯುವಿಕೆಯಲ್ಲೂ ಒಡ್ಡೊಡ್ಡಾಗಿದೆ. ಪ್ರಧಾನಕಾಂಡವೂ ರೆಂಬೆಗಳೂ ತಿರುಚಿಕೊಂಡಂತೆ ಇರುವುವು. ತೊಗಟೆ ಬೂದಿ ಇಲ್ಲವೆ ಕಂದುಬಣ್ಣದ್ದು. ಎಲೆಗಳು ಮೂರು ಹಾಲೆಗಳುಳ್ಳ ಸಂಯುಕ್ತ ಮಾದರಿಯವು. ಪತ್ರಕಗಳು ಚರ್ಮದಂತೆ ಒರಟಾಗಿವೆ. ಎಲೆಗಳು ಎಳೆಯವಿರುವಾಗ ಅವುಗಳ ಮೇಲ್ಮೈ ಮೃದುವಾದ ರೇಶ್ಮೆಯಂಥ ಕೂದಲುಗಳಿಂದ ಆವೃತವಾಗಿರುತ್ತದೆ. ಚಳಿಗಾಲದ ವೇಳೆಗೆ ಎಲೆಗಳೆಲ್ಲ ಉದುರುವುವು. ಫೆಬ್ರುವರಿ-ಮಾರ್ಚಿ ತಿಂಗಳಲ್ಲಿ ಮರ ಸಂಪೂರ್ಣ ಬೋಳಾಗಿ ಹೂಬಿಡಲು ಆರಂಭಿಸುತ್ತದೆ. ಹೂಗಳು ರೆಂಬೆಗಳ ಗೆಣ್ಣುಗಳಲ್ಲಿ ಜೊಂಪೆಜೊಂಪೆಯಾಗಿ ಅರಳುವುವು. ರೆಂಬೆಗಳೂ ಹೂ ತೊಟ್ಟುಗಳೂ ಕಪ್ಪುಹಸುರು ಬಣ್ಣದಿಂದ ಕೂಡಿದ್ದು ಮಖಮಲ್ಲಿನಂಥ ರೋಮಗಳಿಂದ ಆವೃತವಾಗಿರುವುವು. ಹೂಗಳ ಬಣ್ಣ ಕಿತ್ತಳೆಕೆಂಪು. ದಳಗಳ ಹೊರ ಮೈಮೇಲೆ ನವುರಾದ ನಯವಾದ ಬೆಳ್ಳಿಕೂದಲುಗಳುಂಟು. ಸಂಪೂರ್ಣ ಪತ್ರ ರಹಿತವಾಗಿದ್ದು ಉಜ್ಜ್ವಲವರ್ಣದ ಹೂಗಳಿಂದ ಕೂಡಿದೆ ಮುತ್ತುಗ ನಿಜಕ್ಕೂ ಬೆಂಕಿಯ ಜ್ವಾಲೆಯಂತೆ ಕಾಣುತ್ತದೆ. ಎಂದೇ ಇದಕ್ಕೆ ಇಂಗ್ಲಿಷಿನಲ್ಲಿ ಫ್ಲೇಮ್ ಆಫ್ ದ ಫಾರೆಸ್ಟ್ ಎಂಬ ಹೆಸರು ಬಂದಿದೆ. ಪ್ರತಿಯೊಂದು ಹೂವಿನಲ್ಲಿ 5 ಪುಷ್ಪಪತ್ರಗಳೂ 5 ದಳಗಳೂ ಇವೆ. ಫಲ ಲೆಗ್ಯೂಮ್ ಮಾದರಿಯದು. ಚಪ್ಪಟೆಯಾಗಿರುವ ಇದು 12-18 ಸೆಂಮೀ ಉದ್ದ ಹಾಗೂ 4-5 ಸೆಂಮೀ ಅಗಲ ಇದೆ. ಹಣ್ಣಲ್ಲಿ ಒಂದೇ ಒಂದು ಬೀಜ ಉಂಟು. ಮುತ್ತುಗದ ತವರು ಭಾರತ ಎನ್ನಲಾಗಿದೆ. ಭಾರತಾದ್ಯಂತ ಹಾಗೂ ಬರ್ಮದಲ್ಲಿ ಎಲ್ಲೆಡೆಯೂ ಕಾಣದೊರೆಯುತ್ತದೆ.
ಮುತ್ತುಗ ಹಲವಾರು ತೆರದಲ್ಲಿ ಉಪಯುಕ್ತಮರವಾಗಿದೆ. ಇದರ ಸೌದೆ ಒಳ್ಳೆ ಉರುವಲು. ತೊಗಟೆಯನ್ನು ಚರ್ಮಹದಗಾರಿಕೆಯಲ್ಲಿ ಬಳಸುವುದಿದೆ. ಎಲೆಗಳನ್ನು ಪರಸ್ಪರ ಹೆಣೆದು ಪತ್ರಾವಳಿ (ಊಟದೆಲೆ) ತಯಾರಿಸುವುದು ರೂಢಿಯಲ್ಲಿದೆ. ತೊಗಟೆಯನ್ನು ಕತ್ತರಿಸಿದರೆ ಕೆಂಪುಬಣ್ಣದ ಗೋಂದು ಲಭಿಸುತ್ತದೆ. ಇದಕ್ಕೆ ಬೆಂಗಾಲ್ ಕಿನೊ ಎಂಬ ಹೆಸರಿದ್ದು ಇದನ್ನು ಅತಿಸಾರ ಮುಂತಾದ ರೋಗಗಳಲ್ಲಿ ಪ್ರತಿಬಂಧಕವಾಗಿ ಬಳಸುವುದುಂಟು. ಮುತ್ತುಗದ ಬೀಜಗಳು ಜಂತು, ಲಾಡಿಹುಳು ಮುಂತಾದವುಗಳ ನಿವಾರಣೆಗೆ ಉತ್ತಮ ಎನ್ನಲಾಗಿದೆ. ಭಾರತದ ಕೆಲವು ಭಾಗಗಳಲ್ಲಿ ಅರಗುಕೀಟ ಸಾಕಣೆಗೆ ಮುತ್ತುಗದ ಮರವನ್ನು ಬಳಸುತ್ತಾರೆ. ಹೂಗಳಿಂದ ಒಂದು ಬಗೆಯ ರಂಗನ್ನು ತಯಾರಿಸುವುದಿದೆ. ಬೇರಿನಿಂದ ದೊರೆಯುವ ನಾರು ಹಗ್ಗದ ತಯಾರಿಕೆಯಲ್ಲಿ ಉಪಯುಕ್ತವೆನಿಸಿದೆ.
ಮುತ್ತುಗ ಮರದ ಆಕಾರ ಅಷ್ಟಾಗಿ ಚೆನ್ನಾಗಿಲ್ಲವಾದ್ದರಿಂದ, ಬೆಳೆವಣಿಗೆ ನಿಧಾನಗತಿಯದಾದ್ದರಿಂದ ಮತ್ತು ಬಿತ್ತನೆಗೆ ಹೊಸ ಬೀಜಗಳೇ ಬೇಕಾಗಿರುವುದರಿಂದ ಇದನ್ನು ಉದ್ಯಾನಗಳಲ್ಲಾಗಲಿ, ರಸ್ತೆ ಬದಿಯಲ್ಲಾಗಲಿ ಬೆಳೆಸುವುದು ವಿರಳ. (ಎಸ್.ಐ.ಎಚ್.) (ಪರಿಷ್ಕರಣೆ : ಕೆ ಬಿ ಸದಾನಂದ)