ಮೇ - ಕ್ರಿಸ್ತವರ್ಷದ ಐದನೆಯ ತಿಂಗಳು. 31 ದಿವಸಗಳಿರುತ್ತವೆ. ಪ್ರಾಚೀನ ರೋಮನ್ ತಾರೀಖುಪಟ್ಟಿಯಲ್ಲಿ ಇದನ್ನು ಮೂರನೆಯ ತಿಂಗಳು ಎಂದು ಪರಿಗಣಿಸಲಾಗಿತ್ತು. ಆಗ ಮಾರ್ಚ್ ಮೊದಲನೆಯ ತಿಂಗಳಾಗಿತ್ತು. ರೋಮಿನ ಮಹಾದಂಡನಾಯಕ, ರಾಜಕಾರಣಿ ಜೂಲಿಯಸ್ ಸೀಜರ್ (ಕ್ರಿ.ಪೂ.ಸು.100-44) ಆ ತಾರೀಖುಪಟ್ಟಿಯಲ್ಲಿ ಮಾರ್ಪಾಡು ತಂದು ಜನವರಿ ತಿಂಗಳನ್ನು ಮೊದಲನೆಯದನ್ನಾಗಿಯೂ ಮೇ ತಿಂಗಳನ್ನು ಐದನೆಯದನ್ನಾಗಿಯೂ ಬದಲಾಯಿಸಿದ. ರೋಮನ್ ಕಥೆಯೊಂದರ ರೀತ್ಯ ವಸಂತಋತು ಹಾಗೂ ಅಭಿವೃದ್ಧಿ ಅಧಿದೇವತೆಯಾದ ಮೇಯ ಎಂಬವಳ ಗೌರವಾರ್ಥ ತಿಂಗಳಿಗೆ ಮೇ ಎಂಬ ಹೆಸರನ್ನಿಡಲಾಗಿದೆ. ವಯಸ್ಸಿನಲ್ಲಿ ಹಿರಿಯರಾದ ವೃದ್ಧಪುರುಷರು ಎಂಬ ಅರ್ಥ ಬರುವ ಲ್ಯಾಟಿನ್ ಶಬ್ದ ಮೇಜಾರಿಸ್ ಎಂಬುದರ ಹ್ರಸ್ವರೂಪವೇ ಮೇ ಎಂಬುದಾಗಿ ಕೆಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಹಿರಿಯರಿಗೆ ಮೇ ತಿಂಗಳು ಬಲು ಪವಿತ್ರ ಎಂಬುದು ಆ ವಿದ್ವಾಂಸರ ಅಭಿಪ್ರಾಯವಾಗಿತ್ತು.

ಮುಳ್ಳುಪೊದೆಯಂತಿರುವ ಸಣ್ಣ ಗಿಡದ ಹೂಗಳನ್ನು (ಹಾಥಾರನ) ಲಿಲಿ ಹೂಗಳನ್ನು ಮೇ ತಿಂಗಳ ಹೂಗಳೆಂದು ಸಂಬೋಧಿಸುವುದಿದೆ. ಉಜ್ವಲ ಹಸುರು ಬಣ್ಣದ ಪಚ್ಚೆಯನ್ನು (ಎಮರಲ್ಡ್) ಮೇ ತಿಂಗಳ ಜನ್ಮಶಿಲೆ ಎಂದು ಹೇಳುವುದುಂಟು.

 *