ಮೇಕೆದಾಟು ಕರ್ನಾಟಕ ರಾಜ್ಯದ ಬೆಂಗಳೂರು ಜಿಲ್ಲೆಯ ಕನಕಪುರ ತಾಲ್ಲೂಕಿನ ದಕ್ಷಿಣ ಭಾಗದಲ್ಲಿ ದಟ್ಟವಾದ ಅರಣ್ಯದ ನಡುವೆ ಕಾವೇರಿ ನದೀ ಪಾತ್ರದಲ್ಲಿರುವ ಒಂದು ಪ್ರೇಕ್ಷಣೀಯ ಸ್ಥಳ. ಬೆಂಗಳೂರಿನ ದಕ್ಷಿಣಕ್ಕೆ ಸಾತನೂರು ಮಾರ್ಗವಾಗಿ 113 ಕಿಮೀ. ಕನಕಪುರದಿಂದ ಸಾತನೂರು, ಆಲಹಳ್ಳಿ, ಉಯ್ಯಂಬಳ್ಳಿಗಳ ಮಾರ್ಗವಾಗಿ ದಕ್ಷಿಣದಲ್ಲಿ ಸುಮಾರು 40 ಕಿಮೀ ದೂರದಲ್ಲಿದೆ.

ಕನಕಪುರದ ಮಾರ್ಗವಾಗಿ ಅರ್ಕಾವತಿ ನದಿ ಸುಮಾರು 32 ಕಿಮೀ ಮೈದಾನ ಪ್ರದೇಶದಲ್ಲಿ ಹರಿದು ಕಡೆಗೆ ತಾಲ್ಲೂಕಿನ ದಕ್ಷಿಣದ ಪ್ರದೇಶವಾದ ಅರಣ್ಯವನ್ನು ಹೊಕ್ಕು ಕಾವೇರಿಯನ್ನು ಸಂಗಮ ಎನ್ನುವೆಡೆ ಸೇರುತ್ತದೆ. ಅಲ್ಲಿ ಸಂಗಮೇಶ್ವರನ ದೇವಾಲಯ ಮತ್ತು ಒಂದು ಪ್ರವಾಸಿ ಮಂದಿರ ಇವೆ. ಇಲ್ಲಿಂದ ಅರ್ಕಾವತಿಯನ್ನು ದಾಟಿ ಕಾವೇರಿಯ ಎಡ ದಂಡೆಯ ಮೇಲೆ ಸುಮಾರು 5 ಕಿಮೀ ದೂರದಲ್ಲಿ ಮೇಕೆದಾಟು ಸಿಕ್ಕುತ್ತದೆ. ಪ್ರವಾಸಿಗರಿಗೆ ಮುಖ್ಯ ಆಕರ್ಷಣೀಯ ಕೇಂದ್ರ ಮೇಕೆದಾಟು ಎಂದು ಪ್ರಸಿದ್ಧವಾಗಿದ್ದರೂ ಆ ಆಕರ್ಷಣೀಯ ಪೂರ್ವ ಸಿದ್ಧತೆ ಸಂಗಮದಿಂದಲೇ ಆರಂಭವಾಗುತ್ತದೆ. ಅರ್ಕಾವತಿಯಿಂದ ಕಾವೇರಿ ದಟ್ಟವಾದ ಅರಣ್ಯದ ನಡುವೆ ಮುಂದೆ ಪ್ರವಹಿಸಿದಂತೆ ಅದರ ಪಾತ್ರ ಕ್ರಮಕ್ರಮವಾಗಿ ಕಿರಿದಾಗುತ್ತ ಬರುತ್ತದೆ. ಅಲ್ಲಿಂದ ಇಳಿಜಾರು ಹೆಚ್ಚುತ್ತ ಹೋಗುವುದರಿಂದ ನೀರಿನ ಪ್ರವಾಹ ಭೀರ್ಗರೆಯುತ್ತ ವನಾಂತರ ಪ್ರದೇಶವೆಲ್ಲ ಗಂಭೀರ ಸ್ವರದಿಂದ ತುಂಬಿರುತ್ತದೆ. ಶತಮಾನಗಳ ಪ್ರವಾಹದ ಹೊಡೆತಕ್ಕೆ ಸಿಕ್ಕಿದ ಇಕ್ಕೆಲಗಳ ಬೆಟ್ಟಗಳ ಬಂಡೆಗಳು, ಚಿತ್ರ ವಿಚಿತ್ರವಾಗಿ ಕೊರೆದು ಹೋಗಿ ನಿಸರ್ಗ ನಿರ್ಮಿಸಿರುವ ಮಹೋನ್ನತ ಶಿಲ್ಪಕಲಾ ಕೃತಿಗಳಿಂದ ಕಂಗೊಳಿಸುತ್ತಿರುತ್ತವೆ. ಪಾತಾಳದಲ್ಲಿ ಡುಮಡುಮನೆ ಇಳಿದೋಡುತ್ತಿರುವ ನದಿಯ ಎತ್ತರವಾದ ಎರಡು ಪಾಶ್ರ್ವಗಳಲ್ಲೂ ಮರಗಳ ಸಾಲಿನ ಹಸುರಿನ ಸಾಂದ್ರತೆ ಪ್ರಪಾತದ ಪ್ರವಾಹದ ಮೇಲೆ ಕತ್ತಲು ಗರೆಯುತ್ತ ಅದರ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿವೆ. ಇಂಥ ಗಂಭೀರತೆಯ ನಡುವೆ ಮುಂದೆ ಪ್ರವಹಿಸಿದಂತೆ ನದಿಯ ಪಾತ್ರ ತೀರ ಇಕ್ಕಟ್ಟಾಗುತ್ತ ಬಂದು ಕೊನೆಗೆ ಮೇಕೆದಾಟನ್ನು ಸೇರುತ್ತದೆ. ಇಲ್ಲಿ ನದಿಯ ಪಾತ್ರ ಮೇಕೆ ದಾಟಬಲ್ಲಷ್ಟು ಕಿರಿದಾಗಿದೆ ಎಂದು ಉತ್ಪ್ರೇಕ್ಷೆಯಿಂದ ಹೇಳುವಷ್ಟು ಕಿರಿದಾಗಿದೆ ಎಂದೇ ಇಲ್ಲಿಗೆ ಮೇಕೆದಾಟು ಎಂಬ ಹೆಸರು. ನದಿಯ ಎಡದಡದಲ್ಲಿ ಧುಮ್ಮಿಕ್ಕುವ ನೀರಿಗೆ ಸೋಂಕುವಂತೆ ಪಕ್ಕದಲ್ಲಿ ಅಗಲವಾದ ಚಪ್ಪಟೆ ಬಂಡೆಕಲ್ಲೊಂದಿದೆ. ಇದಕ್ಕೆ ಟೇಬಲ್‍ರಾಕ್ ಎಂದು ಹೆಸರು. ಪ್ರವಾಸಿಗರು ಇದರ ಮೇಲೆ ನಿಂತು ನಿಸರ್ಗದ ರಮ್ಯ ಸೊಬಗನ್ನು ವೀಕ್ಷಿಸುವುದು ವಾಡಿಕೆ. ನದಿ ಮುಂದಕ್ಕೆ ಪ್ರವಹಿಸಿದಂತೆ ಅದರ ಪಾತ್ರ ವಿಸ್ತರಿಸುತ್ತ ಹೋಗುತ್ತದೆ. ಜಲರಾಶಿ ಹರಡಿಕೊಂಡು ಹೆಚ್ಚು ಇಳಿ ಜಾರಿಲ್ಲದ ಬಯಲಿನಲ್ಲಿ ನಿಧಾನವಾಗಿ ಮುಂದೆ ಸಾಗುತ್ತ ಕೊಳ್ಳೇಗಾಲ ತಾಲ್ಲೂಕಿನ ಪೂರ್ವ ಮತ್ತು ದಕ್ಷಿಣದ ಗಡಿಗಳನ್ನೂ ಆವರಿಸಿದಂತೆ ಹರಿದು ತಮಿಳುನಾಡನ್ನು ಸೇರುತ್ತದೆ.