ಮೇಘಾಲಯ ಭಾರತದ ಈಶಾನ್ಯ ದಿಕ್ಕಿನಲ್ಲಿರುವ ಒಂದು ರಾಜ್ಯ. ಈ ರಾಜ್ಯದ ದಕ್ಷಿಣ, ನೈಋತ್ಯ ಭಾಗದಲ್ಲಿ ಬಾಂಗ್ಲಾದೇಶ, ಉಳಿದ ಮೂರೂ ದಿಕ್ಕುಗಳಲ್ಲಿ ಭಾರತದ ಅಸ್ಸಾಮ್ ರಾಜ್ಯ ಇದನ್ನು ಸುತ್ತುವರಿದಿದೆ. 7 ಜಿಲ್ಲೆಗಳಿಂದ ಕೂಡಿರುವ ಈ ರಾಜ್ಯದ ವಿಸ್ತೀರ್ಣ 22,429 ಚ.ಕಿ.ಮೀ. ಜನಸಂಖ್ಯೆ 2306,069 (2001) ರಾಜಧಾನಿ ಷಿಲಾಂಗ್. ಹಿಂದಿನ ಅಸ್ಸಾಮ್ ರಾಜ್ಯದ ಖಾಸಿ ಜೈಂತಿಯಾ ಬೆಟ್ಟಗಳ ಹಾಗೂ ಗಾರೋ ಬೆಟ್ಟಗಳ ಜಿಲ್ಲೆಗಳನ್ನು ಪ್ರತ್ಯೇಕಿಸಿ ಸ್ವಯಮಾಡಳಿತ ಘಟಕವಾಗಿ 1970ರ ಏಪ್ರಿಲ್ 2ರಂದು ರಚಿಸಲಾಯಿತು. ಇದೊಂದು ರಾಜ್ಯವೆಂದು 1972ರ ಜನವರಿ 21ರಂದು ಘೋಷಿಸಲಾಯಿತು.

ಭೌತಲಕ್ಷಣ : ಖಾಸಿ, ಜೈಂತಿಯಾ ಮತ್ತು ಗಾರೋ ಬುಡಕಟ್ಟಿನ ಜನರ ಈ ರಾಜ್ಯ ಪರ್ವತಮಯ. ರಾಜಧಾನಿ ಷಿಲಾಂಗ್ ಎತ್ತರವಾದ ಪ್ರಸ್ಥಭೂಮಿಯ ಮಧ್ಯದಲ್ಲಿದೆ. 6,956 ಮೀ. ಎತ್ತರದ ಷಿಲಾಂಗ್ ಶಿಖರ ರಾಜ್ಯದಲ್ಲಿ ಅತ್ಯುನ್ನತವಾದ್ದು. ಗಾರೋ ಬೆಟ್ಟಗಳ ನಾಕ್ರೆಕ್ ಎಂಬುದು ಎರಡನೆಯದು. ಅತ್ಯಂತ ಸುಂದರವಾದ ನೈಸರ್ಗಿಕ ಸನ್ನಿವೇಶಗಳಿಂದ ಕೂಡಿದ ಮೇಘಾಲಯ ಪೂರ್ವದ ಸ್ಕಾಟ್ಲೆಂಡ್ ಎಂದು ಪ್ರಸಿದ್ಧವಾಗಿದೆ. ಇಲ್ಲಿ ಅನೇಕ ಉನ್ನತ ಶಿಖರಗಳೂ ಜಲಪಾತಗಳು ಸರೋವರಗಳೂ ಕಣಿವೆಗಳೂ ಹುಲ್ಲುಗಾವಲುಗಳೂ ಇವೆ.

ಮೇಘಾಲಯದಲ್ಲಿ ಅನೇಕ ನದಿಗಳು ಹರಿಯುತ್ತಿವೆ. ಆದರೆ ಯಾವುದೂ ನೌಕಾಸಂಚಾರಕ್ಕೆ ಯೋಗ್ಯವಾಗಿಲ್ಲ. ಗಾರೋ ಗಿರಿ ಪ್ರದೇಶದ ನದಿಗಳು ಕೃಷ್ಣಾಮ್ (ಡಾಮ್‍ರಿಂಗ್). ಕಾಳು (ಜಿಕಾ), ಭುಗ್ವೆ (ಬುಗಿ), ನಿಟಾಯ್ (ಡಾರೆಂಗ್). ಮತ್ತು ಸೋಮೇಶ್ವರಿ (ಸಿಮ್‍ಸಾಂಗ್) ಖಾಸಿ ಗಿರಿ ಪ್ರದೇಶದಲ್ಲಿ ಹರಿಯುವ ನದಿಗಳು ಕಿನ್ಷಿ. ಖ್ರಿ, ಉಮ್‍ತ್ರ್ಯೂ, ಉಮ್‍ನ್‍ಗಾಟ್, ಉಮಿಯಾಮ್, ಮಾಂಫ್ಲಾಂಗ್ ಮತ್ತು ಉಮಿಯಾಮ್, ಖ್ವಾನ್, ಜೈಂತಿಯಾ ಗಿರಿ ಜಿಲ್ಲೆ ಪ್ರದೇಶದ ನದಿಗಳು ಕುಪ್ಲಿ, ಮಿಂಟ್‍ಡು ಮತ್ತು ಮಿಂಟಾಂಗ್. ಇವು ಬೆಟ್ಟಗಳ ಇಳಿಜಾರಿನಲ್ಲಿ ವೇಗವಾಗಿ ಹರಿದು ಅಲ್ಲಲ್ಲಿ ಜಲಪಾತಗಳನ್ನು ಸೃಷ್ಟಿಸಿವೆ. ಚಿರಾಪುಂಜಿಯ ಬಳಿ ಮಾಸ್ಮಾಯ್ ಹಳ್ಳಿಯ ನೊಹಸನ್‍ಗಿತಿಯಾಂಗ್ ಜಲಪಾತ ಅತ್ಯಂತ ಸುಂದರವಾದ್ದೆಂದು ಪ್ರಖ್ಯಾತವಾಗಿದೆ. ಹಲವು ತೊರೆಗಳ ನೀರು ಇಲ್ಲಿ ಕೂಡಿ ಕಡಿದಾದ ಬಂಡೆಯ ಮೇಲಿಂದ ಧುಮುಕುತ್ತದೆ.

ರಾಜ್ಯದ ಸರಾಸರಿ ವಾರ್ಷಿಕ ಮಳೆ ಸುಮಾರು 12,000 ಮಿ.ಮೀ. ಷಿಲ್ಲಾಂಗಿನಲ್ಲಿ ಬೀಳುವ ವಾರ್ಷಿಕ ಮಳೆ 2032 ಮಿಮೀ. ಪ್ರಪಂಚದಲ್ಲೇ ಅತ್ಯಂತ ಹೆಚ್ಚಿನ ಮಳೆ ಬೀಳುವುದು ಚಿರಾಪುಂಜಿ- ಮಾಸಿನ್ರಾಮ್ ಪ್ರದೇಶದ ಖಾಸಿ ಬೆಟ್ಟಗಳ ದಕ್ಷಿಣ ಪಾಶ್ರ್ವದಲ್ಲಿ. ಇಲ್ಲಿಯ ವಾರ್ಷಿಕ ಸರಾಸರಿ ಮಳೆ 12,700 ಮಿಮೀ.

ಜನಜೀವನ : ಇಲ್ಲಿಯ ಪ್ರಮುಖ ಬುಡಕಟ್ಟುಗಳು ಖಾಸಿ, ಜೈಂತಿಯಾ ಮತ್ತು ಗಾರೋ. ಇವು ಅತ್ಯಂತ ಪ್ರಾಚೀನ ಬುಡಕಟ್ಟುಗಳು. ಈ ಬುಡಕಟ್ಟುಗಳ ಜನರ ಸಂಖ್ಯೆ ಸುಮಾರು ಹತ್ತು ಲಕ್ಷ ಎಂದು ಅಂದಾಜು ಮಾಡಲಾಗಿದೆ. ಖಾಸಿ, ಗಾರೋ ಮತ್ತು ಇಂಗ್ಲಿಷ್ ಇಲ್ಲಿಯ ಪ್ರಮುಖ ಭಾಷೆಗಳು. ಸಾಕ್ಷರತೆಯ ಪ್ರಮಾಣ ಶೇ. 34.08.

ಇಲ್ಲಿಯ ಬುಡಕಟ್ಟಿನ ಜನ ವಿನೋದಪ್ರಿಯರು. ಸಂಗೀತ, ನೃತ್ಯ ಮತ್ತು ಕ್ರೀಡೆಗಳಲ್ಲಿ ಇವರಿಗೆ ಆಸಕ್ತಿ. ಹಬ್ಬಹರಿದಿನಗಳಲ್ಲಿ ಇವರ ಸಂಗೀತ ನೃತ್ಯಗಳ ಸದ್ದು ಗಿರಿಕಣಿವೆಗಳಲ್ಲಿ ಪ್ರತಿಧ್ವನಿಸುತ್ತವೆ.

ಆಡಳಿತ: ನೈಋತ್ಯ ಮಂಡಲಿಯ ಸದಸ್ಯ ರಾಜ್ಯವಾದ ಮೇಘಾಲಯದಲ್ಲಿ ವಿಧಾನಸಭೆಯಿದೆ : ಮೇಲ್ಮನೆಯಾದ ವಿಧಾನ ಪರಿಷತ್ತು ಇಲ್ಲ : ವಿಧಾನಸಭೆಯಲ್ಲಿ 60 ಸದಸ್ಯರಿರುತ್ತಾರೆ. ಖಾಸಿ ಬೆಟ್ಟಗಳ ಪ್ರದೇಶದಿಂದ 29 ಸದಸ್ಯರೂ ಜೈಂತಿಯ ಗಿರಿಪ್ರದೇಶದಿಂದ 7 ಸದಸ್ಯರೂ ಗಾರೋ ಗಿರಿ ಪ್ರದೇಶದಿಂದ 24 ಸದಸ್ಯರೂ ಆಯ್ಕೆಯಾಗುತ್ತಾರೆ.

ಮೇಘಾಲಯದಲ್ಲಿ ಹಿಂದೆ ಖಾಸಿ- ಜೈಂತಿಯಾ ಮತ್ತು ಗಾರೋ ಎಂಬ ಎರಡು ಜಿಲ್ಲೆಗಳಿದ್ದು ಮೂರು ಉಪವಿಭಾಗಗಳಿದ್ದವು. ಅಭಿವೃದ್ಧಿಯನ್ನು ತ್ವರೆಗೊಳಿಸಲೂ ಆಡಳಿತ ಜನರಿಗೆ ಹೆಚ್ಚು ಹತ್ತಿರವಾಗುವಂತೆ ಮಾಡಲೂ ರಾಜ್ಯವನ್ನು ಈಗ ಐದು ಜಿಲ್ಲೆಗಳಾಗಿ, ಹತ್ತು ಉಪವಿಭಾಗಗಳಾಗಿ ವಿಂಗಡಿಸಲಾಗಿದೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ರಾಜ್ಯದಲ್ಲಿ 30 ಸಮುದಾಯ ಅಭಿವೃದ್ಧಿ ಘಟಕಗಳನ್ನು ಸ್ಥಾಪಿಸಲಾಗಿದೆ. ರಾಜ್ಯದ ಜಿಲ್ಲೆಗಳನ್ನು ಕುರಿತ ವಿವರ ಈ ರೀತಿ ಇದೆ.

 ಜಿಲ್ಲೆ	ವಿಸ್ತೀರ್ಣ	ಜನಸಂಖ್ಯೆ	ಮುಖ್ಯಸ್ಥಳ

(ಚ.ಕಿಮೀ.) ಪೂರ್ವ ಖಾಸಿ ಬೆಟ್ಟಗಳು 2,748 6,60,994 ಷಿಲಾಂಗ್ ಪಶ್ಚಿಮ ಖಾಸಿ ಬೆಟ್ಟಗಳು 5,247 2,94,115 ನಾಂಗ್‍ಸ್ಟಾಯಿನ್ ಪೂರ್ವ ಗಾರೋ ಬೆಟ್ಟಗಳು 2,603 2,47,555 ವಿಲಿಯಂನಗರ್ ಪಶ್ಚಿಮ ಗಾರೋ ಬೆಟ್ಟಗಳು 3714 5,15,813 ಟುರಾ ಜೈಂತಿಯಾ ಬೆಟ್ಟಗಳು 3,819 2,95,692 ಜೊವೈ ರಿ-ಬೊಯ್ 2448 1,92,795 ನಾನ್ಗ್‍ಪಾ ದಕ್ಷಿಣ ಗಾರೋ ಬೆಟ್ಟಗಳು 1850 99,105 ಬಾಗ್ಮಾರಾ

ಪ್ರವಾಸಿ ಕೇಂದ್ರಗಳು : ಮೇಘಾಲಯ ಪ್ರವಾಸಿಗಳ ಸ್ವರ್ಗವೆಂದು ಪ್ರಸಿದ್ಧವಾಗಿದೆ. ಇಲ್ಲಿಯ ಪ್ರವಾಸಿ ಆಕರ್ಷಣೆಗಳು ಹಲವಾರು ಮತ್ತು ವೈವಿಧ್ಯಮಯ. ಇಲ್ಲಿ ಅಲೆಯಲೆಯಾಗಿ ಹಬ್ಬಿರುವ ಬೆಟ್ಟಗಳ ಸಾಲು, ಏರಿಳಿಯುವ ಹುಲ್ಲುಗಾವಲುಗಳು, ಬೆಟ್ಟಗಳಿಗೆ ಮೆತ್ತದಂತಿರುವ ದಟ್ಟ ಹಸುರಿನ ಕಾಡುಗಳು ಬೆಟ್ಟಗಳ ಪಕ್ಕಗಳಿಂದ ಧುಮ್ಮಿಕ್ಕುವ ಜಲಪಾತಗಳೂ, ಹಾವಿನಂತೆ ಹರಿಯುವ ಹೊಳೆ ಹೊಳೆಯುವ ಹೊಳೆಗಳು, ಬೇಸಾಯಕ್ಕೆ ಒಳಪಟ್ಟ ಮೆಟ್ಟಲು ನೆಲಗಳು, ಸ್ವಚ್ಚಂದವಾಗಿ ಕಾಡಿನಲ್ಲಿ ಅಲೆಯುವ ವನ್ಯಮೃಗಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ. ಕೆಲವು ಮುಖ್ಯ ಪ್ರವಾಸಿ ಕೇಂದ್ರಗಳೆಂದರೆ ಉನಿಯಾಮ್ ಸರೋವರ, ಕಿಲಾಂಗ್ ಬಂಡೆ, ನೊಹ್‍ಸನ್‍ಗಿತಿಯಾಂಗ್ ಜಲಪಾತ, ಮತ್ತು ನಾರ್ಟಿಯಾಂಗ್ ಐತಿಹಾಸಿಕ ನೆಲೆ. ಉನಿಯಾಮ್ ಸರೋವರ ಷಿಲಾಂಗ್- ಗುವಾಹತಿ ರಸ್ತೆಯ ಬದಿಯಲ್ಲಿದೆ. ನಯನಮನೋಹರವಾದ ಈ ಸರೋವರ ಮೀನು ಹಿಡಿಯುವವರ ಮೋಜಿನ ತಾಣ. ಕಿಲಾಂಗ್ ಬಂಡೆ ಸುಮಾರು 214 ಮೀಟರ್‍ಗಳಿಗಿಂತಲೂ ಎತ್ತರವಾದ ಗ್ರಾನೈಟ್ ಶಿಲೆ. ಹುಲ್ಲುಗಾವಲಿನ ನಡುವೆ ಎದ್ದು ನಿಂತಿರುವ ಈ ಬಂಡೆ ಷಿಲಾಂಗಿನ ಪಶ್ಚಿಮಕ್ಕೆ 50 ಕಿ.ಮೀ ದೂರದಲ್ಲಿದೆ. ಚಿರಾಪುಂಜಿಯ ಬಳಿ ಮಾಸ್ಮಾಯ್ ಹಳ್ಳಿಯಲ್ಲಿರುವ ನೊಹ್‍ಸನ್‍ಗಿತಿಯಾಂಗ್ ಜಲಪಾತ ಇಡೀ ಭಾರತದಲ್ಲೇ ಅತ್ಯಂತ ಸುಂದರವಾದ್ದು ಎಂದು ಪರಿಗಣಿಸಲಾಗಿದೆ. ಮಸ್ಮಾಯ್ ಗುಹೆಗಳೂ ಪ್ರೇಕ್ಷಣೀಯ. ಷಿಲಾಂಗಿಗೆ ಸುಮಾರು 90 ಕಿಮೀ. ದೂರದಲ್ಲಿರುವ ನಾರ್ಟಿಯಾಂಗ್‍ನಲ್ಲಿ 1500-1835ರ ಕಾಲದಲ್ಲಿ ರಚಿಸಲಾದ ಹಲವಾರು ಏಕಶಿಲಾ ವಿಗ್ರಹಗಳಿವೆ. ಇವುಗಳ ಪೈಕಿ 8.22 ಮೀಟರ್ ಎತ್ತರದ 15.24 ಸೆ.ಮೀ. ದಪ್ಪದ ಅತ್ಯಂತ ಎತ್ತರದ ವಿಗ್ರಹವಿದೆ.

ಅರ್ಥವ್ಯವಸ್ಥೆ : ಜನರಿಗೆ ನೆಲವೇ ಪ್ರಮುಖ ಜೀವನಾಧಾರ. ಆದರೆ ನೆಲ ಪರ್ವತಮಯವಾಗಿರುವುದರಿಂದ ಕೃಷಿ ಸೌಲಭ್ಯ ಕಡಿಮೆ. ಝೂಮ್ ಪದ್ಧತಿಯ ಬೇಸಾಯ ಸಾಮಾನ್ಯ. ಕಾಡು ಸುಟ್ಟು ಬೆಳೆತೆಗೆದು, ಅದು ಬರಡಾದಾಗ ಅದನ್ನು ಬಿಟ್ಟು ಬೇರಡೆ ಅದೇ ರೀತಿ ಬೇಸಾಯ ಮಾಡುವ ಪದ್ಧತಿ ವಿನಾಶಕಾರಿ.

ಗಿರಿಜನರ ಈ ಪದ್ಧತಿಯನ್ನು ಹೋಗಲಾಡಿಸಿ ವೈe್ಞÁನಿಕ ಕೃಷಿ ಪದ್ಧತಿಯನ್ನು ಸ್ಥಾಪಿಸಲು ಸರ್ಕಾರ ಯತ್ನಿಸುತ್ತಿದೆ. ನೆಲದ ಸಾರವನ್ನು ರಕ್ಷಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ನೆಲವನ್ನು ಹಳ್ಳಿಗಳಲ್ಲಿ ಹಂಚಿ, ಅವರಿಗೆ ರಸಗೊಬ್ಬರ, ಬೀಜ, ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ. ಕನಿಷ್ಟ 50 ಕುಟುಂಬಗಳ ಹಲವಾರು ಹಳ್ಳಿಗಳು ಈಗ ಅಲ್ಲಿ ಮೇಲೆದ್ದಿವೆ. ರಾಜ್ಯದಲ್ಲಿ ಕೈಗಾರಿಕೆಗಳು ಅಷ್ಟಾಗಿ ಬೆಳೆದಿಲ್ಲ. ಮೇಘಾಲಯ ಕೈಗಾರಿಕಾ ನಿಗಮ ಹೊಸ ಕೈಗಾರಿಕೆಗಳ ಸ್ಥಾಪನೆಗೆ ನೆರವು ನೀಡುತ್ತಿದೆ. ಪ್ಲೈವುಡ್, ತೈಲ, ರಸಾಯನ, ಫೈಟೊ -ರಸಾಯನ, ಸುಣ್ಣಕಲ್ಲು ಗಣಿಗಾರಿಕೆ, ಕ್ಯಾಲ್ಸಿನೇಟ್ಸ್ ಮತ್ತು ಸಿಮೆಂಟ್ ಕೈಗಾರಿಕೆಗಳಿವೆ. ಸಿಮೆಂಟ್ ಕೈಗಾರಿಕೆ ಸರ್ಕಾರಿ ವಲಯದ್ದು. ಇದು ಚಿರಾಪುಂಜಿಯಲ್ಲಿ ಸ್ಥಾಪಿತವಾಗಿದೆ. ಇದರ ಉತ್ಪಾದನ ಸಾಮಥ್ರ್ಯ ದಿನವೊಂದಕ್ಕೆ 930 ಟನ್. ಭಾರತದ ರಕ್ಷಣಾ ದೃಷ್ಟಿಯಿಂದಲೂ ಈಶಾನ್ಯ ದಿಕ್ಕಿನ ಈ ರಾಜ್ಯ ಪ್ರಾಮುಖ್ಯ ಪಡೆದಿದೆ. (ಎಚ್.ಎಸ್.ಕೆ.)