ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೇಯೊ, ಲಾರ್ಡ್

ಮೇಯೊ, ಲಾರ್ಡ್ 1822-72. ಭಾರತದ ವೈಸರಾಯ್ ಮತ್ತು ಗವರ್ನರ್ ಜನರಲ್ (1869-72). ಈ ಬ್ರಿಟಿಷ್ ರಾಜಕೀಯ ಧುರೀಣನ ಪೂರ್ಣ ಹೆಸರು ಮೆಯೊ, ರಿಚರ್ಡ್ ಸೌತ್‍ವೆಲ್ ಬರ್ಕ್. ಈತ ಐದನೆಯ ಅರ್ಲ್ ರಾಬರ್ಟ್ ಬರ್ಕ್‍ನ (1797-1867) ಹಿರಿಯ ಮಹಾ. 1822 ಫೆಬ್ರುವರಿ 21ರಂದು ಡಬ್ಲಿನ್ನಿನಲ್ಲಿ ಜನಿಸಿದ. ಅದೇ ನಗರದ ಟ್ರಿನಿಟಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸಿ ಪದವೀಧರನಾಗುವ ಮೊದಲು ತಾಯಿ ತಂದೆಯರೊಂದಿಗೆ ಯುರೋಪಿನಲ್ಲೇ ಸಂಚರಿಸಿದ. 1845ರಲ್ಲಿ ರಷ್ಯದಲ್ಲಿ ಸಂಚರಿಸಿ ಅನಂತರ 'ಸೇಂಟ್ ಪೀಟರ್ಸ್ ಬರ್ಗ್ ಮತ್ತು ಮಾಸ್ಕೊ ಎಂಬ ಗ್ರಂಥ ರಚಿಸಿದ. ಈತ ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಇಪ್ಪತ್ತು ವರ್ಷಕಾಲ (1847-67) ಸದಸ್ಯನಾಗಿದ್ದು ಆ ಮಧ್ಯೆ 1852, 1858 ಮತ್ತು 1866ರ ಮೂರು ಆಡಳಿತಾವಧಿಯಲ್ಲಿ ಐರ್ಲೆಂಡಿನ ಮುಖ್ಯ ಕಾರ್ಯದರ್ಶಿಯಾಗಿದ್ದ. 1869ರಲ್ಲಿ ಭಾರತದ ವೈಸರಾಯ್ ಆಗಿ ನೇಮಕಗೊಂಡ.

ಇವನು ಅಧಿಕಾರ ವಹಿಸಿಕೊಂಡಾಗ ಭಾರತದ ಆರ್ಥಿಕಸ್ಥಿತಿ ಹದಗೆಟ್ಟಿತ್ತು. ಸಾರ್ವಜನಿಕ ಆಡಳಿತದಲ್ಲಿ ಮಿತವ್ಯಯವನ್ನು ಸಾಧಿಸಿ ಉಪ್ಪಿನ ಮೇಲಿನ ಕರವನ್ನು ಹೆಚ್ಚಿಸುವುದರ ಮೂಲಕ ಆರ್ಥಿಕ ಸ್ಥಿತಿಯನ್ನು ಸುಧಾರಿಸಿದ. ಇದರ ಪರಿಣಾಮವಾಗಿ ಆಯವ್ಯಯದಲ್ಲಿ ಕೊರತೆ ನಿವಾರಣೆಯಾಗಿ ಉಳಿತಾಯ ಉಂಟಾಯಿತು. ಇವನು ಕೆಲವೇ ವರ್ಷಗಳು ಅಧಿಕಾರದಲ್ಲಿದ್ದರೂ ಅನೇಕ ಸುಧಾರಣೆಗಳನ್ನು ಮಾಡಿದ. 1870ರಲ್ಲಿ ಪ್ರಪ್ರಥಮವಾಗಿ ಭಾರತದ ಜನಗಣತಿ ಮಾಡಿಸಿದ. ಭಾರತದ ಗಡಿನಾಡುಗಳನ್ನು ಒಟ್ಟುಗೂಡಿಸಿದ. ಅಜ್ಮೀರದಲ್ಲಿ ಮೇಯೊ ಕಾಲೇಜನ್ನು ಸ್ಥಾಪಿಸಿದ. ದೇಶದ ನೀರಾವರಿ, ರೈಲುಮಾರ್ಗ, ಅರಣ್ಯಾಭಿವೃದ್ಧಿ ಮತ್ತು ಇತರ ಲೋಕೋಪಯೋಗಿ ಕಾರ್ಯಗಳನ್ನು ಅಭಿವೃದ್ಧಿ ಪಡಿಸಿದ. ಸೌಜನ್ಯಶೀಲನೂ ರಾಯಭಾರ ಕುಶಲನೂ ಆಗಿದ್ದ ಇವನು ಸರ್ವಾದರಣೀಯನಾಗಿದ್ದ. ಆಫ್ಘಾನಿಸ್ಥಾನದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ. ಅಲ್ಲಿಯೇ ಅಮೀರ್ ಷೇರ್ ಅಲಿಯನ್ನು ಅಂಭಾಲ ಎಂಬಲ್ಲಿ ಬರಮಾಡಿಕೊಂಡು ರಷ್ಯ ಸಂಬಂಧದ ಬಗ್ಗೆ ಸಮಾಲೋಚಿಸಿದ. ಅವನು ತನ್ನ ಮಗ ಅಬ್ದುಲ್ಲಾ ಜಾನನನ್ನು ತನ್ನ ಉತ್ತರಾಧಿಕಾರಿ ಮಾಡುವಂತೆ ಕೇಳಿಕೊಂಡಾಗ ಇವನು ಒಪ್ಪದಿದ್ದರೂ ಪರಸ್ಪರ ಒಳ್ಳೆಯ ಅಭಿಪ್ರಾಯ ಉಳಿಸಿಕೊಂಡು ಬಂದ.

ಅಪರಾಧಿಗಳ ವಿಚಾರಣೆಗಾಗಿ ಪರಿಶೀಲನೆ ನಡೆಸಲು ಮೇಯೊ ಅಂಡಮಾನ್ ದ್ವೀಪದ ಪೋರ್ಟ್ ಬ್ಲೇರ್‍ಗೆ 1872 ಫೆಬ್ರವರಿ 8ರಂದು ಹೋಗಿದ್ದಾಗ ಇವನನ್ನು ಆಫ್ಘಾನಿ ಖೈದಿಯೊಬ್ಬ ಮೋಸದಿಂದ ಕೊಂದು ಹಾಕಿದ. (ಎಂ.ಪಿ.ಎಂ.)