ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೋಟಗಾನಹಳ್ಳಿ ಶಂಕರಶಾಸ್ತ್ರೀ

ಮೋಟಗಾನಹಳ್ಳಿ ಶಂಕರಶಾಸ್ತ್ರೀ 1862-1913. ಪ್ರಸಿದ್ಧ ವಿದ್ವಾಂಸರು. ಹುಟ್ಟಿದ್ದು ಬೆಂಗಳೂರು ಜಿಲ್ಲೆ ಮಾಗಡಿ ತಾಲ್ಲೂಕು ಮೋಟಗಾನಹಳ್ಳಿಯಲ್ಲಿ. ತಂದೆ ಸಾಂಬಲಶಾಸ್ತ್ರೀಗಳು. ಇವರ ವ್ಯಾಸಂಗ ಬೆಂಗಳೂರಿನಲ್ಲಿ ಸೋದರಮಾವ ಗಂಗಾಧರಶಾಸ್ತ್ರೀಗಳ ಬಳಿ ನಡೆಯಿತು. ಮಾತೃಭಾಷೆ ತೆಲುಗಿನಲ್ಲೂ ಕನ್ನಡ, ಸಂಸ್ಕøತಗಳಲ್ಲೂ ಪಾಂಡಿತ್ಯಗಳಿಸಿದ ಇವರು ಸಂಸ್ಕøತ ಮತ್ತು ಕನ್ನಡ ಕಾವ್ಯಗಳ ಅಧ್ಯಯನದೊಂದಿಗೆ ಅಲಂಕಾರ, ಛಂದಸ್ಸು ಮತ್ತು ವ್ಯಾಕರಣ ಶಾಸ್ತ್ರಗಳಲ್ಲೂ ಪಾರಂಗತರೆನಿಸಿದರು.

ಅಧ್ಯಾಪಕರಾಗಿ ತಮ್ಮ ವೃತ್ತಿಜೀವನ ನಡೆಸಿ ಇವರು ಬೆಂಗಳೂರಿನ ಚಾಮರಾಜೇಂದ್ರ ಸಂಸ್ಕøತ ಮಹಾಪಾಠಶಾಲೆಯಲ್ಲಿ ಸಂಸ್ಕøತ ಅಧ್ಯಾಪಕರಾಗಿಯೂ ದಂಡುಪ್ರದೇಶದ (ಕಂಟೋನ್ಮೆಂಟ್) ಆರ್ಕಾಟ್ ನಾರಾಯಣಸ್ವಾಮಿ ಮೊದಲಿಯಾರ್ ಪ್ರೌಢಶಾಲೆಯಲ್ಲಿ ತೆಲಗು ಉಪಾಧ್ಯಾಯರಾಗಿಯೂ ಕೆಲಸ ಮಾಡಿದರು. ಬೆಂಗಳೂರಿನ ಜನತೆಗೆ ಇವರು ಪುರಾಣ ಪ್ರವಚನಕಾರರೆಂದು ಪರಿಚಯವಾಗಿದ್ದರು. ಅಲ್ಲಿಯ ವಿವಿಧ ಭಾಗಗಳಲ್ಲಿ ನಡೆಯುತ್ತಿದ್ದ ಪುರಾಣ ಪ್ರವಚನಗಳಲ್ಲಿ ಇವರು ಸಹೋದರರಾದ ರಾಮೇಷಶಾಸ್ತ್ರೀಗಳು ಶ್ಲೋಕಗಳನ್ನು ವಾಚನ ಮಾಡುತ್ತಿದ್ದರು; ಇವರು ಪಂಡಿತಪಾಮರರಿಗೆ ರಂಜಕವಾಗುವಂತೆ ವ್ಯಾಖ್ಯಾನಮಾಡುತ್ತಿದ್ದರು.

ಶಾಸ್ತ್ರೀಗಳಿಗೆ ಗ್ರಂಥರಚನಾ ಸಾಮಥ್ರ್ಯವಿದ್ದರೂ ಆ ಹವ್ಯಾಸಕ್ಕೆ ಕೈ ಹಾಕಲಿಲ್ಲ. ಆದರೂ ಕೆಲವು ನಾಟಕ ಕಂಪನಿಗಳ ಮತ್ತು ಪೇಟೆಯ ಪುಸ್ತಕದಂಗಡಿಗಳ ಒತ್ತಾಯದಿಂದ ಕೆಲವು ನಾಟಕಗಳನ್ನು ಬರೆದುಕೊಟ್ಟಿದ್ದುಂಟು. ಬಯಸಿದವರಿಗೆ ಸಂದರ್ಭಕ್ಕೆ ತಕ್ಕಂತೆ ಒದಗಿಸಿದ ಪದ್ಯ, ಪದಲಾಲಿತ್ಯ ಮುಂತಾದ ಸಾಹಿತ್ಯ ಗುಣಗಳಿಂದ ಕೂಡಿದ್ದು ಇವರ ಅಶುಕವಿತಾರಚನೆಗಳು ಸಂಸ್ಕøತ, ಕನ್ನಡ ಪದ್ಯಗಳೂ ಸಂಪ್ರದಾಯದ ಹಾಡುಗಳು ಬಹುಮಟ್ಟಿಗೆ ಈಗ ನಷ್ಟವಾಗಿವೆ. ಇವರು ರಚಿಸಿದ ಕನ್ನಡ ನಾಟಕಗಳಲ್ಲಿ ಮುಖ್ಯವಾದವು: ಇಂದ್ರಸಭಾ, ಪಾಂಡವವಿಜಯ, ಶ್ರೀಯಾಳ ಚರಿತ್ರೆ ಅಥವಾ ಧರ್ಮಪಾಲ ನಾಟಕ, ಮಂದಾರೋಜ್ಜ್ವಲ ಪರಿಣಯ ಅಥವಾ ಗುಲೇಬಕಾವಲಿ. ಗುಲೇಬಕಾವಲಿ ಮುಂತಾದ ಇವರ ಕೆಲವು ನಾಟಕಗಳನ್ನು ಗುಬ್ಬಿ ನಾಟಕ ಕಂಪನಿಯವರು ಆಡುತ್ತಿದ್ದರು. ಜನರಂಜನೆಗಾಗಿ ಇವರು ಬರೆದ ನಾಟಕಗಳು ಸಾಹಿತ್ಯದೃಷ್ಟಿಯಿಂದ ಗಮನಾರ್ಹವಲ್ಲವಾದರೂ ಕನ್ನಡ ರಂಗಭೂಮಿಯ ಬೆಳವಣಿಗೆಯಲ್ಲಿ ಮುಖ್ಯಪಾತ್ರವಹಿಸಿದೆ. *