ಯಾತ್ರೆ -
ಪವಿತ್ರ ತೀರ್ಥಕ್ಷೇತ್ರಗಳ ಸಂದರ್ಶನಾರ್ಥವಾಗಿ ನಡೆಸುವ ಪ್ರಯಾಣ (ಪಿಲಿಗ್ರಿಮೇಜ್). ಯಾತ್ರೆ ಎಂಬ ಪದ ವಿವಿಧ ಅರ್ಥಗಳಲ್ಲಿ ಬಳಕೆಯಲ್ಲಿದೆ. ಯಾತ್ರೆಗೆ ವ್ರಜ್ಯಾ, ಅಭಿನಿರ್ಯಾಣ, ಪ್ರಸ್ಥಾನ, ಗಮನ, ಗಮ, ಪ್ರಸ್ಥಿತಿ, ಯಾನ, ಪ್ರಾಣನ, ಯಾಪನ, ಉತ್ಸವ, ವ್ಯವಹಾರ, ಉಪಾಯ ಎಂದೆಲ್ಲಾ ಕರೆಯುತ್ತಾರೆ. ಯಾತ್ರೆಗೆ ಹೊರಡುವಾಗ ಶುಭಾಶುಭಗಳಿವೆ. ಯಾವ ಯಾವ ಲಗ್ನದಲ್ಲಿ, ಹೇಗೆ ಹೊರಡಬೇಕು ಎಂಬುದೆಲ್ಲವನ್ನು ಜ್ಯೋತಿಶ್ಯಾಸ್ತ್ರ ತಿಳಿಸುತ್ತದೆ. ಪವಿತ್ರ ಕ್ಷೇತ್ರಗಳ ಸಂದರ್ಶನಕ್ಕೆ ಯಾತ್ರೆ ಹೋಗುವುದು ಹಿಂದೂಗಳಿಗೆ ಮಾತ್ರ ಸೀಮಿತವಾದದ್ದಲ್ಲ. ಬೌದ್ಧ, ಜೈನ, ಮುಸಲ್ಮಾನ ಮತ್ತು ಕ್ರೈಸ್ತರಲ್ಲೂ ಈ ಯಾತ್ರೆ ಉಂಟು. ಶತ್ರುವನ್ನು ಗೆಲ್ಲಲು ಯುದ್ಧಕ್ಕಾಗಿ ಪ್ರಯಾಣ ಮಾಡುವುದು ವಿಜಯಯಾತ್ರೆ ಎಂದೂ ಆಸ್ತಿಕರು ಪಾಪಫಲ ನಿವೃತ್ತಿಗಾಗಿ ಪುಣ್ಯಫಲ ಪ್ರಾಪ್ತಿಗಾಗಿ ಪುಣ್ಯಕ್ಷೇತ್ರಗಳ ಸಂದರ್ಶನ ಮಹಾನದಿಗಳ ಸ್ನಾನಕ್ಕಾಗಿ ಪ್ರಯಾಣ ಮಾಡುವುದು ತೀರ್ಥಯಾತ್ರೆ ಎಂದೂ ಕಾರ್ಯೋದ್ದೇಶದಿಂದ ದೇಶಾಂತರಗಳಿಗೆ ಸಂಚಾರ ಹೊರಡುವುದು ಸಾಮಾನ್ಯ ಯಾತ್ರೆ ಎಂದೂ ಕರೆಯುವುದಿದೆ. ಈ ಸಾಮಾನ್ಯ ಯಾತ್ರೆಯ ಇನ್ನೊಂದು ರೂಪವೇ ಪ್ರವಾಸ.
ಭಾರತ ದೇಶದಲ್ಲಿ ಆಸೇತುಹಿಮಾಲಯಪರ್ಯಂತ ಅನೇಕ ತೀರ್ಥಗಳು ಇವೆ. ಜೀವಿತಾವಧಿಯಲ್ಲಿ ಒಮ್ಮೆಯಾದರೂ ಮುಖ್ಯವಾದ ತೀರ್ಥಕ್ಷೇತ್ರಗಳಿಗೆ ಯಾತ್ರೆ ಹೋಗುವುದು ಇಂದಿಗೂ ರೂಢಿಯಲ್ಲಿದೆ. ಮದುವೆಯ ದಿನದಲ್ಲಿ ಕನ್ಯಾದಾನಕ್ಕೆ ಮೊದಲು ವರ ಸಾಂಕೇತಿಕವಾಗಿ ಕಾಶಿಯಾತ್ರೆ ಹೊರಡುವ ಪದ್ಧತಿ ಕೆಲವರಲ್ಲಿದೆ. ಶ್ರೀವೈಷ್ಣವ ಪಂಥದಲ್ಲಿ ಆಳ್ವಾರರು ತಮ್ಮ ದಿವ್ಯಪ್ರಬಂಧದಲ್ಲಿ ವರ್ಣಿಸಿರುವ 108 ದಿವ್ಯಕ್ಷೇತ್ರಗಳಿಗೆ ಯಾತ್ರೆ ಹೋಗಿಬರುವುದು ಇಂದಿಗೂ ಆ ಪಂಥದವರಲ್ಲಿ ರೂಢಿಯಲ್ಲಿದೆ. ಯಾತ್ರೆ ಹೊರಡುವವರು ಒಳ್ಳೆಯ ಕಾಲದಲ್ಲೂ ಶಕುನಗಳನ್ನು ಗಮನಿಸಿಯೂ ಪ್ರಯಾಣ ಮಾಡಬೇಕೆಂದು ಜ್ಯೋತಿಶ್ಯಾಸ್ತ್ರದಲ್ಲಿ ಉಕ್ತವಾಗಿದೆ. ನಿಷಿದ್ಧಕಾಲದಲ್ಲಿ ಯಾತ್ರೆ ಹೊರಡುವುದರಿಂದ ವಿಘ್ನಗಳುಂಟಾಗುತ್ತವೆ ಎಂಬ ನಂಬಿಕೆಯಿದೆ.
ಪ್ರಯಾಣಕಾಲದ ತಿಥಿ, ವಾರ, ಯೋಗದಿಂದ ಅಶುಭ ಫಲ ಸೂಚಿತವಾಗಿ ಜನಜನಿತವಾದ ಕೆಲವು ನಿದರ್ಶನಗಳು ಈ ರೀತಿ ಇವೆ. ಬಿದಿಗೆ ಮಂಗಳವಾರ ಹರಿಶ್ಚಂದ್ರ, ನಳ ಮಹಾರಾಜ ಪ್ರಯಾಣ ಹೊರಟು ಕಷ್ಟಕ್ಕೆ ಗುರಿಯಾದರು. ತದಿಗೆ ಶುಕ್ರವಾರ ಅಂಧಕಾಸುರ ಪ್ರಮಾಣ ಹೊರಟು ಪ್ರಾಣನೀಗಿದ. ಚೌತಿ ಮಂಗಳವಾರ ರಾಮ ಪ್ರಯಾಣ ಹೊರಟು ಸೀತೆಯನ್ನು ಕಳೆದುಕೊಂಡು ಕಷ್ಟಕ್ಕೆ ಗುರಿಯಾದ. ಪಂಚಮಿ ಗುರುವಾರ ಅರ್ಜುನ ಪ್ರಯಾಣ ಹೊರಟು ತೊಂದರೆಗೆ ಸಿಲುಕಿದ. ಷಷ್ಠಿ ಶನಿವಾರ ರಾವಣ ಪ್ರಯಾಣ ಹೊರಟು ಯುದ್ಧದಲ್ಲಿ ಮಡಿದ. ಅಷ್ಟಮಿ ಶುಕ್ರವಾರ ಧರ್ಮರಾಜ ಪ್ರಯಾಣ ಹೊರಟು ಕಷ್ಟವನ್ನು ಅನುಭವಿಸಿದ. ನವಮಿ ತಿಥಿಯಂದು ಪ್ರಯಾಣಮಾಡಿ ಬಾಣಾಸುರ ಸಾವಿಗೆ ಗುರಿಯಾದ.
ರಾಜ ಚತುರಂಗಬಲ ಪರಿವಾರ ಸಮೇತವಾಗಿ ಹೊರಡುವ ಯಾತ್ರೆಯೇ ರಾಜಯಾತ್ರೆ ಎನಿಸುತ್ತದೆ; ಯುದ್ಧಕ್ಕೆ ಹೊರಟಾಗ ದಂಡಯಾತ್ರೆ ಎನಿಸುತ್ತದೆ. ಸ್ನಾನಯಾತ್ರೆ, ರಥಯಾತ್ರೆ, ಪಾಶ್ರ್ವಪರಿವರ್ತನಯಾತ್ರೆ, ಉತ್ಥಾನಯಾತ್ರೆ, ಪುರುಷಸ್ನಾನಯಾತ್ರೆ, ಶಯನಯಾತ್ರೆ, ಪುಷ್ಯಸ್ನಾನಯಾತ್ರೆ, ಮದನಭಂಜಿಕಾಯಾತ್ರೆ ಎಂದು ಅನೇಕ ವಿಧವಾದ ಯಾತ್ರೆಗಳಿವೆ. ದೈವೀಯಾತ್ರಾ ಪ್ರಕರಣದಲ್ಲಿ ಮಂಚಯಾತ್ರೆ, ಮಹಾಸ್ನಾನಯಾತ್ರೆ, ರಥಯಾತ್ರೆ ಜಲಯಾತ್ರೆ, ಧೂನನಾಖ್ಯಾನಯಾತ್ರೆ, ಮಹಾಪೂಜಾಯಾತ್ರೆ, ದೀಪಯಾತ್ರೆ, ಅಂಗರಾಗಯಾತ್ರೆ, ಮಹಾದೇವಿಯಾತ್ರೆ, ಗೋಲಾಕೇಲಿಯಾತ್ರೆ, ಚೈತ್ರಯಾತ್ರೆ, ದೂತೀಯಾತ್ರೆ ಹೀಗೆ ಅನೇಕ ಯಾತ್ರೆಗಳನ್ನು ಹೆಸರಿಸಿದೆ. ಇವುಗಳನ್ನು ಇಂಥ ತಿಂಗಳುಗಳಲ್ಲೇ ಮಾಡಬೇಕೆಂದು ಸಹ ತಿಳಿಸಿದೆ. (ಎನ್.ವಿಇ.)
ಚೈತ್ರ, ಭಾದ್ರಪದ, ಪುಷ್ಯಮಾಸಗಳಲ್ಲಿ ಯಾತ್ರೆ ಹೋಗಕೂಡದು. ಭಾನುವಾರ ಶುಕ್ರವಾರಗಳಲ್ಲಿ ಪೂರ್ವದಿಕ್ಕಿಗೂ ಮಂಗಳವಾರ ದಕ್ಷಿಣ ದಿಕ್ಕಿಗೂ ಸೋಮವಾರ, ಶನಿವಾರಗಳಲ್ಲಿ ಪಶ್ಚಿಮ ದಿಕ್ಕಿಗೂ ಗುರುವಾರ, ಬುಧವಾರಗಳಲ್ಲಿ ಉತ್ತರ ದಿಕ್ಕಿಗೂ ದಿಕ್‍ಶೂಲೆ ಇರುವುದರಿಂದ ಅ ದಿಕ್ಕಿಗೆ ಯಾತ್ರೆ ಹೊರಡಬಾರದು. ದ್ವೀತಿಯಾ, ತೃತೀಯಾ, ಸಪ್ತಮಿ, ಪಂಚಮಿ, ದಶಮೀ, ಏಕಾದಶೀ, ತ್ರಯೋದಶೀ ತಿಥಿಗಳು ಯಾತ್ರೆಗೆ ಪ್ರಶಸ್ತವಾದಂಥವು. ಪ್ರಥಮಾ, ನವಮೀ ತಿಥಿಗಳಲ್ಲಿ ಪೂರ್ವ ದಿಕ್ಕಿನಲ್ಲೂ ತೃತೀಯಾ ಏಕಾದಶೀ, ತಿಥಿಗಳಲ್ಲಿ ಅಗ್ನೇಯ ದಿಕ್ಕಿನಲ್ಲೂ ಪಂಚಮೀ. ತ್ರಯೋದಶೀ ತಿಥಿಗಳಲ್ಲಿ ದಕ್ಷಿಣ ದಿಕ್ಕಿನಲ್ಲೂ ದ್ವಾದಶೀ, ಚತುರ್ಥೀ ತಿಥಿಗಳಲ್ಲಿ ನೈಋತ್ಯ ದಿಕ್ಕಿನಲ್ಲೂ ಷಷ್ಠೀ ಚತುರ್ದಶೀ ತಿಥಿಗಳಲ್ಲಿ ಪಶ್ಚಿಮ ದಿಕ್ಕಿನಲ್ಲೂ ಸಪ್ತಮೀ ಪೂರ್ಣಿಮಾ ತಿತಿಗಳಲ್ಲಿ ವಾಯುವ್ಯ ದಿಕ್ಕಿನಲ್ಲೂ ದ್ವಿತೀಯಾ, ದಶಮೀ ತಿಥಿಗಳಲ್ಲಿ ಉತ್ತರ ದಿಕ್ಕಿನಲ್ಲೂ ಅಷ್ಟಮೀ ಅಮಾವಾಸ್ಯೆ ತಿತಿಗಳಲ್ಲಿ ಈಶಾನ್ಯ ದಿಕ್ಕಿನಲ್ಲೂ ಯೋಗಿನಿ ಇರುತ್ತದೆ. ಯೋಗಿನಿಯನ್ನು ಎದುರು (ಸಮ್ಮುಖ) ಮಾಡಿಕೊಂಡು ಪ್ರಯಾಣ ಮಾಡಬಾರದು. ಶುಕ್ಲ ಪ್ರಥಮಾ, ಚತುರ್ಥೀ, ಷಷ್ಠಿ, ಅಷ್ಟಮೀ, ನವಮೀ, ದ್ವಾದಶೀ, ಚತುರ್ದಶೀ, ಪೂರ್ಣೀಮಾ, ಅಮಾವಾಸ್ಯೆ ಈ ತಿಥಿಗಳಲ್ಲಿ ಯಾತ್ರೆ ಹೊರಡುವುದು ನಿಷಿದ್ಧ. ಅಶ್ವಿನಿ, ಅನೂರಾಧ, ರೇವತಿ, ಮೃಗಶಿರ, ಮೂಲ, ಪುನರ್ವಸು, ಷುಷ್ಯ ಹಸ್ತ, ಜ್ಯೇಷ್ಠ ಈ ನಕ್ಷತ್ರಗಳಲ್ಲಿ ಯಾತ್ರೆ ಹೊರಡುವುದು ಉತ್ತಮ. ರೋಹಿಣಿ, ಪುಬ್ಬ, ಪೂರ್ವಾಷಾಢಾ, ಶತಭಿಷಾ, ಶ್ರವಣ, ಧನಿಷ್ಠ ನಕ್ಷತ್ರಗಳು ಮಧ್ಯಮ. ಉಳಿದ ನಕ್ಷತ್ರಗಳಲ್ಲಿ ಯಾತ್ರೆ ಹೊರಡಬಾರದು. ತಾರಾಬಲವನ್ನು ಮುಖ್ಯವಾಗಿ ಗಮನಿಸಬೇಕು. ಚಂದ್ರ ಜನ್ಮರಾಶಿಯಿಂದ ಆರು, ಎಂಟು, ಹನ್ನೆರಡನೆಯ ರಾಶಿಯಲ್ಲಿರುವಾಗ ಯಾತ್ರೆ ಶುಭಪ್ರದವಲ್ಲ. ಸಿಂಹ, ವೃಷಭ, ಕುಂಭ, ಮಿಥುನ, ಕನ್ಯಾ ಲಗ್ನಗಳಲ್ಲಿ ಯಾತ್ರೆ ಹೊರಡುವುದು ಉತ್ತಮ. ಯಾತ್ರಾಲಗ್ನದಲ್ಲಿ ಶುಕ್ರ ; ದ್ವಿತೀಯದಲ್ಲಿ ಚಂದ್ರ, ಬುಧ, ಗುರು, ಶುಕ್ರರು ; ತೃತೀಯದಲ್ಲಿ ಕುಜ, ಶನಿ, ಚಂದ್ರ. ರವಿಗಳು ; ಚತುರ್ಥದಲ್ಲಿ ಬುಧ ; ಪಂಚಮದಲ್ಲಿ ಗುರು ; ಶುಕ್ರರು ; ಪುಷ್ಯದಲ್ಲಿ ಶನಿ, ಕುಜ, ಸೂರ್ಯರು ; ಸಪ್ತದಲ್ಲಿ ಗುರು ; ಅಷ್ಟದಲ್ಲಿ ಬುಧ. ಶುಕ್ರರು ; ನವಮದಲ್ಲಿ ಗುರು ; ದಶಮದಲ್ಲಿ ರವಿ, ಶನಿಗಳು, ಹನ್ನೊಂದರಲ್ಲಿ ಎಲ್ಲ ಗ್ರಹಗಳೂ ಹನ್ನೆರಡರಲ್ಲಿ ಬುಧ ಇದ್ದರೆ ಶುಭಫಲ ಉಂಟಾಗುತ್ತದೆ.
ದಿವ್ಯ ಅಂತರಿಕ್ಷ, ಭೌಮೋತ್ಪಾದಗಳು ಕಂಡಾಗಲೂ ರಾಹುಕಾಲ, ಗುಳಿಕಕಾಲ, ಯಮಕಂಟಕ ಕಾಲಗಳಲ್ಲೂ ಯಾತ್ರೆ ಹೊರಡಕೂಡದು. ಯಾತ್ರೆ ಹೊರಟಾಗ ಹಸು, ಅನೆ, ಕುದುರೆ, ಪೂರ್ಣಕುಂಭ, ಸಮಂಗಲಿ, ಹೂವು, ಹಾಲು ಇವುಗಳನ್ನು ಕಂಡರೆ ಶುಭಪ್ರದ. ಬ್ರಾಹ್ಮಣ ಕನ್ಯೆ, ಶವ, ಶಂಖ, ಭೇರಿಧ್ವನಿ, ಕತ್ತೆ ಅರುಚುವುದು ಇದನ್ನು ಉತ್ತರ ಪಾಶ್ವದಲ್ಲೂ ಜಿಂಕೆ, ಹಾವು, ಕೋತಿ, ಬೆಕ್ಕು ನಾಯಿ, ಹಂದಿ, ಮುಂಗುಸಿ, ಇಲಿ ಇವನ್ನು ಎಡಭಾಗದಲ್ಲೂ ಕಂಡರೆ ಶುಭಫಲ. ಒಂಟಿ ಬ್ರಾಹ್ಮಣ, ವಿಧವೆ, ನಪುಂಸಕ, ಎಣ್ಣೆ, ಬೆಕ್ಕು, ಇವು ಎದುರಾದರೆ ಅಶುಭಫಲ.
ಕೃತಿಕಾ, ರೋಹಿಣಿ, ಮೃಗಶಿರ, ಅದ್ರ್ರಾ, ಪುನರ್ವಸು, ಪುಷ್ಯ, ಆಸ್ಲೇಷಾ ನಕ್ಷತ್ರಗಳಲ್ಲಿ ಶುಕ್ರ ಇದ್ದಾಗ ಪೂರ್ವದಿಕ್ಕಿಗೂ ಮುಖ, ಪುಬ್ಬ, ಉತ್ತರಾ, ಹಸ್ತ, ಚಿತ್ತ, ಸ್ವಾತಿ, ವಿಶಾಖ ನಕ್ಷತ್ರಗಳಿದ್ದಾಗ ದಕ್ಷಿಣದಿಕ್ಕಿಗೂ ಅನುರಾಧಾ, ಜ್ಯೇಷ್ಠ, ಮೂಲಾ, ಪೂರ್ವಾಷಾಢಾ, ಉತ್ತರಾಷಾಢಾ, ಶ್ರವಣ ನಕ್ಷತ್ರಗಳಿದ್ದಾಗ ಪಶ್ಚಿಮ ದಿಕ್ಕಿಗೂ ಧನಿಷ್ಠ, ಶತಭಿಷ, ಪೂರ್ವಾಭಾದ್ರ, ಉತ್ತರಭಾದ್ರ, ರೇವತಿ, ಅಶ್ವಿನಿ, ಭರಣಿ ನಕ್ಷತ್ರಗಳಲ್ಲಿ ಇದ್ದಾಗ ಉತ್ತರ ದಿಕ್ಕಿಗೂ ಯಾತ್ರೆ ಹೊರಡಕೂಡದು. ಶುಕ್ರ ಅಸ್ತನಾಗಿರುವಾಗ, ವಕ್ರನಾಗಿ ಇದ್ದಾಗ ಪರರಾಷ್ಟ್ರದ ಮೇಲೆ ವಿಜಯ ಯಾತ್ರೆ ನಿಷಿದ್ಧ. ವಿಜಯಯಾತ್ರೆಯಲ್ಲಿ ಹತ್ತು ದಿವಸಗಳಿಗಿಂತ ಅಧಿಕವಾಗಿ ಒಂದು ಕಡೆ ನಿಲ್ಲಕೂಡದು. ಒಂದು ವೇಳೆ ನಿಂತಲ್ಲಿ ಮತ್ತೆ ಶುಭದಿನವನ್ನು ನೋಡಿ ಪ್ರಯಾಣ ಮಾಡಬೇಕು. ಚಿತ್ತ, ಅನುರಾಧಾ, ರೇವತಿ, ಮೃಗಶಿರ, ಪುಷ್ಯ, ಹಸ್ತ, ಅಶ್ವಿನಿ, ಶ್ರವಣ, ಧನಿಷ್ಠಾ, ಶತಭಿಷಾ, ಪುನರ್ವಸು, ಸ್ವಾತಿ ನಕ್ಷತ್ರಗಳಲ್ಲಿ ಮೀನ, ಕುಂಭ, ಕರ್ಕಾಟಕ ಲಗ್ನಗಳಲ್ಲಿ ಸಮುದ್ರಯಾನ ಶುಭಪ್ರದ. ಉಷಃಕಾಲದಲ್ಲಿ ಪೂರ್ವಕ್ಕೆ, ಗೋಧೂಳಿಕಾಲದಲ್ಲಿ ಪಶ್ಚಿಮಕ್ಕೆ, ಅರ್ಧರಾತ್ರಿಯಲ್ಲಿ ಉತ್ತರಕ್ಕೆ, ಮಧ್ಯಹಗಲಿನಲ್ಲಿ ದಕ್ಷಿಣಕ್ಕೆ ಪ್ರಯಾಣ ಮಾಡಬಾರದು. ಪೂರ್ವಹ್ನದಲ್ಲಿ ಉತ್ತರಕ್ಕೆ ಮಧ್ಯಾಹ್ನದಲ್ಲಿ ಪೂರ್ವಕ್ಕೆ, ಅಪರಹ್ನದಲ್ಲಿ ದಕ್ಷಿಣಕ್ಕೆ, ಅರ್ಧರಾತ್ರಿಯಲ್ಲಿ ಪಶ್ಚಿಮಕ್ಕೆ ಪ್ರಯಾಣ ಮಾಡಿದರೆ ಕಾರ್ಯಸಿದ್ಧಿಸುತ್ತದೆ. ಪ್ರಯಾಣ ಮಾಡಿದ ದಿನದಲ್ಲೇ ಸ್ವಸ್ಥಾನಕ್ಕೆ ಬರುವಾಗ, ಹೊರಡುವಾಗ ಇದ್ದ ಕಾಲಕ್ಕಿಂತ ಸ್ವಸ್ಥಾನ ಸೇರುವ ಕಾಲ ಶುಭಪ್ರದವಾಗಿರಬೇಕು. ನವಮಿತಿಥಿಯಲ್ಲಿ ಪ್ರಯಾಣ ಹೊರಡುವುದೂ ಹೊರಟ ಒಂಬತ್ತನೆಯ ದಿನ ಸ್ವಸ್ಥಾನಕ್ಕೆ ಹಿಂದಿರುಗುವುದೂ ಕೂಡದು.
ವಿಜಯಯಾತ್ರೆ ಹೊರಡುವಾಗ ಮೊದಲು ಪೂರ್ವಕ್ಕೆ ಆನೆಯ ಮೇಲೆ, ದಕ್ಷಿಣಕ್ಕೆ ರಥದ ಮೇಲೆ, ಪಶ್ಚಿಮಕ್ಕೆ ಕುದುರೆಯ ಮೇಲೆ, ಉತ್ತರಕ್ಕೆ ನರವಾಹನದ (ಪಲ್ಲಕಿ) ಮೇಲೆ ಕುಳಿತರೆ ಸ್ವಲ್ಪದೂರ ಹೋಗಿ ಬಳಿಕ ಪ್ರಯಾಣವನ್ನು ಮುಂದುವರಿಸಬೇಕು. ಯಾತ್ರೆ ಹೊರಡುವ ಪೂರ್ವದಿನದಲ್ಲಿ ಸ್ತ್ರೀಸಂಗ ನಿಷಿದ್ಧ. (ಎಸ್.ಎನ್.ಕೆ.)